ಸವಸುದ್ದಿಯಿಂದ ಎಲ್.ಈ.ಕೊಳವಿ ಸರ್‌ ಬರೆದ ಪತ್ರದೊಂದಿಗೆ...



ನನಗೆ ನೆನಪಿರುವಂತೆ ಒಂದನೇ ತರಗತಿಯಿಂದ ಎಂ.ಎ ಮಾಡುವ ತನಕ ಯಾವತ್ತೂ ನಾನು ನನ್ನ ಟೀಚರ‍್ರುಗಳಿಗೆ ತೀರಾ ನೆಚ್ಚಿನ ವಿದ್ಯಾರ್ಥಿಯೇನೂ ಆಗಿರಲಿಲ್ಲ.
ಹೋಂವರ್ಕ್ ಮಾಡಿಕೊಂಡು ಹೋಗಿ ಶಹಬ್ಬಾಷ್‌ಗಿರಿ ಗಿಟ್ಟಿಸಿಕೊಂಡಿದ್ದು, ಕ್ಲಾಸಿನಲ್ಲಿ ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರಿಸಿದ್ದು, ಏನಾದರೂ ಕೆಲಸ ಹೇಳಿದ ತಕ್ಷಣ ಓಡಿ ಹೋಗಿ ಮುಂದೆ ನಿಲ್ಲುವುದು, ಟೀಚರ‍್ರುಗಳೆದುರು ಅತಿ ವಿನಯದಿಂದ ನಡೆದುಕೊಳ್ಳುವುದು... ಉಹ್ಞೂಂ, ಇವ್ಯಾವುದೂ ನನ್ನ ವಿದ್ಯಾರ್ಥಿ ಜೀವನದಲ್ಲಿರಲಿಲ್ಲ. ಕ್ಲಾಸಿನಲ್ಲಿದ್ದಷ್ಟು ಹೊತ್ತು ಪಾಠ ಕೇಳುತ್ತಿದ್ದೆ ಎನ್ನುವುದು ಬಿಟ್ಟರೆ ತೀರಾ ಪುಸ್ತಕದ ಹುಳುವಾಗಿದ್ದವನೂ ನಾನಲ್ಲ. ಪರೀಕ್ಷೆಗೆ ಕೆಲವೇ ಕೆಲವು ದಿನಗಳಿವೆ ಎನ್ನುವಾಗ ಓದಿಕೊಂಡು, ಇದ್ದಿದ್ದರಲ್ಲಿ ಒಂದಿಷ್ಟು ಒಳ್ಳೆಯ ಸ್ಕೋರಿನೊಂದಿಗೇ ಪಾಸಾಗುತ್ತಿದ್ದೆನಾದ್ದರಿಂದ ’ಕೆ.ಗಣೇಶ’ ಎಂದರೆ ಯಾರೆಂದು ಟೀಚರ‍್ರುಗಳಿಗೆ ಗೊತ್ತಿರುತ್ತಿತ್ತು. ಹಾಗೆ ನೋಡಿದರೆ, ಪ್ರೈಮರಿ ಸ್ಕೂಲಿನಲ್ಲಿದ್ದಾಗ ಬಸವಂತಪ್ಪ ಮೇಷ್ಟ್ರಿಗೇ ನಾನು ಸ್ವಲ್ಪ ಫೇವರಿಟ್ ಆಗಿದ್ದೆ ಅನ್ನಿಸುತ್ತದೆ. ಅವರು ಆಗ ಕ್ಲಾಸಿನ ಮಧ್ಯೆ ಕರೆದು ಸ್ಕೂಲಿಗೆ ಸಂಬಂಧಿಸಿದಂತೆ ಇದ್ದಿರಬಹುದಾದ ಹಣ ಕಟ್ಟುವುದು, ಪಾಸ್ ಬುಕ್ ಎಂಟ್ರಿ ಎಂದು ನನ್ನನ್ನು ಕೋಡೂರಿನಲ್ಲಿದ್ದ ಕೆನರಾ ಬ್ಯಾಂಕಿಗೆ ಕಳಿಸುತ್ತಿದ್ದರು, ಟೀ-ಕಾಫಿ ತರಲು ಪ್ಲಾಸ್ಕ್ ಕೊಟ್ಟು ನನ್ನ ಕ್ಲಾಸ್‌ಮೇಟ್ ಅನಿತಾಳ ತಂದೆಯ ಹೋಟೆಲ್ಲಿಗೆ ಕಳಿಸುತ್ತಿದ್ದರು... ಬೇರೆ ಯಾರನ್ನೂ ಕರೆಯದೆ ನನ್ನನ್ನೇ ಅವರು ಕರೆಯುತ್ತಿದ್ದಿದ್ದರಿಂದ ಅವರಿಗೆ ನಾನು ಅಚ್ಚುಮೆಚ್ಚು ಎಂದುಕೊಳ್ಳುತ್ತಿದ್ದೆ; ಈಗಲೂ ಸಹ. ಇದು ಬಿಟ್ಟರೆ ನನ್ನ ಓದಿನುದ್ದಕ್ಕೂ ನಾನು ಯಾವ ಟೀಚರ‍್ರುಗಳಿಗೂ ಫೇವರಿಟ್ ಸ್ಟೂಡೆಂಟ್ ಇತ್ಯಾದಿ ಅಂತೆಲ್ಲ ವಿಶೇಷ ಕೊಂಬು ಕಹಳೆಯನ್ನೇನೂ ಹೊಂದಿರಲಿಲ್ಲ.
ಇದಕ್ಕೆ ಇನ್ನೂ ಒಂದು ಕಾರಣವಿತ್ತು. ಮೊದಲಿನಿಂದಲೂ ನಾನು ಕ್ಲಾಸಿನಲ್ಲಿ ಪಾಠಕ್ಕೆ ಸಂಬಂಧಿಸಿದಂತೆ ಏನೇ ಡೌಟುಗಳು ಬಂದರೂ ಕೇಳುತ್ತಿದ್ದೆ. ಇದು ನಾನು ಕಲಿತ ಶಾಲೆ-ಕಾಲೇಜಿನ ಬಹುತೇಕ ಟೀಚರ‍್ರುಗಳಿಗೆ ಪಥ್ಯವಾಗುತ್ತಿರಲಿಲ್ಲ. ಟೀಚರ‍್ರುಗಳೆದುರು ಅತಿ ವಿನಯದಿಂದ ನಡೆದುಕೊಂಡು ಸಿಕ್ಕಸಿಕ್ಕಲ್ಲಿ ನಮಸ್ತೆ ಹೊಡೆಯುತ್ತಿರಲಿಲ್ಲ. ಹೈಸ್ಕೂಲಿಗೆ ಬರುವ ಹೊತ್ತಿಗೆ ಟೀಚರ‍್ರುಗಳು ಹೊಡೆಯುವುದು ತಪ್ಪು ಎನ್ನುವುದು ಗೊತ್ತಾಗಿ, ಅದರ ವಿರುದ್ಧವೂ ಮಾತನಾಡಿದ್ದೆ. ಇಂತಹ ಕಾರಣಗಳಿಂದಲೇ ನಾನು ಒಂದನೇ ತರಗತಿಯಿಂದಲೂ ಯಾವ ಟೀಚರ‍್ರುಗಳಿಗೂ ’ಸ್ಟೂಡೆಂಟ್ ಇದ್ದರೆ ಗಣೇಶನ್ಹಂಗೆ ಇರಬೇಕು’ ಎನ್ನುವಂತೆ ಆದರ್ಶ ವಿದ್ಯಾರ್ಥಿ ಆಗಿರಲಿಲ್ಲ.
ಆದರೆ ಕ್ಲಾಸಿನ ಲೀಡರ‍್ರಾಗು, ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗು, ಆಗಾಗ ಸಣ್ಣಪುಟ್ಟ ಭಾಷಣ ಮಾಡು... ಎಂದೆಲ್ಲ ಅಂದರೆ ನಾನೂ ಭಾಗವಹಿಸುತ್ತಿದ್ದೆ. ಮತ್ತು ಪ್ರೈಮರಿ ಸ್ಕೂಲಿನಂದಲೂ ಈ ಎಲ್ಲಾ ಸೌಭಾಗ್ಯಗಳೂ ನನ್ನದಾಗಿದ್ದವು. ಈ ಸೌಭಾಗ್ಯ ನನ್ನದಾಗಿದ್ದರಿಂದಲೇ ಆಗ ನಮಗೆ ಗಣಿತ ಪಾಠ ಮಾಡುತ್ತಿದ್ದ ಕೊಳವಿ ಸರ್‌ ಅವರು ಬರೆದ ಈ ಪತ್ರ ನನ್ನ ಹೆಸರಿಗೆ ಬಂದಿರಬೇಕು! ಪತ್ರಗಳೇ ಮನುಷ್ಯ ಸಂಬಂಧದ ಜೀವಾಳವಾಗಿದ್ದ ಕಾಲದಲ್ಲಿ ನನಗೆ ಬಂದಿದ್ದ ಒಂದಿಷ್ಟು ಪತ್ರಗಳನ್ನು ಎತ್ತಿಟ್ಟುಕೊಂಡಿದ್ದೇನಲ್ಲ, ಅದರ ನಡುವೆ ಮೊನ್ನೆ ಸಿಕ್ಕಿದ್ದು ಕೊಳವಿ ಸರ್‌ ನಮ್ಮ ಕ್ಲಾಸಿನವರಿಗೆ ಆದರೆ ನನ್ನ ಅಡ್ರೆಸ್ಸಿಗೆ ಬರೆದ ಈ ಪತ್ರ.
ಎಂಟನೇ ತರಗತಿಗೆ ಬರುವವರೆಗೂ ಗಣಿತ ಎನ್ನುವುದು ನನಗೆ ಥೇಟು ಕಬ್ಬಿಣದ ಕಡಲೆಯೇ. ಶಕ್ತಿ ಇದೆ ಎಂದು ಎಷ್ಟೇ ಜೋರಾಗಿ ಕಚ್ಚಲು ಹೋದರೂ ತಪ್ಪಿಸಿಕೊಳ್ಳುತ್ತಿದ್ದ ಕಬ್ಬಿಣದ ಕಡಲೆಯನ್ನು ಹೇಗೆ ಮೆತ್ತಗಾಗಿಸುವುದು ಎನ್ನುವುದನ್ನು ಎಂಟನೇ ತರಗತಿಯವರೆಗೂ ಒಬ್ಬೇ ಒಬ್ಬ ಟೀಚರ‍್ರೂ ನನಗೆ ಹೇಳಿಕೊಡಲಿಲ್ಲ. ಆದರೆ ಹೈಸ್ಕೂಲಿಗೆ ಬಂದತಕ್ಷಣ ಸಿಕ್ಕ ಕೊಳವಿ ಸರ್‌ ಗಣಿತವನ್ನು ಹೇಳಿಕೊಡುತ್ತಿದ್ದ ರೀತಿಯಿಂದಲೇ ನನಗೆ ಗಣಿತವನ್ನೂ ನಾನು ಅರ್ಥ ಮಾಡಿಕೊಳ್ಳಬಹುದು, ಪ್ರಮೇಯಗಳನ್ನು ಬಿಡಿಸಬಹುದು ಎನ್ನುವ ನಂಬಿಕೆ ನನ್ನೊಳಗೆ ಹುಟ್ಟಿತು. ಆಗ ಹೈಸ್ಕೂಲಿನ ಎದುರಿಗೇ ಇದ್ದ ದಿವಾಕರಣ್ಣನ ಕಟ್ಟಡದಲ್ಲಿದ್ದ ಸರ್ಕಾರಿ ಹಾಸ್ಟೆಲ್ಲಿನ ಹುಡುಗರಿಗೆ ಕೊಳವಿ ಸರ್‌ ಪ್ರತೀ ಸಂಜೆ ಗಣಿತದ ಸ್ಪೆಶಲ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದರು. ಹಾಸ್ಟೆಲ್ಲಿನಲ್ಲಿ ನನ್ನ ಅವತ್ತಿನ ಫ್ರೆಂಡುಗಳಾದ ಬೆಳ್ಳೂರಿನ ವಸಂತ್‌ಕುಮಾರ್‌, ಕರಿನಗೊಳ್ಳಿ ಉಮೇಶ, ಆನೆಗದ್ದೆ ವಿಶ್ವನಾಥನೂ ಇದ್ದಿದ್ದರಿಂದ ಆಗಾಗ ನಾನೂ ಹಾಸ್ಟೆಲ್ಲಿಗೆ ಹೋಗುತ್ತಿದ್ದೆ. ಮತ್ತು ಅವರು ಹೇಳಿ, ನಾನೂ ಹಾಸ್ಟೆಲ್ ಹುಡುಗರಿಗೆ ಕೊಳವಿ ಸರ್‌ ತೆಗೆದುಕೊಳ್ಳುತ್ತಿದ್ದ ಗಣಿತದ ಸ್ಪೆಶಲ್ ಕ್ಲಾಸಿಗೂ ಹೋಗಲಾರಂಭಿಸಿದೆ. ಅಲ್ಲಿ ಅವರು ಮಾಡುತ್ತಿದ್ದ ಪಾಠದಿಂದಲೂ ಗಣಿತ ಕಬ್ಬಿಣದ ಕಡಲೆಯೇ ಆದರೂ, ಹೊಡೆಯಬೇಕಾದ ಕಡೆ ಹೊಡೆದರೆ ಅದು ಸಣ್ಣ ಸಣ್ಣ ತುಣುಕುಗಳಾಗಿ ಒಡೆದು ಹೇಗಾದರೂ ಜಗಿದು ಜೀರ್ಣಿಸಿಕೊಳ್ಳಬಹುದು ಅನ್ನಿಸಿತ್ತು. ಮತ್ತು ಎಂಟನೇ ತರಗತಿಯಲ್ಲಿ ಒಳ್ಳೆಯ ಸ್ಕೋರ್‌ ಕೂಡಾ ಆಗಿತ್ತು. ಒಂಭತ್ತು ಮತ್ತು ಹತ್ತನೇ ತರಗತಿಯಲ್ಲೂ ಅವರೇ ಇದ್ದಿದ್ದರೆ ಬದುಕಿನ ದಿಕ್ಕೇ ಬೇರೆಯಾಗಿಬಿಡುತ್ತಿತ್ತೇನೋ...
ಬದುಕಿನಲ್ಲಿ ಏನು ಬರೆದಿದೆ ಎಂದು ಪುಟ ತೆರೆದುಕೊಳ್ಳದೆ ಯಾರಿಗೆ ಹೇಗೆ ತಾನೇ ತಿಳಿಯುತ್ತದೆ?
ನಾವು ಒಂಭತ್ತನೇ ತರಗತಿಯಲ್ಲಿದ್ದಾಗ, ಕೊಳವಿ ಸರ್‌ ತಾವೇ ಇಚ್ಛೆ ಪಟ್ಟು ಕೆಎಸ್‌ಬಿ ಸರ್‌ ಜೊತೆ ನಮ್ಮ ಶಾಲೆಯಿಂದ ತಮ್ಮ ಊರಾದ ಸವಸುದ್ದಿಗೆ ವರ್ಗಾವಣೆ ಮಾಡಿಸಿಕೊಂಡು ಹೊರಟು ಹೋದರು. ಅಷ್ಟೇ. ಗಣಿತ ಮತ್ತೆ ಮುನಿಸಿಕೊಂಡಿತು. ಜಗಿದಷ್ಟೂ ಬಾಯೊಳಗೆ ಅಲ್ಲಿಂದಲ್ಲಿಗೆ ತಪ್ಪಿಸಿಕೊಳ್ಳುತ್ತಿತ್ತು ಬಿಟ್ಟರೆ ಅದು ಸರಿಯಾಗಿ ಹಲ್ಲಿಗೆ ಸಿಕ್ಕಲಿಲ್ಲ, ಪುಡಿಯಾಗಲೂ ಇಲ್ಲ. ಆದ್ದರಿಂದಲೇ ಎಸ್‌.ಎಸ್‌.ಎಲ್‌.ಸಿಯಲ್ಲಿ ಗಣಿತ ಫೇಲಾಗಿ, ಶಿಕ್ಷಣ ಇಲಾಖೆ ಈ ಬದುಕಿಗೆ ಭರ್ತಿ ಒಂದು ವರ್ಷದ ರಜೆ ಕೊಟ್ಟು ಬಿಟ್ಟಿತು!

ಬಹುಶಃ ಕೊಳವಿ ಸರ್‌ ಇನ್ನೊಂದೆರಡು ವರ್ಷ ಕೋಡೂರಿನ ಹೈಸ್ಕೂಲಿನಲ್ಲೇ ಇದ್ದಿದ್ದರೆ ನಾನು ಗಣಿತದಲ್ಲಿಯೂ ಒಳ್ಳೆಯ ಸ್ಕೋರಿನೊಂದಿಗೇ ಎಸ್ಸೆಸ್ಸೆಲ್ಸಿ ಪಾಸಾಗುತ್ತಿದ್ದೆನೇನೋ. ಜೊತೆಗೆ ನನ್ನ ಬದುಕಿನ ದಿಕ್ಕೂ ಬೇರೆಯದೇ ಆಗಿರುತ್ತಿತ್ತು. ಹಾಗಾಗಲಿಲ್ಲ... ಹೀಗಾಗಿಬಿಟ್ಟಿತು. ಮತ್ತು ಕೊಳವಿ ಸರ್‌ ನಮಗೆಲ್ಲ ಬರೆದ ಈ ಪತ್ರ ಇಷ್ಟೆಲ್ಲ ನೆನಪುಗಳನ್ನು ಅಗೆದು ಹಾಕುವಂತೆಯೂ ಮಾಡಿತು.
ಒಬ್ಬ ಶಿಕ್ಷಕನಿಗೆ ತನ್ನ ವಿದ್ಯಾರ್ಥಿಗಳ ಬಗ್ಗೆ ಎಷ್ಟು ಕಾಳಜಿ ಇರಬೇಕು ಎನ್ನುವುದಕ್ಕೆ ಅವರು ನಮಗೆಲ್ಲ ಬರೆದ ಈ ಪತ್ರವೇ ಸಾಕ್ಷಿ. ಈ ಪತ್ರದ ಪ್ರತೀ ಸಾಲಿನಲ್ಲೂ ಅವರು ನಮ್ಮೆಲ್ಲರ ಬದುಕಿನ ಗೆಲುವನ್ನೇ ಹಾರೈಸಿದ್ದಾರೆ. ಮತ್ತು ಬದುಕಿನಲ್ಲಿ ಕೊನೆಗೆ ಉಳಿಯುವುದು ಪ್ರೀತಿ ವಿಶ್ವಾಸವೇ ಹೊರತು ಬೇರೇನೂ ಅಲ್ಲ ಎಂದು ಹೇಳುವ ಅವರು, ದೂರದ ಊರಿನಲ್ಲಿದ್ದುಕೊಂಡು ನಾನು ಹೇಳುವ ಈ ಉಪದೇಶ ನಿಮ್ಮ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎನ್ನುವ ನಂಬಿಕೆ ನನಗಿದೆ ಎನ್ನುತ್ತಾ, ಅವರು ನಮ್ಮೆದುರಿದ್ದಾಗ ಅವರ ಮಾತುಗಳ ಬಗ್ಗೆ ನಾವು ತಾಳುತ್ತಿದ್ದ ನಿರ್ಲಕ್ಷ್ಯ ಎಂತಹದ್ದು ಎನ್ನುವುದನ್ನು ಹೇಳುವ ಮೂಲಕವೂ ನಮ್ಮನ್ನು ಎಚ್ಚರಿಸಿದ್ದಾರೆ. ಹಾಗೂ ನಮ್ಮಲ್ಲಿರುವುದನ್ನು ಕಳೆದುಕೊಂಡ ಮೇಲೇ ನಮಗೆ ಅದರ ಬೆಲೆ ತಿಳಿಯುತ್ತದೆ ಎನ್ನುವ ಸೂಕ್ಷ್ಮವನ್ನೂ ಅವರು ದಾಟಿಸಿದ್ದಾರೆ.
ಆದ್ದರಿಂದಲೇ ನನ್ನ ಸಂಗ್ರಹದಲ್ಲಿರುವ ಪತ್ರಗಳಲ್ಲಿ ಕೊಳವಿ ಸರ್‌ ಆಗ ಹತ್ತನೇ ತರಗತಿ ಓದುತ್ತಿದ್ದ ನಮ್ಮೆಲ್ಲರಿಗೂ ಬರೆದ ಈ ಪತ್ರ ಬದುಕಿನ ಹಲವು ಕ್ಷಣಗಳನ್ನು ಕೆದಕುವ, ಕೆದಕಿ ಎಚ್ಚರಿಸುವ ಪತ್ರದಂತೆ ಕಾಣುತ್ತದೆ.
-ಆರುಡೋ ಗಣೇಶ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆ ಕ್ಷಣದಲ್ಲಿ ಶರತ್‌ ಸಾವಿನೆದುರು ಅದೆಷ್ಟು ಅಸಹಾಯಕ!!

ಈಗ ಆರು ಪಾಸಾಗಿ ಏಳು...

ಒಂಟಿತನ ಎಂದರೆ ಜವಾಬ್ದಾರಿಯಿಂದ ಜಾರಿಕೊಳ್ಳುವುದಾ?!