ಆ ಕ್ಷಣದಲ್ಲಿ ಶರತ್‌ ಸಾವಿನೆದುರು ಅದೆಷ್ಟು ಅಸಹಾಯಕ!!

ಸಾವು ಸೆಳೆದುಕೊಳ್ಳಲು ಹೊಂಚು ಹಾಕಿ ಕುಳಿತಿತ್ತು. ನಿನ್ನ ಕನಸುಗಳೇನು, ನಿನ್ನ ಉದ್ದೇಶವೇನು, ಬದುಕಿನಲ್ಲಿ ನಿನ್ನ ಮುಂದಿರುವ ಜವಾಬ್ದಾರಿಗಳೇನು, ನೀನು ನನ್ನೊಂದಿಗೆ ಬಂದರೆ ನಿನ್ನನ್ನು ನಂಬಿಕೊಂಡವರಿಗೆ, ಪ್ರೀತಿಸಿಕೊಳ್ಳುತ್ತಿರುವವರಿಗೆ ಕಷ್ಟವಾಗುವುದಿಲ್ಲವಾ, ನೀನಿಲ್ಲದೇ ಅವರು ಹೇಗೆ ಬದುಕುತ್ತಾರೆ ಎನ್ನುವ ಯಾವ ಪ್ರಶ್ನೆಗಳನ್ನೂ ಸಾವು ಕೇಳುವುದಿಲ್ಲ. ಅದು ನಿನ್ನ ಕಣ್ಣೀರು, ಇದೊಂದು ಸಾರಿ ಬಿಟ್ಟು ಬಿಡು ಎಂದು ದಯನೀಯವಾಗಿ ಮುಗಿದ ಕೈ... ಯಾವುದನ್ನೂ ನೋಡುವುದಿಲ್ಲ. ಬರಬೇಕೆಂದರೆ ನೀನು ಬರಬೇಕಷ್ಟೇ ಎಂದು ಎಳೆದುಕೊಂಡು ಹೋಗಿ ಬಿಡುತ್ತದೆ. ಹಾಗಿಲ್ಲದೇ ಹೋಗಿದ್ದರೆ ಖುಷ್ಕುಷಿಯಾಗಿ ಜಲಪಾತದೆದುರು ನಿಂತುಕೊಂಡು ವಿಡಿಯೋ ಮಾಡಿಸಿಕೊಳ್ಳುತ್ತಿದ್ದ ಶರತ್‌ ಅದ್ಯಾಕೆ ಹಾಗೆ ಬಿದ್ದು ಸಾವಿನೊಂದಿಗೆ ಹೋಗಿ ಬಿಡುತ್ತಿದ್ದ ಹೇಳಿ?!

ಆತ ಸಾಯುವುದಕ್ಕೆಂದು ಅಲ್ಲಿ ಹೋಗಿರಲಿಲ್ಲ. ಒಂದೊಮ್ಮೆ ಹಾಗೆ ಹೋಗಿದ್ದರೂ ಆತ ಇಷ್ಟು ಚೆಂದದ ವಿಡಿಯೋ ಮಾಡಿಸಿಕೊಳ್ಳುತ್ತಿರಲಿಲ್ಲ. ಬದುಕಬೇಕು, ಬದುಕಿಗೆ ಇನ್ನಷ್ಟು ಬಣ್ಣ ತುಂಬಿಕೊಳ್ಳಬೇಕು ಎನ್ನುವ ಕನಸುಗಳೊಂದಿಗೇ ಭದ್ರಾವತಿಯ ಶರತ್‌ ಜಲಪಾತದೆದುರು ಇರುವ ಬಂಡೆಗಲ್ಲಿನ ಮೇಲೆ ನಿಂತಿದ್ದಾನೆ. ಹೀಗೆ ನಿಂತವನೆದುರಿಗೇ ’ಸಾವು’ ತನ್ನ ಅಪ್ಪುಗೆಗೆಳೆದುಕೊಳ್ಳಲು ಹೊಂಚು ಹಾಕಿ ಕುಳಿತಿತ್ತು ಎಂದು ಶರತ್‌ಗಾಗಲೀ, ಶರತ್‌ ವಿಡಿಯೋ ಮಾಡುತ್ತಿದ್ದ ಜೊತೆಗಿದ್ದ ಸ್ನೇಹಿತನಿಗಾಗಲೀ ಕಾಣಿಸಿರಲಿಲ್ಲ...

ಕಾಣಿಸುವುದು ಸಾಧ್ಯವೂ ಇಲ್ಲ. ಯಾಕೆಂದರೆ ಸಾವು ಈವರೆಗೂ ಯಾರ ಕಣ್ಣಿಗಾದರೂ ಕಾಣಿಸಿರುವ ಬಗ್ಗೆ ನಾವು ಎಲ್ಲಿಯೂ ಕೇಳಿಲ್ಲ, ಓದಿಲ್ಲ. ಅಂದಮೇಲೆ ಶರತ್‌ ಹಾಗೂ ಅವನ ಸ್ನೇಹಿತನಿಗಾದರೂ ಸಾವು ತಮ್ಮ ಸುತ್ತಮುತ್ತವೇ ಸುಳಿದಾಡುತ್ತಿದ್ದದ್ದು ಹೇಗೆ ಕಾಣಿಸೀತು ಹೇಳಿ?!

ಆದ್ದರಿಂದಲೇ ನಾವು ಮನುಷ್ಯರು ಸಾವಿನೆದುರು ಅಸಹಾಯಕರು ಎಂದು ಹೇಳುವುದು.

ಶರತ್‌ ಜೆಸಿಬಿ ಮಾಲೀಕನಂತೆ. ಅಂತಹ ದೊಡ್ಡ ಯಂತ್ರವುಳ್ಳ ವಾಹನವನ್ನು ನಿಭಾಯಿಸುವ, ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಶರತ್‌ಗೇನಾದರೂ ಸಾವು ಇಲ್ಲೇ ತನ್ನೆದುರು ಇದೆ ಎಂದು ಕಾಣಿಸಿಬಿಟ್ಟಿದ್ದರೆ?! ಏನು ಮಾಡಬಹುದಿತ್ತು...

ನೀವೊಮ್ಮೆ ಶರತ್‌ ಕೊಲ್ಲೂರು ಸಮೀಪದ ಅರಿಶಿನಗುಂಡಿ ಜಲಪಾತದೆದುರು ಆಯತಪ್ಪಿ ಬೀಳುವ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿ. ಜಲಪಾತದೆದುರು ನಿಂತು ತನ್ನ ಸ್ನೇಹಿತನಿಂದ ವಿಡಿಯೋ ಮಾಡಿಸಿಕೊಳ್ಳುತ್ತಿದ್ದ ಶರತ್‌ಗೆ ಇನ್ನೊಂದು ಕ್ಷಣಕ್ಕೆ ತಾನಿಲ್ಲಿ ಬೀಳುತ್ತೇನೆ. ಸಾಯುತ್ತೇನೆ ಎನ್ನುವ ಯಾವ ಅರಿವೂ ಇರಲಿಲ್ಲ. ಆದ್ದರಿಂದಲೇ ಆತ ಜಲಪಾತದ ನೀರಿಗೆ ಮುಖವೊಡ್ಡಿ ಆರಾಮಾಗಿ ನಿಂತಿದ್ದ. ಸಣ್ಣಗೆ ಕದಲಿದ್ದಷ್ಟೇ. ಆಯತಪ್ಪಿ ಬಿದ್ದಿದ್ದಾನೆ. ಆ ಕ್ಷಣದಲ್ಲೂ ಶರತ್‌ ಅಷ್ಟು ಸುಲಭಕ್ಕೆ ತನ್ನ ಸಾವನ್ನು ಒಪ್ಪಿಕೊಂಡಿಲ್ಲ; ಗಾಬರಿಯಾಗಿಲ್ಲ. ಆಯತಪ್ಪಿ ಬೀಳುವಾಗ ಒಂದೇ ಒಂದು ಸೆಕೆಂಡುಗಳಿಗಿಂತಲೂ ಕಡಿಮೆ ಇರುವ ಅವಧಿಯಲ್ಲಿ ಶರತ್‌ ತನ್ನನ್ನು ತಾನು ಸಾವಿನಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾನೆ. ಆದ್ದರಿಂದಲೇ ಆತ ಆಯತಪ್ಪುತ್ತಿದ್ದಂತೆ ಎರಡೂ ಕೈಗಳನ್ನೂ ಹಿಂಬದಿ ಊರುವ ಪ್ರಯತ್ನ ನಡೆಸುತ್ತಾನಾದರೂ, ಆ ಪ್ರಯತ್ನ ಸಫಲವಾಗುವುದಿಲ್ಲ. ಯಾಕೆಂದರೆ, ಸಾವು ಆಗಲೇ ಶರತ್‌ನನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ನಿರ್ಧರಿಸಿಯಾಗಿತ್ತು. ಸಾವು ಆ ದಿವಸ ಮಾಡಿಕೊಂಡಿದ್ದ ಲಿಸ್ಟಿನಲ್ಲಿ ಬಹುಶಃ ಆ ಕ್ಷಣದಲ್ಲಿ ಶರತ್‌ ಸರದಿ ಇದ್ದಿರಬೇಕು. ವಿಡಿಯೋ ಮಾಡುತ್ತಿದ್ದ ಸ್ನೇಹಿತನ ಮೊಬೈಲ್‌ ಕದಲುವುದರೊಳಗೆ ಬಂಡೆ ಮೇಲೆ ನಿಂತಿದ್ದ ಶರತ್‌ ಮತ್ತೆ ಕಾಣಿಸಿಲ್ಲ... ಅಷ್ಟು ವೇಗದಲ್ಲಿ ಸಾವು ನೀರಿನ ರೂಪದಲ್ಲಿ ಶರತ್‌ನನ್ನು ತನ್ನೊಂದಿಗೆ ಸೆಳೆದೊಯ್ದುಬಿಟ್ಟಿದೆ.


ಸಾವಿನೆದುರು ಮನುಷ್ಯ ಅದೆಷ್ಟು ಅಸಹಾಯಕ ಎನ್ನುವುದನ್ನು ಜಸ್ಟ್‌ ಮೂವತ್ತ್ಮೂರು ಸೆಕೆಂಡುಗಳಷ್ಟಿರುವ ಈ ವಿಡಿಯೋ ನೋಡಿಯೇ ತಿಳಿದುಕೊಳ್ಳಬಹುದು. ಹೌದು, ಮನುಷ್ಯ ತಾನೇನೇ ಗ್ರೇಟು, ಅಂತಹದ್ದನ್ನು ಪಳಗಿಸಿದ್ದೇನೆ, ಇಂತಹದ್ದನ್ನು ಹಿಡಿತದಲ್ಲಿಟ್ಟುಕೊಂಡಿದ್ದೇನೆ ಎಂದು ಮೆರೆದರೂ ಸಾವಿನೆದುರು ಆತ ಏನೆಂದರೆ ಏನೂ ಅಲ್ಲ. ಶರತ್‌ ಅಂತಲೇ ಅಲ್ಲ, ಅವನ ಜಾಗದಲ್ಲಿ ಬೇರೆ ಯಾರೇ ಇದ್ದಿದ್ದರೂ ಅಷ್ಟೇ; ಎದುರು ನಿಂತ ಸಾವಿನೆದುರು ಮಿಸುಕಾಡದೇ ಶರಣಾಗಿಬಿಡಬೇಕು. ಯಾಕೆಂದರೆ, ಸಾವನ್ನು ಗೆಲ್ಲುವುದು ಅಷ್ಟು ಸುಲಭವಲ್ಲ. ಶರತ್‌ ವಿಷಯವನ್ನು ಪಕ್ಕಕ್ಕಿಡಿ. ಬದುಕಿನ ಯಾವುದೋ ಒಂದು ಕೆಟ್ಟ ಘಳಿಗೆಯಲ್ಲಿ ಅವರು ಸಾಯಲು ನಿರ್ಧರಿಸಿಬಿಡುತ್ತಾರೆ. ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತಾರೆ. ಅವರಿಗೆ ಸಾವಿಗೆ ತನ್ನನ್ನು ತಾನು ಅರ್ಪಿಸಿಕೊಳ್ಳುವುದು ಬಿಟ್ಟು ಬೇರೆ ದಾರಿಯೇ ಇರುವುದಿಲ್ಲ. ಒಂದೊಮ್ಮೆ ದಾರಿ ಇದ್ದರೂ ಅದು ಆ ಕ್ಷಣಕ್ಕೆ ಕಾಣಿಸುವುದಿಲ್ಲ. ಆ ದಾರಿಗಳನ್ನು ತೋರಿಸುವವರೂ ಸಿಕ್ಕಿರುವುದಿಲ್ಲ. ಆದ್ದರಿಂದಲೇ ಸಾವೇ ಅಂತಿಮ ನಿರ್ಧಾರ ಎಂದು ಒಂದು ಹೆಜ್ಜೆ ಇಟ್ಟು ಬಿಡುತ್ತಾರಷ್ಟೇ. ಆಗ ಅವರಿಗೆ ತಾನು ತಪ್ಪು ಮಾಡುತ್ತಿದ್ದೇನೆ, ಬದುಕಬೇಕು. ಭಿಕ್ಷೆ ಬೇಡಿಯಾದರೂ ಸೈ ಬದುಕಬೇಕು ಎನ್ನುವ ಹಂಬಲ ಹುಟ್ಟಿಕೊಂಡು ಬಿಡುತ್ತದೆ. ಹಿಂದೆ ಹೆಜ್ಜೆ ತೆಗೆಯಬೇಕು... ಇಲ್ಲ, ಸಾವು ತನ್ನೆಡೆಗೆ ಬಂದವರನ್ನು ವಾಪಾಸ್ಸು ಕಳಿಸುವುದಿಲ್ಲ. ನಿಷ್ಕರುಣಿಯಾಗಿ ತನ್ನೆಡೆಗೆ ಸೆಳೆದುಕೊಂಡು ಬಿಡುತ್ತದೆ. ಇವರು ಅದೆಷ್ಟೇ ಬಿಡಿಸಿಕೊಳ್ಳಲು ಒದ್ದಾಡಿದರೂ, ಬಡಿದಾಡಿದರೂ ಉಹ್ಞೂಂ, ಸಾವು ಬಿಟ್ಟು ಕಳಿಸುವುದಿಲ್ಲ. ಅಷ್ಟರಮಟ್ಟಿಗೆ ಸಾವು ನಮ್ಮನ್ನು ಅಸಹಾಯಕರನ್ನಾಗಿ ಮಾಡಿಬಿಡುತ್ತದೆ.

ಶರತ್‌ ವಿಷಯದಲ್ಲಿಯೂ ಹೀಗೇ ಆಗಿದೆ. ಸಾವು ಸೆಳೆದುಕೊಳ್ಳಲು ಹೊಂಚು ಹಾಕಿ ಕುಳಿತಿತ್ತು. ನಿನ್ನ ಕನಸುಗಳೇನು, ನಿನ್ನ ಉದ್ದೇಶವೇನು, ಬದುಕಿನಲ್ಲಿ ನಿನ್ನ ಮುಂದಿರುವ ಜವಾಬ್ದಾರಿಗಳೇನು, ನೀನು ನನ್ನೊಂದಿಗೆ ಬಂದರೆ ನಿನ್ನನ್ನು ನಂಬಿಕೊಂಡವರಿಗೆ, ಪ್ರೀತಿಸಿಕೊಳ್ಳುತ್ತಿರುವವರಿಗೆ ಕಷ್ಟವಾಗುವುದಿಲ್ಲವಾ, ನೀನಿಲ್ಲದೇ ಅವರು ಹೇಗೆ ಬದುಕುತ್ತಾರೆ ಎನ್ನುವ ಯಾವ ಪ್ರಶ್ನೆಗಳನ್ನೂ ಸಾವು ಕೇಳುವುದಿಲ್ಲ. ಅದು ನಿನ್ನ ಕಣ್ಣೀರು, ಇದೊಂದು ಸಾರಿ ಬಿಟ್ಟು ಬಿಡು ಎಂದು ದಯನೀಯವಾಗಿ ಮುಗಿದ ಕೈ... ಯಾವುದನ್ನೂ ನೋಡುವುದಿಲ್ಲ. ಬರಬೇಕೆಂದರೆ ನೀನು ಬರಬೇಕಷ್ಟೇ ಎಂದು ಎಳೆದುಕೊಂಡು ಹೋಗಿ ಬಿಡುತ್ತದೆ. ಹಾಗಿಲ್ಲದೇ ಹೋಗಿದ್ದರೆ ಖುಷ್ಕುಷಿಯಾಗಿ ಜಲಪಾತದೆದುರು ನಿಂತುಕೊಂಡು ವಿಡಿಯೋ ಮಾಡಿಸಿಕೊಳ್ಳುತ್ತಿದ್ದ ಶರತ್‌ ಅದ್ಯಾಕೆ ಹಾಗೆ ಬಿದ್ದು ಸಾವಿನೊಂದಿಗೆ ಹೋಗಿ ಬಿಡುತ್ತಿದ್ದ ಹೇಳಿ?! ಈ ಜಲಪಾತದ ನೀರಿನ ರಭಸವೆಷ್ಟು, ತಾನು ನಿಂತ ಬಂಡೆ ಎಷ್ಟು ಜಾರುತ್ತದೆ, ಒಂದೊಮ್ಮೆ ಜಾರಿದರೆ ತಾನು ಆಸರೆಯಾಗಿ ಏನನ್ನು, ಹೇಗೆ ಹಿಡಿದುಕೊಳ್ಳಬೇಕು... ಇದ್ಯಾವುದೂ ಗೊತ್ತಿಲ್ಲದೇ ವಿಡಿಯೋಗೆ ಪೋಸ್‌ ಕೊಡಲಿಕ್ಕೋಸ್ಕರವೇ ಜಲಪಾತದೆದುರು ನಿಂತು ವಿಡಿಯೋ ಮಾಡಿಸಿಕೊಳ್ಳುತ್ತಿದ್ದ ಶರತ್‌ಗೆ ತಾನು ಮಾಡಿಸಿಕೊಳ್ಳುವ ವಿಡಿಯೋದ ಬಗ್ಗೆ ಅದೆಷ್ಟು ನಿರೀಕ್ಷೆಗಳಿದ್ದವೋ? ಕನಸುಗಳಿದ್ದವೋ?! ಅದನ್ನು ಮನೆಯವರಿಗೆ, ಸ್ನೇಹಿತರಿಗೆಲ್ಲ ತೋರಿಸಿ ಜಲಪಾತದ ರುದ್ರರಮಣೀಯ ಚೆಲುವನ್ನು ವರ್ಣಿಸುವ, ಅದನ್ನು ತಾನು ಕಣ್ತುಂಬಿಕೊಂಡ ಬಗೆಯನ್ನು ವಿವರಿಸುವ ಯೋಚನೆಗಳಿದ್ದಿರಬಹುದು. ಆದ್ದರಿಂದಲೇ ಆತ ಸಾವಿನ ಬಗ್ಗೆ ಒಂದು ಕ್ಷಣ ಕೂಡಾ ಯೋಚಿಸದೇ ಆ ಬಂಡೆಯ ಮೇಲೆ ಹೋಗಿ ವಿಡಿಯೋ ಮಾಡಲು ಹೇಳಿ ಸ್ನೇಹಿತನಿಗೆ ಬೆನ್ನಾಗಿ ನಿಂತ. ಸಾವು ಆತನ ಎದುರಿತ್ತು; ಆತನನ್ನೇ ರೆಪ್ಪೆ ಪಿಳುಕಿಸದೇ ದಿಟ್ಟಿಸುತ್ತಿತ್ತು... ಕೆಲವೇ ಕೆಲವು ಕ್ಷಣಗಳಷ್ಟೇ, ಏನಾಗುತ್ತಿದೆ, ಏನು ಮಾಡಬೇಕು ಎಂದು ಯೋಚಿಸಲಿಕ್ಕೂ ಅವಕಾಶ ಕೊಡದಂತೆ ಸಾವು ಶರತ್‌ನನ್ನು ತನ್ನೊಂದಿಗೆ ಕರೆದುಕೊಂಡು ಹೋಗಿಯೇ ಬಿಟ್ಟಿತು.

ಈಗ ನಾಲ್ಕು ದಿನಗಳಾಗಿವೆ. ಶರತ್‌ನ ಮೃತದೇಹ ಇನ್ನೂ ಸಿಕ್ಕಿಲ್ಲ. ಶರತ್‌ನ ತಂಗಿ ಸೇರಿದಂತೆ ಮನೆಯವರಿಗೆಲ್ಲ ನೀರಿಗೆ ಬಿದ್ದು ಕೊಚ್ಚಿಕೊಂಡು ಹೋದ ಶರತ್‌ ಇನ್ನೂ ಬದುಕಿರಬಹುದು ಎನ್ನುವ ಆಸೆ - ನಿರೀಕ್ಷೆಗಳಿವೆ. ಆದರೆ ಮುಳುಗುತಜ್ಞರು ಹೇಳುವ ಪ್ರಕಾರ, ಬದುಕಿರುವ ಸಾಧ್ಯತೆಗಳು ಇಲ್ಲವೇ ಇಲ್ಲ. ಅದೂ ಸರಿ, ಯಾಕೆಂದರೆ ಆತ ಬಿದ್ದಿರುವ ರೀತಿ, ಅಲ್ಲಿದ್ದ ನೀರಿನ ರಭಸ, ಬಂಡೆಗಳು... ಅದರ ನಡುವೆ ಶರತ್‌ ಬದುಕಿರುವುದಾದರೂ ಹೇಗೆ? ಒಂದೊಮ್ಮೆ ಬದುಕಿದ್ದರೆ ಆತ ಎಲ್ಲೋ ಒಂದು ಕಡೆ ಇಷ್ಟರೊಳಗೆ ಪ್ರತ್ಯಕ್ಷವಾಗಿರಬೇಕಿತ್ತಲ್ಲವಾ? ಅದ್ಯಾವುದೂ ಆಗಿಲ್ಲ. ಯಾಕೆಂದರೆ, ಸಾವಿನೊಂದಿಗೆ ಬಡಿದಾಡಿ ಗೆಲ್ಲುವಷ್ಟು ಮನುಷ್ಯ ಇನ್ನೂ ಬಲಿಷ್ಠನಾಗಿಲ್ಲ. ಆದ್ದರಿಂದಲೇ ಕಣ್ಣಿಗೆ ಕಾಣದೆ ಹೊಂಚು ಹಾಕಿ ಕುಳಿತಿರುವ ಸಾವಿನೆದುರು ಮನುಷ್ಯ ಯಾವತ್ತಿದ್ದರೂ ಅಸಹಾಯಕನೇ. ಇವತ್ತು ಶರತ್‌ ಸರದಿ, ನಾಳೆ ನಮ್ಮದು ನಿಮ್ಮದು...

                                                                                                                  -ಆರುಡೋ ಗಣೇಶ ಕೋಡೂರು

ಕಾಮೆಂಟ್‌ಗಳು

  1. ನಿಮ್ಮ ಬರಹ ಓದಿದೆ..ಯಾವ ಕ್ಷಣ ಏನಾಗಬಹುದೋ ಯಾರೂ ಕೂಡ ಊಹಿಸಲಾರರು..ಹಾಗೆಂದು ಇದ್ದಾಗ ಎಲ್ಲವನ್ನೂ ಅನುಭವಿಸಿಬಿಡಬೇಕೆಂಬ ದುರಾಸೆಯೂ ಬೇಡ.ಹುಚ್ಚು ಸಾಹಸವಾಗಲಿ..ಮೊಂಡು ಧೈರ್ಯವಾಗಲಿ ಬೇಡ ..ಎಲ್ಲರೂ ಅರಿಯಬೇಕಾದ ವಿಚಾರ..

    ಪ್ರತ್ಯುತ್ತರಅಳಿಸಿ
  2. ಒಂದು ಸಾವಿನ ಸುತ್ತ ಎಷ್ಟೆಲ್ಲಾ ಆಯಾಮಗಳಿವೆ ಹಾಗೆ ಒಂದು ಬದುಕಿನ ಮುಂದೆ ಎಷ್ಟೆಲ್ಲಾ ಜವಾಬ್ದಾರಿಗಳಿವೆ ಎಂಬುದನ್ನು ತುಂಬಾ ಸೂಕ್ಷ್ಮವಾಗಿ ವಿಶ್ಲೇಷಿಸಿರುವ ನಿಮ್ಮ ಲೇಖನದಲ್ಲಿ ಸಾವಿನೆದುರು ಮನುಷ್ಯ ಅಸಹಾಯಕ ಎಂಬುದು ಸತ್ಯವಾದರೂ ಒಂದು ಖುಷಿಗಾಗಿ ಅದನ್ನು ದಾಖಲಿಸುವ ಸಲುವಾಗಿ ಮೈಮರೆತರೆ ಸೂಕ್ತ ಮುನ್ನೆಚ್ಚರಿಕೆ ವಹಿಸಿ ಖುಷಿಯನ್ನು ಆಸ್ವಾದಿಸುವ ಮನಸ್ಥಿತಿಯನ್ನು ನಮ್ಮ ಯುವಕರು ಹೊಂದಬೇಕು. ಲೇಖನ ತುಂಬಾ ಚೆನ್ನಾಗಿದೆ ಸರ್ ಅಭಿನಂದನೆಗಳು

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಒಂಟಿತನ ಎಂದರೆ ಜವಾಬ್ದಾರಿಯಿಂದ ಜಾರಿಕೊಳ್ಳುವುದಾ?!

ಈಗ ಆರು ಪಾಸಾಗಿ ಏಳು...