ಒಂದು ಜೀವದ ಬೆಲೆ ಎಷ್ಟು?!

‘ಪ್ರೀತಿಯ ಅಪ್ಪ ನನ್ನನ್ನು ಕ್ಷಮಿಸಿ. ನನಗೆ ಗೊತ್ತಿದೆ ನೀವು ನನ್ನ ಬಗ್ಗೆ ತುಂಬಾ ಕನಸು ಕಟ್ಟಿಕೊಂಡಿದ್ದೀರಿ. ಆದರೆ ನಾನು ಮಾಡದ ತಪ್ಪಿಗೆ ನನ್ನನ್ನು ತಪ್ಪಿತಸ್ಥನೆಂದು ನನ್ನ ಮೇಲೆ ಕೇಸ್ ದಾಖಲು ಮಾಡಿ ಎಫ್‌ಐಆರ್ ಹಾಕಿದ್ದಾರೆ. ಅಪ್ಪ ನಾನು ತಪ್ಪು ಮಾಡಿಲ್ಲ ಎಂದರೆ ನೀವು ನಂಬೋದಿಲ್ಲ ಎನ್ನುವುದು ನನಗೆ ಗೊತ್ತು. ಆದರೆ, ನಿಜವಾಗಿಯೂ ನಾನು ಹೊಡೆದಿಲ್ಲ. ಜೀವನದ ಮುಂದಿನ ಹಾದಿಯ ಬಗ್ಗೆ ಬಹಳ ಯೋಚಿಸುವ ನಾನು ಈಗ ಎಫ್‌ಐಆರ್ ಎಂಬ ದೊಡ್ಡ ಕಪ್ಪುಚುಕ್ಕೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅದಲ್ಲದೆ ನಿಮಗೆ ಇರುವ ಒಳ್ಳೆಯ ಅಭಿಪ್ರಾಯವನ್ನು ನಾನು ಹಾಳು ಮಾಡುತ್ತಿದ್ದೇನೆ ಎನ್ನುವ ಅನಿಸಿಕೆ ನನ್ನದು. ನಿಮ್ಮಂತ ತಂದೆ ಯಾವ ಮಕ್ಕಳಿಗೂ ಸಿಗಲ್ಲ. ನನ್ನ 21 ವರ್ಷದಲ್ಲಿ ನನಗೆ ಬೇಕೆಂದಿದ್ದು ಕೊಡಿಸಿದ್ದೀರಿ. ಕಷ್ಟಪಟ್ಟು ಸಾಕಿದ್ದೀರಿ. ನಿಮ್ಮ ಶ್ರಮಕ್ಕೆ ತಕ್ಕಂತೆ ನಾನು ಇಲ್ಲ ಎಂದು ಈ ಎಫ್‌ಐಆರ್ ಹಾಕಿದ ಮೇಲೆ ಗೊತ್ತಾಯ್ತು. ಅಪ್ಪ ನಾನು ಚೆನ್ನಾಗಿ ಓದುತ್ತಿದ್ದು, ಒಳ್ಳೆಯ ಕೆಲ್ಸಕ್ಕೆ ಸೇರುತ್ತಿದ್ದೆ. ನಿಮ್ಮನ್ನು ಚೆನ್ನಾಗಿ ನೋಡ್ಕೋತಿದ್ದೆ. ಆದರೆ, ಈ ಎಫ್‌ಐಆರ್ ಹಾಕಿದ ಮೇಲೆ ಯಾವ ಕೆಲಸ ಸಿಗಲ್ಲ. ಅಪ್ಪ ನನ್ನನ್ನು ಕ್ಷಮಿಸಿಬಿಡಿ, ಆದರೆ, ಅಪ್ಪ ನಾನು ತಪ್ಪು ಮಾಡಿ ಸಾಯುತ್ತಿಲ್ಲ. ನಾನು ತಪ್ಪು ಮಾಡಿದ್ದರೆ, ಇವತ್ತು ಈ ನಿರ್ಧಾರಕ್ಕೆ ಬರುತ್ತಿರಲಿಲ್ಲ. ನಾನು ಮಾಡದ ತಪ್ಪಿಗೆ ನನ್ನನ್ನು ಹೊಣೆ ಮಾಡಿದ್ದಾರೆ. ಆದ್ದರಿಂದ ನನಗೆ ಮುಖ ತೋರಿ ಸಲು ಆಗುತ್ತಿಲ್ಲ. ಅಪ್ಪ ನನ್ನನ್ನು ಕ್ಷಮಿಸು ನನಗಾಗಿ ಕಷ್ಟಪಟ್ಟಿದ್ದು ನೀನು, ನಿನಗಾಗಿ ಕ್ಷಮೆ ಕೇಳುತ್ತಿದ್ದೇನೆ’.

ಸರಿಯಾಗಿ ಎರಡು ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಶೃಂಗೇರಿ ಸಮೀಪದ ಅಭಿಷೇಕ್ ಎನ್ನುವ 21 ವರ್ಷದ ವಿದ್ಯಾರ್ಥಿ ಬರೆದಿಟ್ಟ ಈ ಪತ್ರ ನನ್ನನ್ನು ಅವತ್ತಿನಿಂದ ಇವತ್ತಿನ ಈ ಕ್ಷಣದವರೆಗೂ ಕಾಡುತ್ತಲೇ ಇದೆ.

ಈತನನ್ನು ತಮ್ಮ ಉದ್ದೇಶ ಈಡೇರಿಸಿಕೊಳ್ಳಲು ಬಳಸಿಕೊಂಡವರು, ಈತನ ಸಾವಿಗೆ ಪರೋಕ್ಷವಾಗಿ ಕಾರಣರಾದವರು ಮತ್ತು ಒಟ್ಟಾರೆಯಾಗಿ ಇದೆಲ್ಲದಕ್ಕೂ ಕಾರಣವಾದ ಸಂಗತಿಗಳೆಲ್ಲವೂ ಎಲ್ಲರ ಬದುಕಿನ ಮರೆವಿನ ಮೂಟೆಯಲ್ಲಿ ಕರಗಿಯೇ ಹೋಗಿರಬಹುದು. ಆದರೆ ತಮ್ಮ ಬದುಕಿಗೆ ಆಸರೆಯಾಗುತ್ತಾನೆಂದೋ, ಈ ಸಮಾಜದಲ್ಲಿ ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿ ಬದುಕು ಸಾಗಿಸುತ್ತಾನೆಂದೋ ಬದುಕಿನೆಲ್ಲವನ್ನೂ ಬಸಿದು ಕನಸು ಕಂಡ ಅಭಿಷೇಕ್‌ನ ಮನೆಯವರಿಗೆ ಹಾಗೂ ಇಂತಹವರ ಬದುಕು ಮತ್ತು ಹೀಗೆ ಬರೆದು ಬದುಕಿಗೆ ಕೊನೆಯ ಮೊಳೆಯಾಗಿಸಿಕೊಳ್ಳಬಹುದಾದ ಪತ್ರಗಳೊಂದಿಗೆ ನಮ್ಮ ಬದುಕಿನ ಕ್ಷಣಗಳನ್ನೂ ತಳುಕು ಹಾಕಿಕೊಳ್ಳುವಂತಹ ನನ್ನಂತಹವರಿಗೆ ಮಾತ್ರ ಅಭಿಷೇಕ್ ಸದಾ ನೆನಪಿನಲ್ಲುಳಿದುಬಿಡುತ್ತಾನೆ.

ಇಷ್ಟು ಮಾತ್ರವೇ ನೆನಪಿನಲ್ಲುಳಿಯಬಲ್ಲ ಈ ಅಭಿಷೇಕ್‌ನ ಸಾವು ಈ ನೆನಪಿಗಷ್ಟೇ ಸೀಮಿತವಾ?!
ಮೊನ್ನೆ ಮಂಗಳೂರಿನಲ್ಲಿ ಪೌರತ್ವ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಸಿಡಿಸಿದ ಗುಂಡಿಗೆ ಬಲಿಯಾದ ನೌಶೀನ್ ಮತ್ತು ಜಲೀಲ್‌ರ ಬದುಕು ಮತ್ತು ಈ ಇಬ್ಬರ ಬದುಕಿನ ಬಗ್ಗೆ ಕನಸು ಕಟ್ಟಿಕೊಂಡಿದ್ದ ಅವರ ಪ್ರೀತಿಯವರನ್ನೆಲ್ಲ ನೆನಪು ಮಾಡಿಕೊಂಡಾಗಲೆಲ್ಲ ಮತ್ತೆ ಇದೇ ಪ್ರಶ್ನೆ...

ನಾವ್ಯಾರೂ ಶಾಶ್ವತವಲ್ಲ. ಎಲ್ಲರ ಬದುಕೂ ಒಂದು ದಿನ ಮುಗಿದು ಹೋಗಲೇಬೇಕು; ಮುಗಿದು ಹೋಗುತ್ತದೆ ಕೂಡಾ. ಅದ್ಯಾವ ಕ್ಷಣವೋ? ಅದಕ್ಕೆ ಯಾರ ಬಳಿಯೂ ಉತ್ತರವಿಲ್ಲ ಎನ್ನುವುದನ್ನು ಒಪ್ಪಿಕೊಳ್ಳುತ್ತಲೇ ಹೀಗೆ ತಮ್ಮದಲ್ಲದ ತಪ್ಪಿಗೆ ಜೀವವನ್ನು ಕಳೆದುಕೊಂಡು ಬಿಡುವ ಜೀವಗಳು ಇಂತಹ ಕಾರಣಕ್ಕೆ ಜೀವವನ್ನು ಕಳೆದುಕೊಳ್ಳಬೇಕಿತ್ತಾ ಅನ್ನಿಸಿಬಿಡುತ್ತದೆ. ನಿಜ, ಇವರ ಸಾವಿನಿಂದ ಇವರು ಸಾಧಿಸಿದ್ದಾದರೂ ಏನು? ಅಪಘಾತವಾಗುತ್ತದೆ, ಕಾಯಿಲೆಯಾಗುತ್ತದೆ... ಹೀಗೆ ಸಾವು ಒಂದು ಕಾರಣದೊಂದಿಗೆ ಬಂದು ನಿಲ್ಲುತ್ತದೆ. ಆದರೆ ಮೇಲೆ ಹೇಳಿದ ಅಭಿಷೇಕ್, ಜಲೀಲ್, ನೌಶೀನ್‌ರಂತಹವರನ್ನು ನೋಡಿ, ಅವರು ತಮ್ಮದಲ್ಲದ ತಪ್ಪಿಗೇ ಸುಮ್ಮನೆ ಬಲಿಯಾಗಿಬಿಡುತ್ತಾರೆ. ಒಂದು ರೀತಿಯಲ್ಲಿ ತಾನು ಈಗ ಬಲಿಪೀಠದಲ್ಲಿ ಕೊನೆಯಾಗುತ್ತೇನೆ ಎನ್ನುವ ಯಾವ ಅರಿವೂ ಇಲ್ಲದ ಕುರಿಯಂತೆ...

ಸಾವೆನ್ನುವುದು ಸಾವೇ. ಅದು ಸಮಾಜಕ್ಕೆ, ಸಿದ್ಧಾಂತ-ಸ್ವಾತಂತ್ರ್ಯ ಇತ್ಯಾದಿಗಳಿಗೆ ಎಷ್ಟು ಕೆ.ಜಿ ಲೆಕ್ಕದ ನಷ್ಟವನ್ನು ಉಂಟು ಮಾಡುತ್ತದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಸಾವಿನೊಂದಿಗೆ ತಣ್ಣಗೆ ಹೊರಟು ಬಿಡುವ ಇಂತಹ ಅಮಾಯಕ ಜೀವಗಳನ್ನು ನೆಚ್ಚಿಕೊಂಡ ಕುಟುಂಬದವರ, ಕುಟುಂಬದಾಚೆಗಿನ ನಿಜ ಪ್ರೀತಿಯವರ ಬದುಕಿನಲ್ಲಿ ಉಂಟು ಮಾಡುವ ಖಾಲಿತನ ಮತ್ತು ಸಂಕಟವಿದೆಯಲ್ಲ ಅದಕ್ಕೊಂದು ಕೊನೆ ಎನ್ನುವುದೇ ಇರುವುದಿಲ್ಲ. ಅದನ್ನು ಈ ಜಗತ್ತಿನ ಅದ್ಯಾರೂ ತಕ್ಕಡಿಯಲ್ಲಿ ತೂಕ ಹಾಕಿ ಇಷ್ಟೇ ಕೆ.ಜಿ ಎಂದು ಅಳೆಯಲಿಕ್ಕೂ ಸಾಧ್ಯವಿಲ್ಲ.

ಮೊನ್ನೆ ಮಂಗಳೂರಿನಲ್ಲಿ ನಡೆದ ಪೌರತ್ವ ವಿರೋಧಿ ಪ್ರತಿಭಟನೆಯಲ್ಲಿ ನೌಶೀನ್ ಮತ್ತು ಜಲೀಲ್ ನಿಜವಾಗಿಯೂ ಪಾಲ್ಗೊಂಡಿದ್ದರಾ ಎನ್ನುವ ಪ್ರಶ್ನೆಗೆ ಯಾರು ಎಲ್ಲಿಂದ ಉತ್ತರ ಹುಡುಕುವುದು?! ಅವರ ಬಳಿಯೇ ಕೇಳೋಣವೆಂದರೆ ಅವರಿಬ್ಬರೂ ಇಲ್ಲ. ಜಲೀಲ್ ಅವರ ಮನೆಯವರು ‘ಅವತ್ತು ನಡೆಯುತ್ತಿದ್ದ ಗಲಾಟೆಯನ್ನು ಕಂಡು ಮಕ್ಕಳನ್ನು ಮನೆಗೆ ಕಳಿಸಿ ಅವರು ಹೊರಗೆ ಬರುತ್ತಿದ್ದರು. ಅಷ್ಟರಲ್ಲಿ ಪೊಲೀಸರ ಗುಂಡು ತಾಕಿ...’ ಎಂದು ಹೇಳಿದರೆ, ನೌಶೀನ್ ಮನೆಯವರು, ‘ಬಂದರಿನಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ನೌಶೀನ್‌ಗೆ ಅವನ ಅಂಗಡಿಯ ಮಾಲೀಕರು ಬೇಗ ಮನೆಗೆ ತೆರಳುವಂತೆ ಸೂಚಿಸಿದ್ದರು. ಅದರಿಂದಾಗಿ ಅವನು ಮನೆ ಕಡೆ ಬೇಗ ಹೊರಟಿದ್ದ’ ಎಂದು ಹೇಳುತ್ತಿದ್ದಾರೆ. ಇವರಿಬ್ಬರ ಮನೆಯವರಿಗೂ ಈ ಎರಡು ಜೀವಗಳು ಎಲ್ಲಾ ರೀತಿಯಲ್ಲೂ ‘ಆಧಾರ’ವಾಗಿದ್ದವು. ಅಂತಹ ಆಧಾರ ಈಗ ಕುಸಿದು ಬಿದ್ದಿದೆ. ಯಾವ ಪೌರತ್ವ ಕಾಯಿದೆ? ಯಾರ ವಿರೋಧ? ಕೊನೆಗೇನು ಸಾಧಿಸಿದರು? ಎನ್ನುವುದೆಲ್ಲದರ ನಡುವೆ ಏನೂ ಅಲ್ಲದೇ ತಮ್ಮ ಪಾಡಿಗೆ ತಾವು ಬದುಕು ಕಟ್ಟಿಕೊಳ್ಳುತ್ತಿದ್ದ, ತಮ್ಮ ಬದುಕಿನ ಸಣ್ಣ ಸಣ್ಣ ಸಂತಸಗಳಲ್ಲೇ ಜಗದಗಲ ಸಂಭ್ರಮಿಸುತ್ತಿದ್ದ ಎರಡು ಜೀವಗಳನ್ನು ವಿನಾಕಾರಣ ಬಲಿ ಹಾಕಿದರಲ್ಲ, ಹಾಗಿದ್ದರೆ ಈಗ, ನೀವು ಹೇಳುವ ಈ ಕಾಯ್ದೆ, ತತ್ವ-ಸಿದ್ಧಾಂತ ಇತ್ಯಾದಿಗಳನ್ನೆಲ್ಲ ತಂದು ಸುರುವಿ ಈ ಎರಡು ಕುಟುಂಬಗಳು ಈಗ ಕಳೆದುಕೊಂಡಿರುವ ಸಣ್ಣದೊಂದು ಖುಷಿಯನ್ನು ಮರಳಿಸಿ ನೋಡೋಣ.

ಅಭಿಷೇಕ್ ಎನ್ನುವ ಅಮಾಯಕ ಹುಡುಗನನ್ನೂ ಇಂತಹದ್ದೇ ವಿವಾದ ಬಲಿ ತೆಗೆದುಕೊಂಡಿತ್ತು. ಆತ ಎಬಿವಿಪಿಯವನಂತೆ, ತಾನು ಓದುತ್ತಿದ್ದ ಕಾಲೇಜಿಗೆ ಹಿಂದೂ ಧರ್ಮದ ಪರವಾಗಿರುವವರನ್ನು ಆಹ್ವಾನಿಸಿದ್ದನಂತೆ, ಇದನ್ನು ಇನ್ನೊಂದು ಪಂಥದವರು ವಿರೋಧಿಸಿ ಹೊಡೆದಾಟ ನಡೆಯಿತಂತೆ, ಕೊನೆಗೆ ಏನೂ ಅಲ್ಲದ ಅಭಿಷೇಕ್‌ನ ಮೇಲೆ ಪೊಲೀಸರು ಎಫ್‌ಐಆರ್ ಹಾಕಿ... ಸಿಕ್ಕಬಾರದ ಸುಳಿಗೆ ಸಿಕ್ಕು ತನ್ನ ಜೀವವನ್ನು ಕಳೆದುಕೊಂಡ ಅಭಿಷೇಕ್‌ನ ಸಾವು ಅದೆಂತಹ ಕೊನೆ ಇಲ್ಲದ ತೂತನ್ನು ಬದುಕಿಗೆ ಕೊರೆದು ಹೋಗಿದೆ ಎನ್ನುವುದನ್ನು ಅವನ ಕುಟುಂಬದ ಅವನಷ್ಟೇ ಅಮಾಯಕ ಜೀವಗಳಿಗೆ ಮಾತ್ರವೇ ಗೊತ್ತು. ನಾವೆಷ್ಟೇ ಸಾಂತ್ವನ ಹೇಳುತ್ತೇವೆ, ಜೊತೆಗಿದ್ದೇವೆ ಎಂದರೂ ಅದು ಎಷ್ಟು ದೂರ? ಎಷ್ಟು ಸಮಯ? ನಿಮ್ಮ ಮಗನ ಸ್ಥಾನವನ್ನು ನಾವು ತುಂಬುತ್ತೇವೆ, ಅವನು ತೆಗೆದುಕೊಳ್ಳಬಹುದಾದ ಎಲ್ಲಾ ಜವಾಬ್ದಾರಿಯನ್ನು ನಿಮ್ಮ ಬದುಕಿನಲ್ಲಿ ತೆಗೆದುಕೊಂಡು ಮಗನಿಲ್ಲದ ಕೊರತೆಯನ್ನು ನಾವು ನೀಗುತ್ತೇವೆಂದು ಯಾವ ಪಕ್ಷ, ತತ್ವ-ಸಿದ್ಧಾಂತ, ಇವುಗಳೆಲ್ಲದರ ಹಿಂದಿರುವ ಮುಖಂಡರಲ್ಲಿ ಯಾರಾದರೂ ಅಭಿಷೇಕ್‌ನಂತಹ ಮಗ-ಮಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಹೇಳಿದ್ದಾರಾ?

ಹೀಗೆ ಸತ್ತವರ ಕುಟುಂಬಗಳಿಗೆ ಐದು ಹತ್ತು ಲಕ್ಷ ಪರಿಹಾರವೇನೋ ಸಿಕ್ಕಿಬಿಡುತ್ತದೆ. ಈ ರೀತಿ ಬಲಿಯಾಗುವ ಬಹುತೇಕ ಕುಡಿಗಳು ಬಡ ಹಾಗೂ ಮಧ್ಯಮ ವರ್ಗದಿಂದಲೇ ಬಂದಿರುತ್ತಾರಾದ್ದರಿಂದ ಸಿಕ್ಕುವ ಪರಿಹಾರದ ಮೊತ್ತ ನೋಡುವವರ ಕಣ್ಣಿಗೆ ದೊಡ್ಡದಾಗಿ, ಒಂದೇ ಏಟಿಗೆ ಭಯಂಕರ ದುಡ್ಡೇ ಸಿಕ್ಕಿತು ಎನ್ನುವಂತೆ ಮಾಡಬಹುದಾದರೂ, ತಮ್ಮ ಬದುಕಿಗೆ ಊಹಿಸಲಾಗದ ಪ್ರೀತಿ, ಭರವಸೆ, ನಂಬಿಕೆ, ಭದ್ರತೆಯನ್ನೆಲ್ಲ ತುಂಬಬಹುದಾಗಿದ್ದ ಪ್ರೀತಿಯ ಜೀವವೊಂದಕ್ಕೆ ಅದು ಸಮವಾಗಲು ಸಾಧ್ಯವಾ ಎನ್ನುವ ಪ್ರಶ್ನೆ ಕೊನೆಯವರೆಗೂ ಅವರ ಕುಟುಂಬದವರನ್ನು ಕಾಡುತ್ತಿರುತ್ತದಲ್ಲ, ಅದಕ್ಕೆ ಎಲ್ಲಿಂದ ಉತ್ತರ ತರುವುದು? ಹಣವೊಂದೇ ನಮ್ಮ ಬದುಕಿಗೆ ಎಲ್ಲವನ್ನೂ ನೀಡಬಹುದಾಗಿದ್ದರೆ ಇನ್ನೂ ಬದುಕಿನ ಸಂಬಂಧಗಳೇಕೆ ಮಾರಾಟಕ್ಕೆ ಲಭ್ಯವಾಗುತ್ತಿಲ್ಲ ಎಂದು ಒಮ್ಮೆ ಕೇಳಿಕೊಂಡು ನೋಡಿ, ಆಗ ಹೀಗೆ ತಮ್ಮದಲ್ಲದ ತಪ್ಪಿಗೆ ಬಲಿಯಾಗುವ ಇಂತಹ ಜೀವಗಳನ್ನು ಕಳೆದುಕೊಂಡ ಕುಟುಂಬಗಳ ಕರುಳ ಸಂಕಟ ಎಂತಹದ್ದು ಎನ್ನುವುದು ಒಂದಿಷ್ಟಾದರೂ ಅರ್ಥವಾಗುತ್ತದೆ.

ಈಗ ಪೌರತ್ವ ವಿರೋಧಿ ಪ್ರತಿಭಟನೆಯ ವಿಷಯವನ್ನೇ ನೋಡಿ. ದೇಶದ ಬಹುತೇಕ ಕಡೆ ಇದಕ್ಕೆ ಸಂಬಂಧಿಸಿದ ಪ್ರತಿಭಟನೆ ನಡೆಯುತ್ತಿದೆ. ನಮ್ಮ ರಾಜ್ಯದಲ್ಲಿ ಮಂಗಳೂರಿನಲ್ಲಿ ಒಂದಿಷ್ಟು ಗಂಭೀರ ಸ್ವರೂಪವನ್ನು ಪಡೆದುಕೊಂಡು ಆಗಬಾರದ್ದು ಆಗಿ ಹೋಯಿತು. ಈ ಪ್ರತಿಭಟನೆಯಿಂದ ಯಾರಿಗೆ ಏನು ಸಿಕ್ಕಿತು? ಎನ್ನುವ ಪ್ರಶ್ನೆಗೆ ನಮಗೆಲ್ಲಿಯೂ ನೇರವಾಗಿ ಉತ್ತರ ಸಿಕ್ಕುವುದಿಲ್ಲ. ಯಾಕೆಂದರೆ ಈ ಗಲಭೆ, ಆ ಗಲಭೆಯನ್ನು ನಿಯಂತ್ರಿಸುವ ನೆಪದಲ್ಲಿ ಪೊಲೀಸರ ಬಂದೂಕಿನಿಂದ ಸಿಡಿದ ಗುಂಡುಗಳು, ಆನಂತರ ರಾಜಕೀಯ ಮುಖಂಡರ ನಡುವೆ ಮತ್ತು ಇವರ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ನಡೆಸಿದ ಕೆಸರೆರಚಾಟ ಇತ್ಯಾದಿಗಳೆಲ್ಲವೂ ಒಂದು ಹಂತಕ್ಕೆ ಬಂದು ಒಂದು ನಿರ್ವಾತ ಏರ್ಪಡುತ್ತದೆ. ಮತ್ತು ಅದನ್ನು ಇನ್ನೊಂದ್ಯಾವುದೋ ಸಂಗತಿ ನಿಧಾನವಾಗಿ ಆವರಿಸಿಕೊಳ್ಳುತ್ತದೆ. ಹೀಗೆ ಆವರಿಸಿಕೊಳ್ಳುವ ಮೊದಲೇ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರು ಪೌರತ್ವ ಕಾಯ್ದೆಯನ್ನು ಜಾರಿ ಮಾಡುವ ಪ್ರಸ್ತಾಪವೇ ಕೇಂದ್ರದ ಮುಂದಿಲ್ಲ ಎಂದು ಹೇಳುವ ಮೂಲಕ ಸಡನ್ ಯು ಟರ್ನ್ ತೆಗೆದುಕೊಂಡಿದ್ದಾರೆ.

ಅಲ್ಲಿಗೆ ಇಂತಹ ವಿಷಯಕ್ಕೆ ನಡೆದ ಪ್ರತಿಭಟನೆಯ ಭಾಗವಾಗಿಯೋ ಅಥವಾ ಭಾಗವಾಗದೆಯೋ ಎರಡು ಜೀವಗಳು ಬಲಿಯಾದವಲ್ಲ, ಆ ಜೀವಗಳ ಬೆಲೆಯೇನು? ಅವರು ಬದುಕಿ ಏನು ಸಾಧಿಸುತ್ತಿದ್ದರೋ, ಈ ಸಮಾಜಕ್ಕೆ ಏನು ಕೊಡುಗೆ ಕೊಡುತ್ತಿದ್ದರೋ ಎನ್ನುವುದನ್ನೆಲ್ಲ ಬದಿಗಿಟ್ಟು ನಮ್ಮ ನಿಮ್ಮ ಹಾಗೆಯೇ ತಮ್ಮದೇ ಆದ ಕುಟುಂಬ, ಸ್ನೇಹಿತರು, ಪ್ರೀತಿ, ಆತ್ಮೀಯತೆ, ದುಡಿಮೆ, ಉಳಿತಾಯ, ಸ್ವಂತ ಮನೆಯ ಕನಸು, ಬೈಕು-ಕಾರು ಕೊಳ್ಳುವ ಆಸೆಗಳೊಂದಿಗೆ ತಮ್ಮ ಪಾಡಿಗೆ ತಾವು ಬದುಕುತ್ತಿದ್ದವರು ಕಣ್ಣು ಮುಚ್ಚಿ ತೆರೆಯುವುದರೊಳಗಾಗಿ ಕೊನೆಯಾಗಿ ಹೋದರಲ್ಲ... ಅವರು ಮಾಡಿದ ತಪ್ಪಾದರೂ ಏನು? ಕಾರಣವೇ ಇಲ್ಲದೇ, ಯಾರದ್ದೋ ಬೆಂಕಿಯಲ್ಲಿ ಇನ್ನ್ಯಾರೋ ಬೇಳೆ ಬೇಯಿಸಿಕೊಳ್ಳಲು ಹೀಗೆ ಅಮಾಯಕ ಜೀವಗಳು ಎಷ್ಟು ಸುಲಭವಾಗಿ ಬಲಿಯಾಗಿ ಹೋಗುತ್ತವೆಯಲ್ಲ, ಅದು ದೇಶ-ಸಮಾಜಕ್ಕೆ ತುಂಬಲಾರದ ನಷ್ಟವಾಗದೇ ಹೋದರೂ ಅವರವರ ಕುಟುಂಬಗಳ ಪಾಲಿಗೆ ಏನು ಕೊಟ್ಟು ತೆಗೆದುಕೊಂಡರೂ ತುಂಬಲಾರದ ನಷ್ಟವಾಗಿ, ಬದುಕಿನುದ್ದಕ್ಕೂ ಕಣ್ಣೀರಿನಲ್ಲೇ ಸುಡುವ ಸಂಕಟವಾಗಿ ಉಳಿದುಬಿಡುತ್ತದೆ.

‘ನಮ್ಮ ಮನೆಯವರು ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಜೀವ ತೆತ್ತರು’, ‘ದೇಶದ ಗಡಿ ಕಾಯುವ ಸೈನಿಕನಾಗಿ ಪ್ರಾಣವನ್ನು ಬಲಿಕೊಟ್ಟರು’, ‘ದೇಶಕ್ಕೆ ಬಂದೊದಗಿದ ನೆರೆ, ಬರದಂತಹ ಸಂಕಟವನ್ನು ದೂರ ಮಾಡುವ ಪ್ರಯತ್ನದಲ್ಲಿ ಬಲಿಯಾದರು’ ಎಂದು ಕುಟುಂಬದವರು ಕಣ್ಣೀರಿನೊಂದಿಗೆ ಹೇಳುವುದು ಬೇರೆ. ಆದರೆ ಇಂತಹ ವಿಷಯಗಳಲ್ಲಿ ಎಷ್ಟೋ ಬಾರಿ ತಮಗೂ ಗೊತ್ತಿಲ್ಲದೇ, ಯಾರದ್ದೋ ಸಂಚಿಗೆ ಬಲಿಯಾಗುವ ಇಂತಹ ಜೀವಗಳ ಕುಟುಂಬದವರು ತಮ್ಮ ಪ್ರೀತಿಯವರನ್ನು ಕಳೆದುಕೊಂಡಿದ್ದಕ್ಕೆ ಅವರಿಗೇನು ಉಳಿದಿರುತ್ತದೆ? ಎಷ್ಟೋ ಬಾರಿ ಇವರು ಬಲಿಯಾಗಿ ಹೋಗಿರುತ್ತಾರಲ್ಲ ಆ ಹೋರಾಟ, ಆ ಹೋರಾಟದ ಹಿಂದಿದ್ದ ನಾಯಕರು, ಆ ತತ್ವ-ಸಿದ್ಧಾಂತಗಳೆನ್ನುವ ಬೂಸಿಯೇ ಬೂದಿಯಾಗಿ ಹೋಗಿರುತ್ತದೆ. ಆದರೆ ಇದಕ್ಕಾಗಿ ತಮ್ಮವರನ್ನು ಕಳೆದುಕೊಂಡ ಪ್ರೀತಿಯ ಕುಟುಂಬಗಳ ಆರ್ತನಾದ ಮಾತ್ರ ನಮಗ್ಯಾರಿಗೂ ಕೇಳಿಸದಂತೆ, ಒಂದೊಮ್ಮೆ ಕೇಳಿಸಿದರೂ ನಮ್ಮ ಬಿಡುವಿಲ್ಲದ ಬದುಕಿನ ನಡುವೆ ಅದು ನಮ್ಮ ಗಮನಕ್ಕೆ ಬಾರದಂತೆ ಮುಂದುವರಿದೇ ಇರುತ್ತದೆ!

ನಾವೆಲ್ಲರೂ ಬದುಕುವುದು ನಮ್ಮ ಬದುಕು ಮತ್ತು ಅದರಲ್ಲಿರುವ ಪ್ರೀತಿಗಾಗಿಯೇ. ಯಾಕೆಂದರೆ ಅದ್ಯಾವ ಜಾತಿ, ಧರ್ಮ, ಪಂಥ, ಪಂಗಡ ಏನೇ ಇರಲಿ ಇವೆಲ್ಲದರಾಚೆಗೆ ಕೊನೆಗೆ ನಾವೆಲ್ಲರೂ ಮನುಷ್ಯರು ಮತ್ತು ಮನುಷ್ಯರಷ್ಟೇ. ನಮ್ಮ ಬದುಕಿಗೆ ಅಗತ್ಯವಾಗಿ ಬೇಕಿರುವುದು ಪ್ರೀತಿ ಮತ್ತು ನಮ್ಮ ಪ್ರೀತಿಯವರು ಮಾತ್ರ. ಬದುಕಿನ ಸಾಲ, ಸಂಕಟ, ನಷ್ಟ, ಕಷ್ಟಗಳೆಲ್ಲ ಏನೇ ಇರಲಿ, ಇವೆಲ್ಲವನ್ನೂ ನುಂಗಿಕೊಂಡು ಬದುಕಿನ ಖುಷಿಯನ್ನು ಉಬುಕಿಸಿಕೊಳ್ಳುವ ಶಕ್ತಿಯನ್ನು ನಮಗೆ ನೀಡುವುದು ನಮ್ಮ ಪ್ರೀತಿಯವರು ಮತ್ತು ಅವರಲ್ಲಿರುವ ಪ್ರೀತಿ. ಅಂತಹ ಪ್ರೀತಿಯೇ ಇಂತಹ ತಲೆಬುಡವಿಲ್ಲದ ಹೋರಾಟಗಳಿಗೋ, ತತ್ವ ಸಿದ್ಧಾಂತಗಳಿಗೋ ಬಲಿಯಾಗಿ ಹೋದರೆ...? ಆ ಸಂಕಟ ನಮ್ಮನ್ನೂ ಸೇರಿದಂತೆ ಭೂಮಿಯ ಮೇಲಿರುವ ಯಾವ ಜೀವಕ್ಕೂ ಬಾರದೇ ಇರಲಿ. ಬದುಕು ಬದುಕಾಗಿಯೇ ಇರಲಿ. ಒಂದು ಜೀವಕ್ಕೆ ಬೆಲೆ ಕಟ್ಟುವ ಕಾಲ ಯಾವತ್ತೂ ಯಾರಿಗೂ ಎದುರಾಗದೇ ಇರಲಿ.

('ಕರ್ನಾಟಕ ರಕ್ಷಣಾ ವೇದಿಕೆ' ಮಾಸಪತ್ರಿಕೆಯ 2020ರ ಜನವರಿ ಸಂಚಿಕೆಯಲ್ಲಿ ಪ್ರಕಟಗೊಂಡ ಲೇಖನ)

-ಆರುಡೋ ಗಣೇಶ, ಕೋಡೂರು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆ ಕ್ಷಣದಲ್ಲಿ ಶರತ್‌ ಸಾವಿನೆದುರು ಅದೆಷ್ಟು ಅಸಹಾಯಕ!!

ಅವನು ಅಪ್ಪ ಹೇಳಿದ ಆ ಮಾತನ್ನು ಮರೆಯದೇ ಹೋಗಿದ್ದರೆ...

ಬೆಳಕಾದಳೇ ಅವಳು...?!