ಶಾಲೆಯ ಗುಟ್ಟನ್ನು ಮಕ್ಕಳು ಮನೆಯಲ್ಲಿ ಹೇಳುತ್ತಾರಾ?

‘ಶಾಲೆಯಲ್ಲಿ ಇವತ್ತು ಏನೇನಾಯ್ತು? ಏನು ಹೇಳಿಕೊಟ್ಟರು?!’
ಸ್ಕೂಲ್ ವ್ಯಾನಿನಿಂದ ಮಗುವನ್ನು ಇಳಿಸಿಕೊಂಡು ಮನೆಗೆ ನಡೆದುಕೊಂಡು ಬರುವ ದಾರಿಯಲ್ಲೇ ಅಮ್ಮ ತನ್ನ ಮಗುವನ್ನು ವಿಚಾರಿಸಲಾರಂಭಿಸುತ್ತಾಳೆ. ವ್ಯಾನಿಳಿಯುತ್ತಿದ್ದಂತೆ ಅಮ್ಮ ತನಗೆ ಏನು ಕೇಳಬಹುದು ಎಂದು ಮೊದಲೇ ಯೋಚಿಸಿಕೊಂಡಿರುವ ಮಗು, ಅದಕ್ಕೆ ಏನು ಉತ್ತರ ಕೊಡಬೇಕು ಎಂದು ತನ್ನಷ್ಟಕ್ಕೆ ತಾನೇ ನಿರ್ಧರಿಸಿರುತ್ತದೆ. ಮತ್ತು ತಾನು ಅಮ್ಮನಿಗೆ ಏನೆಲ್ಲವನ್ನೂ ‘ಫಿಲ್ಟರ್’ ಮಾಡಿ ಹೇಳಬೇಕಿರುತ್ತದೆಯೋ ಅದಷ್ಟನ್ನೇ ಹೇಳಿ ಸುಮ್ಮನಾಗಿ ಬಿಡುತ್ತದೆ.
ಮಗು ಸ್ಕೂಲಿನಲ್ಲಿ ಇವತ್ತು ನಡೆದಿದ್ದನ್ನೆಲ್ಲ ಹೇಳಿಕೊಂಡು ಹಗುರಾಯಿತು ಎಂದು ಅಮ್ಮ ಖುಷಿಯಾಗುತ್ತಾಳೆ.
ಆದರೆ ಮಗು?
ಉಹ್ಞೂಂ, ಅದು ಖುಷಿಯಾಗಿರುವುದಿಲ್ಲ. ಯಾಕೆಂದರೆ ಅದು ತನ್ನ ಅಪ್ಪ ಅಮ್ಮನ ಬಳಿ ಹೇಳಲಾಗದ ಸ್ಕೂಲಿನ ಕೆಲವೊಂದು ಗುಟ್ಟುಗಳನ್ನು ತನ್ನೊಳಗೇ ಬಚ್ಚಿಟ್ಟುಕೊಂಡಿರುತ್ತದೆ. ಮತ್ತು ಆ ಗುಟ್ಟಿನ ಕಾರಣವಾಗಿಯೇ ಮಗು ದಿನದಿಂದ ದಿನಕ್ಕೆ ಕುಸಿಯುತ್ತಾ ಹೋಗುತ್ತದೆ. ಒಳಗಿಂದೊಳಗೇ ಕೀಳರಿಮೆ ಬೆಳೆಸಿಕೊಳ್ಳುತ್ತದೆ.
ಯಾಕೆ ಹೀಗೆ? ತನ್ನ ಅಪ್ಪ ಅಮ್ಮನ ಹತ್ತಿರವೂ ಹೇಳಿಕೊಳ್ಳಲಾಗದ ಸ್ಕೂಲಿನಲ್ಲಿ ನಡೆದ ಯಾವುದೋ ಘಟನೆಯನ್ನು ಮಗುವೇಕೆ ಗುಟ್ಟು ಗುಟ್ಟು ಮಾಡುತ್ತಾ ಹೋಗುತ್ತದೆ? ಎಲ್ಲವನ್ನೂ ಹಂಚಿಕೊಂಡಂತೆ ನಟಿಸುವ ಮಗು, ಇದನ್ನು ತನ್ನ ಅಪ್ಪ ಅಮ್ಮ ಸೇರಿದಂತೆ ಮನೆಯ ಯಾರ ಹತ್ತಿರವೂ ಹೇಳಿಕೊಳ್ಳಲೇಬಾರದು ಎಂದು ನಿರ್ಧರಿಸುವುದಾದರೂ ಹೇಗೆ? ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೊರಟರೆ ಮಕ್ಕಳ ಮನಸ್ಸು ಎಷ್ಟೊಂದು ಸೂಕ್ಷ್ಮ ಮತ್ತು ಏನು ಹೇಳಬೇಕು, ಹೇಳಬಾರದು ಎನ್ನುವುದನ್ನು ತಮ್ಮಷ್ಟಕ್ಕೆ ತಾವೇ ಹೇಗೆ ನಿರ್ಧರಿಸುತ್ತವೆ ಎನ್ನುವುದು ತಿಳಿಯುತ್ತದೆ.
ನನ್ನ ಸ್ನೇಹಿತರೊಬ್ಬರ ಮಗು ಮೂರನೇ ಕ್ಲಾಸಿನಲ್ಲಿ ಓದುತ್ತಿತ್ತು. ಅಪ್ಪ ಅಮ್ಮ ಇಬ್ಬರೂ ಮಗುವನ್ನು ಯಾವತ್ತೂ ಯಾವ ವಿಷಯಕ್ಕೂ ಗದರಿಸಿದವರಲ್ಲ. ಒಂದೇಟು ಹೊಡೆದವರಲ್ಲ. ಯಾರೊಂದಿಗೆ ಹೇಗಿರಬೇಕು, ಏನು ಮಾಡಬೇಕು, ಮಾಡಬಾರದು ಎನ್ನುವುದನ್ನೆಲ್ಲ ಅವರು ಮಗುವಿಗೆ ಪ್ರೀತಿಯಿಂದಲೇ ಕಲಿಸಿದ್ದರು. ನಾನೂ ಆಗಾಗ ಆ ಮಗು ಸಿಕ್ಕಾಗ ಅದರ ನಡವಳಿಕೆಯನ್ನು ಗಮನಿಸುತ್ತಿದ್ದೆ. ಆ ಮಗುವಿನ ನಡೆ ನುಡಿಯಲ್ಲಿ ಅದೇನೋ ಒಂದು ಬಗೆಯ ಶಿಸ್ತು ಕಾಣಿಸುತ್ತಿತ್ತು.
ಇಂತಹ ಮಗುವಿಗೆ ಸ್ಕೂಲಿನಲ್ಲಿ ಕ್ಲಾಸ್ ಟೀಚರ್ ‘ಕಳ್ಳತನ’ ಮಾಡಿದ ಆರೋಪವನ್ನು ಹೊರಿಸಿಬಿಟ್ಟರು. ಆ ಮಗು ಕ್ಲಾಸಿನಲ್ಲಿ ಕುಳಿತುಕೊಳ್ಳುತ್ತಿದ್ದ ಬೆಂಚಿನಲ್ಲಿದ್ದ ಇನ್ನೊಂದು ಮಗುವಿನ ಪೆನ್ಸಿಲ್ ಕಾಣಿಸಲಿಲ್ಲವಂತೆ. ಅದು ಟೀಚರ್ ಹತ್ತಿರ ದೂರಿಕೊಂಡಿದೆ. ಟೀಚರ್ ಅಲ್ಲಿ ಇಲ್ಲಿ ಹುಡುಕುವ ಪ್ರಯತ್ನ ಮಾಡಿದ್ದಾರೆ. ಪೆನ್ಸಿಲ್ ಕಾಣಿಸದೇ ಇದ್ದಾಗ, ಸ್ನೇಹಿತನ ಮಗುವಿಗೆ ನೀನು ತೆಗೆದಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ಆ ಪ್ರಶ್ನೆಗೇ ಹೆದರಿಕೊಂಡ ಮಗು ಅಳಲಾರಂಭಿಸಿದೆ. ಅಷ್ಟೇ. ಮಗು ಹೆದರಿಕೊಂಡು ಅಳುತ್ತಿದೆ ಎಂದರೆ ಇವನೇ ಕದ್ದಿದ್ದಾನೆ ಎಂದು ನಿರ್ಧರಿಸಿದ ಟೀಚರ್, ಆ ಮಗುವಿನ ಮೇಲೆ ಕಳ್ಳತನದ ಆರೋಪ ಹೊರಿಸಿ, ಕಿವಿ ಹಿಂಡಿ ಇನ್ನುಮುಂದೆ ಇಂತಹ ತಪ್ಪು ಮಾಡಬಾರದು ಎಂದು ಗದರಿಸಿದ್ದಾರೆ.
ಅವತ್ತು ಸಂಜೆ ಮಗು ಸ್ಕೂಲಿನಿಂದ ಬಂದ ನಂತರ, ಅಪ್ಪ ಅಮ್ಮ ಇಬ್ಬರೂ ಸ್ಕೂಲಿನಲ್ಲಿ ಏನೇನು ನಡೆಯಿತು ಎಂದು ಕೇಳಿದ್ದಾರೆ. ಈ ಘಟನೆಯೊಂದನ್ನು ಬಿಟ್ಟು ಇನ್ನೆಲ್ಲವನ್ನೂ ಹೇಳಿದ ಮಗು ಎಂದಿನಂತೆಯೇ ಮನೆಯಲ್ಲಿ ಲವಲವಿಕೆಯಿಂದ ಓಡಾಡಿಕೊಂಡಿತ್ತು. ಆದರೂ ಅದರ ಮನಸ್ಸಿನಲ್ಲಿ ತಾನು ಮಾಡದ ತಪ್ಪನ್ನು ಟೀಚರ್ ತನ್ನ ಮೇಲೆ ಹೊರಿಸಿದರಲ್ಲ ಎನ್ನುವ ನೋವು, ಬೇಸರವೊಂದು ಚುಚ್ಚುತ್ತಲೇ ಇತ್ತು. ಇದು ಹೊರ ಬಂದಿದ್ದು, ಒಂದು ತಿಂಗಳು ಕಳೆದ ನಂತರ ಸ್ಕೂಲ್ ಮೀಟಿಂಗಿನಲ್ಲಿ ಆ ಮಗುವಿನ ಕ್ಲಾಸ್‌ಮೇಟ್ ಹುಡುಗಿಯೊಬ್ಬಳು ಸಿಕ್ಕು ನನ್ನ ಸ್ನೇಹಿತ ದಂಪತಿಗಳೊಂದಿಗೆ ಮಾತನಾಡಿದಾಗ!
‘ಪುಟ್ಟು, ನೀ ಕದ್ದಿಲ್ಲ ಅಂದ್ಮೇಲೆ ಟೀಚರ್ ಹೇಳಿದ ತಕ್ಷಣ ಒಪ್ಪಿಕೊಂಡಿದ್ದೇಕೆ?’ ಎಂದು ಕೇಳಿದರೆ ಮಗು ನೀಡಿದ ಉತ್ತರಕ್ಕೆ ಅಪ್ಪ ಅಮ್ಮ ಇಬ್ಬರೂ ಶಾಕ್ ಆಗಿದ್ದರು. ‘ಟೀಚರ್ ಹೀಗೆ ಮಾಡಿದರು ಎಂದು ನಾನು ನಿಮ್ಮ ಹತ್ತಿರ ಹೇಳಿದರೆ ನೀವು ಬಂದು ಟೀಚರ್ ಹತ್ತಿರ ವಿಚಾರಿಸುತ್ತೀರಿ. ಕೊನೆಗೆ ಟೀಚರ್ ನನ್ನ ಮೇಲೆ ಸಿಟ್ಟಾಗುತ್ತಾರೆ. ಅದಕ್ಕೇ ನಾನು ನಿಮ್ಮ ಹತ್ತಿರ ಹೇಳಲಿಲ್ಲ...’ ಎಂದು ಅವತ್ತು ತಾನು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿದ ಸಂಕಟಕ್ಕೆ ಕಣ್ಣೀರು ಹಾಕಲಾರಂಭಿಸಿತಂತೆ.
ಮಕ್ಕಳು ಸ್ಕೂಲಿನಲ್ಲಿ ನಡೆದ ಎಷ್ಟೋ ವಿಷಯಗಳನ್ನು ಅಪ್ಪ ಅಮ್ಮನಿಗೆ ಹೇಳದೇ ಗುಟ್ಟು ಮಾಡುವುದಕ್ಕೆ ಇಂತಹದ್ದೇ ಹತ್ತಾರು ಕಾರಣಗಳಿರುತ್ತವೆ. ವಿಚಿತ್ರವೆಂದರೆ, ತಮ್ಮ ಮಕ್ಕಳು ಸ್ಕೂಲಿನ ಇಂತಹ ಕೆಲವೊಂದು ವಿಷಯಗಳನ್ನು ನಮ್ಮಿಂದ ಮುಚ್ಚಿಡುತ್ತಿರಬಹುದಾ ಎಂದು ಹೆಚ್ಚಿನ ಪೋಷಕರು ಅಪ್ಪಿತಪ್ಪಿಯೂ ಯೋಚಿಸುವುದಿಲ್ಲ. ನಗರ ಪ್ರದೇಶಗಳಲ್ಲಿ ಬದುಕುವ ಪೋಷಕರಿಗೆ ಮಗು ನಮಗೆ ಏನಾದರೂ ಹೇಳದೇ ಮುಚ್ಚಿಡುತ್ತಿದೆಯಾ ಎಂದು ಯೋಚಿಸುವಷ್ಟು ಸಮಯವೂ ಇರುವುದಿಲ್ಲ. ಮಗು ಸ್ಕೂಲಿನಿಂದ ಬರುತ್ತಿದ್ದಂತೆ ‘ರೊಟೀನ್’ನಂತೆ ಅವೇ ಒಂದಿಷ್ಟು ರೆಡಿಮೇಡ್ ಪ್ರಶ್ನೆಗಳನ್ನು ಮಕ್ಕಳಿಗೆ ಕೇಳುತ್ತಿರುತ್ತಾರೆ. ತಾವು ಕೇಳಿದ ಪ್ರಶ್ನೆಗೆ ಮಗು ಏನು ಉತ್ತರ ಹೇಳುತ್ತಿದೆ ಎನ್ನುವುದನ್ನೂ ಗಮನಿಸದೇ ಅವರು ತಮ್ಮದ್ಯಾವುದೋ ಕೆಲಸ ಮಾಡುತ್ತಲೋ, ಮೊಬೈಲಿನ ಮೆಸೇಜ್ ನೋಡುತ್ತಲೋ ಇದ್ದು ಬಿಡುತ್ತಾರೆ. ಅಪ್ಪ ಅಮ್ಮ ನನಗೆ ಇಷ್ಟೇ ಪ್ರಶ್ನೆ ಕೇಳುವುದು, ಅದಕ್ಕೆ ನಾನು ಇಂತಹದ್ದೇ ಉತ್ತರ ಹೇಳಬೇಕು ಎಂದು ಮಕ್ಕಳೂ ತಮ್ಮ ಮನಸ್ಸನ್ನು ತಯಾರು ಮಾಡಿಕೊಂಡು ರೆಡಿಮೇಡ್ ಉತ್ತರ ಕೊಟ್ಟು ಸುಮ್ಮನಾಗುತ್ತವೆ. ತಾನು ಹೇಳಿದ್ದನ್ನು ಕೇಳಿಸಿಕೊಂಡ ಅಪ್ಪ ಅಮ್ಮ, ಅದಕ್ಕೆ ಕನೆಕ್ಟ್ ಆಗುವಂತೆ ಇನ್ನೇನನ್ನೋ ಕೇಳುವುದಿಲ್ಲ ಎಂದು ಮಕ್ಕಳಿಗೆ ಮೊದಲೇ ಗೊತ್ತಾಗಿರುತ್ತದೆ ಮತ್ತು ಅದಕ್ಕೆ ತಮ್ಮ ಮೈಂಡ್‌ಸೆಟ್ ಮಾಡಿಕೊಂಡು ಬಿಟ್ಟಿರುತ್ತವೆ!

ಗುಟ್ಟಿಗೆ ಕಾರಣಗಳು
ಸ್ಕೂಲಿನಲ್ಲಿ ನಡೆಯುವ ಎಷ್ಟೋ ವಿಷಯಗಳನ್ನು ಮಕ್ಕಳು ಮನೆಯಲ್ಲಿ ಹಂಚಿಕೊಳ್ಳದೇ ಇರುವುದಕ್ಕೆ ಸಾಕಷ್ಟು ಕಾರಣಗಳಿರುತ್ತವೆ.
* ನಿಮ್ಮ ಬಳಿ ಎಲ್ಲವನ್ನೂ ಹೇಳಿದರೆ ನೀವು ಬಂದು ಸ್ಕೂಲಿನಲ್ಲಿ ವಿಚಾರಿಸುತ್ತೀರಿ, ನಡೆದು ಹೋಗಿ ಮರೆತು ಬಿಡುವಂತಹ ಘಟನೆಗಳೂ ಸುಮ್ಮನೆ ರಾಡಿಯಾಗುತ್ತವೆ ಎಂದೂ ಮಕ್ಕಳು ಯೋಚಿಸಬಹುದು.
* ‘ನಮ್ಮ ಮಗು ತಪ್ಪು ಮಾಡಿಲ್ಲ, ಆದರೂ ನೀವು ಅದು ಹೇಗೆ ನನ್ನ ಮಗುವೇ ತಪ್ಪು ಮಾಡಿದೆ ಎಂದು ಡಿಸೈಡ್ ಮಾಡಿ ಪನಿಶ್ಮೆಂಟ್ ಕೊಟ್ಟಿರಿ?’ ಎಂದು ಸ್ಕೂಲಿನ ಮುಖ್ಯ ಶಿಕ್ಷಕರೆದುರು ಜೋರು ದನಿಯಲ್ಲಿ ವಿಚಾರಿಸಿ, ಟೀಚರ‍್ರೂ ತಮ್ಮ ತಪ್ಪಾಯಿತೆಂದು ಒಪ್ಪಿಕೊಂಡು ಬಿಡುತ್ತಾರೆ. ನೀವು ಸ್ಕೂಲಿನಿಂದ ಈಚೆ ಬರುತ್ತೀರಿ. ಆದರೆ ಇದೇ ಟೀಚರ್ ಜೊತೆಗೆ ವರ್ಷದ ಇನ್ನುಳಿದ ದಿನ ಪೂರ್ತಿ ಸ್ಕೂಲಿನಲ್ಲಿ ಇರಬೇಕಾದದ್ದು ತಾನೊಬ್ಬನೇ. ತನ್ನ ಅಪ್ಪ ಅಮ್ಮ ಜೊತೆಗಿರುವುದಿಲ್ಲ ಎಂದು ದೂರಾಲೋಚನೆ ಮಾಡಿದ ಮಕ್ಕಳೂ ಕೆಲವು ಗುಟ್ಟುಗಳನ್ನು ತಮ್ಮೊಳಗೆ ಇಟ್ಟುಕೊಳ್ಳುತ್ತವೆ.
* ಮನೆಯಲ್ಲಿದ್ದಾಗ ನಿಮ್ಮ ಪ್ರತಿಯೊಂದು ನಡೆ ನುಡಿಯನ್ನೂ ಸೂಕ್ಷ್ಮವಾಗಿ ಗಮನಿಸಿರುವ ಕೆಲವು ಮಕ್ಕಳು, ನಿಮ್ಮ ತಲೆಬಿಸಿಗಳನ್ನು ಅರ್ಥ ಮಾಡಿಕೊಂಡಿರುತ್ತವೆ. ಈಗಾಗಲೇ ಅಪ್ಪ ಅಮ್ಮ ಇಬ್ಬರೂ ತುಂಬಾ ತಲೆಬಿಸಿ ಮಾಡಿಕೊಳ್ಳುತ್ತಿರುತ್ತಾರೆ, ಇನ್ನು ಇದನ್ನೆಲ್ಲ ಅವರ ಹತ್ತಿರ ಹೇಳಿ ಅವರ ತಲೆಬಿಸಿಯನ್ನು ಇನ್ನಷ್ಟು ಹೆಚ್ಚು ಮಾಡುವುದೇಕೆ ಎಂದುಕೊಂಡೂ ಸ್ವಲ್ಪ ಪ್ರಬುದ್ಧವಾಗಿ ಯೋಚಿಸುವ ಮಕ್ಕಳು ನಿಮ್ಮ ಹತ್ತಿರ ಎಲ್ಲವನ್ನೂ ಹೇಳಿಕೊಳ್ಳುವುದಿಲ್ಲ.
* ಈಗ ಓದುತ್ತಿರುವ ಸ್ಕೂಲಿಗೆ ಸೇರಿಸುವಾಗ ನೀವು ಎಷ್ಟು ಕಷ್ಟ ಪಟ್ಟಿದ್ದೀರಿ ಎನ್ನುವುದು ಮಗುವಿಗೆ ಗೊತ್ತಿರುತ್ತದೆ. ಒಂದೊಮ್ಮೆ ಈಗ ನಾನು ಹೇಳಿದರೂ ಇವರು ನನ್ನನ್ನು ಈ ಸ್ಕೂಲು ಬಿಡಿಸಿ ಬೇರೆ ಸ್ಕೂಲಿಗೆ ಸೇರಿಸುವುದಿಲ್ಲ ಎನ್ನುವುದು ಗೊತ್ತಿದ್ದೂ ಮಕ್ಕಳು ಸ್ಕೂಲಿನಲ್ಲಿ ತಮಗೆ ಅವಮಾನ, ನೋವು, ಬೇಸರ, ಕಣ್ಣೀರು ತರಿಸಿದ ಯಾವುದೇ ಘಟನೆಗಳ ಬಗ್ಗೆ ನಿಮ್ಮೊಂದಿಗೆ ಹೇಳಿಕೊಳ್ಳುವುದಿಲ್ಲ.
* ಸ್ಕೂಲಿನಲ್ಲಿ ತಪ್ಪು ಮಾಡದೇ ಶಿಕ್ಷೆ ಅನುಭವಿಸಿದ್ದಾಯಿತು. ಇನ್ನು ಇದನ್ನು ಮನೆಯಲ್ಲಿ ಹೇಳಿದರೆ ಅವರೂ ನನ್ನನ್ನು ನಂಬುವುದಿಲ್ಲ. ಅಲ್ಲಿ ಇನ್ನೊಮ್ಮೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಅದರ ಬದಲು ಹೇಳದೇ ಇರುವುದೇ ಒಳ್ಳೆಯದು ಎಂದುಕೊಂಡೂ ಮಕ್ಕಳು ಸ್ಕೂಲಿನಿಂದ ಮನೆ ತಲುಪುವ ಹೊತ್ತಿನಲ್ಲಿ ಮಾತಿಗೆ ಫಿಲ್ಟರ್ ಹಾಕಿಕೊಂಡು ಬಿಡುತ್ತವೆ.

ಗುಟ್ಟುಳಿಸಿಕೊಳ್ಳದೇ ಇರಲು...
ನಿಮ್ಮದೇ ಮಕ್ಕಳು. ನಿಮ್ಮ ಹತ್ತಿರವೂ ಅವು ತಮ್ಮ ಮನಸ್ಸಿನಲ್ಲಿರುವುದನ್ನೆಲ್ಲ ಹಂಚಿಕೊಳ್ಳದೇ ಇನ್ನ್ಯಾರ ಹತ್ತಿರ ಹಂಚಿಕೊಳ್ಳಬೇಕು? ಹೀಗಿರುವಾಗ ನಿಮ್ಮಿಂದಲೂ ಮಕ್ಕಳು ಸ್ಕೂಲಿನ ಕೆಲವು ವಿಷಯಗಳನ್ನು ಮುಚ್ಚಿಡುತ್ತವೆ ಎಂದರೆ ಮಕ್ಕಳ ಮನಸ್ಸು ಹೇಗೆಲ್ಲ ಕೆಲಸ ಮಾಡುತ್ತಿರಬಹುದು ಯೋಚಿಸಿ. ಆದ್ದರಿಂದ ಮೊದಲಿಗೆ ಮಕ್ಕಳಲ್ಲಿ ನಿಮ್ಮ ಬಗ್ಗೆ ಒಂದು ಗಟ್ಟಿಯಾದ ನಂಬಿಕೆ ಬರುವಂತೆ ನಡೆದುಕೊಳ್ಳಿ. ಜೊತೆಗೆ ತನ್ನ ಸ್ಕೂಲಿಗೆ ಸಂಬಂಧಪಟ್ಟ ಯಾವುದೇ ವಿಷಯವನ್ನು ನಾನು ನಿನಗೆ ಗೊತ್ತಿಲ್ಲದೇ ಯಾರೊಂದಿಗೂ ಮಾತನಾಡುವುದಿಲ್ಲ, ಮಾತನಾಡುವುದೇ ಆದರೆ ನಿನ್ನೊಂದಿಗೆ ಚರ್ಚಿಸಿ, ನಿನಗೆ ಹೇಗೆ ಬೇಕೋ ಹಾಗೇ ಮಾತನಾಡುತ್ತೇನೆ ಎನ್ನುವುದನ್ನು ಮಕ್ಕಳಿಗೆ ಅರ್ಥ ಮಾಡಿಸಿ. ಆಗ ಮಕ್ಕಳು ನಿಮ್ಮನ್ನು ಪೂರ್ತಿಯಾಗಿ ನಂಬುತ್ತವೆ. ಮತ್ತು ಸ್ಕೂಲಿನಲ್ಲಿ ತನಗಾಗಿರುವ ಸಮಸ್ಯೆ ಬಗ್ಗೆ ಅವು ಮುಕ್ತವಾಗಿ ಹೇಳಿಕೊಂಡು, ತಮ್ಮ ಯೋಚನಾಮಟ್ಟಕ್ಕೆ ತಕ್ಕಂತೆ ಸ್ಕೂಲಿಗೆ ಬಂದು ನೀವೇನು ಮಾಡಬೇಕು, ಮಾಡಬಾರದು ಎನ್ನುವುದನ್ನೂ ನಿಮಗೆ ತಿಳಿಸುತ್ತವೆ. ಹಾಗೆಂದು ಇದೇ ಕೊನೆ ಎಂದುಕೊಳ್ಳಬೇಡಿ. ಬದಲಿಗೆ ಅದು ತನಗಾದ ಬೇಸರವನ್ನು ಹೇಳಿಕೊಂಡು ಮುಗಿದ ನಂತರ ಈಗ ನಿಮ್ಮ ಸ್ಕೂಲಿಗೆ ಬಂದು ನಾನೇನು ಕೇಳುತ್ತೇನೆ, ಕೇಳುವುದಿಲ್ಲ ಎನ್ನುವುದನ್ನು ತಿಳಿಸಿ, ನೀವು ಕೇಳಬೇಕೆಂದಿರುವ ವಿಷಯ ಮತ್ತು ರೀತಿಯ ಬಗ್ಗೆ ಮಗುವಿಗೆ ಕನ್ವಿನ್ಸ್ ಮಾಡಿ. ಆಗ ಮಗು ನೀವು ಹೇಳಿದ್ದನ್ನು ಒಪ್ಪಿಕೊಳ್ಳುತ್ತದೆ.
ಇದರ ಜೊತೆಗೆ ನೀವು ಸ್ಕೂಲಿನ ಇತರೆ ಮಕ್ಕಳೊಂದಿಗೆ, ಕೊನೇಪಕ್ಷ ನಿಮ್ಮ ಮಗು ಸದಾ ಬೆರೆಯುವ, ಸ್ನೇಹದಿಂದಿರುವ ಮಕ್ಕಳೊಂದಿಗೆ ಸ್ನೇಹದಿಂದಿರಿ. ನಿಮ್ಮ ಮಗುವಿನ ಅನುಪಸ್ಥಿತಿಯಲ್ಲಿ ಅವರ ಹತ್ತಿರ ಶಾಲೆ, ಶಾಲೆಯ ವಾತಾವರಣ, ಟೀಚರ‍್ರು ಇತ್ಯಾದಿಗಳ ಬಗ್ಗೆ ವಿಚಾರಿಸಿ. ಆದರೆ ‘ನಮ್ಮ ಪಾಪು ಹೇಗೆ? ಏನು ಮಾಡ್ತಾನೆ?’ ಎಂದು ತನಿಖೆ ಮಾಡುವ ರೀತಿಯಲ್ಲಿ ಪ್ರಶ್ನಿಸಬೇಡಿ. ಇದು ನಿಮ್ಮ ಮಗುವಿಗೆ ನನ್ನ ಪಪ್ಪ ಅಮ್ಮ ನನ್ನ ಬಗ್ಗೆ ಬೇರೆಯವರ ಹತ್ತಿರವೆಲ್ಲ ಕೇಳಿ ನಾನು ಹೇಗೆ ಎಂದು ಖಚಿತ ಪಡಿಸಿಕೊಳ್ಳುತ್ತಿದ್ದಾರೆ ಎಂದು ಸಿಟ್ಟಿಗೆ ಕಾರಣವಾಗಬಹುದು. ಇದೇ ರೀತಿ ಸ್ಕೂಲಿನೊಂದಿಗೆ ನಿರಂತರ ಸಂಪರ್ಕದಲ್ಲಿರಿ. ಮೀಟಿಂಗುಗಳನ್ನು ಹೊರತು ಪಡಿಸಿ ಕ್ಲಾಸ್ ಟೀಚರ್ ಜೊತೆಗೆ ಆಗಾಗ ಮಾತುಗಳ ವಿನಿಮಯ ಇರಲಿ.
ಮಗು ಸ್ಕೂಲಿನಿಂದ ಬಂದತಕ್ಷಣ ಪ್ರತೀದಿನ ಕೇಳುವ ಅದೇ ಸಿದ್ಧ ಪಡಿಸಿಟ್ಟುಕೊಂಡ ಪ್ರಶ್ನೆಗಳನ್ನೇ ಕೇಳಿ ಅವರಿಗೆ ರೂಢಿ ಮಾಡಬೇಡಿ. ಬದಲಿಗೆ ಆ ಕ್ಷಣಕ್ಕೆ ಮಗುವನ್ನು ಏನು ಕೇಳಬಹುದೆನ್ನಿಸುತ್ತದೋ ಅದನ್ನು ಕೇಳಿ. ಎಲ್ಲದಕ್ಕಿಂತ ಹೆಚ್ಚಾಗಿ ನೀವು ಆ ಹೊತ್ತಿನಲ್ಲಿ ಏನೇ ಕೆಲಸ ಮಾಡುತ್ತಿದ್ದರೂ ಅದನ್ನು ಬದಿಗಿಟ್ಟು ಮಗುವಿನೆಡೆಗೇ ಪೂರ್ತಿಯಾಗಿ ಗಮನ ಕೊಡಿ. ಪ್ರತಿನಿತ್ಯ ಸ್ಕೂಲಿನಿಂದ ಬಂದತಕ್ಷಣ ಮಗುವಿನ ಮುಖಭಾವ ಗಮನಿಸಿ. ಏನಾದರೂ ಸ್ವಲ್ಪ ಬದಲಾವಣೆಯಾಗಿದೆ, ಅದು ಏನೋ ಹೆಚ್ಚು ಕಡಿಮೆಯಾಗಿರುವುದರ ಪರಿಣಾಮ ಎಂದು ನಿಮ್ಮ ಮನಸ್ಸಿಗೆ ಅನ್ನಿಸಿದರೆ ನಿಧಾನವಾಗಿ ಮಗುವನ್ನು ಪ್ರೀತಿಯಿಂದಲೇ ಒಲಿಸಿಕೊಂಡು ಈ ಬಗ್ಗೆ ವಿಚಾರಿಸಿ.
ಕೊನೆಯದಾಗಿ ನಮ್ಮ ಕಷ್ಟಗಳೇನೇ ಇದ್ದರೂ ‘ನೀನು ನಮ್ಮ ಮಗು. ನಿನಗೆ ಏನೇ ತೊಂದರೆಯಾದರೂ ನಾವು ನಿನ್ನ ಜೊತೆಗಿದ್ದೇವೆ. ನೀನು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವುದಕ್ಕೆ ನಾವಿಬ್ಬರೂ ಬಿಡುವುದಿಲ್ಲ’ ಎನ್ನುವುದನ್ನು ಮಗುವಿಗೆ ಸ್ಪಷ್ಟವಾಗಿ ಅರ್ಥ ಮಾಡಿಸಿ. ಮತ್ತು ಮಗುವಿಗೆ ಸ್ಕೂಲಿಗೆ ಸಂಬಂಧಪಟ್ಟಂತೆ ತಾನೇನೇ ಹೇಳಿಕೊಂಡರೂ ಅಪ್ಪ ಅಮ್ಮ ಅದಕ್ಕೆ ಕೊಡಬಹುದಾದ ಪ್ರತಿಕ್ರಿಯೆಯನ್ನು ನನಗೆ ತಿಳಿಸಿಯೇ ಕೊಡುತ್ತಾರೆ ಎನ್ನುವ ನಂಬಿಕೆ ಬರುವಂತೆ ಮಾಡಿದರೆ, ಸ್ಕೂಲಿಗೆ ಸಂಬಂಧಪಟ್ಟಂತೆ ಮಕ್ಕಳಲ್ಲಿ ಯಾವ ಗುಟ್ಟೂ ಉಳಿಯುವುದಿಲ್ಲ.
('ವಿಜಯವಾಣಿ' ದಿನಪತ್ರಿಕೆಯ ’ಲಿಲಿತಾ’ ಪುರವಣಿಯಲ್ಲಿ ಪ್ರಕಟಿತ ಲೇಖನ)
-ಆರುಡೋ ಗಣೇಶ

ಕಾಮೆಂಟ್‌ಗಳು

  1. ಹೌದು ಮಿತ್ರ... ಪಾಪ ಮಕ್ಕಳು ಈ ರೀತಿ ಹೆದರಿಕೊಂಡು ಎಷ್ಟೋ ವಿಷಯಗಳನ್ನು ಮನೆಯಲ್ಲಿ ಹೇಳುವುದಿಲ್ಲ... ಕೆಲವು ವಿಷಯಗಳು ಪೇಪರ್-ಟಿವಿಯಲ್ಲಿ ಬಂದ ಮೇಲೆಯೇ ಪೋಷಕರಿಗೂ ಗೊತ್ತಾಗುವುದು ವಿಪರ್ಯಾಸ... ಮಕ್ಕಳಿಗೆ ಮನೆಯಲ್ಲಿ ಮುಕ್ತವಾಗಿ ಮಾತನಾಡುವ ವಾತಾವರಣ ನಿರ್ಮಾಣ ಮಾಡುವುದಷ್ಟೇ ಅಲ್ಲ, ತಪ್ಪು ಮಾಡಿಲ್ಲವೆಂದಾಗ ಪ್ರತಿಭಟಿಸುವ ಧೈರ್ಯವನ್ನೂ ನಾವು ಬೆಳೆಸಬೇಕಿದೆ.. ಅರ್ಥಪೂರ್ಣ ಲೇಖನ 😊

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆ ಕ್ಷಣದಲ್ಲಿ ಶರತ್‌ ಸಾವಿನೆದುರು ಅದೆಷ್ಟು ಅಸಹಾಯಕ!!

ಅವನು ಅಪ್ಪ ಹೇಳಿದ ಆ ಮಾತನ್ನು ಮರೆಯದೇ ಹೋಗಿದ್ದರೆ...

ಬೆಳಕಾದಳೇ ಅವಳು...?!