ಬಿಸಿಲು ಮಳೆಯಲ್ಲೇ ಅರಳಿ ಕೊಚ್ಚಿ ಹೋದ ಪ್ರೀತಿಯ ನೆನಪಿನಲ್ಲಿ...
ಅವತ್ತು ಬೆಂದೇ ಹೋಗುವಂತಹ ಬಿಸಿಲು ಇದ್ದಕ್ಕಿದ್ದ ಹಾಗೇ ಮಂಕಾಗಿ ಭರ‍್ರೋ ಎಂದು ಮಳೆ ಸುರಿಯಲಾರಂಭಿಸಿತು. ವರ್ಕ್ ಫ್ರಂ ಹೋಂನಲ್ಲಿದ್ದ ನಾನು ಮನೆಯೊಳಗೆ ಧಗೆ ತಡೆಯಲಾಗದೆ ಹೊರಗೆ ಬಂದು ಜಗುಲಿಯ ಮೇಲೆ ಕುಳಿತು, ಒಂದೇ ಸಮನೆ ಸುರಿಯುತ್ತಿದ್ದ ಮಳೆಯನ್ನು, ಮಳೆಯ ಪರದೆಯಿಂದಾಚೆ ಕಾಣುತ್ತಿದ್ದ ಮನೆಯ ಕಾಂಪೌಂಡು, ಗೇಟು, ಅದರಾಚೆಗಿನ ರಸ್ತೆಯನ್ನು ನೋಡುತ್ತಿದ್ದಾಗ... ಮಳೆಯ ನಡುವೆ ಕಾಮನಬಿಲ್ಲಿನಂತೆ ಕಾಣಿಸಿಕೊಂಡವಳು ನೀನು! ನನ್ನ ಪಾಲಿಗೆ ನೀನು ಕಾಮನಬಿಲ್ಲೇ... ಯಾವ ಸೂಚನೆಯನ್ನೂ ಕೊಡದೇ ಬಂದ ಮಳೆಯಲ್ಲಿ ಸಿಕ್ಕಿದ್ದ ನೀನು ತಲೆಯ ಮೇಲೆ ಚೂಡೀದಾರದ ವೇಲ್ ಹಾಕಿಕೊಂಡು ಅವಸರವಸರವಾಗಿ ನಡೆದು ಹೋಗುತ್ತಿದ್ದೆ. ಆ ಅವಸರದಲ್ಲಿ ನನ್ನೆರಡು ಕಣ್ಣುಗಳು ನಿನ್ನನ್ನೇ ನೋಡುತ್ತಿದೆ ಎಂದು ನಿನಗೆ ತಿಳಿದಿದ್ದಾದರೂ ಹೇಗೆ? ಅದಿವತ್ತಿಗೂ ನನಗೆ ಅಚ್ಚರಿಯೇ... ಹಾಗೆ ನೀನು ನೋಡುತ್ತಿದ್ದರೆ, ನಿನ್ನನ್ನೇ ನೋಡುತ್ತಿದ್ದ ನನಗೂ ಕಣ್ಣು ಕದಲಿಸಲಾಗಲಿಲ್ಲ. ಕಣ್ಣು ಕಣ್ಣುಗಳು ಕಲೆತು, ಅದೆಷ್ಟೋ ವರ್ಷಗಳ ಪರಿಚಯವೇನೋ ಎನ್ನುವಂತೆ ಕಣ್ಣಲ್ಲೇ ಹಾಯ್ ಹೇಳಿ, ನಾನು ಕೈ ಸನ್ನೆಯಲ್ಲೇ ಕೊಡೆಯನ್ನು ತೋರಿಸಿ ತರಲಾ ಎಂದು ಅದ್ಯಾವ ಧೈರ್ಯದಿಂದ ಕೇಳಿದೆನೋ... ಬಹುಶಃ ಅವತ್ತು ಹಾಗೆ ಕೇಳದೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಈಗ ಅನ್ನಿಸುತ್ತಿದೆ. ಯಾಕೆಂದರೆ ಹಾಗೆ ಕೇಳಿದ ತಪ್ಪಿಗೇ ಇವತ್ತೂ ಅವತ್ತಿನಂತೆಯೇ ಮತ್ತೆ ಬಿಸಿಲ ದಣಿಸಿ ಸುರಿಯುತ್ತಿರುವ ಮಳೆಯಲ್ಲಿ ನಾನೊಬ್ಬನೇ ಹೀಗೆ