ಕಳೆದುಕೊಂಡಿದ್ದು ಒಳ್ಳೆಯದೇ ಆಯಿತು ಅನ್ನಿಸಿದ ಕ್ಷಣಗಳು!
‘ನಾನು ನನ್ನ ಬದುಕಿಗೆ ಅಂತಹ ಆಣೆ ಪ್ರಮಾಣಗಳನ್ನೇನೂ ಮಾಡಿರಲಿಲ್ಲ, ನಿನ್ನನ್ನು ಬಿಟ್ಟು ಜೀವಿಸುವ ಆಸೆಯೇ ನನಗಿರಲಿಲ್ಲ.
ನಿನಗೋಸ್ಕರ ನಾನು ಬೆಳದಿಂಗಳನ್ನು ರಾತ್ರಿಯಿಡೀ ಹೊಳೆಯುವಂತೆ ಕೇಳಿಕೊಂಡೆ, ಹಾಗೆಯೇ ಹೂಗಳ ಮೇಲೆ ಸುಗಂಧವನ್ನು ಸಿಂಪಡಿಸಿದೆ.
ನನ್ನ ಕನಸುಗಳನ್ನು ಹಿಡಿದಿಟ್ಟುಕೊಂಡಿದ್ದ ದಾರವೊಂದು ಯಾವಾಗ ತುಂಡಾಯಿತೋ ಗೊತ್ತೇ ಆಗಲಿಲ್ಲ, ನನ್ನ ಈ ಸುಂದರ ಕನಸಿನಿಂದ ನಾನೊಂದು ದಿನ ಎಚ್ಚೆತ್ತುಕೊಳ್ಳಬೇಕಾಗಬಹುದೆಂದು ಊಹಿಸಿಯೇ ಇರಲಿಲ್ಲ.
ಪ್ರತಿ ಸಂಜೆಯೂ ನಾನು ಮನೆಯನ್ನು ಅಲಂಕರಿಸುತ್ತಿದ್ದೆ ಹಾಗೂ ನೀನೂ ಬರಬಹುದೆನ್ನುವ ಬಹುದೊಡ್ಡ ನಿರೀಕ್ಷೆಯೊಂದಿಗೇ ಬೇರೆ ಅತಿಥಿಗಳನ್ನೂ ಆಹ್ವಾನಿಸುತ್ತಿದ್ದೆ.
ನೀನು ನನ್ನ ಹೊಸ್ತಿಲವರೆಗೆ ಬಂದು ಹಾಗೆಯೇ ಮರಳಿದೆ, ಇಂತಹ ಅತಿಥಿಯೊಬ್ಬರು ಬರಬಹುದೆನ್ನುವ ನಿರೀಕ್ಷೆಯನ್ನು ನಾನ್ಯಾವತ್ತೂ ಮಾಡಿರಲಿಲ್ಲ.’
‘ಐಸಾ ಕೋಯಿ ಜಿಂದಗಿ ಸೇ ವಾದಾ ತೋ ನಹೀ ತಾ...’ ಎನ್ನುವ ಗುಲ್ಜಾರ್ ಬರೆದ ಹಾಡನ್ನು ಕನ್ನಡದಲ್ಲಿ ಬರೆದರೆ ಹತ್ತತ್ತಿರ ಇದೇ ಅರ್ಥ ಬರಬಹುದೇನೋ. ಯಾಕೆ ಹೀಗೆ ಹೇಳಿದೆ ಎಂದರೆ, ನನಗೆ ಕನ್ನಡವೊಂದನ್ನು ಬಿಟ್ಟು ಬೇರೆ ಯಾವ ಭಾಷೆಯೂ ಅರ್ಥವಾಗುವುದಿಲ್ಲ. ನಿಜ ಹೇಳಬೇಕೆಂದರೆ ಗುಲ್ಜಾರ್ ಈ ಹಾಡು ಬರೆದ ಹಿಂದಿಯೂ ಕೂಡಾ ಈವರೆಗೆ ನನಗೆ ಪೂರ್ತಿಗೆ ಪೂರ್ತಿ ಅರ್ಥವಾಗಿಲ್ಲ.
ಆದರೂ ಗುಲ್ಜಾರ್ ಬರೆದು ರೂಪ್‌ಕುಮಾರ್ ರಾಥೋಡ್ ಹಾಡಿದ ಈ ಹಾಡು ನನ್ನನ್ನು ಕ್ಯಾಸೆಟ್ಟುಗಳ ಕಾಲದಲ್ಲಿ ಅದೆಷ್ಟು ಕಾಡಿ ಬಿಟ್ಟಿತ್ತೆಂದರೆ, ಯಾವಾಗೆಲ್ಲ ಟೇಪ್‌ರೆಕಾರ್ಡರ್ ಆನ್ ಮಾಡುತ್ತಿದ್ದೆನೋ ಆಗೆಲ್ಲ ಇದೇ ಕ್ಯಾಸೆಟ್ಟನ್ನು ತಿರುವಿಮುರುವಿ ಹಾಕಿಕೊಂಡು ಹಾಡಿನೊಂದಿಗೆ ಕಳೆದು ಹೋಗುತ್ತಿದ್ದೆ.
ಅದು ಹದಿನೇಳು ವರ್ಷದ ಹಿಂದಿನ ದಿನಗಳು.
ಆಗ ಡಿಗ್ರಿ ಓದುತ್ತಿದ್ದೆ. ಬದುಕು ಅನುಭವಿಸಿದ ಅವಮಾನ, ಕಷ್ಟಗಳೇ ಕಾರಣವಾಗಿ ಬರೀ ಓದುವುದು, ಬರೆಯುವುದು ಮತ್ತು ಇದರೊಂದಿಗೆ ಸಿಕ್ಕ ಸಿಕ್ಕ ಹಾಡುಗಳನ್ನೆಲ್ಲ ಕೇಳುವುದನ್ನೇ ನನ್ನ ಬದುಕಾಗಿಸಿಕೊಂಡಿದ್ದೆ. ಸ್ನೇಹಿತರು ಇದ್ದರಾದರೂ ಅವರೊಂದಿಗೆ ಬೆರೆಯುತ್ತಿದ್ದದ್ದು, ಮಾತನಾಡುತ್ತಿದ್ದದ್ದು ಕಡಿಮೆಯೇ. ಮನೆಯಲ್ಲಿ ನನ್ನ ರೂಮು ಸೇರಿಕೊಂಡು ಬಿಟ್ಟೆ ಎಂದರೆ ಅಣ್ಣ ನನಗೆ ಕೊಡಿಸಿದ ಆಗಿನ ಕಾಲಕ್ಕೆ ದುಬಾರಿಯಾಗಿದ್ದ ಡಬಲ್ ಕ್ಯಾಸೆಟ್ ಹಾಕುವ, ಚೆಂದದ ಸೌಂಡ್ ಎಫೆಕ್ಟ್ ಹೊಂದಿದ್ದ ಟೇಪ್ ರೆಕಾರ್ಡರ‍್ರು ಹಾಡುತ್ತಲೇ ಇರುತ್ತಿತ್ತು. ನಾನು ಎದ್ದಿದ್ದರೂ, ಕೆಲವೊಮ್ಮೆ ಮಲಗಿದ್ದರೂ ಅದು ನನಗಷ್ಟೇ ಹಾಡುತ್ತಿರುವ ಜೋಗುಳದಂತೆ... ಇಂತಹ ದಿನಗಳಲ್ಲೇ ಗುಲ್ಜಾರ್ ಸಾಹಿತ್ಯ ಬರೆದು, ಸಂಗೀತ ಕ್ಷೇತ್ರದ ದಿಗ್ಗಜ ಉಸ್ತಾದ್ ಅಮ್ಜದ್ ಆಲಿ ಖಾನ್ ಸಂಗೀತ ನೀಡಿದ, ಆಗಿನ ಕಾಲಕ್ಕೆ ಅಪರೂಪದ ಕಂಠ ಹೊಂದಿದ್ದ ರೂಪ್‌ಕುಮಾರ್ ರಾಥೋಡ್ ಮತ್ತು ಸಾಧನಾ ಸರ್ಗಮ್ ಹಾಡಿರುವ ‘ವಾದಾ’ ಎನ್ನುವ ಹೆಸರಿನ ಆಡಿಯೋ ಆಲ್ಬಂ ಬಿಡುಗಡೆಗೊಂಡಿತ್ತು.
ನನಗೆ ಈ ಸಂಗೀತದ ಹುಚ್ಚು ಹಿಡಿಸಿದ್ದು ಕೂಡಾ ನನ್ನ ಅಣ್ಣನೇ. ಅವನಿಂದಾಗಿಯೇ ನಾನು ಕನ್ನಡದೊಂದಿಗೆ ಬೇರೆ ಬೇರೆ ಭಾಷೆಯ ಹಾಡುಗಳನ್ನೂ ಕೇಳುತ್ತಿದ್ದೆ. ಅಣ್ಣನಿಂದಾಗಿಯೇ ನನಗೆ ಎ.ಆರ್.ರೆಹಮಾನ್ ಪರಿಚಯವಾದ. ಅವನು ಸಂಗೀತ ನೀಡಿದ ಚಿತ್ರಗಳಲ್ಲಿ ‘ಕಾದಲನ್’ ತಮಿಳು ಸಿನಿಮಾದ ಕ್ಯಾಸೆಟ್ ನಾನು ಖರೀದಿಸಿದ ಎ.ಆರ್.ರೆಹಮಾನ್‌ನ ಮೊದಲ ಕ್ಯಾಸೆಟ್ಟಾಗಿತ್ತು. ಸ್ನೇಹಿತ ಸುಭಾಷ್ ಇಂಗ್ಲೀಷ್ ಪಾಪ್ ಸಂಗೀತವನ್ನು ಪರಿಚಯಿಸಿದ... ಹೀಗೆ ಕೋಡೂರಿನಲ್ಲಿ ನನ್ನ ಕೈಗೆಟುಕಬಹುದಾಗಿದ್ದ ಅದ್ಯಾವುದೇ ಭಾಷೆಯ ಸಂಗೀತವನ್ನಾದರೂ ಕೇಳುತ್ತಿದ್ದೆ.
ನನ್ನ ಮನದ ಬೇಸರ, ಸಂಕಟವನ್ನೆಲ್ಲ ಮರೆತು ಬಿಡಬೇಕೆನ್ನುವಂತೆ ಇಷ್ಟೆಲ್ಲ ಸಂಗೀತವನ್ನು ಕೇಳುತ್ತಿದ್ದೆನಾದರೂ, ನಮ್ಮ ಕನ್ನಡದ ಹಾಡುಗಳು ಮಾತ್ರ ನನಗೆ ಅರ್ಥವಾಗುತ್ತಿದ್ದವು ಬಿಟ್ಟರೆ, ಇನ್ಯಾವುದೇ ಭಾಷೆಯ ಹಾಡುಗಳು ನನಗೆ ಅರ್ಥವಾಗುತ್ತಿರಲಿಲ್ಲ. ಆದರೂ ಕೇಳುತ್ತಿದ್ದೆ. ಅವರೇನು ಹಾಡುತ್ತಾರೋ, ಅದೇನು ಅರ್ಥವೋ... ನನಗೆ ಆ ಗಾಯಕರ ಕಂಠ, ಜೊತೆಗೆ ಸಂಗೀತ ಇಷ್ಟವಾಗುತ್ತಿತ್ತು. ಇದನ್ನು ಕೇಳುತ್ತಲೇ ಈ ಹಾಡು ಬರೆದ ಸಾಹಿತಿ ಯಾವ ಭಾವದಲ್ಲಿ ಬರೆದಿರಬಹುದು ಎಂದು ನನ್ನಷ್ಟಕ್ಕೆ ನಾನೇನೋ ಕಲ್ಪಿಸಿಕೊಂಡು ಅರ್ಥ ಮಾಡಿಕೊಳ್ಳುತ್ತಿದ್ದೆ.
ಸಂಗೀತ ಮತ್ತು ಗಾಯಕರ ಕಂಠದ ಶಕ್ತಿಯೇ ಅಂತಹದ್ದು. ಇವರು ಮನಸ್ಸು ಮಾಡಿದರೆ ಅದ್ಯಾವುದೇ ಭಾಷೆಯ ಸಾಹಿತ್ಯವನ್ನು ಯಾರಿಗೆ ಬೇಕಾದರೂ ಇಷ್ಟವಾಗಿಸಬಲ್ಲರು ಮತ್ತು ಅರ್ಥ ಮಾಡಿಸಬಲ್ಲರು ಕೂಡಾ. ಬೇರೆಯವರ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ನನ್ನ ಇಷ್ಟು ವರ್ಷದ ಬದುಕನ್ನೇ ಒಮ್ಮೆ ನೋಡಿಕೊಂಡರೆ, ನಾನು ಕೇಳದ ಸಂಗೀತವೇ ಇಲ್ಲವೇನೋ ಅನ್ನಿಸುತ್ತದೆ. ಕನ್ನಡದ ಎಲ್ಲಾ ಬಗೆಯ ಸಾಹಿತ್ಯ, ಸಂಗೀತವನ್ನು ಎಷ್ಟು ಕೇಳುತ್ತೇನೋ, ಇಷ್ಟ ಪಡುತ್ತೇನೋ ಅಷ್ಟೇ ನನಗೆ ನೈಜೀರಿಯನ್ ಸಂಗೀತ ಇಷ್ಟವಾಗುತ್ತದೆ. ಇಂಗ್ಲೆಂಡಿನ ಪಿಲ್ ಕಾಲಿನ್ಸ್, ಅಮೇರಿಕೆಯ ಮಡೋನಾ, ನೈಜೀರಿಯಾದ ಡಾ.ಆಲ್ಬನ್‌ರನ್ನು ಕೇಳಿಸಿಕೊಳ್ಳುತ್ತಿರುತ್ತೇನೆ. ಮೊದಲೇ ಹೇಳಿದ್ದೇನಲ್ಲ, ನನಗೆ ಕನ್ನಡ ಬಿಟ್ಟರೆ ಬೇರೆ ಯಾವ ಭಾಷೆಯೂ ಅರ್ಥವಾಗುವುದಿಲ್ಲ. ಆದರೂ ಇವರು ಬದುಕಿನ ಅದ್ಯಾವುದೋ ಭಾವವನ್ನು ಎದೆಗೆ ತಾಕುವಂತೆ ಸಾಹಿತ್ಯವನ್ನಾಗಿಸಿದ್ದಾರೆ ಮತ್ತು ಅವರು ಹೀಗೆ ಬರೆದ ಸಾಹಿತ್ಯ ನನ್ನ ಬದುಕಿನದ್ದೇ ಇರಬಹುದೇನೋ ಎಂದೆಲ್ಲ ಅನ್ನಿಸಿ, ನನಗೆ ಯಾವುದೇ ಬಗೆಯ ಹಾಡುಗಳೂ ಇಷ್ಟವಾಗುತ್ತವೆಯೆಂದರೆ ಒನ್ಸ್ ಎಗೇನ್ ಅದಕ್ಕೆ ಕಾರಣವಾಗುವುದು ಸಂಗೀತ ಮತ್ತು ಗಾಯಕರ ಕಂಠ.
ಹೌದು, ನನ್ನ ಇಷ್ಟು ವರ್ಷದ ಬದುಕಿನಲ್ಲಿ, ಅದೂ ಇವತ್ತಿಗೂ ಕೂಡಾ ನಾನು ಹೆಚ್ಚಿನ ಹಾಡುಗಳ ಅರ್ಥ ತಿಳಿಯದೇ ದಿನವಿಡೀ ಕಂಪ್ಯೂಟರ‌್ರಿನಲ್ಲಿ ತಿರುವಿ ತಿರುವಿ ಹಾಕಿಕೊಂಡು ಕೇಳಿದ್ದಿದೆ. ಹೀಗೆ ಕೇಳುತ್ತೇನಲ್ಲ, ಆಗೆಲ್ಲ ನನ್ನ ಬದುಕಿನ ಯಾರೊಂದಿಗೂ ಹೇಳಿಕೊಳ್ಳಲಾಗದ ಸಂಕಟ, ಬೇಸರ, ಅವಮಾನಗಳನ್ನೆಲ್ಲ ತೊಳೆದುಕೊಂಡು ಬಿಟ್ಟಿರುತ್ತೇನೆ. ಮತ್ತು ಆ ಹಾಡಿನಿಂದ ಎದ್ದು ಹೋಗುವಷ್ಟರಲ್ಲಿ ಮನಸ್ಸು ಮೊದಲಿನಂತೆ ಮಗುವಾಗಿರುತ್ತದೆ. ಆಗಷ್ಟೇ ಮೊದಲ ಹೆಜ್ಜೆಯೊಂದನ್ನು ಇಡಲು ತವಕಿಸುತ್ತಿರುತ್ತದೆ.
ಹೀಗೇ ಸುಮಾರು ಹದಿನೇಳು ವರ್ಷಗಳ ಹಿಂದೆ ನನ್ನ ಕೈ ಹಿಡಿದು ಜಗ್ಗಿ ನನಗೆ ಹತ್ತಿರವಾಗಿದ್ದು ಗುಲ್ಜಾರ್ ಬರೆದ ಹಾಡುಗಳುಳ್ಳ ‘ವಾದಾ’ ಹಾಡಿನ ಆಲ್ಬಂ. ಶಿವಮೊಗ್ಗಕ್ಕೆ ಯಾವುದೋ ಕೆಲಸಕ್ಕೆಂದು ಹೋದವನಿಗೆ ಅದೊಂದು ಅಂಗಡಿಯಲ್ಲಿ ಈ ಕ್ಯಾಸೆಟ್ ಕಾಣಿಸಿತ್ತು. ಅಷ್ಟು ಹೊತ್ತಿಗಾಗಲೇ ‘ಮಾಚಿಸ್’ ಸಿನಿಮಾದ ಹಾಡುಗಳಿಂದ ನನಗೆ ಆಪ್ತವಾಗಿದ್ದ ಗುಲ್ಜಾರ್ ಹಾಡು ಬರೆದಿದ್ದಾರೆಂದ ಮೇಲೆ ಚೆನ್ನಾಗಿ ಇರುತ್ತದೆ ಎಂದುಕೊಂಡವನು, ಸಂಗೀತ ನಿರ್ದೇಶಕರು ಯಾರು ಎಂದು ನೋಡಿದೆ. ಉಸ್ತಾದ್ ಅಮ್ಜದ್ ಆಲೀಖಾನ್! ಇವರ ಸರೋದ್ ನನಗೆ ಅಷ್ಟು ಹೊತ್ತಿಗಾಗಲೇ ಆಪ್ತವಾಗಿತ್ತು. ಕೇವಲ ಸರೋದ್‌ನ್ನು ಮಾತ್ರವೇ ಕೇಳಿದ್ದ ನನಗೆ ಇವರ ಸರೋದ್ ಗುಲ್ಜಾರ್ ಸಾಹಿತ್ಯಕ್ಕೆ ಜೊತೆಯಾದರೆ ಹೇಗಿರಬಹುದೆಂದು ಯೋಚಿಸಿಯೇ ರೋಮಾಂಚಿತನಾಗಿ ತಂದ ವಾದಾ ಕ್ಯಾಸೆಟ್ಟು ನನ್ನ ಕ್ಯಾಸೆಟ್ಟುಗಳ ಸಂಗ್ರಹಕ್ಕೆ ಸೇರಿಕೊಂಡಿತ್ತು.
ನಾನೇನು ಅಂದುಕೊಂಡಿದ್ದೆ ಅದು ಸುಳ್ಳಾಗಿರಲಿಲ್ಲ. ವಾದಾ ಆಲ್ಬಂನ ಒಂಭತ್ತು ಹಾಡುಗಳೂ ಒಂದಕ್ಕಿಂತ ಒಂದು ಕೇಳಲು ಹಿತವಾಗಿದ್ದವು. ಉಸ್ತಾದ್ ಅಮ್ಜದ್ ಆಲೀಖಾನ್‌ರ ಸಂಗೀತ ಮತ್ತು ರೂಪ್‌ಕುಮಾರ್ ರಾಥೋಡ್, ಸಾಧನಾ ಸರ್ಗಮ್‌ರ ಕಂಠ ಗುಲ್ಜಾರ್ ಬರೆದ ಭಾವವನ್ನು ಅದೆಷ್ಟು ಆಪ್ತವಾಗಿ ನನ್ನ ಹೃದಯಕ್ಕೆ ದಾಟಿಸಿಬಿಟ್ಟಿತ್ತೆಂದರೆ, ಕೆಲವು ತಿಂಗಳುಗಳ ಕಾಲ ನಾನು ವಾದಾ ಹಾಡುಗಳನ್ನು ಬಿಟ್ಟು ಬೇರೆ ಹಾಡು ಕೇಳಲಿಕ್ಕಾಗದೇ ಹೋಯಿತು. ಇದರಲ್ಲಿ ನನಗೆ ತುಂಬಾ ಇಷ್ಟವಾಗಿದ್ದು ‘ಐಸಾ ಕೋಯಿ ಜಿಂದಗಿ ಸೇ ವಾದಾ ತೋ ನಹೀ ತಾ...’ ಎಂದು ಆರಂಭವಾಗುವ ಹಾಡು. ಈ ಹಾಡು ಅವನ ವಿರಹವನ್ನು ಹೇಳುತ್ತಿದೆ ಎಂದಷ್ಟೇ ನನಗೆ ಗೊತ್ತಾಗುತ್ತಿತ್ತು ಬಿಟ್ಟರೆ, ಇಡೀ ಹಾಡಿನ ಅರ್ಥ ನನಗೆ ಅವತ್ತು ಅಷ್ಟು ಬಾರಿ ಕೇಳಿದರೂ ತಿಳಿದಿರಲಿಲ್ಲ.
ಇಷ್ಟೆಲ್ಲ ಕಾಡುತ್ತಿದ್ದ ಹಾಡುಗಳು ನನ್ನಿಂದ ದೂರವಾಗಿದ್ದು ಈ ಬೆಂಗಳೂರಿನ ಬಿಸಿ ಬದುಕಿನಲ್ಲಿ. ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದ ನನಗೇ ಇರಲಿಕ್ಕೊಂದು ಸರಿಯಾದ ವ್ಯವಸ್ಥೆ ಇರಲಿಲ್ಲ. ಇನ್ನು ಟೇಪ್‌ರೆಕಾರ್ಡರ್, ಕ್ಯಾಸೆಟ್ಟುಗಳನ್ನೆಲ್ಲ ಹೇಗೆ ತಂದು ನನ್ನ ಜೊತೆ ಇಟ್ಟುಕೊಳ್ಳಲಿ? ಬೆಂಗಳೂರಿನಿಂದ ಕೋಡೂರಿಗೆ ಹೋದವನು, ನನ್ನ ಅಕ್ಕ ಪ್ರತಿಮಾ ಜತನವಾಗಿ ಧೂಳು, ಚಳಿಯಿಂದೆಲ್ಲ ಏನೂ ಆಗದಂತೆ ಕಾಪಾಡಿರುತ್ತಿದ್ದ ನನ್ನ ಅದೇ ಟೇಪ್‌ರೆಕಾರ್ಡರ‍್ರಿನಲ್ಲಿ ಊರಿನಲ್ಲಿದ್ದಷ್ಟು ದಿನ ನನ್ನಿಷ್ಟದ ಹಾಡುಗಳನ್ನು ಕೇಳಿಕೊಂಡು ಬರುತ್ತಿದ್ದೆ. ಆದರೂ ಊರಿಗೆ ಹೋದಾಗ ಪಪ್ಪ, ಅಮ್ಮ, ಅಕ್ಕಂದಿರೊಂದಿಗೆ ಮಾತನಾಡುವುದು ಸಾಕಷ್ಟು ಇರುತ್ತಿದ್ದಿದ್ದರಿಂದ ಹಾಡು ಕೇಳುವ ಏಕಾಂತವೂ ಸಿಕ್ಕುತ್ತಿರಲಿಲ್ಲ. ಆ ಫ್ರೆಂಡ್ ರೂಮು, ಈ ಫ್ರೆಂಡ್ ರೂಮು ಎಂದೆಲ್ಲ ಅಲೆದಾಡಿ ಕೊನೆಗೆ ನನ್ನ ಅಣ್ಣನ ಮನೆಗೆ ಶಿಫ್ಟ್ ಆದ ಕೆಲವೇ ದಿನಕ್ಕೆ ಮಾಡಿದ ಮೊದಲ ಕೆಲಸವೆಂದರೆ, ಊರಿನಲ್ಲಿದ್ದ ಟೇಪ್‌ರೆಕಾರ್ಡರ‍್ರನ್ನು ಬೆಂಗಳೂರಿಗೆ ತಂದಿದ್ದು; ಜೊತೆಗೆ ಒಂದಿಷ್ಟು ಕ್ಯಾಸೆಟ್ಟುಗಳನ್ನು ಕೂಡಾ. ಇಲ್ಲಿ ಸಿಕ್ಕುತ್ತಿದ್ದ ಬಿಡುವಿನಲ್ಲಿ ಆಗಾಗ ಹಾಡು ಕೇಳುತ್ತಿದ್ದದ್ದು ನಿಜವಾದರೂ, ಮೊದಲಿನಷ್ಟು ಏಕಾಂತ ಸಿಕ್ಕದೇ ಸಂತೆಯೊಳಗೆ ಕುಳಿತು ಹಾಡು ಕೇಳುವಂತಾಗುತ್ತಿತ್ತು. ಇದ್ಯಾಕೋ ಮೊದಲಿನ ಹಿತ ತರುವುದಿಲ್ಲ ಎಂದು ಟೇಪ್‌ರೆಕಾರ್ಡರ‍್ರಿನಿಂದ ದೂರವುಳಿದವನು ಮತ್ತೆ ಸಂಗೀತವನ್ನು ಹತ್ತಿರಕ್ಕೆಳೆದುಕೊಂಡಿದ್ದು, ಕಂಪ್ಯೂಟರ‍್ರಿನಲ್ಲಿ ನಾನೇ ಕುಳಿತು ಕೆಲಸ ಮಾಡಲಾರಂಭಿಸಿದಾಗ.
ಅಷ್ಟು ಹೊತ್ತಿಗೆ ಕ್ಯಾಸೆಟ್ಟುಗಳ ಕಾಲ ಮುಗಿದು ಹೋಗಿ, ಸಿಡಿಗಳು ಬಂದಿದ್ದವು. ಸಿಡಿ ತರುವುದು, ಕಂಪ್ಯೂಟರ‍್ರಿನಲ್ಲಿ ಹಾಕಿಕೊಂಡು ಕೇಳುತ್ತಾ ಕೆಲಸ ಮಾಡುವುದು ಅದೆಷ್ಟು ಅಭ್ಯಾಸವಾಗಿಬಿಟ್ಟಿತೆಂದರೆ, ಕಂಪ್ಯೂಟರ್ ಆನ್ ಮಾಡಿದ ನಾನು ಇವತ್ತಿಗೂ ಮೊದಲು ವಿಎಲ್‌ಸಿ ಮೀಡಿಯಾ ಪ್ಲೇಯರ‍್ರಿನಲ್ಲಿ ಒಟ್ಟಿಕೊಂಡಿರುವ ಹಾಡೊಂದನ್ನು ಮೊದಲು ಪ್ಲೇ ಮಾಡಿ, ನಂತರ ನನ್ನ ಕೆಲಸ ಆರಂಭಿಸುತ್ತೇನೆ. ಹೀಗೆ ಸಂಗೀತವನ್ನು ಮತ್ತೆ ಬದುಕಿಗೆಳೆದುಕೊಂಡಿದ್ದು ನಿಜವಾದರೂ, ಅದ್ಯಾಕೋ ಈ ವಾದಾ ಆಲ್ಬಂ ನನ್ನಿಂದ ದೂರವೇ ಉಳಿದಿತ್ತು. ಬಹುಶಃ ಹಾಗೇ ನನ್ನ ನೆನಪುಗಳಾಚೆಗೇ ಇದ್ದು, ಒಂದು ದಿನ ಮುಗಿದೂ ಹೋಗುತ್ತಿತ್ತೇನೋ.
ಮೊನ್ನೆ ಇದ್ದಕ್ಕಿದ್ದಂತೆ ನನ್ನ ಕಂಪ್ಯೂಟರ‍್ರಿನ ಹಾರ್ಡ್ ಡಿಸ್ಕ್ ಕ್ರ‍್ಯಾಶಾಗಿ ಅದರಲ್ಲಿದ್ದ ಎಲ್ಲಾ ಡಾಟಾಗಳೂ ನನ್ನ ಕೈ ತಪ್ಪಿ ಹೋದವು. ಹೀಗೆ ಕೈ ತಪ್ಪಿ ಹೋದ ನನ್ನ ಅಮೂಲ್ಯ ಆಸ್ತಿಗಳಲ್ಲಿ ನಾನು ಸಂಗ್ರಹಿಸಿಟ್ಟುಕೊಂಡು, ದಿನವಿಡೀ ಕೇಳುತ್ತಿದ್ದ ಸುಮಾರು ಒಂದು ಸಾವಿರ ಹಾಡುಗಳ ಸಂಗ್ರಹವೂ ಇತ್ತು. ಹೋದದ್ದು ಹೋಯಿತು, ಅದಕ್ಕಾಗಿ ಕೊರಗುತ್ತಾ ಕುಳಿತುಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದುಕೊಂಡವನು ಹೊಸ ಹಾರ್ಡ್ ಡಿಸ್ಕ್ ಹಾಕಿಸಿಕೊಂಡು, ಸಧ್ಯಕ್ಕೆ ಯುಟ್ಯೂಬಿನಲ್ಲಿರುವ ಆಡಿಯೋ ಜ್ಯೂಕ್ ಬಾಕ್ಸಿನ ಟ್ರ‍್ಯಾಕುಗಳನ್ನು ಕೇಳೋಣವೆಂದುಕೊಂಡು ಒಂದಿಷ್ಟು ಹಾಡುಗಳನ್ನು ಹುಡುಕುವಾಗ ಗುಲ್ಜಾರ್‌ರ ನೂರು ಹಾಡುಗಳನ್ನುಳ್ಳ ಒಂದು ಜ್ಯೂಕ್ ಬಾಕ್ಸ್ ಕೂಡಾ ಸಿಕ್ಕಿತು. ಅದನ್ನು ಕೇಳುತ್ತಿದ್ದಾಗ ಮಧ್ಯದಲ್ಲಿ ಕೇಳಿಸಿದ್ದು ‘ಐಸಾ ಕೋಯಿ ಜಿಂದಗಿ ಸೇ ವಾದಾ ತೋ ನಹೀ ತಾ...’ ಆ ಕ್ಷಣವೇ ನೆನಪು ನನ್ನ ಬದುಕಿನ ಆ ದಿನಗಳೆಡೆಗೆ ಓಡಿಬಿಟ್ಟಿತು. ವಾದಾದ ಹಾಡುಗಳು ಅದೆಷ್ಟೊಂದು ಉತ್ಸಾಹ ತುಂಬುತ್ತಿದ್ದವು, ಅದನ್ನು ಈಗ ಕೇಳಿದರೆ ಮನಸ್ಸು ಮತ್ತೆ ಮೊದಲಿನ ಹಾಗೇ ರೆಕ್ಕೆ ಮೂಡಿಸಿಕೊಂಡು, ಹೊಸ ಕನಸುಗಳಿಗಾಗಿ ಹಾರುವಂತಾದರೆ... ಎಂದೆಲ್ಲ ಅಂದುಕೊಂಡವನೇ ಯುಟ್ಯೂಬಿನಲ್ಲಿ ಹುಡುಕಿದರೆ ವಾದಾ ಆಲ್ಬಂನ ಒಂಭತ್ತು ಹಾಡುಗಳೂ ಸಿಕ್ಕವು.
ಕಳೆದುಕೊಂಡಿದ್ದನ್ನು ಹುಡುಕಲು ಹೋದವನಿಗೆ ಕಳೆದುಕೊಂಡಿದ್ದು ಸಿಕ್ಕದೇ ಹೋದರೂ, ಅದಕ್ಕಿಂತ ಅಮೂಲ್ಯವಾದ ವಸ್ತುವೊಂದು ಸಿಕ್ಕರೆ ಹೇಗಿರುತ್ತದೋ ಅಂತಹದ್ದೇ ಸ್ಥಿತಿಯಲ್ಲಿ ನಾನಿದ್ದೇನೆ. ಈಗ ಮತ್ತೆ ಮತ್ತೆ ನನ್ನ ಕಂಪ್ಯೂಟರ‍್ರಿನಲ್ಲಿ ಐಸಾ ಕೋಯಿ ಜಿಂದಗಿ ಸೇ ಹಾಡು ಕೇಳಿ ಬರುತ್ತಲೇ ಇದೆ. ಅದರ ಸಾಹಿತ್ಯ ಏನಿರಬಹುದು ಎಂದು ಗೂಗಲ್‌ನಲ್ಲಿ ಹುಡುಕಿದೆ. ಸಿಕ್ಕಿತು. ರಮಾಕಾಂತಿಗೆ ಹೇಳಿ ಅದನ್ನು ಕನ್ನಡಕ್ಕೆ ಅನುವಾದಿಸಿಕೊಂಡು ಓದಿದರೆ ಅವತ್ತು ನಾನು ಈ ಹಾಡನ್ನು ಯಾವ ಭಾವದಲ್ಲಿ ಅರ್ಥ ಮಾಡಿಕೊಂಡಿದ್ದೆನೋ ಅದಕ್ಕೆ ಹತ್ತತ್ತಿರದ ಅರ್ಥವೇ ಇದೆ! ಅವತ್ತು ನನಗೆ ಹೀಗೆ ಈ ಹಾಡನ್ನು ಅರ್ಥ ಮಾಡಿಸಿದ್ಯಾರು ಎಂದರೆ ಅಮ್ಜದ್ ಆಲೀ ಖಾನ್‌ರ ಸಂಗೀತ ಮತ್ತು ರೂಪ್‌ಕುಮಾರ್ ರಾಥೋಡ್ ಅವರ ಕಂಠ. ಹೌದು, ಅವರಿಂದಾಗಿಯೇ ನನಗೆ ಗುಲ್ಜಾರ್ ಬರೆದ ಈ ವಿರಹ ಗೀತೆ ಅಷ್ಟೊಂದು ಇಷ್ಟವಾಗಿ ಕಾಡುತ್ತಿತ್ತು. ಈ ಮಧ್ಯೆ ಕಳೆದು ಹೋಗಿತ್ತು. ಈಗ ಮತ್ತೆ ಏನನ್ನೋ ಹುಡುಕಲು ಹೋಗಿ ಇನ್ನೇನೋ ಸಿಕ್ಕುವಂತೆ ವಾದಾದ ಒಂಭತ್ತು ಹಾಡುಗಳು ಸಿಕ್ಕಿವೆ. ಈ ಹಿಂದಿನ ದಿನಗಳ ಅದೆಷ್ಟೋ ನೆನಪುಗಳೊಂದಿಗೆ ಮತ್ತೆ ಬದುಕಿನ ದಾರಿಯಲ್ಲಿ ಹೊಸ ಬೆಳಕಿನ ಕಿರಣವೊಂದು ಚೆಲ್ಲಿದಂತೆ... ನಿಜಕ್ಕೂ ತುಂಬಾ ಖುಷಿಯಾಗಿದ್ದೇನೆ. ಈ ಹಾಡು ಕೇಳಿದರೆ ಬಹುಶಃ ನಿಮಗೂ ಇಷ್ಟೇ ಖುಷಿಯಾಗಬಹುದು.
-ಆರುಡೋ ಗಣೇಶ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ