ಧಾರವಾಡಿಗರನ್ನೇ ಒಳಗೊಳ್ಳದೇ ದುಃಸ್ವಪ್ನವಾಯಿತೇ ಸಾಹಿತ್ಯ ಸಮ್ಮೇಳನ?!

‘ಉತ್ತರ ಕರ್ನಾಟಕದ ಮಂದಿ ಮಾತು ಒರಟಿರಬಹುದಾದರೂ, ಮನಸ್ಸು ಮಾತ್ರ ಮೃದು’ ಎನ್ನುವ ಮಾತು ನನ್ನದೇ ಅನುಭವದಲ್ಲಿ ಇಷ್ಟು ದಿನ ಸತ್ಯವೆನ್ನಿಸಿತ್ತಾದರೂ, ಧಾರವಾಡದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ನಾಲ್ಕು ದಿನದ ಅನುಭವ ಈ ಮಾತನ್ನು ಸುಳ್ಳಾಗಿಸಿಬಿಟ್ಟಿತು. ಯಾಕೆಂದರೆ ಧಾರವಾಡದಲ್ಲಿದ್ದ ನಾಲ್ಕು ದಿನವೂ ಧಾರವಾಡಿಗರು ಪರವೂರಿನಿಂದ ಬಂದ ನನ್ನಂತಹವರನ್ನು ಹೆಜ್ಜೆ ಹೆಜ್ಜೆಗೂ ಸುಲಿಯುತ್ತಿದ್ದಿದ್ದು ನೋಡಿದರೆ, ಕಾಲವೇ ಬದಲಾಗಿದೆಯಾ ಅಥವಾ ಉತ್ತರ ಕರ್ನಾಟಕದ ಮಂದಿಯ ಮನಸ್ಸೆಂದರೆ ಮೃದು, ನಿಷ್ಕಲ್ಮಶ ಪ್ರೀತಿ ತೋರಿಸುವಂತಹದ್ದು ಎನ್ನುವುದೇ ತಿರುವುಮುರುವಾಗಿದೆಯಾ ಅನ್ನಿಸಿಬಿಟ್ಟಿತು.
ಕಳೆದ ಏಳೆಂಟು ವರ್ಷಗಳಿಂದ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಪ್ರಕಾಶಕನಾಗಿ ಪುಸ್ತಕ ಮಳಿಗೆಗಳನ್ನು ಹಾಕುತ್ತಿರುವ ನಾನು, ನನ್ನ ಅನುಭವದಲ್ಲಿ ಇಷ್ಟು ಕೆಟ್ಟ ಮತ್ತು ಉಸಿರುಗಟ್ಟಿಸುವಂತಹ ಸಾಹಿತ್ಯ ಸಮ್ಮೇಳನವನ್ನು ನೋಡಿಯೇ ಇರಲಿಲ್ಲ. ಅಷ್ಟರಮಟ್ಟಿಗೆ ಧಾರವಾಡದ ಸಾಹಿತ್ಯ ಸಮ್ಮೇಳನ ನಾ ಕಂಡ ಸಮ್ಮೇಳನಗಳಲ್ಲೇ ಅತಿ ಕೆಟ್ಟ ಸಮ್ಮೇಳನವಾಗಿ ನನ್ನ ಮನದಲ್ಲುಳಿಯಿತು.
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಈ ಸಮ್ಮೇಳನಕ್ಕೆ ಧಾರವಾಡದ ನಗರ ಭಾಗದಿಂದ ಅಜಮಾಸು ಆರು ಕಿಲೋಮೀಟರ್ ದೂರವಿತ್ತು. ಈ ದೂರವನ್ನು ಹತ್ತಿರವಾಗಿಸುವ ಸಹೃದಯತೆ ಧಾರವಾಡಿಗರದ್ದಾಗಿದ್ದರೆ, ಬಹುಶಃ ಪರವೂರಿನಿಂದ ಸಮ್ಮೇಳನದ ಸಂಭ್ರಮದ ಒಂದು ಭಾಗವಾಗಲು ಬಂದ ನನ್ನಂತಹವರಿಗೆ ಇಷ್ಟೊಂದು ಕೆಟ್ಟ ಅನುಭವವಾಗುತ್ತಿರಲಿಲ್ಲವೇನೋ!
ಇನ್ನೂರು ಮುನ್ನೂರು ರೂಪಾಯಿಗಿಂತ ಕಡಿಮೆ ಬಾಡಿಗೆಗೆ ಬರಲೊಪ್ಪದ ಆಟೋ ಚಾಲಕರು, ಇಷ್ಟೇ ಇಷ್ಟು ಚಿಕ್ಕ ಕಪ್ ಟೀ-ಕಾಫಿಯನ್ನು ಎಂಟು ಹತ್ತು ರೂಪಾಯಿ, ಒಂದು ಲೋಟ ನೀರೂ ಇಲ್ಲದ ಎಳನೀರಿಗೆ ಮೂವತ್ತು ರೂಪಾಯಿಗೆ ಮಾರುತ್ತಿದ್ದ ವ್ಯಾಪಾರಿಗಳು, ಸರಿಯಾದ ಸೌಲಭ್ಯವಿಲ್ಲದೇ ಇದ್ದರೂ ಎರ‍್ರಾಬಿರ‍್ರಿಯಾಗಿ ಬಾಡಿಗೆ ವಸೂಲಿ ಮಾಡಿ ಸೌಜನ್ಯವೇ ಇಲ್ಲದಂತೆ ವರ್ತಿಸುತ್ತಿದ್ದ ಲಾಡ್ಜ್‌ನವರು... ಯಾವತ್ತು ಸಮ್ಮೇಳನ ಮುಗಿಯುತ್ತದೆಯೋ, ಯಾವಾಗ ನಮ್ಮ ಊರನ್ನು ತಲುಪಿಕೊಂಡು ಬಿಡುತ್ತೇವೋ ಎನ್ನುವಂತೆ ಮಾಡಿದವರು ಧಾರವಾಡಿಗರು.
ನಿಜ, ಸಾಹಿತ್ಯ ಸಮ್ಮೇಳನ ಎನ್ನುವುದು ಒಂದು ಜಾತ್ರೆಯಂತೆ ನಡೆಯುತ್ತದೆ. ಇಲ್ಲಿ ಸಾಹಿತ್ಯಾಸಕ್ತರಿಗಿಂತ ಮತ್ತು ಸಾಹಿತ್ಯ-ಸಾಹಿತಿಗಳ ಬಗ್ಗೆ ತಿಳಿದವರಿಗಿಂತ ಬೇರೆಯವರೇ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ, ಇನ್ನು ವ್ಯಾಪಾರಿಗಳಿಗೆ ಜನಜಾತ್ರೆಯಲ್ಲಿ ದುಡ್ಡು ಮಾಡಿಕೊಳ್ಳುವುದೇ ಮುಖ್ಯವಾಗಿರುತ್ತದೆ, ಹೀಗಿರುವಾಗ ಇಂತಹದ್ದೆಲ್ಲ ಆಗುತ್ತದೆ ಎನ್ನುವ ಮಾತನ್ನು ತಕ್ಷಣಕ್ಕೆ ಒಪ್ಪಿಕೊಳ್ಳಬೇಕೆನ್ನಿಸುತ್ತದೆಯಾದರೂ, ಈ ಹಿಂದಿನ ಸಾಹಿತ್ಯ ಸಮ್ಮೇಳನದಲ್ಲಿ ಭಾಗಿಯಾಗಿದ್ದರೆ ಇದನ್ನು ಒಪ್ಪಿಕೊಳ್ಳಲಿಕ್ಕಾಗುವುದಿಲ್ಲ. ಯಾಕೆಂದರೆ ಈ ಹಿಂದೆ ನಡೆದ ಯಾವ ಸಮ್ಮೇಳನದಲ್ಲಿಯೂ ನನ್ನನ್ನು ಸೇರಿದಂತೆ ಹೆಚ್ಚಿನವರಿಗೆ ಧಾರವಾಡದ ಸಾಹಿತ್ಯ ಸಮ್ಮೇಳನದಲ್ಲಿ ಆದಂತಹ ಉಸಿರುಗಟ್ಟಿಸಿದಂತಹ ಅನುಭವಾಗಿರಲಿಕ್ಕಿಲ್ಲ.
ಸಾಹಿತ್ಯ ಸಮ್ಮೇಳನದ ಹಿಂದಿನ ದಿನವೇ ಧಾರವಾಡಕ್ಕೆ ಹೋದ ನಾನು ಪ್ರಧಾನ ವೇದಿಕೆಯ ಹತ್ತಿರ ಹೋಗುತ್ತಿದ್ದಂತೆ ಬಂದೋಬಸ್ತಿಗೆ ರೆಡಿಯಾಗುತ್ತಿದ್ದ ಪೊಲೀಸ್ ಸಿಬ್ಬಂದಿಗೆ ಹಿರಿಯ ಅಧಿಕಾರಿಯೊಬ್ಬರು, ‘ಇದು ಲಾ ಅಂಡ್ ಆರ್ಡರ್ ಅಲ್ಲ. ಇಲ್ಲಿ ಸಾಹಿತಿಗಳು, ಬುದ್ಧಿಜೀವಿಗಳು ಸೇರುತ್ತಾರೆ. ನೀವು ಅವರಿಗೆ ಯಾವುದೇ ಅವ್ಯವಸ್ಥೆ, ತೊಂದರೆಯಾಗದಂತೆ ನೋಡಿಕೊಳ್ಳಬೇಕೇ ಹೊರತು, ಅವರ ಮೇಲೆ ಯಾವುದೇ ರೀತಿಯ ಫೋರ್ಸ್ ಹೇರಲಿಕ್ಕೆ ಹೋಗಬಾರದು...’ ಎಂದು ಕಿವಿಮಾತು ಹೇಳುತ್ತಿದ್ದರು. ಆ ಹಿರಿಯ ಪೊಲೀಸ್ ಅಧಿಕಾರಿ ಹೇಳಿದ ಮಾತುಗಳನ್ನೇ ಈ ಬಾರಿಯ ಸಾಹಿತ್ಯ ಸಮ್ಮೇಳನ ನಡೆಯಲಿದ್ದ ಧಾರವಾಡದ ವ್ಯಾಪಾರಿಗಳೂ ಸೇರಿದಂತೆ ಧಾರವಾಡಿಗರಿಗೆಲ್ಲ ತಿಳಿಸಬೇಕಿತ್ತು. ಅಂದರೆ ಸಾಹಿತ್ಯ ಸಮ್ಮೇಳನಕ್ಕೆಂದು ಇಡೀ ರಾಜ್ಯದೆಲ್ಲೆಡೆಯಿಂದ ಜನರು ಬರುತ್ತಾರೆ, ಅವರನ್ನು ನೀವು ಸುಲಿಯಲಿಕ್ಕೆ ನಿಲ್ಲಬೇಡಿ. ಬದಲಿಗೆ, ಅವರನ್ನು ಪ್ರೀತಿಯಿಂದ ಸ್ವಾಗತಿಸುವ ಮನಸ್ಸು ನಿಮ್ಮದಾಗದೇ ಹೋದರೂ ಅವರಲ್ಲಿ ನಿಮ್ಮ ಬಗ್ಗೆ, ಇಡೀ ಊರಿನ ಬಗ್ಗೆಯೇ ಕೆಟ್ಟ ಅಭಿಪ್ರಾಯವೊಂದು ರೂಪುಗೊಳ್ಳುವಂತೆ ಮಾಡಬೇಡಿ. ಧಾರವಾಡದಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಇಡೀ ರಾಜ್ಯಕ್ಕೆ ಮಾದರಿಯಾಗಬೇಕು ಎಂದೆಲ್ಲ ಯಾವುದಾದರೂ ಒಂದು ರೀತಿಯಲ್ಲಿ ತಿಳಿಸಬೇಕಿತ್ತು. ಆದರೆ ಇಲ್ಲಿನ ಸಾಹಿತ್ಯ ಪರಿಷತ್ತಾಗಲೀ ಮತ್ತು ಸಮ್ಮೇಳನಕ್ಕೆ ಸಂಬಂಧಪಟ್ಟಂತೆ ಉಸ್ತುವಾರಿ ವಹಿಸಿದ್ದವರ‍್ಯಾರೂ ಈ ಬಗ್ಗೆ ಗಮನವನ್ನೇ ಹರಿಸಿದಂತಿಲ್ಲ. ‘ಅಂಬಿಕಾತನಯದತ್ತ ಪ್ರಧಾನ ವೇದಿಕೆ’ ಎಂದು ಹೆಸರಿಟ್ಟೂ, ಬೇಂದ್ರೆ ಮನೆಯವರನ್ನೇ ಸಮ್ಮೇಳನಕ್ಕೆ ಹೇಗೆ ಆಹ್ವಾನಿಸಲಿಲ್ಲವೋ, ಅದೇ ರೀತಿ ಇಲ್ಲಿನ ಸಾಹಿತ್ಯ ಪರಿಷತ್ತು ಮತ್ತು ಅದರ ಪದಾಧಿಕಾರಿಗಳು ಊರವರನ್ನೆಲ್ಲ ಇದರಲ್ಲಿ ಒಳಗೊಂಡರೆ ತಮಗೆ ಸಿಕ್ಕುವ ‘ಪಾಲಿನಲ್ಲಿ’ ಎಲ್ಲಿ ಕಡಿಮೆಯಾಗುತ್ತದೆಯೋ ಎನ್ನುವ ಮನೋಭಾವದಲ್ಲಿ ತಮ್ಮಷ್ಟಕ್ಕೆ ತಾವೇ ಇಡೀ ಸಮ್ಮೇಳನವನ್ನು ಆಯೋಜಿಸಿದಂತೆ ಕಾಣುತ್ತಿತ್ತು. ಆದ್ದರಿಂದಲೇ ಧಾರವಾಡಿಗರು, ಸಾಹಿತ್ಯ ಸಮ್ಮೇಳನಕ್ಕೆಂದು ಬಂದವರೆಂದರೂ, ಇದೆಲ್ಲಿ ಅದೆಲ್ಲಿ ಎಂದು ವಿಚಾರಿಸಿದರೂ ಬೇಕೋ ಬೇಡವೋ ಎನ್ನುವ ಪ್ರತಿಕ್ರಿಯೆ ನೀಡುತ್ತಿದ್ದದ್ದು ಒಂದೆಡೆಯಾದರೆ, ವ್ಯಾಪಾರಿಗಳಂತೂ ವರ್ಷದ ದುಡಿಮೆಯನ್ನೆಲ್ಲ ಈ ಮೂರ‍್ನಾಲ್ಕು ದಿನಗಳಲ್ಲೇ ಮುಗಿಸಿಕೊಂಡು ಬಿಡುವ ಹಪಾಹಪಿಗೆ ಬಿದ್ದಿದ್ದರು.
ನಾಲ್ಕು ದಿನವೂ ನಾವಿದ್ದ ಕೋರ್ಟ್ ಸರ್ಕಲ್ ಹತ್ತಿರದ ಲಾಡ್ಜಿನಿಂದ ಸಮ್ಮೇಳನ ನಡೆಯುತ್ತಿದ್ದ ಕೃಷಿ ವಿಶ್ವವಿದ್ಯಾಲಯಕ್ಕೆ ಹೋಗಲಿಕ್ಕೆ ಆಟೋಗಳನ್ನು ನೆಚ್ಚಿಕೊಳ್ಳಬೇಕಾದ ಅನಿವಾರ್ಯತೆ ಇತ್ತು. ಸಮ್ಮೇಳನಕ್ಕೆ ಹೋಗಲಿಕ್ಕೆಂದು ಉಚಿತ ಸಾರಿಗೆ ವ್ಯವಸ್ಥೆ ಇದ್ದರೂ, ಪ್ರತೀದಿನವೂ ಪುಸ್ತಕದ ಬಂಡಲ್ ಸೇರಿದಂತೆ ಇತರೆ ಲಗ್ಗೇಜುಗಳನ್ನು ಹೊತ್ತೊಯ್ಯಬೇಕಾಗಿದ್ದರಿಂದ ಆಟೋದಲ್ಲಿ ಹೋಗಲೇಬೇಕಿತ್ತು. ನಾವು ಸಮ್ಮೇಳನದ ಹಿಂದಿನ ದಿನ ಪ್ರಯಾಣಿಸಿದ ಆಟೋದ ಅಬ್ದುಲ್ ರೆಹಮಾನ್ ಎನ್ನುವವರೊಬ್ಬರು ನಮ್ಮನ್ನು ಕೋರ್ಟ್ ಸರ್ಕಲ್ಲಿನಿಂದ ಸಮ್ಮೇಳನದ ಜಾಗಕ್ಕೆ ಸೂಕ್ತವಾದ ಬೆಲೆಯಲ್ಲಿ ಅಂದರೆ ಎಂಭತ್ತು ರೂಪಾಯಿಗೆ ಕರೆದೊಯ್ದರು ಬಿಟ್ಟರೆ, ಇನ್ನುಳಿದ ಮೂರು ದಿನವೂ ಧಾರವಾಡದ ಆಟೋದವರು ಅಕ್ಷರಶಃ ಸುಲಿಗೆಯನ್ನೇ ಮಾಡಿದರು.
ಬೆಂಗಳೂರಿನಲ್ಲಿ ಆಟೋದವರು ಸರಿ ಇರುವುದಿಲ್ಲ, ಹೊರಗಿನಿಂದ ಬರುವವರನ್ನು ಸುಲಿಯುವುದಕ್ಕೇ ಕಾಯುತ್ತಿರುತ್ತಾರೆ ಎಂದೆಲ್ಲ ಯಾವಾಗಲೂ ಬೆಂಗಳೂರಿನ ಆಟೋದವರನ್ನೇ ಬೈಯ್ದುಕೊಳ್ಳುವುದು ರೂಢಿ. ಆದರೆ ಸುಲಿಯಲಿಕ್ಕೆ ನಿಂತಿದ್ದ ಧಾರವಾಡದ ಆಟೋ ಚಾಲಕರು ಬೆಂಗಳೂರಿನ ಆಟೋ ಚಾಲಕರನ್ನೇ ಮೀರಿಸುವಂತಿದ್ದರು. ಎಂಭತ್ತು ರೂಪಾಯಿಗೆ ಸಮ್ಮೇಳನದ ಜಾಗಕ್ಕೆ ಕರೆದೊಯ್ಯಬಹುದಾಗಿದ್ದರೂ, ಒಂದಿಷ್ಟು ಹೆಚ್ಚು ದುಡ್ಡು ಮಾಡಬೇಕೆನ್ನುವ ಆಸೆಗೆ ಬಿದ್ದು ಇಪ್ಪತ್ತು ಮೂವತ್ತು ರೂಪಾಯಿಯನ್ನು ಹೆಚ್ಚುವರಿಯಾಗಿ ಕೇಳುವುದನ್ನು ಒಪ್ಪಿಕೊಳ್ಳಬಹುದೇನೋ. ಆದರೆ ಮಾತೆತ್ತಿದರೆ ಇನ್ನೂರು ರೂಪಾಯಿಯನ್ನೇ ಕೇಳುತ್ತಿದ್ದ ಆಟೋದವರು, ವಾಪಾಸ್ಸು ಖಾಲಿ ಬರಬೇಕು, ಅದಕ್ಕೇ ಹತ್ತುವುದಿದ್ದರೆ ಹತ್ತಿ, ಇಲ್ಲದೇ ಹೋದರೆ ಬೇಡ ಎನ್ನುವಂತೆಯೇ ಮೂರು ದಿನವೂ ವರ್ತಿಸಿದರು. ಜೊತೆಗೆ ಯಾರಾದರೊಬ್ಬರು ಆಟೋದವರು ಕಡಿಮೆ ಬೆಲೆಗೆ ನಾಲ್ಕು ಜನರನ್ನು ತಮ್ಮ ಆಟೋದಲ್ಲಿ ಕರೆದೊಯ್ಯಲು ಹೊರಟರೆ, ಎರಡು ಆಟೋದಲ್ಲಿ ಹೋಗಬಹುದಾದವರನ್ನು ನೀನೇಕೆ ಒಂದೇ ಆಟೋದಲ್ಲಿ ಕರೆದೊಯ್ಯಲು ಒಪ್ಪಿಕೊಂಡೆ ಎಂದು ಇನ್ನೊಂದು ಆಟೋದವರ ಜೊತೆ ಜಗಳ ತೆಗೆಯುವುದು... ಹೇಗಾದರೂ ಸರಿ ಮೂರು ದಿನದಲ್ಲಿ ಸಿಕ್ಕಸಿಕ್ಕವರನ್ನೆಲ್ಲ ಸುಲಿದು ಬಿಡಬೇಕು ಎಂದು ಧಾರವಾಡದ ಹೆಚ್ಚಿನ ಆಟೋ ಚಾಲಕರು ನಿರ್ಧರಿಸಿಕೊಂಡಂತೆ ಕಾಣುತ್ತಿತ್ತು.
ಇನ್ನು ಪುಸ್ತಕ ಮಳಿಗೆ ಸೇರಿದಂತೆ ಎಲ್ಲೆಡೆ ದೊಡ್ಡ ಫ್ಲಾಸ್ಕುಗಳಲ್ಲಿ ಟೀ ಕಾಫಿ ಮಾರುತ್ತಿದ್ದವರಂತೂ ವರ್ಷದ ದುಡಿಮೆಯನ್ನೆಲ್ಲ ಮೂರು ದಿನಗಳಲ್ಲೇ ಮಾಡಿಕೊಳ್ಳಲು ಸಜ್ಜಾಗಿದ್ದರು. ಯಾಕೆಂದರೆ ನಾಲ್ಕೈದು ದೊಡ್ಡ ಚಮಚಗಳಷ್ಟು ಟೀ ಇದ್ದಿರಬಹುದಾದ ಇಷ್ಟೇ ಇಷ್ಟು ಚಿಕ್ಕ ಕಪ್ ಟೀ-ಕಾಫಿಗೆ ಭರ್ತಿ ಹತ್ತು ರೂಪಾಯಿ ರೇಟ್ ಫಿಕ್ಸ್ ಮಾಡಿದ್ದರು. ಇವರದ್ದೂ ಅದೇ ಮನೋಭಾವ. ಇಷ್ಟು ಚಿಕ್ಕ ಕಪ್‌ಗೆ ಯಾಕೆ ಇಷ್ಟೊಂದು ಬೆಲೆ ಇಟ್ಟಿದ್ದೀರಿ ಎಂದು ಪ್ರಶ್ನಿಸಿದರೆ, ಬೇಕಾದರೆ ತೆಗೆದುಕೊಳ್ಳಿ, ಇಲ್ಲವಾದರೆ ನಾವು ಹೇಗಾದರೂ ಸೇಲ್ ಮಾಡಿಯೇ ಮಾಡುತ್ತೇವೆ ಎನ್ನುವ ಹಠಕ್ಕೆ ಬಿದ್ದಿದ್ದರು. ನಿಜಕ್ಕೂ ನೋಡಿದರೆ ಅಷ್ಟು ಚಿಕ್ಕ ಕಪ್‌ನಲ್ಲಿ ಮಾರಾಟ ಮಾಡುತ್ತಿದ್ದ ಟೀಗೆ ಐದು ರೂಪಾಯಿ ಕೂಡಾ ಹೆಚ್ಚೇ ಎನ್ನುವಂತಿತ್ತು. ಇನ್ನು ಬೆಂಗಳೂರಿನಲ್ಲೇ ಹದಿನೈದು ರೂಪಾಯಿಗೆ ಮಾರಲ್ಪಡುವ ಎಳನೀರಿಗೆ ಇಲ್ಲಿ ಭರ್ತಿ ಮೂವತ್ತು ರೂಪಾಯಿ! ಲಾಡ್ಜುಗಳ ಬಗ್ಗೆಯಂತೂ ಮಾತನಾಡುವಂತೆಯೇ ಇಲ್ಲ. ಅವರು ಕೊಟ್ಟಿದ್ದೇ ಸೌಲಭ್ಯ, ಅವರು ಹೇಳಿದ್ದೇ ಫೈನಲ್ ರೇಟು, ಜೊತೆಗೆ ಬೋನಸ್ಸಾಗಿ ಅವರ ಒರಟು ವರ್ತನೆ.
ಸಮ್ಮೇಳನವೆಂದ ಮೇಲೆ ಇದೆಲ್ಲ ಆಗುತ್ತದೆ, ಎಲ್ಲವನ್ನೂ ಸಾಹಿತ್ಯ ಪರಿಷತ್ತು ಹಿಡಿತದಲ್ಲಿಟ್ಟುಕೊಳ್ಳಲಿಕ್ಕೆ ಸಾಧ್ಯವಿಲ್ಲ ಎಂದು ಸಮಾಧಾನ ಮಾಡಿಕೊಳ್ಳಬಹುದಾದರೂ, ಇದಕ್ಕಿಂತ ಹಿಂದೆ ನಡೆದ ಮೈಸೂರು ಮತ್ತು ರಾಯಚೂರಿನ ಸಮ್ಮೇಳನದ ಅನುಭವ ಕಣ್ಮುಂದೆ ಬಂದ ತಕ್ಷಣ, ಧಾರವಾಡದಲ್ಲಿ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿದ ರೀತಿಯೇ ಎಡವಟ್ಟಿನಿಂದ ಕೂಡಿತ್ತು ಎನ್ನುವುದು ತಿಳಿಯುತ್ತದೆ.
2016ರಲ್ಲಿ ಸಾಹಿತ್ಯ ಸಮ್ಮೇಳನ ನಡೆದ ರಾಯಚೂರು ಕೂಡಾ ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಯೇ. ಉತ್ತರ ಕರ್ನಾಟಕದ ಜನರು, ಬಿಸಿಲು, ಊಟ ತಿಂಡಿಯೆಲ್ಲ ಹೇಗೆ ಎಂದು ಯೋಚಿಸಿಕೊಂಡು ಸಮ್ಮೇಳನದ ಹಿಂದಿನ ರಾತ್ರಿ ಹತ್ತು ಗಂಟೆಯ ಹೊತ್ತಿಗೆ ರಾಯಚೂರಿನಲ್ಲಿ ಹೋಗಿ ಇಳಿದರೆ, ಎದುರಾದ ಆಟೋದವರು ನಾವು ಸಾಹಿತ್ಯ ಸಮ್ಮೇಳನಕ್ಕೆ ಬಂದಿದ್ದೇವೆ ಎಂದ ತಕ್ಷಣ ತೋರಿಸಿದ ಪ್ರೀತಿ ಮತ್ತು ಆತ್ಮೀಯತೆಯನ್ನು ನಾನ್ಯಾವತ್ತೂ ಮರೆಯುವುದಿಲ್ಲ. ಪರಿಚಿತರ ಮನೆಯ ವಿಳಾಸ ತೋರಿಸಿದರೆ, ಅದು ತಮಗೆ ಗೊತ್ತಿಲ್ಲದ ಜಾಗವಾದರೂ ಅಲ್ಲಿ ಇಲ್ಲಿ ಕೇಳಿಕೊಂಡು ಅವರು ರಾತ್ರಿ ಹತ್ತು ಗಂಟೆಗೆ ನಮ್ಮನ್ನು ಕ್ಷೇಮವಾಗಿ ಸೇರಬೇಕಾದ ಕಡೆ ಸೇರಿಸಿದ್ದರು. ಮತ್ತು ಮೊದಲೇ ಗೊತ್ತು ಮಾಡಿದ್ದ ಬಾಡಿಗೆಯನ್ನಷ್ಟೇ ಪಡೆದುಕೊಂಡಿದ್ದರು. ಹಾಗೆಂದು ಇದು ಒಂದು ದಿನದ ಅನುಭವವೇನಲ್ಲ. ಅಲ್ಲಿದ್ದ ಮೂರು ದಿನವೂ ಪ್ರತೀ ಆಟೋದವರೂ ಸಾಹಿತ್ಯ ಸಮ್ಮೇಳನಕ್ಕೆ ಬಂದವರು ಎಂದ ತಕ್ಷಣ ವರ್ತಿಸುತ್ತಿದ್ದ ರೀತಿಯೇ ‘ನಮ್ಮೂರಿಗೆ ಬಂದ ನಿಮಗೆ ನಾವು ಯಾವ ತೊಂದರೆಯೂ ಆಗದಂತೆ ನೋಡಿಕೊಳ್ಳುತ್ತೇವೆ’ ಎನ್ನುವಂತಿರುತ್ತಿತ್ತು. ರಾತ್ರಿ ಊಟಕ್ಕೆ ಹೋಟೆಲ್ಲಿಗೆ ಹೋಗಬೇಕೆಂದಾಗಲೂ ನಮ್ಮನ್ನು ತಮಗೆ ಗೊತ್ತಿದ್ದ ಹೋಟೆಲ್ಲಿನೆದುರು ನಿಲ್ಲಿಸಿ, ನಿಮಗೆ ಇಲ್ಲಿಯ ವಾತಾವರಣ ಇಷ್ಟವಾಗದಿದ್ದರೆ ಬೇರೆ ಕಡೆ ಕರೆದುಕೊಂಡು ಹೋಗುತ್ತೇವೆ ಎನ್ನುವಂತಹ ಸೌಜನ್ಯ ಅಲ್ಲಿನ ಆಟೋ ಚಾಲಕರದ್ದಾಗಿತ್ತು. ಇನ್ನು ಜನರಾದರೂ ಅಷ್ಟೇ, ಪ್ರತಿಯೊಂದಕ್ಕೂ ನೀಡುತ್ತಿದ್ದ ಆತ್ಮೀಯತೆ ತುಂಬಿದ ಪ್ರತಿಕ್ರಿಯೆ ಖುಷಿ ನೀಡುತ್ತಿತ್ತು. ಇನ್ನು ನೀರು ಮತ್ತು ಟೀ-ಕಾಫಿ ಮಾರುತ್ತಿದ್ದ ವ್ಯಾಪಾರಿಗಳು ಕೂಡಾ ಸುಲಿಗೆಗೆ ಇಳಿದಿರಲಿಲ್ಲ. ಹೋದಲ್ಲಿ ಬಂದಲ್ಲಿ ಹಿಂದಿಯೇ ಎದುರಾಗುತ್ತಿತ್ತು ಎನ್ನುವುದೊಂದನ್ನು ಬಿಟ್ಟರೆ, ರಾಯಚೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಮತ್ತು ಇಡೀ ಊರೇ ಸಾಹಿತ್ಯ ಸಮ್ಮೇಳನದೊಂದಿಗೆ ಬೆರೆತು ಹೋದ ರೀತಿ ಖುಷಿ ಕೊಟ್ಟಿತ್ತು.
ಮೈಸೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅನುಭವವಂತೂ ಇನ್ನೂ ಭಿನ್ನವಾದದ್ದು. ಇಲ್ಲಿ ಪೊಲೀಸರು ಕೂಡಾ ಪುಸ್ತಕ ಮಳಿಗೆಯವರಿಗೆ ಆದ ತೊಂದರೆಗಳಿಗೆ ತಕ್ಷಣ ಸ್ಪಂದಿಸಿದ್ದರು. ಇನ್ನು ಸ್ವಯಂಸೇವಕರ ಪಡೆಯೇ ನಮ್ಮ ಸಮಸ್ಯೆಗಳನ್ನು ಕೇಳಲು ಸಜ್ಜಾಗಿರುತ್ತಿತ್ತು.
ಇತ್ತೀಚಿನ ಎರಡು ಸಮ್ಮೇಳನಗಳಲ್ಲೇ ಇಂತಹ ಹಿತವಾದ ಅನುಭವಗಳು ಜೊತೆಗಿದ್ದುದ್ದರಿಂದ ವಿದ್ಯಾಕಾಶಿ ಎಂದು ಕರೆಯಲ್ಪಡುವ ಮತ್ತು ಬೇಂದ್ರೆಯಂತಹ ಸಾಹಿತಿಗಳು ನಡೆದಾಡಿದ ನೆಲವಾದ್ದರಿಂದ, ಧಾರವಾಡದಲ್ಲಿಯೂ ಇದೇ ಅನುಭವ ಮುಂದುವರೆಯುತ್ತದೆ ಎನ್ನುವ ನಂಬಿಕೆ ನನ್ನದಾಗಿತ್ತು. ಆದರೆ ಅಲ್ಲಿದ್ದ ನಾಲ್ಕೂ ದಿನವೂ ನಡೆದಿದ್ದೆಲ್ಲವೂ ಇದಕ್ಕೆ ತದ್ವಿರುದ್ಧವಾಗಿತ್ತು. ಇಷ್ಟರನಡುವೆಯೂ ನಾನು ಇಲ್ಲಿ ಸುಲಿಗೆಗೆ ನಿಂತ ಪ್ರತಿಯೊಬ್ಬರ ಹತ್ತಿರವೂ, ‘ನಾವು ಪರವೂರಿನಿಂದ ಬಂದವರು, ನೀವು ಸ್ಥಳೀಯರಾಗಿ ಯರ‍್ರಾಬಿರ‍್ರಿ ರೇಟ್ ಫಿಕ್ಸ್ ಮಾಡಿಕೊಂಡು ಅಡ್ವಾಂಟೇಜ್ ತೆಗೆದುಕೊಳ್ಳುವುದು ತಪ್ಪು. ಲಾಭ ಮಾಡಿಕೊಳ್ಳಿ, ಆದರೆ ಈ ಪರಿ ಲಾಭ ಮಾಡಬೇಡಿ. ಇದರಿಂದ ನಮ್ಮಲ್ಲಿ ನಿಮ್ಮ ಊರಿನ ಬಗ್ಗೆಯೇ ಕೆಟ್ಟ ಅಭಿಪ್ರಾಯ ಬರುವಂತಾಗುತ್ತದೆ’ ಎಂದು ಹೇಳಿದರೂ, ಅದು ಕಲ್ಲಿನ ಮೇಲೆ ಮಳೆ ಸುರಿದಂತೆಯೇ... ಅನಿವಾರ್ಯವಾಗಿ ಅವರು ಹೇಳಿದ ಬಾಡಿಗೆಗೇ ಒಪ್ಪಿಕೊಂಡು ಹೊರಟ ಆಟೋದವರ ಹತ್ತಿರ, ‘ಪ್ರತೀ ದಿವಸ ಹತ್ತು ಬಾಡಿಗೆ ಹೊಡೆಯುತ್ತಿದ್ದವರಿಗೆ ಸಾಹಿತ್ಯ ಸಮ್ಮೇಳನದಿಂದಾಗಿ ಸುಲಭವಾಗಿ ಇಪ್ಪತ್ತು ಬಾಡಿಗೆ ಸಿಗುವಂತಾಗಿದೆ. ಇದೇ ನಿಮಗೆ ಈ ಮೂರ‍್ನಾಲ್ಕು ದಿನದಲ್ಲಿ ಸಿಕ್ಕುವ ದೊಡ್ಡ ಲಾಭ. ಹಾಗಿದ್ದೂ ನೀವು ನಿಮ್ಮ ಮನಸ್ಸಿಗೆ ಬಂದಷ್ಟು ಬಾಡಿಗೆ ಕೇಳಿ ಪರವೂರಿನವರನ್ನು ಸುಲಿಯುವುದು ತಪ್ಪಲ್ಲವಾ?’ ಎಂದರೆ, ‘ಏನ್ ಮಾಡೋಣ ಸರ್, ಇಲ್ಲಿ ಪ್ರತಿಯೊಂದಕ್ಕೂ ದುಡ್ಡು ಕೊಡಬೇಕು, ವಾಪಾಸ್ಸು ಖಾಲಿ ಬರಬೇಕು...’ ಎನ್ನುವ ತಲೆಬುಡವಿಲ್ಲದ ಉತ್ತರಗಳು ಸಿಕ್ಕವೇ ಹೊರತು ಸಾಹಿತ್ಯ ಸಮ್ಮೇಳನಕ್ಕೆಂದು ಬಂದ ಹೊರಗಿನವರಲ್ಲಿ ನಮ್ಮೂರಿನ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿಸಬೇಕೆನ್ನಿಸುವ ಮನಸ್ಥಿತಿ ಧಾರವಾಡದ ಒಬ್ಬೇ ಒಬ್ಬ ವ್ಯಾಪಾರಿಯಲ್ಲೂ ನನಗೆ ಕಾಣಲಿಲ್ಲ.
ಅಂದರೆ ಧಾರವಾಡದ ಸಾಹಿತ್ಯ ಸಮ್ಮೇಳನದಲ್ಲಿ ಇಡೀ ಊರು ಪಾಲ್ಗೊಳ್ಳಲಿಲ್ಲ. ಬರೀ ಸಾಹಿತ್ಯ ಪರಿಷತ್ತು ಮತ್ತು ಸರ್ಕಾರಿ ಇಲಾಖೆಗಳು ಜೊತೆಗೂಡಿ ಇದನ್ನು ನಡೆಸಲು ಮುಂದಾದವೇ ಹೊರತು, ಧಾರವಾಡದ ಎಲ್ಲರನ್ನೂ ತಮ್ಮೊಂದಿಗೆ ಕರೆದುಕೊಳ್ಳಲಿಲ್ಲ. ನಾವೆಲ್ಲರೂ ಒಟ್ಟಾಗಿ ಈ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸೋಣ, ನಮ್ಮೂರಿನ ಸಾಹಿತ್ಯ ಸಮ್ಮೇಳನ ಮುಂದಿನ ಸಮ್ಮೇಳನಕ್ಕೆ ಮಾದರಿಯಾಗಲಿ ಎನ್ನುವಂತಹ ಮನೋಭಾವವನ್ನು ಧಾರವಾಡಿಗರಲ್ಲಿ ಸಾಹಿತ್ಯ ಪರಿಷತ್ತು ಮತ್ತು ಅದಕ್ಕೆ ಸಂಬಂಧಪಟ್ಟವರು ಬಿತ್ತಲಿಲ್ಲ. ಅದರ ಫಲವೇ ಧಾರವಾಡದ ವ್ಯಾಪಾರಿಗಳು ರಾಜಕೀಯ ಪಕ್ಷಗಳ ಸಮಾವೇಶಕ್ಕೆ ಬಂದವರ ಹತ್ತಿರ ಸುಲಿಗೆ ನಿಂತವರಂತೆ ಸುಲಿಗೆಗೆ ನಿಂತರು.
ಇಷ್ಟೆಲ್ಲ ಆಗಿ ಸಮ್ಮೇಳನದ ಆವರಣದಲ್ಲಾದರೂ ಸಾಹಿತ್ಯ ಪರಿಷತ್ತಿಗೆ ಸಂಬಂಧಪಟ್ಟಂತಹ ಬೇರೆ ಬೇರೆ ಕಮಿಟಿಗಳವರಾದರೂ ನಮ್ಮ ಕಷ್ಟಗಳಿಗೆ ಸ್ಪಂದಿಸಿದರಾ ಎಂದರೆ, ಉಹ್ಞೂಂ, ಅವರಷ್ಟು ಬೇಜವಾಬ್ದಾರಿಯ ಮನುಷ್ಯರು ನಿಮಗೆ ಬೇರೆಲ್ಲೂ ಸಿಕ್ಕಲಿಕ್ಕಿಲ್ಲ. ಮೂರು ದಿನದಲ್ಲಿ ಒಮ್ಮೆ ಕೂಡಾ ಯಾವ ಕಮಿಟಿಯವರೂ ಬಂದು, ಹೇಗಿದ್ದೀರಿ, ಏನಾದರೂ ಸಮಸ್ಯೆ ಇದೆಯಾ ಎಂದು ಒಂದು ಮಾತೂ ಕೇಳಲಿಲ್ಲ. ನಾವಾಗಿಯೇ ಹುಡುಕಿಕೊಂಡು ಹೋದರೂ, ನಾನಲ್ಲ ಅವರು, ಇವರಲ್ಲ ಅವರು ಎಂದು ಅವರಿವರ ಕಡೆಗೆ ಬೆರಳು ತೋರಿಸುತ್ತಲೇ ಮೂರು ದಿನಗಳನ್ನು ಕಳೆದರು ಬಿಟ್ಟರೆ, ಪುಸ್ತಕ ಮಳಿಗೆಯವರ ಬಗ್ಗೆ ಯಾರೆಂದರೆ ಯಾರೂ ಕಾಳಜಿ ತೋರಿಸಲೇ ಇಲ್ಲ. ಇನ್ನು ಮೂರು ದಿನದಲ್ಲಿ ಒಬ್ಬೇ ಒಬ್ಬ ಸ್ವಯಂಸೇವಕರು ಯಾವ ಮಳಿಗೆಯ ಕಡೆಯೂ ಮುಖ ಕೂಡಾ ಹಾಕಲಿಲ್ಲ.
ಅವ್ಯವಸ್ಥೆ, ನಿಷ್ಕಾಳಜಿ, ಹೇಗೋ ನಡೆದು ಹೋಗುತ್ತದೆ ಬಿಡು ಎನ್ನುವ ಕೆಟ್ಟ ಉಡಾಫೆಯ ಮನೋಭಾವವೇ ತುಂಬಿದ್ದ ಧಾರವಾಡದ ಸಾಹಿತ್ಯ ಸಮ್ಮೇಳನ, ಸಾಹಿತ್ಯ ಸಮ್ಮೇಳನಗಳೆಂದರೇ ಬೆಚ್ಚಿ ಬೀಳುವಂತೆ ಮಾಡಿದೆ. ಮತ್ತು ಅತಿ ಕೆಟ್ಟದಾಗಿ ಆಯೋಜಿಸಲ್ಪಟ್ಟ ಸಾಹಿತ್ಯ ಸಮ್ಮೇಳನವೊಂದು ನನ್ನನ್ನೂ ಸೇರಿದಂತೆ ಬಹುತೇಕ ಸಾಹಿತ್ಯಾಸಕ್ತರ ಮನದಲ್ಲಿ ಕೆಟ್ಟ ನೆನಪಾಗಿ ಉಳಿಯುವಂತಾಗಿದೆ.
-ಆರುಡೋ ಗಣೇಶ

ಕಾಮೆಂಟ್‌ಗಳು

  1. ನನಗೆ ಹೋಗುವ

    ನನಗೆ ಹೋಗಲು
    ಅವಕಾಶ ಒದಗಿಬಂದಿತ್ತು ಹೋಗದೇ ಇದ್ದದ್ದೇ ಒಳಿತಾಯಿತು ಎನಿಸಿತು. ಯಾಕೆ ಈ ಜನರು ಹೀಗೆ ತಮ್ಮ ಊರಿಗೆ ಬಂದ ಹೊಸಬರನ್ನು ಸುಲಿಯುತ್ತಾರೆ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನೀವು ಬಾರದೇ ಇದ್ದಿದ್ದು ಒಳ್ಳೆಯದೇ ಆಯಿತು. ಸಮ್ಮೇಳನಕ್ಕೆ ಹೋದ ಹೆಚ್ಚಿನವರಿಗೆ ನನಗಾದ ಅನುಭವವೇ ಆಗಿದೆ.

      ಅಳಿಸಿ
  2. Adhesto jana thumba ista pattu ondhu sabheyannu serirutthare aaga ee reethi aadhare thumba bejaaru matthu avara mele eruva gourava kooda kadime aagodhu kooda sahaja

    ಪ್ರತ್ಯುತ್ತರಅಳಿಸಿ
  3. ನೀವು ಹೇಳಿದ್ದು ನಿಜ. ಧಾರವಾಡ ಮತ್ತು ಧಾರವಾಡಿಗರು ಎಂದರೆ ನನ್ನಲ್ಲೊಂದು ಚಿತ್ರಣವಿತ್ತು. ಈ ಸಮ್ಮೇಳನದಿಂದಾಗಿ ಅದೆಲ್ಲವೂ ಬದಲಾಯಿತು.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆ ಕ್ಷಣದಲ್ಲಿ ಶರತ್‌ ಸಾವಿನೆದುರು ಅದೆಷ್ಟು ಅಸಹಾಯಕ!!

ಒಂಟಿತನ ಎಂದರೆ ಜವಾಬ್ದಾರಿಯಿಂದ ಜಾರಿಕೊಳ್ಳುವುದಾ?!

ಈಗ ಆರು ಪಾಸಾಗಿ ಏಳು...