ಎಷ್ಟು ದಿನವೆಂದು ಹೀಗೇ ದುಡಿಯುತ್ತೀರಾ?!

ಉಹ್ಞೂಂ, ಅದು ನಮಗೇ ಗೊತ್ತಿರುವುದಿಲ್ಲ.
ಬೆಳಗಾಯಿತು ಕೆಲಸಕ್ಕೆ ಹೋಗು, ಕತ್ತಲಾಯಿತು ಮನೆಗೆ ಬಾ, ದಿನವಿಡೀ ದುಡಿದು ದಣಿದಿದ್ದೀಯಾ ಮಲಗು, ಬೆಳಿಗ್ಗೆ ಮತ್ತೆ ಬೇಗ ಏಳು, ದುಡಿಯಲು ಹೋಗಬೇಕಲ್ಲ ಹೊರಟು ಬಿಡು... ಎಲ್ಲೋ ಒಂದು ಭಾನುವಾರ, ಯಾವುದೋ ಹಬ್ಬ, ಹತ್ತಿರದವರ ಮನೆಯಲ್ಲಿನ ವಿಶೇಷ ಇಂತಹ ಕೆಲವೇ ಕೆಲವು ದಿನಗಳನ್ನು ಬಿಟ್ಟರೆ ‘ನನ್ನದೆನ್ನುವ ಬದುಕನ್ನು ನಾನೇ ಕಟ್ಟಿಕೊಳ್ಳಬೇಕು’ ಎಂದು ನಿರ್ಧರಿಸಿಕೊಂಡ ದಿನದಿಂದ ದುಡಿಯಲಾರಂಭಿಸಿದವರು ಉಸಿರು ನಿಲ್ಲಿಸುವವರೆಗೂ ದುಡಿಯುತ್ತಲೇ ಇದ್ದು ಬಿಡುತ್ತೇವಲ್ಲವಾ?
ಹಾಗೆ ದುಡಿಯದಿದ್ದರೆ ಬದುಕುವುದು ಹೇಗೆ? ನಮ್ಮ ಲೈಫ್‌ನ್ನು ನಾವು ನೆಮ್ಮದಿಯಾಗಿ ಬದುಕಬೇಕೆಂದರೆ ದುಡಿಯುವ ವಯಸ್ಸಿನಲ್ಲಿ ಎಷ್ಟು ಸಾಧ್ಯವೋ ಅಷ್ಟು ದುಡಿಯಬೇಕಷ್ಟೇ ಎಂದು ಕೀ ಕೊಟ್ಟ ಗೊಂಬೆಯಂತೆ ದಿನಬೆಳಗಾದರೆ ದುಡಿಮೆಗೆ ನಿಲ್ಲುವ ನೀವು ಹೇಳಬಹುದು. ಸರಿ, ಒಪ್ಪಿಕೊಳ್ಳೋಣ. ಹಾಗಿದ್ದರೆ ಹೀಗೆ ದುಡಿಯುತ್ತಲೇ ಇರುವುದೇ ನಿಮ್ಮ ಬದುಕಾ? ಬೆಳಗಾಯಿತು ಹೊರಡು, ರಾತ್ರಿ ಬರುವಾಗ ಸುಸ್ತಾಗಿ ಹೈರಾಣಾಗಿ ಹೋಗಿರುತ್ತೀಯಾ ಸುಮ್ಮನೆ ರೆಸ್ಟ್ ಮಾಡು ಎನ್ನುವಂತಹ ಜೀವನವನ್ನು ನೀವು ನಡೆಸುತ್ತಿರುವುದೇ ಹೌದಾದರೆ ನಿಮ್ಮ ಬದುಕು ಇನ್ನೇನಾಗಿರಲಿಕ್ಕೆ ಸಾಧ್ಯವಿದೆ?
ಇನ್ನೇನೂ ಆಗಿರುವುದಿಲ್ಲ. ಪ್ರತೀ ತಿಂಗಳು ನನಗೆ ಇಂತಿಷ್ಟು ಹಣ ಸಂಬಳ, ಲಾಭ ಸೇರಿದಂತೆ ಯಾವುದಾದರೂ ಒಂದು ರೂಪದಲ್ಲಿ ಬರಬೇಕು. ಹಾಗೆ ಬಾರದೇ ಹೋದರೆ ಸಣ್ಣ ಕಿಂಡಿಯೂ ಇಲ್ಲದ ಕೋಣೆಯೊಂದರಲ್ಲಿ ಕೂಡಿ ಹಾಕಿದರೆ ಹೇಗೆ ಉಸಿರುಗಟ್ಟಿದ ಅನುಭವವಾಗುತ್ತದೆಯಲ್ಲವಾ, ಅಂತಹದ್ದೇ ಅನುಭವ ಆಗಿಬಿಡುತ್ತದೆ. ಆದ್ದರಿಂದಲೇ ದಿನ ಬೆಳಗಾಯಿತು ಎಂದರೆ ನಮಗೆ ಅದೆಷ್ಟೇ ಕಷ್ಟವಾದರೂ ಅಡ್ಡಿಲ್ಲ, ಮನಸ್ಸಿಲ್ಲದಿದ್ದರೂ ಅಡ್ಡಿಲ್ಲ ದುಡಿಯಲಿಕ್ಕೆ ಹೋಗಬೇಕು. ಹೋದಮೇಲೆ ಅದಕ್ಕೆ ನಿಧಾನವಾಗಿಯಾದರೂ ಹೊಂದಿಕೊಳ್ಳಬೇಕು. ಸಂಜೆಯ ತನಕ ಸಮಯ ತಳ್ಳಬೇಕು. ರಾತ್ರಿ ಮನೆಗೆ ತಲುಪುವ ಹೊತ್ತಿಗೆ ದಿನದ ದಣಿವು ಕಣ್ಣ ನಿದ್ದೆಯಾಗಿ ಹಾಸಿಗೆಯತ್ತ ಎಳೆದೊಯ್ದುಬಿಡುತ್ತದೆ. ಎಲ್ಲಾದರೂ ವಾರಕ್ಕೊಂದು ರಜೆ ಎನ್ನುವುದು ಇಲ್ಲದೇ ಹೋಗಿದ್ದರೆ ನಿಮ್ಮ ಬದುಕು ಎಂದರೆ ದುಡಿಮೆಯ ಇನ್ನೊಂದು ಹೆಸರೇ ಆಗಿರುತ್ತಿತ್ತು.
ಹೀಗೆ ದುಡಿಯುತ್ತೀರಲ್ಲ, ಇದರಿಂದ ಏನು ಗಳಿಸುತ್ತೀರಾ?
ಬದುಕಿನಲ್ಲಿ ನಾನೇನಾದರೂ ಗಳಿಸಿದ್ದಿದ್ದರೆ ಅದೆಲ್ಲವೂ ಈ ದುಡಿಮೆಯಿಂದಲೇ ಹೊರತು ಬೇರೆ ಯಾವುದರಿಂದಲೂ ಅಲ್ಲ ಎಂದು ನೀವು ಹೆಮ್ಮೆಯಿಂದ ಹೇಳಬಹುದು. ಮತ್ತು ಈ ಪ್ರಶ್ನೆ ಕೇಳಿದ ನನ್ನನ್ನೂ ಸೇರಿ ಬೇರೆ ಯಾರನ್ನೇ ಆದರೂ ನೀವು ಮೂರ್ಖ, ಮುಠ್ಠಾಳನಂತೆಯೂ ನೋಡಬಹುದು! ನಾನೂ, ನನ್ನ ಹೆಂಡತಿ, ಮಕ್ಕಳೂ ಸೇರಿದಂತೆ ನಮ್ಮ ಸಂಸಾರದ ಮೂರು ಹೊತ್ತಿನ ಊಟ, ನಾವಿರುವ ಮನೆ, ನಾವು ಓಡಾಡುವ ಕಾರು, ಬೈಕು, ಸಂಪಾದಿಸಿರುವ ಆಸ್ತಿ, ಕೂಡಿಟ್ಟಿರುವ ಚಿನ್ನ, ಹಣ, ಬ್ಯಾಂಕಿನ ಬ್ಯಾಲೆನ್ಸು, ಮಕ್ಕಳ ಓದು, ಅವರಿಗೆ ಬೇಕಾದ ಏನೇನೋ ವಸ್ತುಗಳು, ಮೋಜು ಮಸ್ತಿಗಳು... ನಮ್ಮ ಬದುಕಿನ ಏನೆಲ್ಲ ಇದೆಯೋ ಅದೆಲ್ಲವನ್ನೂ ನಾನು ಗಳಿಸಿದ್ದು ಹಗಲು ರಾತ್ರಿ ದುಡಿದಿದ್ದರಿಂದಲೇ ಹೊರತು ಬೇರೆ ಯಾವುದರಿಂದಲೂ ಅಲ್ಲ ಎಂದು ನೀವೂ ಸೇರಿದಂತೆ ಎಲ್ಲರೂ ಹೆಮ್ಮೆಯಿಂದ ಹೇಳಿಕೊಳ್ಳಬಹುದು. ನನ್ನ ಕಷ್ಟದ ದುಡಿಮೆಯಿಂದ ನಾನೇನೇ ಗಳಿಸಿಕೊಂಡಿದ್ದರೂ ಅದರ ಬಗ್ಗೆ ಹೆಮ್ಮೆಯಿಂದ ಹೇಳುವುದರಲ್ಲಿ ಖಂಡಿತಾ ತಪ್ಪಿಲ್ಲ. ತಲೆ ಒಡೆದು ಸಂಪಾದಿಸಿದವರೇ ಇದೆಲ್ಲ ನನ್ನದು ಎಂದು ಗತ್ತಿನಿಂದ ಹೇಳುವಾಗ ಹಗಲು ರಾತ್ರಿ ದುಡಿದು ಗುಡ್ಡೆ ಹಾಕಿಕೊಂಡ ನೀವು ಹೇಳದೇ ಇರಲಿಕ್ಕಾಗುತ್ತದಾ? ಹೇಳಿಕೊಳ್ಳಬೇಕು, ಹೇಳಿಕೊಳ್ಳುತ್ತೀರಿ.
ಹಗಲು ರಾತ್ರಿ ಕಷ್ಟ ಪಟ್ಟು, ಇರುವ ನೋವು, ಸಂಕಟ, ಬೇಸರ, ಕಾಯಿಲೆಗಳನ್ನೆಲ್ಲ ಮುಚ್ಚಿಟ್ಟು, ಹಸಿವು, ಬಾಯಾರಿಕೆಯನ್ನೂ ಕಟ್ಟಿಟ್ಟು ಒಂದೇ ಸಮನೆ ದುಡಿದಿರುತ್ತೀರಿ ಮತ್ತು ಇದನ್ನೆಲ್ಲ ಗಳಿಸಿಕೊಂಡಿರುತ್ತೀರಿ. ಹೀಗೆ ಗಳಿಸಿದ್ದನ್ನು ನೀವು ಎಷ್ಟರಮಟ್ಟಿಗೆ ಅನುಭವಿಸಿದ್ದೀರಿ? ನಿಮ್ಮ ಬದುಕಿಗೆ ಇದರಿಂದ ಅದ್ಯಾವ ಸುಖ, ಶಾಂತಿ ಮತ್ತು ನೆಮ್ಮದಿ ಸಿಕ್ಕಿದೆ? ಎನ್ನುವ ಪ್ರಶ್ನೆಯನ್ನು ನೀವು ಒಮ್ಮೆಯಾದರೂ ಕೇಳಿಕೊಂಡಿದ್ದೇ ಹೌದಾದರೆ, ಬಹುಶಃ ನಾನೇಕೆ ಈ ಪಾಟಿ ಎಗಾದಿಗಾ ದುಡಿಯುತ್ತಿದ್ದೇನೆ ಎಂದು ಒಮ್ಮೆಯಾದರೂ ಅನ್ನಿಸಿರುತ್ತಿತ್ತು.
ಆದರೇನು ಗೊತ್ತಾ, ನಮ್ಮ ನಿಮ್ಮ ಹಾಗೆ ಬದುಕು ಸಾಗಬೇಕೆಂದರೆ ದುಡಿಯಲೇಬೇಕು ಕಣ್ರೀ, ದುಡಿದೇ ಹೋದ್ರೆ ಬದುಕೋಕೆ ಆಗೋದಿಲ್ಲ ಎಂದು ಹೇಳುವ ಯಾರೂ ಕೂಡಾ ನಾನೆಷ್ಟು ದಿನ ಹೀಗೇ ದುಡಿಯುತ್ತಾ ಇರುವುದು ಎನ್ನುವ ಪ್ರಶ್ನೆಯನ್ನು ತಮಗೆ ತಾವು ಕೇಳಿಕೊಳ್ಳುವುದೇ ಇಲ್ಲ. ಒಂದೊಮ್ಮೆ ಅವರೇನಾದರೂ ಹಾಗೆ ಕೇಳಿಕೊಂಡಿದ್ದೇ ಹೌದಾದರೆ ಅವರಿಗೆ ಮಾರನೇಯ ದಿನದಿಂದ ತನ್ನೆಲ್ಲವನ್ನೂ ತ್ಯಾಗ ಮಾಡಿಕೊಂಡು ದುಡಿಯುವುದಕ್ಕೆಂದು ಹೋಗಲು ಸಾಧ್ಯವಾಗುವುದಿಲ್ಲ.
ಅವನಿಗೆ ಮೊದಲಿನಿಂದಲೂ ತನಗೆ ಬೇಕೆನ್ನಿಸಿದ ಹಾಗೊಂದು ಮನೆ ಕಟ್ಟಿಕೊಳ್ಳಬೇಕು ಎನ್ನುವ ಕನಸಿತ್ತು. ದುಡಿಯಲು ಆರಂಭ ಮಾಡಿದ ಕ್ಷಣದಲ್ಲೇ ಅವನು ಆ ಕನಸನ್ನು ನನಸು ಮಾಡಿಕೊಳ್ಳಬೇಕು ಎಂದು ಹಂಬಲಿಸುತ್ತಲೇ ಇದ್ದ. ಆದರೆ ಆ ಕನಸು ನನಸಾಗಲಿಕ್ಕೆ ಏನೇನೋ ತೊಡಕುಗಳು ಬರುತ್ತಲೇ ಇದ್ದವು. ಈ ನಡುವೆ ಮದುವೆಯಾಯಿತು, ಮಕ್ಕಳಾದವು. ಈ ಜವಾಬ್ದಾರಿಗಳನ್ನೆಲ್ಲ ನೀಗಿಕೊಂಡು ಅವನ ಕನಸು ನನಸಿನ ಮೊದಲ ಹೆಜ್ಜೆ ಇಡುವಾಗ ಅವನಿಗೆ ನಲ್ವತ್ತೈದು ವರ್ಷ! ಹೆಚ್ಚೆಂದರೆ ಇನ್ನೊಂದು ಹದಿನೈದಿಪ್ಪತ್ತು ವರ್ಷ ಇದೇ ರೀತಿ ದುಡಿಯಬಲ್ಲ. ಈ ಹದಿನೈದು ವರ್ಷವನ್ನು ಅವನು ತನ್ನ ಕನಸಿನ ಮನೆಗಾಗಿ ಮಾಡಿದ ಸಾಲವನ್ನು ತೀರಿಸಲಿಕ್ಕೆಂದು ಮೀಸಲಿಟ್ಟುಕೊಂಡರೆ, ಅವನು ತನ್ನ ಕನಸಿನ ಮನೆಯಲ್ಲಿ ಎಷ್ಟು ಸಮಯ ಕಳೆದಂತಾಯಿತು? ತನ್ನ ಕನಸಿನ ಮನೆಯಲ್ಲಿ ತಾನೇ ಒಂದಿಷ್ಟು ಸಮಯ ನೆಮ್ಮದಿಯಿಂದ ಕಳೆಯಲು ಸಾಧ್ಯವಾಗದ ಬದುಕಿನ ಇಂತಹ ಸ್ಥಿತಿಗಾಗಿ ಅವನು ಮನೆ ಕಟ್ಟಬೇಕಿತ್ತಾ? ವಿಚಿತ್ರವೆಂದರೆ ಹೆಚ್ಚಿನವರು ತಮ್ಮ ಕನಸಿನ ಮನೆಯನ್ನೇನೋ ಕಟ್ಟಿಬಿಡುತ್ತಾರೆ. ಆದರೆ ಅದು ನನಸಾದ ನಂತರ ನನಸಾಗುವ ದಾರಿಯಲ್ಲಿ ಆಗಿರುವ ಸಾಲವನ್ನು ತೀರಿಸುತ್ತಲೇ ಬದುಕನ್ನು ಕಳೆದುಬಿಡುತ್ತಾರೆ! ತಾನು ಒಳಗೆ ನೆಮ್ಮದಿಯಿಂದಿರಬೇಕೆಂದು ಕಟ್ಟಿದ ಮನೆಯ ಸಾಲವನ್ನೆಲ್ಲ ತೀರಿಸಲು ಇವರು ಮೊದಲಿಗಿಂತ ಹೆಚ್ಚು ಮನೆಯಿಂದ ಹೊರಗಿದ್ದೇ ಬಿಡುತ್ತಾರೆ.
ನಮ್ಮ ಬದುಕಿನ ವಿಚಿತ್ರಗಳೇ ಹೀಗೆ. ನಮಗೆ ಬೇಕಾಗಿರುವುದನ್ನು ಪಡೆದುಕೊಳ್ಳಬೇಕೆಂದುಕೊಂಡೇ ದುಡಿಯುತ್ತೇವೆ ಮತ್ತು ದುಡಿಯುತ್ತೇವೆ. ಆದರೆ ಬೇಕಾಗಿರುವುದನ್ನು ಪಡೆದುಕೊಂಡ ನಂತರ ಅದನ್ನು ಒಮ್ಮೆಯಾದರೂ ನಮ್ಮದನ್ನಾಗಿಸಿಕೊಂಡು ಅನುಭವಿಸಲಿಕ್ಕೆ ಮಾತ್ರ ನಮ್ಮಲ್ಲಿ ಸಮಯವೇ ಇರುವುದಿಲ್ಲ. ಈಗಷ್ಟೇ ಮಾರುಕಟ್ಟೆಗೆ ಬಂದಿರುವ ಕಾರೊಂದನ್ನು ಕೊಳ್ಳಬೇಕೆನ್ನುವ ಆಸೆಯಿಂದ ಹಗಲು ರಾತ್ರಿ ದುಡಿಯುತ್ತೇವೆ. ಒಂದು ಕಡೆ ದುಡಿದರೆ ಸಾಲುವುದಿಲ್ಲ ಎಂದು ಎರಡು ಮೂರು ಕಡೆ ಸಂಪಾದನೆಗೆ ನಿಲ್ಲುತ್ತೇವೆ. ಕೊನೆಗೂ ನಾವಂದುಕೊಂಡ ಕಾರನ್ನು ತೆಗೆದುಕೊಳ್ಳುತ್ತೇವೆ. ವಿಚಿತ್ರವೇನು ಗೊತ್ತಾ, ಇಷ್ಟೆಲ್ಲ ಆಸೆ ಪಟ್ಟು ಕೊಂಡುಕೊಂಡ ಕಾರಿನಲ್ಲಿ ಪಕ್ಕದೂರಿನಲ್ಲೇ ಇರುವ ಅಪ್ಪ ಅಮ್ಮನನ್ನು ನೋಡಲಿಕ್ಕೆಂದು ಹೋಗಲಿಕ್ಕೂ ನಮ್ಮಲ್ಲಿ ಸಮಯ ಇರುವುದಿಲ್ಲ. ಯಾಕೆಂದರೆ ಸಾಲ ಮಾಡಿಕೊಂಡು ಖರೀದಿಸಿದ ಕಾರಿನ ಪ್ರತೀ ತಿಂಗಳ ಕಂತು ಕಟ್ಟದೇ ಹೋದರೆ ಇಷ್ಟು ವರ್ಷಗಳ ಕಾಲ ದುಡಿದು ಕೂಡಿಟ್ಟು, ಅದೂ ಸಾಲದೇ ಸಾಲ ಮಾಡಿಕೊಂಡು ಖರೀದಿಸಿದ ಕಾರನ್ನು ಬ್ಯಾಂಕಿನವರು ಎತ್ತಿಕೊಂಡು ಹೋಗುತ್ತಾರೆ.
ಈಗ ಹೇಳಿ, ದುಡಿದು ಗಳಿಸಿದ್ದನ್ನು ನಮಗೇ ಅನುಭವಿಸಲಿಕ್ಕೆ ಸಾಧ್ಯವಿಲ್ಲ ಎಂದಮೇಲೂ ನಾವೇಕೆ ಹೀಗೆ ಎರ್ರಾಬಿರ್ರಿ ದುಡಿಯುತ್ತಿದ್ದೇವೆ? ಹೀಗೆ ಯೋಚಿಸುವುದು ಸ್ವಾರ್ಥವಾಗುತ್ತದೆ. ನಾನೇ ದುಡಿದು ಗಳಿಸಿದ್ದನ್ನು ನಾನೇ ಅನುಭವಿಸಬೇಕು, ಎಂಜಾಯ್ ಮಾಡಬೇಕು ಎಂದುಕೊಳ್ಳುವುದು ಸ್ವಾರ್ಥವಾಗುತ್ತದೆ. ನಾನು ದುಡಿಯುವುದರಿಂದಲೇ ನನ್ನ ಹೆಂಡತಿ, ಮಕ್ಕಳು, ನನ್ನ ಒಡಹುಟ್ಟಿದವರು ನೆಮ್ಮದಿಯಾಗಿದ್ದಾರೆ. ಅವರ ಸಂತಸ, ನೆಮ್ಮದಿಗಾಗಿ ನಾನು ದುಡಿಯುತ್ತಿದ್ದೇನೆ ಎಂದುಕೊಂಡು ಎಲ್ಲರೂ ದುಡಿಯುತ್ತಿರುತ್ತಾರೆ ಎನ್ನುವುದು ಕೆಲವರ ವಾದವಾದರೂ, ಇವತ್ತಿನ ದಿನಗಳಲ್ಲಿ ಬೆಂಗಳೂರಿನಂತಹ ನಗರಗಳಲ್ಲಿ ಬಹುಪಾಲು ಜನರ ಬದುಕು ನೋಡಿದರೆ ಇದು ಕೂಡಾ ಸುಳ್ಳು ಅಂತಲೇ ಅನ್ನಿಸುತ್ತದೆ.
ಸರಿ, ನೀವು ದುಡಿಯುತ್ತೀರಿ. ಅದನ್ನು ನಿಮ್ಮಿಂದ ಎಂಜಾಯ್ ಮಾಡಲಾಗದೇ ಇದ್ದರೂ ನಿಮ್ಮ ಮನೆಯವರು ಎಂಜಾಯ್ ಮಾಡುತ್ತಾರೆ ಎನ್ನುವ ಸಾರ್ಥಕತೆಗಾಗಿ ನೀವು ದುಡಿಯುತ್ತಿದ್ದೀರಿ ಎಂದುಕೊಳ್ಳಲು ಹೇಗೆ ಸಾಧ್ಯ? ಗಂಡ ದುಡಿದಿದ್ದು ಸಾಲುವುದಿಲ್ಲ ಎಂದು ಹೆಂಡತಿ ಕೂಡಾ ದುಡಿಯಲು ಹೋಗುತ್ತಾಳೆ. ಇಬ್ಬರೂ ಬೆಳಿಗ್ಗೆ ಮನೆ ಬಿಟ್ಟರೆ ಮತ್ತೆ ವಾಪಾಸ್ಸು ಬರುವುದೇ ರಾತ್ರಿ ರೆಸ್ಟ್‌ ಅಥವಾ ನಿದ್ದೆ ಮಾಡಲಿಕ್ಕೆ! ಇಬ್ಬರು ಮಕ್ಕಳಿದ್ದಾರೆ. ಆ ಮಕ್ಕಳು ಸ್ಕೂಲು - ಕಾಲೇಜು ಎಂದು ಬೆಳಿಗ್ಗೆ ಮನೆಯಿಂದ ಹೋದರೆ, ಅಲ್ಲಿಂದ ಟ್ಯೂಷನ್ನಿಗೆ ಹೋಗಿ, ಇನ್ನೊಂದಿಷ್ಟು ಕ್ಲಾಸು, ಟ್ರೈನಿಂಗು ಎಂದೆಲ್ಲ ಮುಗಿಸಿಕೊಂಡು ಮನೆಗೆ ಮರಳುವಾಗ ರಾತ್ರಿ ಊಟದ ಹೊತ್ತಾಗಿರುತ್ತದೆ. ನಿಜವಾಗಿಯೂ ಇಂತಹ ಮನೆಗಳಲ್ಲಿ ಮನೆಯಲ್ಲೇ ಇದ್ದು, ಆ ಮನೆಯ ನೆರಳು, ತಂಪು ಮತ್ತು ಎಲ್ಲಾ ಸೌಲಭ್ಯವನ್ನು ಎಂಜಾಯ್ ಮಾಡುವವರು ಕೇವಲ ಆ ಮನೆಯ ಕೆಲಸದವರೇ ಹೊರತು ಬೇರೆ ಯಾರೂ ಆಗಿರುವುದಿಲ್ಲ.
ಈಗ ಹೇಳಿ, ನೀವು ಯಾರಿಗಾಗಿ ಮತ್ತು ಯಾಕಾಗಿ ಈ ರೀತಿ ಹುಚ್ಚಿಗೆ ಬಿದ್ದವರಂತೆ ದುಡಿಯುತ್ತಿದ್ದೀರಿ? ನೀವೇ ನಿಮಗಾಗಿ ಕಟ್ಟಿಸಿಕೊಂಡ ಮನೆಯಲ್ಲಿ ನೀವು ರಾತ್ರಿ ಮಲಗುವುದಕ್ಕೆ ಮಾತ್ರ ಇರುತ್ತೀರಿ ಬಿಟ್ಟರೆ, ಬದುಕಿನ ಇನ್ನೆಲ್ಲ ದಿನವೂ ನೀವು ಹೊರಗೇ ಇರುತ್ತೀರಿ ಎಂದರೆ ಎಲ್ಲಾ ಸೌಲಭ್ಯವನ್ನು ಹೊಂದಿದ ಅಷ್ಟು ದೊಡ್ಡ ಮನೆಯನ್ನೇಕೆ ಕಟ್ಟಿಸಬೇಕಿತ್ತು? ಮನೆಯವರೊಂದಿಗೆ ಒಂದಿಷ್ಟು ಸಮಯ ಕಳೆಯಲು ಪುರುಸೊತ್ತಿಲ್ಲದಂತೆ ದುಡಿಯುತ್ತಿರುವ ನೀವು ಮನೆ ಎದುರು ಹತ್ತಾರು ಕಾರುಗಳನ್ನು ನಿಲ್ಲಿಸಿಕೊಂಡಿದ್ದೀರಲ್ಲ ಮತ್ತು ಅದರ ಲೋನ್ ತೀರಲಿಕ್ಕೆಂದೇ ಮೊದಲಿಗಿಂತ ಹೆಚ್ಚು ದುಡಿಯುತ್ತಿದ್ದೀರಲ್ಲ, ಆ ಕಾರುಗಳನ್ನು ಖರೀದಿಸಿದ್ದರಿಂದ ನಿಮ್ಮ ಬದುಕಿಗೇನು ಸಿಕ್ಕಿತು? ಮನೆಯಲ್ಲಿ ಕೆ.ಜಿಗಟ್ಟಲೆ ಬಂಗಾರವಿದೆ, ಅದನ್ನು ಧರಿಸಲು ಸಮಯವಿಲ್ಲ. ಒಂದು ವೇಳೆ ಸಮಯ ಸಿಕ್ಕಿ ಧರಿಸಬೇಕೆಂದುಕೊಂಡರೆ ಸರಗಳ್ಳರ ಭಯ! ಅಂದಮೇಲೆ ಅದನ್ನು ಸಂಪಾದಿಸಿಟ್ಟು ನಿಮಗೇನಾಗಬೇಕಿದೆ? ಇದನ್ನು ಸಂಪಾದಿಸಲಿಕ್ಕೆಂದೇ ಯಾಕಷ್ಟು ಕಷ್ಟ ಪಟ್ಟು ದುಡಿಯಬೇಕಿತ್ತು? ಇಲ್ಲ, ವಯಸ್ಸಿದ್ದಾಗ ದುಡಿದು ಬಿಡಬೇಕು, ಆಮೇಲೆ ವಯಸ್ಸಾದ ಮೇಲೆ ಕುಳಿತು ಅನುಭವಿಸಬಹುದು ಎಂದು ಸಮರ್ಥನೆ ಕೊಡಬಹುದಾದರೂ, ಒಂದಿಷ್ಟು ವಯಸ್ಸಾದ ಮೇಲೆ ನಿಮಗೆ ಏನನ್ನು ಅನುಭವಿಸಲಿಕ್ಕೆ ಸಾಧ್ಯವಿದೆ? ಯೋಚಿಸಿ ನೋಡಿ. ಹೀಗೆ ವಿಶ್ರಾಂತಿಯೇ ಇಲ್ಲದೆ, ಟಾರ್ಗೆಟ್ ಇಟ್ಟುಕೊಂಡು ಹಗಲು ರಾತ್ರಿಗಳನ್ನು ಒಂದು ಮಾಡಿ, ಸರಿಯಾಗಿ ಊಟ ತಿಂಡಿ ಮಾಡದೆ, ನಿದ್ದೆಯನ್ನೂ ಮಾಡದೆ ದುಡಿಯುವುದಕ್ಕೆ ಓಡುತ್ತಿರುತ್ತೀರಲ್ಲ, ಇಂತಹ ಒತ್ತಡದ ಬದುಕು ನಿಮಗೆ ಚಿಕ್ಕ ವಯಸ್ಸಿನಲ್ಲೇ ಕೊಡಬಾರದ ಕಾಯಿಲೆಯನ್ನೆಲ್ಲ ಕೊಟ್ಟು ಸುಮ್ಮನೆ ಕುಳಿತುಕೊಂಡು ಆಟ ನೋಡುತ್ತಿರುತ್ತದೆ. ವಯಸ್ಸು ನಲ್ವತ್ತು ನಲ್ವತ್ತೈದು ದಾಟುವ ಹೊತ್ತಿಗೆ ಸ್ವೀಟ್ ತಿನ್ನಬೇಡ, ಹಸಿಮೆಣಸಿನ ಕಾಯಿ ಖಾರ ತಿನ್ನಲೇಬೇಡ, ಹೆಲ್ತಿಗೆ ಒಳ್ಳೆಯದು ಬರೀ ರಾಗಿಮುದ್ದೆ, ಚಪಾತಿ ತಿನ್ನು... ನೀವೇ ದುಡಿದು ಗಳಿಸಿದ್ದನ್ನು ನೀವು ಎಂಜಾಯ್ ಮಾಡುವುದು ಯಾವಾಗ?
ಹಾಗೆಂದು ದುಡಿಯದೇ ಸುಮ್ಮನೆ ಕುಳಿತಿರಬೇಕೆಂದೂ ಯಾರೂ ಹೇಳುವುದಿಲ್ಲ. ಸೋಮಾರಿತನವೂ ಕೂಡಾ ನಿಮ್ಮ ಬದುಕನ್ನು ಹಾಳುಗೆಡವುತ್ತದೆ. ನಿಮ್ಮ ದೈಹಿಕ-ಮಾನಸಿಕ ಆರೋಗ್ಯವನ್ನು ಹದಗೆಡಿಸುತ್ತದೆ. ಅಂದಮೇಲೆ ನಾವು ದುಡಿಯುತ್ತಿರಬೇಕು. ದುಡಿಯುವುದೆಂದರೆ ಹೇಗೆ? ಅತಿವೇಗ, ಯಾರ‍್ಯಾರೊಂದಿಗೋ ಸ್ಪರ್ಧೆ ಖಂಡಿತಾ ಒಳ್ಳೆಯದಲ್ಲ. ಅದು ಎಂದಿದ್ದರೂ ನಮ್ಮನ್ನು ಪ್ರಪಾತಕ್ಕೇ ತಳ್ಳುತ್ತದೆ. ಆದ್ದರಿಂದ ನಮಗೆಷ್ಟು ಬೇಕೋ ಅಷ್ಟನ್ನು ನಾವು ನೆಮ್ಮದಿಯಿಂದ ದುಡಿದುಕೊಂಡು, ನೆಮ್ಮದಿಯಿಂದ ಬದುಕಿನ ಒಂದಿಷ್ಟು ಕ್ಷಣಗಳನ್ನು ಖುಷಿಯಿಂದ ಕಳೆಯುವಂತೆ... ವಾರದಲ್ಲಿ ಆರು ದಿನ ಎಡೆಬಿಡದೆ ದುಡಿದು, ಕೊನೆಗೆ ಒಂದು ದಿನವಾದರೂ ನಮ್ಮದೆನ್ನುವಂತೆ ಕಳೆದು ಬಿಡುವುದು ಬದುಕಿಗೆಷ್ಟೊಂದು ನೆಮ್ಮದಿಯನ್ನು ಕೊಡುತ್ತದೆ. ನಾನು ದುಡಿದು, ಜೊತೆಗೆ ಅದನ್ನು ನಾನು ನನ್ನವರೊಂದಿಗೆ ಎಂಜಾಯ್ ಮಾಡಿದೆ, ಬದುಕಿಗೆ ಹೊಸ ಅರ್ಥವನ್ನು ಕಂಡುಕೊಂಡೆ ಎನ್ನುವ ಭಾವವೊಂದು ಮನಸ್ಸಿಗೆ ಕೊಡುವ ನೆಮ್ಮದಿ, ನಿಮ್ಮ ಬದುಕಿನ ಆಯುಷ್ಯವನ್ನು ನಿಮಗೇ ಗೊತ್ತಿಲ್ಲದೆ ಹೆಚ್ಚಿಸಿರುತ್ತದೆ. ಆದ್ದರಿಂದ ಸ್ಪರ್ಧೆಗೆ ಬಿದ್ದವರಂತೆ ದುಡಿದು, ಕೊನೆಗೆ ಸ್ಪರ್ಧೆಯಲ್ಲಿ ಗೆದ್ದೂ ಸೋತವನಿಗಿಂತ ಹೀನಾಯ ಸ್ಥಿತಿಯಲ್ಲಿ ನಿಂತು ನರಳುವ ಬದಲು ಸ್ಪರ್ಧೆಗಿಳಿಯದೆ ನನ್ನಷ್ಟಕ್ಕೆ ನನ್ನ ಬದುಕನ್ನು ನನ್ನದೇ ರೀತಿಯಲ್ಲಿ ರೂಪಿಸಿಕೊಳ್ಳುವುದೇ ಜಾಣತನವಲ್ಲವಾ?
-ಆರುಡೋ ಗಣೇಶ, ಕೋಡೂರು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆ ಕ್ಷಣದಲ್ಲಿ ಶರತ್‌ ಸಾವಿನೆದುರು ಅದೆಷ್ಟು ಅಸಹಾಯಕ!!

ಒಂಟಿತನ ಎಂದರೆ ಜವಾಬ್ದಾರಿಯಿಂದ ಜಾರಿಕೊಳ್ಳುವುದಾ?!

ಈಗ ಆರು ಪಾಸಾಗಿ ಏಳು...