ಸಾಯುವ ಮನಸ್ಸಿಲ್ಲದ ಸಂಜೆಯೊಂದರ...

ಅವತ್ತು ಸಂಜೆಗೇಕೋ ರಾತ್ರಿಯಾಗುವ ಮನಸ್ಸಿರಲಿಲ್ಲ. ಇನ್ನಷ್ಟು ಹೊತ್ತು ನಾನು ಹೀಗೇ ಇರಬೇಕು, ಪ್ರತೀದಿನ ದಕ್ಕದ ಏನನ್ನೋ ಇವತ್ತಾದರೂ ಮೊಗೆದು ಬುತ್ತಿಗೆ ತುಂಬಿಕೊಳ್ಳಬೇಕು, ಯಾವತ್ತು ನನಗೆ ಕಾಣ ಸಿಕ್ಕದ ಅವರನ್ನು ಇವತ್ತು ನೋಡಿ ಕಣ್ತುಂಬಿಕೊಳ್ಳಬೇಕು, ರಾತ್ರಿಯಾಗದೆ ಇನ್ನೊಂದಿಷ್ಟು ಸಮಯವಿದ್ದು ಯಾರ್ಯಾರು ಏನು ಹೇಳುತ್ತಾರೆ ಎನ್ನುವುದನ್ನು ಕದ್ದು ಕೇಳಿಸಿಕೊಂಡು, ಆಮೇಲೆ ಆ ಮಾತುಗಳ ನೆನಪಿನಲ್ಲಿ ಯಾವತ್ತೂ ನಗದಂತೆ‌ ನಗಬೇಕು... ಹೀಗೆ ಮನಸ್ಸಿನಲ್ಲಿ ಹೊಯ್ದಾಡುತ್ತಿದ್ದ ಏನೇನೋ ಕಾರಣಗಳಿಂದ ಸಂಜೆ ಇನ್ನೊಂದು ಸ್ವಲ್ಪ ಹೊತ್ತು ಹೀಗೆ... ಹೀಗೇ ಸಂಜೆಯಾಗಿಯೇ ಉಳಿದು ಬಿಡಬೇಕು ಎಂದುಕೊಳ್ಳುತ್ತಾ ಅಲ್ಲೇ ಇರುವಲ್ಲೇ ನಿಂತುಕೊಂಡಿತು.

ಗಡಿಯಾರಕ್ಕೆ ಇದು ಗೊತ್ತಾಗಲಿಲ್ಲ. ಅದಕ್ಕೆ ಗೊತ್ತಾಗುವುದೂ ಇಲ್ಲ. ಯಾರ ಮನಸ್ಸನ್ನೂ ಅರಿಯದ ಈ ಜಗತ್ತಿನ ಏಕೈಕ ವಸ್ತು... ಉಹ್ಞೂಂ, ವ್ಯಕ್ತಿಯೆಂದರೆ ಅದು ಈ ಗಡಿಯಾರವೇ! ಯಾರು ಸಾಯಲಿ, ಯಾರು ಹುಟ್ಟಲಿ, ಹುಟ್ಟದಿರಲಿ,  ನಗು, ಅಳು, ಏನೂ ಇಲ್ಲದ ನಿರ್ವಾತ... ಅದ್ಯಾವುದನ್ನೂ ನೋಡದ, ಲೆಕ್ಕಕ್ಕೇ ತೆಗೆದುಕೊಳ್ಳದ ಗಡಿಯಾರ ಮುಳ್ಳುಗಳ ಮನಸ್ಸೊಂದನ್ನು ಮಾತ್ರವೇ ಅರ್ಥ ಮಾಡಿಕೊಂಡಂತೆ... ಉಹ್ಞೂಂ ನೀ ನನ್ನೊಂದಿಗೆ ಬರಬೇಕೆಂದರೆ ಬರಬೇಕಷ್ಟೇ ಎನ್ನುವಂತೆ ಎಳೆದುಕೊಂಡು ಹೋಗುತ್ತಲೇ ಇರುತ್ತದೆ. ಯಾರೇನಾದರೂ ಆಗಲಿ ನನ್ನ ಕೆಲಸ ಆಗಬೇಕಷ್ಟೇ ಎನ್ನುವುದೊಂದು ಬಿಟ್ಟರೆ ಅದಕ್ಕೆ ಬೇರೆಯವರ ಮನಸ್ಸು ಕಟ್ಟಿಕೊಂಡು ಏನಾಗಬೇಕಿದೆ. ಆದ್ದರಿಂದಲೇ ಅದು ಸಂಜೆಯ ಮನಸ್ಸಿನೆಡೆಗೆ ಸುಮ್ಮನೆ ಕೂಡಾ ನೋಡಲಿಲ್ಲ... ಅಸಲಿಗೆ ಅದಕ್ಕೆ ಈ ಸಂಜೆಗೊಂದು ಮನಸ್ಸಿದೆ ಎನ್ನುವುದರ ಅಂದಾಜೂ ಇರಲಿಲ್ಲ. ಆದ್ದರಿಂದಲೇ ಅದು ನನ್ನ ಕೆಲಸವನ್ನು ನಾನು ಮಾಡುತ್ತೇನೆ ಎಂದುಕೊಂಡು ತಿರುಗುತ್ತಲೇ ಇತ್ತು!

ತಿರುಗಿ ತಿರುಗಿ... ಗಂಟೆ ಎಂಟರ ಮೇಲೊಂದು ಹತ್ತು ನಿಮಿಷ ಕಳೆದಿರಬಹುದೇನೋ... ರಾತ್ರಿಯನ್ನು ಸ್ವಾಗತಿಸಲು ನಿಂತಿದ್ದವರಿಗೆ ತಪ್ಪು ಯಾರದ್ದು ಎನ್ನುವುದನ್ನು ಅಂದಾಜಿಸಲಾಗದೇ, ಎಲ್ಲಿ ಸತ್ತಿದೆಯೋ ಈ ರಾತ್ರಿ ಇನ್ನೂ ಬರಲಿಲ್ಲ ಎಂದು ಕೆಟ್ಟ ಮಾತುಗಳಿಂದ ಶಾಪ ಹಾಕುತ್ತಿದ್ದರು. ಕೇಳಿಸಿಕೊಂಡ ರಾತ್ರಿಗೆ ಆ ದಿನ ಏನೂ ಅನ್ನಿಸಲಿಲ್ಲ. ಯಾಕೆಂದರೆ, ತಾನು ಬಂದ ತಕ್ಷಣವೇ ತೆರೆದುಕೊಳ್ಳುತ್ತಿದ್ದ ಅಸಹ್ಯದ ಜಗತ್ತಿನ ಕರುಳು ಕಿತ್ತು ಬರುವ ರೋದನೆ ಇದೊಂದು ದಿವಸವಾದರೂ ನನ್ನ ಕಣ್ಣು, ಕಿವಿಗಳಿಗೆ ಬೀಳುವುದು ತಪ್ಪಿತಲ್ಲ ಎನ್ನುವ ಸಮಾಧಾನ, ನೆಮ್ಮದಿಯ ಮುಂದೆ ಇವರ ಶಾಪ ಏನೂ ಅನ್ನಿಸಲಿಲ್ಲ. ನಕ್ಕು ಸುಮ್ಮನಾದ ರಾತ್ರಿ ಅದೇ ಮೊದಲ ಬಾರಿ ಸಂಜೆಯ ಮುಖದಲ್ಲಿ ಅರಳುತ್ತಿದ್ದ ಆವರೆಗೆ ಕಾಣದ ನಗುವೊಂದನ್ನು ನೋಡಿ, ಮೋಹಕ್ಕೆ ಬಿದ್ದ ಮನಸ್ಸೊಂದರಂತೆ ಎಲ್ಲಾ ಮರೆತು, ಸಂಜೆಯ ನಗುವೊಂದನ್ನೇ ಕಣ್ತುಂಬಿಕೊಂಡು ಅದೇ ಮೊದಲ ಬಾರಿ ಅಲ್ಲೇ ನಿಂತುಕೊಂಡಿತು.

ಕತ್ತಲ ಕೂಪದ ಶಾಪಗ್ರಸ್ತ ದೇವತೆಗಳು ಕೂಡಾ ಸಂಜೆಗೊಂದು ಗಾಳಿ ಮುತ್ತು ನೀಡಿ, ಬೇಡವೆಂದರೂ ಬಂದಿರಿಯುವ ಈಟಿಗಳ ಭಯವಿಲ್ಲದೆ, ನೋವಿಲ್ಲದೆ ನಲಿಯುತ್ತಿದ್ದರು...

-ಆರುಡೋ ಗಣೇಶ ಕೋಡೂರು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅವನು ಅಪ್ಪ ಹೇಳಿದ ಆ ಮಾತನ್ನು ಮರೆಯದೇ ಹೋಗಿದ್ದರೆ...

ಬೆಳಕಾದಳೇ ಅವಳು...?!

ಆ ಕ್ಷಣದಲ್ಲಿ ಶರತ್‌ ಸಾವಿನೆದುರು ಅದೆಷ್ಟು ಅಸಹಾಯಕ!!