ಅಣ್ಣಾ ಅವಸರವೇನಿತ್ತು?
ಎಪ್ಪತ್ತೇಳು. ಸಾಧನೆಗಳು ತಂದುಕೊಟ್ಟ ಸಂತಸ, ನೆಮ್ಮದಿಯಿಂದಿದ್ದ ಕೌಟುಂಬಿಕ ಜೀವನ, ಬೇರೆಯವರ ಬಗ್ಗೆ ಸದಾ ಒಳ್ಳೆಯದನ್ನೇ ಯೋಚಿಸುವ ಮಗು ಮನಸ್ಸು, ಊಟದಲ್ಲಿದ್ದ ಅಚ್ಚುಕಟ್ಟುತನ, ಯೋಗ-ವ್ಯಾಯಾಮದಲ್ಲಿ ಹದಗೊಂಡಿದ್ದ ಆರೋಗ್ಯವಂತ ದೇಹ ಮತ್ತು ಬದುಕಿನಲ್ಲಿ ರೂಢಿಸಿಕೊಂಡಿದ್ದ ಶಿಸ್ತಿನೆದುರು ಎಪ್ಪತ್ತೇಳು ಎನ್ನುವುದು ಮಹಾ ದೊಡ್ಡ ವಯಸ್ಸೇನಲ್ಲ. ಎಂತೆಂತಹವರೋ ನೂರು ತಲುಪುತ್ತಾರೆ. ಅವಶ್ಯಕತೆಯಿಲ್ಲದವರೂ ಸರಾಗವಾಗಿ ನೂರರ ತನಕ ನಡೆದು ಬಿಡುತ್ತಾರೆ. ಅಂತಹದ್ದರಲ್ಲಿ ಬರೀ ಎಪ್ಪತ್ತೇಳನೇ ವಯಸ್ಸಿನಲ್ಲೇ ನಮ್ಮೆಲ್ಲರ ಪ್ರೀತಿಯ ಅಣ್ಣಾ ಯಾಕೆ ಅವಸರಿಸಿಬಿಟ್ಟರು? ನಾವೆಲ್ಲರೂ ಮತ್ತು ನಮ್ಮೆಲ್ಲರ ಪ್ರೀತಿ ಅವರಿಗೆ ಇಷ್ಟೊಂದು ಬೇಗ ಬೇಡವಾಗಿಬಿಟ್ಟಿತಾ? ರಾಜ್‌ಕುಮಾರ್ ಅಗಲಿಕೆಯ ಸುದ್ದಿ ನನ್ನ ಕಿವಿಗೆ ಬೀಳುತ್ತಿದ್ದಂತೆ ನಾನು ಮೊದಲು ಕೇಳಿಕೊಂಡಿದ್ದೇ ಈ ಪ್ರಶ್ನೆಯನ್ನು. ಇವತ್ತಿಗಷ್ಟೇ ಅಲ್ಲದೇ ನಾಳೆ, ನಾಡಿದ್ದು, ಅದರಾಚೆಯೂ ನಾನು ಈ ಪ್ರಶ್ನೆಯನ್ನು ಕೇಳಿಕೊಳ್ಳುತ್ತಲೇ ಇರುತ್ತೇನೆ. ಯಾಕೆಂದರೆ ಅಣ್ಣಾ ಮಾಡಿದ ಅವಸರ ನನ್ನಲ್ಲೊಂದು ಅನಾಥ ಭಾವವನ್ನು ತುಂಬಿ ಹೋಗಿದೆ, ಭಯವನ್ನು ಹುಟ್ಟು ಹಾಕಿದೆ, ಮುಂದೇನು ಎಂಬ ಆತಂಕಕ್ಕೆ ಕಾರಣವಾಗಿದೆ. ಆದ್ದರಿಂದಲೇ ನಾನು ಪ್ರತಿಕ್ಷಣವೂ ಅಣ್ಣನ ನೆನಪಾದಾಗಲೆಲ್ಲಾ ’ಅಣ್ಣಾ ಅವಸರವೇನಿತ್ತು?’ ಎಂದು ಕೇಳುತ್ತಲೇ ಇದ್ದೇನೆ. ರಾಜ್‌ಕುಮಾರ್ ಕೇವಲ ಒಬ್ಬ ನಟರಾಗಿದ್ದಿದ್ದರೆ ನನ್ನೊಂದಿಗೆ ಆರು ಕೋಟಿ ಕನ್ನಡಿಗರನ್ನು ಈ ಭಯ, ಆ...