ಬೆಳಕಾದಳೇ ಅವಳು...?!

ಅದು ಎಂದಿನ ಸಂಜೆಯಾಗಿರಲಿಲ್ಲ. ನನಗದು ಅಂದಾಜೂ ಇರಲಿಲ್ಲ. ಎಂದಿನಂತೆಯೇ ಅವಳನ್ನು ಭೇಟಿಯಾಗಲು ನಾನು ದೇವಸ್ಥಾನದ ಎದುರಿರುವ ಬನ್ನಿಮರದ ಕಟ್ಟೆಯ ಮೇಲೆ ಕುಳಿತು ಕಾಯುತ್ತಿದ್ದೆ. ಆ ದೇವಸ್ಥಾನದಲ್ಲಿ ಬೆಳಗಿನ ಪೂಜೆ ಮಾತ್ರ. ಬೆಳಿಗ್ಗೆ ಹತ್ತು ಗಂಟೆಗೆ ಪುರೋಹಿತರು ದೇವಸ್ಥಾನದ ಬಾಗಿಲು ಮುಚ್ಚಿ ಹೋದರೆ ಮತ್ತೆ ಬರುವುದು ಮಾರನೇಯ ದಿನ ಬೆಳಿಗ್ಗೆ ಆರು ಗಂಟೆಗೆ. ಅಷ್ಟು ಹೊತ್ತೂ ದೇವಸ್ಥಾನದ ಸುತ್ತೆಲ್ಲ ದೇವರೂ ಇಲ್ಲದ ಏಕಾಂತ. ಆದ್ದರಿಂದಲೇ ನಮ್ಮಿಬ್ಬರ ಭೇಟಿಗೆ ಅದು ಸರಿಯಾದ ಜಾಗವಾಗಿತ್ತು. ಅವಳು ಕೆಲಸ ಮುಗಿಸಿ ಸಂಜೆ ಮನೆಗೆ ಹೋಗುವ ದಾರಿಯಿಂದ ಕೆರೆಯತ್ತ ಹೋಗುವ ದಾರಿಗೆ ಎಡಕ್ಕೆ ತಿರುಗಿಕೊಂಡು ಎರಡು ನಿಮಿಷ ನಡೆದರೆ ಈ ದೇವಸ್ಥಾನದ ಎದುರಿರುವ ಬನ್ನಿಮರದ ಕಟ್ಟೆ ಸಿಕ್ಕುತ್ತಿತ್ತು. ನಮ್ಮಿಬ್ಬರ ಮೊದಲ ಭೇಟಿ ಆಗಿದ್ದೂ ಇಲ್ಲೇ. ಒಂದು ಸೋಮವಾರ ದೇವಸ್ಥಾನದ ದೇವರ ದರ್ಶನಕ್ಕೆಂದು ಬಂದವನಿಗೆ ಅವಳ ದರ್ಶನವಾಗಿತ್ತು. ಮೊದಲ ದರ್ಶನದಲ್ಲೇ ವರವೊಂದು ಸಿಕ್ಕ ಸೂಚನೆ... ಮೊದಲು ನಗು, ಆನಂತರ ಒಂದಷ್ಟು ದೀರ್ಘವಾದ ಮೌನ, ಮೌನವಿನ್ನು ಹತ್ತಿರ ಸುಳಿಯುವುದಿಲ್ಲ ಎನ್ನುವಂತೆ ಮಾತಿನ ಗೆಜ್ಜೆಗಳ ಸಣ್ಣ ಸಪ್ಪಳ, ಆನಂತರ ಕೊನೆಯೇ ಇಲ್ಲವೆನ್ನುವಂತೆ ಆರಂಭವಾದ ಘಲ್‌ಘಲ್‌... 

ಅಂದಹಾಗೇ, ಹೇಳಲು ಮರೆತಿದ್ದೆ. ಅವಳು ನೃತ್ಯ ಶಿಕ್ಷಕಿ. ಪಕ್ಕದ ಪಟ್ಟಣದಲ್ಲಿರುವ ನೃತ್ಯ ಶಾಲೆಯೊಂದರಲ್ಲಿ ನೃತ್ಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾಳೆ. ’ನೀವು?’ ನಾವಿಬ್ಬರೇ ಇದ್ದ ಏಕಾಂತದಲ್ಲಿ ಅವಳು ಆಡಿದ ಮೊದಲ ಮಾತು ಇದು. ’ನಾನು ಹರಿ, ಚಿತ್ರ ಬರೆಯುವ ಕೆಲಸ ಮಾಡುತ್ತಿದ್ದೇನೆ’. ಇದು ಅವಳೊಂದಿಗಿನ ನನ್ನ ಮೊದಲ ಮಾತು. ’ನನ್ನ ಬಗ್ಗೆ ಕೇಳುವುದಿಲ್ಲವಾ?’ ಎನ್ನುವ ಅವಳ ಪ್ರಶ್ನೆಯ ಅರಿವಿತ್ತು. ಆದರೆ ನನಗದು ಅಗತ್ಯವಿರಲಿಲ್ಲ. ಯಾಕೆಂದರೆ, ಅಷ್ಟು ಹೊತ್ತಿಗಾಗಲೇ ನನಗೆ ಅವಳ ಪರಿಚಯ ಸಂಪೂರ್ಣವಾಗಿ ಆಗಿತ್ತು. ಅದನ್ನೇ ಅವಳಿಗೆ ಹೇಳಿದೆ. ಅವಳು ’ಚಿತ್ರ ಬರೆಯುವುದನ್ನು ಬಿಟ್ಟು ಬಹುಶಃ ಈಗ ನನ್ನ ಬಗ್ಗೆಯೇ ಡೀಪಾಗಿ ಸ್ಟಡೀ ಮಾಡುತ್ತಿದ್ದೀರಾ ಹೇಗೆ..?!’ ಎಂದು ಕೇಳಿದ ಪ್ರಶ್ನೆಯಲ್ಲಿ ಅದೆಷ್ಟು ಭಾವವಿತ್ತು! ನಾನು ಕುಂಚ, ಅವಳು ಗೆಜ್ಜೆ. ಬಿಡಿಸುವ ಚಿತ್ರದ ಹಿನ್ನೆಲೆಯಲ್ಲಿ ಅಂದಿನಿಂದ ನನ್ನ ಕಿವಿಯಲ್ಲಿ ಅವಳ ಕಾಲಿನ ಗೆಜ್ಜೆಯ ಸದ್ದೇ ತುಂಬಿಕೊಂಡು ಕೆಲಸಕ್ಕೆ ಸ್ಫೂರ್ತಿಯಾದಂತೆ... ಬದುಕು ಹೊಸದೊಂದು ಕ್ಯಾನ್ವಾಸ್ಸಿನಲ್ಲಿ ಅರಳುತ್ತಿರುವ ಆವರೆಗೆ ಕಾಣದ ಬಣ್ಣದಂತೆ, ಚಿತ್ರದಂತೆ... ಅವಳೊಂದು ದಿನ ಸಂಜೆ ಮಾತಿಗೆ ಸಿಕ್ಕಿಲ್ಲವೆಂದರೂ ರಾತ್ರಿ ಎನ್ನುವುದು ಥೇಟು ನರಕವಾದಂತಹ ಅನುಭವ. ಇದನ್ನು ಅವಳಿಗೂ ಹೇಳಿದ್ದೆ. ಅವಳೂ ನಿನ್ನ ಹಾಗೇ ನನಗೂ ಅಂದವಳು, ಅದಕ್ಕೇ ನಾನು ಶಾಲೆಗೆ ರಜೆ ಇದ್ದರೂ ನಿನ್ನನ್ನು ಭೇಟಿಯಾಗಲಿಕ್ಕೆಂದೇ ತಪ್ಪದೇ ಇಲ್ಲಿಗೆ ಬರುತ್ತೇನೆ ಎಂದಿದ್ದಳು. ಅಂದಿನಿಂದ ಒಂದು ಸಂಜೆಯೂ ನಮ್ಮಿಬ್ಬರ ಭೇಟಿ ತಪ್ಪಿರಲಿಲ್ಲ. ಅಂದಮೇಲೆ ಅವಳು ಇವತ್ತು ಬರುವುದಿಲ್ಲ ಎಂದು ನಾನಾದರೂ ಯಾಕೆ ಸುಮ್ಮಸುಮ್ಮನೆ ಯೋಚಿಸಲಿ?! ಕಾಯುತ್ತಾ ಕುಳಿತಿದ್ದೆ. ಅವಳು ಬರಬೇಕಾದ ಸಮಯವಾಗಿ ಹತ್ತು ನಿಮಿಷ ಕಳೆದಿತ್ತು. ಉಹ್ಞೂಂ, ಅವಳು ಬರಲಿಲ್ಲ. ಬಹುಶಃ ಬಸ್ಸು ತಡವಾಗಿರಬಹುದು, ಬರುತ್ತಾಳೆ ಎಂದು ಕಾಯುತ್ತಾ ಕುಳಿತೆ. ಸಂಜೆ ಸಾಯುವ ಕೊನೇಕ್ಷಣದ ಉಸಿರಿನಲ್ಲಿತ್ತು. ಉಸಿರು ನಿಲ್ಲಿಸಿತೆಂದರೆ ಕತ್ತಲು. ಗಪ್ಪನೆ ಕತ್ತಲು ಕವಿಯಿತು. ಎದುರಿಗಿದ್ದ ಕಲ್ಲಿನ ದೇವಸ್ಥಾನವನ್ನು ಕರಗಿಸಿಕೊಂಡ ಕರಿಕತ್ತಲು. ಯಾಕವಳು ಬರಲಿಲ್ಲ? ಎಂತಹದ್ದೇ ಸ್ಥಿತಿ ಇದ್ದರೂ ಬರುವವಳು ಇವತ್ತ್ಯಾಕೆ ಬರಲಿಲ್ಲ?! ಎಂದುಕೊಳ್ಳುತ್ತಲೇ ನರಕದ ಮೆಟ್ಟಿಲ ಮೇಲೆ ಮೊದಲ ಹೆಜ್ಜೆಯನ್ನಿಡುವವನಂತೆ ಕುಳಿತಲ್ಲಿಂದ ಎದ್ದು ಹೆಜ್ಜೆ ಎತ್ತಿಟ್ಟೇ ಅಷ್ಟೇ, ಕಣ್ಣೆದುರಿಗಿದ್ದ ಆಲದ ಮರದ ಎಲೆಗಳಲ್ಲಿ ದಗ್ಗನೆ ಹೊತ್ತಿ ಉರಿದಂತೆ ಬೆಳಕಾಗಿಬಿಟ್ಟಿತು! ನನ್ನನ್ನೂ ಸೇರಿಸಿಕೊಂಡು ಕವಿದ ಕತ್ತಲು ಅಲ್ಲಿರಲೇ ಇಲ್ಲ ಎನ್ನುವಂತಹ ಬೆಳಕದು. ಒಂದು ಕ್ಷಣ ಕಣ್ಣು ಬಿಡುವುದೂ ಕಷ್ಟವಾಗಿ, ಆಲದ ಮರದ ಬಿಳಲುಗಳಿಗೂ ಹರಿಯುತ್ತಿದ್ದ ಬೆಳಕನ್ನೇ ನೋಡುತ್ತಾ ನಿಂತವನಿಗೆ ಆ ಬೆಳಕಿನ ನಡುವಿನಿಂದಲೇ ಅವಳು ನನ್ನತ್ತ ನಡೆದು ಬರುತ್ತಿದ್ದಳು! ಬೆಳಕೇ ಅವಳಾ, ಅವಳೇ ಬೆಳಕಾದಳಾ? ಎನ್ನುವ ಪ್ರಶ್ನೆ ನನ್ನೊಳಗೆ ಹುಟ್ಟಿಕೊಳ್ಳುವ ಮೊದಲೇ, ’ಹರಿ, ಸ್ಸಾರೀ ಕಣೋ... ತುಂಬಾ ಹೊತ್ತು ಕಾಯಿಸಿಬಿಟ್ಟೆ. ಏನು ಗೊತ್ತಾ...?’ ಎಂದು ಹೇಳುತ್ತಾ ಹತ್ತಿರತ್ತಿರ ಆದವಳನ್ನು ನೋಡುವುದಕ್ಕೆ ಸಾಧ್ಯವಿಲ್ಲವೆನ್ನುವಷ್ಟು ಪ್ರಖರ ಬೆಳಕಾಗಿ, ಇನ್ನೂ ಹತ್ತಿರ ಬಂದರೆ ಆ ಬೆಳಕಿನ ಶಾಖಕ್ಕೆ ನಾನು ಸುಟ್ಟೇ ಹೋಗಬಹುದೆನ್ನುವ ಭಯ ಹುಟ್ಟಿಕೊಂಡ ಬೆನ್ನಲ್ಲೇ ಏನು ಮಾಡಬೇಕು ಎನ್ನುವುದು ತಿಳಿಯದೇ ಸುಡುವುದಾದರೆ ಸುಡಲಿ, ಅದು ಅವಳ ಬೆಳಕಲ್ಲವೇ ಎಂದು ನಾನು ತೆರೆದ ಕಣ್ಣು ತೆರೆದಿಟ್ಟುಕೊಂಡು ಅವಳನ್ನೇ ನೋಡುತ್ತಾ, ’ಪರವಾಗಿಲ್ಲ, ಅದಕ್ಕೆಲ್ಲ ಯಾಕೆ ಸ್ಸಾರೀ ಕೇಳುತ್ತೀಯಾ?’ ಎಂದು ಹೇಳಿ ಅವಳ ಕೈ ಹಿಡಿದುಕೊಂಡುಬಿಟ್ಟೆ.

ಅವಳು ಸುಟ್ಟು ಬಿಟ್ಟಳು...

ಪ್ರೀತಿಯಲ್ಲಿ ನೋವು ಕೂಡಾ ಒಂದು ರೀತಿಯ ಸುಖವಂತೆ ಎನ್ನುವ ಮಾತು ನನಗೆ ಮೊದಲ ಬಾರಿ ಅನುಭವಕ್ಕೆ ಬಂದಿತ್ತು. ಹೊಸ ಅನುಭವಕ್ಕೆ ಬದುಕು ತೆರೆದುಕೊಳ್ಳುತ್ತಿರಬೇಕು. ಆಗಲೇ ಬದುಕನ್ನು ಇನ್ನಷ್ಟು, ಮತ್ತಷ್ಟು ಬಗೆದು ನೋಡಲು ಸಾಧ್ಯ ಎನ್ನುವುದು ಈಗ ಅವಳ ಮೂಲಕ ಗೊತ್ತಾಗಿತ್ತು. ಅದಕ್ಕಾಗಿ ಅವಳಿಗೂ, ಅವಳ ಪ್ರೀತಿಗೂ ಥ್ಯಾಂಕ್ಸೊಂದನ್ನು ಹೇಳಿ ನೋಟಿಫಿಕೇಶನ್ ಸದ್ದಿಗೆ ಎಫ್‌ಬಿ ತೆರೆದು ನೋಡಿದರೆ, ಮೊದಲು ಕಾಣಿಸಿದ್ದೇ ನಿನ್ನೆ ನಡೆದ ಬಸ್ ಅಪಘಾತದಲ್ಲಿ ನೃತ್ಯ ಶಿಕ್ಷಕಿ ಸಾವು, ಮಕ್ಕಳ ಮುದ್ದಿನ ಶಿಕ್ಷಕಿಯ ಆತ್ಮಕ್ಕೆ ಶಾಂತಿ ಸಿಗಲಿ ಎನ್ನುವ ಸುದ್ದಿ!! ನಾನು ನೋಡುವ ಹೊತ್ತಿಗಾಗಲೇ ಆ ಪೋಸ್ಟಿಗೆ ಇನ್ನೂರ ಎರಡು ಕಮೆಂಟ್‌ ಮಾತ್ರವಲ್ಲ, ನೂರಾ ಇಪ್ಪತ್ತೆರಡು ಬಾರಿ ಶೇರ್‌ ಕೂಡಾ ಆಗಿತ್ತು. ಲೈಕುಗಳಿಗೆ ಲೆಕ್ಕವೇ ಇರಲಿಲ್ಲ. ಅದರಲ್ಲಿ ನನ್ನದೊಂದು ಕಮೆಂಟು, ಲೈಕು ಕೂಡಾ ಸೇರಿಸಬೇಕು ಎಂದುಕೊಳ್ಳುವ ಹೊತ್ತಿಗೆ...

                                                                                                                     -ಆರುಡೋ ಗಣೇಶ ಕೋಡೂರು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅವನು ಅಪ್ಪ ಹೇಳಿದ ಆ ಮಾತನ್ನು ಮರೆಯದೇ ಹೋಗಿದ್ದರೆ...

ಆ ಕ್ಷಣದಲ್ಲಿ ಶರತ್‌ ಸಾವಿನೆದುರು ಅದೆಷ್ಟು ಅಸಹಾಯಕ!!