ಪ್ರೀತಿ, ಬದುಕು ಮತ್ತು ಹದ್ದು

ಜೊತೆಯಾಗಿ ನಡೆಯಬಹುದಾಗಿದ್ದ ದಾರಿ ಇನ್ನೂ ದೂರವಿತ್ತು.
ಅಷ್ಟರಲ್ಲಿ ಅವನು ಸದ್ದಿಲ್ಲದೇ ಹೊರಟು ಹೋಗಿದ್ದ.
ಯಾಕೆ? ಏನಾಯಿತು?
ಕೇಳೋಣವೆಂದರೆ ಅವನು ಹೀಗೆ ನಡುದಾರಿಯಲ್ಲಿ ನನ್ನನ್ನು ಒಂಟೊಂಟಿಯಾಗಿಸಿ ಬಿಟ್ಟು ಹೋಗುತ್ತಾನೆ ಎನ್ನುವ ಸಣ್ಣದೊಂದು ಸುಳಿವು ಕನಸಿನಲ್ಲಿ ಕೂಡಾ ನನ್ನನ್ನು ಕದಲಿಸಿರಲಿಲ್ಲ.
ಅವತ್ತು ಅವನು ಉಸಿರಿಗೆ ಉಸಿರು ತಾಕಿಸುವಷ್ಟು ಹತ್ತಿರಕ್ಕೆ ಬಂದು ನಿಂತು, ’ನಿಮ್ಮ ಹೆಸ್ರು ನನಗೆ ಗೊತ್ತಿಲ್ಲ. ಪ್ರೀತಿಸೋಕೆ ಹೆಸರು, ದೇಹ, ವಿಳಾಸ, ಕೆಲಸ ಯಾವುದೂ ಮುಖ್ಯವಲ್ಲ, ಮನಸ್ಸಷ್ಟೇ. ಆ ಮನಸ್ಸನ್ನೇ ಇಷ್ಟು ಪಟ್ಟು ನಾನು ನಿಮ್ಮನ್ನು, ಪ್ರೀತಿ ಅನ್ನೋದನ್ನು ಈ ಬದುಕು ಬದ್ಕೋಕೆ ಶುರು ಮಾಡಿದ ಕ್ಷಣದಿಂದ ಪ್ರೀತಿಸಿಕೊಂಡೇ ಬಂದಿದ್ದೇನೆ... ನನಗೆ ನಿಮ್ಮ ಪ್ರೀತಿ ಸಿಗಬಹುದಾ?’ ಎಂದು ಕೇಳಿದವನನ್ನು ನನ್ನ ಕಣ್ಣುಗಳೂ ಸರಿಯಾಗಿ ನೋಡಿರಲಿಲ್ಲ. ಆದರೆ ಮನಸ್ಸು ಹೂಂಗುಟ್ಟಿ ಬಿಟ್ಟಿತ್ತು. ಹೀಗೆ ಆರಂಭವಾದ ಪ್ರೀತಿ ಈ ಬದುಕಿಗೆ ಏನೆಲ್ಲವನ್ನೂ ಕೊಟ್ಟಿತು! ಬಹುಶಃ ಅವನು ಹೀಗೆ ಹತ್ತಿರ ಬಂದು ನನ್ನ ಮೇಲಿನ ತನ್ನ ಪ್ರೀತಿಯನ್ನು ಹೇಳಿಕೊಳ್ಳದೇ ಹೋಗಿದ್ದರೆ ಈ ಬದುಕನ್ನೇ ನಾನೆಲ್ಲೋ ಕಳೆದುಕೊಂಡು ಬಿಡುತ್ತಿದ್ದೆನೇನೋ ಎನ್ನುವಂತಹ ಸಾರ್ಥಕತೆಯನ್ನು ಅವನು ನನಗೆ ಕೊಟ್ಟಿದ್ದ. ಬರೀ ಪ್ರೀತಿಯನ್ನಷ್ಟೇ ನೆಚ್ಚಿಕೊಂಡು ಬದುಕಿನ ದಾರಿಯಲ್ಲಿ ಕೈ ಕೈ ಹಿಡಿದು ನಡೆದ ಇಷ್ಟು ದೂರದಲ್ಲಿ ಅವನೂ ನನ್ನ ಹೆಸರು ಕೇಳಲಿಲ್ಲ, ನನಗೂ ಅವನ ಹೆಸರು ಕೇಳಬೇಕೆನ್ನಿಸಿರಲಿಲ್ಲ. ಬಯಸದೇ ಬದುಕಿಗೆ ಬಿಗಿದಪ್ಪಿಕೊಂಡ ಈ ಪ್ರೀತಿಯೊಂದಿಗೇ ಈ ಬದುಕಿನ ಕೊನೆಯ ತನಕ ನಡೆಯುತ್ತೇನೆ ಎನ್ನುವ ನಂಬಿಕೆ ನನ್ನೊಳಗೆ ಅದೆಷ್ಟು ಗಟ್ಟಿಯಾಗಿತ್ತೆಂದರೆ... ಉಹ್ಞೂಂ, ನನಗೆ ಅವನಿಲ್ಲದೇ ನನ್ನ ಬದುಕಿನ ಒಂದು ಕ್ಷಣವನ್ನು ಕೂಡಾ ಕಲ್ಪಿಸಿಕೊಳ್ಳುವುದು ಸಾಧ್ಯವಾಗುತ್ತಿರಲಿಲ್ಲ. ಅವನು ಕೂಡಾ, ’ನಿನ್ನನ್ನು ಬಿಟ್ಟು ನನಗೆ ಬದುಕಿಲ್ಲ ಎಂದುಕೊಳ್ಳಲಿಕ್ಕೇ ನನಗೆ ಹೆದರಿಕೆಯಾಗುತ್ತದೆ. ಯಾಕೆಂದರೆ, ನನಗೆ ನೀನು ಸಿಕ್ಕುವವರೆಗೂ ಬದುಕೂ ಸಿಕ್ಕಿರಲಿಲ್ಲ. ನಿನ್ನ ಪ್ರೀತಿಯೊಂದಿಗೇ ಈ ಬದುಕೂ ನನ್ನದಾಯಿತು. ಬಹುಶಃ ಈ ಬದುಕು ಮುಗಿದು ಹೋಗುವುದಿದ್ದರೂ ಅದು ನಿನ್ನೊಂದಿಗೇ ಆಗಿರಬೇಕು’ ಎಂದು ಅದೊಂದು ದಿನ ಬೆಟ್ಟದ ತುದಿಯಲ್ಲಿ ನಾವಿಬ್ಬರೂ ದಿನದ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದ ಕರಡಿ ಬಂಡೆಯ ಮೇಲೆ ನನ್ನ ಮಡಿಲಲ್ಲಿ ಮಲಗಿಕೊಂಡು ಅವನು ಹೇಳುತ್ತಿದ್ದಾಗಲೇ, ರೆಕ್ಕೆಯಗಲಿಸಿ ಆಕಾಶದಲ್ಲಿ ತೇಲುತ್ತಿದ್ದ ಹದ್ದಿನ ನೆರಳು ಸರಿಯಾಗಿ ಅವನ ಕಣ್ಣುಗಳ ಮೇಲೆ ಬಿದ್ದಿತ್ತು. ಅವನು ಆ ನೆರಳು ತಪ್ಪಿಸಿಕೊಳ್ಳಲು ಸರಿದರೂ ಆ ಹದ್ದು ಅವನನ್ನೇ ಹುಡುಕುತ್ತಿರುವಂತೆ, ನಾನು ಬಗ್ಗಿ ಅವನನ್ನು ಪುಟ್ಟ ಮಗುವಿನಂತೆ ನನ್ನೆದೆಯೊಳಗೆ ಅವಿಸಿಕೊಂಡರೂ ಅದರ ನೆರಳು ಅವನನ್ನು ನನ್ನ ಅಪ್ಪುಗೆಯಿಂದ ಹಿಡಿದೆಳೆದಂತೆ...
ಅವನನ್ನು ಎಳೆದುಕೊಂಡೇ ಹೋಗಿರಬೇಕು. ಆದರೂ ಎಳೆದುಕೊಂಡು ಹೋಗುವಾಗ ಅವನು ನನ್ನನ್ನು ಕರೆಯಬಹುದಿತ್ತು. ಯಾಕೆ ಕರೆಯಲಿಲ್ಲ?
ಆಗ ನಾನು ನಿದ್ದೆಯಲ್ಲಿದ್ದೆ. ನಿದ್ದೆಯಲ್ಲಿರುವ ನನ್ನನ್ನು ಅವನು ಅದ್ಯಾವತ್ತೂ ಎಬ್ಬಿಸಿದವನಲ್ಲ. ಈಗಲೂ ಅದಕ್ಕೇ ಎಬ್ಬಿಸಿಲ್ಲವೇನೋ... ಆದರೂ ಅವನನ್ನು ಬಿಟ್ಟು ನನಗೆ ಇರಲಿಕ್ಕೆ ಸಾಧ್ಯವೇ ಇಲ್ಲ, ಅವನು ಹೋದಲ್ಲಿಗೇ ನಾನೂ ಹೋಗುತ್ತೇನೆ ಎಂದುಕೊಳ್ಳುತ್ತಿದ್ದಾಗಲೇ ಕಾಲು ಹಿಡಿದೆಳೆಯುತ್ತಿದ್ದ ಕನಸೊಂದನ್ನು ಜಾಡಿಸಿ ಒದ್ದು ಬಿಟ್ಟೆ.
ಎದುರಿಗೆ ಗೋಡೆಯ ಮೇಲೆ ಅವನ ನೆರಳು ಆಚೀಚೆ ಅಲುಗಾಡಿದಂತೆ... ಕಿಟಿಕಿಯಿಂದಾಚೆಗೆ ಕಾಣುತ್ತಿದ್ದ ಒಣಗಿದ ಬೋಳು ತೆಂಗಿನ ಮರದ ತುದಿಯಲ್ಲಿ ಕುಳಿತಿದ್ದ ಹದ್ದಿನ ಕೊಕ್ಕಿನಲ್ಲಿ ಹಸಿ ರಕ್ತ ಮೆತ್ತಿಕೊಂಡಿತ್ತು. ಅದರ ಕಣ್ಣುಗಳಲ್ಲಿ ಮತ್ತೆ ಹಸಿವು...
-ಆರುಡೋ ಗಣೇಶ

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆ ಕ್ಷಣದಲ್ಲಿ ಶರತ್‌ ಸಾವಿನೆದುರು ಅದೆಷ್ಟು ಅಸಹಾಯಕ!!

ಒಂಟಿತನ ಎಂದರೆ ಜವಾಬ್ದಾರಿಯಿಂದ ಜಾರಿಕೊಳ್ಳುವುದಾ?!

ಈಗ ಆರು ಪಾಸಾಗಿ ಏಳು...