ಲಾಕ್‌ಡೌನ್ ಎನ್ನುತ್ತಿದ್ದಂತೆ ಸರ್ಕಾರ ಬೆಂಗಳೂರನ್ನೇಕೆ ಖಾಲಿ ಮಾಡಿಸುತ್ತದೆ?!



 

ಇತಿಹಾಸದ ಪುಟಗಳನ್ನು ತೆರೆದು ನೋಡಿ. ತಮ್ಮ ರಾಜ್ಯಕ್ಕೆ ಶತ್ರು ದಾಳಿ ಸೇರಿದಂತೆ ಯಾವುದೇ ಸಂಕಷ್ಟಗಳು ಬಂದೆರಗಿದಾಗ ರಾಜನಾದವನು ರಾಜ್ಯದ ಅಷ್ಟೂ ಗಡಿಗಳನ್ನು ಭದ್ರ ಪಡಿಸಿ, ರಾಜ್ಯದಲ್ಲಿರುವ ಪ್ರಜೆಗಳು ಹೊರಗೆಲ್ಲೂ ಹೋಗದಂತೆ ಹಾಗೂ ರಾಜ್ಯದೊಳಗೆ ಹೊರಗಿನ ಯಾರೂ ಪ್ರವೇಶಿಸದಂತೆ ಪ್ರಜೆಗಳೊಂದಿಗೆ ಇಡೀ ರಾಜ್ಯವನ್ನು ಕಾಪಾಡುವ ಪ್ರಯತ್ನ ಮಾಡುತ್ತಿದ್ದ. ಶತ್ರು ದಾಳಿಯಂತಹ ಸಂದರ್ಭದಲ್ಲಿಯೂ ರಾಜನಾದವನು ಅಗತ್ಯಕ್ಕೆ ಬೇಕಿರುವಷ್ಟನ್ನೆಲ್ಲ ಶೇಖರಿಸಿಕೊಂಡು ಕೋಟೆಯ ಬಾಗಿಲನ್ನು ಭದ್ರ ಪಡಿಸುತ್ತಿದ್ದ. ಅಷ್ಟರಮಟ್ಟಿಗೆ ನಮ್ಮ ಇತಿಹಾಸ ಕಂಡ ದೊರೆಗಳಾದವರಿಗೆ ದೂರದೃಷ್ಟಿ ಇರುತ್ತಿತ್ತು, ಪ್ರಜೆಗಳ ಬಗ್ಗೆ ಅಪಾರ ಕಾಳಜಿ ಇರುತ್ತಿತ್ತು ಹಾಗೂ ಅದಕ್ಕಿಂತ ಹೆಚ್ಚಾಗಿ ತನ್ನ ಪ್ರಜೆಗಳನ್ನು ಸಂಕಷ್ಟದ ಸಂದರ್ಭದಲ್ಲಿ ಹೇಗೆ ಕಾಪಾಡಿಕೊಳ್ಳಬೇಕು ಎನ್ನುವ ಮಾನವೀಯ ಹೃದಯವೂ ಇರುತ್ತಿತ್ತು. ಆದ್ದರಿಂದಲೇ ಅವರನ್ನು ದೊರೆಗಳೆನ್ನುತ್ತಿದ್ದರು ಹಾಗೂ ಪ್ರಜೆಗಳಿಗೆ ತಮ್ಮ ಸಂಕಷ್ಟದಲ್ಲಿ ರಾಜ ನಮ್ಮ ಜೊತೆಗಿರುತ್ತಾನೆ ಎನ್ನುವ ನಂಬಿಕೆ ಇರುತ್ತಿತ್ತು.

ಇತಿಹಾಸ ಕಂಡಿರುವ ಯಾವುದೇ ರಾಜರುಗಳು ಕೂಡಾ ಜನರ ಈ ನಂಬಿಕೆಯನ್ನು ಹುಸಿಗೊಳಿಸಿದ ಸಂದರ್ಭಗಳನ್ನು ಭೂತಗನ್ನಡಿ ಹಾಕಿಕೊಂಡು ಹುಡುಕಬೇಕೇನೋ. ಆದರೆ ಅವತ್ತಿನ ರಾಜರಿಗಿಂತ ಹೆಚ್ಚು ಐಷಾರಾಮಿ ಬದುಕನ್ನು ಬದುಕುತ್ತಿರುವ ಹಾಗೂ ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಮಾಡಬಹುದಾದ ತಂತ್ರಜ್ಞಾನಗಳೆಲ್ಲವೂ ಬೆರಳ ತುದಿಯಲ್ಲೇ ಹೊಂದಿರುವ ನಮ್ಮನ್ನಾಳುತ್ತಿರುವವರು ತಮ್ಮನ್ನು ಓಟು ಹಾಕಿ ಗೆಲ್ಲಿಸಿದ ಪ್ರಜೆಗಳ ಬಗ್ಗೆ ಹೊಂದಿರುವ ಅಸಡ್ಡೆ, ನಿರ್ಲಕ್ಷ್ಯವನ್ನೆಲ್ಲ ನೋಡಿದರೆ... ಇಂತಹವರನ್ನು ಆರಿಸಿ ಕಳಿಸಿದ ತಪ್ಪಿಗೆ ನಮ್ಮ ತಲೆ ಮೇಲೆ ನಾವೇ ಚಪ್ಪಡಿ ಎಳೆದುಕೊಳ್ಳಬೇಕೇನೋ ಎನ್ನುವಂತಾಗಿದೆ!

ನಮ್ಮನ್ನಾಳುತ್ತಿರುವವರು ರಾಜ್ಯ ಎಂದರೆ ಬೆಂಗಳೂರು ಎಂದುಕೊಂಡಿದ್ದಾರೆ ಎನ್ನುವ ಮಾತುಗಳು ತುಂಬಾ ಮೊದಲಿನಿಂದಲೂ ಕೇಳಿ ಬರುತ್ತಿದೆ. ರಾಜ್ಯದ ಕೇಂದ್ರಸ್ಥಾನವಾದ ಬೆಂಗಳೂರಿನಲ್ಲೇ ಎಲ್ಲ ಅಭಿವೃದ್ಧಿ ಕೆಲಸಗಳಾಗಬೇಕು, ರಾಜ್ಯಕ್ಕೆ ಬಂದಿದ್ದೆಲ್ಲವೂ ಬೆಂಗಳೂರಿನಲ್ಲೇ ನೆಲೆಗೊಳ್ಳಬೇಕು ಎನ್ನುವ ಹುಚ್ಚು ಸ್ವಾರ್ಥಕ್ಕೆ ಬಿದ್ದಿದ್ದರಿಂದಲೇ ಎಲ್ಲವೂ ಬೆಂಗಳೂರಿನ ಪಾಲಾಗುತ್ತಾ ಹೋದರೆ, ಉತ್ತರ ಕರ್ನಾಟಕದವರು ನಮ್ಮನ್ನು ಕಡೆಗಣಿಸಲಾಗುತ್ತಿದೆ, ಏನೇ ಕೆಲಸವಾಗಬೇಕೆಂದರೂ ಬೆಂಗಳೂರಿಗೇ ಬಂದು ಸಾಯಬೇಕು ಎಂದು ಗೊಣಗುತ್ತಲೇ ಇದ್ದಾರೆ! ಆದ್ದರಿಂದಲೇ ಬೆಂಗಳೂರಿಗೆ ಕೇವಲ ಬಂಡವಾಳಶಾಹಿಗಳು ಮಾತ್ರವಲ್ಲದೇ, ಬದುಕು ಹುಡುಕಿಕೊಂಡು ಬರುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹೀಗೆ ಎಲ್ಲಾ ರೀತಿಯಿಂದಲೂ ಬೆಂಗಳೂರಿಗೆ ಬಂದು ಸೇರುತ್ತಿರುವವರೆಲ್ಲರೂ ತಾತ್ಕಾಲಿಕವಾಗಿಯೋ, ಶಾಶ್ವತವಾಗಿಯೋ ‘ಬೆಂಗಳೂರಿಗರು’. ಬೆಂಗಳೂರಿಗರಾದ ಇವರೆಲ್ಲರೂ ಬೆಂಗಳೂರನ್ನು ನಂಬಿಕೊಂಡೇ ದಿನ ಕಳೆಯುತ್ತಿರುತ್ತಾರೆ ಮತ್ತು ಇವರೆಲ್ಲರ ಸಂಕಷ್ಟದ ಸಂದರ್ಭದಲ್ಲೂ ಜೊತೆಗೆ ನಿಲ್ಲಬೇಕಿರುವುದು ಬೆಂಗಳೂರಿನ ಆಡಳಿತ ಹೊತ್ತುಕೊಂಡವರ ಜವಾಬ್ದಾರಿ.

ಇಂತಹ ಜವಾಬ್ದಾರಿಯನ್ನು ಬೆಂಗಳೂರಿನ ಆಡಳಿತಕ್ಕೆಂದೇ ಇರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾಗಲೀ, ಬೆಂಗಳೂರನ್ನೇ ಕೇಂದ್ರ ಮಾಡಿಕೊಂಡಿರುವ ರಾಜ್ಯ ಸರ್ಕಾರವಾಗಲೀ ಸೂಕ್ತವಾಗಿ ನಿಭಾಯಿಸುತ್ತಿದೆಯಾ? ಬಹುಶಃ ಕೊರೋನಾ ವೈರಸ್ ಬೆಂಗಳೂರಿಗೆ ಕಾಲಿಡದೇ ಹೋಗಿದ್ದರೆ ನಮಗೆ ಈ ಪ್ರಶ್ನೆಗೆ ಇಷ್ಟು ತಕ್ಷಣ ಉತ್ತರ ಸಿಕ್ಕುತ್ತಿರಲಿಲ್ಲವೇನೋ! ಹೌದು, ಕೊರೋನಾ ಬಂದು, ಕಳೆದ ವರ್ಷದ ಮಾರ್ಚ್‌ನಲ್ಲಿ ಇಡೀ ದೇಶವನ್ನು ಲಾಕ್‌ಡೌನ್ ಮಾಡಿದರಲ್ಲ, ಆಗಲೇ ಬೆಂಗಳೂರನ್ನು ಹುಚ್ಚಾಪಟ್ಟೆ ಬೆಳೆಸಿದ ನಮ್ಮನ್ನಾಳುವವರು ಅದ್ಯಾವ ಪರಿ ಇಲ್ಲಿನ ಜನರ ಯೋಗಕ್ಷೇಮಕ್ಕಾಗಿ ದುಡಿಯಲು ತಯಾರಿದ್ದಾರೆ ಎನ್ನುವುದು ತಿಳಿದಿದ್ದು.

ತನ್ನ ನೆಲದಲ್ಲಿರುವ ಪ್ರತಿಯೊಬ್ಬ ಪ್ರಜೆಯನ್ನೂ ಕಾಪಾಡುವುದು ಅಲ್ಲಿನ ಸರ್ಕಾರದ ಜವಾಬ್ದಾರಿ. ಇದನ್ನು ನಮ್ಮ ದೇಶದ ಸಂವಿಧಾನ ಸ್ಪಷ್ಟವಾಗಿ ಹೇಳಿದೆ. ಅಂದಮೇಲೆ ಕಳೆದ ಬಾರಿ ಲಾಕ್‌ಡೌನ್ ಮತ್ತು ಈಗ ಹೇರಿರುವ ಜನತಾ ಕರ್ಫ್ಯೂ ಸಂದರ್ಭದಲ್ಲಿಯೂ ಬೆಂಗಳೂರಿನಲ್ಲಿ ನೆಲೆ ನಿಂತಿರುವ ‘ಬೆಂಗಳೂರಿಗರು’ ಎಂದು ಯಾರೆಲ್ಲ ಇದ್ದಾರಲ್ಲ ಅವರನ್ನೆಲ್ಲ ಸರ್ಕಾರವೇ ತರಾತುರಿಯಲ್ಲಿ ಅವರವರ ಊರಿಗೆ ಕಳಿಸಲು ಅವಸರ ಮಾಡಿದ್ದೇಕೆ? ಈ ಪ್ರಶ್ನೆಗೆ ನೀವು ಉತ್ತರ ಹುಡುಕಿಕೊಂಡು ಹೊರಟರೆ ನಮ್ಮನ್ನಾಳುತ್ತಿರುವ ಬಿಬಿಎಂಪಿಯೊಂದಿಗೇ ರಾಜ್ಯ ಸರ್ಕಾರವೂ ಅದೆಷ್ಟು ಬಲಹೀನವಾಗಿದೆ ಎನ್ನುವುದು ತಿಳಿಯುವುದರೊಂದಿಗೆ, ಬೆಂಗಳೂರಿನಲ್ಲಿ ಬಂಡವಾಳ ಹೂಡಿರುವ ಅದರಲ್ಲೂ ರಿಯಲ್ ಎಸ್ಟೇಟ್, ಪಂಚತಾರಾ ಹೋಟೆಲ್ಲುಗಳ ಮೇಲೆ ಬಂಡವಾಳ ಹೂಡಿರುವವರು ಬೆಂಗಳೂರನ್ನು ಅದೆಷ್ಟು ‘ಸುರಕ್ಷಿತವಾಗಿ’ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಮತ್ತು ಕನ್ನಡಿಗರನ್ನು ರಾಜಧಾನಿಯಿಂದ ಹೊರದಬ್ಬಿ ಹಿಂದಿ ಸೇರಿದಂತೆ ಪರಭಾಷಿಕರನ್ನು ಪ್ರತಿಷ್ಠಾಪಿಸುವ ವ್ಯವಸ್ಥಿತ ಸಂಚೊಂದು ನಡೆಯುತ್ತಿದೆ ಎನ್ನುವುದು ನಿಮಗೆ ತಿಳಿಯುತ್ತದೆ!

ಕಳೆದ ಬಾರಿ ಲಾಕ್‌ಡೌನ್ ಮಾಡಿದಾಗಲೂ ಸರ್ಕಾರ ದಿಢೀರ್ ಎಂದು ನಿರ್ಧಾರ ತೆಗೆದುಕೊಂಡು ಬೆಂಗಳೂರಿನ ಗಡಿಗಳನ್ನು ಬ್ಲಾಕ್ ಮಾಡಲಿಲ್ಲ. ಜೊತೆಗೆ ಬೆಂಗಳೂರಿಗರ‌್ಯಾರೂ ಇಲ್ಲಿಂದ ಹೊರಡಬೇಡಿ, ನಿಮ್ಮ ಸುರಕ್ಷತೆ ನಮ್ಮ ಜವಾಬ್ದಾರಿ ಎಂದು ಒಬ್ಬೇ ಒಬ್ಬ ಜನಪ್ರತಿನಿಧಿಯೂ ಕೂಡಾ ಮುಕ್ತ ಭರವಸೆಯನ್ನು ನೀಡಲಿಲ್ಲ. ಬದಲಿಗೆ ನೀವೆಲ್ಲರೂ ಈ ಬೆಂಗಳೂರಿನಲ್ಲಿದ್ದರೆ ನಮ್ಮಿಂದ ಕೊರೋನಾದ ಈ ಸಂದರ್ಭವನ್ನು ನಿಭಾಯಿಸಲು ಕಷ್ಟವಾಗುತ್ತದೆ, ಆದ್ದರಿಂದ ನಿಮ್ಮ ನಿಮ್ಮ ಜೀವ ಉಳಿಯಬೇಕೆಂದರೆ ಬೆಂಗಳೂರಿನಿಂದ ನಿಮ್ಮೂರಿಗೆ ಹೊರಟು ಬಿಡಿ ಎಂದು ಕೈಚೆಲ್ಲಿ ಬಿಟ್ಟರು. ಆದ್ದರಿಂದಲೇ ಕಳೆದ ಬಾರಿ ಲಾಕ್‌ಡೌನ್ ಆದಾಗ ಬೆಂಗಳೂರಿನಿಂದ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸುವವರಿಗೆ ಅವಕಾಶ ನೀಡಲಾಯಿತು. ಸಾಲದ್ದಕ್ಕೆ ಯುಗಾದಿ ಹಬ್ಬದ ನೆಪದಲ್ಲೂ ಇನ್ನೊಮ್ಮೆ ಬೆಂಗಳೂರಿನ ಗಡಿಯನ್ನು ತೆರೆದು ಬೆಂಗಳೂರಿಗರನ್ನು ಅವರವರ ಊರಿಗೆ ಕಳಿಸಿಕೊಡಲಾಯಿತು. ಆಯಿತು ಬಿಡಿ, ಹೋಗಲಿ. ಕಳೆದ ಬಾರಿ ಕೊರೋನಾ ಈ ಪಾಟಿ ರೌದ್ರಾವತಾರ ತಾಳಿರಲಿಲ್ಲ. ಆದರೆ ಈ ಬಾರಿ ಕೊರೋನಾ ರಾಜ್ಯದಲ್ಲಿ ಮೊದಲಿಗೆ ಅಬ್ಬರಿಸಲಾರಂಭಿಸಿದ್ದೇ ರಾಜಧಾನಿಯಲ್ಲಿ. ರಾಜ್ಯದ ಬಹುತೇಕ ಬೇರೆ ಜಿಲ್ಲೆಗಳು ಸೋಂಕಿನಿಂದ ಒಂದಿಷ್ಟು ದೂರವೇ ಉಳಿದಿದ್ದವು. ಇಂತಹ ಸಂದರ್ಭದಲ್ಲಿ ಸರ್ಕಾರ ಜನತಾ ಕರ್ಫ್ಯೂ ಅಥವಾ ಲಾಕ್‌ಡೌನ್ ಮಾಡುವುದೇ ಆಗಿದ್ದರೆ ತಕ್ಷಣವೇ ಮಾಡಿಬಿಡಬೇಕಿತ್ತು. ಆದರೆ ಹಾಗೆ ಮಾಡದ ನಮ್ಮ ಆಡಳಿತ ವ್ಯವಸ್ಥೆ ನಾವು ಜನತಾ ಕರ್ಫ್ಯೂ ಮಾಡುತ್ತೇವೆ, ಬೆಂಗಳೂರಿನಿಂದ ಹೊರಡುವವರಿಗೆ ಎರಡು ದಿನಗಳ ಅವಕಾಶ ಇದೆ ಎಂದು ಹೇಳಿತು. ನಿಮ್ಮನ್ನೆಲ್ಲ ನೋಡಿಕೊಳ್ಳಲು ನಮಗಾಗುವುದಿಲ್ಲ ಎಂದು ಹೀಗೆ ಪರೋಕ್ಷವಾಗಿ ಹೇಳಿದ ಸ್ಥಳೀಯ ಹಾಗೂ ರಾಜ್ಯ ಸರ್ಕಾರ ಎಲ್ಲರಿಗೂ ಬೆಂಗಳೂರು ತೊರೆಯಲು ಅವಕಾಶ ನೀಡಿತು. ಊರು ತಲುಪಿ ಜೀವ ಉಳಿಸಿಕೊಂಡರೆ ಸಾಕು ಎಂದು ಹೊರಟವರು ತಮ್ಮ ಲಗೇಜುಗಳೊಂದಿಗೆ ವೈರಸ್ಸುಗಳನ್ನು ಕೂಡಾ ತೆಗೆದುಕೊಂಡು ತಮ್ಮ ಊರುಗಳಿಗೆ ಹೋದರು. ಪ್ರಧಾನಿ ಮೋದಿ ಹಳ್ಳಿಗಳಿಗೆ ವೈರಸ್ ಹರಡದಂತೆ ಎಚ್ಚರಿಕೆ ವಹಿಸಿ ಎಂದು ಹೇಳಿದರೆ ಇವರು ಬೆಂಗಳೂರಿನ ಗಡಿಗಳನ್ನು ಮುಕ್ತವಾಗಿಟ್ಟರು. ಹೀಗೆ ವೈರಸ್ಸನ್ನು ಬೇರೆ ಬೇರೆ ಜಿಲ್ಲೆಗಳಿಗೆ ಕಳಿಸಿದ್ದರಿಂದಲೇ ಚಾಮರಾಜನಗರ, ಕಲ್ಬುರ್ಗಿಯಂತಹ ಜಿಲ್ಲಾ ಕೇಂದ್ರಗಳಲ್ಲೂ ಸಾಲು ಸಾಲು ಸಾವುಗಳಾದವು. ಕೆಲವು ಮಾಹಿತಿಗಳ ಪ್ರಕಾರ, ರಾಜ್ಯದ ಬಹುತೇಕ ತಾಲ್ಲೂಕು ಕೇಂದ್ರಗಳಲ್ಲಿ ದಿನಕ್ಕೆ ನೂರರ ಲೆಕ್ಕದಲ್ಲಿ ಕೊರೋನಾ ಕೇಸುಗಳು ಪತ್ತೆಯಾಗುತ್ತಿವೆ. ಹಳ್ಳಿ ಹಳ್ಳಿಯಲ್ಲೂ ಈ ಪ್ರಮಾಣದಲ್ಲಿ ಕೊರೋನಾ ಕಾಣಿಸಿಕೊಂಡರೆ ಅದಕ್ಕೆ ಎಲ್ಲಿ ಚಿಕಿತ್ಸೆ ಕೊಡುತ್ತೀರಿ? ಬೆಂಗಳೂರಿನಲ್ಲಿರುವಷ್ಟು ಸೌಲಭ್ಯ ಇಲ್ಲದ ತಾಲ್ಲೂಕು- ಜಿಲ್ಲಾ ಕೇಂದ್ರಗಳ ಆಸ್ಪತ್ರೆಗಳಲ್ಲಿ ಎಷ್ಟು ಜನರ ಜೀವ ಉಳಿಸುತ್ತೀರಿ?!

ಅದೇನೋ ಮೆಡಿಕಲ್ ಮಾಫಿಯಾ ಇತ್ಯಾದಿ ಎಂದೆಲ್ಲ ಏನೆಲ್ಲ ಹೇಳುತ್ತಾರಲ್ಲ, ಅದು ಸತ್ಯವೆನ್ನಿಸುವುದೇ ಸರ್ಕಾರದ ಇಂತಹ ನಿರ್ಧಾರಗಳ ಸಂದರ್ಭದಲ್ಲಿ. ಅಂದರೆ ರಾಜ್ಯ ಸರ್ಕಾರವೇ ಮುಂದೆ ನಿಂತು, ಬೆಂಗಳೂರಿನಿಂದ ಎಲ್ಲಾ ಕಡೆಗೂ ವೈರಸ್ ಹರಡಿಸಲಿಕ್ಕೆಂದೇ ಈ ವ್ಯವಸ್ಥೆ ಮಾಡುತ್ತದೆಯೇನೋ ಅನ್ನಿಸುತ್ತದೆ! ಹೌದು, ಬೆಂಗಳೂರಿಗೆ ಬರುವ ಎಲ್ಲರಿಗೂ ಬನ್ನಿ ಬನ್ನಿ ಎಂದು ಕರೆಯುವ ನಮ್ಮನ್ನಾಳುವವರು ಅವರು ಕೂಲಿ ಕಾರ್ಮಿಕರೋ, ಬಂಡವಾಳಶಾಹಿಗಳೋ ಒಟ್ಟಿನಲ್ಲಿ ಎಲ್ಲರನ್ನೂ ಕರೆದು ಕೂರಿಸಿಕೊಳ್ಳುತ್ತಾರೆ ಹಾಗೂ ಅವರೆಲ್ಲರನ್ನೂ ಎಷ್ಟೆಲ್ಲ ದುಡಿಸಿಕೊಳ್ಳಲು ಸಾಧ್ಯವೋ ಅಷ್ಟು ದುಡಿಸಿಕೊಳ್ಳುತ್ತಾರೆ. ಅಂದಮೇಲೆ ಹೀಗೆ ದುಡಿಸಿಕೊಂಡವರನ್ನು ಇಂತಹ ಸಂದರ್ಭದಲ್ಲಿ ಕೂರಿಸಿ ಹೊರ ಹೋಗದಂತೆ ನೋಡಿಕೊಂಡು ಅವರ ಯೋಗಕ್ಷೇಮವನ್ನು ನೋಡಿಕೊಳ್ಳಬೇಕಾದದ್ದು ಸರ್ಕಾರದ ಜವಾಬ್ದಾರಿಯಲ್ಲವಾ? ಖಂಡಿತ ಹೌದು. ಆದರೆ ಕೊರೋನಾ ಲಾಕ್‌ಡೌನ್ ಆರಂಭವಾದಾಗಿನಿಂದಲೂ ಸರ್ಕಾರದ ನಡೆಗಳನ್ನು ಗಮನಿಸಿ ನೋಡಿ. ಅವರು ಇಂತಹ ಯಾವುದೇ ಜವಾಬ್ದಾರಿ ಹೊರಲಿಕ್ಕೆ ತಯಾರಿಲ್ಲ. ಹೋದವರು ಹೋಗಲಿ, ಇಲ್ಲಿರುವವರಿಗೂ ಸರಿಯಾದ ಆಸ್ಪತ್ರೆ, ಚಿಕಿತ್ಸೆ ದೊರೆಯದಂತೆ ಮಾಡಿ ಪ್ರತೀದಿನ ನೂರಾರು ಜನರನ್ನು ಸುಡುತ್ತಲೇ ಇದ್ದಾರೆ.

ಸೂಕ್ಷ್ಮವಾಗಿ ಗಮನಿಸಿ ನೋಡಿ. ಬೆಂಗಳೂರಿನ ಜನಸಂಖ್ಯೆ ಸಧ್ಯ 1 ಕೋಟಿ 23 ಲಕ್ಷವನ್ನು ಮೀರಿದೆ. ಈ ಪಾಟಿ ಜನಸಂಖ್ಯೆ ಬೆಂಗಳೂರಿಗೆ ಭಾರವಾ? ನಗರತಜ್ಞರು ಮತ್ತು ಸರ್ಕಾರಕ್ಕೆ ಇದಕ್ಕೆ ಸಂಬಂಧಿಸಿದ ಡಾಟಾ ಸಿಕ್ಕುವುದರಿಂದ ಅವರು ಇದಕ್ಕೆ ಉತ್ತರ ಕಂಡುಕೊಳ್ಳಬೇಕು ಮತ್ತು ಇಷ್ಟು ಜನರ ಆರೋಗ್ಯ, ಹಸಿವು, ಶಿಕ್ಷಣ, ಭವಿಷ್ಯದ ಭದ್ರತೆ ಇತ್ಯಾದಿ ಜನಕಲ್ಯಾಣ ಯೋಜನೆಗಳನ್ನು ರೂಪಿಸಿ ಅವರ ಬದುಕು ಅಸ್ಥಿರವಾಗುವುದನ್ನು ತಡೆಯಬೇಕು. ನಿಮ್ಮೊಂದಿಗೆ ನಾವಿದ್ದೇವೆ, ಅದೆಂತಹ ಸಂಕಷ್ಟದ ಸಂದರ್ಭ ಬಂದಾಗಲೂ ನೀವು ಈ ಬೆಂಗಳೂರಿನಲ್ಲಿಯೇ ಉಳಿದುಕೊಳ್ಳಿ. ನಿಮ್ಮ ಚಿಕಿತ್ಸೆ ಮತ್ತು ಬದುಕಿನ ಅಗತ್ಯಗಳನ್ನು ಪೂರೈಸುವುದು ನಮ್ಮ ಜವಾಬ್ದಾರಿ ಎಂದು ಸರ್ಕಾರ ಹಾಗೂ ಸ್ಥಳೀಯ ಆಡಳಿತ ಹೇಳಬೇಕು.

ಆ ಮೀಟರ‌್ರೇ ಇವೆರಡೂ ಆಡಳಿತಕ್ಕೆ ಇದ್ದಂತಿಲ್ಲ.

ಆದ್ದರಿಂದಲೇ ಲಾಕ್‌ಡೌನ್‌ನ್ನು ಸಡನ್ನಾಗಿ ಘೋಷಣೆ ಮಾಡದೇ ಇನ್ನೆರಡು ದಿನ ಬೆಂಗಳೂರು ತೊರೆಯುವವರಿಗೆ ಅವಕಾಶ ಇದೆ ಎಂದು ಹೇಳಿ, ಅರ್ಧಕ್ಕರ್ಧ ಬೆಂಗಳೂರನ್ನು ಖಾಲಿ ಮಾಡಿಸಿ ಇವರು ತಮ್ಮ ಹೆಗಲಿನ ಭಾರವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಇಡೀ ರಾಜ್ಯದೆಲ್ಲೆಡೆ ಕೊರೋನಾ ಆರ್ಭಟ ಹೆಚ್ಚಾಗಲಿಕ್ಕೂ ಕಾರಣವಾಗುತ್ತಿದ್ದಾರೆ. ಈಗ ಚಾಮರಾಜನಗರದಲ್ಲಾದ ದುರಂತವನ್ನೇ ನೆನಪಿಸಿಕೊಳ್ಳಿ, ಅದಕ್ಕೆ ಬೆಂಗಳೂರಿನಿಂದ ಹೋದ ಅದೆಷ್ಟು ಜನರು ಪರೋಕ್ಷವಾಗಿ ಕಾರಣವಾಗಿದ್ದಾರೋ?! ಅಂದರೆ ಇಡೀ ರಾಜ್ಯದ ಜವಾಬ್ದಾರಿಯನ್ನು ಸೂಕ್ತವಾಗಿ ನಿಭಾಯಿಸಲು ರಾಜ್ಯ ಸರ್ಕಾರ ಒಂದೆಡೆ ವಿಫಲವಾಗಿದ್ದರೆ, ಬಿಬಿಎಂಪಿ ಎನ್ನುವುದು ಇದ್ದೂ ಇಲ್ಲದ ವ್ಯವಸ್ಥೆಯಂತಾಗಿದೆ. ಈ ಎರಡೂ ಆಡಳಿತ ವ್ಯವಸ್ಥೆ ಒಟ್ಟಾಗಿ ಬೆಂಗಳೂರನ್ನು ಕೇವಲ ಕಾಂಕ್ರೀಟ್ ಕಾಡು ಮಾಡುವುದರಲ್ಲೇ ಮುಳುಗಿ ಹೋದವೇ ಹೊರತು, ಜನರ ಆರೋಗ್ಯದ ಬಗ್ಗೆ ಯಾವ ಕಾಳಜಿಯನ್ನೂ ವಹಿಸಲಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಆಪತ್ತು, ಆತಂಕ ಎನ್ನುವುದು ಯಾವುದೇ ಸಂದರ್ಭದಲ್ಲಿ ಯಾವುದೇ ರೂಪದಲ್ಲಿ ಬರಬಹುದು. ಕೊರೋನಾ ವೈರಸ್ ರೂಪದಲ್ಲಿ ಮಾತ್ರ ಬರುವುದು ಆಪತ್ತಲ್ಲ. ಭೂಕಂಪ, ಅತಿವೃಷ್ಟಿ, ಇನ್ನ್ಯಾವುದೋ ಸಾಂಕ್ರಾಮಿಕ ರೋಗ... ಹೀಗೆ ಜನರ ಆರೋಗ್ಯವನ್ನು ಕಿತ್ತುಕೊಳ್ಳಲಿಕ್ಕೆ ಯಾವುದೇ ರೂಪದಲ್ಲಿ ಬೇಕಾದರೂ ಬರಬಹುದಾದ ಆಪತ್ತಿಗೆ ನಮ್ಮ ಬೆಂಗಳೂರು ಸಿದ್ಧಗೊಂಡಿಲ್ಲ. ಈ ಬಗ್ಗೆ ಆಳುವವರು ಗಮನ ಕೊಟ್ಟಿಲ್ಲ. ಸೂಕ್ತವಾದ ಆಸ್ಪತ್ರೆ, ಈಗ ಅಗತ್ಯವಾಗಿ ಬೇಕಿದ್ದ ಆಮ್ಲಜನಕ, ಅಗತ್ಯಕ್ಕೆ ತಕ್ಕಷ್ಟು ವೈದ್ಯಕೀಯ ಸಿಬ್ಬಂದಿ, ಔಷಧಿ... ಹೀಗೆ ನಮ್ಮ ಬೆಂಗಳೂರಿನಲ್ಲಿ ಏನೆಂದರೆ ಏನೂ ಇಲ್ಲ. ಈ ಬಗ್ಗೆ ಸರ್ಕಾರಗಳೂ ಯಾವ ಯೋಜನೆಗಳನ್ನೂ ರೂಪಿಸಿಲ್ಲ. ಆದ್ದರಿಂದಲೇ ಬೆಂಗಳೂರು ಇವತ್ತು ಹೀಗೆ ಬೇಯುತ್ತಿದೆ. ನೀವೇ ಯೋಚಿಸಿ ನೋಡಿ, ಈಗಾಗಲೇ ಇವರೇ ಹೊರಹೋಗಲು ಬಿಟ್ಟಿದ್ದರಿಂದ ಬೆಂಗಳೂರು ಅರ್ಧಕ್ಕರ್ಧ ಖಾಲಿಯಾಗಿದೆ. ಒಂದೊಮ್ಮೆ ಈಗ ತಮ್ಮ ತಮ್ಮ ಊರಿಗೆ ಹೋದವರು ಹಾಗೆ ಹೋಗದೇ ಬೆಂಗಳೂರಿನಲ್ಲೇ ಉಳಿದುಬಿಟ್ಟಿದ್ದರೆ ಬೆಂಗಳೂರಿನ ಗತಿಯೇನಾಗುತ್ತಿತ್ತು?! ಅದನ್ನು ಊಹಿಸಿದರೇ ಮೈ ಜುಮ್ಮೆನ್ನುತ್ತದೆ.

ಇದರೊಂದಿಗೆ ಸರ್ಕಾರ ಬೆಂಗಳೂರನ್ನು ಅರ್ಧಕ್ಕರ್ಧ ಖಾಲಿ ಮಾಡಿಸುವುದರ ಹಿಂದೆ ಬೆಂಗಳೂರನ್ನು ಕಾಪಾಡಿಕೊಳ್ಳುವ ಹುನ್ನಾರವೂ ಇದೆ! ಒಂದೊಮ್ಮೆ ಈ ಸಂಕಷ್ಟದ ಸಂದರ್ಭದಲ್ಲಿ ನಾವು ಬೆಂಗಳೂರಿನಲ್ಲೇ ಇರುತ್ತೇವೆ ಎಂದು ಎಲ್ಲರೂ ಇಲ್ಲೇ ಉಳಿದುಬಿಟ್ಟರೆ ಅಷ್ಟು ಜನರ ಬದುಕಿನ ಭಾರವನ್ನು ತಾನು ಹೊರುವುದು ಹೇಗೆ ಎನ್ನುವ ಆತಂಕ ಆಡಳಿತಕ್ಕಿದೆ. ಜಾಸ್ತಿ ಜನರಿದ್ದಷ್ಟೂ ಸೂಕ್ತ ಚಿಕಿತ್ಸೆ ಸಿಕ್ಕದೆ ಸಾಯುವವರ ಸಂಖ್ಯೆಯೂ ಕೂಡಾ ಜಾಸ್ತಿಯಾಗುತ್ತದೆ. ಜಾಸ್ತಿಯಾಗುವ ಸಾವಿನ ಸಂಖ್ಯೆ ಇಡೀ ಬೆಂಗಳೂರಿಗೇ ‘ವೈರಸ್ ಕೇಂದ್ರ’ ಎನ್ನುವ ಹಣೆಪಟ್ಟಿ ದೊರೆಯಲು ಕಾರಣವಾಗುತ್ತದೆ. ಹೀಗಾದಾಗ ಸಹಜವಾಗಿಯೇ ಬೆಂಗಳೂರಿಗೆ ಹರಿದು ಬರುವ ಬಂಡವಾಳದ ಪ್ರಮಾಣ ಕಡಿಮೆಯಾಗುತ್ತದೆ. ಇದು ಕಡಿಮೆಯಾದರೆ ಇಲ್ಲಿನ ರಿಯಲ್ ಎಸ್ಟೇಟ್ ಸೇರಿದಂತೆ ಪ್ರತಿಯೊಂದೂ ಕುಸಿದು ಹೋಗುತ್ತದೆ. ಇದೆಲ್ಲವೂ ಕುಸಿದರೆ ರಾಜಕಾರಣಿಗಳು ತೊಡಗಿಸಿರುವ ಕಪ್ಪು ಹಣಕ್ಕೆ ಕಪ್ಪು ಹಿಡಿಯುತ್ತದೆ. ಆದ್ದರಿಂದಲೇ ಅರ್ಧಕ್ಕರ್ಧ ಬೆಂಗಳೂರಿಗರನ್ನು ಲಾಕ್‌ಡೌನ್ ಮಾಡುತ್ತೇವೆ ಎಂದು ಹೇಳಿ ಎರಡು ದಿನ ಸಮಯ ಕೊಟ್ಟರೆ ಅವರೆಲ್ಲ ಬೆಂಗಳೂರಿನಿಂದ ಹೊರಹೋಗಿ, ಅವರವರ ಊರಿನಲ್ಲಿ ಸತ್ತರೆ ಅದರ ಲೆಕ್ಕ ಬೆಂಗಳೂರಿನ ಜೇಬಿಗೆ ಬೀಳುವುದಿಲ್ಲ ಎನ್ನುವ ಹುನ್ನಾರವೂ ಸರ್ಕಾರದ್ದಿದೆ. ಆದ್ದರಿಂದಲೇ ಸರ್ಕಾರ ಯಾರೂ ಬೆಂಗಳೂರಿನಿಂದ ಹೊರ ಊರಿಗೆ ಪ್ರಯಾಣಿಸಬೇಡಿ, ನಿಮ್ಮ ಜೀವದ ಹೊಣೆ ನಮ್ಮದು ಎಂದು ಅಪ್ಪಿತಪ್ಪಿಯೂ ಹೇಳಿ, ಹೊರಹೋಗುವವರನ್ನು ಬೆಂಗಳೂರಿನಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡುವುದಿಲ್ಲ.

ಇನ್ನು ರಾಜಧಾನಿಯಿಂದ ಕನ್ನಡಿಗರನ್ನು ಹೊರ ಹಾಕಿ, ಪರಭಾಷಿಕರನ್ನು ಬೆಂಗಳೂರಿನಲ್ಲಿ ನೆಲೆಗೊಳ್ಳಿಸುವ ಹಿಡನ್ ಅಜೆಂಡಾ ಸರ್ಕಾರಕ್ಕಿದೆಯಾ? ಈ ಸಾಧ್ಯತೆಗಳೂ ಢಾಳಾಗಿವೆ. ಈಗಾಗಲೇ ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆಯಾಗಿದೆ. ತೆಲುಗು, ತಮಿಳು, ಮಲೆಯಾಳಿಗಳೊಂದಿಗೆ ಉತ್ತರ ಭಾರತೀಯರು ಎಲ್ಲಾ ಕ್ಷೇತ್ರಗಳಲ್ಲೂ ತುಂಬಿಕೊಳ್ಳುತ್ತಿದ್ದಾರೆ. ಕೊರೋನಾದ ಭಯ ಹುಟ್ಟಿಸಿ, ಬೆಂಗಳೂರು ಸೇಫ್ ಅಲ್ಲ ಎನ್ನುವಂತೆ ಮಾಡಿ ಇಲ್ಲಿ ನೆಲೆ ನಿಂತ ಕನ್ನಡಿಗರನ್ನು ಲಾಕ್‌ಡೌನ್ ನೆಪದಲ್ಲಿ ಅವರವರ ಊರಿಗೆ ತಳ್ಳಿಬಿಟ್ಟರೆ ರಿಯಲ್ ಎಸ್ಟೇಟ್ ಸೇರಿದಂತೆ ಎಲ್ಲಾ ವ್ಯವಹಾರ ಕ್ಷೇತ್ರಗಳಲ್ಲೂ ಹಿಂದಿಯವರನ್ನು ಪ್ರತಿಷ್ಠಾಪಿಸುವ ಹಿಡನ್ ಅಜೆಂಡಾವೂ ಇದರ ಹಿಂದೆ ಕೆಲಸ ಮಾಡುತ್ತಿರುವಂತಿದೆ. ಯಾಕೆಂದರೆ, ಮೆಟ್ರೋ ಸ್ಟೇಶನ್ನಿನಲ್ಲಿ ಹಿಂದಿ ರಾರಾಜಿಸಿದ್ದು ಸೇರಿದಂತೆ ಇತ್ತೀಚಿನ ಸರ್ಕಾರದ ಆಡಳಿತದಲ್ಲಿ ಪ್ರತಿಬಾರಿಯೂ ಬೆಂಗಳೂರಿನಲ್ಲಿ ಹಿಂದಿ ಹೇರುವ ಪ್ರಯತ್ನ ನಡೆಯುತ್ತಿದೆ. ಅದರ ಮುಂದುವರಿದ ಭಾಗ ಇದಾ ಎನ್ನುವ ಅನುಮಾನವೂ ಹುಟ್ಟಿಕೊಳ್ಳುತ್ತಿದೆ.

ಅಷ್ಟರಮಟ್ಟಿಗೆ ನಮ್ಮನ್ನಾಳುತ್ತಿರುವ ಸರ್ಕಾರ ತನ್ನದೇ ಪ್ರಜೆಗಳ ವಿಷಯದಲ್ಲಿ ಯಾವುದೇ ಜವಾಬ್ದಾರಿಗಳನ್ನು ಹೊತ್ತುಕೊಳ್ಳಲು ತಯಾರಿಲ್ಲ. ಎಲ್ಲಾದರೂ ಹೋಗಿ ಸಾಯಿರಿ, ಆದರೆ ಬೆಂಗಳೂರಿನಲ್ಲಿ ಮಾತ್ರ ಸಾಯಬೇಡಿ ಎನ್ನುವ ಮನಸ್ಥಿತಿ ಹೊಂದಿರುವ ಸರ್ಕಾರಕ್ಕೆ ತನ್ನ ರಾಜ್ಯ ರಾಜಧಾನಿ ಹಾಗೂ ಅಲ್ಲಿರುವ ಜನರನ್ನು ಕಾಪಾಡಿಕೊಳ್ಳುವ ಶಕ್ತಿ ಇಲ್ಲವೆಂದಮೇಲೆ ಬೆಂಗಳೂರನ್ನೊಂದೇ ಯಾಕೆ ಹುಚ್ಚುಹುಚ್ಚಾಗಿ ಬೆಳೆಸಬೇಕು? ಇಲ್ಲಿಗೇಕೆ ಇಡೀ ದೇಶದ ಜನರನ್ನೆಲ್ಲ ಸೆಳೆಯಬೇಕು? ಹುಟ್ಟನ್ನು ನಾವು ಹಬ್ಬ ಮಾಡಿಕೊಂಡು ಸಂಭ್ರಮಿಸಲು ತಯಾರಿದ್ದೇವೆ ಎಂದಮೇಲೆ ಸಾವಿನ ಸಂಕಟವನ್ನು ಭರಿಸಲಿಕ್ಕೂ ನಾವು ತಯಾರಿರಬೇಕು.

ಆದರೆ ನಮ್ಮನ್ನಾಳುವ ‘ಅಸಮರ್ಥರು’ ಇದಕ್ಕೆ ತಯಾರಿಲ್ಲ. ತಾವು ಮತ್ತು ತಮ್ಮ ಕಡೆಯವರು ಸೊಂಪಾಗಿದ್ದರೆ ಸಾಕು ಎಂದು ಯೋಚಿಸುತ್ತಾರೆ. ಬಡಿದು ಬಾಯಿಗೆ ಹಾಕಿಕೊಳ್ಳುವ ಭೂತವೊಂದು ದೇಶದೊಳಗೆ ಬಂದಿದೆ ಎಂದರೆ ಪ್ರಜೆಗಳನ್ನೆಲ್ಲ ಹೊರ ಹಾಕಿ ಕೋಟೆ ಬಾಗಿಲು ಹಾಕಿಕೊಂಡು ತಮ್ಮ ಬದುಕಿನ ಭದ್ರತೆಯನ್ನಷ್ಟೇ ನೋಡಿಕೊಳ್ಳುವ ಮನಸ್ಥಿತಿ ಇವರಲ್ಲಿ ಎಲ್ಲಿಯವರೆಗೆ ಇರುತ್ತದೆಯೋ, ಅಲ್ಲಿಯವರೆಗೂ ಬೆಂಗಳೂರು ಮಾತ್ರವೇ ಅಲ್ಲ, ಇಡೀ ದೇಶದ ಜನರ ಬದುಕು ನೀರ ಮೇಲಿನ ಗುಳ್ಳೆಯಷ್ಟೇ.
(ಪಾರಿವಾಳ ವಾರಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನ)

                                                                                                                    - ಆರುಡೋ ಗಣೇಶ, ಕೋಡೂರು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆ ಕ್ಷಣದಲ್ಲಿ ಶರತ್‌ ಸಾವಿನೆದುರು ಅದೆಷ್ಟು ಅಸಹಾಯಕ!!

ಒಂಟಿತನ ಎಂದರೆ ಜವಾಬ್ದಾರಿಯಿಂದ ಜಾರಿಕೊಳ್ಳುವುದಾ?!

ಈಗ ಆರು ಪಾಸಾಗಿ ಏಳು...