ಈ ದೇಶದ ಜನರಿಗೆ ಧರಿಸಲು ಬಟ್ಟೆ ಇಲ್ಲದ ಕಷ್ಟದ ದಿನಗಳೂ ಇದ್ದವು...
‘ನಾವ್ ಶಾಲಿಗ್ ಹ್ವಾಪತ್ತಿಗ್ ಅಂಗಿ ಚಡ್ಡಿಯೇ ಸಸೂತ್ರ ಇರಲಿಲ್ಲ... ಈಗ ಹಿಜಬ್ ಅಂಬ್ರ್, ಶಾಲ್ ಅಂಬ್ರ್...! ಯಾಕ್ ನಾಚಿಕೆ ಆತಿಲ್ಲ ಮರ‍್ರೇ...! ಬರೀ ಹೇಸಿಗೆ ಅಲ್ದೇ...’
ಹಿಜಾಬ್ ಇಲ್ಲದೇ ನಾವು ಕಾಲೇಜಿಗೆ ಬರುವುದಿಲ್ಲ, ಅವರು ಹಿಜಾಬ್ ಹಾಕಿಕೊಂಡು ಬಂದರೆ ನಾವು ಕೇಸರಿ ಶಾಲು ಧರಿಸಿಯೇ ಕಾಲೇಜಿಗೆ ಬರುವುದು ಸೈ ಎನ್ನುವ ವಾದ ವಿವಾದ ದಿನದಿಂದ ಬಿಸಿಯೇರುತ್ತಿರುವಾಗಲೇ, ಫೇಸ್‌ಬುಕ್ಕಿನಲ್ಲಿ ಸ್ನೇಹಿತರೊಬ್ಬರು ಹಂಚಿಕೊಂಡ ಮೇಲಿನ ಈ ಸಾಲುಗಳು ನಮಗೆ ಗೊತ್ತಿದ್ದೂ ನಾವು ಮರೆತಿರುವ ನಮ್ಮದೇ ಬದುಕಿನ ಅದೆಷ್ಟೋ ವಾಸ್ತವ ಸಂಗತಿಗಳನ್ನು ರಪರಪನೆ ಕಣ್ಣಮುಂದೆ ಬಿಚ್ಚಿಟ್ಟಿತು. ಹೌದಲ್ಲವಾ, ಬರೀ ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ ನಾನೇ ಬದುಕಿದ ಬದುಕಿನ ಪುಟಗಳನ್ನು ತೆರೆದು ನೋಡಿದರೆ, ನನ್ನ ಸುತ್ತಮುತ್ತಲಿನವರು, ನನ್ನ ಶಾಲೆಯ ಸಹಪಾಠಿಗಳು, ಕೆಲವೊಮ್ಮೆ ನಾನು ಕೂಡಾ ಈ ಮೇಲಿನ ಸಾಲುಗಳಂತೆಯೇ ಬದುಕಿದ್ದು ನೆನಪಾಗುತ್ತದೆ. ಇನ್ನು ಮನೆಗೆ ಬಿದಿರಿನ ಬುಟ್ಟಿಯಲ್ಲಿ ಹಾವು ಹಿಡಿದುಕೊಂಡು ಭಿಕ್ಷೆ ಬೇಡಲು ಬರುತ್ತಿದ್ದ ಹಾವಾಡಿಗರ ಮಕ್ಕಳು, ತೋಟ ಗದ್ದೆಗಳಿಗೆ ಕೆಲಸ ಮಾಡಲು ಹೋಗುತ್ತಿದ್ದ ಕೂಲಿ ಕಾರ್ಮಿಕರ ಮಕ್ಕಳ ಮೈಮೇಲೆ ಹೆಚ್ಚಿನ ಬಾರಿ ಚಡ್ಡಿಯೊಂದೇ ಇರುತ್ತಿತ್ತು. ಅವರು ಅಂಗಿ ಧರಿಸುತ್ತಿದ್ದದ್ದು ಅಪರೂಪವೇ. ಧರಿಸಿದರೂ ಅದರಲ್ಲಿ ಅದೆಷ್ಟು ತೇಪೆಗಳಿರುತ್ತಿದ್ದವು. ಚಡ್ಡಿಯೋ ಕುಳಿತಿರುತ್ತಿದ್ದ ಜಾಗದಲ್ಲಿ ಸವೆದು ಅದಕ್ಕೂ ತೇಪೆಯ ಮೇಲೆ ತೇಪೆ. ಆಗೆಲ್ಲ ಯಾರೇ ಭಾರತ ಬಡದೇಶ ಎಂದರೂ ಹಿಂದೆಮುಂದೆ ನೋಡದೆ ಒಪ್ಪಿಕೊಳ್ಳಬೇಕಾದಂತಹ ಸ್ಥಿತಿಯಲ್ಲಿ ನಾನಿದ್ದೆ. ಬಹುಶಃ ನೀವು ಕೂಡಾ.
ಕಾಲ ಬದಲಾಗಿದೆ. ಮುಖ್ಯವಾಗಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ನಮ್ಮ ದೇಶದ ಕೆಲವರ ಹೆಸರು ಟಾಪ್ ಟೆನ್ ಒಳಗೇ ಕಾಣಿಸಿಕೊಳ್ಳುತ್ತಿದೆ. ರಾಜಧಾನಿಗಳೂ ಸೇರಿದಂತೆ ಜಿಲ್ಲಾ ಕೇಂದ್ರಗಳೂ ನಗರೀಕರಣದ ತೆಕ್ಕೆಯಲ್ಲಿ ಬೆಳೆಯುತ್ತಿರುವ ಪರಿ, ಅಲ್ಲಿನ ಮಾಲ್‌ಗಳ ವೈಭೋಗ, ಬೀದಿಗಳ ಸಿಂಗಾರ, ಕ್ವಿಂಟಾಲ್‌ಗಟ್ಟಲೆ ಸಾಮಾನುಗಳನ್ನು ಹೊರಲಾರದೆ ಹೊತ್ತು ಮಾಲ್ - ಸೂಪರ್ ಮಾರ್ಕೆಟ್ಟುಗಳಿಂದ ಹೊರ ಬರುತ್ತಿರುವ ಜನರು, ಅಮೇರಿಕ, ಇಂಗ್ಲೆಂಡಿನಂತಹ ದೇಶಗಳಿಗೆ ಮಾತ್ರವೇ ಸೀಮಿತವಾಗಿದ್ದ ಲಕ್ಷುರಿ ಕಾರುಗಳ ಮೆರವಣಿಗೆ, ಕಾರಿನಷ್ಟೇ ಬೆಲೆ ಬಾಳುವ ಸೈಕಲ್ಲುಗಳಲ್ಲಿ ಓಡಾಡುವ ಜನರು, ಅವರ ಸ್ಟೈಲುಗಳು, ಫಾಸ್ಟ್ ಫುಡ್ಡುಗಳು... ಈಗ ಭಾರತವನ್ನು ‘ಬಡ ದೇಶ’ ಎಂದು ಹೇಳುವ ಧೈರ್ಯವನ್ನು ಯಾರು ಮಾಡುತ್ತಾರೆ? ಒಂದೊಮ್ಮೆ ಆ ಧೈರ್ಯ ಮಾಡಿದರೂ ತಪರಾಕಿ ಕೊಟ್ಟು ‘ಎಲ್ಲಿ... ಏನ್ ಹೇಳ್ದೇ ಇನ್ನೊಂದ್ಸಾರಿ ಹೇಳು ನೋಡೋಣ’ ಎಂದು ಜಬರಿಸುವ ಆತ್ಮವಿಶ್ವಾಸ ಈಗ ನಮ್ಮದಾಗಿದೆ! ನಿಜ, ಆದರೆ ಈಗಲೂ ತಮ್ಮ ಹಟ್ಟಿಯ ಮುಂದೆ ಚೋಮನ ಮೊಮ್ಮಕ್ಕಳು ಅರೆಬೆತ್ತಲಾಗಿ ಕುಳಿತೇ ಬುಟ್ಟಿ ಹೆಣೆಯುತ್ತಿದ್ದಾರೆ... ಒಳಗೆ ಉಪ್ಪು ಹುಳಿ ಖಾರ ತಾಕದ ಸೊಸೈಟಿ ಅಕ್ಕಿಯ ಗಂಜಿ ಬೇಯುತ್ತಿದೆ!!
ನಾವು, ನಾವೇ ಎಳೆದುಕೊಂಡ ವೃತ್ತದೊಳಗೆ ಪರಮಸುಖಿಗಳು ಮತ್ತು ಆಗರ್ಭ ಶ್ರೀಮಂತರು. ಆದ್ದರಿಂದಲೇ ನಮಗೆ ನಾವೇ ನಾವು ಯಾರಿಗೂ ಕಮ್ಮಿಯಿಲ್ಲ, ನಮ್ಮನ್ನು ಯಾರೂ ಪ್ರಶ್ನಿಸುವವರಿಲ್ಲ ಎನ್ನುವ ಮನೋಭಾವದಲ್ಲೇ ಗಟ್ಟಿಯಾಗಲು ಪ್ರಯತ್ನಿಸುತ್ತಿದ್ದೇವೆ. ನಮ್ಮ ದೇಶದಲ್ಲಿ ಶ್ರೀಮಂತಿಕೆ ಬೆಳೆಯುತ್ತಿದೆ, ಅದರೊಂದಿಗೆ ನಗರಗಳೂ ಅಲಂಕಾರಗೊಳ್ಳುತ್ತಿವೆ ಎನ್ನುವುದು ನಿಜವೇ ಆದರೂ, ಅದರ ಪ್ರಮಾಣ ಎಷ್ಟು ಎಂದು ನಾವು ಯಾವತ್ತೂ ಯೋಚಿಸಲು ಹೋಗುವುದಿಲ್ಲ. ನಮ್ಮ ದೇಶ ಈಗ ಬಡ ಭಾರತವಲ್ಲ, ನಿಜ. ಹಾಗೆಂದು ಇಲ್ಲಿ ಎಲ್ಲರ ಬದುಕೂ ಸಿರಿವಂತಿಕೆಯ ಸುಖ ಸುಪ್ಪತ್ತಿಗೆಯಲ್ಲಿ ತೇಲುತ್ತಿದೆಯಾ? ಖಂಡಿತ ಇಲ್ಲ ಎನ್ನುವುದನ್ನೂ ನಾವು ತಿಳಿದಿದ್ದೇವೆ, ಆದರೂ ಕೆಲವೊಂದು ಸಂದರ್ಭಗಳಲ್ಲಿ ತಿಳಿಯದಂತೆ ನಟಿಸುವ ಪ್ರಯತ್ನ ನಮ್ಮದು. ಈ ಪ್ರಯತ್ನದ ಒಂದು ಭಾಗವಾಗಿಯೇ ಹಿಜಾಬ್ ಮತ್ತು ಕೇಸರಿ ಶಾಲಿನ ನಡುವೆ ತಿಕ್ಕಾಟ ಆರಂಭವಾಗಿ ಅದಕ್ಕೊಂದು ತಾರ್ಕಿಕ ಅಂತ್ಯ ಸಿಕ್ಕದೆ ಈಗ ನ್ಯಾಯಾಲಯದ ಬಾಗಿಲನ್ನೂ ಕೂಡಾ ತಟ್ಟುವಂತಾಗಿದೆ.
ನಮ್ಮ ಮನಸ್ಥಿತಿಯೇ ಹೀಗೆ. ಮೊದಲಿಗೆ ನಾವು ಬೆತ್ತಲಿದ್ದೆವು. ಆಗಲೂ ನಾವು ಸುಖಿಯಾಗಿದ್ದೆವು. ಕೊನೆಗೊಂದು ದಿನ ಮರ ಗಿಡಗಳ ಎಲೆಗಳನ್ನೇ ಬಟ್ಟೆಗಳಾಗಿ ಧರಿಸಲಾರಂಭಿಸಿದೆವು. ಆನಂತರ ಪ್ರಾಣಿಗಳ ಚರ್ಮವನ್ನು ಮೈ ಮುಚ್ಚಲು ಬಳಸಿದೆವು. ಕೊನೆಗೆ ನೂಲಿನ ಬಟ್ಟೆಗಳು ಮೈ ಮುಚ್ಚಿದವು. ಕೈಯಲ್ಲಿ ನೂಲುತ್ತಿದ್ದ ಬಟ್ಟೆಗಳ ಬದಲು ಯಂತ್ರಗಳು ನೇಯ್ದ ಬಟ್ಟೆಗಳಿಗೆ ಬದಲಾದೆವು. ಅದರಲ್ಲಿ ಕಲರ್ ಮತ್ತು ಕ್ವಾಲಿಟಿಗೆ ಆಸೆ ಬಿದ್ದೆವು. ಕೊನೆಗೆ ನಮ್ಮ ದೇಶದ ಬಟ್ಟೆಗಳಿಗಿಂತ ವಿದೇಶದ ಬಟ್ಟೆಗಳಿದ್ದರೆ ಚೆಂದ ಅನ್ನಿಸಲಾರಂಭಿಸಿತು. ಅದೂ ಸಾಕಾಗಲಿಲ್ಲ, ಅದರಲ್ಲಿ ವೆರೈಟಿ ಮತ್ತು ಸ್ಟೈಲುಗಳನ್ನು ಹುಡುಕಲಾರಂಭಿಸಿದೆವು. ಈ ನಡುವೆ ನಮ್ಮ ಧರ್ಮಕ್ಕೆ ಈ ರೀತಿಯ ಬಟ್ಟೆ, ನಿಮ್ಮ ಧರ್ಮಕ್ಕೆ ಈ ಕಲರ‍್ರಿನ ಬಟ್ಟೆ ಎಂದು ಬ್ರ್ಯಾಂಡ್ ಮಾಡಿಕೊಳ್ಳಲಾರಂಭಿಸಿದೆವು... ಇವೆಲ್ಲವನ್ನು ಯಾರು ಮಾಡಿದರು? ಯಾಕೆ ಮಾಡಿದರು? ಈ ಪ್ರಶ್ನೆಗಳಿಗೆ ಉತ್ತರ ಹುಡುಕದ ನಾವು ಆಗಲೇ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಬಿಟ್ಟಿದ್ದೆವು. ಅವರು ಮಾಡಿದರು, ಅದಕ್ಕೇ ನಾವು ಮಾಡಬೇಕು ಎಂದು ಕುರುಡಾಗಿಯೇ ಹೊರಟ ನಾವು, ಈ ಕುರುಡಿನಿಂದಾಗಿಯೇ ಈ ದೇಶದಲ್ಲಿ ನಮ್ಮಿಂದಾಚೆಗೆ ಇನ್ನೂ ಎಷ್ಟೋ ಜನರು ಸರಿಯಾದ ಬಟ್ಟೆಯಿಲ್ಲದೇ ಬದುಕುತ್ತಿದ್ದಾರೆ, ಇನ್ನು ಕೆಲವರು ಈಗಲೂ ಯಾರೋ ಧರಿಸಿ ಬಿಟ್ಟ ಬಟ್ಟೆಗಳಿಗಾಗಿಯೇ ಕಾಯುತ್ತಾ ಬರೀ ಮೈಯಲ್ಲಿ ಮಳೆ, ಚಳಿ, ಬಿಸಿಲಿನಲ್ಲಿ ಬಾಡಿ ಹೋಗುತ್ತಿದ್ದಾರೆ ಎನ್ನುವುದನ್ನೂ ಗಮನಿಸದೇ ಹೋದೆವು. ಆಗಲೇ ಹೇಳಿದಂತೆ, ನಾವು ನಾವೇ ಎಳೆದುಕೊಂಡ ವೃತ್ತದಲ್ಲಿಯೇ ನಾವು ಈಗಲೂ ತಿರುಗುತ್ತಲೇ ಇದ್ದೇವೆ.
ಆದ್ದರಿಂದಲೇ ಈಗ ಹಿಜಾಬ್ ಮತ್ತು ಕೇಸರಿ ಶಾಲುಗಳು ಕಿತ್ತಾಟಕ್ಕಿಳಿದಿವೆ. ಈ ಕಿತ್ತಾಟ ನಡೆಯುವ ಮೊದಲು ನಮ್ಮ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಕ್ಕಳಿಗೆ ಸರ್ಕಾರದಿಂದ ಕೊಡುವ ಮೊಟ್ಟೆಯ ವಿಚಾರಕ್ಕೆ ಇದೇ ರೀತಿಯ ವಾದ ವಿವಾದಗಳು ನಡೆದಿದ್ದವು. ಈ ವಿವಾದದಲ್ಲಿ ರಾಜ್ಯದ ಜನರು ಒಂದಷ್ಟು ದಿನಗಳ ಕಾಲ ತಮ್ಮ ಮೈ ಮನಸ್ಸುಗಳನ್ನೆಲ್ಲ ಪೂರ್ತಿಯಾಗಿ ತೊಡಗಿಸಿಕೊಂಡರು. ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಬಗ್ಗೆ ತಮ್ಮ ಜೀವಿತಾವಧಿಯಲ್ಲಿ ಒಂದು ಕ್ಷಣ ಕೂಡಾ ಯೋಚಿಸದವರೆಲ್ಲ ಮೊಟ್ಟೆ ವಿತರಣೆ ವಿಷಯದಲ್ಲಿ ಬಂದು ಮಾತನಾಡಲಾರಂಭಿಸಿದರು. ಕೊನೆಗೆ ಉತ್ತರ ಕರ್ನಾಟಕ ಭಾಗದ ಪುಟ್ಟ ವಯಸ್ಸಿನ ವಿದ್ಯಾರ್ಥಿನಿಯೊಬ್ಬಳು ಮಠಕ್ಕೆ ನುಗ್ಗಿಯೇ ಮೊಟ್ಟೆ ತಿನ್ನುತ್ತೇವೆ ಎಂದೆಲ್ಲ ಹೇಳಿಕೆ ಕೊಟ್ಟು, ಅದೊಂದು ರಂಪವಾಗಿ, ಕೊನೆಗೆ ಆ ಹುಡುಗಿ ತಾನು ಹಾಗೆ ಹೇಳಿದ್ದಲ್ಲ ಎಂದೆಲ್ಲ ಸ್ಪಷ್ಟೀಕರಣ ಕೊಟ್ಟು... ಸಧ್ಯ ಮೊಟ್ಟೆಯ ವಿಷಯ ತಣ್ಣಗಾಯಿತು ಎನ್ನುವಾಗ, ಬದುಕಿನ ಭದ್ರ ಬುನಾದಿಗೆ ಕಾರಣವಾಗಬೇಕಾದ ವಿದ್ಯೆ, ಕಲಿಕೆಯ ಬಗ್ಗೆ ಗಮನ ಕೊಡಬೇಕಿರುವ ವಿದ್ಯಾರ್ಥಿಗಳು, ಅದನ್ನು ಬಿಟ್ಟು ಹಿಜಾಬ್ ಮತ್ತು ಶಾಲುಗಳ ಹೆಸರಿನಲ್ಲಿ ತಮ್ಮ ಬದುಕಿನ ಅತ್ಯಮೂಲ್ಯ ಸಮಯ ಮತ್ತು ಬುದ್ಧಿಮತ್ತೆಯನ್ನು ಎತ್ತಿಡುತ್ತಿದ್ದಾರೆ. ಅಂದಹಾಗೇ, ಇದು ಅವರದ್ದೇ ಸ್ವಂತಬುದ್ಧಿಯ ಕೆಲಸವಾಗಿದ್ದರೆ ಒಂದಿಷ್ಟು ಸುಮ್ಮನಿರಬಹುದಿತ್ತೇನೋ, ಆದರೆ ಇದು ಹಾಗಲ್ಲ. ಮೊಟ್ಟೆ ವಿಷಯದಲ್ಲಿ ವಿದ್ಯಾರ್ಥಿನಿಯೊಬ್ಬಳು ಯಾರದ್ದೋ ಮಾತು ಕೇಳಿ ಏನೋ ಮಾತನಾಡಿ ಕೊನೆಗೆ ‘ನಾನವಳಲ್ಲ’ ಎಂದು ಆಡಿದ ಮಾತಿಗೆ ತೇಪೆ ಹಾಕುವ ಪ್ರಯತ್ನ ಮಾಡಿದಳಲ್ಲ, ಇವರೆಲ್ಲರೂ ಆಕೆಯ ಸರದಿಯಲ್ಲಿರುವಂತೆಯೇ ಕಾಣುತ್ತಿದ್ದಾರೆ.
ಹಾಗಿದ್ದರೆ ಈ ವಿವಾದಗಳೇಕೆ ಈ ಮಟ್ಟದಲ್ಲಿ ಸುದ್ದಿಯಾಗುತ್ತವೆ? ಉತ್ತರ ತುಂಬಾ ಸರಳ. ಇವೆಲ್ಲವೂ ನಮ್ಮನ್ನಾಳುವವರು ತಮ್ಮ ತಪ್ಪನ್ನು ಮುಚ್ಚಿಟ್ಟುಕೊಳ್ಳಲು, ಜನರು ತಮ್ಮ ತಪ್ಪುಗಳೆಡೆಗೆ ನೋಡದಂತಿರಲು, ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಹೂಡುತ್ತಿರುವ ನಾಟಕದ ಒಂದೊಂದು ದೃಶ್ಯಗಳಂತೆಯೇ ನನಗೆ ಕಾಣುತ್ತದೆ! ಪೊಲೀಸರ ಪಹರೆಯ ನಡುವೆಯೇ ಕಳ್ಳರು ಸುಲಭವಾಗಿ ತಮ್ಮ ಕೆಲಸಗಳನ್ನು ಮಾಡಬೇಕು ಎಂದರೆ ಏನು ಮಾಡಬೇಕು? ಪಹರೆಯವರ ಗಮನವನ್ನು ಬೇರೆಡೆಗೆ ತಿರುಗಿಸಬೇಕು. ಅದಕ್ಕಾಗಿ ಕಳ್ಳರ ಗುಂಪಿನಲ್ಲಿ ಒಂದಿಬ್ಬರು ರಾತ್ರಿ ರಸ್ತೆಯಲ್ಲಿ ಸುಮ್ಮನೆ ತಿರುಗಾಡಿ ಪೊಲೀಸರು ಅವರ ಬಳಿ ಬಂದು, ಅವರನ್ನು ವಿಚಾರಿಸುತ್ತಾ ನಿಲ್ಲುವಂತೆ ಮಾಡಿ, ಅದೇ ಸಮಯದಲ್ಲಿ ಆ ಗುಂಪಿನ ಇನ್ನಿತರರು ಯಾವ ಭಯವೂ ಇಲ್ಲದೇ ಕಳ್ಳತನ ಮಾಡಿ ತಮ್ಮ ಜಾಗವನ್ನು ಯಾವ ಭಯವೂ ಇಲ್ಲದೇ ಸೇರಿಕೊಂಡು ಬಿಡುತ್ತಾರೆ. ಈಗ ನಮ್ಮನ್ನಾಳುವ ಪ್ರಭುತ್ವವೂ ಕೂಡಾ ಒಂದರ ಹಿಂದೊಂದು ವಿವಾದದ ಮಣಿಯನ್ನು ಪೋಣಿಸಿ, ಫಳ್‌ಗುಡಿಸುತ್ತಾ ಕಳ್ಳರು ಮಾಡುವ ಕೆಲಸವನ್ನೇ ಮಾಡುತ್ತಿದೆ. ಜನರು ಒಂದಿಷ್ಟು ದಿನ ಮೊಟ್ಟೆಯ ಹಿಂದೆ ಬಿದ್ದು, ಇನ್ನೇನು ಎದ್ದೇ ಬಿಟ್ಟರು ಎನ್ನುವಾಗ ಹಿಜಾಬ್ ಮತ್ತು ಕೇಸರಿ ಶಾಲುಗಳನ್ನು ವೇದಿಕೆ ಹತ್ತಿಸಿಬಿಟ್ಟರು! ಈಗ ಸಧ್ಯಕ್ಕೆ ರಾಜ್ಯದ ಅಥವಾ ದೇಶದ ಜನರ ಗಮನವೆಲ್ಲ ಈ ವಿಷಯದತ್ತಲೇ ಕೇಂದ್ರೀಕೃತವಾಗಿರುವಾಗ, ಅಲ್ಲಿ ಕಳ್ಳರು ಲೂಟಿಯನ್ನೂ ಮಾಡುತ್ತಿರಬಹುದು ಅಥವಾ ಈಗಾಗಲೇ ಮಾಡಿರುವ ಲೂಟಿಯ ಬಗ್ಗೆ ಜನರು ಮಾತನಾಡದೆ ಶಾಲು ಮತ್ತು ಹಿಜಾಬ್‌ಗಳ ಬಗ್ಗೆಯೇ ಬಾಯಿ ಬಡಿದುಕೊಳ್ಳಲಿ ಎನ್ನುವ ತಂತ್ರವನ್ನೂ ಹೂಡಿರಬಹುದು.
ಇಲ್ಲದೇ ಹೋದರೆ ಮಕ್ಕಳಿಗೆ ಕೇವಲ ವಿದ್ಯೆ ಮತ್ತು ಬುದ್ಧಿಯನ್ನು ನೀಡಬೇಕಾದ ವಿದ್ಯಾಕೇಂದ್ರಗಳು ಈ ಎಲ್ಲಾ ವಿಷಯಗಳಿಗೆ ತೆರೆದುಕೊಳ್ಳುತ್ತಿದ್ದವೇ?! ಮಕ್ಕಳು ಓದಿನೊಂದಿಗೆ ಜಗತ್ತಿನ ಆಗುಹೋಗುಗಳಿಗೆ ತಮ್ಮನ್ನು ತೆರೆದುಕೊಳ್ಳಬೇಕು, ಮಕ್ಕಳು ಪುಸ್ತಕದ ಹುಳುಗಳಾಗಿಯೇ ಉಳಿಯಬಾರದು ಎನ್ನುವುದನ್ನು ಒಪ್ಪಿಕೊಳ್ಳೋಣ. ಆದರೆ ಅವರು ಯಾವ ವಿಷಯಗಳಿಗೆ ತಮ್ಮನ್ನು ತೆರೆದುಕೊಳ್ಳಬೇಕು ಎನ್ನುವುದಕ್ಕೂ ಒಂದು ಮಿತಿ ಇದ್ದರೆ ಬೇರೆಲ್ಲ ವಿಷಯಗಳೊಂದಿಗೆ ವಿದ್ಯೆಯೂ ಕೈ ಹಿಡಿಯುತ್ತದೆ. ಸಧ್ಯ ನಾವು ಒಳ್ಳೆಯ ವಿದ್ಯಾಭ್ಯಾಸದ ಬಗ್ಗೆ ಯೋಚಿಸಬೇಕಿದೆ. ಆಧುನಿಕತೆಯ ಬುಗ್ಗೆಯಲ್ಲಿ ಭರಭರ ಬೆಳೆಯುತ್ತಿರುವ ಜಗತ್ತಿನಲ್ಲಿ ನಮ್ಮ ಮಕ್ಕಳೂ ಮುನ್ನುಗ್ಗಿ ಗೆಲುವಿನ ನಗು ಬೀರಲು ಅವರಿಗೆ ಇನ್ನ್ಯಾವ ಬಗೆಯಲ್ಲಿ ಶಿಕ್ಷಣ ನೀಡಬೇಕು, ಅದಕ್ಕೆ ಒದಗಿಸಬೇಕಾದ ಮೂಲ ಸೌಲಭ್ಯಗಳೇನು, ಶಿಕ್ಷಣ ನೀಡುವವರು ಎಂತಹವರಿರಬೇಕು... ಇವೆಲ್ಲದರ ಬಗ್ಗೆ ನಮ್ಮ ಚರ್ಚೆ, ಸಂಶೋಧನೆ, ಅಧ್ಯಯನಗಳು ನಡೆಯಬೇಕಿದೆ. ಆದರೆ ನಾವೆಷ್ಟು ಆಳುವವರ ಆಟಕ್ಕೆ ಬೊಂಬೆಗಳಾಗಿಬಿಟ್ಟಿದ್ದೇವೆ ಎಂದರೆ ವಿದ್ಯಾಕೇಂದ್ರಗಳಲ್ಲಿ ಈ ಬಗ್ಗೆ ಚರ್ಚೆ ಆಗುವುದು ಬಿಟ್ಟು, ಹೋಟೆಲ್ಲುಗಳ ಮೆನು ಬಗ್ಗೆ, ಬಟ್ಟೆಯಂಗಡಿಯ ವೆರೈಟಿ ಬಟ್ಟೆ ಬಗ್ಗೆ ಚರ್ಚೆಗಳನ್ನೆತ್ತಿಕೊಂಡು ಅದನ್ನು ವಿದ್ಯಾಕೇಂದ್ರ ಎನ್ನುವುದನ್ನೂ ಮರೆಸುವ ಹುಚ್ಚುತನಕ್ಕೆ ಬಿದ್ದಿದ್ದೇವೆ.
ನಮ್ಮ ದೇಶದ ಬಹುತೇಕ ಸಂಗತಿಗಳ ದುರಂತವೇ ಇದು. ಆ ಸಂಗತಿ ನಿಜವಾಗಿ ಏನಾಗಬೇಕಿರುತ್ತದೆಯೋ ಅದಾಗದೇ ಅದು ಇನ್ನೇನೋ ಆಗಿ, ಕೊನೆಗೆಲ್ಲವೂ ಕೊರಚಾದ ಮೇಲೆ ನಾವು ನಾನಿಷ್ಟು ಸಮಯ ಯಾಕೆ ನನ್ನನ್ನೇ ಮರೆತುಬಿಟ್ಟಿದ್ದೆ ಎಂದು ಹಳಹಳಿಸುವುದು... ಇದನ್ನೇ ನಮ್ಮನ್ನಾಳುವವರು ಚೆನ್ನಾಗಿ ಅರಿತಿರುವುದು ಮತ್ತು ಅವರು ಇದೇ ಮನಸ್ಥಿತಿಯನ್ನಿಟ್ಟುಕೊಂಡು ದಿನದಿನಕ್ಕೂ ಹೊಸ ಆಟಗಳನ್ನು ಕಟ್ಟುವುದು! ಅಂದಹಾಗೇ ನನಗೆ ಹಿಜಾಬ್, ಕೇಸರಿ ಶಾಲು ಯಾವುದೂ ಮುಖ್ಯವಲ್ಲ. ಮಾನ ಮುಚ್ಚಲು ಸರಿಯಾದ ಬಟ್ಟೆ ಇದೆಯಾ ಮತ್ತು ನಮ್ಮ ಮಕ್ಕಳು ತಮ್ಮ ಭವಿತವ್ಯವನ್ನು ಗಟ್ಟಿಗೊಳಿಸಲು ಅಗತ್ಯವಾದ, ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಬಲ್ಲ ಶಿಕ್ಷಣವನ್ನು ಪಡೆಯುತ್ತಿದ್ದಾರಾ ಎನ್ನುವುದಷ್ಟೇ ಮುಖ್ಯ. ಅದೊಂದನ್ನು ಬಿಟ್ಟು ಇನ್ನೆಲ್ಲವನ್ನೂ ಯೋಚಿಸುತ್ತಿರುವ ಈ ಸಮಯದಲ್ಲೇ, ಅಲ್ಲಿ ಮತ್ತದೇ ಚೋಮನ ಮಕ್ಕಳು ಇನ್ನ್ಯಾರದ್ದೋ ಜಮೀನಿನಲ್ಲಿ ಸರಿಯಾದ ಕೂಲಿಯೂ ಸಿಕ್ಕದೇ ಬೆನ್ನು ಬಗ್ಗಿ ಹೋಗುವಷ್ಟು ದುಡಿಯುತ್ತಿದ್ದಾರೆ, ಇನ್ನ್ಯಾರೋ ಧರಿಸಿ ಹಳೆಯದಾಗಿ ತಮಗೆ ಸಿಗಬಹುದಾದ ಬಟ್ಟೆಗಳಿಗೆ ಕಣ್ಣರೆಪ್ಪೆ ಮುಚ್ಚದೇ ಕಾಯುತ್ತಿದ್ದಾರೆ. ಆದರೆ ಅಲ್ಲೊಬ್ಬ ಆಳುವವನು ಬಣ್ಣ ಬಣ್ಣದ ಬಟ್ಟೆ ತೊಟ್ಟು, ಕ್ಯಾಮರಾದ ಕ್ಲಿಕ್ಕುಗಳಿಗೆ ಖುಷಿ ಪಡುತ್ತಾ ಡಿಫರೆಂಟು ನೇಮುಗಳ ಹೊಸ ಹೊಸ ಯೋಜನೆಗಳನ್ನು ಘೋಷಿಸುತ್ತಲೇ ಇದ್ದಾನೆ.
ಇದೆಲ್ಲ ಇರಲಿ ಬಿಡಿ, ಹೊಸ ವಿಷಯ ಗೊತ್ತಾ?! ಸರ್ಕಾರ ಇಂತಿಂತಹ ಜಾತಿ-ಧರ್ಮದವರು ಇಂತಿಂತಹ ಬಣ್ಣದ ಬಟ್ಟೆಗಳನ್ನೇ ಧರಿಸಬೇಕು ಎನ್ನುವ ಹೊಸದೊಂದು ಸ್ಕೀಮನ್ನೂ, ಅದರ ಭಾಗವಾಗಿ ಉಚಿತವಾಗಿ ಆ ಬಣ್ಣದ ಬಟ್ಟೆಯನ್ನೂ ವಿತರಿಸುವ ಹೊಸ ಯೋಜನೆಯೊಂದನ್ನು ಗ್ರಾಮ ಪಂಚಾಯ್ತಿಗಳ ಮೂಲಕ ಜಾರಿಗೆ ತಂದಿದೆಯಂತೆ... ಫಲಾನುಭವಿಗಳ್ಯಾರು ಎಂದು ನೋಡಿದರೆ ಈಗ ಗ್ರಾಮ ಪಂಚಾಯ್ತಿ ಸದಸ್ಯರು ಮತ್ತು ಅವರ ಕುಟುಂಬದವರು, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಪಂಚಾಯ್ತಿಗಳಲ್ಲಿ ಕೆಲಸ ಮಾಡುವವರೆಲ್ಲ ಈಗ ದಿನಕ್ಕೊಂದು ಬಣ್ಣದ ಬಟ್ಟೆಯಲ್ಲಿ ಮಿಂಚುತ್ತಿದ್ದಾರಂತೆ!!
(’ಪಾರಿವಾಳ’ ಪಾಕ್ಷಿಕದಲ್ಲಿ ಪ್ರಕಟಗೊಂಡ ಲೇಖನ)
-ಆರುಡೋ ಗಣೇಶ, ಕೋಡೂರು
ಅದ್ಭುತ ಲೇಖನ ಸರ್.
ಪ್ರತ್ಯುತ್ತರಅಳಿಸಿಜನರ ಮೂರ್ಖತನಕ್ಕೊಂದು ಅಂತ್ಯ ಕಾಣಲು ಸೃಷ್ಟಿಯೇ ನಿರ್ಧರಿಸಬೇಕು.
*ಮಲ್ಲಿಕಾರ್ಜುನ ಢಂಗಿ
ಹೌದು
ಪ್ರತ್ಯುತ್ತರಅಳಿಸಿ