ಮಕ್ಕಳು ನಿಮ್ಮ ಕನಸು ನನಸಾಗಿಸುವ ಕೂಲಿಯಾಳುಗಳಲ್ಲ!!

 ಆಕೆ ಸೋನಾ ಅಬ್ರಾಹಂ.

ಮೂಲತಃ ಕೇರಳದ ಈಕೆ ತನ್ನ 14ನೇ ವಯಸ್ಸಿನಲ್ಲಿ ಅಂದರೆ ಒಂಭತ್ತು ಅಥವಾ ಹತ್ತನೇ ಕ್ಲಾಸಿನಲ್ಲಿದ್ದಾಗ ಮಲೆಯಾಳಂನ ‘ಫಾರ್ ಸೇಲ್’ ಎನ್ನುವ ಸಿನಿಮಾದಲ್ಲಿ ನಟಿಸಿದ್ದಳು. ತಂದೆ ತಾಯಿ ಹೇಳಿದ್ದೆಲ್ಲವನ್ನೂ ಸರಿ ಎನ್ನುವ, ಇಷ್ಟವಿದ್ದರೂ ಇಲ್ಲದೇ ಇದ್ದರೂ ತಂದೆ ತಾಯಿ ಹೇಳಿದ್ದಾರೆ ಎನ್ನುವ ಕಾರಣಕ್ಕೆ ಯಾವ ಕೆಲಸವನ್ನೂ ಖುಷಿಯಿಂದಲೇ ಮಾಡುವ ಈ ವಯಸ್ಸಿನಲ್ಲಿ ಸೋನಾ, ಫಾರ್ ಸೇಲ್ ಸಿನಿಮಾದಲ್ಲಿ ಅತ್ಯಾಚಾರಕ್ಕೊಳಗಾಗುವ ಹುಡುಗಿಯ ಪಾತ್ರವೊಂದರಲ್ಲಿ ನಟಿಸಿದ್ದಳು. ಇಂತಹ ಪಾತ್ರದಲ್ಲಿ ನಟಿಸುವಾಗ, ಈ ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಪಕರು ಸೋನಾ ಮತ್ತು ಆಕೆಯ ಅಮ್ಮನಿಗೆ ‘ನಾವಿಲ್ಲಿ ಚಿತ್ರೀಕರಿಸಿರುವ ಅತ್ಯಾಚಾರ ದೃಶ್ಯದ ಅಷ್ಟೂ ಭಾಗವನ್ನು ಸಿನಿಮಾದಲ್ಲಿ ಬಳಸುವುದಿಲ್ಲ. ಸಿನಿಮಾಕ್ಕೆ ಎಷ್ಟು ಅಗತ್ಯವಿದೆಯೋ ಅಷ್ಟನ್ನು ಮಾತ್ರ ಬಳಸಿಕೊಂಡು ಉಳಿದಿರುವ ದೃಶ್ಯಗಳನ್ನು ಡಿಲಿಟ್ ಮಾಡುತ್ತೇವೆ’ ಎಂದು ಹೇಳಿದ್ದರಂತೆ. ಆದರೆ ಸಿನಿಮಾದಲ್ಲಿ ಇಲ್ಲದ ಸೋನಾ ನಟಿಸಿರುವ ಅತ್ಯಾಚಾರದ ದೃಶ್ಯಗಳು ಈಗ ಅಶ್ಲೀಲ ವೆಬ್‌ಸೈಟ್ ಮತ್ತು ಯುಟ್ಯೂಬಿನಲ್ಲಿ ಪ್ರಸಾರವಾಗುತ್ತಿದೆ! ಈ ದೃಶ್ಯ ಲೀಕ್ ಆಗುವುದರ ಹಿಂದೆ ಫಾರ್ ಸೇಲ್ ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕರಷ್ಟೇ ಇರಲು ಸಾಧ್ಯ ಎನ್ನುವುದನ್ನು ಅರಿತ ಸೋನಾ ಮತ್ತು ಆಕೆಯ ಅಮ್ಮ ಕೇರಳದ ಉತ್ತರ ಎರ್ನಾಕುಲಂನ ಪೊಲೀಸ್ ಸ್ಟೇಶನ್ನಿನಲ್ಲಿ 2016ರಲ್ಲಿ ಈ ಬಗ್ಗೆ ದೂರು ದಾಖಲಿಸಿದರೂ, ಈ ಬಗ್ಗೆ ಗಂಭೀರ ಕ್ರಮ ಕೈಗೊಳ್ಳದ ಪೊಲೀಸರು ನಿರ್ದೇಶಕ ಮತ್ತು ನಿರ್ಮಾಪಕರನ್ನು ಬಂಧಿಸಿ ಜಾಮೀನಿನ ಮೇಲೆ ಬಿಟ್ಟಿದ್ದಾರೆ ಎಂದು ಆರೋಪಿಸುವ ಸೋನಾ ಅಬ್ರಹಾಂ ಪ್ರಸ್ತುತ ಅಂತಿಮ ವರ್ಷದ ಕಾನೂನು ವಿದ್ಯಾರ್ಥಿನಿಯಾಗಿದ್ದು, ಈ ಬಗ್ಗೆ ಈಗ ಮತ್ತೆ ದನಿ ಎತ್ತಿದ್ದಾಳೆ. ಸೋನಾಳ ಈ ಹೋರಾಟಕ್ಕೆ ನಟಿ ಪಾರ್ವತಿ ತಿರುವೊತ್ ಸೇರಿದಂತೆ ಮಲೆಯಾಳಂ ಚಿತ್ರರಂಗದ ಕೆಲವರು ಬೆಂಬಲ ಸೂಚಿಸಿದ್ದಾರೆ.

ಏನೂ ಅರಿಯದ ವಯಸ್ಸಿನಲ್ಲಿ ನಟಿಸಿದ ಸಿನಿಮಾದ ಪಾತ್ರವೊಂದು ಈಗ ಬೆಳೆದು ನಿಂತಿರುವ ಸೋನಾಳಿಗೆ ಕಿರಿಕಿರಿ ಮಾಡುತ್ತಿರುವ ಈ ಸಂದರ್ಭವನ್ನು ಕಾನೂನು ಹಾಗೂ ಪೊಲೀಸ್ ವ್ಯವಸ್ಥೆಯ ವೈಫಲ್ಯ ಎಂದು ನೋಡದೇ, ಒಮ್ಮೆ ಆಕೆಯ ಪೋಷಕರ ಮನಸ್ಥಿತಿಯಲ್ಲಿ ನೋಡಿದರೆ ನಿಮಗೆ ಸೋನಾ ಇವತ್ತು ಅನುಭವಿಸುತ್ತಿರುವ ಮುಜುಗರ, ಯಾತನೆ, ಸಂಕಟ, ಕಿರಿಕಿರಿಗಳಿಗೆ ಯಾರು ಕಾರಣ ಎನ್ನುವುದು ಸ್ಪಷ್ಟವಾಗಿ ಬಿಡುತ್ತದೆ!

ಹೌದು, ಮಕ್ಕಳೆಂದರೆ ತಾವು ಮಕ್ಕಳಾಗಿದ್ದಾಗ ಈಡೇರಿಸಿಕೊಳ್ಳಲಾಗದ ಆಸೆಗಳನ್ನು ಪೂರೈಸಲಿಕ್ಕೆಂದೇ ಹುಟ್ಟಿದವರು, ತಾವು ಕಂಡ ಕನಸುಗಳನ್ನು ನನಸು ಮಾಡಲಿಕ್ಕೆಂದೇ ಇರುವವರು ಎಂದುಕೊಳ್ಳುವ ಪೋಷಕರ ಮನಸ್ಥಿತಿಯೇ ಮಕ್ಕಳು ಬೆಳೆದು ನಿಂತ ನಂತರ ಅವರನ್ನು ಹೀಗೆಂದು ಹೇಳಲಾಗದ ಇಕ್ಕಟ್ಟಿಗೆ ಸಿಕ್ಕಿಸಿ ಎಳೆದಾಡಿಬಿಡುತ್ತದೆ. ಇಂತಹ ಇಕ್ಕಟ್ಟಿನಲ್ಲಿ ಸಿಕ್ಕ ಎಷ್ಟೋ ಮಕ್ಕಳು ತಮ್ಮ ಅಪ್ಪ ಅಮ್ಮನನ್ನೇ ಹೇಗೆ ದೂಷಿಸುವುದು, ದೂಷಿಸಿ ಅವರ ಮನಸ್ಸನ್ನೇಕೆ ನೋಯಿಸುವುದು ಎಂದು ಸುಮ್ಮನಿದ್ದುಬಿಟ್ಟರೆ, ಇನ್ನು ಕೆಲವು ಮಕ್ಕಳು ಈಗ ಸೋನಾಳಂತೆ ತಮಗೆ ಅವತ್ತು ಆದ ಅನ್ಯಾಯಕ್ಕೆ ಬೇರೆಯವರೇ ಕಾರಣ ಎಂದು ಕಾನೂನಿನ ಮೂಲಕವೋ ಅಥವಾ ತಮಗೆ ದಕ್ಕಿದ ಇನ್ನ್ಯಾವುದೋ ಮಾರ್ಗದ ಮೂಲಕವೋ ಹೋರಾಟ ನಡೆಸುತ್ತಾರೆ. ಆದರೆ ವಾಸ್ತವ ಏನೆಂದರೆ, ಸೋನಾಳಂತಹ ಸ್ಥಿತಿಯಲ್ಲಿರುವ ಬಹುತೇಕ ಮಕ್ಕಳ ಇವತ್ತಿನ ಎಲ್ಲದಕ್ಕೂ ಪೋಷಕರು ಮತ್ತು ಅವರು ತೆಗೆದುಕೊಂಡ ನಿರ್ಧಾರಗಳೇ ನೇರವಾಗಿ ಕಾರಣವಾಗಿರುತ್ತವೆ. ಮಕ್ಕಳಿಗೂ ನಮ್ಮಂತೆಯೇ ಒಂದು ಮನಸ್ಸಿದೆ, ಕನಸಿದೆ, ಅದೇನೆಂದು ತಿಳಿದುಕೊಂಡು ನಾವು ಮುಂದಿನ ಹೆಜ್ಜೆ ಇಡಬೇಕು ಎಂದು ಕೂಡಾ ಯೋಚಿಸದ ಪೋಷಕರು ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೆ ಮಕ್ಕಳನ್ನು ಥೇಟು ಸೂತ್ರದ ಗೊಂಬೆಗಳಂತೆಯೇ ಆಡಿಸಿಬಿಡುತ್ತಾರೆ.

ಈ ಸೂತ್ರವಾದರೂ ಎಷ್ಟು ದಿನ ಗಟ್ಟಿಯಿದ್ದೀತು? ಒಂದಲ್ಲ ಒಂದು ದಿನ ಹರಿದು ಹೋಗಬೇಕು, ಹೋಗುತ್ತದೆ ಕೂಡಾ. ಆಗಲೇ ಪೋಷಕರಿಗೆ ತಾವು ಮಕ್ಕಳ ಕಣ್ಣಿನಲ್ಲಿ ಇಷ್ಟು ದಿನ ಏನಾಗಿದ್ದೆವು ಎನ್ನುವುದರ ಅರಿವಾಗುತ್ತದೆ. ಆದರೆ ಅಷ್ಟರಲ್ಲಾಗಲೇ ಕಾಲ ಮಿಂಚಿರುತ್ತದೆ. ಮಕ್ಕಳು ಸಂಪೂರ್ಣವಾಗಿ ಕೈ ತಪ್ಪಿ ಹೋಗಿರುತ್ತಾರೆ.

ಇನ್ನೂ ಹತ್ತನೇ ಕ್ಲಾಸ್ ಕೂಡಾ ಪೂರ್ಣಗೊಳಿಸದ ಸೋನಾಳ ಬದುಕು ಮತ್ತು ಸಿನಿಮಾದಲ್ಲಿನ ಆಕೆಯ ನಟನೆಯ ಆ ಸಂದರ್ಭವನ್ನು ಯೋಚಿಸಿ ನೋಡಿ. ಅದು ಆಕೆ ಯಾವ ನಿರ್ಧಾರವನ್ನೂ ತೆಗೆದುಕೊಳ್ಳಲಿಕ್ಕಾಗದ ವಯಸ್ಸು. ಒಂದೊಮ್ಮೆ ಆಕೆ ಏನಾದರೂ ನಿರ್ಧರಿಸಿದರೂ ಅದನ್ನು ಅಪ್ಪ ಅಮ್ಮನ ಅನುಮತಿ ಇಲ್ಲದೇ ಮಾಡುವುದಕ್ಕಂತೂ ಸಾಧ್ಯವಿರಲಿಲ್ಲ. ಅದರಲ್ಲೂ ಸಿನಿಮಾದಲ್ಲಿ ನಟಿಸುವಂತಹ ವಿಷಯಗಳಂತೂ ಪೋಷಕರ ಅನುಮತಿ ಹಾಗೂ ಜೊತೆ ಇಲ್ಲದೇ ಸಾಧ್ಯವಾಗುವುದೇ ಇಲ್ಲ. ಅಂದರೆ ಸೋನಾ ‘ಫಾರ್ ಸೇಲ್’ ಎನ್ನುವ ಸಿನಿಮಾದಲ್ಲಿ ನಟಿಸಲು ಆಕೆಯ ಅಪ್ಪ ಅಮ್ಮನೇ ಅನುಮತಿ ಕೊಟ್ಟಿರುತ್ತಾರೆ. ಆ ವಯಸ್ಸಿಗೆ ಏನೆಂದು ಅರಿಯದ ಅತ್ಯಾಚಾರದಂತಹ ದೃಶ್ಯದಲ್ಲಿ ನಟಿಸುವುದೂ ಪೋಷಕರ ಅನುಮತಿ ಇಲ್ಲದೇ ಸಾಧ್ಯವಾಗುವುದಿಲ್ಲ. ಅಪ್ಪ ಅಮ್ಮನೇ ಓಕೆ ಎಂದಮೇಲೆ ಮಕ್ಕಳು ಸುಮ್ಮನಿರುವುದಾದರೂ ಹೇಗೆ? ಒಂದೊಮ್ಮೆ ಅವರು ಮಾಡುವುದಿಲ್ಲ ಎಂದರೂ ತಮ್ಮ ಕನಸನ್ನು ನನಸು ಮಾಡಿಕೊಳ್ಳಲಿಕ್ಕಾಗಿ ಅಪ್ಪ ಅಮ್ಮ ಪ್ರೀತಿಯಿಂದ ಒತ್ತಾಯಿಸುತ್ತಾರೆ. ಅದಕ್ಕೂ ಬಗ್ಗದೇ ಇದ್ದರೆ ಬೆದರಿಕೆ, ಹೊಡೆತಗಳನ್ನೂ ಇಂತಹ ಮಕ್ಕಳು ತಿಂದಿರುತ್ತಾರೆ. ಈಗ ಆರು ವರ್ಷಗಳ ನಂತರ ತಾನು ನಟಿಸಿದ ಸಿನಿಮಾದಲ್ಲಿಲ್ಲದ ದೃಶ್ಯಗಳು ಲೀಕ್ ಆಗಿರುವ ಬಗ್ಗೆ ನಿರ್ದೇಶಕರು ಹಾಗೂ ನಿರ್ಮಾಪಕರ ಮೇಲೆ ಸೋನಾ ದೂರು ಕೊಟ್ಟಿದ್ದು ಸರಿಯಾದರೂ, ಆಕೆಯ ಈ ಸ್ಥಿತಿಗೆ ಕಾರಣ ಯಾರು ಎಂದು ನೋಡಿದರೆ ನಮಗೆ ಆಕೆಯ ಪೋಷಕರೇ ಕಾಣಿಸುತ್ತಾರೆ. ನನ್ನ ಮಗಳು ಸಿನಿಮಾದಲ್ಲಿ ನಟಿಸಿ ದೊಡ್ಡ ಹೆಸರು ಮಾಡಬೇಕು, ಆಕೆಯ ಪ್ರಸಿದ್ಧಿ-ಹಣದಲ್ಲಿ ನಾವು ನೆಮ್ಮದಿಯ ಜೀವನ ನಡೆಸಬೇಕು, ನನಗೆ ಸಿನಿಮಾದಲ್ಲಿ ನಟಿಸುವ ಆಸೆಯಿತ್ತು ಆದರೆ ಅಪ್ಪ ಅಮ್ಮ ಬಿಡದೇ ಇದ್ದಿದ್ದರಿಂದ ನಾನು ಈ ಬಾಳು ಬಾಳುವಂತಾಯಿತು, ನನ್ನ ಮಗಳ ಮೂಲಕವಾದರೂ ನಾನು ಕಂಡ ಕನಸನ್ನು ನನಸು ಮಾಡಿಕೊಳ್ಳುತ್ತೇನೆ... ಎಂದೆಲ್ಲ ಯೋಚಿಸಿರಬಹುದಾದ ಸೋನಾಳ ತಂದೆ ತಾಯಿಯ ಮನಸ್ಥಿತಿಯೇ ಇವತ್ತು ಸೋನಾ ಅನುಭವಿಸುತ್ತಿರುವ ಎಲ್ಲಾ ಯಾತನೆಗಳಿಗೂ ಕಾರಣ. ಯಾಕೆಂದರೆ, ಆ ವಯಸ್ಸಿನಲ್ಲಿ ಸೋನಾಳಿಗೆ ತನ್ನ ಬದುಕು ಏನು, ಮುಂದೆ ಹೇಗಿರುತ್ತದೆ ಎಂದು ತಿಳಿದಿರಲಿಕ್ಕಂತೂ ಸಾಧ್ಯವಿರಲಿಲ್ಲ...

ಹೆಚ್ಚಿನ ಪೋಷಕರ ಇಂತಹ ಮನಸ್ಥಿತಿಯೇ ಮಕ್ಕಳ ಬದುಕನ್ನು ದಿಕ್ಕುಗೆಡಿಸಿಬಿಡುತ್ತದೆ. ‘ನಮ್ಮ ಮಕ್ಕಳು’ ಎನ್ನುವುದೇನೋ ಸರಿಯಾದರೂ, ಮಕ್ಕಳು ಪ್ರಬುದ್ಧರಾಗುತ್ತಿದ್ದಂತೆ ತಮ್ಮ ಕನಸುಗಳೇನು, ಗುರಿಯೇನು ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ ತನ್ನ ಆಸಕ್ತಿಯೇನು ಎನ್ನುವುದನ್ನು ಕಂಡುಕೊಳ್ಳುತ್ತಾರೆ. ಅಗತ್ಯವಿದ್ದರೆ ಸೂಕ್ತ ಸಲಹೆ ಅಥವಾ ಮಾರ್ಗದರ್ಶನಕ್ಕಾಗಿ ತಮ್ಮ ಬಳಿ ಬಂದೇ ಬರುತ್ತಾರೆ ಎನ್ನುವುದನ್ನು ಯೋಚಿಸದ ತಂದೆ ತಾಯಿಗಳು ಮಕ್ಕಳೆಂದರೇ ತಮ್ಮ ಕನಸುಗಳನ್ನು ನನಸು ಮಾಡಲಿಕ್ಕೆಂದೇ ಇರುವ ಕೂಲಿಯಾಳುಗಳು ಎಂದುಕೊಂಡು ಬಿಡುತ್ತಾರೆ. ಇದು ಆರಂಭವಾಗುವುದೇ ಮಕ್ಕಳಿಗೆ ಹೆಸರಿಡುವುದರಿಂದ! ತನಗೆ ಅಪ್ಪ ಅಮ್ಮ ಸರಿಯಾದ ಹೆಸರಿಡಲಿಲ್ಲ, ನನ್ನ ಹೆಸರು ನನಗೇ ಇಷ್ಟವಿಲ್ಲ ಎನ್ನುವ ಪೋಷಕರ ಸಂಖ್ಯೆ ಅದೆಷ್ಟೋ! ಇಂತಹ ಪೋಷಕರು ಡಿಫರೆಂಟಾಗಿರಬೇಕು, ಇಲ್ಲಿಯವರೆಗೆ ಯಾರೂ ಕೇಳದ, ಹೇಳದ ಹೆಸರಿರಬೇಕು ಎಂದು ಯಾವ ಅರ್ಥವೂ ಇಲ್ಲದ ಅಪದ್ಧ ಹೆಸರೊಂದನ್ನು ತಮ್ಮ ಮಕ್ಕಳಿಗಿಟ್ಟು ಅದನ್ನೇ ಮುದ್ದು ಎಂದುಕೊಳ್ಳುತ್ತಾರೆ. ತನ್ನ ಆಸೆ ಈಡೇರಿಸಿಕೊಳ್ಳಲು ತನ್ನ ಮಗುವಿಗೆ ಇಟ್ಟ ಹೆಸರು, ಮುಂದೆ ಅದು ಬೆಳೆದು ದೊಡ್ಡದಾದ ನಂತರ ಕಿರಿಕಿರಿಗೆ ಕಾರಣವಾಗಬಹುದು ಎನ್ನುವುದನ್ನೂ ಯೋಚಿಸದೇ ತಮ್ಮ ಆಸೆಯನ್ನು ಪೂರೈಸಿಕೊಳ್ಳಲಿಕ್ಕೆ ಇಲ್ಲಿಂದಲೇ ಪೋಷಕರು ಮಕ್ಕಳನ್ನು ಬಳಸಿಕೊಳ್ಳಲಾರಂಭಿಸುತ್ತಾರೆ.

ಇನ್ನು ಕೆಲವರಿರುತ್ತಾರೆ. ಅವರು ಮಗುವಿನ ತೊಟ್ಟಿಲಲ್ಲೇ ಮಗುವಿನ ಗಂಡ - ಹೆಂಡತಿ ಯಾರು ಎಂದು ತಮಗೆ ಇಷ್ಟವಾದವರನ್ನು ಗೊತ್ತು ಮಾಡಿಬಿಡುತ್ತಾರೆ. ತಮಗೆ ಇಷ್ಟವಾದವರು ದೊಡ್ಡವರಾದ ನಂತರ ನಮ್ಮ ಮಕ್ಕಳಿಗೆ ಇಷ್ಟವಾಗಬಹುದಾ ಎಂದು ಅವರು ಒಮ್ಮೆಯೂ ಯೋಚಿಸಿರುವುದಿಲ್ಲ. ಯಾಕೆಂದರೆ ಇವರ ಕಣ್ಣಿನಲ್ಲಿ ಮಕ್ಕಳೆಂದರೆ ತಾವು ಬದುಕಿರುವವರೆಗೂ ತಾವು ಹೇಳಿದ್ದನ್ನೇ ಕೇಳಿಕೊಂಡಿರುವ ಜೀವಂತ ಗೊಂಬೆಗಳು! ಇನ್ನು ಓದಿನ ವಿಷಯದಲ್ಲಾಗಲೀ, ಹಾಕಿಕೊಳ್ಳುವ ಬಟ್ಟೆಯ ವಿಷಯದಲ್ಲಾಗಲೀ ಎಲ್ಲವೂ ಪೋಷಕರು ಹೇಳಿದಂತೆಯೇ ಆಗಬೇಕು. ಅಲ್ಲಿ ಮಕ್ಕಳ ಮಾತು, ಮನಸ್ಸಿಗೆ ಯಾವ ಬೆಲೆಯೂ ಇರುವುದಿಲ್ಲ. ಮಕ್ಕಳ ಮನಸ್ಸಿನಲ್ಲಿಯೂ ಏನೋ ಇರಬಹುದು, ಅವರ ಆಸೆ ಕನಸು ಗುರಿ ಬೇರೆಯೇ ಇರಬಹುದು, ನಾವು ನಮ್ಮ ಮೂಗಿನ ನೇರಕ್ಕೆ ಯೋಚಿಸುವುದೇ ತಪ್ಪು ಎಂದು ಒಮ್ಮೆ ತಂದೆ ತಾಯಿಯಲ್ಲಿ ಒಬ್ಬರಿಗೆ ಅನ್ನಿಸಿದರೂ ಅವರು ಮಕ್ಕಳನ್ನು ‘ಮಕ್ಕಳಂತೆಯೇ’ ನೋಡುತ್ತಾರೆ, ನಡೆಸಿಕೊಳ್ಳುತ್ತಾರೆ.

ಅವರು ನಿಮ್ಮ ಮಕ್ಕಳು. ನೀವಾಗಿಯೇ ಇಷ್ಟ ಪಟ್ಟು, ಜೊತೆಗೆ ಕಷ್ಟಪಟ್ಟೂ ಅವರನ್ನು ಭೂಮಿಗೆ ತಂದಿದ್ದೀರಿ ಎನ್ನುವುದೂ ನಿಜ. ಹಾಗೆಂದು ಅವರಿಗೆ ಇಷ್ಟವಿಲ್ಲದೇ ಇದ್ದರೂ ನಿಮ್ಮ ಕನಸಿಗಾಗಿ ಅವರು ದುಡಿಯಬೇಕು ಎಂದು ನೀವೇಕೆ ಅಂದುಕೊಳ್ಳುತ್ತೀರಿ? ನನ್ನ ತಂದೆ ತಾಯಿ ಮಾಡಿದ ತಪ್ಪನ್ನೇ ಈಗ ತಂದೆ ತಾಯಿಗಳಾಗಿರುವ ನಾವು ಮಾಡುತ್ತಿದ್ದೇವೆಂದು ನಿಮಗೇಕೆ ಅನ್ನಿಸುವುದಿಲ್ಲ? ಅನ್ನಿಸುವುದಿಲ್ಲ. ಯಾಕೆಂದರೆ, ನಿಮ್ಮೊಳಗಿನ ನನಸಾಗದ ಕನಸುಗಳ ಅತೃಪ್ತ ಆತ್ಮವೊಂದಿರುತ್ತದಲ್ಲ, ಅದು ನಿಮ್ಮನ್ನು ಕುರುಡಾಗಿಸಿರುತ್ತದೆ. ಮತ್ತು ಮಕ್ಕಳಿರುವುದೇ ನಮ್ಮ ಕನಸನ್ನು ನನಸು ಮಾಡಲಿಕ್ಕೆ ಎನ್ನುವ ವಿಚಿತ್ರವಾದ ಭ್ರಮೆಯಲ್ಲಿಯೂ ನೀವಿರುತ್ತೀರಿ.

ಹಾಗಿದ್ದರೆ ನಿಮ್ಮ ಮಕ್ಕಳಿರುವುದು ನಿಮ್ಮ ಕನಸುಗಳನ್ನು ನನಸು ಮಾಡಲಿಕ್ಕೆ ಮಾತ್ರವಾ? ಹೌದು ಎನ್ನುವುದೇ ಆದರೆ ನೀವು ನಿಮಗೇ ಗೊತ್ತಿಲ್ಲದೇ ಮುಂದೊಂದು ದಿನ ನಿಮ್ಮ ಮಕ್ಕಳ ಪ್ರೀತಿಯನ್ನು ಕಳೆದುಕೊಳ್ಳುತ್ತೀರಿ, ಮಕ್ಕಳು ನಿಮ್ಮಿಂದ ದೂರವೂ ಆಗುತ್ತಾರೆ. ಮಕ್ಕಳಿಗೆ ಏನು ತಿಳಿಯುತ್ತದೆ ಎನ್ನುವುದೇನೋ ಸತ್ಯ. ಎಲ್ಲಿಯವರೆಗೆ? ಈ ಹಿಂದಿನ ತಲೆಮಾರಿನ ಮಕ್ಕಳಾದರೆ ಕಾಲೇಜಿಗೆ ಹೋಗುವ ವಯಸ್ಸಿನವರೆಗೂ ಏನೂ ತಿಳಿಯದವರಾಗಿರುತ್ತಿದ್ದರು. ಆದರೆ ಇವತ್ತಿನ ತಲೆಮಾರಿನ ಮಕ್ಕಳು ಹೀಗಿಲ್ಲ. ಎಸ್ಸೆಸ್ಸೆಲ್ಸಿ ಮುಗಿಸುವ ಹೊತ್ತಿಗೆ ಅವರಿಗೆ ತಮ್ಮ ಬದುಕು ಭವಿಷ್ಯದ ಬಗ್ಗೆ ತಮ್ಮದೇ ಒಂದು ಕ್ಲಾರಿಟಿ ಸಿಕ್ಕಿರುತ್ತದೆ. ಮುಂದೆ ತಾನೇನು ಮಾಡಿದರೆ ನನ್ನ ಬದುಕು ಸೆಟಲ್ ಆಗುತ್ತದೆ, ನಾನು ಖುಷಿ ಹಾಗೂ ನೆಮ್ಮದಿಯಿಂದ ಇರುತ್ತೇನೆ ಎಂದು ಅವರು ನಿರ್ಧರಿಸಿ ಅದಕ್ಕೆ ಸರಿಯಾದ ಪ್ಲ್ಯಾನ್ ಕೂಡಾ ಮಾಡಿಕೊಂಡಿರುತ್ತಾರೆ. ಅದರಲ್ಲೂ ಅವರದ್ದೇ ಆಸಕ್ತಿ, ಅಭಿರುಚಿಯ ಸ್ನೇಹಿತರು ಜೊತೆಯಾದರಂತೂ ಕೇಳುವುದೇ ಬೇಡ. ಇಂತಹ ಸಂದರ್ಭದಲ್ಲಿ ಜವಾಬ್ದಾರಿಯುತ ಪೋಷಕರಾಗಿ ನೀವೊಂದು ಎಚ್ಚರಿಕೆಯ ಕಣ್ಣನ್ನು ಅವರ ಮೇಲಿಟ್ಟಿರುವುದಷ್ಟೇ ನಿಮ್ಮ ಕರ್ತವ್ಯವಾಗಿರುತ್ತದೆ. ಹಗ್ಗ ಕಟ್ಟಿ ಕರುವನ್ನು ಮೇಯಲು ಬಿಟ್ಟು ಎಲ್ಲಿಯೋ ಹೋದರೆ ಅದೇ ಹಗ್ಗವೇ ಉರುಳಾಗುವ ಸಾಧ್ಯತೆ ಇಲ್ಲದೇ ಇರುವುದಿಲ್ಲ. ಆದ್ದರಿಂದ ಹಗ್ಗ ಕಟ್ಟಿರುವುದನ್ನು ಅರಿಯದೇ ಮೇಯುವ ಕರುವಿನೆಡೆಗೆ ಹೇಗೆ ನಮ್ಮ ಗಮನ ಇರಬೇಕೋ ಹಾಗೇ ನಮ್ಮ ಮಕ್ಕಳ ಪ್ರತೀ ಹೆಜ್ಜೆಗಳ ಮೇಲೆ ಕೂಡಾ ನಮ್ಮ ಗಮನ ಇದ್ದರಷ್ಟೇ ಸಾಕಾಗುತ್ತದೆ. ಅವರೆಲ್ಲಾದರೂ ಎಡವಿ ಬೀಳುತ್ತಿದ್ದಾರೆ ಅನ್ನಿಸಿದಾಗ ನಾವು ಅವರ ಬಳಿ ಹೋಗಿ ನಿಲ್ಲಬೇಕಷ್ಟೇ; ಕ್ಷಣದಲ್ಲಿ ಎಡವುವುದನ್ನು ತಪ್ಪಿಸಿಕೊಂಡು ಅವರು ಬೆಟ್ಟದ ತುದಿಯಲ್ಲಿ ನಿಂತು ಖುಷಿಯಿಂದ ಕೈ ಬೀಸುತ್ತಿರುತ್ತಾರೆ!

ಹೀಗಿರುವಾಗ ನೀವೇಕೆ ಅವರನ್ನು ನಿಮ್ಮ ಕನಸುಗಳನ್ನು ನನಸು ಮಾಡಲಿಕ್ಕೆಂದೇ ಇರುವವರು ಎಂದುಕೊಳ್ಳುತ್ತೀರಿ? ಡಾಕ್ಟರ್ ಮಗ ಡಾಕ್ಟರ‌್ರೇ ಆಗಬೇಕು, ಟೀಚರ್ ಮಗ ಟೀಚರ‌್ರು, ಡ್ಯಾನ್ಸರ್ ಮಗ ಡ್ಯಾನ್ಸರ‌್ರೇ ಆಗಬೇಕು ಎಂದು ಎಲ್ಲಾದರೂ ಬರೆದಿಟ್ಟಿದೆಯಾ? ಇಲ್ಲವಲ್ಲ. ನೀವು ನೀವೇ ಆಸೆ ಪಟ್ಟು ಡಾಕ್ಟರ‌್ರಾಗಿದ್ದೀರಿ ಎಂದುಕೊಳ್ಳಿ, ನಿಮ್ಮದೇ ವಂಶವಾಹಿಯಾಗಿರುವ ಮಗನೋ, ಮಗಳಿಗೋ ನೀವು ಹೇಳದೇ ಇದ್ದರೂ ತಾನು ಡಾಕ್ಟರ‌್ರಾಗಬೇಕು ಅನ್ನಿಸುತ್ತದೆ. ಅಥವಾ ಸಣ್ಣದೊಂದು ಗೊಂದಲವಿದ್ದಾಗ ನೀವದನ್ನು ಬಗೆಹರಿಸಿಬಿಟ್ಟರೆ ಅವರು ನಿಮ್ಮ ಊಹೆಯನ್ನೂ ಮೀರಿ ನಿಮಗಿಂತ ಒಳ್ಳೆಯ ಡಾಕ್ಟರ‌್ರಾಗಿ ಬೆಳೆದು ನಿಲ್ಲಬಲ್ಲರು. ಅದೇ ನೀವೇ ಡಾಕ್ಟರ‌್ರಾಗಿದ್ದು ನಿಮ್ಮ ತಂದೆ ಅಥವಾ ತಾಯಿಯ ಒತ್ತಾಯಕ್ಕೆ ಎನ್ನುವಂತಹ ಸಂದರ್ಭವೂ ಇರುತ್ತದೆ. ಕೊನೆಗೆ ಏನೇ ಆಗಲಿ, ಅಪ್ಪ ಅಮ್ಮನ ಆಸೆಯಂತೆ ನಾನು ಡಾಕ್ಟರ‌್ರಾದರೂ ಒಳ್ಳೆಯ ದುಡಿಮೆ, ಹೆಸರು ಇತ್ಯಾದಿ ಎಲ್ಲವೂ ನನಗೆ ಸಿಕ್ಕಿದೆ ಎನ್ನುವ ಖುಷಿಯಲ್ಲೇ ನೀವಿವತ್ತು ಇರಬಹುದು. ಆದರೆ ನಿಮ್ಮ ಮನಸ್ಸಿನಲ್ಲಿ ಈ ಬಗ್ಗೆ ನಿಮಗೂ ಗೊತ್ತಾಗದ ಕೊರಗೊಂದು ಇರುತ್ತದೆ. ಹೀಗಿದ್ದಾಗ ನಿಮ್ಮ ಮಕ್ಕಳು ನನ್ನ ಹಾಗೇ ಡಾಕ್ಟರ‌್ರೇ ಆಗಬೇಕು ಎಂದು ನೀವು ಕನಸು ಕಾಣುವುದು, ಅದನ್ನು ಅವರ ಮೇಲೆ ಹೇರುವುದು ತಪ್ಪಾಗುತ್ತದೆ. ಯಾಕೆಂದರೆ, ನಿಮ್ಮೊಳಗೆ ಡಾಕ್ಟರ‌್ರಾಗುವ ಮನಸ್ಸಿರುವುದಿಲ್ಲ, ಆದರೂ ಆಗಿ ಈಗ ನೆಮ್ಮದಿಯಾಗಿರುವ ನಿಮ್ಮ ಮನಸ್ಸಿನಲ್ಲಿ ಹಾಗೇ ಉಳಿದ ಆಸೆಯೇನಿರುತ್ತದೆಯಲ್ಲ, ಅದು ನಿಮ್ಮ ಮಕ್ಕಳೊಂದಿಗೆ ಮುಂದುವರಿದಿರಬಹುದು. ಅಥವಾ ಅವರ ಸ್ನೇಹಿತರ ಸಂಪರ್ಕ, ಬದಲಾದ ಜಗತ್ತು ಅವರೆದುರು ತಂದು ಸುರಿಯುತ್ತಿರುವ ನೀವು ಕಾಣದಿರುವ ವಿಷಯಗಳೆಲ್ಲ ಸೇರಿಕೊಂಡು ಅವರಲ್ಲಿ ನೀವು ಊಹಿಸದ ಕನಸೊಂದು ಮೊಳೆತಿರಬಹುದು. ಅದೇ ಅವರ ಬದುಕಾಗಬಹುದು. ಅದನ್ನು ನೀವು ದೂರ ನಿಂತೇ ನೋಡುವುದು, ಅವರು ಕೇಳಿದಾಗ ಹತ್ತಿರ ಹೋಗಿ ಹೀಗಲ್ಲ ಮಗು ಇದು ಈ ರೀತಿ ಎಂದು ಪ್ರೀತಿಯಿಂದ ತಿದ್ದುವುದಷ್ಟೇ ನೀವು ಮಾಡಬಹುದಾದ ಕೆಲಸವಾಗಿರುತ್ತದೆ. ಅದನ್ನು ನೀವು ಅರ್ಥ ಮಾಡಿಕೊಂಡಿದ್ದೇ ಹೌದಾದರೆ ನಿಮಗೆ ನಿಮ್ಮ ಮಕ್ಕಳು ನಿಮ್ಮದೇ ವಂಶವಾಹಿಯಲ್ಲಿ ಬೆರೆತಿರುವ ನೀವೂ ಅರಿಯದ ಕನಸೊಂದನ್ನು ನನಸು ಮಾಡಿಕೊಳ್ಳುತ್ತಿರುವವರಾಗಿಯೇ ಕಾಣಿಸುತ್ತಾರೆ.

ದುರಂತವೇನು ಗೊತ್ತಾ, ದುಡ್ಡು, ಪ್ರಸಿದ್ಧಿ, ಒಂದೇ ಸಾರಿ ಆಕಾಶಕ್ಕೆ ಜಿಗಿಯುವ ಆಸೆಯನ್ನೆಲ್ಲ ಹೊತ್ತ ಪೋಷಕರಿಗೆ ‘ತಮ್ಮದೇ ಮಕ್ಕಳು’ ತಮ್ಮ ಅರಿವಿಗೂ ಬಾರದಿರುವ ಕನಸುಗಳನ್ನೇ ಎದುರಿಟ್ಟುಕೊಂಡು ಅದಕ್ಕಾಗಿ ದುಡಿಯುತ್ತಿದ್ದಾರೆ ಅನ್ನಿಸುವುದಿಲ್ಲ. ಬದಲಿಗೆ, ಏನೂ ಅರಿಯದ ವಯಸ್ಸಿನಲ್ಲಿರುವಾಗಲೇ ಮಕ್ಕಳ ಮೇಲೆ ಪೋಷಕರು ತಮ್ಮ ಕನಸುಗಳನ್ನು ಹೇರುತ್ತಾರೆ. ಅದು ನನಗೆ ಇಷ್ಟವಿದೆಯೋ, ಇಲ್ಲವೋ ಎನ್ನುವುದನ್ನೂ ಅರಿಯದ ಮಕ್ಕಳು ಅದಕ್ಕಾಗಿ ದುಡಿಯಲಾರಂಭಿಸುತ್ತಾರೆ. ಒಂದಷ್ಟು ಬೆಳೆದು ನಿಂತ ನಂತರ ಮಕ್ಕಳಿಗೆ ಇದು ನಮ್ಮ ಕನಸಲ್ಲ, ನನ್ನ ಕನಸು ಬೇರೆಯದೇ ಇತ್ತು ಎನ್ನುವುದು ಅರಿವಿಗೆ ಬರುತ್ತದಲ್ಲ, ಆಗಲೇ ಪೋಷಕರು ಮತ್ತು ಮಕ್ಕಳ ನಡುವೆ ಭಿನ್ನಾಭಿಪ್ರಾಯ ಆರಂಭವಾಗುತ್ತದೆ. ಆರಂಭವಾದದ್ದು ಎಲ್ಲಿಗೆ ಹೋಗಿ ತಲುಪುತ್ತದೆ? ಅಂತ್ಯ ಹೇಗಿರುತ್ತದೆ ಇದನ್ನು ಯಾರೂ ಊಹಿಸಲಿಕ್ಕಾಗುವುದಿಲ್ಲ.

ಸಧ್ಯ ಸೋನಾ ಅಬ್ರಹಾಂ ಪ್ರಕರಣವೊಂದು ನಮ್ಮ ಎದುರಿದೆ. ಆಕೆಯೇನೋ ಧೈರ್ಯವಾಗಿ ತನ್ನ ನೋವನ್ನು ಜಗತ್ತಿನೆದುರು ತೆರೆದಿಟ್ಟಳು. ಹೀಗೆ ತೆರೆದಿಡದ, ಅಪ್ಪ ಅಮ್ಮನಿಗಾಗಿಯೇ ಎಲ್ಲವನ್ನೂ ಸಹಿಸಿಕೊಂಡು ತಮ್ಮದಲ್ಲದ ಕನಸನ್ನು ತಮ್ಮದೆಂದುಕೊಂಡು ನನಸು ಮಾಡಲಿಕ್ಕೆ ಉಸಿರುಗಟ್ಟಿ ದುಡಿಯುತ್ತಿರುವ ಅದೆಷ್ಟು ಮಕ್ಕಳು ನಮ್ಮ ನಡುವಿದ್ದಾರೋ?! ದುರಂತವೇನೆಂದರೆ, ಮಕ್ಕಳ ಮನಸ್ಸು ಅರಿಯಬೇಕಾದ ಪೋಷಕರೇ ಕಲ್ಲು ಮನಸ್ಸಿನ ಮಾಲೀಕರಾದರೆ, ಮಕ್ಕಳು ಇವರ ಕನಸಿಗಾಗಿ ದುಡಿಯುತ್ತಿರುವ ಕೂಲಿಯಾಳುಗಳು!

                                                                        -ಆರುಡೋ ಗಣೇಶ, ಕೋಡೂರು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆ ಕ್ಷಣದಲ್ಲಿ ಶರತ್‌ ಸಾವಿನೆದುರು ಅದೆಷ್ಟು ಅಸಹಾಯಕ!!

ಒಂಟಿತನ ಎಂದರೆ ಜವಾಬ್ದಾರಿಯಿಂದ ಜಾರಿಕೊಳ್ಳುವುದಾ?!

ಈಗ ಆರು ಪಾಸಾಗಿ ಏಳು...