ಮಲಗಿದ ಊರು
ರಾತ್ರಿ ಹೊದ್ದು ಮಲಗಿದ ಊರು ಬೆಳಿಗ್ಗೆ ಏಳಲೇ ಇಲ್ಲ... ಹಾಲಿನ ವ್ಯಾನು ಹಾರನ್ ಮಾಡಲಿಲ್ಲ ಖಾಲಿಯಾದ ತೊಟ್ಟೆಗಳು ತಾರಾಡಲಿಲ್ಲ ಬಯಲು ಹೊಲಸಾಗಲಿಲ್ಲ ಸರ್ಕಲ್ ಸೀನಣ್ಣ ಅಂಗಡಿ ಬಾಗಿಲು ತೆಗೆಯಲೇ ಇಲ್ಲ ಅಂಗಡಿ ಕಟ್ಟೆಯಲ್ಲಿ ಜನರಿಲ್ಲ. ಹೊಗೆ ತುಂಬಿಕೊಳ್ಳಲಿಲ್ಲ ಲಟಾರಿ ಮೋಹಿನಿ ಬಸ್ಸೂ ಬರಲಿಲ್ಲ ಬಸ್ಸಿನ ಕಿಟಕಿಯಿಂದ ಯಾರೂ ಎಲೆಯಡಿಕೆ ತುಪ್ಪಲಿಲ್ಲ ಗುಟ್ಕಾ ಪ್ಯಾಕೇಟುಗಳ ಅಸಹ್ಯವಿರಲಿಲ್ಲ ಕಟ್ಟಡ ಕಟ್ಟುವವರೂ ಬರಲಿಲ್ಲ ಕೆಡವುವವರೂ ಇರಲಿಲ್ಲ ಊರ ತ್ಯಾಜ್ಯ ಇನ್ಯಾರಿಗೋ ಶಾಪವಾಗಲೂ ಇಲ್ಲ ಇದು ನನ್ನದೆನ್ನುವ ಹೊಡೆದಾಟವಿಲ್ಲ ಪೊಲೀಸ್ ಲಾಠಿಗಳ ಲಟಲಟವಿಲ್ಲ ಕೋರ್ಟಿನ ಕೂಗುಗಳಿಲ್ಲ ಗುಡಿಯ ಗಂಟೆ ಕೇಳಲಿಲ್ಲ. ಮಸೀದಿ ಚರ್ಚುಗಳಿಂದಲೂ ಸದ್ದಿಲ್ಲ ಯಾರೋ ಓಡಿದರು ಇನ್ಯಾರೋ ನನ್ನದೆಂದರು ಮತ್ಯಾರೋ ನುಗ್ಗಿ ನೆಗೆದರು ಉಹ್ಞೂಂ, ಊರಲ್ಲಿ ಊರೇ ಇಲ್ಲ ಕಾಣಿಸಿದಷ್ಟು ದೂರ ಬಯಲು ಕಣ್ಣು ನೋಡಿದಲ್ಲೆಲ್ಲ ಸ್ಮಶಾನ ಇತಿಹಾಸದ ಪುಟಗಳೇ ಕಣ್ಣೆದುರು ಬಂದಂತೆ ಎಲ್ಲವೂ ಕಪ್ಪು ಮೌನ ರಾತ್ರಿ ಮಲಗಿದ ಊರಿನ ನಿದ್ದೆ ಮುಗಿಯಲೇ ಇಲ್ಲ ಬಹುಶಃ ಮುಗಿಯುವುದೂ ಇಲ್ಲ ಎನ್ನುವಾಗಲೇ... ‘ಇಲ್ಲ ನಾನು ಬದುಕಿದ್ದೇನೆ, ಅಯ್ಯೋ! ನನ್ನ ಮನೆ ಕುಸಿದು ಬಿದ್ದಿದ್ದು ಹೇಗೆ? ನನ್ನ ಹೆಂಡತಿ ಮಕ್ಕಳೆಲ್ಲ ಎಲ್ಲಿ ಹೋದರು? ಏನಾದರು??’ ಎಂದು ಚೀರುತ್ತಾ ಒಂಟಿ ಕಾಲಿನ ಮನುಷ್ಯ ಎದ್ದು ನಿಂತ. ಊರು ಮತ್ತೆಂದೂ ಮಲಗಲೇ ಇಲ್ಲ. - ಆರುಡೋ ಗಣೇಶ