ಬದಲಾದ ಜಗತ್ತಿನ ಲೆಕ್ಕಾಚಾರದಲ್ಲಿ... ನಾನೂ ಈಗ ಸೆಲೆಬ್ರೆಟಿ...!?
ಯಾರ ಹತ್ತಿರವೂ ಬಾಯಿ ಬಿಟ್ಟು ಹೇಳಿಕೊಂಡಿರುವುದಿಲ್ಲವಾದರೂ, ಮನದ ಮೂಲೆಯಲ್ಲಿ ಹುಟ್ಟಿಕೊಳ್ಳುವ ಅಂತಹದ್ದೊಂದು ಆಸೆ ಆಗಾಗ ಎಲ್ಲೆಲ್ಲಿಗೋ ಕರೆದುಕೊಂಡು ಹೋಗಿ ಖುಷಿ ಕೊಡುತ್ತಿರುತ್ತದೆ.
‘ನಾನೂ ಸೆಲೆಬ್ರಿಟಿಯಾಗಿದ್ದರೆ...’ ಎನ್ನುವ ಆ ಕ್ಷಣದ ಕಲ್ಪನೆ-ಕನಸುಗಳೆಲ್ಲವೂ ನಮ್ಮನ್ನು ಅದೊಂದು ಬಗೆಯ ರೋಮಾಂಚನಕ್ಕೀಡು ಮಾಡುತ್ತಿರುತ್ತದೆ. ಈ ಕನಸು ಒಂದಿಷ್ಟು ದೂರಕ್ಕೆ ಎಳೆದೊಯ್ದು ಬಿಟ್ಟಿದ್ದೇ ಹೌದಾದರೆ, ನನ್ನ ಬದುಕಿನಲ್ಲಿ ಇದೆಲ್ಲವೂ ನಿಜವಾಗಿ ಬಿಟ್ಟಿದ್ದರೆ ಇವತ್ತಿನ ಬದುಕಿನ ಕಷ್ಟಗಳನ್ನೆಲ್ಲ ಜಾಡಿಸಿಕೊಂಡು ನೆಮ್ಮದಿಯಾಗಿದ್ದು ಬಿಡಬಹುದಿತ್ತು ಎಂದುಕೊಳ್ಳುತ್ತಾ... ಅಷ್ಟರೊಳಗೆ ವಾಸ್ತವದ ಬದುಕಿನ ಕದವನ್ನು ಅದ್ಯಾರೋ ದಢದಢ ತಟ್ಟಿ ಬಿಡುತ್ತಾರೆ.‘ಇದೆಲ್ಲ ನನ್ನ ಲೈಫಿನಲ್ಲಿ ನನಸಾಗುವುದು ಅಷ್ಟು ಸುಲಭವಲ್ಲ. ಇದೆಲ್ಲ ನನ್ನ ಹಣೆಯಲ್ಲಿ ಬರೆದೂ ಇಲ್ಲ...’ ಎಂದು ನಿಮ್ಮಷ್ಟಕ್ಕೇ ಗೊಣಗುತ್ತಾ ಈಗಿರುವ ಬದುಕು ಇಷ್ಟವೋ, ಕಷ್ಟವೋ ಒಟ್ಟಿನಲ್ಲಿ ಬದುಕಬೇಕಿದೆ ಅಷ್ಟೇ ಎಂದುಕೊಂಡು ಮಾಡಬೇಕಾದ ಕೆಲಸದಲ್ಲಿ ಬ್ಯುಸಿಯಾಗಿ ಬಿಡುತ್ತೀರಿ.
ಇನ್ನೊಮ್ಮೆ ಅದ್ಯಾವುದೋ ಒಂದು ಕ್ಷಣದಲ್ಲಿ ಮತ್ತೆ ಅದೇ ಸೆಲೆಬ್ರಿಟಿಯಾಗುವ ಕನಸೊಂದು ಕೈ ಹಿಡಿದು ಕರೆಯುತ್ತದೆ. ಆ ಕ್ಷಣಕ್ಕೆ ಖುಷಿ ಕೊಡುತ್ತದೆ. ಮತ್ತೆ ವಾಸ್ತವ, ಕದ, ಅದನ್ಯಾರೋ ತಟ್ಟಿ ನಿಮ್ಮನ್ನು ಎಚ್ಚರಿಸಿ...
ಅಲ್ಲಿಗೆ ನೀವು ಇವತ್ತ್ಯಾವ ಬದುಕನ್ನು ಬದುಕುತ್ತಿದ್ದೀರಲ್ಲ, ಅದಕ್ಕಷ್ಟೇ ನೀವು ಅರ್ಹರೇ ಹೊರತು ಇದರಾಚೆಗೆ ನೀವು ಏನನ್ನೂ ‘ನಿಮ್ಮದು’ ಎಂದುಕೊಳ್ಳುವಂತಿಲ್ಲ ಎನ್ನುವುದಂತೂ ಕನ್ಫರ್ಮ್ ಆಗಿ ಹೋದಂತಾಯಿತು. ಹೌದು, ನನ್ನ ಬದುಕಿನಲ್ಲಿ ಅಂತಹ ಯಾವ ಸಾಧ್ಯತೆಯೂ ಇಲ್ಲ. ಇನ್ನೇನಾದರೂ ಅದೆಲ್ಲ ಸಾಧ್ಯವಾಗಬೇಕೆಂದರೆ ಮ್ಯಾಜಿಕ್ ಆಗಬೇಕಷ್ಟೇ ಎಂದುಕೊಳ್ಳುವ ನೀವು ಈಗಿರುವುದರಲ್ಲೇ ಎಷ್ಟು ಸಾಧ್ಯವೋ ಅಷ್ಟು ಸುಖವಾಗಿ ಬದುಕಲು ನಾನು ಪ್ರಯತ್ನಿಸಬೇಕಷ್ಟೇ ಎಂದುಕೊಂಡು, ಅಲ್ಲೇ ಸುತ್ತಲಾರಂಭಿಸುತ್ತೀರಿ. ಮತ್ತು ಬದುಕಿನ ಕೊನೆಯ ತನಕವೂ ಅಲ್ಲಿಯೇ ಸುತ್ತುತ್ತಿರುತ್ತೀರಿ.
ಹಾಗಿದ್ದರೆ ‘ಸೆಲೆಬ್ರಿಟಿಗಳು’ ಎಂದು ನಮ್ಮಿಂದೆಲ್ಲ ಕರೆಸಿಕೊಂಡು ಭಯಂಕರವಾದ ಗೌರವವನ್ನೆಲ್ಲ ಪಡೆಯುತ್ತಾರಲ್ಲ, ಅವರೆಲ್ಲ ಸೆಲೆಬ್ರಿಟಿಗಳಾಗುವ ಮೊದಲು ಏನಾಗಿದ್ದರು? ನಾವು ಇಲ್ಲಿ ‘ಕಾಮನ್ ಮ್ಯಾನ್’ಗಳಾಗಿ ಹುಟ್ಟಿಬಿಟ್ಟೆವು. ಅದಕ್ಕೇ ಹೀಗಿದ್ದೇವೆ ಎಂದುಕೊಳ್ಳುವುದಾದರೆ, ಅವರೆಲ್ಲ ಸೆಲೆಬ್ರಿಟಿಗಳಾಗಿ ಹುಟ್ಟಿದ್ದರಾ? ಅಥವಾ ಸೆಲೆಬ್ರಿಟಿಗಳಾಗಲು ಅವರೆಲ್ಲ ನಮಗಿಂತಲೂ ವಿಶೇಷವಾದದ್ದನ್ನೇನಾದರೂ ತಮ್ಮದಾಗಿಸಿಕೊಂಡಿದ್ದರಾ? ಒಮ್ಮೆ ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಲು ಪ್ರಯತ್ನಿಸಿ ನೋಡಿ, ನೀವು ಕಂಡ ಕನಸು ಅಷ್ಟು ಸುಲಭವಾಗಿ ಅಲ್ಲದಿದ್ದರೂ ನನಸಾಗುವ ಒಂದಿಷ್ಟು ದಾರಿಗಳು ನಿಮಗೂ ಕಾಣಿಸಲಾರಂಭಿಸುತ್ತದೆ.
ಧಿನ್‌ಚಕ್ ಪೂಜಾ.
ಈ ಹುಡುಗಿ ಮೊನ್ನೆ ಮೊನ್ನೆ ಮೇ ತಿಂಗಳವರೆಗೆ ‘ಪೂಜಾ ಜೈನ್’ ಅಷ್ಟೇ. ಪಾಪ್ ಸಿಂಗರ್ ಆಗಬೇಕು, ಮುಂದೊಂದು ದಿನ ಸೆಲೆಬ್ರಿಟಿಯಾಗಬೇಕು ಎನ್ನುವುದು ಇವಳ ಕನಸೂ ಆಗಿತ್ತು. ಅವಕಾಶ ಸಿಕ್ಕಾಗಲೆಲ್ಲ ಹಾಡುತ್ತಿದ್ದಳು, ಕೇಳಿದ ಕೆಲವರು ಮೆಚ್ಚಿಕೊಳ್ಳುತ್ತಿದ್ದರು. ಇನ್ನು ಕೆಲವರು ಮುಖ ತಿರುವುತ್ತಿದ್ದರು. ಹಾಗೆಂದು ಈಕೆ ಸೆಲೆಬ್ರಿಟಿಯಾಗುವ ತನ್ನ ಕನಸನ್ನು ಕಟ್ಟಿ ಮೂಲೆಗೆಸೆಯಲಿಲ್ಲ. ಒಂದಲ್ಲ ಒಂದು ದಿನ ನಾನು ಸೆಲೆಬ್ರಿಟಿಯಾಗುತ್ತೇನೆ ಮತ್ತು ಸೆಲೆಬ್ರಿಟಿಯೊಬ್ಬರು ಪಡೆಯಬಹುದಾದ ಎಲ್ಲವನ್ನೂ ಪಡೆದುಕೊಳ್ಳುತ್ತೇನೆ ಎಂದುಕೊಳ್ಳುತ್ತಲೇ ಇದ್ದಳು. ಅದಕ್ಕಾಗಿ ಪ್ರಯತ್ನ ಪಡುತ್ತಲೂ ಇದ್ದಳು. ಫೇಮಸ್ಸಾಗಲು ಇರುವ ದಾರಿಗಳನ್ನೆಲ್ಲ ಹುಡುಕುತ್ತಿದ್ದಳು.
ಕೊನೆಗೂ ಅವಳ ಹುಡುಕಾಟ ಅಂತ್ಯವಾಗಿದ್ದು 2007ರ ಮೇ ತಿಂಗಳಿನಲ್ಲಿ.
ಯಾವ ದೊಡ್ಡ ಸ್ಟೇಜ್ ಶೋ ಕೊಡಲಿಲ್ಲ, ಟಿ.ವಿ ಚಾನೆಲ್ಲಿನಲ್ಲಿ ಇವಳ ಹಾಡು ಪ್ರಸಾರವಾಗಲಿಲ್ಲ, ಆಡಿಯೋ ಸಿಡಿ, ವಿಡಿಯೋ ಆಲ್ಬಂ... ಉಹ್ಞೂಂ, ಇದ್ಯಾವುದೂ ಅವಳಿಗೆ ಬೇಕಾಗಲಿಲ್ಲ. ಬದಲಿಗೆ ಮೇ ತಿಂಗಳ ಒಂದು ದಿನ ತಾನೇ ಹಾಡಿದ ‘ಸೆಲ್ಫಿ ಮೇನೇ ಲೇ ಲಿಯಾ’ ಎನ್ನುವ ಹಾಡಿಗೆ, ತನ್ನ ಜೊತೆಗಿರುವ ಸಮಾನಮನಸ್ಕ ಸ್ನೇಹಿತರೊಡಗೂಡಿ ಸಾಮಾನ್ಯವಾದ ವಿಡಿಯೋವೊಂದನ್ನು ಯುಟ್ಯೂಬಿಗೆ ಅಪ್‌ಲೋಡ್ ಮಾಡಿಬಿಟ್ಟಳು.
ಬಹುಶಃ ಈ ಮಟ್ಟದ ಪ್ರಸಿದ್ಧಿ, ಹಣ, ಹೆಸರು ಎಲ್ಲವನ್ನೂ ಈ ಹಾಡು ತನಗೆ ತಂದುಕೊಡುತ್ತದೆ ಮತ್ತು ತಾನು ಇದೊಂದೇ ಹಾಡಿನಿಂದ ಸೆಲೆಬ್ರಿಟಿ ಆಗುತ್ತೇನೆ ಎಂದು ಆಕೆಯೂ ನಿರೀಕ್ಷಿಸಿರಲಿಕ್ಕಿಲ್ಲ. ಹೌದು, ಪೂಜಾ ಸೇರಿ ಯಾರೆಂದರೆ ಯಾರೂ ನಿರೀಕ್ಷಿಸಿರದೇ ಇರುವುದು ನಡೆದು ಹೋಯಿತು. ಸೆಲ್ಫಿ ಹಾಡು ಯುಟ್ಯೂಬಿನಲ್ಲಿ ಅದೆಷ್ಟು ಫೇಮಸ್ಸಾಯಿತೆಂದರೆ, ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಕೋಟ್ಯಾಂತರ ಜನರು ಈಕೆಯ ಈ ಹಾಡನ್ನು ಕೇಳಿದ್ದರು. ಒಂದಿಷ್ಟು ಜನರು ಹಾಡು ಹಾಗಿದೆ, ಹೀಗಿದೆ ಎಂದೆಲ್ಲ ರಾಗವೆಳೆದರಾದರೂ, ಮೆಚ್ಚುಗೆಯ ಪ್ರವಾಹದಲ್ಲಿ ಅದ್ಯಾವುದೂ ನಿಲ್ಲಲಿಲ್ಲ. ಚಾನೆಲ್ಲು, ಪತ್ರಿಕೆ... ಹೀಗೆ ಎಲ್ಲ ಕಡೆಯೂ ‘ಧಿನ್‌ಚಕ್ ಪೂಜಾ’ ಕಾಣಿಸಿಕೊಳ್ಳಲಾರಂಭಿಸಿದ್ದಳು.
ಮೊನ್ನೆ ಮೊನ್ನೆಯಷ್ಟೇ ದೆಹಲಿಯ ಬೀದಿಯಲ್ಲಿ ಸಾಮಾನ್ಯಳಂತೆ ಓಡಾಡಿಕೊಂಡಿದ್ದ ಈ ಹುಡುಗಿ ಯುಟ್ಯೂಬಿನಲ್ಲಿ ತನ್ನ ಹಾಡಿನ ವಿಡಿಯೋವೊಂದನ್ನು ತೇಲಿಬಿಟ್ಟು ಸೆಲೆಬ್ರಿಟಿ ಪಟ್ಟಕ್ಕೇರಿಬಿಟ್ಟಳು. ಈಕೆಯೆಷ್ಟು ಫೇಮಸ್ಸಾಗಿಬಿಟ್ಟಳೆಂದರೆ ದಿನಕ್ಕೆ ಒಂದು ಲಕ್ಷ ಸಂಭಾವನೆ ಕೊಟ್ಟು ಈಕೆಯನ್ನು ಹಿಂದಿಯ ಬಿಗ್ ಬಾಸ್ಸಿನ ಹನ್ನೊಂದನೇ ಸೀಸನ್ನಿಗೂ ಕರೆಸಿಕೊಂಡರು.
ನಮ್ಮ ನಿಮ್ಮೆಲ್ಲರಂತೆಯೇ ಸಾಮಾನ್ಯಳಾಗಿದ್ದ ಸಿಂಗರ್ ಪೂಜಾ ಈಗ ‘ದಿನ್‌ಚಕ್ ಪೂಜಾ’ ಆಗಿ ದೇಶದ ಸೆಲೆಬ್ರಿಟಿಗಳ ಸಾಲಿನಲ್ಲಿ ನಿಂತು ನಗುತ್ತಿದ್ದಾಳೆ!
ಈಗ ಹೇಳಿ, ನಾವು ಆ ಕ್ಷಣಕ್ಕೆ ಕಾಣುವ ಸೆಲೆಬ್ರಿಟಿಯಾಗುವ ಕನಸೂ ಯಾಕೆ ನಮ್ಮ ನಿರಂತರ ಶ್ರಮದಿಂದ ನನಸಾಗಬಾರದು? ಮನಸ್ಸು ಮಾಡಿದ್ದೇ ಹೌದಾದರೆ ನಮ್ಮಿಂದ ಸಾಧ್ಯವಾಗದೇ ಇರುವುದು ಯಾವುದೆಂದರೆ ಯಾವುದೂ ಇಲ್ಲ. ಅಂದಮೇಲೆ ನಮ್ಮಂತೆಯೇ ಇರುವವರು ಸೆಲೆಬ್ರಿಟಿಗಳಾಗಿದ್ದಾರೆ ಎಂದರೆ, ನಮ್ಮಿಂದ ಯಾಕೆ ಸಾಧ್ಯವಾಗುವುದಿಲ್ಲ? ಇಲ್ಲ, ಸಾಧ್ಯವಾಗುವುದಿಲ್ಲ. ಯಾಕೆಂದರೆ ನಮಗೆ ಯಾವ ಗಾಡ್ ಫಾದರ‍್ರುಗಗಳಿಲ್ಲ, ನೀನು ಇಂತಹ ಕಡೆ ಹೋಗು ಎಂದು ಗೈಡ್ ಮಾಡುವವರು ಇಲ್ಲ, ಸಪೋರ್ಟರ‍್ರುಗಳಿಲ್ಲ ಮತ್ತು ಸೆಲೆಬ್ರಿಟಿಯಾಗುವಂತಹ ಅವಕಾಶಗಳೂ ನನಗೆ ಸಿಕ್ಕಲಿಲ್ಲ ಎಂದು ನೀವು ಪಟ್ಟಿ ಮಾಡುವುದೇನೋ ನಿಜವೇ.
ನೀವು ಸೆಲೆಬ್ರಿಟಿಯಾಗಲು ಇದೆಲ್ಲವೂ ಬೇಕಿದ್ದ ಕಾಲವೂ ಒಂದಿತ್ತು. ನೀವೇನಾದರೂ ಸಾಧಿಸಬೇಕು, ಎತ್ತರಕ್ಕೇರಬೇಕೆಂದರೆ ನಿಮಗೊಂದು ಗಟ್ಟಿಯಾದ ಹಿನ್ನೆಲೆ ಇರಬೇಕಿತ್ತು. ಹೀಗಿದ್ದ ನಿಮಗೆ ಪ್ರಸಿದ್ಧರು ಅಥವಾ ಪ್ರಭಾವಿಯೊಬ್ಬರ ನೆರಳು ಸಿಗಬೇಕಿತ್ತು. ಅವರು ನಿಮ್ಮನ್ನು ಎಲ್ಲಾ ಕಡೆಗೂ ರೆಫರ್ ಮಾಡುತ್ತಾ ಹೋಗುತ್ತಿದ್ದರು. ನೀವು ಹೊರಟಲ್ಲಿಗೆ ನಿಮಗಿಂತ ಹೆಚ್ಚಿನ ಪ್ರತಿಭಾವಂತರು ಸರತಿ ಸಾಲಿನಲ್ಲಿ ಬರುತ್ತಿದ್ದರೆ, ನಿಮಗೆ ಸ್ಪೆಶಲ್ ಎಂಟ್ರಿ ಸಿಕ್ಕುತ್ತಿತ್ತು... ಸೆಲೆಬ್ರಿಟಿ ಆಗುವುದಕ್ಕೆ ಹೀಗೊಂದು ಸಿದ್ಧ ಮಾದರಿಯಿತ್ತು. ಇಂತಹ ಅವಕಾಶ ನಮ್ಮಂತಹ ಎಲ್ಲರಿಗೂ ಸಿಕ್ಕುವುದು ಸಾಧ್ಯವಿಲ್ಲದೇ ಇದ್ದಿದ್ದರಿಂದ ಇಂತಹ ಸಂಪರ್ಕಗಳನ್ನೆಲ್ಲ ಹೊಂದಿದ್ದ ಕೆಲವರಷ್ಟೇ ಸೆಲೆಬ್ರಿಟಿಗಳಾಗುತ್ತಿದ್ದರು. ಇವರನ್ನು ನಾವು ನೋಡುತ್ತಾ ದೂರ ನಿಲ್ಲಬೇಕಿತ್ತು.
ಆದರೆ ಈಗ ಈ ಮಾದರಿಯನ್ನು ಬ್ರೇಕ್ ಮಾಡಲಾಗಿದೆ. ಸೆಲೆಬ್ರಿಟಿಯಾಗಲು ನಿಮಗೆ ಯಾರದ್ದೋ ನೆರಳು, ನೀರು ಬೇಕಾಗಿಲ್ಲ. ನಿಮ್ಮಲ್ಲಿ ಪ್ರತಿಭೆಯಿದೆ, ಇರುವ ಪ್ರತಿಭೆ ಬಗ್ಗೆ ನಿಮ್ಮಲ್ಲೊಂದು ನಂಬಿಕೆಯಿದೆ ಮತ್ತು ನೀವೊಂದಿಷ್ಟು ಬುದ್ಧಿವಂತಿಕೆಯಿಂದ ಎಲ್ಲವನ್ನೂ ನಿಭಾಯಿಸಬಲ್ಲಿರಿ ಎಂದರೆ ರಾತ್ರಿ ಕಳೆದು ಬೆಳಗಾಗುವುದರೊಳಗೆ ನೀವೂ ಗೆಲ್ಲಬಲ್ಲಿರಿ; ಸ್ಟಾರ್ ಸೆಲೆಬ್ರಿಟಿಯಾಗಿ ಮಿಂಚಬಲ್ಲಿರಿ.
ನಿಮ್ಮ ಪರಿಚಯ ನಿಮಗಿರಲಿ
ನಿಮ್ಮನ್ನು ಹತ್ತು ಜನ ಗುರುತಿಸಬೇಕೆಂದರೆ, ಮೊದಲು ನಿಮಗೆ ನೀವೇ ಸ್ಪಷ್ಟವಾಗಿ ಗೊತ್ತಿರಬೇಕು. ಅಂದರೆ ನಿಮ್ಮ ಬಗ್ಗೆ ನಿಮ್ಮಲ್ಲಿಯೇ ಸ್ಪಷ್ಟತೆ ಇರಬೇಕು. ‘ನಿನಗೇನು ಗೊತ್ತು? ನಿನ್ನಂತಹ ಹತ್ತು ಜನರನ್ನು ನಾವು ನೋಡಿದ್ದೇವೆ?’ ಎಂದು ನಿಮ್ಮ ಪ್ರತಿಭೆಯನ್ನೇ ಅವಮಾನಿಸುವ ಯಾರೋ ಒಬ್ಬರು ಎದುರಾದರೂ, ಅವರು ಬಾಯಿ ಮುಚ್ಚಿಕೊಂಡು ನಿಮ್ಮನ್ನು ಮೆಚ್ಚಿಕೊಳ್ಳುವಂತಹ ಉತ್ತರ ಕೊಡುವಷ್ಟು ನಿಮ್ಮ ಆಳ ಅಗಲವೇನು ಎನ್ನುವುದನ್ನು ನೀವು ಅರ್ಥ ಮಾಡಿಕೊಂಡಿರಬೇಕು. ನಾನೇನು ಮಾಡಬಲ್ಲೆ, ಏನನ್ನು ಮಾಡಲಾರೆ ಎನ್ನುವುದು ಬೇರೆಲ್ಲರಿಗಿಂತ ನಿಮಗೆ ಚೆನ್ನಾಗಿ ತಿಳಿದಿರಬೇಕು.
ಹಿಂಜರಿಕೆ ಬೇಡ
ನಾನೇನು ಎನ್ನುವುದು ನನಗೆ ಗೊತ್ತಿದೆ, ಅಂದಮೇಲೆ ಬೇರೆಯವರ ಬಗ್ಗೆಯೆಲ್ಲ ಯೋಚಿಸುವುದೇಕೆ ಎಂದು ಎಲ್ಲೆಂದರಲ್ಲಿ ನುಗ್ಗಿ ಹೋಗುವ ವ್ಯಕ್ತಿತ್ವ ನಿಮ್ಮದಾ? ಹೌದು ಎನ್ನುವುದಾದರೆ ನೀವು ಸೆಲೆಬ್ರಿಟಿಯಾಗಿ ಗುರುತಿಸಿಕೊಂಡು, ಅದರ ಸುಖವನ್ನನುಭವಿಸುವ ದಿನಗಳೇನೂ ನಿಮ್ಮಿಂದ ದೂರವಿರುವುದಿಲ್ಲ. ನಾನು ಹೀಗಿರುವುದು ಸರಿಯಾ? ಅಥವಾ ಹಾಗಿರಬೇಕಾ? ನಾನು ಈ ರೀತಿ ಇರುವುದರಿಂದ ಯಾರೇನು ಎಂದುಕೊಳ್ಳುತ್ತಾರೋ? ನನ್ನ ಬಗ್ಗೆ ಯಾರೇನು ಮಾತನಾಡುತ್ತಾರೋ? ನನ್ನನ್ನು ನೋಡಿ ಎಲ್ಲರೂ ನಗಾಡುತ್ತಾರೇನೋ, ಅವಮಾನಿಸುತ್ತಾರೇನೋ? ಎಂದೆಲ್ಲ ಪ್ರಶ್ನಿಸಿಕೊಂಡು, ಅದಕ್ಕೆ ಉತ್ತರ ಹುಡುಕಿಕೊಳ್ಳುತ್ತಾ ಕುಳಿತುಕೊಳ್ಳುವ ಸ್ವಭಾವ ನಿಮ್ಮದಾದರೆ ನೀವಾಗಿಯೇ ಒಂದು ಎತ್ತರವನ್ನು ಏರುವುದು ಸಾಧ್ಯವಿರುವುದಿಲ್ಲ. ಅಂದಮೇಲೆ ಸೆಲೆಬ್ರಿಟಿ ಹೇಗಾಗುತ್ತೀರಿ?
ನಿಮ್ಮ ಬಗ್ಗೆ ಯಾರ‍್ಯಾಕೆ ಹೇಳಬೇಕು?
ಇವರು ಇಂತಹವರು, ಇವರು ಇಷ್ಟು ಪ್ರತಿಭಾವಂತರು... ಹೀಗೆಂದು ಯಾರೋ ನಿಮ್ಮ ಬಗ್ಗೆ ಹೇಳಲಿ, ನಿಮ್ಮನ್ನು ಇನ್ಯಾರಿಗೋ ಪರಿಚಯಿಸಿಕೊಡಲಿ ಎಂದು ನೀವು ಕಾಯುತ್ತಿದ್ದೀರಾ? ಹಾಗಿದ್ದರೆ ಸುಲಭದಲ್ಲಿ ಸೆಲೆಬ್ರಿಟಿಯಾಗುವ ಕನಸು ನಿಮ್ಮ ಪಾಲಿಗೆ ನನಸಾಗುವುದಿಲ್ಲ ಬಿಡಿ. ಹೌದು, ನನ್ನ ಬಗ್ಗೆ ನಾನೇ ಹೇಳಿಕೊಳ್ಳುವುದೇನು ಚೆಂದ? ನನ್ನನ್ನು ನಾನೇ ಹೊಗಳಿಕೊಂಡಂತಾಗುವುದಿಲ್ಲವಾ? ಎಂದೆಲ್ಲ ಅಂದುಕೊಳ್ಳುವ ಕಾಲ ಯಾವತ್ತೋ ಕಾಲವಾಗಿ ಹೋಗಿದೆ. ಈಗೇನಿದ್ದರೂ ನನ್ನಲ್ಲಿ ಇಂತಹದ್ದಿದೆ ಎಂದು ನಾವೇ ಹೇಳಿಕೊಂಡು ನಮ್ಮ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸುವ ಕಾಲ. ಆದ್ದರಿಂದ ನಿಮ್ಮ ಗೆಲುವಿಗೆ ಕಾರಣವಾಗುವ ಯಾವುದನ್ನೇ ಆದರೂ ಹೇಳಿಕೊಳ್ಳಲು ಹಿಂಜರಿಯಬೇಡಿ. ನಿಮ್ಮ ಬಗ್ಗೆ ಯಾರೋ ಬಂದು ಹೇಳುತ್ತಾರೆ ಎಂದು ಕಾಯಲಿಕ್ಕೂ ಹೋಗಬೇಡಿ.
ಅವರು ನೋಡಿದರೆ ಹಾಗೆ...
‘ಅಯ್ಯೋ! ಅವರು ಎಷ್ಟೊಂದು ಪ್ರತಿಭಾವಂತರು, ಎಷ್ಟೊಂದು ತಿಳಿದುಕೊಂಡಿದ್ದಾರೆ. ಅವರೆದುರು ನಾನು ಏನೆಂದರೆ ಏನೂ ಅಲ್ಲ...’ ಹೀಗೆಲ್ಲ ಅಂದುಕೊಂಡು ಅವರೆದುರು ನಾನು ನನ್ನ ಪ್ರತಿಭೆಯನ್ನು ಪ್ರದರ್ಶನಕ್ಕಿಡುವುದು ಸರಿಯಲ್ಲ, ಅವರಿಗೆ ಹೋಲಿಸಿದರೆ ನಾನೇನೂ ಅಲ್ಲ ಎಂದೆಲ್ಲ ಅಂದುಕೊಳ್ಳುವ ಸ್ವಭಾವ ನಿಮ್ಮದಲ್ಲ ಎಂದರೂ ನೀವು ಗೆಲ್ಲುತ್ತೀರಿ ಮತ್ತು ಸೆಲೆಬ್ರಿಟಿಯಾಗಿ ಆದಷ್ಟು ಬೇಗ ಗುರುತಿಸಿಕೊಳ್ಳುತ್ತೀರಿ. ನಿಮ್ಮ ಸುತ್ತಮುತ್ತ ಇರುವ ಯಾರು ಏನೇ ಆಗಿರಲಿ, ಅವರಿಗೆ ಹೆದರುವುದು, ಅವರಿಗಾಗಿ ಬದಲಾಗುವುದು ಎಂದೆಲ್ಲ ಯಾವತ್ತೂ ಯೋಚನೆ ಮಾಡಬೇಡಿ. ನಿಮ್ಮ ಬದುಕು ಮತ್ತು ನಿಮ್ಮ ಗುರಿ ಬಗ್ಗೆ ನಿಮ್ಮಲ್ಲೊಂದು ಸ್ಪಷ್ಟತೆ ಇದೆ ತಾನೇ? ಅಂದಮೇಲೆ ಬೇರೆಯವರ ಬಗ್ಗೆ ಯೋಚಿಸಬೇಡಿ. ನಿಮ್ಮಲ್ಲಿ ಏನಿದೆಯೋ ಅದನ್ನು ನಿಮ್ಮದೇ ರೀತಿಯಲ್ಲಿ ಜಗತ್ತಿಗೆ ಪರಿಚಯಿಸಿ.
ಅವಕಾಶಕ್ಕಾಗಿ ಕಾಯುವುದು
ನನ್ನಲ್ಲಿ ಪ್ರತಿಭೆಯಿದೆ. ಅಂದಮೇಲೆ ಅವಕಾಶ ಬಂದೇ ಬರುತ್ತದೆ, ನಾನೊಂದಿಷ್ಟು ತಾಳ್ಮೆಯಿಂದ ಕಾಯಬೇಕಷ್ಟೇ. ಹೀಗೆಂದುಕೊಂಡೇನಾದರೂ ನೀವು ನಿಮ್ಮ ಬಳಿ ಬರುವ ಅವಕಾಶಕ್ಕಾಗಿ ಕಾಯುತ್ತಿದ್ದರೆ, ಕೊನೆಗೆಲ್ಲೋ ರಿಸಲ್ಟ್ ಸಿಕ್ಕುತ್ತದೆ ಎನ್ನುವುದು ನಿಜವಾದರೂ ಅದು ನಿಮ್ಮ ಗೆಲುವಾಗಿರುವುದಿಲ್ಲ ಎನ್ನುವುದು ನಿಮ್ಮ ನೆನಪಿನಲ್ಲಿರಲಿ. ಇವತ್ತಿನ ಜಗತ್ತಿನಲ್ಲಿ ಅವಕಾಶ ನಿಮ್ಮನ್ನು ಹುಡುಕಿಕೊಂಡು ಬರುವುದು ಕಡಿಮೆಯಲ್ಲಿ ಕಡಿಮೆ. ಈಗೇನಿದ್ದರೂ ಅವಕಾಶವನ್ನು ನಿಮಗೆ ನೀವೇ ಕ್ರಿಯೇಟ್ ಮಾಡಿಕೊಳ್ಳಬೇಕು. ನಾನು ಹತ್ತು ಜನರಿಗೆ ಪರಿಚಯವಾಗಲು ಏನು ಮಾಡಬೇಕು, ಹತ್ತು ಜನರು ನನ್ನನ್ನು ಗುರುತಿಸಿ ಫಾಲೋ ಮಾಡಬೇಕೆಂದರೆ ನಾನೇನು ಮಾಡಬೇಕು ಎನ್ನುವುದನ್ನು ನೀವೇ ಯೋಚಿಸಿ, ಅದಕ್ಕೊಂದು ದಾರಿ ಹುಡುಕಿಕೊಂಡು ಹೊರಟರೆ ಮಾತ್ರ ಬೇಗ ಬೇಗ ಏರಬೇಕಾದ ಎತ್ತರವನ್ನು ಏರಬಲ್ಲಿರಿ.
ಇವರಿಂದೇನೂ ಉಪಯೋಗವಿಲ್ಲ
ನಿಮ್ಮ ಸುತ್ತಮುತ್ತ ಇರುವ ಯಾರೋ ಒಬ್ಬರ ಬಗ್ಗೆ ನೀವು ಹೀಗೆಂದುಕೊಂಡು ನೆಗ್ಲೆಕ್ಟ್ ಮಾಡಿದಿರೋ ಗೆಲುವು ನಿಮ್ಮಿಂದ ಒಂದಿಷ್ಟು ದೂರ ಸರಿದುಕೊಂಡಿತು ಅಂತಲೇ ಅರ್ಥ! ಹೌದು, ಇವನ್ಯಾತರವನು, ಇವನಿಂದ ನನಗೇನು ಉಪಯೋಗವಿದೆ ಎಂದು ನೀವು ಯಾರೋ ಒಬ್ಬರ ಬಗ್ಗೆ ಅಂದುಕೊಂಡರೂ ನಾಳೆ ಪಶ್ಚಾತ್ತಾಪ ಪಡುವಂತಾಗುತ್ತದೆ ಮತ್ತು ಮುಂದೊಂದು ದಿನ ನೀವು ನೆಗ್ಲೆಕ್ಟ್ ಮಾಡಿದ ವ್ಯಕ್ತಿಯ ಅಪಾಯಿಂಟ್‌ಮೆಂಟಿಗಾಗಿ ನೀವೇ ಕಾಯುವಂತಾಗಬಹುದು. ಆದ್ದರಿಂದ ನಿಮ್ಮ ಸುತ್ತಮುತ್ತ ಇರುವ ಯಾವುದೇ ವ್ಯಕ್ತಿಯನ್ನು ಮಾತನಾಡಿಸದೇ ಇದ್ದರೂ ಅಡ್ಡಿಲ್ಲ, ನಿನ್ನಿಂದ ನನಗೇನೂ ಆಗಬೇಕಾಗಿದ್ದಿಲ್ಲ ಎಂದು ನೆಗ್ಲೆಕ್ಟ್ ಮಾಡಬೇಡಿ. ಯಾರನ್ನೂ ಕೆಟ್ಟದಾಗಿ ನಡೆಸಿಕೊಳ್ಳಬೇಡಿ.
ಕೊನೆಯಿಲ್ಲದ ಕಾಂಟ್ಯಾಕ್ಟುಗಳು
ಇವತ್ತು ಯಾರೊಂದಿಗೋ ಮಾತುಕತೆಯಾಗುತ್ತದೆ. ಇಲ್ಲಿ ನಡೆದ ಮಾತುಕತೆ ಯಿಂದ ಸಂಜೆ ಪಾರ್ಟಿಯೊಂದಕ್ಕೆ ಕರೆ ಬರುತ್ತದೆ. ಅಲ್ಲಿ ಇನ್ಯಾರನ್ನೋ ಪರಿಚಯಿಸಿಕೊಳ್ಳುವ ಅವಕಾಶ ಸಿಕ್ಕುತ್ತದೆ. ಅವರ ಮೂಲಕ ಇನ್ನೊಬ್ಬರ ನಂಬರ್ ಸಿಕ್ಕುತ್ತದೆ. ಹೀಗೆ ನಿಮ್ಮ ಒಂದೊಂದು ಹೆಜ್ಜೆಯನ್ನೂ ಸುಲಭವಾಗಿಸಬಲ್ಲ ವ್ಯಕ್ತಿಗಳನ್ನು ನೀವು ಸಂಪಾದಿಸಿಕೊಳ್ಳುತ್ತಾ ಹೋಗಬೇಕು. ಈ ರೀತಿ ಸಂಪರ್ಕಕ್ಕೆ ಬಂದವರೆಲ್ಲರೂ ನಿಮ್ಮನ್ನು ಗೆಲ್ಲಿಸುತ್ತಾರೆ, ಬೆಳೆಸುತ್ತಾರೆ ಎಂದೆಲ್ಲ ಏನೂ ಅಲ್ಲ. ಆದರೂ ಯಾರು ಯಾವ ಸಂದರ್ಭದಲ್ಲಿ ನಿಮ್ಮ ಗೆಲುವಿಗೆ ಸಣ್ಣದೊಂದು ಜೊತೆ ನೀಡುತ್ತಾರೋ ಹೇಳಲಾಗದು. ಆದ್ದರಿಂದ ನಿಮ್ಮ ಲೈಫಿನಲ್ಲಿ ಜೊತೆಗೆ ಸಿಕ್ಕುವ ಯಾರೆಲ್ಲ ಇರುತ್ತಾರೋ ಅವರೆಲ್ಲರ ಸಂಪರ್ಕದಲ್ಲೂ ಇರಲು ಪ್ರಯತ್ನಿಸಿ.
ಸಾಮಾಜಿಕ ಜಾಲತಾಣಗಳ ಬಳಕೆ
ಮೊದಲೆಲ್ಲ ನಿಮಗೊಂದು ಗೆಲುವು ಸಿಕ್ಕಿರುವುದನ್ನು ಹತ್ತು ಜನರಿಗೆ ತಿಳಿಸಬೇಕೆಂದರೆ ಪತ್ರಿಕೆಗಳ ನೆರವು ಬೇಕಿತ್ತು. ಆನಂತರ ಟಿ.ವಿ ಚಾನೆಲ್ಲುಗಳು ಇದಕ್ಕಿದ್ದವು. ಇದ್ಯಾವುದರ ಸಂಪರ್ಕವೂ ಇಲ್ಲದೇ ಹೋದರೆ, ನೀವೇ ನಿಮಗೆ ಗೊತ್ತಿರುವವರಿಗೆ ನಾನು ಇಂತಹದ್ದರಲ್ಲಿ ಗೆದ್ದೇ ಎಂದು ಹೇಳಿಕೊಂಡು ಫೋನ್ ಮಾಡಬೇಕಿತ್ತು. ಆದರೆ ಈಗ ಇದ್ಯಾವುದರ ಅಗತ್ಯವೂ ಇಲ್ಲ. ಯಾಕೆಂದರೆ ಇದು ಸಾಮಾಜಿಕ ಜಾಲತಾಣಗಳ ಕಾಲ. ನಿಮ್ಮ ಸಾಧನೆಯ ಒಂದೊಂದು ಹೆಜ್ಜೆ, ಆ ಹೆಜ್ಜೆಗಳು ತಂದುಕೊಟ್ಟ ಗೆಲುವು, ಆ ಗೆಲುವಿನಿಂದ ನೀವೇರಿದ ಎತ್ತರ... ಇದನ್ನೆಲ್ಲ ನೀವು ಸಾಮಾಜಿಕ ಜಾಲತಾಣದಲ್ಲಿ ಮುಕ್ತವಾಗಿ ಹಂಚಿಕೊಳ್ಳಬಹುದು ಮತ್ತು ಇದರ ಮೂಲಕವೇ ನೀವೂ ಊಹಿಸದವರನ್ನೂ ತಲುಪಿಕೊಳ್ಳಬಹುದು. ಆದ್ದರಿಂದ ಸಾಮಾಜಿಕ ಜಾಲತಾಣಗಳನ್ನು ಸಾಧ್ಯವಾದಷ್ಟು ನಿಮ್ಮ ಗೆಲುವಿಗೆ ಸಪೋರ್ಟ್ ಮಾಡುವ ರೀತಿಯಲ್ಲೇ ಬಳಸಿಕೊಳ್ಳಿ.
ನಿಮ್ಮದೇ ಸ್ಟೇಜ್... ನಿಮ್ಮದೇ ಶೋ
ಯಾರೋ ಸ್ಟೇಜ್ ಮಾಡುತ್ತಾರೆ. ಅವರು ನಿಮ್ಮನ್ನು ಆಹ್ವಾನಿಸುತ್ತಾರೆ. ನೀವು ಎಲ್ಲರ ಚಪ್ಪಾಳೆಗಳ ನಡುವೆ ಆ ಸ್ಟೇಜ್ ಹತ್ತುತ್ತೀರಿ. ನಿಮ್ಮ ಪ್ರತಿಭೆಯನ್ನು ತೆರೆದಿಡುತ್ತೀರಿ... ಇದಕ್ಕೆಲ್ಲ ಕಾಯುತ್ತಾ ಕುಳಿತುಕೊಳ್ಳಬೇಡಿ. ಬದಲಿಗೆ ನಿಮ್ಮಲ್ಲಿ ಪ್ರತಿಭೆಯಿದೆ ತಾನೇ? ಅದನ್ನು ನೀವೇ ನಿಮ್ಮದೇ ಸ್ಟೇಜ್ ಕ್ರಿಯೇಟ್ ಮಾಡಿಕೊಂಡು ಪ್ರದರ್ಶನಕ್ಕಿಟ್ಟು ಬಿಡಿ. ಇಂಟರ್ನೆಟ್ ತೆರೆದರೆ ಇಂತಹ ಹತ್ತಾರು ವೇದಿಕೆಗಳು ನಿಮಗೆ ಸಿಕ್ಕುತ್ತವೆ. ಬ್ಲಾಗ್, ಕಡಿಮೆ ದರದಲ್ಲಿ ಸಿಕ್ಕುವ ಸ್ವಂತದ ವೆಬ್‌ಸೈಟುಗಳು, ಯುಟ್ಯೂಬ್... ಹೀಗೆ ನಿಮ್ಮ ಪ್ರತಿಭೆಗೆ ಸ್ಟೇಜ್ ಆಗಲಿಕ್ಕೆ ಬೇಕಾದಷ್ಟು ಅವಕಾಶಗಳಿರುತ್ತವೆ. ಇಂತಹ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ. ‘ಸೀಕ್ರೆಟ್ ಸೂಪರ್‌ಸ್ಟಾರ್’ ಸಿನಿಮಾ ಇಂತಹ ವಿಷಯದಲ್ಲಿ ನಿಮಗೆ ಮಾದರಿಯಾಗಬಲ್ಲದು. ಯಾರೋ ಸ್ಟೇಜ್ ಕೊಡುತ್ತಾರೆ ಎಂದು ಕಾಯುವುದಕ್ಕಿಂತ ನಮ್ಮ ಸ್ಟೇಜ್‌ನ್ನು ನಾವೇ ಕ್ರಿಯೇಟ್ ಮಾಡಿಕೊಳ್ಳುವುದಿದೆಯಲ್ಲ ಅದು ನಿಮ್ಮನ್ನು ಗೆಲುವಿಗೆ ಹತ್ತಿರ ಕರೆದೊಯ್ಯುತ್ತದೆ.
ನೀವು ಮನಸ್ಸು ಮಾಡಿ, ಒಂದಿಷ್ಟು ಲೆಕ್ಕಾಚಾರದೊಂದಿಗೆ ಒಂದೊಂದೇ ಹೆಜ್ಜೆ ಇಡುತ್ತಾ ಹೊರಟರೆ ಸೆಲೆಬ್ರಿಟಿ ಪಟ್ಟ ನಿಮ್ಮ ಕೈಗೆ ಸಿಕ್ಕದೇ ಇರುವುದೇನೂ ಅಲ್ಲ. ಅದು ಯಾರೋ ಕೆಲವರಿಗಷ್ಟೇ ಸೀಮಿತವಾದದ್ದು, ಅದಕ್ಕೆಲ್ಲ ಏರುವ ಅರ್ಹತೆ ನಮಗಿಲ್ಲ ಎಂದೆಲ್ಲ ಯಾವತ್ತೂ ಅಂದುಕೊಳ್ಳಬೇಡಿ. ಸಚಿನ್ ತೆಂಡೂಲ್ಕರ್‌ನಿಂದ ಹಿಡಿದು ಕನ್ನಡ ಚಿತ್ರರಂಗದ ಯಶ್‌ವರೆಗೆ ಯಾರೊಬ್ಬರೂ ಹುಟ್ಟು ಸೆಲೆಬ್ರಿಟಿಗಳಲ್ಲ ಎನ್ನುವುದು ನಿಮಗೆ ನೆನಪಿರಲಿ. ಅವರು ಈ ರೇಂಜಿಗೆ ಫೇಮಸ್ಸಾಗುವ ಮೊದಲು ನಮ್ಮ ನಿಮ್ಮ ಹಾಗೇ ಇದ್ದರು. ಮತ್ತು ನಮ್ಮ ಹಾಗೇ ಅವರೂ ಮುಂದೊಂದು ದಿನ ನಾನೂ ಸೆಲೆಬ್ರಿಟಿಯಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎನ್ನುವ ಕನಸನ್ನೇ ಕಂಡಿದ್ದರು. ಕಂಡ ಕನಸನ್ನು ನನಸು ಮಾಡಿಕೊಳ್ಳಲು ಏನೆಲ್ಲ ಮಾಡಬೇಕಿತ್ತೋ ಅದೆಲ್ಲವನ್ನೂ ಪಕ್ಕಾ ಏಕಾಗ್ರತೆಯಿಂದ ಮಾಡಿದರು, ಗೆದ್ದರು. ಅವರೇ ಗೆದ್ದು ಸೆಲೆಬ್ರಿಟಿಗಳಾಗಿದ್ದಾರೆ ಎಂದಮೇಲೆ ನಮ್ಮಿಂದ ಯಾಕೆ ಸಾಧ್ಯವಿಲ್ಲ?
ಸಾಧ್ಯವಿದೆ. ನಾವು ಮನಸ್ಸು ಮಾಡಬೇಕಷ್ಟೇ. ಮತ್ತು ಇವತ್ತಿನ ಜಗತ್ತು ಯಾವ ದಾರಿಯಲ್ಲಿ ನಡೆಯಲು ಹೇಳುತ್ತದೆಯೋ ಆ ದಾರಿಯಲ್ಲಿ ನಡೆಯಲೇಬೇಕು. ಅದು ನಮ್ಮಿಂದ ಸಾಧ್ಯವಾಗುತ್ತದೆಯೆಂದರೆ ಇವತ್ತು ಹೀಗಿರುವ ನಾವು ನಾಳೆಯೇ ಸೆಲೆಬ್ರಿಟಿ ಸುಖದಲ್ಲಿ ತಂಪಾಗಿರುತ್ತೇವೆ.
-ಆರುಡೋ ಗಣೇಶ
ಸೆಲೆಬ್ರಿಟಿ ಆಗಲು ಇಚ್ಛಿಸುವ ಮನಸ್ಸುಗಳಿಗೆ ದಾರಿದೀಪ.
ಪ್ರತ್ಯುತ್ತರಅಳಿಸಿ