ಅವನು ಅಪ್ಪ ಹೇಳಿದ ಆ ಮಾತನ್ನು ಮರೆಯದೇ ಹೋಗಿದ್ದರೆ...

ಆಗ ನಾನು ಅರೆಕಾಲಿಕ ಸಿನಿಮಾ ಪತ್ರಕರ್ತನಾಗಿದ್ದೆ. ಆಗಾಗ ಸಿನಿಮಾದವರನ್ನು ಭೇಟಿಯಾಗುತ್ತಿದ್ದೆ. ಹೀಗಿದ್ದಾಗಲೇ ಒಮ್ಮೆ ದರ್ಶನ್ ಭೇಟಿಯಾಗುವ ಅವಕಾಶ ಸಿಕ್ಕಿತು. ನಾನು ಶೂಟಿಂಗಿನಲ್ಲಿದ್ದೇನೆ, ಶೂಟಿಂಗ್ ಸ್ಪಾಟಿಗೇ ಬನ್ನಿ. ಇಲ್ಲೇ ಮಾತನಾಡೋಣ ಎಂದರು. ಮಲ್ಲೇಶ್ವರ ಸಮೀಪದ ಗ್ರೌಂಡೊಂದರಲ್ಲಿ ಶೂಟಿಂಗ್ ನಡೆಯುತ್ತಿತ್ತು. ಯಾವ ಸಿನಿಮಾ ಎಂದು ನೆನಪಿಲ್ಲ. ಆ ಸಿನಿಮಾದಲ್ಲಿ ಮಾನ್ಯ ಹೀರೋಯಿನ್‌. ದರ್ಶನ್‌ ಬ್ರೇಕ್‌ನಲ್ಲಿ ನಮ್ಮ ಜೊತೆ ಮಾತನಾಡಿದರು. ಹೇಗೂ ಬರೋದು ಬಂದಿದ್ದೇವಲ್ಲ, ಸಿಕ್ಕರೆ ಮಾನ್ಯಳ ಜೊತೆಗೂ ಮಾತನಾಡಿ ಒಂದು ಲೇಖನ ಬರೆಯಬಹುದು ಎಂದುಕೊಂಡು, ದರ್ಶನ್ ಬಳಿ, ’ಸ್ವಲ್ಪ ಮಾನ್ಯಳನ್ನು ಇಂಟ್ರಡ್ಯೂಸ್‌ ಮಾಡಿಕೊಡ್ತೀರಾ?’ ಎಂದು ಕೇಳಿದೆವು. ಆಕೆ ಬ್ರೇಕ್‌ನಲ್ಲಿ ತನ್ನ ಕ್ಯಾರಾವಾನ್‌ನಲ್ಲಿ ರೆಸ್ಟ್‌ ಮಾಡುತ್ತಿದ್ದಳು. ದರ್ಶನ್‌ ಕೂತಿದ್ದ ಜಾಗದಿಂದ ಸ್ವಲ್ಪ ದೂರದಲ್ಲೇ ಆ ಕ್ಯಾರಾವಾನ್‌ ನಿಂತಿತ್ತು. ದರ್ಶನ್‌ ಆಯಿತು, ಪರಿಚಯಿಸಿಕೊಡುತ್ತೇನೆ. ಮಾತನಾಡಿ ಎಂದು ಹೇಳಬಹುದಿತ್ತು. ಅದು ಅವರಿಂದ ಆಗದೇ ಇರುವ ಕೆಲಸವೇನೂ ಆಗಿರಲಿಲ್ಲ. ಆದರೆ ದರ್ಶನ್‌ ಹಾಗೆ ಮಾಡಲಿಲ್ಲ. ಬದಲಿಗೆ, ’ಸಿನಿಮಾಕ್ಕೆಷ್ಟು ಬೇಕೋ ಅಷ್ಟು ಮಾತ್ರ ನಾನು ನನ್ನ ಸಹನಟಿಯರ ಜೊತೆ ಮಾತನಾಡೋದು. ಅದರಾಚೆಗೆ ನಾನು ಅವರ ಜೊತೆ ಕಾಂಟ್ಯಾಕ್ಟಿನಲ್ಲಿ ಇರೋದಿಲ್ಲ. ನಮ್ಮ ಅಪ್ಪ ಯಾವಾಗಲೂ ಒಂದು ಮಾತು ಹೇಳೋರು. ಊಟದ ತಟ್ಟೆ ಮುಂದೆ, ಹುಡುಗಿಯರ ಮುಂದೆ ಹೆಚ್ಚು ಹೊತ್ತು ಕೂರಬಾರದು ಅಂತ. ಅದನ್ನು ನಾನು ಫಾಲೋ ಮಾಡಿಕೊಂಡು ಬಂದಿದ್ದೇನೆ...’ ಎಂದರು. ಅಷ್ಟು ಹೇಳಿದ ಮೇಲೆ ಇನ್ನು ಕೇಳುವುದೇನಿದೆ? ಆಯಿತು ಸರಿ ಎಂದು ಹೇಳಿ ಅಲ್ಲಿಂದ ಎದ್ದು ಬಂದೆವು.

ದರ್ಶನ್ ಹೇಳಿದ ಈ ಮಾತು ಈಗಲೂ ನನ್ನ ಕಿವಿಯಲ್ಲಿದೆ. ದರ್ಶನ್ ಆಗ ಹಾಗೇ ಇದ್ದರು. ಯಾವ ಹೀರೋಯಿನ್ನುಗಳ ಜೊತೆಗೂ ಅವರ ಹೆಸರು ತಳುಕು ಹಾಕಿಕೊಂಡಿರಲಿಲ್ಲ. ಪ್ರೀತಿಸಿ ಮದುವೆಯಾದ ಹೆಂಡತಿಯೊಂದಿಗೆ ನೆಮ್ಮದಿಯಾಗಿದ್ದರು. ಯಾಕೆಂದರೆ, ಅಪ್ಪ ಹೇಳಿದ ಕಿವಿಮಾತು ಅವರ ಮನಸ್ಸಿನಲ್ಲಿತ್ತು. ಅದಕ್ಕೆ ಸರಿಯಾಗಿ ಅವರ ಸ್ನೇಹಿತರ ಬಳಗವೂ ಇತ್ತು. ಕ್ಯಾಮರಾಮನ್‌ ಸೀನು, ಅಣಜಿ ನಾಗರಾಜ್‌... ಹೀಗೆ ದರ್ಶನ್‌ ಕಷ್ಟದ ದಿನಗಳಲ್ಲಿ ಅವರೊಂದಿಗಿದ್ದ ಸ್ನೇಹಿತರು ಆಗಲೂ ಜೊತೆಗಿದ್ದರು. ಅವತ್ತು ನಾವು ದರ್ಶನ್‌‌ ಭೇಟಿಗೆ ಹೋದ ಸಂದರ್ಭದಲ್ಲಿ ಕ್ಯಾಮರಾಮನ್‌ ಸೀನು ಕೂಡಾ ಶೂಟಿಂಗ್ ಸ್ಪಾಟಿಗೆ ಬಂದಿದ್ದರು. ದರ್ಶನ್‌ ಅವರ ಜೊತೆ ಸ್ನೇಹಿತನಾಗಿಯೇ ಬೆರೆತಿದ್ದರು, ನಗಾಡಿದ್ದರು. ಬಹುಶಃ ಅಪ್ಪ ತೂಗುದೀಪ ಶ್ರೀನಿವಾಸ್ ಹೇಳಿದ ಮಾತು ಮತ್ತು ದರ್ಶನ್ ಏಳಿಗೆಯನ್ನು ಬಯಸಿದ್ದ ಸ್ನೇಹಿತರು, ಆಪ್ತರು ಅವರ ಜೊತೆಗೆ ಈಗಲೂ ಇದ್ದಿದ್ದರೆ ಹೆಂಡತಿ ಮೇಲೆ ಹಲ್ಲೆ ನಡೆಸಿದ ಪ್ರಕರಣದಿಂದ ಈಗ ನಡೆದಿರುವ ಪ್ರಕರಣದವರೆಗೆ ಯಾವುದು ಕೂಡಾ ದರ್ಶನ್‌ ಜೀವನದ ದಾರಿಯಲ್ಲಿ ಅಡ್ಡ ಬರುತ್ತಿರಲಿಲ್ಲವೇನೋ. ದುರಂತವೆಂದರೆ, ಆ ಸ್ನೇಹಿತರೂ ದರ್ಶನ್‌ ಜೊತೆಗಿಲ್ಲ, ಬಹುಶಃ ಅಪ್ಪ ಹೇಳಿದ ಆ ಮಾತೂ ಅವರ ಮನಸ್ಸಿನಲ್ಲಿಲ್ಲ. ಇನ್ನು ದರ್ಶನ್‌ ಚಿತ್ರಬದುಕಿನ ಗೆಲುವಿಗೆ ಯಾರ‍್ಯಾರಿಗೋ ಕೈ ಮುಗಿದ ಆ ತಾಯಿ ಮೀನಾ ಅವರು ಕೂಡಾ ಹೊರಗೆಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ದರ್ಶನ್ ಜೊತೆಗಂತೂ ಅವರಿಲ್ಲ. ಯಾರು ಇರಬೇಕಿತ್ತೋ ಅವರೆಲ್ಲರೂ ದರ್ಶನ್‌ನಿಂದ ದೂರಾಗಿಬಿಟ್ಟರು. ಆದ್ದರಿಂದಲೇ ದರ್ಶನ್‌ ಒಂದಲ್ಲ ಒಂದು ಎಡವಟ್ಟುಗಳನ್ನು ಮಾಡಿಕೊಳ್ಳುತ್ತಲೇ ಬಂದರು. ಕೊನೆಗೆ ಹೋಗಿ ಹೋಗಿ ಅಷ್ಟು ಸುಲಭಕ್ಕೆ ಹೊರಬರಲಾಗದ ಕಂದಕಕ್ಕೇ ಬಿದ್ದಿದ್ದಾರೆ. 

ಅದರಲ್ಲಿ ಅವರ ತಪ್ಪೇನು, ಆ ತಪ್ಪಿನ ಮೂಲವೇನು ಎಂದೆಲ್ಲ ನೋಡುವುದಕ್ಕಿಂತ ಮೊದಲು, ಸಹಜವಾಗಿಯೇ ದರ್ಶನ್‌ ಹಿನ್ನೆಲೆಯನ್ನು ತಿಳಿದ ಎಲ್ಲರೂ ’ಅಪ್ಪ ತೆರೆ ಮೇಲೆ ಖಳನಟನಾಗಿದ್ದರು. ಆದರೆ ನಿಜ ಜೀವನದಲ್ಲಿ ಒಳ್ಳೆಯ ಮನುಷ್ಯನಾಗಿದ್ದರು. ಆದರೆ ಮಗ ತೆರೆ ಮೇಲೆ ಹೀರೋ ಆದ, ನಿಜ ಜೀವನದಲ್ಲಿ ಕ್ರೌರ್ಯದಿಂದಲೇ ಹುಟ್ಟಿದನೇನೋ ಎನ್ನುವಂತಹ ವಿಲನ್‌ ಆದ’ ಎಂದು ಆಡುತ್ತಿರುವ ಮಾತಿದೆಯಲ್ಲ, ಅದು ದರ್ಶನ್‌ಗೆ ಮಾತ್ರ ಚುಚ್ಚುವ ಮಾತಲ್ಲ, ಏನೂ ಮಾಡದ ಆ ತಂದೆಗೆ ಈಗಲೂ ಇರಿಯುತ್ತಿರುತ್ತದೆ...

 -ಆರುಡೋ ಗಣೇಶ ಕೋಡೂರು


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬೆಳಕಾದಳೇ ಅವಳು...?!

ಆ ಕ್ಷಣದಲ್ಲಿ ಶರತ್‌ ಸಾವಿನೆದುರು ಅದೆಷ್ಟು ಅಸಹಾಯಕ!!