ಶಾಮಣ್ಣನ ಗೂಡಂಗಡಿಯಲ್ಲಿ ತತ್ವ ಸಿದ್ಧಾಂತಗಳ ಮಾರಾಟವೂ...

ಅವು ಹೊಸನಗರದ ಕಾಲೇಜಿನ ದಿನಗಳು. ಆಗ ನನಗೊಂದಿಷ್ಟು ಓದುವ, ಬರೆಯುವ ಹುಚ್ಚಿತ್ತು. ಆದರೆ ನನ್ನೊಂದಿಗೆ ಕಾಲೇಜಿನಲ್ಲಿ ಓದುತ್ತಿದ್ದ ಬಹುತೇಕರು ಕ್ಲಾಸಿನ ಪುಸ್ತಕವನ್ನೇ ಓದುವುದು ಕಷ್ಟ, ಇನ್ನು ಇದರಾಚೆಗೆ ಹೋಗಿ ಏನು ಓದುವುದು ಎನ್ನುವ ಮನಸ್ಥಿತಿಯವರಾಗಿದ್ದರಿಂದ, ನನ್ನ ಯೋಚನೆ, ಅಭಿರುಚಿಗೆ ಹೊಂದಿಕೊಳ್ಳುವ ಸ್ನೇಹಿತರು ಸಿಕ್ಕಿರಲಿಲ್ಲ. ನನಗೂ ಕಾಲೇಜಿನಲ್ಲಿ ಹೆಚ್ಚು ಸಮಯ ಕಳೆಯುವುದು ಇಷ್ಟವಾಗುತ್ತಿರಲಿಲ್ಲ. ಹೀಗಿದ್ದಾಗಲೇ ನನಗೆ ಆಗ ನಡೆಯುತ್ತಿದ್ದ ‘ಸಾಹಿತ್ಯಾಧ್ಯಯನ ಶಿಬಿರ’ವೊಂದರಲ್ಲಿ ಪರಿಚಯವಾಗಿದ್ದು ಹೊಸನಗರದ ಶಾಮಣ್ಣ. ಹೊಸನಗರದಲ್ಲಿ ಸಣ್ಣದೊಂದು ‘ಗೂಡಂಗಡಿ’ ನಡೆಸುತ್ತಿದ್ದ ಶಾಮಣ್ಣ ಮನೆಯ ಪರಿಸ್ಥಿತಿ ಕಾರಣಕ್ಕೆ ಮನಸ್ಸಿಲ್ಲದ ಮನಸ್ಸಿನಿಂದ ಓದನ್ನು ನಿಲ್ಲಿಸಿ ವ್ಯವಹಾರಕ್ಕಿಳಿದಿದ್ದರು. ಆದರೆ ಅವರಿಗೊಂದಿಷ್ಟು ಸಾಹಿತ್ಯದೆಡೆಗೆ ಆಸಕ್ತಿ ಇದ್ದಿದ್ದರಿಂದ, ಅಂಗಡಿಗೆ ರಜೆ ಇದ್ದ ದಿನದಲ್ಲಿ ಅಥವಾ ಅಂಗಡಿಗೆ ಸಾಮಾನು ಕೊಳ್ಳಲು ಶಿವಮೊಗ್ಗಕ್ಕೆ ಹೋಗುವುದಿದ್ದಾಗ ಅಲ್ಲಿ ಯಾವುದಾದರೂ ಸಾಹಿತ್ಯ ಸಂಬಂಧಿ ಕಾರ್ಯಕ್ರಮವಿದ್ದರೆ ಅದಕ್ಕೆ ಅಟೆಂಡ್ ಆಗುವ ರೂಢಿ ಮಾಡಿಕೊಂಡಿದ್ದರು. ಹಾಗೆ ಅವತ್ತು ಅವರು ಶಿವಮೊಗ್ಗದಲ್ಲಿ ನಡೆಯುತ್ತಿದ್ದ ಸಾಹಿತ್ಯಾಧ್ಯಯನ ಶಿಬಿರವೊಂದಕ್ಕೆ ಬಂದವರು, ಆ ಶಿಬಿರಕ್ಕೆ ನನ್ನ ಹಾಗೇ ಬಂದಿದ್ದ ಲೇಖಕರೊಬ್ಬರ ಜೊತೆ ನಾನು ಮಾತನಾಡುತ್ತಿದ್ದಾಗ ನಾನು ‘ಕೋಡೂರಿನವನು’ ಎನ್ನುವುದು ಗೊತ್ತಾಗಿ, ಅವರಾಗಿಯೇ ನನ್ನ ಪರಿಚಯ ಮಾಡಿಕೊಂಡರು. ನನಗೂ ಈಗಲೂ, ಆಗಲೂ ಸಾಹಿತ್ಯದ ವಿಷಯದಲ್ಲಿ ‘ಮುಳುಗಡೆ ಸ್ಥಿತಿ’ಯಲ್ಲೇ ಉಳಿದಿರುವ ಹೊಸನಗರದಲ್ಲಿ ನನ್ನ ಹಾಗೇ ಸಾಹಿತ್ಯದ ಅಭಿರುಚಿ ಇರುವವರೊಬ್ಬರು ಸಿಕ್ಕರಲ್ಲ ಎಂದು ಖುಷಿಯಾಗಿ ಅವರೊಂದಿಗೆ ಮಾತನಾಡಿದೆ. ಮತ್ತು ಆ ದಿನದ ಶಿಬಿರ ಮುಗಿಯುವ ಹೊತ್ತಿಗೆ ನಾವಿಬ್ಬರೂ ಆತ್ಮೀಯರಾಗಿದ್ದೆವು. ವಾಪಾಸ್ಸು ಊರಿಗೆ ಬಸ್ಸಿನಲ್ಲಿ ಹೊರಟಾಗ, ಹೊಸನಗರದ ಕಾಲೇಜಿಗೆ ಬಂದಾಗ ತಮ್ಮ ಅಂಗಡಿಗೆ ಬಂದು ಹೋಗುವಂತೆ ಆಹ್ವಾನ ನೀಡಿದ್ದರು ಶಾಮಣ್ಣ. ನನಗೂ ಹೊಸನಗರದ ಕಾಲೇಜಿನಾಚೆಗೆ ಲೈಬ್ರರಿ ಬಿಟ್ಟರೆ ಸಮಯ ಕಳೆಯುವ ಬೇರೆ ಜಾಗಗಳಿರಲಿಲ್ಲವಾದ್ದರಿಂದ ಅವರ ಅಂಗಡಿ ಕಡೆ ಬರುತ್ತೇನೆ ಎಂದೂ ಒಪ್ಪಿಕೊಂಡೆ. ಹಾಗೂ ಆನಂತರದ ದಿನಗಳಲ್ಲಿ ಕಾಲೇಜಿಗೆ ಹೋಗುವ ನೆಪದಲ್ಲಿ ಹೊಸನಗರ ಹೋದವನು ಹೆಚ್ಚಿನ ಸಮಯವನ್ನು ಶಾಮಣ್ಣನ ಗೂಡಂಗಡಿಯಲ್ಲೇ ಕಳೆಯುತ್ತಿದ್ದೆ.

ನಾನು ಕಾಲೇಜಿಗೆ ಹೋಗುತ್ತಿದ್ದ ಹೊಸನಗರದ ಶಾಮಣ್ಣ ನನಗೆ ಇಷ್ಟವಾಗಲು ಇನ್ನೂ ಒಂದು ಕಾರಣವಿತ್ತು. ಅವರಿಗೆ ಮನೆಯಲ್ಲಿ ವಿಪರೀತ ಬಡತನವಿತ್ತು. ಮಲೆನಾಡಿನ ಬಡಕುಟುಂಬವೊಂದು ಶ್ರೀಮಂತರ ಅಟ್ಟಹಾಸವನ್ನೆಲ್ಲ ಹೇಗೆ ನೋಡಿರುತ್ತದೆಯೋ ಹಾಗೇ ಅವರ ಕುಟುಂಬವೂ ನೋಡಿತ್ತು. ಆದ್ದರಿಂದಲೇ ಆ ಬಡತನದ ನಡುವೆಯೇ ತಂದೆಯ ಪ್ರೋತ್ಸಾಹದಿಂದ ಡಿಗ್ರಿ ತನಕ ಓದಿದ್ದ ಶಾಮಣ್ಣ, ಬದುಕೆಂದರೆ ಸುಮ್ಮನೆ ಬದುಕುವುದಲ್ಲ, ಅದಕ್ಕೊಂದು ತತ್ವ ಸಿದ್ಧಾಂತ ಇರಬೇಕು ಎಂದುಕೊಂಡಿದ್ದರು. ಮಾನವೀಯತೆ, ಅಧ್ಯಯನ, ಜಾತ್ಯಾತೀತತೆ, ಭ್ರಷ್ಟ ರಾಜಕಾರಣದ ಬಗ್ಗೆ ಅಸಹನೆ, ಸಿಟ್ಟು... ಇವೆಲ್ಲವೂ ನನ್ನಲ್ಲಿರುವಂತೆಯೇ ಅವರಲ್ಲಿಯೂ ಇತ್ತು. ಆದ್ದರಿಂದಲೇ ನನಗೆ ಶಾಮಣ್ಣ ಒಂದಿಷ್ಟು ನನ್ನ ಮನಸ್ಥಿತಿಗೆ ಹೊಂದುವವರು ಅನ್ನಿಸಿತ್ತು. ಅದರಲ್ಲೂ ಜೀವನೋಪಾಯಕ್ಕಾಗಿ ಗೂಡಂಗಡಿ ನಡೆಸುತ್ತಾ, ಅದರ ನಡುವೆಯೇ ತಮ್ಮ ಸಾಹಿತ್ಯದೆಡೆಗಿನ ಅಭಿರುಚಿಯನ್ನು ಉಳಿಸಿಕೊಂಡು, ವ್ಯವಸ್ಥೆಯ ವಿರುದ್ಧ ಹೋರಾಡಬೇಕೆನ್ನುತ್ತಿದ್ದ ಶಾಮಣ್ಣ ಮತ್ತು ಅವರ ಸ್ನೇಹವನ್ನು ನಾನು ಇಷ್ಟಪಡದೇ ಇರಲು ಕಾರಣವೂ ಇರಲಿಲ್ಲ.

‘ಗೂಡಂಗಡಿ’ ಎಂದರೆ ಯಾವ ವ್ಯಾಪಾರ ಎನ್ನುವುದು ನಿಮಗೂ ತಿಳಿದಿರುತ್ತದೆ. ಮುಖ್ಯವಾಗಿ ಎಲೆಯಡಿಕೆ, ಹೊಗೆಸೊಪ್ಪು, ಜೊತೆಗೆ ಬೀಡಿ, ಸಿಗರೇಟುಗಳು ಮಾರಾಟವಾಗುತ್ತವೆ. ಅದರೊಂದಿಗೆ ಆಗ ಮಾರುಕಟ್ಟೆಗೆ ಬಂದಿದ್ದ ವಿಮಲ್, ಪಾನ್‌ಪರಾಗ್ ಕೂಡಾ ಈ ಗೂಡಂಗಡಿಗಳಲ್ಲೇ ಹೆಚ್ಚು ಮಾರಾಟವಾಗುತ್ತಿದ್ದದ್ದು. ಇದರಲ್ಲಿ ಹೊಸನಗರ ಬಸ್ ಸ್ಟ್ಯಾಂಡ್ ಸಮೀಪವೇ ಇದ್ದ ಶಾಮಣ್ಣನ ಗೂಡಂಗಡಿಯೂ ಸೇರಿತ್ತು. ನಾನು ಸಾಮಾನ್ಯವಾಗಿ ಮನೆಯಿಂದ ಹೊಸನಗರಕ್ಕೆ ಕಾಲೇಜಿಗೆ ಬಸ್ಸಿನಲ್ಲಿ ಹೋದವನು, ಬಸ್‌ಸ್ಟ್ಯಾಂಡಿನಲ್ಲಿ ಇಳಿದು ನೇರವಾಗಿ ಕಾಲೇಜಿಗೆ ಹೋಗಿದ್ದಕ್ಕಿಂತ ಮೊದಲು ಶಾಮಣ್ಣನ ಗೂಡಂಗಡಿ ಕಡೆಗೆ ಹೋಗುತ್ತಿದ್ದದ್ದೇ ಹೆಚ್ಚು. ಬಂದ ಗಿರಾಕಿಗಳಿಗೆ ಹೊಗೆಸೊಪ್ಪು ಕೊಡುತ್ತಲೋ, ಬೀಡಾ ಹಾಕಿಕೊಡುತ್ತಲೋ, ಬೀಡಿ ಸಿಗರೇಟು ಕೊಡುತ್ತಲೋ ಇರುತ್ತಿದ್ದ ಶಾಮಣ್ಣನಿಗೊಂದು ಹಾಯ್ ಹೇಳಿ, ವ್ಯಾಪಾರದ ನಡುವೆಯೇ ಅವರೇನೋ ಸಾಹಿತ್ಯವೋ, ಪ್ರಚಲಿತ ವಿದ್ಯಮಾನದ ಬಗ್ಗೆಯೋ ಮಾತನಾಡಲಾರಂಭಿಸಿದರೆ ಅದಕ್ಕೆ ನನ್ನ ಅಭಿಪ್ರಾಯವನ್ನೂ ತಾಕಿಸುತ್ತಾ... ಕಡೆಗೆ ಆಸಕ್ತಿ ಇಲ್ಲದ ಕಾಲೇಜಿನ ಕಡೆಗೆ ಹೋಗದೆ ಎಷ್ಟೋ ಸಾರಿ ಶಾಮಣ್ಣನ ಅಂಗಡಿಯಿಂದ ವಾಪಾಸ್ಸು ಬಸ್ಸು ಹತ್ತಿ ಮನೆಗೆ ಬಂದಿದ್ದೂ ಇರುತ್ತಿತ್ತು. ಆ ದಿನಗಳಿಗೆ ಶಾಮಣ್ಣನ ವಿಚಾರಧಾರೆಗಳು ನಿಜಕ್ಕೂ ಸರಿ ಅನ್ನಿಸುತ್ತಿತ್ತು. ಸದಾ ಅರೆನಿದ್ದೆಯಲ್ಲೇ ಇದ್ದಂತೆ ಭಾಸವಾಗುತ್ತಿದ್ದ ಹೊಸನಗರದಲ್ಲಿ ಶಾಮಣ್ಣನಂತಹ ಕ್ರಾಂತಿಕಾರಕ ವಿಚಾರಧಾರೆಗಳನ್ನು ಹೊಂದಿದ ಮನುಷ್ಯನೊಬ್ಬ ಜೀವಿಸುತ್ತಿದ್ದಾನೆ ಎನ್ನುವುದೇ ನನಗೆ ದೊಡ್ಡ ಸಂತಸವಾಗಿತ್ತು. ಜೊತೆಗೆ ಆಗ ನಾನು ಬರೆಯುತ್ತಿದ್ದ ಕಥೆಗಳನ್ನು ಪ್ರಕಟಣೆಗೆ ಕಳಿಸುವ ಮೊದಲು ಅವರೊಮ್ಮೆ ಓದಿ ವಿಮರ್ಶಿಸುತ್ತಿದ್ದ ರೀತಿಯಿಂದಲೂ ನನಗವರು ಆಪ್ತವಾಗಿದ್ದರು. ಇದರೊಂದಿಗೆ ಅಂಗಡಿ ಬಳಿ ಬರುತ್ತಿದ್ದ ಸಮಾನಮನಸ್ಕರಿಗೆ ನನ್ನನ್ನು ಪರಿಚಯಿಸುತ್ತಿದ್ದ ರೀತಿ... ಹೀಗೆ ತತ್ವ ಸಿದ್ಧಾಂತ ಮತ್ತು ಸಾಹಿತ್ಯವನ್ನೇ ಮಾತನಾಡುತ್ತಿದ್ದ ಶಾಮಣ್ಣ ನನಗೆ ಆಪ್ತವಾಗುತ್ತಾ ಹೋಗಿಬಿಟ್ಟರು. ನಿಧಾನವಾಗಿ ಸಾಹಿತ್ಯಪ್ರೀತಿಯ ನಮ್ಮ ಚಿಕ್ಕದೊಂದು ಗೆಳೆಯರ ಬಳಗವೇ ಸೃಷ್ಟಿಯಾಗಿ, ಅದಕ್ಕೆ ವಯಸ್ಸಿನಲ್ಲಿಯೂ ನಮ್ಮೆಲ್ಲರಿಗಿಂತ ಹಿರಿಯರಾದ ಶಾಮಣ್ಣನೇ ಮುಖ್ಯಸ್ಥರಾದಂತೆ...

ಇಷ್ಟಕ್ಕೂ ತತ್ವ ಸಿದ್ಧಾಂತವನ್ನೇ ನೆಚ್ಚಿಕೊಂಡು ಬದುಕುವುದೆಂದರೇನು? ಸಮಾಜಕ್ಕೆ ಕೆಡುಕುಂಟು ಮಾಡದಂತೆ ಅಥವಾ ಕೆಡುಕುಂಟು ಮಾಡುವ ಸಂಗತಿಗಳನ್ನು ಪ್ರಚೋದಿಸದೇ, ಅಂತಹದ್ದಕ್ಕೆ ನಾವು ಸಂಪರ್ಕ ಸೇತುವಾಗದೇ ಬದುಕು ಸಾಗಿಸುವುದು ಹೇಗೆ? ಇದಕ್ಕೆ ನಮ್ಮ ಮನೆಯಲ್ಲಿ ಪಪ್ಪ ಅಮ್ಮ ಸೇರಿದಂತೆ ನಾನು ಓದುತ್ತಿದ್ದ ಪುಸ್ತಕಗಳು, ಒಡನಾಡುತ್ತಿದ್ದ ಕೆಲವು ವ್ಯಕ್ತಿಗಳ ಮಾತುಗಳು ನನಗೊಂದಿಷ್ಟು ಉತ್ತರ ನೀಡಿದ್ದವು. ಸಾರಾಯಿ ಕುಡಿಯುವುದು ಎಷ್ಟು ತಪ್ಪೋ, ಅದನ್ನು ಮಾರಾಟ ಮಾಡುವುದೂ ಅದಕ್ಕಿಂತ ದೊಡ್ಡ ತಪ್ಪು. ಇದೇ ರೀತಿ ಸಿಗರೇಟು, ಬೀಡಿಯೂ ಕೂಡಾ. ತಂಬಾಕಿನ ಇನ್ನುಳಿದ ಉತ್ಪನ್ನಗಳ ಮಾರಾಟ ಮತ್ತು ಸೇವನೆಯೂ ಕೂಡಾ ಇದೇ ಪಟ್ಟಿಗೆ ಸೇರುತ್ತದೆ. ಗಾಂಜಾ, ಕಳ್ಳತನ, ಕೊಲೆ, ಮೋಸ, ಕೊಟ್ಟ ಮಾತು ತಪ್ಪುವುದು... ಆದ್ದರಿಂದಲೇ ನಮ್ಮ ಮನೆಯಲ್ಲಿ ನಮ್ಮನ್ನೆಲ್ಲ ಇದರಿಂದ ದೂರವೇ ಇರಿಸಿದರು. ಮೂರು ಹೊತ್ತಿನ ಊಟಕ್ಕೆ ಎಷ್ಟು ಸಂಪಾದನೆ ಅಗತ್ಯವಿದೆಯೋ ಅದಕ್ಕೆ ತಕ್ಕಂತಹ ಕೆಲಸಗಳು ಬೇಕಾದಷ್ಟಿರುತ್ತವೆ, ಅವುಗಳ ಕಡೆಗೆ ಗಮನ ಕೊಡುವುದೇ ನಮ್ಮ ಬದುಕಿನ ಗುರಿಯಾಗಬೇಕು ಎಂದು ಪಪ್ಪ ಅಮ್ಮ ಇಬ್ಬರೂ ಹೇಳುತ್ತಿದ್ದರು. ಇದನ್ನು ಇನ್ನಷ್ಟು ಗಟ್ಟಿಗೊಳಿಸಿದ್ದು ನಾನು ಓದುತ್ತಿದ್ದ ಪುಸ್ತಕಗಳು. ಒಂದು ವಯಸ್ಸಿಗೆ ಬರುತ್ತಿದ್ದಂತೆ ಅಂದರೆ ಬದುಕೆಂದರೆ ನಮ್ಮದೇ ತತ್ವ ಸಿದ್ಧಾಂತದ ಪ್ರಕಾರ ಬದುಕುವುದು ಎನ್ನುವುದನ್ನು ನಾನು ಕಂಡುಕೊಂಡ ಮೇಲೆ ಇವೆಲ್ಲದರಿಂದ ದೂರವೇ ಉಳಿದೆ. ಸಮಾಜಕ್ಕೆ ಅಪಾಯಕಾರಿಯಾದ ಎಲ್ಲದರಿಂದ ದೂರವೇ ಉಳಿದು ನನ್ನಿಷ್ಟದಂತೆ ಬದುಕು ಕಟ್ಟಿಕೊಳ್ಳುವ ಬಗ್ಗೆ ಯೋಚಿಸಲಾರಂಭಿಸಿದ್ದೆ. ಹೀಗಿರುವಾಗಲೇ ಶಾಮಣ್ಣನನ್ನು ಮತ್ತು ಅವರ ಕುಟುಂಬವನ್ನು ನೋಡು ನೋಡುತ್ತಾ, ಜೀವನೋಪಾಯಕ್ಕಾಗಿ ನಾನು ಸಮಾಜದ ಸ್ವಾಸ್ಥ್ಯ ಕೆಡಿಸುವ ವ್ಯಾಪಾರಕ್ಕಿಳಿಯುತ್ತೇನೆ, ಆದರೆ ನಾನು ಮಾತ್ರ ಕೆಡುವುದಿಲ್ಲ ಎಂದರೆ ಹೇಗೆ? ಎನ್ನುವ ಪ್ರಶ್ನೆಯೊಂದು ನನ್ನಲ್ಲಿ ಹುಟ್ಟಿಕೊಂಡಿತು. ಅಂದಹಾಗೇ, ಶಾಮಣ್ಣನ ತಂದೆ ಆಗ ಅವರ ಹಳ್ಳಿಯಲ್ಲಿ ‘ಕೊಟ್ಟೆ ಸಾರಾಯಿ’ ವ್ಯಾಪಾರ ಮಾಡುತ್ತಿದ್ದರು!

ಇವೆಲ್ಲದರ ನಡುವೆ ಇನ್ನೂ ಒಂದು ಸಂಗತಿ ನನ್ನನ್ನು ಶಾಮಣ್ಣನ ಕುಟುಂಬದ ಬಗ್ಗೆ ವಿಶೇಷ ಅನ್ನಿಸುವಂತೆ ಮಾಡಿತ್ತು. ಅದೇನೆಂದರೆ ಅವರು ‘ಆನಂದಮಾರ್ಗ’ ಪಂಥದ ಅನುಯಾಯಿಗಳಾಗಿದ್ದರು. ಹೀಗೆ ಅನುಯಾಯಿಗಳಾಗುವವರನ್ನು ಆನಂದಮಾರ್ಗಿಗಳು ಎಂದು ಕರೆಯುತ್ತಾರೆ. ಈ ಮಾರ್ಗದ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲವಾದರೂ, ಶಾಮಣ್ಣನ ತಂದೆಯ ಕಾಲದಿಂದಲೂ ಈ ಪಂಥದ ಅನುಯಾಯಿಗಳಾಗಿದ್ದರು ಮತ್ತು ಆ ಪಂಥ ಏನನ್ನು ಹೇಳುತ್ತದೆಯೋ ಅದನ್ನೆಲ್ಲ ಅವರು ಅನುಸರಿಸುತ್ತಾರೆ ಎನ್ನುವುದನ್ನು ಶಾಮಣ್ಣನೇ ನನಗೆ ಹೇಳಿದ್ದರು. ವರ್ಷಕ್ಕೊಮ್ಮೆ ಈ ಪಂಥಕ್ಕೆ ಸಂಬಂಧಿಸಿದಂತೆ ಅವರ ಊರಿನಲ್ಲಿ ಕಾರ್ಯಕ್ರಮವೊಂದನ್ನು ನಡೆಸುತ್ತಿದ್ದರು. ಒಂದೋ ಎರಡೋ ವರ್ಷವೋ ನಾನು ಆ ಕಾರ್ಯಕ್ರಮಕ್ಕೆ ಹೋಗಿದ್ದೆ. ಆಗಲೇ ಅವರ ಮನೆಯನ್ನು ನಾನು ನೋಡಿದ್ದು. ಆಗಲೂ ಒಂದು ಬಗೆಯ ಬಡತನದಲ್ಲೇ ಇದ್ದ ಶಾಮಣ್ಣನ ಕುಟುಂಬದವರು, ಸಾರಾಯಿ, ಸಿಗರೇಟು, ಗುಟ್ಕಾ ಇತ್ಯಾದಿಗಳನ್ನು ಮಾರುತ್ತಾ, ಆ ಹಳ್ಳಿಯಲ್ಲಿ ಯಾರಿಂದಲೂ ಊಹಿಸಲಾಗದಂತೆ ಹೀಗೆ ಆನಂದಮಾರ್ಗದ ಅನುಯಾಯಿಗಳಾಗಿ, ತಮ್ಮದೇ ರೀತಿಯಲ್ಲಿ ಬದುಕು ನಡೆಸುತ್ತಿದ್ದದ್ದೂ ನನ್ನೊಳಗೆ ಅವರ ಬಗ್ಗೆ ಅಚ್ಚರಿ, ಖುಷಿಯನ್ನೆಲ್ಲ ಹುಟ್ಟಿಸಿತ್ತು. ಹೀಗಿದ್ದಾಗಲೇ ಆ ಪ್ರಶ್ನೆ ನನ್ನಲ್ಲಿ ಹುಟ್ಟಿದ್ದು...

ಹೆಚ್ಚಿನ ಬಾರಿ ನನ್ನೊಳಗೆ ಹುಟ್ಟಿಕೊಳ್ಳುವ ಪ್ರಶ್ನೆಗಳಿಗೆ ನಾನೇ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತೇನೆ. ಯಾಕೆಂದರೆ, ಬೇರೆಯವರ ಬಗ್ಗೆ, ಬೇರೆ ಸಂಗತಿಗಳ ಬಗ್ಗೆಯಾಗಲೀ ನಮ್ಮೊಳಗೆ ಹುಟ್ಟಿಕೊಳ್ಳುವ ಪ್ರಶ್ನೆಗಳನ್ನು ನಾವು ಎದುರಿನವರಿಗೆ ಕೇಳಿದರೆ ಅವರಿಗೆ ಅದು ನೋವು ನೀಡುವ ಅಥವಾ ಅವರನ್ನೊಂದು ಬಗೆಯ ಸಂಕೋಚದ ಚಿಪ್ಪಿನಲ್ಲಿ ಮುದುಡಿಕೊಳ್ಳುವಂತೆ ಮಾಡುವ ಸಂದರ್ಭಗಳೇ ಹೆಚ್ಚಿರುತ್ತವೆ. ಈ ಕಾರಣಕ್ಕಾಗಿ ನಾನು ಬೇರೆಯವರ ಬಗ್ಗೆ ಹುಟ್ಟಿಕೊಳ್ಳುವ ಪ್ರಶ್ನೆಯನ್ನು ಥಟ್ಟಂತ ಅವರೆದುರು ತೆರೆದಿಡುವುದಿಲ್ಲ. ನಾನೇ ತಾಳ್ಮೆಯಿಂದ ಅದಕ್ಕೆ ಉತ್ತರ ಹುಡುಕಿಕೊಳ್ಳಲು ಪ್ರಯತ್ನಿಸುತ್ತೇನೆ. ಆದರೆ ಈ ತತ್ವ ಸಿದ್ಧಾಂತದ ಬಗ್ಗೆ ಊರೆಲ್ಲ ಟಾಂಟಾಂ ಮಾಡಿಕೊಂಡು ಮಾತನಾಡುತ್ತಾ, ಕೊನೆಗೆ ಹೋಗಿ ಕೆಸರಿನ ನಡುವೆ ಕುಳಿತುಕೊಂಡು ನಾನು ಕುಳಿತಿರುವುದು ಹಾಲಿನಷ್ಟು ಸ್ವಚ್ಛವಾಗಿರುವ ನೀರಿನಲ್ಲಿ ಎಂದು ನಂಬಿಸಲು ಪ್ರಯತ್ನಿಸುತ್ತಾರಲ್ಲ, ಅವರ ವಿಷಯದಲ್ಲಿ ನಾನು ಸ್ವಲ್ಪ ಹೀಗಲ್ಲ! ನಾಳೆ ಅವರು ನನ್ನ ಬಗ್ಗೆ ಎಷ್ಟು ಸಿಟ್ಟು ಮಾಡಿಕೊಂಡರೂ, ನನ್ನ ವಿರುದ್ಧ ಸಲ್ಲದ ಅಪಪ್ರಚಾರ ಮಾಡಿದರೂ, ನಾನೇನಾದರೂ ಮಾಡುತ್ತೇನೆ ಇವನಿಗ್ಯಾಕೋ ಇದೆಲ್ಲ ಎಂದು ಉರುಟಿಕೊಂಡರೂ ನಾನು ಸುಮ್ಮನಿರುವುದು ಸ್ವಲ್ಪ ಕಡಿಮೆಯೇ. ನೇರಾನೇರ ಕೇಳಿ, ನೀವು ಮಾತಿನಲ್ಲಷ್ಟೇ ತತ್ವ ಸಿದ್ಧಾಂತ, ಸಾಹಿತ್ಯ ಮಣ್ಣು ಮಸಿಯೆಲ್ಲ ಅಂತೀರಿ, ಆದರೆ ಕೊನೆಗೆ ನಿಮ್ಮ ಬದುಕಿನ ಹಣೆಬರಹವೂ ಇಷ್ಟೇ ಎಂದು ಹೇಳಿಯೇ ಮಾತು ಮುಗಿಸುತ್ತೇನೆ. ಈ ಶಾಮಣ್ಣನ ವಿಷಯದಲ್ಲಿಯೂ ಹೀಗೇ ಆಯಿತು. ಯಾಕೋ ಇವರು ಹೇಳುವುದೊಂದು ಮಾಡುವುದಿನ್ನೊಂದು ಎನ್ನುವ ಕೆಟಗರಿಗೆ ಸೇರುವಂತಹ ವ್ಯಕ್ತಿ ಅಂತನ್ನಿಸಲಾರಂಭಿಸಿದ್ದೇ, ಒಮ್ಮೆ ಅವರ ಗೂಡಂಗಡಿಯಲ್ಲಿ ಕುಳಿತುಕೊಂಡು ಹೆಚ್ಚು ಗಿರಾಕಿಗಳಿಲ್ಲದ ಸಮಯದಲ್ಲಿ, ‘ಶಾಮಣ್ಣ, ನೀವು ಇಷ್ಟೆಲ್ಲ ತತ್ವ ಸಿದ್ಧಾಂತ, ಸಮಾಜದ ಸ್ವಾಸ್ಥ್ಯ, ಯುವಕರ ಭವಿಷ್ಯ, ಸಾಹಿತ್ಯವೇ ಬದುಕಿನ ಉಸಿರು ಅಂತೆಲ್ಲ ಮಾತನಾಡ್ತೀರಲ್ಲ, ಹೀಗಿರುವಾಗ ನೀವು ನಿಮ್ಮ ಅಂಗಡಿಯಲ್ಲಿ ಈ ಹೊಗೆಸೊಪ್ಪು, ಗುಟ್ಕಾ, ಬೀಡಿ, ಸಿಗರೇಟು ಮಾರುವುದೆಲ್ಲ ತಪ್ಪಲ್ವಾ? ಈ ವ್ಯಾಪಾರದ ಮೂಲಕ ನೀವು ಸಮಾಜದ ಆರೋಗ್ಯ, ನೆಮ್ಮದಿಯನ್ನು ಹಾಳು ಮಾಡುತ್ತಿದ್ದೀರಿ ಅಂತ ಅನ್ನಿಸೋದಿಲ್ವಾ? ಇದು ನಿಮ್ಮ ಬದುಕಿನ ತತ್ವ ಸಿದ್ಧಾಂತಕ್ಕೆ ವಿರುದ್ಧವಾದದ್ದು ಅಲ್ವಾ?’ ಎಂದು ನೇರ ಕೇಳಿಬಿಟ್ಟೆ!

ನನ್ನ ಪ್ರಕಾರ ಅವರು ನನ್ನಿಂದ ಈ ಪ್ರಶ್ನೆಯನ್ನು ನಿರೀಕ್ಷಿಸಿರುವುದಿಲ್ಲ. ನಾನು ಹೀಗೆ ಕೇಳುತ್ತಿದ್ದಂತೆ ತಬ್ಬಿಬ್ಬಾಗುತ್ತಾರೆ, ಉತ್ತರಿಸಲು ತಡವರಿಸಲಾರಂಭಿಸುತ್ತಾರೆ ಇತ್ಯಾದಿ ಏನೇನೋ ಕಲ್ಪನೆಯ ಚಿತ್ರಗಳು... ನೀವು ನಂಬುತ್ತೀರೋ ಇಲ್ಲವೋ, ಆದರೆ ಅವರು ನಾನೊಂದು ದಿನ ಈ ಪ್ರಶ್ನೆಯನ್ನು ಕೇಳಬಹುದು ಎನ್ನುವುದನ್ನು ನಿರೀಕ್ಷಿಸಿ, ಉತ್ತರವನ್ನು ಪದೆಪದೇ ಹೊಸೆದು, ಪರೀಕ್ಷಿಸಿ ರೆಡಿ ಮಾಡಿಟ್ಟುಕೊಂಡು ಇನ್ನೇನೂ ಬೀಸಿಯೇ ಬಿಡಬಹುದು ಎನ್ನುವ ಮಟ್ಟದಲ್ಲಿ ಕಾಯುತ್ತಿರುತ್ತಾರಲ್ಲ ಹಾಗೇ, ಮುಖದಲ್ಲಿ ಆವರೆಗೆ ನಾನು ನೋಡದ ವಿಚಿತ್ರ ನಗುವೊಂದನ್ನು ತಂದುಕೊಂಡು, ‘ನೀವು ಕೇಳಿದ್ದು ಸರಿ... ಆದರೆ ನೋಡಿ ಗಣೇಶ್, ನನ್ನನ್ನು ಇಷ್ಟು ದಿನದಿಂದ ನೀವು ಅಂಗಡಿಯಲ್ಲಿ ನೋಡುತ್ತಿದ್ದೀರಲ್ಲ, ನಾನ್ಯಾವತ್ತಾದರೂ ಯಾರಿಗಾದರೂ ಫೋರ್ಸ್ ಮಾಡಿ ಗುಟ್ಕಾ, ಸಿಗರೇಟು, ಹೊಗೆಸೊಪ್ಪನ್ನೇನಾದರೂ ಕೊಟ್ಟಿದ್ದು ನೋಡಿದ್ದೀರಾ? ಇಲ್ಲವಲ್ಲ. ಅವರಾಗಿ ಬಂದು ಕೇಳುತ್ತಾರೆ, ನಾನು ಒಬ್ಬ ವ್ಯಾಪಾರಿಯಾಗಿ ಅವರಿಗೆ ಕೊಡುತ್ತೇನೆಯೇ ಹೊರತು, ನಾನು ಯಾರಿಗೂ ನೀನು ಸಿಗರೇಟು ಸೇದು, ನೀನು ವಿಮಲ್ ತಿನ್ನು ಎಂದು ಕೊಟ್ಟಿಲ್ಲ, ಕೊಡುವುದೂ ಇಲ್ಲ. ಅದು ನನ್ನ ಜಾಯಮಾನಕ್ಕೆ ವಿರುದ್ಧವಾದದ್ದು, ಅದು ನನ್ನ ಬದುಕು ಒಪ್ಪದೇ ಇರುವಂತಹದ್ದು’ ಎಂದು ಮಾತಿಗೊಂದು ವಿರಾಮ ಕೊಟ್ಟಂತೆ ಮಾಡಿ, ನಾನೇನಾದರೂ ಹೇಳುವ ಮೊದಲೇ ‘ನನ್ನ ತಂದೆಯವರಾದರೂ ಅಷ್ಟೇ, ಊರಿನಲ್ಲಿ ಕೊಟ್ಟೆ ಮಾರುತ್ತಾರಲ್ಲ ಅವರೂ ಯಾರಿಗೂ ಒತ್ತಾಯ ಮಾಡಿ ಕುಡಿಸಿದವರಲ್ಲ. ಜನರು ಅವರಾಗಿ ಕುಡಿಯಲಿಕ್ಕೆ ಬಂದಾಗ ಕೊಟ್ಟೆ ಮಾರುತ್ತಾರೆಯೇ ಹೊರತು, ಈವರೆಗೆ ಅವರು ಕೂಡಾ ನನ್ನ ಹಾಗೇ ಯಾರಿಗೂ ಒತ್ತಾಯಿಸಿ ಕುಡಿಸಿದವರಲ್ಲ, ಹಾಗೆ ದುಡ್ಡು ಮಾಡಿದವರಲ್ಲ. ಅಂದಮೇಲೆ ನಮ್ಮ ಬದುಕಿನ ತತ್ವ ಸಿದ್ಧಾಂತಕ್ಕೆ ನಾವು ಮಾಡುತ್ತಿರುವ ವ್ಯಾಪಾರ ಹೇಗೆ ವಿರುದ್ಧವಾಗಿರುತ್ತದೆ ಹೇಳಿ?!’ ಎಂದು ಇಷ್ಟಗಲ ಕಣ್ಣರಳಿಸಿ ನನಗೇ ಪ್ರಶ್ನೆಯನ್ನೆಸೆದರು. ಎಲಾ ಶಾಮಣ್ಣನೇ... ನಾನೇನೋ ಅಂದುಕೊಂಡರೆ ಇವರಾಗಲೇ ಪೂರ್ತಿಗೆ ಪೂರ್ತಿ ತಾಲೀಮಿನೊಂದಿಗೇ ವೇಷಭೂಷಣವನ್ನೆಲ್ಲ ತೊಟ್ಟುಕೊಂಡು ಪ್ರದರ್ಶನ ನೀಡಲು ಸ್ಟೇಜ್ ಹತ್ತಿ, ಕುಣಿದು ‘ಹೇಗೆ?!’ ಎಂದು ಹುಬ್ಬೇರಿಸುತ್ತಿದ್ದಾರಲ್ಲ ಎಂದನ್ನಿಸಿ, ಒಂದು ಕ್ಷಣ ನನಗೇ ನಾನು ಯೋಚಿಸಿದ್ದರಲ್ಲಿ, ಕೇಳಿದ್ದರಲ್ಲಿ ತಪ್ಪಿದೆ ಎನ್ನುವ ಪಶ್ಚಾತ್ತಾಪದ ಉರಿಯೊಂದು ಸಣ್ಣಗೆ ಸುಡಲಾರಂಭಿಸಿತ್ತು.

ಆ ಕಾವೂ ಅವರಿಗೇ ತಿಳಿದಿರಬೇಕು. ಆದ್ದರಿಂದಲೇ ನನ್ನನ್ನು ‘ಇನ್ನಷ್ಟು ಬಡಿದುಬಿಡಬೇಕು’ ಎಂದುಕೊಂಡವರೇ, ‘ಗಣೇಶ್, ಹೀಗೆ ಹೇಳ್ತಾ ಇದ್ದೇನೆ ಅಂತ ತಪ್ಪು ತಿಳೀಬೇಡಿ. ನೀವು ಹೇಳಿದ್ದನ್ನೂ ಒಪ್ಪಿಕೊಳ್ತೀನಿ. ಈ ಜಾಗದಲ್ಲಿ ಈಗ ನಾನು ಇದನ್ನೆಲ್ಲ ಮಾರೋದಿಲ್ಲ ಅಂತ ಡಿಸೈಡ್ ಮಾಡಿಬಿಡ್ತೀನಿ ಅಂದುಕೊಳ್ಳಿ. ಹಾಗಿದ್ದರೆ ಈ ಹೊಸನಗರದಲ್ಲಿ ಯಾರೂ ಇದನ್ನೆಲ್ಲ ವ್ಯಾಪಾರ ಮಾಡದೇ ನೀವು ಹೇಳುವಂತಹ ಸ್ವಸ್ಥ ಸಮಾಜ ನಿರ್ಮಾಣವಾಗಿಬಿಡುತ್ತಾ? ಇಲ್ಲವಲ್ಲ. ನಾನು ಮಾರದೇ ಹೋದರೆ, ಇನ್ನೊಬ್ಬರ‌್ಯಾರೋ ಮಾರೇ ಮಾರ‌್ತಾರೆ. ಸೇದುವವರು, ತಿನ್ನುವವರು ತಿಂದೇ ತಿನ್ತಾರೆ ಅಂದ್ಮೇಲೆ ನಾನು ಮಾರೋದ್ರಲ್ಲಿ ತಪ್ಪೇನೂ ಇಲ್ಲವಲ್ಲ. ನನ್ನ ವ್ಯಾಪಾರಕ್ಕೂ ನಾನೊಂದು ಎಥಿಕ್ಸಿನ ಬೌಂಡರಿ ಹಾಕಿಕೊಂಡಿರುವಾಗ ನನಗ್ಯಾವತ್ತೂ ನನ್ನ ಈ ಗೂಡಂಗಡಿಯ ವ್ಯಾಪಾರ ತಪ್ಪು ಅಂತ ಅನ್ನಿಸಿಲ್ಲ. ಈ ಬಗ್ಗೆ ನನಗೆ ಬೇಸರವೂ ಇಲ್ಲ...’ ಎಂದು ತಾವು ಮಾಡುತ್ತಿರುವುದನ್ನು ಇನ್ನಷ್ಟು ಸಮರ್ಥಿಸಿಕೊಂಡರು ಶಾಮಣ್ಣ. ಅದರ ಬೆನ್ನಿಗೇ ಬಡತನ, ಜಾತಿ ಇತ್ಯಾದಿ ಕಾರಣಕ್ಕೆ ಅಪ್ಪ ಸಾರಾಯಿ ಮಾರಾಟಕ್ಕಿಳಿದಿದ್ದು, ಹೊಸನಗರದಲ್ಲಿ ಗೂಡಂಗಡಿ ನಡೆಸುತ್ತಿದ್ದದ್ದು... ಫ್ಯಾಮಿಲಿ ಸೆಂಟಿಮೆಂಟ್ ಕಥೆಯನ್ನೇ ಇನ್ನೊಮ್ಮೆ ಹಳೇದೋಸೆಯನ್ನೇ ಕಾವಲಿಗೆ ಹಾಕಿ ಬಿಸಿ ಮಾಡಿದಂತೆ ಹೇಳುತ್ತಲೇ ಹೋದರು. ನನ್ನೊಳಗೆ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಲೇ ಇದ್ದವಾದರೂ ಅದ್ಯಾಕೋ ಈ ಸಮಯದಲ್ಲಿ ಅವು ಕೇಳಬಾರದ ಪ್ರಶ್ನೆಗಳು ಅನ್ನಿಸುವುದಕ್ಕೂ, ಎದುರುಗಡೆ ಇದ್ದ ಬಾರಿನಲ್ಲಿ ಮಧ್ಯಾಹ್ನದ ಊಟದೊಂದಿಗೆ ಎಣ್ಣೆ ಏರಿಸಿಕೊಂಡು ಹೊರಬಂದವರು ಇವರ ಅಂಗಡಿಗೆ ಬೀಡಾ ತಿನ್ನಲು, ಸಿಗರೇಟು ಸೇದಲು ಬರುವುದಕ್ಕೂ ಸರಿಯಾಯಿತು.

ಆದರೂ ಶಾಮಣ್ಣನ ಬಗ್ಗೆ ನನ್ನೊಳಗೆ ಮೊದಲಿದ್ದ ‘ಒಳ್ಳೆಯ ಅಭಿಪ್ರಾಯ’ವೊಂದು ಉಳಿಯಲಿಲ್ಲ. ಅವರ ಬದುಕಿನ ಅನಿವಾರ್ಯತೆಗಳೇನೇ ಇರಲಿ, ನನ್ನ ಪಪ್ಪ ಅಮ್ಮ ಹೇಳಿದಂತೆ ಮೂರು ಹೊತ್ತಿನ ಊಟಕ್ಕಾಗಿ ದುಡಿಯುವುದಕ್ಕೆ ಎಷ್ಟೊಂದು ದಾರಿಗಳಿವೆಯಲ್ಲ, ಅದನ್ನೆಲ್ಲ ಬಿಟ್ಟು ಶಾಮಣ್ಣ ತಾನು ಮಾಡುತ್ತಿರುವುದನ್ನೇ ಸರಿ ಎಂದು ಸಮರ್ಥಿಸಿಕೊಳ್ಳುವುದು ಎಷ್ಟು ಸರಿ? ಈ ತತ್ವ ಸಿದ್ಧಾಂತಗಳೆಲ್ಲ ಇವರಿಗೆ ಸಮಾಜದಲ್ಲಿ ‘ಸ್ಟೇಟಸ್, ಲೆವೆಲ್ ಮತ್ತು ಪೋಸ್’ ಕೊಡಲಿಕ್ಕೆ ಮಾತ್ರವೇ ಹೊರತು, ಕೊನೆಗೆ ಇವರದ್ದೆಲ್ಲ ಇದೇ ಕಥೆ ಅನ್ನಿಸಿಬಿಟ್ಟಿತು. ನನ್ನೊಳಗೆ ಶಾಮಣ್ಣನ ಬಗ್ಗೆ ಇಂತಹದ್ದೊಂದು ಅಭಿಪ್ರಾಯ ಗಟ್ಟಿಯಾಗುವ ಹೊತ್ತಿಗೆ ಡಿಗ್ರಿಯೂ ಬಹುತೇಕ ಮುಗಿಯುತ್ತಾ ಬಂದಿತ್ತು. ಆನಂತರ ನಾನು ಅವರನ್ನು ಭೇಟಿಯಾಗಿದ್ದು, ಮಾತನಾಡಿದ್ದು ಕಡಿಮೆಯೇ. ಆದರೂ ಅವರ ಬದುಕಿನ ಅಪ್ಡೇಟ್‌ಗಳು ನನಗೆ ಸಿಗುತ್ತಿದ್ದವು. ನಮ್ಮೊಂದಿಗೆ ಆಗ ರಾಜಕೀಯ ಪಕ್ಷಗಳೆಂದರೆ ಅಸಹ್ಯ, ನೀಚ ಎಂದೆಲ್ಲ ಮಾತನಾಡುತ್ತಿದ್ದ ಇದೇ ಶಾಮಣ್ಣ ಕೊನೆಗೆ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಅಲ್ಲೇನೂ ಗಿಟ್ಟದೇ ಇದ್ದಾಗ ಒಂದು ಖಾಸಗಿ ಶಾಲೆಯ ಮ್ಯಾನೇಜ್ಮೆಂಟಿಗೆ ಸೇರಿಕೊಂಡರು. ಈ ಶಾಲೆಯ ಮಾಲೀಕತ್ವ ಬದಲಾಗಿ ಕಳ್ಳಸ್ವಾಮಿಯೊಬ್ಬನ ಕೈಗೆ ಸಿಕ್ಕಾಗಲೂ ಅವರು ಅಲ್ಲಿಂದ ಹೊರಬರಲಿಲ್ಲ. ಯಾಕೆಂದರೆ ಅವರು ನಾನಂದುಕೊಂಡ ಶಾಮಣ್ಣನಾಗಿರಲಿಲ್ಲ. ಅದಕ್ಕೇ ಆ ಸ್ವಾಮಿಯೊಂದಿಗೆ ನಂಟು ಕುದುರಿಸಿಕೊಂಡು ಅದೇ ಶಾಲೆಯಲ್ಲಿ ಉನ್ನತ ಹುದ್ದೆಯನ್ನು ಪಡೆದರು. ಇವೆಲ್ಲದರ ನಡುವೆ ಅವರ ಗೂಡಂಗಡಿ ಏನಾಯಿತು?!

ಅವರು ಇಷ್ಟೆಲ್ಲ ಡೆವಲಪ್ ಆದಮೇಲೆ ಆ ಗೂಡಂಗಡಿ ಗೂಡಂಗಡಿಯಾಗಿಯೇ ಹೇಗೆ ಉಳಿದೀತು ಹೇಳಿ? ಅದೀಗ ಮೇಲ್ದರ್ಜೆಗೇರಿಸಿದ ಅಂಗಡಿಯಾಗಿ, ಅದೇ ಗುಟ್ಕಾ, ಬೀಡಿ, ಸಿಗರೇಟು, ಹೊಗೆಸೊಪ್ಪಿನ ಮಾರಾಟ ಕೇಂದ್ರವಾಗಿಯೇ ಉಳಿದಿದೆ. ಈಗ ಮಕ್ಕಳ ಭವಿಷ್ಯವನ್ನು ಕಟ್ಟುವ ಶಾಲೆಯ ಉಸ್ತುವಾರಿಯನ್ನೇ ಹೊತ್ತಿರುವ ಅವರಿಗೆ ತಾನೀಗಲೂ ಇದನ್ನೆಲ್ಲ ಮಾರಾಟ ಮಾಡುವುದು ತಪ್ಪು ಅನ್ನಿಸುವುದಿಲ್ಲವಾ? ಬಹುಶಃ ಅನ್ನಿಸುವುದಿಲ್ಲ. ಯಾಕೆಂದರೆ ಸಮಾಜ ಅವರನ್ನು ಹಾಗೆಲ್ಲ ನೋಡುವುದಿಲ್ಲ. ನೀ ಏನಾದರೂ ಮಾಡಿಕೋ, ಆದರೆ ಸಮಾಜದಲ್ಲಿ ಒಬ್ಬ ಗಣ್ಯವ್ಯಕ್ತಿ ರೀತಿ ಬಾಳುತ್ತಿದ್ದೀಯಾ, ಅದಕ್ಕೆ ಸರಿಯಾಗಿ ದುಡ್ಡು, ಕಾರು, ಮನೆ ಅಂತೆಲ್ಲ ಮಾಡಿಕೊಂಡಿದ್ದೀಯಾ ಎಂದರೆ ನಿನ್ನ ವ್ಯಾಪಾರ ವಹಿವಾಟು ಕಟ್ಟಿಕೊಂಡು ಅವರಿಗೇನಾಗಬೇಕಾಗಿದೆ ಅಲ್ಲವಾ? ಶಾಮಣ್ಣನೂ ಈಗ ಹೊಸನಗರದಲ್ಲಿ ಅಲ್ಲಿನ ಜನರ ನಡುವೆ ಹೀಗೇ ಇರಬಹುದು. ಅದೂ ತಮ್ಮ ಮಕ್ಕಳನ್ನು ಕಳಿಸುವ ಶಾಲೆಯ ಉಸ್ತುವಾರಿಯಾಗಿರುವಾಗ ಅವರ ಬಳಿ, ಮಕ್ಕಳಿಗೆ ಒಳ್ಳೆಯದನ್ನು ಹೇಳಬೇಕಾದ ನೀವು ಬೀಡಿ, ಸಿಗರೇಟು ಮಾರಾಟ ಮಾಡುವುದು ತಪ್ಪಲ್ಲವಾ? ಒಂದೊಮ್ಮೆ ನಿಮ್ಮನ್ನು ಅದೇ ಅಂಗಡಿಯಲ್ಲಿ ನೋಡಿದ ನಿಮ್ಮ ಶಾಲೆಯ ಮಕ್ಕಳಿಗೆ ನಿಮ್ಮ ಬಗ್ಗೆ ಎಂತಹ ಅಭಿಪ್ರಾಯ ಮೂಡಬಹುದು ಎಂದು ಯೋಚಿಸಿದ್ದೀರಾ? ಎಂದು ಯಾವ ಪೋಷಕರಾದರೂ ಕೇಳಿಬಿಟ್ಟರೆ...!! ನೋ ಚಾನ್ಸ್, ಜನರೂ ಹಾಗೆ ಕೇಳುವುದಿಲ್ಲ. ಕೇಳುವವರೆಗೂ ಶಾಮಣ್ಣನೂ ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಹಾಗೊಮ್ಮೆ ಯಾರಾದರೂ ಕೇಳಿದರು ಎಂದೇ ಇಟ್ಟುಕೊಳ್ಳಿ, ಅವರು ನನ್ನಂತಹವರಾಗಿರುತ್ತಾರೆ. ಮತ್ತು ಸಮಾಜ ದುಡ್ಡು, ಸ್ಟೇಟಸ್ ಇರುವವರನ್ನೇ ಎತ್ತರದಲ್ಲಿಟ್ಟು ಮೆರೆಸುತ್ತದೆಯಾದ್ದರಿಂದ ನಮ್ಮಂತಹವರು ಕೇಳುವ ಪ್ರಶ್ನೆಗಳೂ ಅವರನ್ನು ತಾಕುವುದಿಲ್ಲ. ತಲೆ ಕೆಡಿಸಿಕೊಳ್ಳಲಿಕ್ಕೂ ಕಾರಣವಾಗುವುದಿಲ್ಲ.

ಇಷ್ಟಕ್ಕೂ ಈ ಶಾಮಣ್ಣ ನನಗೆ ಇಷ್ಟು ವರ್ಷಗಳ ನಂತರ ಯಾಕೆ ನೆನಪಾದರು?! ಈ ನೆನಪುಗಳ ಬಗ್ಗೆ ನನಗೆ ಆಶ್ಚರ್ಯವಿಲ್ಲ. ಯಾಕೆಂದರೆ, ಈ ಬೆಂಗಳೂರಿನಲ್ಲಿ ನಾನು ಇಂತಹ ಅನೇಕರನ್ನು ನೋಡುತ್ತಿರುತ್ತೇನೆ. ಬಡ್ಡಿ ವ್ಯಾಪಾರಿಗಳಾಗಿ ಬಡವರ ರಕ್ತ ಹೀರಿಕೊಂಡೇ ಬದುಕುತ್ತಿರುವವರನ್ನು ನೋಡಿ ಮನುಷ್ಯರೂಪದ ರಾಕ್ಷಸರು ಎಂದುಕೊಳ್ಳುತ್ತಿರುತ್ತೇನೆ. ಆದರೆ ಅಣ್ಣಾವ್ರ ಬರ್ತ್‌ಡೇಗೆ, ಕನ್ನಡ ರಾಜ್ಯೋತ್ಸವಕ್ಕೆ, ಈಗ ಅಪ್ಪು ನೆನಪು ಎಂದೆಲ್ಲ ಒಂದು ಏರಿಯಾ ತುಂಬಾ ಸೀರಿಯಲ್ ಸೆಟ್ ಹಾಕಿಸಿ, ಡಿಜೆ ಕರೆಸಿ, ದಾರಿಯಲ್ಲಿ ಹೋಗು ಬರುವವರಿಗೆಲ್ಲ ಕರೆಕರೆದು ಅಡಿಕೆ ಹಾಳೆ ತಟ್ಟೆಯ ತುಂಬಾ ಬಿಸಿಬೇಳೆ ಬಾತು, ಮೊಸರನ್ನ, ಒಂದು ಬೋಂಡಾ, ಜಿಲೇಬಿ, ಉಪ್ಪಿನಕಾಯಿಯನ್ನೆಲ್ಲ ತುಂಬಿಸಿಕೊಟ್ಟು ತಿನ್ನಿ ತಿನ್ನಿ ಎನ್ನುತ್ತಾ ಥೇಟು ಜಾತ್ರೆಯ ವೇಷಗಳಾಗಿ ಕುಣಿಕುಣಿದು ಬರುವವರಂತೆ ಇವರೂ ಪುಣ್ಯಪುರುಷರ ವೇಷವನ್ನು ಅಚ್ಚುಕಟ್ಟಾಗಿ ತೊಟ್ಟು ನಡೆಯುವವರಂತೆ ಕಾಣುತ್ತಿರುತ್ತಾರೆ! ಇವನ ಹತ್ತಿರ ಬಡ್ಡಿ ಕಾಸಿಗಾಗಿ ಹೀನಾಮಾನ ಬೈಯಿಸಿಕೊಂಡ, ಅವಮಾನಕ್ಕೊಳಗಾದ, ದೌರ್ಜನ್ಯಕ್ಕೊಳಗಾದವರೂ, ಇದನ್ನೆಲ್ಲ ನೋಡಿದವರು ಊಟದ ಕ್ಯೂನಲ್ಲೋ, ಅಥವಾ ಊಟ ಬಡಿಸುವ ಕೌಂಟರ‌್ರಿನಲ್ಲೋ ಅದೆಷ್ಟು ನಗುನಗುತ್ತಾ ನಿಂತಿರುತ್ತಾರೆ ಎಂದರೆ, ನನಗೇ ಕೆಲವೊಮ್ಮೆ ಈ ‘ಬಡ್ಡಿಮಕ್ಕಳ’ ನಿಜ ರೂಪ ಯಾವುದು ಎನ್ನುವ ಅನುಮಾನವಾಗಿಬಿಡುತ್ತದೆ. ಈ ಅನುಮಾನಕ್ಕೆ ಕಾರಣವಾಗುವುದೂ ಇದೇ ಸಮಾಜವೇ ಅಲ್ಲವಾ? ಇಂತಹ ಬಡ್ಡಿ ಕ್ರಿಮಿಗಳ ಸಮಾಜಸೇವೆಯನ್ನು ಯಾಕೆ ಈ ಸಮಾಜ ಒಪ್ಪಿಕೊಳ್ಳಬೇಕು? ಇಂತಹವರನ್ನ್ಯಾರೋ ಮೆರೆಸಿದರೆ ಅದನ್ನೇಕೆ ಸಂಭ್ರಮಿಸಬೇಕು? ನೀನು ನಿಯತ್ತಾಗಿ ದುಡಿದು, ಅದರಲ್ಲಿ ಉಳಿಸಿ ಸ್ಕೂಲಿನ ಬಡ ಮಕ್ಕಳಿಗೆ ಒಂದು ಪುಟ್ಟ ಪೆನ್ಸಿಲ್ಲೇ ಕೊಡಿಸು ಸಾಕು, ಅದು ಸಾವಿರ ರೂಪಾಯಿಗೆ ಸಮ ಎಂದು ಈ ಸಮಾಜ ಯಾವತ್ತಾದರೂ ಹೇಳಿದೆಯಾ? ನನಗಂತೂ ಕೇಳಿಸಿಲ್ಲ. ನನ್ನಂತಹವರೇ ಆದರೆ ನಿಮಗೂ ಕೇಳಿಸಿರುವುದಿಲ್ಲ.

ಸಮಾಜ ಇರುವುದೇ ಹೀಗೇ. ಅದಕ್ಕೇ ರಾತ್ರಿಯಿಡೀ ಅಕ್ರಮವಾಗಿ ಸಂಪಾದಿಸಿದವನು, ಬೆಳಗಾಗುತ್ತಲೇ ಕೋಳಿ ನಿದ್ದೆ ಮಾಡಿ ಎದ್ದು ಬಿಳಿ ಬಟ್ಟೆ ತೊಟ್ಟು ಅನ್ನಸಂತರ್ಪಣೆಗೆ ನಿಂತುಬಿಟ್ಟ ಎಂದರೆ, ಅವನ ದುಡ್ಡಿನ ಮೂಲವೇನು, ಆ ದುಡ್ಡಲ್ಲಿ ಅವನು ಸಮಾಜಸೇವೆ ಮಾಡುತ್ತೇನೆ ಎಂದು ಪೋಸ್ ಕೊಡುವುದು, ಕೊಟ್ಟ ಪೋಸ್‌ನ್ನು ನಾವು ಹಾರ ಹಾಕಿ ಮೆರೆಸುವುದು ಎಷ್ಟು ಸರಿ ಎಂದು ಒಮ್ಮೆಯೂ ಯೋಚಿಸುವುದಿಲ್ಲ. ಖಂಡಿತ ಯೋಚಿಸುವುದಿಲ್ಲ ಅನ್ನಿಸಿದ್ದೇ ಇತ್ತೀಚೆಗೆ ನನಗಿಂತ ಚಿಕ್ಕ ವಯಸ್ಸಿನ ಹುಡುಗನೊಬ್ಬನ ಇಂತಹದ್ದೇ ಸಮಾಜಸೇವೆಯ ಕಥೆಯನ್ನು ಕೇಳಿ.

ಆ ಹುಡುಗನ ಮನೆಯಲ್ಲಿ ಬಡತನವಿತ್ತು. ಅಪ್ಪನಿಗೂ ಸರಿಯಾದ ದುಡಿಮೆ ಇರಲಿಲ್ಲ. ಅಮ್ಮ ಅವರಿವರ ಮನೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಈ ಹುಡುಗನೂ ಓದುವಷ್ಟು ಓದಿ ಇನ್ನುಮುಂದೆ ಓದಿಕೊಂಡೇ ಇದ್ದರೆ ಬದುಕು ಸಾಗುವುದಿಲ್ಲ ಅನ್ನಿಸಿ, ಓದಿಗೆ ಗುಡ್‌ಬೈ ಎಂದವನು ಅಲ್ಲಿ ಇಲ್ಲಿ ಕೆಲಸ ಮಾಡಿಕೊಂಡಿದ್ದ. ಮಕ್ಕಳ ಸ್ಕೂಲ್ ಬಸ್ಸಿನಲ್ಲಿ ಕಂಡೆಕ್ಟರ್ ಕೆಲಸಕ್ಕೆ ಸೇರಿಕೊಂಡ. ನಿಧಾನಕ್ಕೆ ರಾಜಕೀಯದಲ್ಲಿಯೂ ಕೆಲವರ ಸಂಪರ್ಕ ಬೆಳೆಯಿತು. ಇದೇ ಹೊತ್ತಿಗೆ ರಾಜಕೀಯಕ್ಕೆ ತಾನು ಕಾಲಿಡಬೇಕೆಂದರೆ ಸಮಾಜಸೇವೆ ಮಾಡಬೇಕು ಎಂದು ನಿರ್ಧರಿಸಿಬಿಟ್ಟ. ಆದರೆ ಸಮಾಜಸೇವೆಗೆ ದುಡ್ಡು ಬೇಕಲ್ಲ? ಊರಿನವರು, ಪರಿಚಿತರ ಹತ್ತಿರ ಚಂದಾ ಕೇಳಿದ್ದರೆ ಕೊಡುತ್ತಿದ್ದರೇನೋ. ಅದರಲ್ಲೇ ಊರಿಗೆ ಉಪಯೋಗವಾಗುವ ಸಣ್ಣಪುಟ್ಟ ಕೆಲಸಗಳನ್ನೇ ಮಾಡಿಕೊಂಡು ಒಂದು ರೇಂಜಿಗೆ ಹೆಸರು ಮಾಡಬಹುದಿತ್ತು. ಆದರೆ ಈ ಹುಡುಗ ಅಷ್ಟು ತಾಳ್ಮೆ ಇರುವವನಲ್ಲ. ಆದ್ದರಿಂದಲೇ ಮೊದಲಿಗೆ ರಾಜಕೀಯ ವ್ಯಕ್ತಿಗಳ ಬಳಿ ಫಂಡ್ ಮಾಡಿಸಿಕೊಂಡು, ಅವರಿಗೇ ವೇದಿಕೆ ಮೇಲೆ ಮೆರೆಸಿ ಸಮಾಜಸೇವೆಯ ಮೊದಲ ಹೆಜ್ಜೆಗಳನ್ನು ಇಟ್ಟ. ಇದರಿಂದ ರುಚಿ ಸಿಕ್ಕಿತ್ತಲ್ಲ, ನಿಧಾನಕ್ಕೆ ಏನಾದರೂ ವ್ಯಾಪಾರಕ್ಕೆ ಕೈ ಹಾಕಬೇಕು ಎಂದು ನಿರ್ಧರಿಸಿದ. ಅದೂ ಒಳ್ಳೆಯದೇ. ಹೀಗಂತ ನಾವಂದುಕೊಳ್ಳಬಹುದು. ಆದರೆ ಸಮಾಜಸೇವೆ ಎನ್ನುವುದು ರಾಜಕೀಯಕ್ಕೆ ಜಂಪಿಂಗ್ ಪ್ಯಾಡ್ ಇದ್ದಂತೆ, ಸಮಾಜದಲ್ಲಿ ಪ್ರತಿಷ್ಠೆ ಗಳಿಸಲಿಕ್ಕೆ ಇರುವ ಸುಲಭ ಮಾರ್ಗ, ಪೇಪರ‌್ರಿನಲ್ಲಿ ಫೋಟೋ ಹಾಕಿಸಿಕೊಳ್ಳಲಿಕ್ಕೂ ಅನುಕೂಲ ಎನ್ನುವುದನ್ನೆಲ್ಲ ಕಂಡುಕೊಂಡಿದ್ದ ಆ ಹುಡುಗನ ಆರಂಭಿಸಿದ ವ್ಯಾಪಾರ ಯಾವುದರದ್ದು ಹೇಳಿ? ದೇಶದ ಯುವಜನರ ಪಾಲಿಗೆ ಮಾರಕವಾಗಿರುವ ಗುಟ್ಕಾದ್ದು!!

ಗುಟ್ಕಾದಿಂದ ಸಮಾಜ ಉದ್ಧಾರವಾಗುತ್ತದೆಯಾ? ಅವನಿಗೂ ಆಗುವುದಿಲ್ಲ ಎನ್ನುವುದು ಎಷ್ಟು ಗೊತ್ತಿದೆಯೋ, ಇವನನ್ನು ಇವತ್ತು ‘ಸಮಾಜಸೇವಕ’ ಎಂದು ಟ್ರೀಟ್ ಮಾಡುವ ಅವನದ್ದೇ ಊರಿನ ಜನರಿಗೂ ಅಷ್ಟೇ ಖಾತ್ರಿಯಿದೆ. ಅಂದರೆ ಅವನ ಸಮಾಜಸೇವೆಯೆಲ್ಲವೂ ಇಡೀ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ, ಮುಖ್ಯವಾಗಿ ಯುವಜನರ ಆರೋಗ್ಯಕ್ಕೆ ಒಳಗೊಳಗೇ ಕೊಳ್ಳಿ ಇಡುವ ಗುಟ್ಕಾ ಮಾರಾಟದಿಂದ ಬಂದ ಲಾಭದಿಂದಲೇ ಎನ್ನುವುದು ಊರವರಿಗೆ ಗೊತ್ತಿದೆ. ಏನಪ್ಪಾ, ಹೀಗೆ ಗುಟ್ಕಾ ಮಾರಿ ಬಂದ ಹಣದಿಂದ ಸಮಾಜಸೇವೆ ಮಾಡ್ತೀಯಲ್ಲ, ಇದೊಂದು ರೀತಿ ನೀನೇ ವಿಷ ಕೊಟ್ಟು ಕೊನೆಗೆ ನಾನೇ ವಿಷ ಹೊರಗೆ ತೆಗೀತೀನಿ ಅಂದ ಹಾಗಲ್ವಾ ಎಂದು ಒಬ್ಬರಾದರೂ ಅವನನ್ನು ಕೇಳಿದ್ದಾರಾ? ಕೇಳಿಲ್ಲ. ಕೇಳುವುದೂ ಇಲ್ಲ ಎಂದು ನಾನು ಹೇಳಿದ ಶಾಮಣ್ಣನಿಗೆ ಹೇಗೆ ಗೊತ್ತಿದೆಯಲ್ಲ, ಹಾಗೇ ಇವನಿಗೂ ಗೊತ್ತಿದೆ. ಆದ್ದರಿಂದಲೇ ಇಡೀ ಊರಿನ ಆರೋಗ್ಯವನ್ನು ಎಷ್ಟು ಧೈರ್ಯದಿಂದ, ಮೂರೂ ಬಿಟ್ಟು ಕುಲಗೆಡಿಸುತ್ತಾನೋ ಹಾಗೇ ಕುಲಗೆಡಿಸಿದ್ದಕ್ಕೆ ತೇಪೆ ಹಾಕಿದಂತೆ ಕಾಣುವ ಸಮಾಜಸೇವೆಯನ್ನೂ ಅಷ್ಟೇ ಚೆನ್ನಾಗಿ ಮಾಡುತ್ತಾನೆ!

ಸಮಾಜಸೇವೆ ಎನ್ನುವುದು ಇವತ್ತು ಹೀಗೆ ಸಿಕ್ಕಬಾರದವರ ಕೈಗೆ ಸಿಕ್ಕು ಬಣ್ಣ ಬದಲಿಸಿಬಿಟ್ಟಿದೆ. ಆದ್ದರಿಂದಲೇ ನಿಯತ್ತಾಗಿ ದುಡಿದ ಸ್ವಲ್ಪ ದುಡ್ಡಿನಲ್ಲೇ, ನನ್ನ ಸುತ್ತಮುತ್ತಲಿನ ನನ್ನ ಹಾಗೇ ಇರುವ ಜನರಿಗೂ ಇರಲಿ ಎಂದು ಸಣ್ಣದೊಂದು ಪಾಲು ಎತ್ತಿಟ್ಟೋ, ಅವರಿವರ ಬಳಿ ಕೈಮುಗಿದು ಕೇಳಿ ಪಡೆದುಕೊಂಡು ಬಂದ ಹಣ, ಅಗತ್ಯವಸ್ತುಗಳನ್ನೋ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ, ಮನಸ್ಸಿನ ಖುಷಿಗಾಗಿ ಜನರಿಗೆ ನೀಡುವ ‘ನಿಜ ಸಮಾಜಸೇವಕರು’ ಯಾರಿಗೂ ಕಾಣುವುದಿಲ್ಲ. ಯಾಕೆಂದರೆ, ನಿಜವಾದ ಸಮಾಜಸೇವಕರು ಯಾವತ್ತೂ ಹಣ, ಬಂಗಾರ, ವಾಹನಗಳನ್ನೆಲ್ಲ ಇಟ್ಟುಕೊಂಡು ಮೆರೆಯುವುದಿಲ್ಲ. ನೀವು ಮೆರೆಯದೇ ಮೌನವಾಗಿರುತ್ತೇನೆ, ನನ್ನ ಕೆಲಸವನ್ನು ನಾನು ಮಾಡಿಕೊಂಡಿರುತ್ತೇನೆ ಎಂದರೆ ಎದುರಿಗೇ ಹೋಗಿ ನಿಂತರೂ ಈ ಜನರಿಗೆ ಕಾಣುವುದಿಲ್ಲ!!

ಇದನ್ನು ನಮ್ಮ ಶಾಮಣ್ಣನಂತಹವರು ತುಂಬಾ ವರ್ಷಗಳ ಮೊದಲೇ ಕಂಡುಕೊಂಡಿದ್ದರು. ಆಗಲೇ ಒಬ್ಬ ಶಾಮಣ್ಣ ಇದ್ದ ಎಂದಮೇಲೆ, ಈ ಆಧುನಿಕ ಜಗತ್ತಿನಲ್ಲಿ ಇನ್ನದೆಷ್ಟು ಮರಿ ಶಾಮಣ್ಣಗಳು ಇರುವುದಿಲ್ಲ ಹೇಳಿ? ಆದ್ದರಿಂದಲೇ ಈಗ ಮಾಲ್‌ಗಳಲ್ಲಿ, ಶಾಪಿಂಗ್ ಕಾಂಪ್ಲೆಕ್ಸುಗಳಲ್ಲಿ, ರೆಸಾರ್ಟು, ಹೋಮ್‌ಸ್ಟೇಗಳಲ್ಲಿ ತತ್ವ ಸಿದ್ಧಾಂತ ಎನ್ನುವುದು ಹೋಲ್‌ಸೇಲ್ ದರದಲ್ಲಿ ಬಿಕರಿಯಾಗುತ್ತಿದೆ.

                                                                                                                            -ಆರುಡೋ ಗಣೇಶ, ಕೋಡೂರು


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆ ಕ್ಷಣದಲ್ಲಿ ಶರತ್‌ ಸಾವಿನೆದುರು ಅದೆಷ್ಟು ಅಸಹಾಯಕ!!

ಅವನು ಅಪ್ಪ ಹೇಳಿದ ಆ ಮಾತನ್ನು ಮರೆಯದೇ ಹೋಗಿದ್ದರೆ...

ಬೆಳಕಾದಳೇ ಅವಳು...?!