ಬಿಸಿಲು ಮಳೆಯಲ್ಲೇ ಅರಳಿ ಕೊಚ್ಚಿ ಹೋದ ಪ್ರೀತಿಯ ನೆನಪಿನಲ್ಲಿ...

ಅವತ್ತು ಬೆಂದೇ ಹೋಗುವಂತಹ ಬಿಸಿಲು ಇದ್ದಕ್ಕಿದ್ದ ಹಾಗೇ ಮಂಕಾಗಿ ಭರ‍್ರೋ ಎಂದು ಮಳೆ ಸುರಿಯಲಾರಂಭಿಸಿತು. ವರ್ಕ್ ಫ್ರಂ ಹೋಂನಲ್ಲಿದ್ದ ನಾನು ಮನೆಯೊಳಗೆ ಧಗೆ ತಡೆಯಲಾಗದೆ ಹೊರಗೆ ಬಂದು ಜಗುಲಿಯ ಮೇಲೆ ಕುಳಿತು, ಒಂದೇ ಸಮನೆ ಸುರಿಯುತ್ತಿದ್ದ ಮಳೆಯನ್ನು, ಮಳೆಯ ಪರದೆಯಿಂದಾಚೆ ಕಾಣುತ್ತಿದ್ದ ಮನೆಯ ಕಾಂಪೌಂಡು, ಗೇಟು, ಅದರಾಚೆಗಿನ ರಸ್ತೆಯನ್ನು ನೋಡುತ್ತಿದ್ದಾಗ... ಮಳೆಯ ನಡುವೆ ಕಾಮನಬಿಲ್ಲಿನಂತೆ ಕಾಣಿಸಿಕೊಂಡವಳು ನೀನು! ನನ್ನ ಪಾಲಿಗೆ ನೀನು ಕಾಮನಬಿಲ್ಲೇ... ಯಾವ ಸೂಚನೆಯನ್ನೂ ಕೊಡದೇ ಬಂದ ಮಳೆಯಲ್ಲಿ ಸಿಕ್ಕಿದ್ದ ನೀನು ತಲೆಯ ಮೇಲೆ ಚೂಡೀದಾರದ ವೇಲ್‌ ಹಾಕಿಕೊಂಡು ಅವಸರವಸರವಾಗಿ ನಡೆದು ಹೋಗುತ್ತಿದ್ದೆ. ಆ ಅವಸರದಲ್ಲಿ ನನ್ನೆರಡು ಕಣ್ಣುಗಳು ನಿನ್ನನ್ನೇ ನೋಡುತ್ತಿದೆ ಎಂದು ನಿನಗೆ ತಿಳಿದಿದ್ದಾದರೂ ಹೇಗೆ? ಅದಿವತ್ತಿಗೂ ನನಗೆ ಅಚ್ಚರಿಯೇ... ಹಾಗೆ ನೀನು ನೋಡುತ್ತಿದ್ದರೆ, ನಿನ್ನನ್ನೇ ನೋಡುತ್ತಿದ್ದ ನನಗೂ ಕಣ್ಣು ಕದಲಿಸಲಾಗಲಿಲ್ಲ. ಕಣ್ಣು ಕಣ್ಣುಗಳು ಕಲೆತು, ಅದೆಷ್ಟೋ ವರ್ಷಗಳ ಪರಿಚಯವೇನೋ ಎನ್ನುವಂತೆ ಕಣ್ಣಲ್ಲೇ ಹಾಯ್‌ ಹೇಳಿ, ನಾನು ಕೈ ಸನ್ನೆಯಲ್ಲೇ ಕೊಡೆಯನ್ನು ತೋರಿಸಿ ತರಲಾ ಎಂದು ಅದ್ಯಾವ ಧೈರ್ಯದಿಂದ ಕೇಳಿದೆನೋ... ಬಹುಶಃ ಅವತ್ತು ಹಾಗೆ ಕೇಳದೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಈಗ ಅನ್ನಿಸುತ್ತಿದೆ. ಯಾಕೆಂದರೆ ಹಾಗೆ ಕೇಳಿದ ತಪ್ಪಿಗೇ ಇವತ್ತೂ ಅವತ್ತಿನಂತೆಯೇ ಮತ್ತೆ ಬಿಸಿಲ ದಣಿಸಿ ಸುರಿಯುತ್ತಿರುವ ಮಳೆಯಲ್ಲಿ ನಾನೊಬ್ಬನೇ ಹೀಗೆ ಕುಳಿತು ನೋಯಿಸುವ ನೆನಪುಗಳ ದೋಣಿಯನ್ನು ಮಳೆಯಲ್ಲಿ ಒಂದೊಂದಾಗಿ ಬಿಡಬೇಕಿರುತ್ತಿರಲಿಲ್ಲ...

ನಾನು ಕೊಡೆಯನ್ನು ತರಲಾ ಎಂದು ಕೇಳಿದರೆ, ನೀನು ಅಲ್ಲೇ ನಿಂತವಳು ಸಡನ್ನಾಗಿ ನಮ್ಮ ಮನೆಯ ಗೇಟು ತೆರೆದು ಒಳಬಂದುಬಿಡುವುದಾ?! ನಿಜ ಹೇಳಲೇನೇ, ನನಗೆ ಒಂದು ಕ್ಷಣ ಎದೆಬಡಿತವೇ ನಿಂತ ಹಾಗಾಗಿತ್ತು. ಆಗಲೇ ಮಳೆಯಲ್ಲಿ ನೆನೆದು ಒದ್ದಾಡುತ್ತಿದ್ದ ನಿನ್ನನ್ನು ನಾನು ನೋಡಿದ್ದು, ಕೊಡೆ ಬೇಕಾ ಎಂದು ಕೈಸನ್ನೆಯಲ್ಲೇ ಕೇಳಿದ್ದೆಲ್ಲವೂ ನಿನ್ನನ್ನು ಕೆಣಕಿ, ನೀನೆಲ್ಲೋ ಅದೇ ಸಿಟ್ಟಿನಲ್ಲಿ ನನಗೆರಡು ತಟ್ಟಲು ಬಂದುಬಿಟ್ಟೆಯೇನೋ. ಕೊರೋನಾ ಕಿರಿಕಿರಿಯಲ್ಲಿ ಕಂಗೆಟ್ಟು ಹೋಗಿರುವ ಅಕ್ಕಪಕ್ಕದ ಮನೆಯವರಿಗೆ ಸುಮ್ಮನೆ ಈಗ ಒಂದು ಶೋ ನೋಡುವ ಅವಕಾಶವನ್ನು ನಾನೇ ಮಾಡಿಕೊಟ್ಟಂತಾಯಿತಲ್ಲ... ಎಂದು ಏನೇನೋ ಯೋಚಿಸುತ್ತಿದ್ದರೆ ಗೇಟನ್ನೂ ಹಾಕದೇ ಸೀದಾ ಒಳಬಂದವಳು, ’ಮಳೆ ನಿಲ್ಲೋ ತನ್ಕ ನಾನಿಲ್ಲಿ ನಿಂತ್ಕೋಬಹುದಾ?’ ಎಂದು ಕಣ್ಣಲ್ಲಿ ಅದೊಂದು ಬಗೆಯ ಅಮಾಯಕತೆಯನ್ನು ತುಂಬಿಕೊಂಡು ಕೇಳುತ್ತಿದ್ದರೆ, ನಿಂತಂತಾಗಿದ್ದ ಎದೆಬಡಿತ ಮೆಲ್ಲಗೆ ಲಯಕ್ಕೆ ಮರಳಿ, ಉಗುಳು ನುಂಗಿ ’ಪರವಾಗಿಲ್ಲ’ ಅನ್ನಲಿಕ್ಕೂ ಆಗದೇ ನಾನು ಸುಮ್ಮನೆ ತಲೆಯಾಡಿಸಿದ್ದೆ.

ಮಳೆಯಲ್ಲಿ ಒದ್ದೆಯಾಗಿದ್ದ ನಿನಗೆ ಒರೆಸಿಕೊಳ್ಳಲಿಕ್ಕೆ ಟವೆಲ್ ಕೊಡಬೇಕು, ಕುಡಿಯಲಿಕ್ಕೆ ಬಿಸಿ ಏನಾದ್ರೂ ಕೊಡ್ಲಾ ಎಂದೆಲ್ಲ ಕೇಳಬೇಕು ಎಂದುಕೊಳ್ಳುತ್ತಿದ್ದೆನಾದರೂ... ಹೇಳದೇ ಕೇಳದೆ ಬಂದ ಮಳೆಯಂತೆ ನನ್ನೆದುರು ಬಂದು ನಿಂತ ನಿನ್ನನ್ನು ಕನಸಲ್ಲ ನನಸು ಎಂದುಕೊಳ್ಳಲಿಕ್ಕೇ ನನಗೆ ತುಂಬಾ ಹೊತ್ತು ಹಿಡಿದಿತ್ತು. ಅಷ್ಟರೊಳಗೆ ಒಳಗಿದ್ದ ಅಮ್ಮ ಬಂದು, ನಿನ್ನನ್ನು ಮಾತನಾಡಿಸಿದರು, ನಿಮ್ಮ ಮನೆಯವರ ಬಗ್ಗೆಯೆಲ್ಲ ಕೇಳಿ ನಮ್ಮ ಪರಿಚಯದ ಹುಡುಗಿಯೇ ಬಾ ಎಂದು ಮನೆಯೊಳಗೆ ಕರೆದುಕೊಂಡು ಹೋಗಿದ್ದು, ಆನಂತರ ಮಳೆ ನಿಂತಿದ್ದು, ಒಂದರ್ಧ ಗಂಟೆಯ ನಂತರ ನೀನು ಹೋದದ್ದು, ಹೋಗುವ ಮೊದಲು ಲ್ಯಾಪ್‌ಟಾಪ್‌ನಲ್ಲಿ ಸುಮ್ಮನೆ ಕೈಯಾಡಿಸುತ್ತಿದ್ದ ನನ್ನನ್ನು ನೋಡಿ ಕಾಮನಬಿಲ್ಲಿನ ಏಳನೇ ಬಣ್ಣದ ನಗುವೊಂದನ್ನು ಚೆಲ್ಲಿ ಹೋಗಿದ್ದು... ಆದರೆ ನನ್ನ ಮನಸ್ಸಿನಿಂದಾಚೆ ನೀನು ಹೋಗದೇ ಇದ್ದಿದ್ದು... ಈ ಬದುಕಿನಲ್ಲಿ ಒಂದು ಮಳೆ ಅದ್ಯಾವ್ಯಾವ ಹೊಸ ಚಿತ್ರಗಳನ್ನು ಬಿಡಿಸಿ ಹೋಯಿತು ನೋಡು...

ನಮ್ಮ ಮನೆ ಎದುರಿನ ರಸ್ತೆಯಲ್ಲಿ ಸ್ವಲ್ಪ ದೂರ ನಡೆದು ಎಡಕ್ಕೆ ಸಿಕ್ಕುವ ಮಣ್ಣಿನ ಕಾಲುದಾರಿಯಲ್ಲಿ ಒಂದಿಪ್ಪತ್ತು ಹೆಜ್ಜೆ ಹೋದರೆ ಬಲಗಡೆ ಸಿಕ್ಕುವ ನೀಲಿ ಬಣ್ಣದ ಮನೆ ನಿನ್ನದು, ನಿನ್ನ ಹೆಸರು ನಿತ್ಯಾ, ಎಂಬಿಎ ಓದಿ ಬೆಂಗಳೂರಿನಲ್ಲಿ ಕೆಲಸ ಹಿಡಿದವಳು ಈಗ ವರ್ಕ್ ಫ್ರಂ ಹೋಂ ಎಂದು ಮನೆಯಿಂದಲೇ ಕೆಲಸ ಮಾಡುತ್ತಿದ್ದೀಯಾ ಎನ್ನುವ ವಿಷಯವೆಲ್ಲ ನನಗೆ ತಿಳಿದಿದ್ದು, ಮಳೆ ನಿಂತ ಮೂರು ದಿನದ ನಂತರದ ಒಂದು ಸಂಜೆಯ ವಾಕಿಂಗ್‌ಗೆಂದು ಆಟದ ಮೈದಾನದ ಕಡೆ ಬಂದ ಸಮಯದಲ್ಲಿ ಸಿಕ್ಕ ನೀನು ನೀನಾಗಿ ಹಾಯ್ ಎಂದು ಅದೇ ಕಾಮನಬಿಲ್ಲಿನ ನಗುವಿನೊಂದಿಗೆ ಮಾತಿಗಾರಂಭಿಸಿದಾಗಲೇ. ಅಂದು ಆರಂಭವಾದ ಮಾತು ನಿನ್ನ ಹೆಸರಿನಂತೆ ನಿತ್ಯವಾಯಿತು. ಸಂಜೆಗೊಂದು ವಾಕಿಂಗಿನ ನೆಪ ಮಾಡಿಕೊಂಡು ಮನೆಯಿಂದ ಹೊರಡುತ್ತಿದ್ದ ನಾವಿಬ್ಬರೂ ಮೈದಾನದಲ್ಲಿ ಮಕ್ಕಳಾಡುವ ಕ್ರಿಕೆಟ್ಟನ್ನು ನೋಡಿಕೊಂಡು ಅಲ್ಲೇ ಇದ್ದ ಮರದ ಬುಡದಲ್ಲಿ ಕುಳಿತು ಅದೆಷ್ಟು ಮಾತನಾಡುತ್ತಿದ್ದೆವು. ಈ ಮಾತುಗಳ ನಡುವೆ ಆತ್ಮೀಯತೆ ಇದ್ದಿದ್ದು ನನಗೆ ತಿಳಿದಿತ್ತು, ಆದರೆ ಪ್ರೀತಿ? ಅದನ್ನೂ ನನಗೆ ಮಾತುಗಳಲ್ಲಿ ಹೇಳಿದವಳು ನೀನೇ. ಕೇವಲ ಎರಡು ತಿಂಗಳ ಒಡನಾಟದಲ್ಲಿ ನನ್ನೆಲ್ಲವನ್ನೂ ಅರ್ಥ ಮಾಡಿಕೊಂಡವಳಂತೆ ನೀನು ಅದೆಷ್ಟು ನನ್ನೆಲ್ಲದಕ್ಕೂ ಸ್ಪಂದಿಸಿಬಿಟ್ಟೆ. ಆದ್ದರಿಂದಲೇ ನನಗೂ ನೀನು ಹೇಳಿದ್ದೆಲ್ಲವೂ ನನ್ನ ಮನದ ಮಾತುಗಳೇ ಅನ್ನಿಸಿ, ನೀನು ಹೇಳಿದ ಪ್ರೀತಿ ನನ್ನದೂ ಎಂದುಕೊಂಡು ಒಪ್ಪಿಕೊಂಡೆ, ತಬ್ಬಿಕೊಂಡೆ... ಬೆಂಗಳೂರಿನಲ್ಲಿ ನಾವಿಬ್ಬರೂ ಇದ್ದ ಏರಿಯಾಗಳಿಗೂ ಹೆಚ್ಚು ದೂರವೇನೂ ಇರಲಿಲ್ಲ. ಆದ್ದರಿಂದ ವರ್ಕ್ ಫ್ರಂ ಹೋಂ ಮುಗಿದು, ಮತ್ತೆ ಕೆಲಸಕ್ಕೆ ಹೋಗಲಾರಂಭಿಸುವುದರೊಳಗೆ ಮನೆಯವರನ್ನೆಲ್ಲ ಒಪ್ಪಿಸಿ ಮದುವೆಯಾಗೋಣ, ನಾನಿರುವ ಏರಿಯಾದಲ್ಲೇ ದೊಡ್ಡ ಮನೆ ಮಾಡೋಣ, ಬದುಕು ಕಟ್ಟಿಕೊಳ್ಳೋಣ... ಅದೆಷ್ಟು ಕನಸುಗಳನ್ನು ನನ್ನೆದುರು ಹರವಿದ್ದೆ ಎಂದರೆ ಯಾವತ್ತೂ ಜಾತ್ರೆ, ಮೆರವಣಿಗೆಯನ್ನೆಲ್ಲ ಇಷ್ಟ ಪಡದ ನಾನು ನಿನ್ನ ಪ್ರೀತಿಯ ರಥಬೀದಿಯಲ್ಲಿ ನೀನೇ ಅಲಂಕರಿಸಿ ಕಟ್ಟಿ ಎಳೆಯಲಾರಂಭಿಸಿದ ಕನಸುಗಳ ರಥೋತ್ಸವದಲ್ಲಿ ಮೊದಲ ಬಾರಿ ಪುಟ್ಟ ಮಗುವಿನಂತೆ ಕುಣಿದಾಡಿಬಿಟ್ಟಿದ್ದೆ.

’ಹೆಚ್ಚು ಕುಣೀಬಾರ‍್ದು ಮಗಾ, ಕಾಲು ನೋವು ಬರುತ್ತೆ. ಒಮ್ಮೆ ಕಾಲು ನೋವು ಬಂದ್ರೆ ಅದರ ನೋವಿನ ನೆನಪಿಗೆ ಮತ್ತೆ ಕುಣಿಯೋ ಆಸೆನೇ ಹೊರಟು ಹೋಗುತ್ತೆ’ ಅಂತ ಕೊರೋನಾದಲ್ಲಿ ನಮ್ಮೆಲ್ಲರನ್ನೂ ಬಿಟ್ಟು ಹೋದ ನಮ್ಮಜ್ಜಿ ಹೇಳಿದ ಮಾತು ನಿಜ ಕಣೇ. ನಿನ್ನ ಪ್ರೀತಿಯ ರಥಬೀದಿಯಲ್ಲಿ ನಾನ್ಯಾವತ್ತೂ ನಡೆದಿದ್ದೇ ಇಲ್ಲ, ಬರೀ ಕುಣೀ ಕುಣೀ... ನಿನ್ನ ಪ್ರೀತಿಯಲ್ಲಿ ಎಲ್ಲವನ್ನೂ ಅಂದರೆ ಎಲ್ಲವನ್ನೂ ಮರೆತ, ಮುಂದಿನ ಬದುಕೆಂದರೆ ಅದು ನನ್ನ ನಿತ್ಯಾಳಷ್ಟೇ ಎಂದು ನನಗೇ ಗೊತ್ತಿಲ್ಲದೇ ನಾನು ಹಾಕಿಕೊಂಡಿದ್ದ ಚೌಕಟ್ಟಿನಲ್ಲಿ ನಾನೆಷ್ಟು ಏಕಾಂಗಿ ಎಂದು ನನಗೆ ಗೊತ್ತಾಗುವ ಹೊತ್ತಿಗೆ ನನ್ನೊಳಗೆ ನಾನೆನ್ನುವ ನಾನೇ ಇರಲಿಲ್ಲ! ಹೌದಲ್ಲವಾ ಎಂದು ನನಗೆ ಅರಿವಾಗುವ ಹೊತ್ತಿಗೆ ಎಲ್ಲವೂ ಮುಗಿದು ಹೋಗಿತ್ತು. ನೀನು ಇದ್ದಕ್ಕಿದ್ದಂತೆ ಅದೊಂದು ದಿನ ಕಾರಣವೇ ಹೇಳದೇ ವಾಕಿಂಗ್ ನಿಲ್ಲಿಸಿಬಿಟ್ಟೆ, ನನ್ನ ಮಾತುಗಳೇ ನಿನ್ನನ್ನು ತಾಕದಂತೆ ಮೊಬೈಲಿಗೆ ಬ್ಲಾಕ್‌ನ ಬಾಗಿಲು ಜಡಿದುಬಿಟ್ಟೆ, ಮನೆಯ ಹತ್ತಿರ ಬರೋಣ ಎಂದರೆ ನೀನು ಯಾವುದೇ ಕಾರಣಕ್ಕೂ ನಾನು ಹೇಳದೇ ನಮ್ಮನೆಯಲ್ಲಿ ನಮ್ಮಿಬ್ಬರ ಪ್ರೀತಿಯ ವಿಷಯ ತಿಳಿಯಬಾರದು ಎಂದು ಮಾಡಿಸಿಕೊಂಡಿದ್ದ ಪ್ರಾಮಿಸ್‌ ನನ್ನನ್ನು ತಡೆದುಬಿಟ್ಟಿತು... ಏನಾಗಿದೆ, ಯಾಕಾಗಿದೆ ಎನ್ನುವ ಪ್ರಶ್ನೆಗಳಿಗೆಲ್ಲ, ಅಮ್ಮನ ಹತ್ತಿರ ಕೆಲಸದಾಕೆ ಆ ನೀಲಿಮನೆ ಭೋಜಶೆಟ್ಟರ ಮಗಳಿಗೆ ಸಂಬಂಧದಲ್ಲೇ ಮದುವೆ ಫಿಕ್ಸ್‌ ಆಗಿ, ಕೊರೋನಾ ಕಾರಣಕ್ಕೇ ಸಿಂಪಲ್ಲಾಗಿ ದೇವಸ್ಥಾನದಲ್ಲೇ ಮದುವೆ ಮಾಡಿಬಿಟ್ಟರಂತೆ. ಊರವರನ್ನು ಯಾರನ್ನೂ ಕರೀಲಿಲ್ಲಂತೆ. ಹುಡುಗನ ಮನೆ ಭಟ್ಕಳ ಹತ್ರ ಅಂದಹಾಗಿತ್ತು... ಎಂದು ಹೇಳುತ್ತಿದ್ದ ಮಾತುಗಳೇ ಉತ್ತರವಾಗಿ ಸಿಕ್ಕಿತ್ತು. ತಕ್ಷಣವೇ ನಿನ್ನ ಮೊಬೈಲ್‌ಗೆ ಕಾಲ್ ಮಾಡಿದೆ. ಬ್ಲಾಕ್‌ ಬಾಗಿಲಿಗೆ ಬಡಿದೆಲ್ಲವೂ ಬೌನ್ಸ್‌ ಆದವು... ಹಾಗೇ ನನ್ನ ಬದುಕು ಕೂಡಾ... 

ಕೊರೋನಾ ಕಡಿಮೆಯಾಗಿದೆ. ಜಗತ್ತೂ ಮೊದಲಿನಂತಾಗುತ್ತಿದೆ. ಆದರೆ ನಾನು ನೀನು ಬಿಟ್ಟು ಹೋದ ಅದೇ ಜಾಗದಲ್ಲಿ ಹಾಗೆಂದರೆ ಹಾಗೇ ನಿಂತಿದ್ದೇನೆ. ಇರುವ ಜಾಗವನ್ನು ಒಂದಿಷ್ಟು ಬದಲಿಸಿದರಾದರೂ ನಿನ್ನ ನೆನಪುಗಳಿಂದ ದೂರ ಸರಿಯಬಹುದೇನೋ ಎಂದುಕೊಳ್ಳುತ್ತೇನೆ. ಆದರೆ ನಮ್ಮ ಆಫೀಸಿನವರು ಇನ್ನೂ ವರ್ಕ್ ಫ್ರಂ ಹೋಮ್‌ ನಿಲ್ಲಿಸಿಲ್ಲ. ಮನೆಯಲ್ಲಿದ್ದರೆ, ಮನೆಯಿಂದಾಚೆ ಬಂದರೆ ನೀನೀಗ ನನ್ನವಳಲ್ಲ ಎನ್ನುವ ಅರಿವಿನೊಂದಿಗೂ ನೀನೇ ನನ್ನೆದುರು ಬಂದಂತೆ, ಅದೇ ಕನಸುಗಳ ಚಾದರ ಹರವಿಬಿಟ್ಟಂತೆ ಅನ್ನಿಸಿ ಎಲ್ಲವೂ ಎಂದರೆ ಎಲ್ಲವೂ ಬ್ಲಾಂಕ್ ಆಗಿಬಿಡುತ್ತದೆ ಕಣೇ. ಎಷ್ಟು ನಿನ್ನನ್ನು ಮರೆತರೂ ಆ ಮರೆವಿನ ನಡುವಿನಿಂದಲೇ ಅದು ಹೇಗೋ ನುಸುಳಿ ಬಂದು ’ಏಯ್‌ ಹುಡುಗ’ ಎಂದು ಬಿಡುತ್ತೀಯಾ. ಮತ್ತೆ ನಿನ್ನ ನೆನಪುಗಳೇ ಸರ್ವಸ್ವ, ಬದುಕು ಅಂತೆಲ್ಲ ಅನ್ನಿಸಿಬಿಡುತ್ತದೆ. ಏನು ಮಾಡಲಿ ಹೇಳು... ಅದಕ್ಕೆ ಸರಿಯಾಗಿ ಅವತ್ತು ನೀ ಮೊದಲ ಬಾರಿ ನನಗೆ ಕಾಣಿಸಿಕೊಂಡಿದ್ದೆಯಲ್ಲ ಅಂತಹದ್ದೇ ಬಿಸಿಲು ಮಳೆ ಇವತ್ತು ಒಂದೇ ಸಮನೆ ಸುರಿಯುತ್ತಿದೆ. ಬಿಸಿಲ ಧಗೆಯೊಂದಿಗೆ ನಿನ್ನ ನೆನಪುಗಳ ಭಟ್ಟಿಯ ಕಾವು ತಡೆದುಕೊಳ್ಳಲು ಹೊರಗೆ ಬಂದು ಜಗುಲಿಯ ಬಳಿ ನಿಂತರೆ ಆ ದಿನ ಇದ್ದ ಎಲ್ಲವೂ ಇದೆ, ಆದರೆ ನೀನೊಬ್ಬಳೇ ನನ್ನೊಂದಿಗಿಲ್ಲ ಅನ್ನಿಸಿ ಅದೆಂತಹ ಒಂಟಿತನಕ್ಕೆ ಬಿದ್ದು ಬಿಡುತ್ತಿದ್ದೇನೆಂದರೆ.... ಈ ಜಗತ್ತೇ ನನ್ನನ್ನು ನೀನು ನನ್ನವನಲ್ಲ ಎಂದು ಜಾಡಿಸಿ ಒದ್ದುಬಿಟ್ಟಂತೆ ಅನ್ನಿಸುತ್ತಿದೆ. ನಿನ್ನನ್ನು ಮರೆಯಲಾಗುತ್ತಿಲ್ಲ ಕಣೇ. ನೀ ಎಲ್ಲೇ ಇದ್ದರೂ ಚೆನ್ನಾಗಿರು. ನನ್ನೊಳಗಿನ ಶುದ್ಧ ಪ್ರೀತಿಯ ಮೇಲಾಣೆ, ನಿನ್ನನ್ನು ನಾನು ಯಾವತ್ತೂ ಡಿಸ್ಟರ್ಬ್ ಮಾಡುವುದಿಲ್ಲ. ಆದರೆ ಒಂದೇ ಒಂದು ಬಾರಿ ನೀನು ನನ್ನ ತೊರೆದು ಹೋದ ಕಾರಣವನ್ನು ವಾಟ್ಸಪ್ಪಿನ ಮೆಸೇಜಿನಲ್ಲಾದರೂ ವಿವರವಾಗಿ ತಿಳಿಸಿ, ನನ್ನ ಮಾತಿಗೂ ಕಾಯದೇ ಮತ್ತೆ ಬ್ಲಾಕ್‌ ಬಾಗಿಲನ್ನು ಪರ್ಮನೆಂಟಾಗಿ ಮುಚ್ಚಿ ಅದರ ಹಿಂದೆ ನಿನ್ನ ಬದುಕನ್ನು ನಿನ್ನಿಷ್ಟದಂತೆಯೇ ಬದುಕಿಬಿಡು. ನನಗೇನೂ ಬೇಸರವಿಲ್ಲ, ಸಂಕಟವಿಲ್ಲ. ನೀನ್ಯಾಕೆ ನನ್ನ ಪ್ರೀತಿಸಿದೆ, ನಾನ್ಯಾಕೆ ನಿನಗೆ ಅಷ್ಟೊಂದು ಆತುಕೊಂಡೆ, ನಿನ್ನ ಪ್ರೀತಿಯನ್ನೇ ನಾನೇಕೆ ಬದುಕೆಂದುಕೊಂಡೆ, ಕೊನೆಗೆ ಈ ಪ್ರೀತಿಯನ್ನು ನಾನೇ ಕಳೆದುಕೊಂಡೆನಾ ಅಥವಾ ಆ ಪ್ರೀತಿಯೇ ನನ್ನನ್ನು ಎತ್ತಿ ಬಿಸಾಕಿತಾ... ಈ ಪ್ರಶ್ನೆಗಳಿಗೂ ಒಮ್ಮೆ ಉತ್ತರ ಸಿಕ್ಕದೇ ಹೋದರೆ ನಾನು ಮೊದಲಿನಂತೆ ಹೇಗೆ ಬದುಕಲಿ ಹೇಳು? ಆದ್ದರಿಂದ ಇನ್ನೊಂದು ಬಿಸಿಲು ಮಳೆ ಬೀಳುವುದರೊಳಗೆ ನೀನೊಮ್ಮೆ ನನ್ನ ತೊರೆದು ಹೋದ ಕಾರಣವಾ ಹೇಳಿಬಿಡು. ನನ್ನನ್ನು ನನ್ನ ಪಾಡಿಗೆ ಬದುಕಲು ಬಿಟ್ಟು ಬಿಡು... ಅಲ್ಲಿಯವರೆಗೂ ನಿತ್ಯಾ ಐ ಲವ್‌ ಯೂ...

                                                                                                                        -ಆರುಡೋ ಗಣೇಶ ಕೋಡೂರು

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆ ಕ್ಷಣದಲ್ಲಿ ಶರತ್‌ ಸಾವಿನೆದುರು ಅದೆಷ್ಟು ಅಸಹಾಯಕ!!

ಅವನು ಅಪ್ಪ ಹೇಳಿದ ಆ ಮಾತನ್ನು ಮರೆಯದೇ ಹೋಗಿದ್ದರೆ...

ಬೆಳಕಾದಳೇ ಅವಳು...?!