ನಮ್ಮ ಮಾತುಗಳಲ್ಲಿ ಬದುಕಿನ ಭೂತದ ನೆರಳಿರುತ್ತದೆ!
ಆ ಆಟೋ ಡ್ರೈವರ ಅಸಹನೆಗೆ ಕಾರಣವೇನು ಎನ್ನುವುದು ನನಗೆ ಮನೆಯ ಹತ್ತಿರ ಇಳಿಯುವ ತನಕ ಗೊತ್ತಾಗಿರಲಿಲ್ಲ.
ನಾನು ಎಲ್ಲಿಯೇ ಹೋದರೂ ಆಟೋದಲ್ಲಿಯೇ ಹೋಗುತ್ತೇನೆ. ಮತ್ತು ನನ್ನ ಇಷ್ಟು ವರ್ಷಗಳ ಪ್ರಯಾಣಕ್ಕೆ ಜೊತೆಯಾದ ಆಟೋ ಡ್ರೈವರ‍್ರುಗಳಲ್ಲಿ ನೂರಕ್ಕೆ ಎಂಭತ್ತರಷ್ಟು ಡ್ರೈವರ‍್ರುಗಳೊಂದಿಗೆ ನಾನು ದಾರಿಯುದ್ದಕ್ಕೂ ಮಾತನಾಡಿಕೊಂಡು, ಅವರ ಬದುಕಿನ ಕಷ್ಟ ಸುಖಗಳನ್ನು ಅರಿಯುವ ಪ್ರಯತ್ನವನ್ನು ಮಾಡಿದ್ದೇನೆ. ಆದರೆ ಮೊನ್ನೆ ರಾಜಾಜಿನಗರದ ಮರಿಯಪ್ಪನ ಪಾಳ್ಯದಿಂದ ಮಲ್ಲೇಶ್ವರಕ್ಕೆ ಹೊರಟ ಆಟೋದ ಡ್ರೈವರ ಬೋವಿಪಾಳ್ಯದ ಶ್ರೀನಿವಾಸ್ ಅವರ ಜೊತೆ ಬದುಕಿನ ಮಾತುಗಳು ಸಾಧ್ಯವಾಗಲಿಲ್ಲ. ಯಾಕೆ? ಅದು ನನಗೂ ತಕ್ಷಣಕ್ಕೆ ಗೊತ್ತಾಗಲಿಲ್ಲ. ಆಟೋ ಹತ್ತಿದಾಗಿನಿಂದ ಸಿಡುಕುತ್ತಿದ್ದ ಶ್ರೀನಿವಾಸ್ ಅವರು, ನಾನು ಆಟೋದಲ್ಲಿ ಯಾವಾಗಲೂ ಕೂರುವಂತೆ ಸೀಟಿನ ಎಡಭಾಗಕ್ಕೆ ಒರಗಿ ಕೂತಿದ್ದಕ್ಕೂ ಕಿರಿಕಿರಿ ಮಾಡಿದರು. ಅಲ್ಲಿಯತನಕ ಸುಮ್ಮನಿದ್ದ ನಾನು, ಆನಂತರ ಅವರಿಗೆ ಕೊಡಬೇಕಾದ ರೀತಿಯಲ್ಲೇ ಉತ್ತರ ಕೊಟ್ಟೆ ಮತ್ತು ಮನೆ ಹತ್ತಿರ ಇಳಿಯುವ ಹೊತ್ತಿಗೆ ಇವರಿಗೆ ತಮ್ಮ ಆಟೋದಲ್ಲಿ ಪ್ರಯಾಣಿಸುವ ಹೆಚ್ಚಿನ ಪ್ರಯಾಣಿಕರು ಶ್ರೀಮಂತರು, ಬಡವರ ಕಷ್ಟ ಅರಿಯದವರು ಎನ್ನುವ ಪೂರ್ವಾಗ್ರಹಪೀಡಿತ ಭಾವವೊಂದು ಇರುವುದು ನನ್ನ ಗಮನಕ್ಕೆ ಬಂದಿತ್ತು.
ಕಥೆ ಇಷ್ಟೇ.
ಈ ಶ್ರೀನಿವಾಸ್ ಅವರು ಕೆಲವೇ ವರ್ಷಗಳ ಹಿಂದೆ ಆರೇಳು ಆಟೋಗಳ ಮಾಲೀಕರಾಗಿದ್ದರಂತೆ. ಆದರೆ ಈಗ ನಷ್ಟವಾಗಿ ಅವರು ಓಡಿಸುತ್ತಿದ್ದ ಆಟೋವೊಂದು ಮಾತ್ರ ಅವರ ಬಳಿ ಉಳಿದಿದೆ. ಮತ್ತು ಅವತ್ತಿನ ಬದುಕಿನ ಶ್ರೀಮಂತಿಕೆಗೂ ಇವತ್ತಿನ ಬದುಕಿನ ಬಡತನಕ್ಕೂ ಅಗಾಧ ವ್ಯತ್ಯಾಸವಿದೆ. ಬದುಕಿನಲ್ಲಾದ ಈ ವ್ಯತ್ಯಾಸವೇ ಅವರಲ್ಲಿ ತಮ್ಮ ಆಟೋಕ್ಕೆ ಹತ್ತುವ ಪ್ರಯಾಣಿಕರೆಲ್ಲರೂ ಶ್ರೀಮಂತರು, ದುರಂಹಕಾರಿಗಳು, ಆಟೋದವರ ಕಷ್ಟ ಅರಿಯದವರು ಎನ್ನುವ ಭಾವವೊಂದನ್ನು ಮೂಡಿಸಿದೆ. ಮತ್ತು ಪ್ರಯಾಣಿಕರೊಂದಿಗೆ ಹೀಗೆ ಅಸಹನೆಯಿಂದ ನಡೆದುಕೊಳ್ಳುವುದೇ ಅವರ ದಿನಚರಿಯೂ ಆಗಿದೆ.
ಯಾಕೆ ಹೀಗೆ ಎಂದು ಯೋಚಿಸಿದರೆ ಅವರದ್ದೇ ಬದುಕಿನ ಭೂತವೊಂದು ಅವರ ಯೋಚನೆಗೆ ಜೋತು ಬಿದ್ದಿರುವುದು ಸ್ಪಷ್ಟವಾಗಿ ಕಾಣುತ್ತದೆ.
ಅವರಿಗೆ ಅವತ್ತು ಶ್ರೀಮಂತಿಕೆಯಿತ್ತು. ಶ್ರೀಮಂತಿಕೆ ಇದ್ದಾಗ ಹೆಚ್ಚಿನ ಮನುಷ್ಯರಿಗೆ ತಾನೊಬ್ಬನೇ ಎತ್ತರದಲ್ಲಿರುವಂತೆ, ಉಳಿದವರೆಲ್ಲರೂ ತನ್ನಿಂದ ಕೆಳಗೇ ಇರುವವರು ಎನ್ನುವ ಕೆಟ್ಟ ಅಹಂಕಾರವೊಂದು ಇರುತ್ತದೆ. ಮತ್ತು ಈ ಅಹಂಕಾರದಲ್ಲೇ ಇವರು ಶ್ರೀಮಂತಿಕೆ ಎನ್ನುವುದು ತನ್ನ ಬದುಕಿನುದ್ದಕ್ಕೂ ಶಾಶ್ವತವಾಗಿರುವಂತಹದ್ದು ಎನ್ನುವ ಭ್ರಮೆಯಲ್ಲೇ ತಮ್ಮ ಬಳಿ ಕಷ್ಟ ಸುಖ ಹೇಳಿಕೊಂಡು ಬಂದವರನ್ನೋ, ನೆರವು ಕೇಳಿಕೊಂಡು ಬಂದವರನ್ನೋ ತೀರಾ ಕೆಟ್ಟದಾಗಿ ನಡೆಸಿಕೊಂಡಿರುತ್ತಾರೆ. ತಾನೇ ಸೈ ಎಂದು ಮೆರೆದಿರುತ್ತಾರೆ. ಆರು ಆಟೋಗಳ ಮಾಲೀಕ ಬೇರೆಯವರ ಕಾರು, ಬಸ್ಸು ಎಂದು ಬೇರೆ ಕಡೆ ಪ್ರಯಾಣ ಮಾಡುವಾಗ ಅದರ ಚಾಲಕರನ್ನು ’ನೀನೊಬ್ಬ ಯಕಶ್ಚಿತ್ ಚಾಲಕ’ ನಷ್ಟೇ ಎನ್ನುವಂತೆ ನಡೆಸಿಕೊಂಡಿರುತ್ತಾರೆ. ಅವಮಾನಿಸಿರುತ್ತಾರೆ. ಕಾರಣವಿಲ್ಲದೇ ಸಿಡುಕಿರುತ್ತಾರೆ.
ಈಗ ಶ್ರೀಮಂತಿಕೆ ಕೈ ಕೊಡವಿಕೊಂಡು ಎದ್ದು ಹೋಗಿ ಇವರು ಕೆಳಗೆ ಇಳಿದಿದ್ದಾರಲ್ಲ, ಆದ್ದರಿಂದಲೇ ತಮಗಿಂತ ಸ್ವಲ್ಪ ಎತ್ತರದಲ್ಲಿರುವವರನ್ನು ನೋಡಿದರೂ ಕೂಡಾ ಇವರಿಗೆ ಬದುಕಿನ ಭೂತ ನಾಲಿಗೆಯ ಮೇಲೆ ಬರುತ್ತದೆ. ಮತ್ತು ಇವರ ಕಣ್ಣಿನಲ್ಲೂ ಅದೇ ಬದುಕಿನ ಭೂತ ಕಾಲದ ಪೊರೆಯೇ ಇರುತ್ತದೆ. ಅದರಿಂದಾಗಿ ಎಲ್ಲಾ ಆಟೋ ಡ್ರೈವರ‍್ರುಗಳೊಂದಿಗೂ ಪ್ರೀತಿಯಿಂದ ಮಾತನಾಡಿ, ಇಳಿಯುವಾಗ ಮೀಟರ‍್ರಿಗಿಂತ ಒಂದೈದು ರೂಪಾಯಿಯನ್ನು ಜಾಸ್ತಿ ಕೊಟ್ಟು, ನಿಮ್ಮೊಂದಿಗೆ ಪ್ರಯಾಣಿಸಿದ್ದು ಕಂಫರ್ಟಬಲ್ ಮತ್ತು ಖುಷಿ ನೀಡಿತು ಎಂದು ಹೇಳುವ ನನ್ನಂತಹವರು ಕೂಡಾ ’ಓಹೋ ಎನ್ನುವ ಶ್ರೀಮಂತರಂತೆ, ದುರಹಂಕಾರಿಗಳಂತೆ, ಮನುಷ್ಯರ ನಡುವೆ ಮೇಲು ಕೀಳು ಎಂದೆಲ್ಲ ನೋಡುವವರಂತೆ’ ಕಾಣಿಸಿಬಿಡುತ್ತೇವೆ.
ಬೋವಿಪಾಳ್ಯದ ಆಟೋಡ್ರೈವರ‍್ ಶ್ರೀನಿವಾಸ್ ಮಾತ್ರವಲ್ಲ, ನಮ್ಮೆಲ್ಲರ ಮಾತು ಮತ್ತು ಯೋಚನೆಯಲ್ಲಿ ನಾವು ಬದುಕಿ ಬಂದ ನಮ್ಮ ಬದುಕಿನ ಭೂತವೇ ಸವಾರಿ ಮಾಡುತ್ತಿರುತ್ತದೆ. ನಿನ್ನೆ ನಾವು ಹೇಗೆ ಬದುಕಿದ್ದೆವು ಎನ್ನುವುದರ ಮೇಲೇ ನಮ್ಮ ಯೋಚನೆಗಳು ರೂಪು ಪಡೆಯುತ್ತವೆ ಮತ್ತು ನಾಲಿಗೆಯ ಮೇಲೆ ಮಾತಾಗಿರುತ್ತದೆ. ಅಂದರೆ ಬದುಕಿನ ಅನುಭವವೇ ನಮ್ಮ ಮಾತುಕತೆ ಮತ್ತು ವರ್ತನೆಗೆ ಕಾರಣವಾಗಿರುತ್ತದೆ. ಹಾಗಿದ್ದರೆ ನಮ್ಮ ಬದುಕಿನ ಭೂತ ಕಾಲದ ಅನುಭವವನ್ನು ಎದುರಿಟ್ಟುಕೊಂಡೇ ನಾವು ದಿನನಿತ್ಯ ಎದುರಾಗುವ ಎಲ್ಲರನ್ನೂ ಮತ್ತು ಎಲ್ಲಾ ಸಂದರ್ಭಗಳನ್ನೂ ಜಡ್ಜ್ ಮಾಡಬೇಕಾ? ಒಂದು ಹಂತದವರೆಗೆ ಇದು ಸರಿಯೇ. ಹಿಂದಿನ ದಿನ ನಮಗ್ಯಾರೋ ದೇವದೂತನಂತೆ ಮಾತನಾಡಿ ಮೋಸ ಮಾಡಿ ಹೋದವನಿಂದಾದ ಅನುಭವವನ್ನೇ ಎದುರಿಟ್ಟುಕೊಂಡು, ಇವತ್ತು ಎದುರಿಗೆ ಸಿಕ್ಕ ಎಲ್ಲರನ್ನೂ ಒಂದು ಕ್ಷಣ ಹುಟ್ಟಾ ವಂಚಕನಂತೆ ನೋಡುವುದು ಕೆಲವೊಮ್ಮೆ ಸರಿಯಾಗಬಹುದಾದರೂ, ಅದೇ ಫೈನಲ್ ತೀರ್ಮಾನವಾದರೆ ನಮ್ಮ ಬದುಕಿಗೇ ಹೊಡೆತ ಬೀಳುತ್ತದೆ. ಯಾಕೆಂದರೆ ನಾಳೆ ನಮಗೆ ನಿಜವಾದ ದೇವದೂತನೇ ಎದುರಾಗಬಹುದು ಮತ್ತು ಅವನನ್ನೂ ನಾವು ಇವನು ದೊಡ್ಡ ವಂಚಕ ಎಂದು ದೂರ ಇಟ್ಟರೆ ನಮ್ಮ ಬದುಕಿಗೆ ಸಿಕ್ಕಬಹುದಾದ ಅಮೂಲ್ಯವಾದ ಸಂಗತಿಗಳನ್ನು ನಾವೇ ನಮ್ಮ ಕೈಯಾರೆ ಕಳೆದುಕೊಂಡು ಬಿಡುತ್ತೇವೆ. ನಮ್ಮ ಬದುಕು ಮತ್ತು ಅದು ನೀಡಿದ ಅನುಭವ ನಮ್ಮ ಬದುಕಿನ ಮುಂದಿನ ಹೆಜ್ಜೆಗಳನ್ನು ರೂಪಿಸಬೇಕು ಎನ್ನುವುದು ನಿಜವಾದರೂ, ಅದನ್ನು ಮಾತ್ರವೇ ಎದುರಿಟ್ಟುಕೊಂಡು ಎಲ್ಲವನ್ನೂ ತೂಕಕ್ಕೆ ಹಾಕುವುದು ಖಂಡಿತ ಒಳ್ಳೆಯದಲ್ಲ. ಯಾಕೆಂದರೆ ಎಲ್ಲರ ಬದುಕೂ ನಮ್ಮ ಬದುಕಿನ ಪ್ರತಿಬಿಂಬವಾಗಿರುವುದಿಲ್ಲ. ನಾವು ಶ್ರೀಮಂತಿಕೆ, ಅಧಿಕಾರ ಇತ್ಯಾದಿ ಇದ್ದಾಗ ಇಡೀ ಭೂಮಿಯೇ ನನ್ನದು, ನಾನು ಹೇಳಿದ ಮಾತೇ ಶಾಸನ ಎನ್ನುವಂತೆ ನಡೆದುಕೊಂಡಿರಬಹುದಾದರೂ, ಎಲ್ಲರೂ ನಮ್ಮಂತೆ ಮೆರೆದಿರುವುದಿಲ್ಲ. ಅವರು ಬದುಕಿನ ಶ್ರೀಮಂತಿಕೆಯ ಮಿದು ಮತ್ತು ಬಡತನದ ಒರಟುತನವೇನು ಹಾಗೂ ಎರಡೂ ಬದುಕಿನಲ್ಲಿ ಎಷ್ಟು ಸಮಯ ಜೊತೆಗಿರುತ್ತದೆ ಎನ್ನುವುದನ್ನು ಅರಿತುಕೊಂಡು ’ಮನುಷ್ಯರನ್ನು ಮನುಷ್ಯರಂತೆ’ ಕಾಣುತ್ತಿರುತ್ತಾರೆ. ಬದುಕಿನುದ್ದಕ್ಕೂ ಹಾಗೇ ನಡೆದುಕೊಂಡಿರುತ್ತಾರೆ.
ಆದ್ದರಿಂದ ನಿಮ್ಮ ಯೋಚನೆ ಮತ್ತು ಮಾತುಗಳನ್ನೆಲ್ಲ ನಿಮ್ಮದೇ ಬದುಕಿನ ಭೂತದ ಕೈಗೊಪ್ಪಿಸಬೇಡಿ. ಒಂದಷ್ಟು ಅದರ ಹಿಡಿತದಲ್ಲಿರಲಿ, ಇನ್ನೊಂದಿಷ್ಟು ಇವತ್ತಿನ ಈ ಕ್ಷಣ ನೀವು ಎದುರುಗೊಳ್ಳುವ ಬದುಕಿಗೆ ತಕ್ಕಂತೆ ಇರಲಿ. ಆಗ ನಿಮಗೆ ಎದುರಿಗೆ ಸಿಕ್ಕ ಯಾರನ್ನೇ ಆಗಲಿ, ಒಂದಿಷ್ಟು ಯೋಚಿಸಿ ಮಾತು - ನಗುವನ್ನು ಚೆಲ್ಲಿ ಮಾತೋ, ಮೌನವನ್ನೋ ಹಾಸಲಿಕ್ಕೆ ಕಾರಣವಾಗುತ್ತದೆ.

-ಆರುಡೋ ಗಣೇಶ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ