ಅವರು ಹೆಸರಿಗೆ ತಕ್ಕ ಹಾಗೆ ’ಸುವರ್ಣ’ ಮೇಡಂ

‘ಸರಳತೆ ಹಾಗೂ ಸೌಮ್ಯ ಸ್ವಭಾವವೇ ಕೆಲವರಿಗೆ ಕೆಲವೊಮ್ಮೆ ಶಾಪವಾಗಿ ಬಿಡುತ್ತದೆ’.

ನಾನು ಹುಟ್ಟಿ ಬೆಳೆದ ಕೋಡೂರು ಗ್ರಾಮದ ಯಳಗಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದ ಸುವರ್ಣ ಮೇಡಂ ಅವರ ಪರಿಚಯವಾಗಿ, ನಮ್ಮ ‘ಆರುಡೋ’ ಸಂಸ್ಥೆಯ ಕೆಲಸಗಳೇ ಕಾರಣ ವಾಗಿ ಅವರೊಂದಿಗೆ ಒಡನಾಟ ಇಟ್ಟುಕೊಂಡ ನಂತರ ಆಗಾಗ ಅವರನ್ನು ಭೇಟಿಯಾದಾಗ, ಅವರ ನೆನಪಾದಾಗ ಮತ್ತು ಅವರು ಕರೆ ಮಾಡಿ ನನ್ನೊಂದಿಗೆ ಮಾತನಾಡಿ ಮುಗಿಸಿದ ನಂತರ ಈ ಮಾತು ಮತ್ತೆ ಮತ್ತೆ ನೆನಪಾಗುತ್ತಿತ್ತು.

ಯಾಕೆಂದರೆ, ಒಂದು ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರೂ ಅವರು ಮೈಗೂಡಿಸಿಕೊಂಡಿದ್ದ ಸರಳ ಹಾಗೂ ಸೌಮ್ಯ ಸ್ವಭಾವದ ವ್ಯಕ್ತಿತ್ವವೇ ಅವರಿಗೊಂದು ಶಾಪವಾಗಿತ್ತು. 

ನಾನು ಹತ್ತಾರು ಶಿಕ್ಷಕರನ್ನು, ಮುಖ್ಯ ಶಿಕ್ಷಕರನ್ನು ನೋಡಿದ್ದೇನೆ; ಅವರೊಂದಿಗೆ ಒಡನಾಡಿದ್ದೇನೆ. ಅವರಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಆ ಹುದ್ದೆಗೆ ತಕ್ಕಂತೆ ಅವರಲ್ಲೊಂದು ಅಹಂ ಬೆಳೆದುಬಿಡುತ್ತದೆ. ತಮ್ಮ ಸುತ್ತಲೂ ಆ ಅಹಂನ ಕೋಟೆಯನ್ನು ಗಟ್ಟಿಯಾಗಿ ಕಟ್ಟಿಕೊಳ್ಳುತ್ತಾರೆ. ಟೀಚರ್ರು ಅಥವಾ ಹೆಡ್ ಮೇಷ್ಟ್ರು ಎಂದರೆ ಹೀಗೇ ಇರಬೇಕು ಎನ್ನುವ ಅದೆಂತಹದ್ದೋ ಭ್ರಮೆಯಲ್ಲೇ ತೇಲುತ್ತಾ ಅವರ ವ್ಯಕ್ತಿತ್ವಕ್ಕೊಂದು ವ್ಯವಹಾರಿಕ ಗುಣವನ್ನೂ ಅಂಟಿಸಿಕೊಂಡೂ ಬಿಡುತ್ತಾರೆ. ಆದ್ದರಿಂದಲೇ ಅವರು ಶಾಲೆಯ ಆವರಣದಲ್ಲಿರಲಿ, ಅದರಿಂದ ಹೊರಗಿರಲಿ, ಊರಿನ ರಾಜಕಾರಣಿಗಳೊಂದಿಗೆ ಒಂದು ರೀತಿ ಬೆರೆತರೆ, ಇತರೆ ಗ್ರಾಮಸ್ಥರೊಂದಿಗೇ ಇನ್ನೊಂದು ರೀತಿ ಬೆರೆಯುತ್ತಿರುತ್ತಾರೆ. ತಮ್ಮ ಸಹೋದ್ಯೋಗಿಗಳೊಂದಿಗೆ ಒಂದು ರೀತಿ ವರ್ತಿಸಿದರೆ, ಇತರರೊಂದಿಗೆ ಇನ್ನೊಂದು ರೀತಿ. ಎಲ್ಲಾ ಮಕ್ಕಳನ್ನೂ ಒಂದೇ ರೀತಿ ನೋಡುವ, ಮಾತನಾಡುವ, ಬೋಧಿಸುವ... ಇದರಲ್ಲಿಯೂ ಮತ್ತೆ ವರ್ಗ ಮಾಡಿಕೊಂಡು ಅದಕ್ಕೆ ತಕ್ಕಂತೆ ಬೆರೆಯುವುದು, ಬಡಿಯುವುದು ಮಾಡುತ್ತಿರುತ್ತಾರೆ. ಹೀಗೆ ತಮ್ಮದೇ ಆದಂತಹ ‘ಶಿಕ್ಷಕ’ ವ್ಯಕ್ತಿತ್ವವನ್ನು ಕಟ್ಟಿಕೊಳ್ಳುತ್ತಾ, ಅದಕ್ಕೆ ಎಲ್ಲೆಲ್ಲಿ ಬೇಕೋ ಅಲ್ಲಲ್ಲಿ ಮುಳ್ಳು, ಹೂವುಗಳನ್ನೆಲ್ಲ ಚುಚ್ಚಿಕೊಂಡು ಅದರ ಮೂಲಕ ಎಲ್ಲಿ ಸವರಬೇಕು, ಎಲ್ಲಿ ಚುಚ್ಚಬೇಕು, ಯಾವ ಕಡೆಯಿಂದ ತಾನು ಚುಚ್ಚಿಸಿಕೊಳ್ಳಬೇಕು, ಬಾರದು ಎನ್ನುವುದನ್ನೂ ಚೆನ್ನಾಗಿ ಕರಗತ ಮಾಡಿಕೊಂಡಿರುತ್ತಾರೆ.

ಆದರೆ ಸುವರ್ಣ ಮೇಡಂ ಹೀಗಿರಲಿಲ್ಲ. ಆದ್ದರಿಂದಲೇ ನನ್ನ ಪಾಲಿಗೆ ಅವರು ‘ನಮ್ಮ ಸುವರ್ಣ ಮೇಡಂ’ ಆಗಿಬಿಟ್ಟಿದ್ದರು.

ಅವರ ಮೊದಲ ಭೇಟಿಯಿಂದ ಅವರ ಕೊನೇಕ್ಷಣದವರೆಗಿನ ನೆನಪುಗಳನ್ನೆಲ್ಲ ಎದುರಿಟ್ಟುಕೊಂಡು ನೋಡಿದರೆ, ಅವರು ಎಲ್ಲರನ್ನೂ ಮನುಷ್ಯರನ್ನಾಗಿ ನೋಡುತ್ತಿದ್ದರು, ಪ್ರೀತಿಸಿಕೊಳ್ಳುತ್ತಿದ್ದರೇ ಹೊರತು, ಅವರಿಗೆ ಒಬ್ಬೊಬ್ಬರ ಮಧ್ಯೆ ಭೇದಭಾವ ಮಾಡಿ ಗೊತ್ತಿರಲಿಲ್ಲ. ನನಗೆ ಸರ್ಕಾರ ಕೆಲಸ ಕೊಟ್ಟಿದೆ ಮತ್ತು ಅದನ್ನು ನಾನು ಸರ್ಕಾರ ನಿಗದಿ ಪಡಿಸಿದ ಸಮಯದಲ್ಲಿ ಪ್ರಾಮಾಣಿಕವಾಗಿ ಮಾಡಿ ಮುಗಿಸಬೇಕು ಎನ್ನುವುದನ್ನಷ್ಟೇ ತಮ್ಮ ವೃತ್ತಿಯ ಚೌಕಟ್ಟನ್ನಾಗಿಸಿಕೊಂಡಿದ್ದ ಸುವರ್ಣ ಮೇಡಂ, ನಾನು ಗಮನಿಸಿದ ಹಾಗೆ ಎಲ್ಲರಿಗಿಂತ ಮೊದಲು ಬೆಳಿಗ್ಗೆ ಶಾಲೆಯ ಗೇಟಿನಲ್ಲಿರುತ್ತಿದ್ದರು. ಸಂಜೆಯಾದರೂ ಅಷ್ಟೇ, ಟೈಮೆಂದರೆ ಟೈಮು... ಸಮಯವಾಗುತ್ತಿದ್ದಂತೆ ಅವರಿವರನ್ನು ಕಾಯದೆ ತಾವೇ ಶಿಕ್ಷಕರ ಕೊಠಡಿಯ ಕಿಟಕಿಯನ್ನೆಲ್ಲ ಮುಚ್ಚಿ ಬೀಗ ಹಾಕಿಕೊಂಡು ಸರಿಯಾದ ಸಮಯಕ್ಕೇ ಸ್ಕೂಲಿನಿಂದ ಹೊರಟು ಬಿಡುತ್ತಿದ್ದರು. ಸೌಮ್ಯತೆ, ಸರಳತೆಯೊಂದಿಗೆ ಸುವರ್ಣ ಮೇಡಂ ಅವರ ವ್ಯಕ್ತಿತ್ವಕ್ಕೊಲಿದಿದ್ದ ಶಿಸ್ತು ಹೀಗಿತ್ತು.

ನಾನು ಬೆಂಗಳೂರಿನಿಂದ ಊರಿಗೆ ಹೋದಾಗಲೆಲ್ಲ ಒಮ್ಮೆಯಾದರೂ ಯಳಗಲ್ಲು ಶಾಲೆಗೆ ಹೋಗಿ ಬರುತ್ತಿದ್ದೆ. ಕೆಲವೊಮ್ಮೆ ಹೋಗಲಾಗದಿದ್ದಾಗ ವಾಕಿಂಗ್ ಹೋದಾಗ ಅಥವಾ ಡೈರಿಯಿಂದ ಹಾಲು ತೆಗೆದುಕೊಂಡು ಹೋಗಲು ಬಂದಾಗ ಎದುರಾಗುತ್ತಿದ್ದ ಸುವರ್ಣ ಮೇಡಂ, ‘ಗಣೇಶಣ್ಣ, ಶಾಲೆ ಕಡೆ ಬರ್ಲೇ ಇಲ್ಲ. ಒಂದ್ಸಾರಿ ಬಂದು ಹೋಗಿ...’ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಹೆಚ್ಚಿನ ಬಾರಿ ಅವರು ಹೀಗೆ ಕರೆಯುವ ಮೊದಲೇ ನಾನು ಶಾಲೆಗೆ ಹೋಗಿ ಬರುತ್ತಿದ್ದೆ ಮತ್ತು ಈ ರೀತಿ ಹೋಗಿ ಬಂದಾಗಲೆಲ್ಲ ಸುವರ್ಣ ಮೇಡಂ ಅವರ ವ್ಯಕ್ತಿತ್ವವನ್ನು ಗಮನಿಸುತ್ತಿದ್ದೆ. ಇಷ್ಟು ದೊಡ್ಡ ಶಾಲೆಯ ಮುಖ್ಯ ಶಿಕ್ಷಕಿಯಾಗಿ ಇವರಿಗೆ ಇಷ್ಟು ಸರಳವಾಗಿ ಇರಲಿಕ್ಕೆ ಹೇಗೆ ಸಾಧ್ಯವಾಯಿತು? ಎನ್ನುವ ಪ್ರಶ್ನೆಯೊಂದು ನನ್ನೊಳಗೆ ಹುಟ್ಟಿಕೊಳ್ಳುತ್ತಿತ್ತು. ಅಂದಹಾಗೇ, ಅವರ ತವರು ಮನೆಯವರು ರಾಜಕೀಯವಾಗಿ ಒಂದಷ್ಟು ಪ್ರಭಾವಿಗಳು ಎನ್ನುವುದು ತಿಳಿದಮೇಲಂತೂ ಈ ಪ್ರಶ್ನೆ ಮತ್ತೆ ಮತ್ತೆ ನನ್ನನ್ನು ಕಾಡುತ್ತಲೇ ಇತ್ತು. ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿನ ಸರ್ಕಾರಿ ನೌಕರರು ತಮ್ಮ ರಾಜಕೀಯ ಪ್ರಭಾವಗಳಿಂದಲೇ ಸಾಕಷ್ಟು ಆಟವಾಡಿದ್ದನ್ನು, ತಮಗಾಗದೇ ಇರುವವರಿಗೆ ಆಟವಾಡಿಸಿದ್ದನ್ನೂ ನಾನು ನೋಡಿದ್ದೇನೆ. ಆದರೆ ಈ ಸುವರ್ಣ ಮೇಡಂ, ಆ ವಿಷಯದಲ್ಲಿಯೂ ತನ್ನ ತವರು ಮನೆ ಇಂತಹದ್ದು, ಅದರ ಪ್ರಭಾವದಿಂದ ನಾನು ಏನು ಬೇಕಾದರೂ ಮಾಡಿಸಬಲ್ಲೆ ಎಂದೆಲ್ಲ ಯಾವತ್ತೂ ನಡೆದುಕೊಂಡಿದ್ದನ್ನು ನಾನು ನೋಡಿಲ್ಲ. ಕೇಳಿಲ್ಲ. ಅಷ್ಟರಮಟ್ಟಿಗೆ ನನ್ನ ಕೆಲಸವಾಯಿತು, ಆ ಕೆಲಸದ ಚೌಕಟ್ಟಿನೊಳಗೇ ನನ್ನ ಬದುಕಾಯಿತು ಎನ್ನುವಂತಿದ್ದ ಸುವರ್ಣ ಮೇಡಂ ನನ್ನೊಂದಿಗೆ ಸಾಕಷ್ಟು ವಿಷಯಗಳನ್ನು ಚರ್ಚಿಸಿದ್ದರು.

ಹಾಗೆಂದು ಅವರು ತಮ್ಮ ಬದುಕಿನ ಕಷ್ಟಗಳನ್ನು ಹಂಚಿಕೊಂಡರಾ? ಹೇಳಿಕೊಂಡು ಕಷ್ಟದ ನಡುವೆ ಜೀವನ ಸಾಕಾಗಿ ಹೋಗಿದೆ ಎಂದೇನಾದರೂ ಯಾವತ್ತಾದರೂ ನಿಡುಸುಯ್ದರಾ? ಉಹ್ಞೂಂ, ಅವರು ಯಾವತ್ತೂ ಈ ಬಗ್ಗೆ ಸಣ್ಣಗೆ ಪಿಸುಗುಟ್ಟಿರಲೂ ಇಲ್ಲ. ವೈಯಕ್ತಿಕ ಬದುಕಿನಲ್ಲಿ ಅವರಿಗೆ ಅವರದ್ದೇ ಕಷ್ಟಗಳಿದ್ದವು. ವೃತ್ತಿ ಬದುಕಿನಲ್ಲಿಯೂ ಅವರು ಕೆಲವು ಅಡೆತಡೆಗಳನ್ನು ಎದುರಿಸುತ್ತಿದ್ದರು. ಆದರೆ ಅದನ್ನು ಒಮ್ಮೆಯೂ ಪ್ರಸ್ತಾಪಿಸದ ಅವರು ಶಾಲೆಗೆ ಒಂದು ಒಳ್ಳೆಯ ಆಟದ ಮೈದಾನ ಇರಬೇಕು, ಅದಕ್ಕಾಗಿ ಏನಾದರೂ ಮಾಡಬೇಕು ಎಂದು ಸಾಕಷ್ಟು ಬಾರಿ ಚರ್ಚಿಸಿದ್ದರು. ಸರ್ಕಾರದ ಮಟ್ಟದಲ್ಲಿ ನೀವೇನೇನು ಮಾಡಬೇಕು ಮತ್ತು ಅದಕ್ಕಾಗಿ ಎಷ್ಟು ಓಡಾಡಬೇಕು ಎನ್ನುವುದನ್ನು ಅವರಿಗೆ ನಾನು ವಿವರಿಸಿದ್ದೆ. ಇನ್ನು ಮಕ್ಕಳ ಓದು, ಕ್ರೀಡೆ, ಸಾಂಸ್ಕೃತಿಕ ಆಸಕ್ತಿ ಇತ್ಯಾದಿಗಳ ಬಗ್ಗೆಯೆಲ್ಲ ಹೇಳುತ್ತಿದ್ದ, ನಮ್ಮ ಶಾಲೆ ಮಕ್ಕಳು ದೊಡ್ಡ ಅವಕಾಶಗಳಿಗೆ ತೆರೆದುಕೊಳ್ಳಬೇಕು ಎಂದೆಲ್ಲ ಕನಸು ಕಾಣುತ್ತಿದ್ದ ಮೇಡಂ, ಮಕ್ಕಳಲ್ಲಿ ಯಾವತ್ತೂ ಭೇದಭಾವ ಮಾಡಿದ್ದನ್ನು ನಾನು ನೋಡಿದ್ದೇ ಇಲ್ಲ; ಹಾಗೇ ಗದರಿಸಿದ್ದನ್ನು ಕೂಡಾ.

ಇನ್ನು ತಮ್ಮೊಂದಿಗೆ ಕೆಲಸ ಮಾಡುತ್ತಿದ್ದ ಇತರೆ ಶಿಕ್ಷಕರ ಬಗ್ಗೆಯೂ ಅವರದ್ದು ಇದೇ ಭಾವನೆ. ಯಾರು ಏನಾದರೂ ಅಂದುಕೊಳ್ಳಲಿ ನಾನು ನನಗನ್ನಿಸಿದಂತೆಯೇ ಮುಖ್ಯ ಶಿಕ್ಷಕ ಹುದ್ದೆಯನ್ನು ನಿಭಾಯಿಸುತ್ತೇನೆ ಎನ್ನುತ್ತಿದ್ದ ಅವರು ಎಲ್ಲಾ ಶಿಕ್ಷಕರಿಗೂ ಅವರವರ ಪರಿಧಿಯಲ್ಲಿ ಸಾಕಷ್ಟು ಸ್ವಾತಂತ್ರ್ಯ ಕೊಟ್ಟಿದ್ದರು. ಶಾಲೆಗೆ ಅತಿಥಿ ಶಿಕ್ಷಕರನ್ನು ಕರೆತರುವಲ್ಲಿ, ಅವರ ಮೂಲಕ ಮಕ್ಕಳನ್ನು ಇನ್ನಷ್ಟು ಹೊಳಪಾಗಿಸಲು ಶ್ರಮಿಸುತ್ತಿದ್ದ ಸುವರ್ಣ ಮೇಡಂ ಇಂತಹದ್ದೇ ಕಾರಣಗಳಿಂದ ಯಾರಿಗೂ ಕಾಣದಂತೆಯೇ ನನ್ನ ಕಣ್ಣಿನಲ್ಲಿ ನಿಜವಾದ ‘ಸುವರ್ಣ’ವಾಗಿ ಹೊಳೆಯುತ್ತಿದ್ದರು.

ಬೇರೆಯವರ ಕಣ್ಣಿನಲ್ಲಿ ಹೇಗೋ, ಆದರೆ ನನ್ನ ಕಣ್ಣಿನಲ್ಲಿ ಅವರೊಬ್ಬ ಮುಖ್ಯೋಪಾಧ್ಯಾಯರಾಗಿ ಶಾಲೆಗೆ ಏನೆಲ್ಲ ಅವಕಾಶಗಳನ್ನು ತೆರೆದಿಡಬಹುದೋ ಅದೆಲ್ಲವನ್ನೂ ತೆರೆದಿಡಲು ತುದಿಗಾಲಲ್ಲಿ ನಿಂತಿರುತ್ತಿದ್ದರು. ನಾನು ಅದೊಮ್ಮೆ ನಮ್ಮ ಆವಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯಿಂದ ಹೊಸನಗರ ತಾಲ್ಲೂಕಿನ ಯಾವುದಾದರೂ ಒಂದು ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಳ್ಳುವ ಬಗ್ಗೆ ನಿರ್ಧರಿಸಿ ಈ ಬಗ್ಗೆ ಸುವರ್ಣ ಮೇಡಂ ಜೊತೆ ಚರ್ಚಿಸಿದ್ದೆ. ಮತ್ತು ಯಳಗಲ್ಲು ಶಾಲೆಯನ್ನು ಹೊರತು ಪಡಿಸಿ, ಕೋಡೂರು ಸುತ್ತಮುತ್ತಲಿನ ಯಾವುದಾದರೂ ಶಾಲೆಯ ಬಗ್ಗೆ ಈ ಕುರಿತು ಯೋಚಿಸುತ್ತಿದ್ದೇವೆ ಎಂದೂ ಹೇಳಿದ್ದೆ. ಎಲ್ಲವನ್ನೂ ಸುಮ್ಮನೆ ಕೇಳಿಸಿಕೊಂಡು ಶಾಲೆ ಡೆವಲಪ್ಮೆಂಟ್ ಆಗುತ್ತದೆ ಎಂದರೆ ನಮ್ಮ ಶಾಲೆಯನ್ನೇ ದತ್ತು ತೆಗೆದುಕೊಳ್ಳಿ ಗಣೇಶಣ್ಣ ಎಂದು ಹೇಳಿದ್ದ ಸುವರ್ಣ ಮೇಡಂಗೆ, ನೋಡೋಣ ಎಂದಷ್ಟೇ ಹೇಳಿದ್ದೆ. ಅದಕ್ಕೆ ಮುಖ್ಯ ಕಾರಣವೂ ಇತ್ತು. ಅಲ್ಲಿದ್ದ ಸುವರ್ಣ ಮೇಡಂ ಸೇರಿದಂತೆ ಎಲ್ಲಾ ಶಿಕ್ಷಕರೂ ನನಗೆ ತುಂಬಾ ಪರಿಚಿತರೇ ಆಗಿದ್ದರು. ದತ್ತು ತೆಗೆದುಕೊಂಡು ಶಾಲೆಯ ಮಕ್ಕಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ಸಂದರ್ಭದಲ್ಲಿ ಅವರ ಮತ್ತು ನಾವು ನೇಮಿಸಬಹುದಾದಂತಹ ಶಿಕ್ಷಕರ ನಡುವೆ ಭಿನ್ನಾಭಿಪ್ರಾಯಗಳು ಬಂದು ನಮ್ಮ ಕನಸಿಗೆ ಅಡ್ಡಿಯಾಗಬಹುದು ಎನ್ನುವ ಕಾರಣಕ್ಕೆ ಯಳಗಲ್ಲು ಶಾಲೆಯನ್ನು ನಮ್ಮ ಯೋಚನೆಯಿಂದ ಹೊರಗಿಟ್ಟಿದ್ದೆವು. ಇದಾಗಿ ಕೆಲವು ದಿನ ಆಗಿರಬೇಕು. ಆಗ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾಗಿದ್ದ ನನ್ನ ಸ್ನೇಹಿತ ಗಣೇಶನ ಅಣ್ಣ ಲೋಕೇಶ್ ನನಗೆ ವಾಕಿಂಗ್ ಹೋದಾಗ ಸಿಕ್ಕವರು, ‘ಸುವರ್ಣ ಮೇಡಂ ನಿಮ್ಮ ಯೋಜನೆ ಬಗ್ಗೆ ಹೇಳಿದರು, ಹೇಗಾದರೂ ಮಾಡಿ ನಮ್ಮ ಶಾಲೆಯನ್ನೇ ದತ್ತು ತೆಗೆದುಕೊಳ್ಳಲಿಕ್ಕೆ ನಿಮ್ಮ ಜೊತೆ ಮಾತನಾಡಿ ಅಂತ ಮೇಡಂ ನನಗೆ ಹೇಳಿದ್ರು...’ ಎಂದಿದ್ದರು; ಇದೇ ಸಾಕು ಸುವರ್ಣ ಮೇಡಂ ಸದ್ದಿಲ್ಲದೆ ಶಾಲೆಯ ಅಭಿವೃದ್ಧಿಯ ಬಗ್ಗೆ ಎಷ್ಟೆಲ್ಲ ಕಾಳಜಿ ವಹಿಸುತ್ತಿದ್ದರು ಎನ್ನುವುದನ್ನು ಅರ್ಥ ಮಾಡಿಕೊಳ್ಳಲಿಕ್ಕೆ.

ಆದರೆ ಇದ್ಯಾವುದನ್ನೂ ಅವರು ಹತ್ತು ಜನರೆದುರು ತೋರಿಸಿಕೊಳ್ಳುತ್ತಿರಲಿಲ್ಲ. ಶೋಆಫ್ ಅವರಿಗೆ ಗೊತ್ತಿರಲಿಲ್ಲ. ನಮ್ಮ ಸಂಸ್ಥೆಯ ಎಷ್ಟೋ ಕಾರ್ಯಕ್ರಮಗಳಲ್ಲಿ ಅವರು ಯಾವತ್ತೂ ಫೋಟೋಗೆ ಮುಂದೆ ಬಂದು ಪೋಸ್ ಕೊಟ್ಟವರಲ್ಲ. ನೀವು ಹೆಡ್ ಮೇಡಂ, ನೀವೇ ಹಿಂದೆ ನಿಂತರೆ ಹೇಗೆ ಎಂದು ನಾನು ಹೇಳಿದ ನಂತರವೇ ಅವರು ಒಂದೆರಡು ಹೆಜ್ಜೆ ಮುಂದೆ ಬರುತ್ತಿದ್ದರು ಬಿಟ್ಟರೆ, ಅವರಾಗಿ ಯಾವತ್ತೂ ಪ್ರಚಾರ, ಫೋಟೋಗಳಿಗೆಲ್ಲ ತಮ್ಮನ್ನು ಒಡ್ಡಿಕೊಂಡವರಲ್ಲ. ಒಬ್ಬ ಮುಖ್ಯೋಪಾಧ್ಯಾಯರಾಗಿ ಶಾಲೆಗೆ ಏನೆಲ್ಲ ಮಾಡಬಹುದು ಎನ್ನುವುದನ್ನು ತಿಳಿದುಕೊಂಡಿದ್ದ ಅವರು ತಮ್ಮ ಮಿತಿಗಳ ಬಗ್ಗೆಯೂ ಚೆನ್ನಾಗಿ ಅರಿತಿದ್ದರು. ಯಾರು ಏನಾದರೂ ಅಂದುಕೊಳ್ಳಲಿ, ನಾನು ನನ್ನ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತೇನೆ ಎಂದೇ ಹೊರಡುತ್ತಿದ್ದ ಸುವರ್ಣ ಮೇಡಂ, ಮೇಡಂ ಆಗುವುದಕ್ಕಿಂತ ಮೊದಲು ನಿಜ ಹೃದಯದ ಮನುಷ್ಯರಾಗಿದ್ದರು. ಆದ್ದರಿಂದಲೇ ಅವರು ಎಲ್ಲರನ್ನೂ ಒಂದೇ ರೀತಿ ನೋಡುತ್ತಿದ್ದರು; ಪ್ರೀತಿಸಿಕೊಳ್ಳುತ್ತಿದ್ದರು. ಇಂತಹ ಮನಸ್ಥಿತಿ ಇದ್ದಿದ್ದರಿಂದಲೇ ಅವರಿಗೆ ಕೆಲವೊಂದು ನೋವುಗಳು ಮತ್ತೆ ಮತ್ತೆ ಚುಚ್ಚುತ್ತಿದ್ದವು. ತಮಗಿಂತ ಸ್ವಲ್ಪ ದೊಡ್ಡ ಸ್ಕೂಲಿಗೆ ಹೋದಾಗ ಇವರು ಒಂದು ಶಾಲೆಯ ಮುಖ್ಯೋಪಾಧ್ಯಾಯರು ಎಂದು ತಿಳಿದೂ, ಆ ಶಾಲೆಯ ಮುಖ್ಯೋಪಾಧ್ಯಾಯಿನಿ ಇವರನ್ನು ವಿನಾಕಾರಣ ಕಾಯಿಸಿ ಅವಮಾನಿಸಿದ್ದನ್ನು ನನ್ನ ಬಳಿ ಹೇಳಿಕೊಂಡಿದ್ದ ಅವರು, ಯಾವ ಹುದ್ದೆಯಾದರೂ ಎಷ್ಟು ದಿನದ್ದು ಹೇಳಿ ಎಂದು ನೋವಿನ ನಡುವೆಯೂ ನಕ್ಕಿದ್ದರು.

ಮೊದಲೆಲ್ಲ ಊರಿಗೆ ತಿಂಗಳಿಗೊಮ್ಮೆ ಹೋದಾಗ ಸಿಕ್ಕುತ್ತಿದ್ದ, ಮಾತನಾಡುತ್ತಿದ್ದ ಸುವರ್ಣ ಮೇಡಂ ಅವರನ್ನು ಕೊರೋನಾ- ಲಾಕ್ಡೌನ್ ನಂತರ ಭೇಟಿಯಾಗಲಿಕ್ಕೇ ಆಗಿರಲಿಲ್ಲ. ಆದರೆ ಅವರು ನನ್ನನ್ನು ಮರೆತಿರಲಿಲ್ಲ. ಲಾಕ್ಡೌನ್ ಸಮಯದಲ್ಲಿ ನನಗೆ ಎರಡು ಮೂರು ಬಾರಿ ಕಾಲ್ ಮಾಡಿ ಮಾತನಾಡಿದ್ದರು. ಬೆಂಗಳೂರಿನಲ್ಲಿ ಕೊರೋನಾ ಜಾಸ್ತಿಯಾಗಿದೆಯಂತೆ ಗಣೇಶಣ್ಣ, ಕೇರ್‌‌ಫುಲ್ಲಾಗಿರಿ ಎಂದು ಪ್ರೀತಿಯಿಂದ ಹೇಳಿದ್ದರು. ಇನ್ನೊಮ್ಮೆ ಕಾಲ್ ಮಾಡಿದ್ದವರು, ಪ್ರತೀವರ್ಷ ನಮ್ಮ ಸ್ಕೂಲ್ ಮಕ್ಕಳು ಸೇರಿದಂತೆ ಎಲ್ಲಾ ಶಾಲೆ ಮಕ್ಕಳಿಗೂ ನೋಟ್‌‌ಬುಕ್ಸ್ ಕೊಡುತ್ತಿದ್ದಿರಿ, ಆದರೆ ಈ ಸಾರಿ ಕೊರೋನಾದಿಂದಾಗಿ ಅದೂ ನಮ್ಮ ಮಕ್ಕಳಿಗೆ ಇಲ್ಲವಾಯ್ತಲ್ಲ ಗಣೇಶಣ್ಣ ಎಂದು ಬೇಸರಿಸಿಕೊಂಡಿದ್ದರು. ಮನುಷ್ಯ ಪ್ರೀತಿ ಎನ್ನುವುದು ಇದನ್ನೇ ಅಲ್ಲವಾ? ನೀವು ಬಂದಿರಿ, ನೋಟ್‌ಬುಕ್ ಕೊಟ್ಟು ನಿಮ್ಮ ಸಂಸ್ಥೆಗೇನೋ ಪಬ್ಲಿಸಿಟಿ ಮಾಡಿಕೊಂಡಿರಿ ಎಂದೆಲ್ಲ ಯೋಚಿಸದೇ, ಅದರಾಚೆಗೂ ಹೀಗೆ ಕರೆ ಮಾಡಿ ಮಾತನಾಡುತ್ತಿದ್ದ, ನಿಷ್ಕಲ್ಮಶವಾಗಿ ಪ್ರೀತಿಸಿಕೊಳ್ಳುತ್ತಿದ್ದ ಸುವರ್ಣ ಮೇಡಂ ಇದ್ದಕ್ಕಿದ್ದ ಹಾಗೇ ಈ ಲೋಕವನ್ನು ತೊರೆದು ಹೋಗುತ್ತಾರೆಂದು ಹೇಗೆ ತಾನೇ ಯೋಚಿಸುವುದು?

ಹುಟ್ಟು ಎಷ್ಟು ವಾಸ್ತವವೋ, ಸಾವು ಕೂಡಾ. ಅದನ್ನು ನಾವು ಒಪ್ಪಿಕೊಳ್ಳಲೇಬೇಕು. ಆದರೂ ತೀರಾ ಮನುಷ್ಯರಾಗಿಯೇ ಬದುಕಿ, ಎಲ್ಲರನ್ನೂ ಒಂದೇ ರೀತಿ ಪ್ರೀತಿಸಿಕೊಳ್ಳುತ್ತಿದ್ದವರು ಹೀಗೆ ಸಾವಿನ ತೆಕ್ಕೆ ಸೇರುವುದನ್ನು ಒಪ್ಪಿಕೊಳ್ಳಲಿಕ್ಕೆ ಕಷ್ಟವೇ. ಅದೂ ಹೀಗೆ ದಿಢೀರೆಂದು... ನಿಜಕ್ಕೂ ಕಷ್ಟವೇ. ಆದರೆ ಒಂದಂತೂ ನಿಜ, ಅವರು ಬದುಕಿದ್ದಾಗಲೂ ತಮ್ಮ ಸುತ್ತಮುತ್ತ ಇರುವ ಎಲ್ಲರನ್ನೂ ಪ್ರೀತಿಸಿಕೊಳ್ಳುತ್ತಿದ್ದರು, ಒಳ್ಳೆಯದನ್ನೇ ಹಾರೈಸುತ್ತಿದ್ದರು. ಇರುವ ಕಷ್ಟಗಳನ್ನೇ ಹೇಳಿಕೊಂಡು ಕೊರಗುತ್ತಾ ಕೂರದೇ, ಲವಲವಿಕೆಯಿಂದಲೇ ಎಲ್ಲರ ಮಧ್ಯೆ ಇರಲು ಪ್ರಯತ್ನಿಸುತ್ತಿದ್ದರು. ಈಗ ಉಸಿರು ನಿಲ್ಲಿಸಿ ನಮ್ಮನ್ನೆಲ್ಲ ತೊರೆದು ಹೋದ ನಂತರವೂ ಅವರ ಬಗ್ಗೆ ಯೋಚಿಸಿದರೆ, ಅಲ್ಲಿಯೂ ಅವರ ಬದುಕಿನ ಪ್ರತಿಬಿಂಬವೇ ಕಾಣಿಸುತ್ತದೆ. ಅಷ್ಟರಮಟ್ಟಿಗೆ ಇಹಪರಗಳಲ್ಲಿಯೂ ಸುವರ್ಣ ಮೇಡಂ ಒಬ್ಬ ಒಳ್ಳೆಯ ಮನುಷ್ಯರಾಗಿಯೇ ಇದ್ದರು ಮತ್ತು ಇನ್ನುಮುಂದೆಯೂ ಇರುತ್ತಾರೆ ಕೂಡಾ...

ಈ ಮೇಲಿನ ಕೆಲವು ಸಾಲುಗಳನ್ನು ಹೊರತು ಪಡಿಸಿ, ಉಳಿದೆಲ್ಲ ಸಾಲುಗಳನ್ನು ನಾನು ಅವರು ಬದುಕಿರುವಾಗಲೇ ಬರೆಯಬೇಕಿತ್ತು. ಯಾಕೆಂದರೆ, ಬದುಕಿಗೆ ಸನ್ಮಾನವೇ ಆಗಲಿ, ಅವಮಾನವೇ ಆಗಲಿ ಅದು ಬದುಕಿರುವಾಗಲೇ ಸಿಗಬೇಕು. ಆಗಲೇ ನಮ್ಮನ್ನು ನಾವು ಅರಿತುಕೊಳ್ಳಲು, ಇನ್ನಷ್ಟು ಮಾಗಲು ಕಾರಣವಾಗುವುದು. ಆದರೆ ದುರಂತ ನೋಡಿ, ಸತ್ತನಂತರ ನಾನು ಅವರ ಬಗ್ಗೆ ಹತ್ತು ಜನರಿಗೆ ಅವರ ಒಳ್ಳೆಯತನದ ಬಗ್ಗೆ ಹೀಗೆ ಹೇಳುತ್ತಾ ಹೋಗುತ್ತಿದ್ದೇನೆ... ಇದೊಂದು ವಿಷಯದಲ್ಲಿ ಕ್ಷಮೆ ಇರಲಿ ಸುವರ್ಣ ಮೇಡಂ. ನೀವೆಲ್ಲಿದ್ದರೂ ನನಗೆ ನೀವು ಅದೇ ಸುವರ್ಣ ಮೇಡಂ ಆಗಿಯೇ ಇರುತ್ತೀರಿ ಮತ್ತು ವಯಸ್ಸಿನಲ್ಲಿ ನಾನು ನಿಮಗಿಂತ ಚಿಕ್ಕವನೇ ಆಗಿದ್ದರೂ ನಾನು ನಿಮ್ಮ ಅದೇ ಪ್ರೀತಿಯ ಗಣೇಶಣ್ಣನಾಗಿಯೇ ಇರುತ್ತೇನೆ.

('ನ್ಯೂಸ್‌ ಪೋಸ್ಟ್‌ಮಾರ್ಟಮ್‌’ ಮಾಸಪತ್ರಿಕೆಯ 2022ರ ಮಾರ್ಚ್ ಸಂಚಿಕೆಯಲ್ಲಿ ಪ್ರಕಟಗೊಂಡ ಲೇಖನ)

-ಆರುಡೋ ಗಣೇಶ, ಕೋಡೂರು

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆ ಕ್ಷಣದಲ್ಲಿ ಶರತ್‌ ಸಾವಿನೆದುರು ಅದೆಷ್ಟು ಅಸಹಾಯಕ!!

ಈಗ ಆರು ಪಾಸಾಗಿ ಏಳು...

ಒಂಟಿತನ ಎಂದರೆ ಜವಾಬ್ದಾರಿಯಿಂದ ಜಾರಿಕೊಳ್ಳುವುದಾ?!