ಪರಿಚಿತರಾಗಲು ಬಂದು ಅಪರಿಚಿತರಾಗಿಯೇ ಉಳಿದ ಎಲ್ಲರಿಗೂ...
ಪರಿಚಿತರು ಎಂದರೆ ಯಾರು? ಎದುರು ಸಿಕ್ಕಾಗ ಪರಿಚಯದ ನಗು ಚೆಲ್ಲುವವರು, ನಾ ಹೇಳುವುದನ್ನು ಮನಸ್ಸಿಟ್ಟು ಕೇಳಿಸಿಕೊಳ್ಳುವವರು, ಅವರು ಹೇಳಿದ್ದು ನನ್ನದೆನ್ನಿಸುವಂತೆ ಮಾಡುವವರು, ಕಷ್ಟಗಳಲ್ಲಿ ಜೊತೆಯಾಗುವವರು, ಸಂತಸದಲ್ಲಿ ಒಂದಾಗುವವರು... ಹೀಗೆಲ್ಲ ಆತುಕೊಳ್ಳುವ ಬಂಧಕ್ಕೆ ನಾವು ’ಸ್ನೇಹಿತರು’, ’ಪ್ರೀತಿಯವರು’, ’ನಮ್ಮವರು’ ಎಂದೆಲ್ಲ ಹೆಸರಿಡುತ್ತಾ ಹೋಗುತ್ತೇವೆ. ಹೀಗಿಟ್ಟ ಹೆಸರಿಗೆ ತಕ್ಕ ಹಾಗೇ ಅವರು ನಮ್ಮ ಬದುಕಿನ ಅವರದ್ದೆನ್ನುವ ಕ್ಷಣಗಳಲ್ಲಿ ನಮ್ಮವರಾಗುತ್ತಿರುತ್ತಾರೆ. ಆ ಕಾರಣದಿಂದಲೇ ಅವರ ಮತ್ತು ನಮ್ಮ ನಡುವೆ ’ಅಪರಿಚಿತತೆ’ ಇರುವುದಿಲ್ಲ. ಒಂದೊಮ್ಮೆ ಪರಿಚಿತರೇ ಅಪರಿಚಿತರಂತೆ ಇದ್ದು ಬಿಟ್ಟರೆ?! ನೋಡಿದರೂ ನೋಡದಂತೆ ಹೋಗುವವರು, ಇವನ್ಯಾತರವ ಎಂದು ಬೇಕೆಂದೇ ದೂರದಲ್ಲಿಡುವವರು, ಅಂತಸ್ತು-ಅಧಿಕಾರ ಇದ್ದರಷ್ಟೇ ಮಾತನಾಡುತ್ತೇನೆ, ಇಲ್ಲದೇ ಹೋದರೆ ಮೂಸಿಯೂ ನೋಡುವುದಿಲ್ಲ ಎನ್ನುವವರು... ಅವರವರ ಹುಟ್ಟು, ಬೆಳವಣಿಗೆ ಮತ್ತು ಇದರೊಂದಿಗೆ ಬೆಸೆದುಕೊಳ್ಳುವ ಮನಸ್ಥಿತಿಯಿಂದಾಗಿ ಅಪರಿಚಿತರು ಅನ್ನಿಸಿಬಿಡುವವರಿಂದ ಹೆಚ್ಚಿನ ಬಾರಿ ದೂರವೇ ಉಳಿದುಬಿಡುವುದು, ನನ್ನ ಲೋಕದಲ್ಲಿ ನಾನಿರುವುದೇ ನನಗೆ ಹೆಚ್ಚು ಖುಷಿ ಕೊಡುತ್ತದೆ. ಅಂದಹಾಗೇ, ನನಗೆ ಯಾರನ್ನೂ ದೂರವಿಟ್ಟು ಅಭ್ಯಾಸವಿಲ್ಲ. ಅವರಾಗಿ ದೂರ ಹೋದಾಗ ತೀರಾ ’ನಮ್ಮವರು’ ಎಂದುಕೊಂಡು ಬೆನ್ನು ಬಿದ್ದು ಹೋಗುವ ಜಾಯಮಾನ ನನ್ನದಲ್ಲ. ಅವರೆಲ್ಲಿದ್ದಾರೋ ಅಲ್ಲಿಯೇ ಆರಾಮಾಗಿರಲಿ ಎಂದು ಮನಸ್ಸಿನಲ್ಲಿ ಹೇಳಿಕೊಂಡು ನನ್ನ ಲೋಕದಲ್ಲಿ ನಾನೇ ನಾನಾಗಿ...
ಬದುಕಿನ ಸುಖವೇ ಇರಲಿ, ಕಷ್ಟವೇ ಇರಲಿ. ಅದನ್ನು ಹತ್ತು ಜನರೆದುರು ಹಂಚಿಕೊಳ್ಳಬಹುದು ಅನ್ನಿಸಿದಾಗ ನಾನು ತೀರಾ ಕೆಟಗರಿ ಎಂದೆಲ್ಲ ಮಾಡಿ ಹಂಚಿಕೊಳ್ಳುವುದಿಲ್ಲ. ಹೇಳಬಹುದಾದ ಸಂಗತಿಗಳಿದ್ದರೆ ಅದನ್ನು ನನ್ನ ಪಾಲಿಗೆ ’ಮನುಷ್ಯ’ರಾಗಿ ಕಂಡ ಎಲ್ಲರೊಂದಿಗೆ ಯಾವ ಮುಲಾಜೂ ಇಲ್ಲದೇ ಹಂಚಿಕೊಳ್ಳುತ್ತೇನೆ. ಆದ್ದರಿಂದ ಹತ್ತಿರವಿದ್ದರೂ, ದೂರವಿದ್ದರೂ, ಬೇಲಿ ಇದ್ದರೂ ಇಲ್ಲದೇ ಇದ್ದರೂ ನನ್ನ ಬದುಕಿನೆಲ್ಲ ಸಂಗತಿಗಳು ನೀವು ಕಣ್ಣು ತೆರೆದು ನನ್ನತ್ತ ನೋಡಿದಾಗ ನಿಮ್ಮೆಡೆಗೆ ಖಂಡಿತ ತೆರೆದುಕೊಳ್ಳುತ್ತವೆ. ಯಾಕೆಂದರೆ ನಾನು ತೀರಾ ಏನನ್ನೋ ಗೊಬರಿಕೊಂಡು ಇಷ್ಟು ದಿನವೂ ಜೀವನ ಮಾಡಿದವನಲ್ಲ. ಮುಂದೆಯೂ ಮಾಡುವುದಿಲ್ಲ.
ಹೆಚ್ಚು ದಿನದ ಮೌನ ಒಂದು ರೀತಿಯಲ್ಲಿ ಸಾವಿದ್ದಂತೆ. ಸಾವು ಸಂಭ್ರಮವಾಗುವ ಘಳಿಗೆಗಳು ನಮ್ಮ ಜೀವನದ್ದೇ ಆಗುವುದಾದರೆ ನಾವ್ಯಾರೂ ಮನುಷ್ಯರಾಗಿರುವುದಿಲ್ಲ. ಹಾಗಾಗುವುದೂ ಬೇಡ. ನಮ್ಮ ನಮ್ಮ ಬದುಕು ಕಂಡುಕೊಂಡ ವ್ಯಾಖ್ಯಾನಗಳಂತೆ ನಾವು ನಮ್ಮಷ್ಟಕ್ಕೇ ಮನುಷ್ಯರಾಗಿರೋಣ. ಆದ್ದರಿಂದಲೇ ತೀರಾ ಮೌನದ ಸಂಬಂಧಗಳು ನನಗೊಂದಿಷ್ಟು ಇರಿಸುಮುರಿಸನ್ನುಂಟು ಮಾಡುತ್ತಿರುವುದರಿಂದ, ಗೋಡೆ ಇಲ್ಲವೆಂದು ನಾನೆಂದುಕೊಂಡರೂ ನೀವೇ ಕಟ್ಟಿದ ಗೋಡೆ ಈಗ ಮುರಿಯಲಾರದಷ್ಟು ಗಟ್ಟಿಯಾಗಿ ನಿಂತಿರುವುದರಿಂದ ಗೋಡೆಯಾಚೆಗಿನ ನಿಮ್ಮ ಬದುಕು ಸುಂದರವಾಗಿರಲಿ. ಈಗಲೂ ಗೋಡೆಯೇ ಇಲ್ಲವೆಂದುಕೊಂಡ ನಾನು ಇಷ್ಟು ದಿನ ಆರಾಮೆನ್ನುವುದನ್ನು ಹೇಗೆ ಆರಾಮೆಂದುಕೊಂಡೇ ಬದುಕುತ್ತಿದ್ದೆನೋ ಹಾಗೇ ಬದುಕಲು ಪ್ರಯತ್ನಿಸುತ್ತಾ... ಸ್ನೇಹಿತರಾದರೂ, ಸ್ನೇಹಿತರಲ್ಲದೇ ಇದ್ದರೂ ಮನುಷ್ಯರಾದವರೆಲ್ಲರೂ ನನ್ನ ಬದುಕಿನಲ್ಲಿ ನೀವೇ ಭ್ರಮಿಸಿದಂತೆ ಇರಬಹುದಾದ ಕಿಟಕಿಯೊಳಗೆ ಇಣುಕಿ ನೋಡಲು ಸದಾ ಅವಕಾಶವಿದ್ದೇ ಇರುತ್ತದೆ. ಯಾಕೆಂದರೆ, ನಾನ್ಯಾವತ್ತೂ ನನ್ನ ಬದುಕಿಗೆ ಬೇಲಿ ಕಟ್ಟಿದವನಲ್ಲ, ಬಾಗಿಲು, ಭದ್ರತೆಗಳೂ ನನ್ನ ಬದುಕಿನ ಪದಕೋಶಗಳಲ್ಲಿಯೂ ಇಲ್ಲ... ಪರಿಚಿತರಾಗಲು ಬಂದು ಅಪರಿಚಿತರಾಗಿಯೇ ಉಳಿದ ಎಲ್ಲರಿಗೂ...
-ಆರುಡೋ ಗಣೇಶ ಕೋಡೂರು
ಚಂದದ ನಿರೂಪಣೆ
ಪ್ರತ್ಯುತ್ತರಅಳಿಸಿಸುಂದರ ಲೇಖನ ಸರ್
ಪ್ರತ್ಯುತ್ತರಅಳಿಸಿSundara pada jodane.nijavada matugalu
ಪ್ರತ್ಯುತ್ತರಅಳಿಸಿಸತ್ಯ ಅಣ್ಣ, ಪರಿಚಿತರು ನಮ್ಮ ಅವಶ್ಯಕತೆ ಇಲ್ಲದಿದ್ದಾಗ ಅಪರಿಚಿತರಾಗುತ್ತಾರೆ
ಪ್ರತ್ಯುತ್ತರಅಳಿಸಿ