ಪೋಸ್ಟ್‌ಗಳು

ಮೇ, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಶಾಮಣ್ಣನ ಗೂಡಂಗಡಿಯಲ್ಲಿ ತತ್ವ ಸಿದ್ಧಾಂತಗಳ ಮಾರಾಟವೂ...

ಇಮೇಜ್
ಅವು ಹೊಸನಗರದ ಕಾಲೇಜಿನ ದಿನಗಳು. ಆಗ ನನಗೊಂದಿಷ್ಟು ಓದುವ, ಬರೆಯುವ ಹುಚ್ಚಿತ್ತು. ಆದರೆ ನನ್ನೊಂದಿಗೆ ಕಾಲೇಜಿನಲ್ಲಿ ಓದುತ್ತಿದ್ದ ಬಹುತೇಕರು ಕ್ಲಾಸಿನ ಪುಸ್ತಕವನ್ನೇ ಓದುವುದು ಕಷ್ಟ, ಇನ್ನು ಇದರಾಚೆಗೆ ಹೋಗಿ ಏನು ಓದುವುದು ಎನ್ನುವ ಮನಸ್ಥಿತಿಯವರಾಗಿದ್ದರಿಂದ, ನನ್ನ ಯೋಚನೆ, ಅಭಿರುಚಿಗೆ ಹೊಂದಿಕೊಳ್ಳುವ ಸ್ನೇಹಿತರು ಸಿಕ್ಕಿರಲಿಲ್ಲ. ನನಗೂ ಕಾಲೇಜಿನಲ್ಲಿ ಹೆಚ್ಚು ಸಮಯ ಕಳೆಯುವುದು ಇಷ್ಟವಾಗುತ್ತಿರಲಿಲ್ಲ. ಹೀಗಿದ್ದಾಗಲೇ ನನಗೆ ಆಗ ನಡೆಯುತ್ತಿದ್ದ ‘ಸಾಹಿತ್ಯಾಧ್ಯಯನ ಶಿಬಿರ’ವೊಂದರಲ್ಲಿ ಪರಿಚಯವಾಗಿದ್ದು ಹೊಸನಗರದ ಶಾಮಣ್ಣ. ಹೊಸನಗರದಲ್ಲಿ ಸಣ್ಣದೊಂದು ‘ಗೂಡಂಗಡಿ’ ನಡೆಸುತ್ತಿದ್ದ ಶಾಮಣ್ಣ ಮನೆಯ ಪರಿಸ್ಥಿತಿ ಕಾರಣಕ್ಕೆ ಮನಸ್ಸಿಲ್ಲದ ಮನಸ್ಸಿನಿಂದ ಓದನ್ನು ನಿಲ್ಲಿಸಿ ವ್ಯವಹಾರಕ್ಕಿಳಿದಿದ್ದರು. ಆದರೆ ಅವರಿಗೊಂದಿಷ್ಟು ಸಾಹಿತ್ಯದೆಡೆಗೆ ಆಸಕ್ತಿ ಇದ್ದಿದ್ದರಿಂದ, ಅಂಗಡಿಗೆ ರಜೆ ಇದ್ದ ದಿನದಲ್ಲಿ ಅಥವಾ ಅಂಗಡಿಗೆ ಸಾಮಾನು ಕೊಳ್ಳಲು ಶಿವಮೊಗ್ಗಕ್ಕೆ ಹೋಗುವುದಿದ್ದಾಗ ಅಲ್ಲಿ ಯಾವುದಾದರೂ ಸಾಹಿತ್ಯ ಸಂಬಂಧಿ ಕಾರ್ಯಕ್ರಮವಿದ್ದರೆ ಅದಕ್ಕೆ ಅಟೆಂಡ್ ಆಗುವ ರೂಢಿ ಮಾಡಿಕೊಂಡಿದ್ದರು. ಹಾಗೆ ಅವತ್ತು ಅವರು ಶಿವಮೊಗ್ಗದಲ್ಲಿ ನಡೆಯುತ್ತಿದ್ದ ಸಾಹಿತ್ಯಾಧ್ಯಯನ ಶಿಬಿರವೊಂದಕ್ಕೆ ಬಂದವರು, ಆ ಶಿಬಿರಕ್ಕೆ ನನ್ನ ಹಾಗೇ ಬಂದಿದ್ದ ಲೇಖಕರೊಬ್ಬರ ಜೊತೆ ನಾನು ಮಾತನಾಡುತ್ತಿದ್ದಾಗ ನಾನು ‘ಕೋಡೂರಿನವನು’ ಎನ್ನುವುದು ಗೊತ್ತಾಗಿ, ಅವರಾಗಿಯೇ ನನ್ನ ಪರಿಚಯ ಮಾಡಿಕೊಂಡರು.