ಕಾಂಟ್ಯಾಕ್ಟುಗಳ ಗೀಳಿಗೆ ಬಿದ್ದ ಮನಸ್ಸುಗಳಿಗೆ ಕೊನೆ ಎಲ್ಲಿ?

ಮೊನ್ನೆ ಮುಖೇಶ್ ಅಂಬಾನಿ ಮಗಳು ಇಶಾ ಅಂಬಾನಿ ಮದುವೆ ಭರ್ಜರಿಯಾಗಿಯೇ ನಡೆಯಿತು.
ಮದುವೆಯ ಆಹ್ವಾನ ಪತ್ರಿಕೆಯಿಂದ ಆರಂಭಿಸಿ ಮದುವೆಯ ವಿಡಿಯೋ ಮತ್ತು ಫೋಟೋಗಳನ್ನು ನೋಡುತ್ತಿದ್ದರೆ, ’ಇದ್ದರೆ ಈ ಲೆವೆಲ್ಲಿನ ಕಾಂಟ್ಯಾಕ್ಟ್ ಇರಬೇಕಿತ್ತು... ಒಂದೊಳ್ಳೆ ಮದುವೇನಾ ಅಟೆಂಡ್ ಮಾಡಿದ ಹಾಗಾಗುತ್ತಿತ್ತು’ ಎಂದು ಮನಸ್ಸಿನೊಳಗೋ ಅಥವಾ ತೀರಾ ನಿಮ್ಮದೇ ಮನಸ್ಥಿತಿಯ ಸ್ನೇಹಿತರ ವಲಯದಲ್ಲಿಯೋ ಹೇಳಿಕೊಂಡಿರುವುದಿಲ್ಲವಾ? ಮುಖೇಶ್ ಅಂಬಾನಿಯಂತಹವರ ಕಾಂಟ್ಯಾಕ್ಟ್ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಈ ಬಗ್ಗೆಯೇ ಸಾಕಷ್ಟು ಹೊತ್ತು ಚರ್ಚಿಸಿರುವುದಿಲ್ಲವಾ? ಚಿಂತಿಸಿರುವುದಿಲ್ಲವಾ?
ಕಾಂಟ್ಯಾಕ್ಟುಗಳು ಮತ್ತು ಇನ್ ಫ್ಲುಯೆನ್ಸುಗಳನ್ನೇ ತಮ್ಮ ಬದುಕಿನ ವೃತ್ತಿ ಮತ್ತು ಪ್ರವೃತ್ತಿ ಮಾಡಿಕೊಂಡವರು ಹಾಗೂ ಇದನ್ನೇ ತಮ್ಮ ಜೀವನದ ಶೋಕಿ ಮಾಡಿಕೊಂಡವರು ಖಂಡಿತ ಅಂಬಾನಿ ಮಗಳ ಮದುವೆಯನ್ನು ತುಂಬಾ ಮಿಸ್ ಮಾಡಿಕೊಂಡಿರುತ್ತಾರೆ!
ಹಾಗಿದ್ದರೆ ಇವರಿಗೆ ಮುಖೇಶ್ ಅಂಬಾನಿ ಕಾಂಟ್ಯಾಕ್ಟಿದ್ದು, ಇಶಾ ಮದುವೆಗೂ ಹೋಗಿ ಸೆಲ್ಫಿ ಅಂತೆಲ್ಲ ತೆಗೆದುಕೊಂಡು, ಅದನ್ನು ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಹಂಚಿ, ಇಶಾಳ ಅಪ್ಪ ಅಮ್ಮ ಮತ್ತು ಸಂಬಂಧಿಕರಿಗಿಂತಲೂ ಹೆಚ್ಚಾಗಿ ಮದುವೆಗೆ ಪ್ರಿಪೇರ‍್ರಾಗಿ, ಮದುವೆ ಇದ್ದಷ್ಟೂ ದಿನವೂ ಎಂಜಾಯ್ ಮಾಡಿದ ಇವರ ಕಾಂಟ್ಯಾಕ್ಟು ಅಥವಾ ಇನ್ ಫ್ಲುಯೆನ್ಸ್ಡ್ ವ್ಯಕ್ತಿಗಳೊಂದಿಗಿನ ಆತ್ಮೀಯ ಒಡನಾಟದ ಕೊಂಡಿ ಇಲ್ಲಿಗೇ ಕೊನೆಯಾಗಿ ಬಿಡುತ್ತಿತ್ತಾ?!
ಇವರನ್ನು ಕೇಳಿದರೆ ತಮ್ಮ ಫೈನಲ್ ಡೆಸ್ಟಿನಿ ಅಂಬಾನಿ ಕಾಂಟ್ಯಾಕ್ಟ್ ಎನ್ನುತ್ತಿರುತ್ತಾರಾದರೂ, ಅದು ಹೇಗೋ ಸಿಕ್ಕಿ ಅಲ್ಲಿಗೇ ಹೋಗಿ ನಿಂತರು ಎಂದುಕೊಳ್ಳಿ, ಆಗ ಅಂಬಾನಿಯೇ ತಮ್ಮ ’ಕೊನೆ’ ಅನ್ನಿಸುವುದಿಲ್ಲ. ಯಾಕೆಂದರೆ ಅಂಬಾನಿಗಿಂತಲೂ ಹೆಚ್ಚು ಶ್ರೀಮಂತರಾಗಿರುವ ಮತ್ತು ಹೆಚ್ಚು ಕಾಂಟ್ಯಾಕ್ಟುಗಳನ್ನು ಹೊಂದಿರುವ ಬಿಲ್ ಗೇಟ್ಸ್, ಮಾರ್ಕ್ ಜುಕರ‍್ ಬರ್ಗ್, ವಾರೆನ್ ಬಫೆಟ್... ಎಷ್ಟೊಂದು ಜನರಿಲ್ಲವಾ? ಹೌದು, ಈ ಕ್ಷಣಕ್ಕೆ ನಡೆದ ಯಾವುದೋ ಒಂದು ಘಟನೆ ಇತ್ಯಾದಿಯೇ ಕಾರಣವಾಗಿ ಅಂಬಾನಿ ಕಾಂಟ್ಯಾಕ್ಟ್ ಇದ್ದಿದ್ದರೆ ಹಾಗಿರುತ್ತಿತ್ತು ಹೀಗಿರುತ್ತಿತ್ತು ಮತ್ತು ಅಷ್ಟು ಸಿಕ್ಕಿದ್ದರೆ ಸಾಕಿತ್ತು ಅನ್ನಿಸುತ್ತಿರುತ್ತದಾದರೂ, ಅದು ಸಿಕ್ಕ ತಕ್ಷಣ ಇಂತಹ ಮನಸ್ಥಿತಿಗಳು ಅದಕ್ಕಿಂತ ಎತ್ತರಕ್ಕೆ ಜಿಗಿಯಲು ಪ್ರಯತ್ನಿಸುತ್ತಿರುತ್ತವೆ. ಇರುವ ಎತ್ತರದಲ್ಲಿ ನಮ್ಮಷ್ಟಕ್ಕೆ ನಾವು ನೆಮ್ಮದಿಯಾಗಿದ್ದು ಬಿಟ್ಟರೆ ಈ ಬದುಕಿನಲ್ಲಿ ಏನು ಸಾಧಿಸಿದಂತಾಗುತ್ತದೆ. ಅಲ್ಲಿ ಹೋಗಿ ನಿಂತುಕೊಂಡು ಅದಕ್ಕಿಂತ ಎತ್ತರಕ್ಕೇರಲು ಪ್ರಯತ್ನಿಸಬೇಕು. ಹೀಗೆ ಒಂದೊಂದೇ ಮೆಟ್ಟಿಲು ಏರುತ್ತಾ ಹೋದರಷ್ಟೇ ಲೈಫಿನಲ್ಲಿ ಏನಾದರೂ ಅಚೀವ್ ಮಾಡಲು ಸಾಧ್ಯವಾಗೋದು ಎಂದು ಅವರು ತಮ್ಮನ್ನು ತಾವು ಸಮರ್ಥನೆ ಮಾಡಿಕೊಳ್ಳಬಹುದಾದರೂ, ಇದರ ಕೊನೆ ಎನ್ನುವುದು ಎಲ್ಲಿ? ಈ ಪ್ರಶ್ನೆ ಅವರಿಗಿರುವುದಿಲ್ಲ. ಆದರೆ ಇಂತಹವರನ್ನು ದೂರ ನಿಂತು ನೋಡುತ್ತಿರುವ ನಮಗೆ ಇವರ ಕೊನೆಯ ಕಾಂಟ್ಯಾಕ್ಟ್ ಅಥವಾ ಇನ್‌ಫ್ಲುಯೆನ್ಸಿನ ಕೊನೆ ಎಲ್ಲಿ ಅಂತ ಅನ್ನಿಸಿಯೇ ಅನ್ನಿಸುತ್ತದೆ.
ಈಗ ನೀವೇ ಯೋಚನೆ ಮಾಡಿ. ನಮಗೆ ಪವರ‍್ ಸ್ಟಾರ‍್ ಪುನೀತ್ ರಾಜ್ಕುಮಾರ‍್ ಕಾಂಟ್ಯಾಕ್ಟ್ ಇದೆ. ಅವರು ನಮ್ಮನ್ನು ಗುರುತಿಸುತ್ತಾರೆ. ನಮಗೇನೋ ಕೆಲಸವಾಗಬೇಕು ಎಂದಾಗಲೂ ಒಂದಿಷ್ಟು ಹೆಲ್ಪ್ ಮಾಡುತ್ತಲೂ ಇರುತ್ತಾರೆ. ಮತ್ತು ಅವರ ಸಿನಿಮಾಗಳಿಗೆ ಸಂಬಂಧಿಸಿದಂತೆ ಏನಾದರೂ ಕಾರ್ಯಕ್ರಮ ಇದ್ದರೆ ಅವರೇ ಖುದ್ದು ಕಾಲ್ ಮಾಡಿ ಬರಲೇಬೇಕು ಎಂದೂ ಪ್ರೀತಿಯಿಂದ ಕರೆಯುತ್ತಿರುತ್ತಾರೆ. ಇಷ್ಟಕ್ಕೆ ಖುಷಿಯಾಗಬೇಕು ಮತ್ತು ಪುನೀತ್ ರಾಜ್ಕುಮಾರ‍್ ಅಂತಹವರ ಸಂಪರ್ಕಕ್ಕೆ ಬಂದಿದ್ದಕ್ಕೆ ನಮ್ಮ ಬಗ್ಗೆ ನಮಗೊಂದು ಸಮಾಧಾನ ಇರಬೇಕು. ಆದರೆ ನಾವು ಇಷ್ಟಕ್ಕೇ ಸುಮ್ಮನಾಗುವುದಿಲ್ಲ. ಪುನೀತ್ ರಾಜ್ಕುಮಾರ‍್ ಸಂಪರ್ಕದಲ್ಲಿದ್ದಾಗ ರಜನೀಕಾಂತ್ ಸಿನಿಮಾವೊಂದು ರೆಡಿಯಾಗುತ್ತದೆ ಮತ್ತು ಅದರ ಪ್ರೀಮಿಯರ‍್ ಶೋ ಇಲ್ಲೇ ಬೆಂಗಳೂರಿನಲ್ಲಿ ಇರುತ್ತದೆ. ಪುನೀತ್ ರಾಜ್ಕುಮಾರ‍್ ಅದಕ್ಕೆ ವಿಶೇಷ ಆಹ್ವಾನಿತರು ಮತ್ತು ಶೋಗೆ ಹೋಗುತ್ತಾರೆ. ಆದರೆ ನಮ್ಮನ್ನು ಅವರೂ ಕರೆಯುವುದಿಲ್ಲ, ರಜನೀಕಾಂತ್ ಕರೆಯಲು ಸಾಧ್ಯವಿಲ್ಲ. ಯಾಕೆಂದರೆ ಅವರ ಕಾಂಟ್ಯಾಕ್ಟಿನಲ್ಲಿ ನಾವಿಲ್ಲ. ಆಗ ನಮಗೆ ರಜನೀಕಾಂತ್ ಸಂಪರ್ಕ ಇರಬೇಕಿತ್ತು ಅನ್ನಿಸುತ್ತದೆ. ಮತ್ತು ಅದಕ್ಕಾಗಿ ಹಂಬಲಿಸಲಾರಂಭಿಸುತ್ತೇವೆ. ಅಲ್ಲಿಯೂ ತಲುಪಿದೆವು ಎಂದುಕೊಳ್ಳಿ, ಅಮಿತಾಬ್ ಮೊಮ್ಮಗುವಿನ ನಾಮಕರಣ ಕಾರ್ಯಕ್ರಮ ಭರ್ಜರಿಯಾಗಿ ನಡೆದಾಗ ಅದನ್ನು ಮಿಸ್ ಮಾಡಿಕೊಳ್ಳಲಾರಂಭಿಸುತ್ತೇವೆ. ಅಲ್ಲಿಗೂ ತಲುಪಿದರೆ ಜೆನಿಫರ‍್ ಲೋಪೇಜ್ ಕಾಂಟ್ಯಾಕ್ಟ್ ಇರಬೇಕಿತ್ತು... ಇದು ಹೀಗೇ ಕೊನೆಯೇ ಇಲ್ಲದ ದಾರಿಯಂತೆ! ಹಾಗಿದ್ದರೆ ಇದು ಕೊನೆಯೇ ಆಗುವುದಿಲ್ಲವಾ? ಖಂಡಿತ ಆಗುವುದಿಲ್ಲ.
ನಾನು ಇಂತಹ ಅನೇಕ ವ್ಯಕ್ತಿಗಳನ್ನು ನೋಡಿದ್ದೇನೆ, ಭೇಟಿಯಾಗಿದ್ದೇನೆ. ಮೊದಲು ಎಂ.ಎಲ್.ಎ ಕಾಂಟ್ಯಾಕ್ಟ್ ಇದ್ದರೆ ಸಾಕಿತ್ತು, ನಾನು ಎಲ್ಲಿ ಇರುತ್ತಿದ್ದೆ ಗೊತ್ತಾ ಎನ್ನುತ್ತಿರುತ್ತಾರೆ. ಅದು ಸಿಕ್ಕ ತಕ್ಷಣ ಮಿನಿಸ್ಟರ‍್ ಸಂಪರ್ಕಕ್ಕೆ ಸಾಯುತ್ತಾರೆ. ಅದೂ ಸಿಕ್ಕಿತೋ ಅಲ್ಲೇ ಏನೋ ಒಂದಿಷ್ಟು ನೆಮ್ಮದಿಯಾಗಿರಬಹುದಲ್ಲವಾ? ಇಲ್ಲ. ಸಿಎಂ ಸಂಪರ್ಕಕ್ಕೆ ಟ್ರೈ ಮಾಡುತ್ತಾರೆ. ಅದರಲ್ಲಿ ಸಕ್ಸಸ್ಸಾಗಿ ಸಿಎಂ ಕಾರ್ಯಕ್ರಮಗಳಲ್ಲಿ ಅವರ ಹಿಂದೆ ಇರುತ್ತಾರೆ. ಆದರೆ ಅವರು ಎಷ್ಟು ದಿನದ ಸಿಎಂ? ಮುಂದೆ ಇನ್ನ್ನಾರೋ ಸಿಎಂ ಆದಾಗ ಅವರ ಸಂಪರ್ಕ ಇರಬೇಕಿತ್ತು ಎಂದು ಕೊರಗುತ್ತಾರೆ...  ಹೌದು, ಅದೊಂದು ಬಗೆಯ ಕೊರಗು, ಗೀಳು ಇಂತಹವರನ್ನು ಬದುಕಿನುದ್ದಕ್ಕೂ ಎಳೆದೊಯ್ಯುತ್ತಿರುತ್ತದೆ. ಕಾಂಟ್ಯಾಕ್ಟ್, ಕಾಂಟ್ಯಾಕ್ಟ್ ಮತ್ತು ಕಾಂಟ್ಯಾಕ್ಟ್... ತಮ್ಮ ಬದುಕನ್ನೇ ಅದಕ್ಕಾಗಿ ಎತ್ತಿಟ್ಟು, ಅದರಲ್ಲೇ ಜೀವನ ನಡೆಸುವ ಪ್ರಯತ್ನ ಮಾಡುತ್ತಿರುತ್ತಾರೆ. ತಮ್ಮ ಕೊನೆಯೇನು ಮತ್ತು ಆ ಕೊನೆ ಎಲ್ಲಿದೆ ಎನ್ನುವುದರ ಬಗ್ಗೆಯೂ ಅವರಲ್ಲಿ ಸ್ಪಷ್ಟತೆ ಇರುವುದಿಲ್ಲ. ಒಟ್ಟಿನಲ್ಲಿ ಇವರಿಗೆ ಎಲ್ಲದೂ ಬೇಕು. ಆದರೆ ಅದು ಯಾಕೆ ಎನ್ನುವುದೂ ಇವರಿಗೆ ತಿಳಿದಿರುವುದಿಲ್ಲ.
ಹೀಗೆ ಕಾಂಟ್ಯಾಕ್ಟ್ ಅಥವಾ ಇನ್ ಫ್ಲುಯೆನ್ಸ್ಡ್ ಪರ್ಸನ್ನುಗಳ ಹತ್ತಿರದ ಸಂಪರ್ಕಕ್ಕೆ ಪ್ರಯತ್ನಿಸುವ ಈ ಮನಸ್ಥಿತಿಯವರಿಗೆ ಸಮಾಧಾನ ಮತ್ತು ನೆಮ್ಮದಿ ಎನ್ನುವುದು ಬದುಕಿನುದ್ದಕ್ಕೂ ಸಿಕ್ಕುವುದಿಲ್ಲ. ಯಾಕೆಂದರೆ ಒಬ್ಬರಿಗಿಂತ ಇನ್ನೊಬ್ಬರು ಎತ್ತರದಲ್ಲಿರುವಂತೆ ಕಾಣುತ್ತಿರುತ್ತಾರೆ. ಅವರನ್ನು ತಲುಪುವುದೇ ತಮ್ಮ ಗುರಿ ಎಂದು ಆ ಕ್ಷಣಕ್ಕೆ ಅಂದುಕೊಳ್ಳುತ್ತಾರಾದರೂ, ಅಲ್ಲಿಗೆ ತಲುಪಿಕೊಂಡ ತಕ್ಷಣ ಮತ್ತೆ ಇನ್ನೆಲ್ಲೋ ವೈರ‍್ ತಾಕಿಸಲು ನೋಡುತ್ತಾರೆ. ಇರುವಷ್ಟು ದಿನವೂ ಹೀಗೇ ಮಾಡುತ್ತಾ ಹೋದರೆ ತಮ್ಮ ಸಂಪರ್ಕದಲ್ಲಿರುವ ವ್ಯಕ್ತಿಗಳೊಂದಿಗೂ ಇವರಿಗೆ ಹೊಂದಿಕೊಳ್ಳಲಿಕ್ಕೋ, ಖುಷಿಯಾಗಿರಲಿಕ್ಕೋ ಸಾಧ್ಯವಾಗುವುದಿಲ್ಲ. ಆ ಕಡೆ ಹೋಗಬೇಕು, ಆದರೆ ಇಲ್ಲಿಯೂ ಇರಬೇಕು ಎಂದು ಯೋಚಿಸುತ್ತಲೇ ತಮ್ಮ ಬದುಕಿನ ಹೆಚ್ಚಿನ ಸಮಯವನ್ನು ಕಳೆದುಬಿಡುವ ಇಂತಹವರಿಗೆ ನಾಳೆ ಬಿಲ್ ಗೇಟ್ಸ್ ಬಂಗಲೆ ಖರೀದಿಸಿ, ಅಲ್ಲೊಂದು ದೊಡ್ಡ ಪಾರ್ಟಿ ಕೊಟ್ಟರೆ ಅಲ್ಲಿಯೂ ತಾನಿರಬೇಕಿತ್ತು, ತಾನು ಅದನ್ನು ಮಿಸ್ ಮಾಡಿಕೊಂಡೆ ಎನ್ನುವ ಚಡಪಡಿಕೆ... ಬದುಕಿನ ಹಾದಿಯಲ್ಲಿ ಒಂದಷ್ಟು ದೂರ ಹೋದ ಮೇಲೆ, ಆ ದೂರವನ್ನು ತಲುಪಿಕೊಂಡಿದ್ದಕ್ಕೆ ಒಂದಿಷ್ಟು ನೆಮ್ಮದಿ, ಸಮಾಧಾನವನ್ನು ನೀವು ಫೀಲ್ ಮಾಡಿಲ್ಲವೆಂದರೆ, ನೀವು ನಡೆದ ದೂರದಿಂದ ಏನು ಸಂಪಾದಿಸಿದಂತಾಯಿತು? ಕೀಳಬೇಕಿದ್ದ ಹಣ್ಣನ್ನು ಮರದಿಂದ ಕಿತ್ತು ಕೈಯಲ್ಲಿ ಹಿಡಿದುಕೊಂಡು ಅದನ್ನು ತಿಂದು ಎಂಜಾಯ್ ಮಾಡದೇ, ಕೈಯಲ್ಲಿರುವ ಹಣ್ಣನ್ನು ಬಿಟ್ಟು ಅದಕ್ಕಿಂತ ದೊಡ್ಡ ಹಣ್ಣನ್ನು ಕೊಯ್ಯಲು ಪ್ರಯತ್ನಿಸಿ, ಅದೂ ಸಿಕ್ಕದೇ, ಈ ಕಡೆ ಈ ಹಣ್ಣಿನ ಸವಿಯೂ ನಿಮ್ಮ ನಾಲಿಗೆಯದ್ದಾಗದೇ ಹೋದರೆ ಆ ಹಣ್ಣನ್ನು ಕೊಯ್ಯಲು ನೀವು ಹಾಕಿದ ಪ್ರಯತ್ನಕ್ಕೆ ಏನು ಸಿಕ್ಕಂತಾಯಿತು? ಬದುಕಿನ ಸಂಪರ್ಕ ಅಥವಾ ಪ್ರಭಾವಿ ವ್ಯಕ್ತಿಗಳ ಸಂಪರ್ಕವನ್ನೂ ಹೀಗೇ ಯೋಚಿಸಿದರೆ, ಇರುವವರೊಂದಿಗೇ ನಾವೊಂದಿಷ್ಟು ಖುಷಿಯಾಗಿರುತ್ತೇವೆ ಮತ್ತು ಅಂತಹವರ ಆಪ್ತ ವಲಯಕ್ಕೆ ಸೇರಿಕೊಂಡಿದ್ದಕ್ಕೆ ಹೆಮ್ಮೆ, ಖುಷಿ ಮತ್ತು ಲಾಭವೂ ಇರುತ್ತದೆ.
ದುರಂತವೇನು ಗೊತ್ತಾ, ಇದನ್ನೇ ತಮ್ಮ ಬದುಕಿನ ಗುರಿ ಇತ್ಯಾದಿಯನ್ನೆಲ್ಲ ಮಾಡಿಕೊಂಡ ಹೆಚ್ಚಿನವರು ಹೀಗೇ ಇರುತ್ತಾರೆ. ಸಿಎಂ ಸಂಪರ್ಕಕ್ಕೆ ಹೋಗಿದ್ದಕ್ಕೆ ಖುಷಿ ಪಡುವುದು ಬಿಟ್ಟು, ಸಿಎಂ ಕಚೇರಿಯಲ್ಲಾಗುವ ಬೆಳವಣಿಗೆಯನ್ನೆಲ್ಲ ನೋಡಿಕೊಂಡು, ಇವರಿಗಿಂತ ಪಿಎಂ ಪವರ‍್ ಫುಲ್. ಅವರ ಸಂಪರ್ಕಕ್ಕೆ ಹೋದರೆ ದೇಶದ ಯಾವ ರಾಜ್ಯದಲ್ಲಿ ಏನು ಕೆಲಸ ಬೇಕಾದರೂ ಆಗುತ್ತದೆ ಎಂದು ಅರ್ಥವಾಗುತ್ತಿದ್ದಂತೆ ಅಲ್ಲಿಗೆ ಜಂಪ್ ಮಾಡಲು ನೋಡುತ್ತಿರುತ್ತಾರೆ. ಸಹಜವಾಗಿ ನೋಡಿದರೆ, ಇದು ಒಳ್ಳೆಯದೇ ಮತ್ತು ಹೀಗೇ ಬೆಳೆಯುತ್ತಾ ಹೋಗುವುದೇ ಬದುಕಿನ ಬಹುದೊಡ್ಡ ಗೆಲುವು ಅಂತಲೂ ಅನ್ನಿಸುತ್ತದೆ. ಆದರೆ ಅವರು ಅಲ್ಲಿಯೂ ಕೊನೆಯಾಗದೇ ಇನ್ನ್ಯಾವುದೋ ದೇಶದ ರಾಯಭಾರಿ ಮೂಲಕ ಆ ದೇಶದ ಇನ್ನ್ಯಾರನ್ನೋ ಕಾಂಟ್ಯಾಕ್ಟ್  ಮಾಡಲು ಪ್ರಯತ್ನಿಸುವುದು... ಇದರ ಕೊನೆ ಎಲ್ಲಿ ಎನ್ನುವ ಪ್ರಶ್ನೆ ಏಳದೇ ಇರಲು ಹೇಗೆ ಸಾಧ್ಯ? ಅವರಲ್ಲೇ ಈ ಪ್ರಶ್ನೆ ಹುಟ್ಟಿ ಅವರು ಒಂದು ಕಡೆ ನೆಲೆ ನಿಂತರೆ ಸರಿ. ಹಾಗಾಗದೇ ಹೀಗೇ ಮುಂದುವರಿದರೆ ಅದಕ್ಕೊಂದು ಕೊನೆ ಸಿಕ್ಕುವುದೂ ಇಲ್ಲ. ಮತ್ತು ಅವರು ಬದುಕಿನ ಕೊನೆಯಲ್ಲೂ ತಾವು ಕಾಂಟ್ಯಾಕ್ಟ್ ಮಾಡಿಕೊಳ್ಳಲಾಗದ ವ್ಯಕ್ತಿಯ ವಿಷಯದಲ್ಲಿ ಕೊರಗುವುದೂ ತಪ್ಪುವುದಿಲ್ಲ.
ಕಾಂಟ್ಯಾಕ್ಟ್ ಅಥವಾ ಇನ್ ಫ್ಲುಯೆನ್ಸ್ಡ್ ವ್ಯಕ್ತಿಗಳ ಸಂಪರ್ಕಕ್ಕೆ ಹೋಗಬೇಕೆನ್ನುವ ಮನಸ್ಥಿತಿಗಳೇ ಹೀಗಿರುತ್ತವೆ. ಇದೊಂದು ರೀತಿಯಲ್ಲಿ ದುರಾಸೆಯ ಇನ್ನೊಂದು ಮುಖವೂ ಕೂಡಾ. ಆದ್ದರಿಂದಲೇ ಇವರಿಗೆ ತಮ್ಮ ಕಾಂಟ್ಯಾಕ್ಟುಗಳ ಪಟ್ಟಿ ಮುಗಿದಂತೆಯೇ ಕಾಣುವುದಿಲ್ಲ. ಎಲ್ಲರ ಸಂಪರ್ಕವೂ ಇರಬೇಕು, ಎಲ್ಲಾ ಕಡೆಯೂ ಕಾಣಿಸಿಕೊಳ್ಳಬೇಕು, ಅವರ ಮೂಲಕ ಏನೋ ಒಂದು ಕೆಲಸ ಮಾಡಿಸಬೇಕು, ಮಾಡಿಸಿಕೊಳ್ಳಬೇಕು ಎಂದೆಲ್ಲ ಯೋಚಿಸುತ್ತಲೇ ಒಂದೊಂದು ದಿನವನ್ನೂ ಕಳೆಯುವ ಇವರು, ಅದನ್ನೇ ಬದುಕಾಗಿಸಿಕೊಂಡಿರುತ್ತಾರೆ. ಜೊತೆಗೆ ಇರುವ ಸಂಪರ್ಕದ ಬಗ್ಗೆ ಹೇಳಿಕೊಳ್ಳುವುದು, ಈ ಮೂಲಕ ಒಂದಿಷ್ಟು ಜನರ ಮೆಚ್ಚುಗೆ ಗಳಿಸಿಕೊಳ್ಳುವುದೂ ಇವರಿಗೆ ಅಭ್ಯಾಸವಾಗಿರುತ್ತದೆ. ಆದ್ದರಿಂದಲೇ ಇವತ್ತು ಮುಖೇಶ್ ಅಂಬಾನಿ ಬಗ್ಗೆ ಯೋಚಿಸುವವರು, ಎಲ್ಲರೆದುರು ಹೇಳಿಕೊಳ್ಳಲಿಕ್ಕಾದರೂ ಹೊಸ ಬಿಗ್ ಕಾಂಟ್ಯಾಕ್ಟ್ ಮಾಡಿಕೊಳ್ಳಬೇಕು ಎಂದು ಅಂಬಾನಿಗಿಂತ ಹೆಚ್ಚು ಇನ್ ಫ್ಲುಯೆನ್ಸ್ಡ್ ವ್ಯಕ್ತಿ ಬಗ್ಗೆ ಯೋಚಿಸಲಾರಂಭಿಸುತ್ತಾರೆ. ಇಂತಹ ದುರಾಸೆಯೇ ಇವರ ಬದುಕಿನ ನೆಮ್ಮದಿ, ಖುಷಿ, ಸಮಾಧಾನವನ್ನೆಲ್ಲ ಸದ್ದಿಲ್ಲದೆ ಕೊಂದು ಹಾಕುತ್ತಿರುತ್ತದೆ.
ಹಾಗೆಂದು ದೊಡ್ಡ ವ್ಯಕ್ತಿಗಳ ಸಂಪರ್ಕ ಇರಬಾರದು ಎಂದೂ ಅಲ್ಲ. ಅನಾಯಾಸವಾಗಿ, ತಾನಾಗಿಯೇ ಅಥವಾ ನಮ್ಮ ಹತ್ತಿರದವರ‍್ಯಾರ ಮೂಲಕವೋ ನಮಗೆ ದೊಡ್ಡ ವ್ಯಕ್ತಿಗಳ ಸಂಪರ್ಕವಾಯಿತು, ಅವರ ಆಪ್ತ ವಲಯಕ್ಕೆ ನಾವೂ ಸೇರಿಕೊಂಡೆವು ಎಂದರೆ ಮತ್ತು ಅವರ ಸಂಪರ್ಕದಲ್ಲಿ ನಮ್ಮಮನಸ್ಸು ಆರಾಮಾಗಿರುತ್ತದೆ ಎಂದರೆ ಖುಷಿಯಿಂದಲೇ ಇರೋಣ. ಮತ್ತು ನಮ್ಮಿಂದ ಸಾಧ್ಯವಾಗುವುದಾದರೆ ಮತ್ತು ಅದು ನಮ್ಮ ಬದುಕಿನಲ್ಲಿ ಸಂಭವಿಸಲೇಬೇಕೆಂದಿದ್ದರೆ ಇವರಿಗಿಂತ ದೊಡ್ಡ ವ್ಯಕ್ತಿಗಳ ಸಂಪರ್ಕಕ್ಕೂ ಹೋಗೋಣ. ಆದರೆ ಹೀಗೆ ಕಾಂಟ್ಯಾಕ್ಟುಗಳನ್ನೇ ಎರಡೂ ಕಣ್ಣುಗಳ ಕನ್ನಡಕದಂತೆ ಧರಿಸಿಕೊಂಡು ಹೊರಟು ಬಿಟ್ಟರೆ ಕೊನೆ ಎನ್ನುವುದು ತುಂಬಾ ಖುಷಿ ತರುವಂತಹದ್ದೇನೂ ಆಗಿರುವುದಿಲ್ಲ.
-ಆರುಡೋ ಗಣೇಶ

ಕಾಮೆಂಟ್‌ಗಳು

  1. ಲೇಖನ ಚನ್ನಾಗಿದೆ ಸರ್.ಈ ಸೆಲೆಬ್ರಿಟಿಗಳ ಕಾಂಟ್ಯಾಕ್ಟ್ ನ್ನೆ ನಮ್ಮ ಸಾಧನೆ ಎಂದುಕೊಂಡರೆ ಮೂರ್ಖತನವಾದೀತು.ಆದರೆ ಕೆಲವರು ಈ ತರೆಹದ ಕಾಂಟ್ಯಾಕ್ಟ್ ಗಳನ್ನೆ ಬಂಡವಾಳ ಮಾಡಿಕೊಂಡು ಬದುಕುವುದಂಟು.

    ಪ್ರತ್ಯುತ್ತರಅಳಿಸಿ
  2. ವರ್ತಮಾನದ ಮನಸುಗಳ ಮನಸ್ತಿತಿ ,ಗೀಳು ಇದು.. ಚೆನ್ನಾಗಿದೆ ಲೇಖನ..

    ಪ್ರತ್ಯುತ್ತರಅಳಿಸಿ
  3. ವರ್ತಮಾನದ ಮನಸುಗಳ ಮನಸ್ತಿತಿ ,ಗೀಳು ಇದು.. ಚೆನ್ನಾಗಿದೆ ಲೇಖನ..

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅವನು ಅಪ್ಪ ಹೇಳಿದ ಆ ಮಾತನ್ನು ಮರೆಯದೇ ಹೋಗಿದ್ದರೆ...

ಬೆಳಕಾದಳೇ ಅವಳು...?!

ಸಾಯುವ ಮನಸ್ಸಿಲ್ಲದ ಸಂಜೆಯೊಂದರ...