ಅಂತಹವರ ನಡುವೆ ಇಂತಹವರೂ ಇರುತ್ತಾರೆ...

ಬಾಲ್ಯದಿಂದಲೂ ನೋಡಿ ಪ್ರೀತಿಸಿಕೊಂಡ ಕೋಡೂರಿನ ತಮ್ಮನಂತಹ ಹುಡುಗನೊಂದಿಗೆ ಆ ಹುಡುಗ ಅವತ್ತು ಮಲ್ಲೇಶ್ವರದ ನಮ್ಮ ಪುಸ್ತಕದ ಗೋಡೌನೇ ಆಗಿರುವ, ಆದರೆ ನಾವು 'ಆಫೀಸ್' ಎಂದು ಕರೆಯುವ ಜಾಗಕ್ಕೆ ಬಂದಿದ್ದ.
ನಾನೂ ಕಿರುಚಿತ್ರ ನಿರ್ಮಿಸಬೇಕೆಂದುಕೊಂಡು ಯೋಚಿಸುತ್ತಿದ್ದಿದ್ದನ್ನು ತಿಳಿದುಕೊಂಡ ಕೋಡೂರಿನ ತಮ್ಮ, ಸಿನಿಮಾಟೋಗ್ರಾಫಿಯಲ್ಲಿ ಆಸಕ್ತಿ ಇದ್ದ ತನ್ನ ಸ್ನೇಹಿತನನ್ನು ನನಗೆ ಪರಿಚಯಿಸಲೆಂದು ಕರೆದುಕೊಂಡು ಬಂದಿದ್ದ ಮತ್ತು ಆ ಹುಡುಗನಿಗೆ ಸಿನಿಮಾ ಕ್ಷೇತ್ರದಲ್ಲಿ ಇರುವ ಆಸಕ್ತಿಯ ಬಗ್ಗೆಯೆಲ್ಲ ಹೇಳಿ, ’ಗಣೇಶಣ್ಣ, ಇವ್ನು ಮತ್ತು ಇವನ ಫ್ರೆಂಡು ಶಿವಮೊಗ್ಗದಲ್ಲಿ ಒಂದು ಸಣ್ಣ ಸಿನಿಮಾದಂತಹದ್ದನ್ನು ಮಾಡಬೇಕೆಂದು ಓಡಾಡುತ್ತಿದ್ದಾರೆ. ನೀವೇನಾದರೂ ಅದನ್ನು ಪ್ರೊಡ್ಯೂಸ್ ಮಾಡಬಹುದಾ?’ ಎಂದು ಕೇಳಿದ.
ಆನಂತರ ನಾನು ಆ ಹುಡುಗನೊಂದಿಗೆ ಮಾತನಾಡಿದೆ. ಆ ಹೊತ್ತಿಗಾಗಲೇ ಕೆನಾನ್ 7D ಕ್ಯಾಮರಾವನ್ನು ಸ್ವಂತಕ್ಕೆ ಹೊಂದಿದ್ದ ಮತ್ತು ಬೆಂಗಳೂರಿನ ಯಾವುದೋ ಸಿನಿಮಾ ಇನ್ಸ್ಟಿಟ್ಯೂಟಿನಲ್ಲಿ ಸಿನಿಮಾಟೋಗ್ರಾಫಿ ಓದುತ್ತಿದ್ದ ಆ ಹುಡುಗ ’ನಾವು ಮಾಡುತ್ತಿರುವ ಕಿರುಚಿತ್ರವೂ ಅಲ್ಲದ, ಸಿನಿಮಾವೂ ಅಲ್ಲದ ಆ ಪ್ರಾಜೆಕ್ಟಿಗೆ ಹತ್ತತ್ತಿರ ಒಂದು ಲಕ್ಷದ ಬಜೆಟ್ ಬೇಕಾಗುತ್ತದೆ’ ಎಂದೆಲ್ಲ ವಿವರಿಸಿದ. ಬೇರೆಯವರು ಹಣ ಹಾಕುತ್ತಾರೆಂದರೆ ಎಲ್ಲವನ್ನೂ ಹೈ ಬಜೆಟ್ಟಿನಲ್ಲೇ ಯೋಚಿಸುವ ಇಂತಹ ಸಾಕಷ್ಟು ಹುಡುಗರೊಂದಿಗೆ ಮಾತನಾಡಿದ ಅನುಭವವಿದ್ದ ನಾನು, ’ನಾನು ಅಷ್ಟೆಲ್ಲ ಹಣ ಹಾಕುವಂತಹ ಪ್ರೊಡ್ಯೂಸರ‍್ ಅಲ್ಲ. ಏಳೆಂಟು ಸಾವಿರದೊಳಗೇ ಕಿರುಚಿತ್ರ, ಸಾಕ್ಷ್ಯಚಿತ್ರ ಇತ್ಯಾದಿಗಳನ್ನು ಮಾಡಬೇಕೆನ್ನುವುದು ನನ್ನ ಉದ್ದೇಶ. ಆದರೂ ನನಗೆ ತುಂಬಾ ಬೇಕಾದ ತಮ್ಮನಂತಹ ಹುಡುಗ ನಿಮ್ಮನ್ನು ಕರೆದುಕೊಂಡು ಬಂದಿರುವುದರಿಂದ ನಿಮ್ಮ ಪ್ರಾಜೆಕ್ಟಿಗೆ ನಾನೂ ಒಂದಿಷ್ಟು ಹಣ ಹೂಡಬಲ್ಲೆ ಅಥವಾ ಬೇರೆಯವರೊಂದಿಗೆ ಮಾತನಾಡಿ ನಮ್ಮ ಬ್ಯಾನರ‍್ ಮೂಲಕ ನಿಮ್ಮ ಪ್ರಾಜೆಕ್ಟಿಗೆ ಒಂದಿಷ್ಟು ಹಣ ತೊಡಗಿಸುವ ಪ್ರಯತ್ನ ಮಾಡುತ್ತೇನೆ’ ಎಂದು ಪ್ರೀತಿಯಿಂದಲೇ ಮಾತನಾಡಿ, ’ನಾನು ನನ್ನ ಬಳಿ ಇರುವ ಕೆನಾನ್ 550D ಕ್ಯಾಮರಾದಿಂದಲೇ ಕಿರುಚಿತ್ರ ಶೂಟ್ ಮಾಡುವ ಬಗ್ಗೆ ಯೋಚಿಸುವಾಗ ನಿಮ್ಮ ಬಳಿ ಇರುವ ಕೆನಾನ್ 7D ಕ್ಯಾಮರಾದಿಂದಲೇ ನಿಮ್ಮ ಪ್ರಾಜೆಕ್ಟನ್ನು ಯಾಕೆ ಕಂಪ್ಲೀಟ್ ಮಾಡಬಾರದು? ಒಮ್ಮೆ ನೀವು ನಿಮ್ಮನ್ನು ಹೀಗೆ ಪ್ರೂವ್ ಮಾಡಿಕೊಂಡರೆ ಆಮೇಲೆ ನೀವು ನಿರೀಕ್ಷಿಸುವಂತಹ ಕ್ಯಾಮರಾ ಇತ್ಯಾದಿಗಳೊಂದಿಗೇ ನಿಮ್ಮನ್ನು ಅಪ್ರೋಚ್ ಮಾಡುವವರು ಬೇಕಾದಷ್ಟು ಜನ ಸಿಕ್ಕುತ್ತಾರೆ’ ಎಂದೆಲ್ಲ ಕಡಿಮೆ ಬಜೆಟ್ಟಿನಲ್ಲಿ ಆರ್ಥಿಕವಾಗಿ ಯಾವುದೇ ರಿಟರ್ನ್ಸ್ ನೀಡದ ಇಂತಹ ಕಿರುಚಿತ್ರವನ್ನೋ, ಕಿರುಚಿತ್ರಕ್ಕಿಂತ ದೊಡ್ಡದನ್ನೋ ಹೇಗೆ ಮಾಡಬಹುದು ಎಂದು ಸುಮಾರು ಒಂದು ಗಂಟೆ ವಿವರಿಸಿದೆ.
ನಾನು ಹೇಳಿದ್ದನ್ನೆಲ್ಲ ಆ ಹುಡುಗ ನೀಟಾಗಿ ಕೇಳಿಸಿಕೊಂಡ.
ಇವರಿಬ್ಬರೂ ಆ ಕಡೆ ಹೋಗುತ್ತಿದ್ದಂತೆ ನಾನು ನಮ್ಮ ಕಡೆಯ ಮಾಜಿ ಎಂ.ಎಲ್.ಎ ಮಗನೊಬ್ಬನೊಂದಿಗೆ ಶಿವಮೊಗ್ಗದ ಹುಡುಗರು ಎಂದು ಹೇಳಿ ಇವರ ಪ್ರಾಜೆಕ್ಟಿಗೆ ಹಣ ಹಾಕಿಸುವ ಬಗ್ಗೆಯೂ ಮಾತನಾಡಿದ್ದೆ. ಅವರು ಹಣ ಹೂಡುವ ಆಸಕ್ತಿಯನ್ನೂ ತೋರಿಸಿದ್ದರು.
ಇದಾಗಿ ಕೆಲವು ದಿನಗಳಾಗಿತ್ತು. ಕೋಡೂರಿನ ತಮ್ಮನಂತಹ ಹುಡುಗ ನನಗೆ ಫೋನ್ ಮಾಡಿ, ’ಗಣೇಶಣ್ಣ ಅವರವರೇ ಆ ಪ್ರಾಜೆಕ್ಟ್ ಮಾಡುತ್ತಾರಂತೆ...’ ಎಂದು ತಿಳಿಸಿದ್ದಷ್ಟೇ. ನಾನು, ’ಆಯಿತು, ಅವರಿಗೆ ಒಳ್ಳೆಯದಾಗ್ಲಿ... ಈಗಾಗ್ಲೇ ನಾನು ಹಣ ಹಾಕುವಂತಹ ಒಬ್ಬರೊಂದಿಗೆ ಮಾತನಾಡಿದ್ದೆ. ಹಾಗಿದ್ದರೆ ಸರಿ ಬಿಡು, ಅವರಿಗೆ ಬೇಡ ಎನ್ನುತ್ತೇನೆ’ ಎಂದೆ.
ಇಷ್ಟರನಂತರ ಆ ಹುಡುಗ ಮತ್ತೆ ಫೋನ್ ಮಾಡಿದ್ದು ಯಾವಾಗ ಎಂದರೆ ಅವರ ಶೂಟಿಂಗ್ ಎಲ್ಲಾ ಮುಗಿದು ಮ್ಯೂಸಿಕ್ ಮಾಡುವವರಿಗೆ ಹುಡುಕಾಡುವಾಗ! ಕಡಿಮೆ ಬಜೆಟ್ಟಿನಲ್ಲಿ ಹೇಗೆ ಒಂದು ಕಿರುಚಿತ್ರ ಇತ್ಯಾದಿಯನ್ನೆಲ್ಲ ಮಾಡಬಹುದು ಎಂದು ವಿವರವಾಗಿ ಕೇಳಿಸಿಕೊಂಡು ಹೋದ ಹುಡುಗ, ಒಂದು ಲಕ್ಷದ ಬಜೆಟ್ಟಿನ ತಮ್ಮ ಪ್ರಾಜೆಕ್ಟನ್ನು ಕಡಿಮೆ ಬಜೆಟ್ಟಿನಲ್ಲಿ ಮಾಡುತ್ತಿದ್ದೇವೆ ಎಂದು ಒಂದು ಮಾತು ಹೇಳಿದ್ದರೆ ಮನುಷ್ಯ ಸಂಬಂಧ, ವಿಶ್ವಾಸ, ನಂಬಿಕೆ ಇತ್ಯಾದಿಗಳಿಗೆ ಒಂದು ಬೆಲೆ ಇರುತ್ತಿತ್ತು. ಆದರೆ ಹೀಗೆ ಮಾಡದೇ ತಮ್ಮ ಪಾಡಿಗೆ ತಾವೇ ಎಲ್ಲವನ್ನೂ ಮಾಡಿಕೊಂಡು ಕೊನೆಗೆ ಮ್ಯೂಸಿಕ್ಕಿಗೆ ಯಾರೂ ಸಿಕ್ಕದೇ ಹೋದಾಗ ನನಗೇ ಫೋನ್ ಮಾಡಿ ನಿಮ್ಮ ಪರಿಚಯದ ಮ್ಯೂಸಿಕ್ ಡೈರೆಕ್ಟರ‍್ರಿಗೆ ಕೇಳ್ತೀರಾ ಎಂದು ಹೇಳುವಷ್ಟು ಇವತ್ತಿನ ಕೆಲವು ಕ್ರಿಯಾಶೀಲ (?!) ಮನಸ್ಸುಗಳು ಹೋಗಿವೆ ಎಂದರೆ ಅವರ ಯೋಚನಾ ಮಟ್ಟ, ಅವರು ಈ ಬದುಕನ್ನು ಜೀವಿಸುವ ರೀತಿ ಮತ್ತು ತಮ್ಮಿಂದಾಚೆಗೆ ಬೇರೆ ಯಾರನ್ನೇ ಆದರೂ ಹೇಗೆಲ್ಲ ನೋಡುತ್ತಾರೆ ಎನ್ನುವುದನ್ನೂ ತೋರಿಸುತ್ತದೆ. ಆದರೂ ನಾನು ನನ್ನ ಪರಿಚಯದ ಮ್ಯೂಸಿಕ್ ಡೈರೆಕ್ಟರ‍್ ಕಂಪ್ಯೂಟರ‍್ರು ಪ್ರಾಬ್ಲಂ ಆಗಿರುವುದರಿಂದ ಅವರು ಈಗ ಯಾವ ಮ್ಯೂಸಿಕ್ಕೂ ಮಾಡುತ್ತಿಲ್ಲ ಎಂದು ಹೇಳಿ, ಸುಮ್ಮನಾದೆ.
ಕೊನೆಗೆ ನನ್ನ ಹತ್ತಿರ ಒಂದು ಲಕ್ಷದ ಬಜೆಟ್ಟಿನ ಕಿರುಚಿತ್ರವೋ ಇನ್ನೇನನ್ನೋ ಹಿಡಿದು ಕೊಂಡ ಬಂದ ಇದೇ ಹುಡುಗರು ತಮ್ಮ ಬಳಿ ಇರುವ ಕೆನಾನ್ 7D ಕ್ಯಾಮರಾವನ್ನೇ ಬಳಸಿಕೊಂಡು ಬರೀ 35 ಸಾವಿರ (ಇದಕ್ಕಿಂತಲೂ ಕಡಿಮೆ ಎನ್ನುವುದು ನನ್ನ ಅಂದಾಜು) ಬಜೆಟ್ಟಿನಲ್ಲಿ ಅದನ್ನು ಮುಗಿಸಿದರು. ಇದಕ್ಕೆ ದೊಡ್ಡ ಪ್ರಚಾರವನ್ನೂ ಪಡೆದರು. ಈಗ ಈ ಕ್ಯಾಮರಾಮನ್ ಹುಡುಗ ಕನ್ನಡ ಸಿನಿಮಾಗಳಿಗೆ ಕೆಲಸವನ್ನೂ ಮಾಡುತ್ತಿದ್ದಾನೆ. ನನ್ನ ಬಳಿಯೇ ಬಂದು ಚರ್ಚಿಸಿ ಇಷ್ಟೆಲ್ಲ ಮಾಹಿತಿಯನ್ನು ಪಡೆದುಕೊಂಡು ಹೋಗಿ ತಮ್ಮ ಪ್ರಾಜೆಕ್ಟನ್ನು ಪೂರೈಸಿಕೊಂಡಿದ್ದಕ್ಕೆ ನನಗೆ ಬೇಸರವೇನೂ ಇಲ್ಲ. ಕೊನೇಪಕ್ಷ ನಾವು ಹೀಗೆ ಮಾಡುತ್ತಿದ್ದೇವೆ ಎಂದು ಒಂದು ಮಾತಾದರೂ ಹೇಳಬಹುದಿತ್ತಲ್ಲವಾ?
ಉಹ್ಞೂಂ, ಆ ಮನೋಭಾವವೇ ಇಲ್ಲ. ಅಸಲಿಗೆ ಇವರಿಗೆಲ್ಲ ಮನಸ್ಸೇ ಇರುವುದಿಲ್ಲ. ಆದರೂ ಅವರಿವರ ಬಗ್ಗೆ ದೊಡ್ಡ ದೊಡ್ಡ ಮಾತನಾಡುತ್ತಿರುತ್ತಾರೆ. ಸಮಾಜದ ಬದಲಾವಣೆಗಾಗಿಯೂ ತಾವು ಹೆಜ್ಜೆ ಇಟ್ಟಿದ್ದೇವೆ ಎನ್ನುವಂತೆಲ್ಲ ಡೈಲಾಗು ಹೊಡೆಯುತ್ತಿರುತ್ತಾರೆ.
ಇದೆಲ್ಲ ಯಾಕೆ ನೆನಪಾಯಿತೆಂದರೆ, ನಾನು ಯಾವ ರೀತಿಯ ಸಹಾಯ ಮಾಡದೇ ಹೋದರೂ, ನಾನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಯಾವ ರೀತಿಯಲ್ಲಿಯೂ ಜೊತೆಯಾಗದೇ ಹೋದರೂ Manju M Doddamani ಅವರು ತಮ್ಮ ನಿರ್ಮಾಣ ಮತ್ತು ನಿರ್ದೇಶನದ ’ಅಭ್ಯಾಗತ-2’ ಕಿರುಚಿತ್ರದ ಟೈಟಲ್ ಕಾರ್ಡಿನಲ್ಲಿ 'ವಿಶೇಷ ಕೃತಜ್ಞತೆಗಳು' ಎಂದು ನನ್ನ ಹೆಸರು ಹಾಕಿದ್ದಾರೆ! ಅಂದಹಾಗೇ ವಿಶ್ಯುವಲ್ ಮೀಡಿಯಾದಲ್ಲಿ ನನ್ನ ಹೆಸರು ಕೃತಜ್ಞತೆಗಳ ಪಟ್ಟಿಯಲ್ಲಿ ಬಂದಿದ್ದೂ ಇದೇ ಮೊದಲು!! ಮನುಷ್ಯ, ಮನುಷ್ಯತ್ವ, ಮನುಷ್ಯ ಸಂಬಂಧಗಳ ಮೌಲ್ಯವೇನು ಎನ್ನುವುದನ್ನೆಲ್ಲ ಅರಿತುಕೊಂಡು ಆಮೇಲೆ ತಮ್ಮದೇ ರೀತಿಯಲ್ಲಿ ಕ್ರಿಯಾಶೀಲವಾಗಿರುವ ಮಂಜು ದೊಡ್ಡಮನಿ ಅವರಿಗೆ ಈವರೆಗೆ ನಾನೇನೂ ಕೊಟ್ಟಿಲ್ಲ, ಅವರೂ ನನ್ನ ಹತ್ತಿರ ಕೇಳಿಲ್ಲ. ಆದರೂ, ಅಭ್ಯಾಗತ -2 ಕಿರುಚಿತ್ರದ ಪೋಸ್ಟರ‍್ ಬಿಡುಗಡೆಯನ್ನು ನಾನೆಷ್ಟು ಬೇಡವೆಂದರೂ ನನ್ನ ಹತ್ತಿರವೇ ಮಾಡಿಸಿದರು. ಇದೆಲ್ಲದಕ್ಕೆ ನಾನು ಅರ್ಹನಲ್ಲ, ನೀವು ದೊಡ್ಡವರ ಹತ್ತಿರ ಈ ಕೆಲಸವನ್ನೆಲ್ಲ ಮಾಡಿಸಬೇಕು ಎಂದರೂ ಕೇಳದೇ ಪ್ರೀತಿಯಿಂದ ಒತ್ತಾಯಿಸಿ ನಾನಿದ್ದಲ್ಲಿಗೇ ಅಂದರೆ ಮಲ್ಲೇಶ್ವರದ ನಮ್ಮ ಪುಸ್ತಕದ ಗೋಡೌನಿಗೇ ಬಂದು ನನ್ನ ಕೈಯಲ್ಲಿ ತಮ್ಮ ಕಿರುಚಿತ್ರದ ಪೋಸ್ಟರ‍್ ಬಿಡುಗಡೆ ಮಾಡಿಸಿದರು. ಈ ಭಾರವೇ ತುಂಬಾ ಆಯಿತು ಎನ್ನುವಾಗ ತಮ್ಮ ಕಿರುಚಿತ್ರದ ಟೈಟಲ್ ಕಾರ್ಡಿನಲ್ಲಿ ಏನೂ ಮಾಡದ ನನಗೆ ಈ ಗೌರವ ಮತ್ತು ಪ್ರೀತಿ...
ಮಂಜು ಎಂ. ದೊಡ್ಡಮನಿ
ಕ್ರಿಯಾಶೀಲತೆ ಎನ್ನುವುದು ನಿಜವಾದ ಕ್ರಿಯಾಶೀಲತೆಯಾಗಿಯೇ ಉಳಿಯುವುದು ಇಂತಹ ಮನಸ್ಸುಗಳಿಂದಲೇ ಹೊರತು, ಮನಸ್ಸುಗಳಿಗೂ ಬೆಲೆ ಕಟ್ಟುವ, ಹರಾಜು ಹಾಕುವ, ಬೇರೆಯವರನ್ನು ತುಳಿದೇ ಮೇಲೆ ಹೋಗುವ, ಯಾರದ್ದೋ ಮಾತು ನಂಬಿ ಇನ್ನೇನೋ ಆಡಿಕೊಂಡು ಅಡ್ಡಾಡುವ ಮನುಷ್ಯರೆನ್ನಲಿಕ್ಕೂ ನಾಲಾಯಕ್ಕುಗಳಾದವರಿಂದಲ್ಲ. ದುರಂತವೇನು ಗೊತ್ತಾ, ಇವತ್ತು ಇಂತಹವರಿಗೇ ಹೆಚ್ಚು ಬೆಲೆ ಮತ್ತು ಅವರದ್ದೇ ಮೆರೆದಾಟ... ಇದನ್ನು ಒಂದಿಷ್ಟು ಬಡಿದು ಹಾಕಿ, ಮಂಜು ದೊಡ್ಡಮನಿ ಅಂತಹ ನಿಜ ಕ್ರಿಯಾಶೀಲ ಮನಸ್ಸುಗಳನ್ನು ಬೆಂಬಲಿಸಲಿಕ್ಕೆ ಮತ್ತು ಈ ಮೂಲಕ ಇಂತಹವರ ಸಂಖ್ಯೆ ಎಲ್ಲೆಡೆಯೂ ಹೆಚ್ಚಾಗಲಿ ಎನ್ನುವ ಕಾರಣಕ್ಕೆ ಇವರ ಅಭ್ಯಾಗತ - 2 ಕಿರುಚಿತ್ರವನ್ನು ಈ ಮುಂದಿನ ಲಿಂಕ್ ಕ್ಲಿಕ್ಕಿಸಿ ನೋಡಿ. 
https://www.youtube.com/watch?v=0VwZGm7TECg

-ಆರುಡೋ ಗಣೇಶ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆ ಕ್ಷಣದಲ್ಲಿ ಶರತ್‌ ಸಾವಿನೆದುರು ಅದೆಷ್ಟು ಅಸಹಾಯಕ!!

ಈಗ ಆರು ಪಾಸಾಗಿ ಏಳು...

ಒಂಟಿತನ ಎಂದರೆ ಜವಾಬ್ದಾರಿಯಿಂದ ಜಾರಿಕೊಳ್ಳುವುದಾ?!