ಅವರು ಹೆಸರಿಗೆ ತಕ್ಕ ಹಾಗೆ ’ಸುವರ್ಣ’ ಮೇಡಂ
‘ಸರಳತೆ ಹಾಗೂ ಸೌಮ್ಯ ಸ್ವಭಾವವೇ ಕೆಲವರಿಗೆ ಕೆಲವೊಮ್ಮೆ ಶಾಪವಾಗಿ ಬಿಡುತ್ತದೆ’. ನಾನು ಹುಟ್ಟಿ ಬೆಳೆದ ಕೋಡೂರು ಗ್ರಾಮದ ಯಳಗಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದ ಸುವರ್ಣ ಮೇಡಂ ಅವರ ಪರಿಚಯವಾಗಿ, ನಮ್ಮ ‘ಆರುಡೋ’ ಸಂಸ್ಥೆಯ ಕೆಲಸಗಳೇ ಕಾರಣ ವಾಗಿ ಅವರೊಂದಿಗೆ ಒಡನಾಟ ಇಟ್ಟುಕೊಂಡ ನಂತರ ಆಗಾಗ ಅವರನ್ನು ಭೇಟಿಯಾದಾಗ, ಅವರ ನೆನಪಾದಾಗ ಮತ್ತು ಅವರು ಕರೆ ಮಾಡಿ ನನ್ನೊಂದಿಗೆ ಮಾತನಾಡಿ ಮುಗಿಸಿದ ನಂತರ ಈ ಮಾತು ಮತ್ತೆ ಮತ್ತೆ ನೆನಪಾಗುತ್ತಿತ್ತು. ಯಾಕೆಂದರೆ, ಒಂದು ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರೂ ಅವರು ಮೈಗೂಡಿಸಿಕೊಂಡಿದ್ದ ಸರಳ ಹಾಗೂ ಸೌಮ್ಯ ಸ್ವಭಾವದ ವ್ಯಕ್ತಿತ್ವವೇ ಅವರಿಗೊಂದು ಶಾಪವಾಗಿತ್ತು. ನಾನು ಹತ್ತಾರು ಶಿಕ್ಷಕರನ್ನು, ಮುಖ್ಯ ಶಿಕ್ಷಕರನ್ನು ನೋಡಿದ್ದೇನೆ; ಅವರೊಂದಿಗೆ ಒಡನಾಡಿದ್ದೇನೆ. ಅವರಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಆ ಹುದ್ದೆಗೆ ತಕ್ಕಂತೆ ಅವರಲ್ಲೊಂದು ಅಹಂ ಬೆಳೆದುಬಿಡುತ್ತದೆ. ತಮ್ಮ ಸುತ್ತಲೂ ಆ ಅಹಂನ ಕೋಟೆಯನ್ನು ಗಟ್ಟಿಯಾಗಿ ಕಟ್ಟಿಕೊಳ್ಳುತ್ತಾರೆ. ಟೀಚರ್ರು ಅಥವಾ ಹೆಡ್ ಮೇಷ್ಟ್ರು ಎಂದರೆ ಹೀಗೇ ಇರಬೇಕು ಎನ್ನುವ ಅದೆಂತಹದ್ದೋ ಭ್ರಮೆಯಲ್ಲೇ ತೇಲುತ್ತಾ ಅವರ ವ್ಯಕ್ತಿತ್ವಕ್ಕೊಂದು ವ್ಯವಹಾರಿಕ ಗುಣವನ್ನೂ ಅಂಟಿಸಿಕೊಂಡೂ ಬಿಡುತ್ತಾರೆ. ಆದ್ದರಿಂದಲೇ ಅವರು ಶಾಲೆಯ ಆವರಣದಲ್ಲಿರಲಿ, ಅದರಿಂದ ಹೊರಗಿರಲಿ, ಊರಿನ ರಾಜಕಾರಣಿಗಳೊಂದಿಗೆ ಒಂದು ರೀತಿ ಬೆರೆತರೆ, ಇತರೆ ಗ್ರಾಮಸ್ಥ