ಅಣ್ಣಾ ಅವಸರವೇನಿತ್ತು?


ಎಪ್ಪತ್ತೇಳು.
ಸಾಧನೆಗಳು ತಂದುಕೊಟ್ಟ ಸಂತಸ, ನೆಮ್ಮದಿಯಿಂದಿದ್ದ ಕೌಟುಂಬಿಕ ಜೀವನ, ಬೇರೆಯವರ ಬಗ್ಗೆ ಸದಾ ಒಳ್ಳೆಯದನ್ನೇ ಯೋಚಿಸುವ ಮಗು ಮನಸ್ಸು, ಊಟದಲ್ಲಿದ್ದ ಅಚ್ಚುಕಟ್ಟುತನ, ಯೋಗ-ವ್ಯಾಯಾಮದಲ್ಲಿ ಹದಗೊಂಡಿದ್ದ ಆರೋಗ್ಯವಂತ ದೇಹ ಮತ್ತು ಬದುಕಿನಲ್ಲಿ ರೂಢಿಸಿಕೊಂಡಿದ್ದ ಶಿಸ್ತಿನೆದುರು ಎಪ್ಪತ್ತೇಳು ಎನ್ನುವುದು ಮಹಾ ದೊಡ್ಡ ವಯಸ್ಸೇನಲ್ಲ. ಎಂತೆಂತಹವರೋ ನೂರು ತಲುಪುತ್ತಾರೆ. ಅವಶ್ಯಕತೆಯಿಲ್ಲದವರೂ ಸರಾಗವಾಗಿ ನೂರರ ತನಕ ನಡೆದು ಬಿಡುತ್ತಾರೆ. ಅಂತಹದ್ದರಲ್ಲಿ ಬರೀ ಎಪ್ಪತ್ತೇಳನೇ ವಯಸ್ಸಿನಲ್ಲೇ ನಮ್ಮೆಲ್ಲರ ಪ್ರೀತಿಯ ಅಣ್ಣಾ ಯಾಕೆ ಅವಸರಿಸಿಬಿಟ್ಟರು? ನಾವೆಲ್ಲರೂ ಮತ್ತು ನಮ್ಮೆಲ್ಲರ ಪ್ರೀತಿ ಅವರಿಗೆ ಇಷ್ಟೊಂದು ಬೇಗ ಬೇಡವಾಗಿಬಿಟ್ಟಿತಾ?
ರಾಜ್‌ಕುಮಾರ್ ಅಗಲಿಕೆಯ ಸುದ್ದಿ ನನ್ನ ಕಿವಿಗೆ ಬೀಳುತ್ತಿದ್ದಂತೆ ನಾನು ಮೊದಲು ಕೇಳಿಕೊಂಡಿದ್ದೇ ಈ ಪ್ರಶ್ನೆಯನ್ನು. ಇವತ್ತಿಗಷ್ಟೇ ಅಲ್ಲದೇ ನಾಳೆ, ನಾಡಿದ್ದು, ಅದರಾಚೆಯೂ ನಾನು ಈ ಪ್ರಶ್ನೆಯನ್ನು ಕೇಳಿಕೊಳ್ಳುತ್ತಲೇ ಇರುತ್ತೇನೆ. ಯಾಕೆಂದರೆ ಅಣ್ಣಾ ಮಾಡಿದ ಅವಸರ ನನ್ನಲ್ಲೊಂದು ಅನಾಥ ಭಾವವನ್ನು ತುಂಬಿ ಹೋಗಿದೆ, ಭಯವನ್ನು ಹುಟ್ಟು ಹಾಕಿದೆ, ಮುಂದೇನು ಎಂಬ ಆತಂಕಕ್ಕೆ ಕಾರಣವಾಗಿದೆ. ಆದ್ದರಿಂದಲೇ ನಾನು ಪ್ರತಿಕ್ಷಣವೂ ಅಣ್ಣನ ನೆನಪಾದಾಗಲೆಲ್ಲಾ ’ಅಣ್ಣಾ ಅವಸರವೇನಿತ್ತು?’ ಎಂದು ಕೇಳುತ್ತಲೇ ಇದ್ದೇನೆ.
ರಾಜ್‌ಕುಮಾರ್ ಕೇವಲ ಒಬ್ಬ ನಟರಾಗಿದ್ದಿದ್ದರೆ ನನ್ನೊಂದಿಗೆ ಆರು ಕೋಟಿ ಕನ್ನಡಿಗರನ್ನು ಈ ಭಯ, ಆತಂಕ ಮತ್ತು ಅನಾಥಪ್ರಜ್ಞೆ ಇಷ್ಟು ದಟ್ಟವಾಗಿ ಕಾಡುತ್ತಿರಲಿಲ್ಲವೇನೋ. ಆದರೆ ರಾಜ್‌ಕುಮಾರ್ ಮಹಾನ್ ನಟರಾಗುವುದರ ಜೊತೆಗೆ, ದೇಶ ಕಂಡ ಅಸಾಮಾನ್ಯ ಮನುಷ್ಯನಾಗಿದ್ದರು. ಈ ಹಿಂದಿನ ಮತ್ತು ಈಗಿನ ತಲೆಮಾರುಗಳಿಗೆ ಮಾತ್ರವಲ್ಲದೇ ಮುಂದಿನ ಹತ್ತಾರು ತಲೆಮಾರುಗಳಿಗೆ ಆದರ್ಶವಾಗಿದ್ದರು. ಕನ್ನಡಕ್ಕೊಂದು ಕೇಂದ್ರಬಿಂದುವಾಗಿದ್ದರು. ಆದ್ದರಿಂದಲೇ ರಾಜ್‌ಕುಮಾರ್ ಅಗಲಿಕೆಯನ್ನು ಒಪ್ಪಿಕೊಳ್ಳಲು ಮನಸ್ಸು ತಯಾರಾಗುತ್ತಿಲ್ಲ.
ಅವರು ಈ ನಾಡಿಗೆ ಎಲ್ಲವೂ ಆಗಿದ್ದರು. ಆದರೆ ಅವರ ಪ್ರತಿ ಮಾತು, ನಡವಳಿಕೆ ಮತ್ತು ಬದುಕಿನ ರೀತಿಯೆಲ್ಲವೂ ತಾನೇನೂ ಅಲ್ಲ ಎಂಬಂತೆಯೇ ಇರುತ್ತಿದ್ದವು. ಈ ಕಾರಣದಿಂದಲೇ ನಾನು ರಾಜ್‌ಕುಮಾರ್‌ರವರನ್ನು ತುಂಬಾ ಇಷ್ಟ ಪಡುತ್ತಿದ್ದೆನಾ? ಹೌದು ಅಂತಲೇ ಅನ್ನಿಸುತ್ತದೆ. ಗಾಂಧಿಯ ಬಗ್ಗೆ ಕೇಳಿದ್ದೇನೆ, ಓದಿದ್ದೇನೆ. ಆದರೆ ಅವರನ್ನು ಹತ್ತಿರದಿಂದ ನೋಡುವ ಅವಕಾಶ ಸಿಗುವಷ್ಟು ವಯಸ್ಸಿನಲ್ಲಿ ನಾನು ದೊಡ್ಡವನಲ್ಲ. ಆದರೂ ಗಾಂಧಿ ನನ್ನ ಬದುಕಿಗೆ ಇವತ್ತೂ ಆದರ್ಶವಾದವರು. ಆದರೆ ರಾಜ್‌ಕುಮಾರ್ ಬಗ್ಗೆ ನಾನು ಚಿಕ್ಕವನಿರುವಾಗಲೇ ಕೇಳಿದ್ದೆ. ಅವರ ಚಿತ್ರಗಳನ್ನು ನೋಡಿದ್ದೆ. ಹೈಸ್ಕೂಲಿನಲ್ಲಿದ್ದಾಗಲೇ ನಮ್ಮ ತಾಲ್ಲೂಕಿನ ಶಾಸಕರ ಮಗಳ ಮದುವೆಗೆ ಬಂದ ರಾಜ್‌ಕುಮಾರ್‌ರವರನ್ನು ತಳ್ಳಾಟಗಳ ನಡುವೆ ನೋಡುವ ಅವಕಾಶ ಸಿಕ್ಕಿತ್ತು. ಅವರ ಕೈ ಮುಟ್ಟಿ ಪುಳಕಗೊಳ್ಳುವ ಸೌಭಾಗ್ಯವೂ ನನ್ನದಾಗಿತ್ತು. ಡಿಗ್ರಿಗೆ ಬರುವ ಹೊತ್ತಿಗಾಗಲೇ ರಾಜ್ ಬದುಕಿನ ಸರಳತೆಗಳು ಮತ್ತು ಕನ್ನಡಕ್ಕಾಗಿ ಪ್ರಾಮಾಣಿಕವಾಗಿ ಹೋರಾಡುವ ಅವರ ಮನಸ್ಸಿನ ಬಗ್ಗೆ ಗೊತ್ತಾಗಿತ್ತು. ಬೆಂಗಳೂರಿಗೆ ಬಂದು ಅಲೆದಾಡುವಾಗ, ರಾಜ್‌ಕುಮಾರ್ ಬದುಕಿನಲ್ಲಿದ್ದ ಶಿಸ್ತು ಮತ್ತು ಅವರು ಹೋರಾಟಕ್ಕೆ ಕರೆಯಿತ್ತರೆ ಬಂದು ಸೇರುತ್ತಿದ್ದ ಕನ್ನಡಿಗರ ಉತ್ಸಾಹ ಪರಿಪೂರ್ಣವಾಗಿ ಅರ್ಥವಾಗಿತ್ತು. ಇಷ್ಟರ ಮೇಲೆ ನಾನು ರಾಜ್‌ಕುಮಾರ್‌ರವರನ್ನು ಅಣ್ಣಾ ಎಂದುಕೊಳ್ಳದಿರಲು ಮತ್ತು ಅವರನ್ನು ದೂರ ನಿಂತೇ ಪ್ರೀತಿಸದಿರಲು ಕಾರಣಗಳಾದರೂ ಹೇಗೆ ಸಿಕ್ಕಾವು?
ಸಿಗಲಿಲ್ಲ. ಹಾಗೆಂದು ನಾನು ಅಣ್ಣನೆಡೆಗಿನ ಪ್ರೀತಿಯನ್ನು ಎಲ್ಲಿಯೂ ತೋರಿಸಿಕೊಳ್ಳಲು ಹೋಗಲಿಲ್ಲ. ನನ್ನ ಪಾಡಿಗೆ ನಾನಿದ್ದು ಬಿಟ್ಟೆ. ನನ್ನ ರಾಜ್‌ಕುಮಾರ್‌ರವರನ್ನು ಅವಕಾಶ ಸಿಕ್ಕಾಗಲೆಲ್ಲ ಸಮರ್ಥಿಸಿಕೊಳ್ಳುತ್ತಾ ಹೋದೆ. ರಾಜ್ ನಟನೆಯ ಬಗ್ಗೆ ಯಾರೇನೇ ಕಿಂಡಲ್ ಮಾಡಿದರೂ, ನಾನು ಯಾರ‍್ಯಾರದ್ದೋ ಮನೆಯ ಕಪ್ಪು-ಬಿಳುಪು ಟಿ.ವಿಯಲ್ಲಿ ಬೀಳುವ ಮಂಡಕ್ಕಿಗಳ ನಡುವೆ ರಾಜ್ ನಟನೆಯನ್ನು ಮೆಚ್ಚಿಕೊಳ್ಳುತ್ತಿದ್ದೆ. ಅಂತಹ ಮೆಚ್ಚುಗೆಯ ನಡುವೆಯೇ ರಾಜ್‌ಕುಮಾರ್‌ರವರ ಭಾವಚಿತ್ರಗಳನ್ನು ಸಂಗ್ರಹಿಸುವ ಕೆಲಸಕ್ಕೂ ಬಿದ್ದಿದ್ದೆ. ಇಷ್ಟಕ್ಕೂ ಕೋಡೂರಿನಂತಹ ಹಳ್ಳಿಯಲ್ಲಿ ಒಟ್ಟು ಹಾಕಲಿಕ್ಕೆ ರಾಜ್‌ಕುಮಾರ್ ಚಿತ್ರಗಳಾದರೂ ಎಲ್ಲಿ ಸಿಕ್ಕಾವು? ದಿನಪತ್ರಿಕೆಗಳ ಸಿನಿಮಾ ಪುರವಣಿಯನ್ನು ನಮ್ಮ ಪಪ್ಪ-ಅಮ್ಮನ ಹೆದರಿಕೆಯಿಲ್ಲದೇ ಆರಾಮಾಗಿ ನೋಡುವ ಹೊತ್ತಿಗಾಗಲೇ ರಾಜ್ ನಟನೆಗೊಂದು ಅಲ್ಪವಿರಾಮ ಬಿದ್ದಿತ್ತು. ಆದ್ದರಿಂದ ರಾಜ್ ಚಿತ್ರಗಳೂ ಸಿಗುತ್ತಿರಲಿಲ್ಲ. ಹೊಸನಗರದ ಸಂತೆಯಲ್ಲಿ ಸಿಗುತ್ತಿದ್ದ ಐದ್ಹತ್ತು ರೂಪಾಯಿ ಪೋಸ್ಟರ್‌ಗಳನ್ನು ಕೊಂಡುಕೊಂಡರೂ, ಅದನ್ನು ಪಪ್ಪನಿಗೆ ಕಾಣದಂತೆ ಎಲ್ಲಿಟ್ಟುಕೊಳ್ಳುವುದು ಎಂಬುದು ಅಂತಾರಾಷ್ಟ್ರೀಯ ಮಟ್ಟದ ಸಮಸ್ಯೆಯಾಗಿ ತಲೆಬಿಸಿ ಮಾಡುತ್ತಿತ್ತು. ಆದರೂ ಒಂದಿಷ್ಟು ಪತ್ರಿಕೆಗಳಲ್ಲಿ ಬಂದ ರಾಜ್‌ಕುಮಾರ್ ಚಿತ್ರಗಳು ನನ್ನ ಸಂಗ್ರಹ ಸೇರಿತ್ತು.
ಹೀಗಿರುವಾಗಲೇ ಸ್ಟುಡಿಯೋದಲ್ಲಿ ಫೋಟೋಗ್ರಫಿ ತರಬೇತಿ ಅವಕಾಶ ನನಗೊದಗಿ ಬಂದಿದ್ದು! ಎಸ್ಸೆಸ್ಸೆಲ್ಸಿ ಫೇಲಾಗಿ ಹೊಸನಗರದ ಸ್ಟುಡಿಯೋವೊಂದರಲ್ಲಿ ಒಂದು ವರ್ಷದ ಮಟ್ಟಿಗೆ ಫೋಟೋ ತೆಗೆಯುವುದನ್ನು ಕಲಿಯೋಣ ಎಂದು ಸೇರಿಕೊಂಡವನಿಗೆ, ಬಿಡುವಿದ್ದಾಗ ಸ್ಟುಡಿಯೋದಲ್ಲಿ ಹಳೇ ಪೆಟ್ಟಿಗೆಗಳಲ್ಲಿರುತ್ತಿದ್ದ ರಾಶಿ ರಾಶಿ ಫೋಟೋಗಳನ್ನು ನೋಡುವ ಅವಕಾಶವೂ ಸಿಗುತ್ತಿತ್ತು. ಹಾಗೆ ಹಳೇ ಪೆಟ್ಟಿಗೆಯನ್ನು ಹುಡುಕುತ್ತಿದ್ದಾಗಲೇ ನನಗೆ ಮೊದಲ ಬಾರಿ ರಾಜ್‌ಕುಮಾರ್ ಫೋಟೋಗಳು ಸಿಕ್ಕಿದ್ದು! ಹೌದು, ಹಾಗೆ ಸ್ಟುಡಿಯೋದಲ್ಲಿ ಸಿಕ್ಕ ಫೋಟೋಗಳೇ ನನ್ನ ಕೈಗೆ ಸಿಕ್ಕ ರಾಜ್‌ಕುಮಾರ್‌ರವರ ಮೊದಲ ಒರಿಜಿನಲ್ ಫೋಟೋಗಳು. ರಾಜ್‌ಕುಮಾರ್ ’ಆಕಸ್ಮಿಕ’ ಚಿತ್ರದ ಶೂಟಿಂಗ್‌ಗಾಗಿ ಹೊಸನಗರ, ತೀರ್ಥಹಳ್ಳಿ, ಸಾಗರಕ್ಕೆಲ್ಲ ಬಂದಾಗ, ನಮ್ಮ ಸ್ಟುಡಿಯೋದವರೂ ಹೋಗಿ ಫೋಟೋ ತೆಗೆದುಕೊಂಡು ಬಂದಿದ್ದರು. ಅಲ್ಲಿ ರಾಜ್‌ಕುಮಾರ್ ಜೊತೆ ನಿಂತು ಅತ್ಯುತ್ಸಾಹದಿಂದ ಫೋಟೋ ತೆಗೆಸಿಕೊಂಡವರಿಗೆ, ನಂತರ ಅವುಗಳನ್ನು ದುಡ್ಡು ಕೊಟ್ಟು ತೆಗೆದುಕೊಂಡು ಹೋಗಲಾಗುತ್ತಿರಲಿಲ್ಲ. ಅಂತಹ ಫೋಟೋಗಳೇ ನನಗೆ ಸಿಕ್ಕಿದ್ದು. ಪಕ್ಕದಲ್ಲಿ ಯಾರಿದ್ದರೇನು, ಮಧ್ಯದಲ್ಲಿ ರಾಜ್‌ಕುಮಾರ್ ಇದ್ದಾರಲ್ಲ ಎಂಬ ಕಾರಣಕ್ಕೆ ನಾನು ಆ ಫೋಟೋಗಳನ್ನೆಲ್ಲ ತೆಗೆದಿಟ್ಟುಕೊಂಡೆ. ಆ ಫೋಟೋಗಳು ಇವತ್ತಿಗೂ ನನ್ನ ಸಂಗ್ರಹದಲ್ಲಿ ಬೆಚ್ಚಗಿವೆ. ಈ ರೀತಿಯಾಗಿ ಫೋಟೋಗಳು ಕೈಗೆ ಸಿಕ್ಕ ಸ್ವಲ್ಪ ದಿನಕ್ಕೇ ರಾಜ್‌ಕುಮಾರ್‌ರವರನ್ನು ನೇರವಾಗಿ ನೋಡುವ ಅವಕಾಶ ನನಗೊದಗಿ ಬಂದಿತ್ತು.
ಪಿ.ಯು.ಸಿ ಮತ್ತು ಡಿಗ್ರಿಗೆ ಹೋಗುವ ಹೊತ್ತಿಗಾಗಲೇ ರಾಜ್‌ಕುಮಾರ್ ನನ್ನ ಪಾಲಿಗೆ ಆದರ್ಶವಾಗಿದ್ದರು. ಅನ್ಯಾಯ ಮತ್ತು ಅಶಿಸ್ತಿನ ವಿರುದ್ಧದ ನನ್ನ ಚಿಕ್ಕಪುಟ್ಟ ಹೋರಾಟಗಳಿಗೆ ಸ್ಫೂರ್ತಿಯಾಗಿದ್ದರು. ಬೆಂಗಳೂರಿಗೆ ಬಂದು ಬೀಳುವ ಹೊತ್ತಿಗೆ, ರಾಜ್‌ಕುಮಾರ್ ಕನ್ನಡಕ್ಕೆ, ಕನ್ನಡನಾಡಿಗೆ ಮತ್ತು ಕನ್ನಡ ಚಿತ್ರರಂಗಕ್ಕೆ ಯಾಕೆ ಮತ್ತು ಎಷ್ಟರ ಮಟ್ಟಿಗೆ ಅನಿವಾರ್ಯ ಎನ್ನುವುದು ಅರ್ಥವಾಗಿ ಹೋಗಿತ್ತು. ಅಂದಿನಿಂದಲೇ ನಾನು ರಾಜ್‌ಕುಮಾರ್‌ರವರನ್ನು ನಮ್ಮೆಲ್ಲರ ಅಣ್ಣಾ ಎಂದುಕೊಳ್ಳತೊಡಗಿದ್ದು ಹಾಗೂ ಅವರು ಇನ್ನೂ ಹತ್ತಾರು ವರ್ಷ ನಮ್ಮೊಂದಿಗಿರಬೇಕು ಎಂದು ಪದೇಪದೇ ಪ್ರಾರ್ಥಿಸುತ್ತಿದ್ದದ್ದು.
ಕನ್ನಡದ ಬಗ್ಗೆ ಮಾತನಾಡಲಾರಂಭಿಸಿದರೆ, ಕನ್ನಡದ ಸಂಸ್ಕೃತಿಯ ಬಗ್ಗೆ ಚರ್ಚೆಗೆ ಕುಳಿತರೆ, ಕನ್ನಡ ಚಲನಚಿತ್ರಗಳ ಬಗ್ಗೆ ಹರಟಲಾರಂಭಿಸಿದರೆ ಮತ್ತು ಇವೆಲ್ಲದರೊಂದಿಗೆ ಮಾನವೀಯತೆ, ಶಿಸ್ತು ಮತ್ತು ಸೌಮ್ಯತೆ ಬಗ್ಗೆ ಮಾತು ತೆಗೆದರೆ ಎಲ್ಲೆಡೆಗೂ ಅನಿವಾರ್ಯವಾದವರು ಇದೇ ಅಣ್ಣಾ ರಾಜ್‌ಕುಮಾರ್. ಅಂದು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಾಂಧೀಜಿ ದೇಶದ ಅದ್ಯಾವುದೋ ಮೂಲೆಯಿಂದ ಹೋರಾಟಕ್ಕೆ ಕರೆ ಕೊಟ್ಟರೆ ಸಾಕಿತ್ತು. ಭಾರತದ ಮೂಲೆ ಮೂಲೆಯಲ್ಲೂ ಹೋರಾಟದ ಕಿಚ್ಚು ಧಗಧಗಿಸಲಾರಂಭಿಸುತ್ತಿತ್ತು. ಅದೇ ರೀತಿಯಲ್ಲಿ ನಮ್ಮ ಕನ್ನಡನಾಡಿನಲ್ಲಿ ಕನ್ನಡದ ಬಗ್ಗೆ ರಾಜ್ ಮಾತನಾಡಿದರೆ ಸಾಕಿತ್ತು, ಅದೆಲ್ಲೆಲ್ಲಿಂದಲೋ ಕನ್ನಡಿಗರು ಜಮಾಯಿಸಿ ಬಿಡುತ್ತಿದ್ದರು. ಆದ್ದರಿಂದಲೇ ಕನ್ನಡ ಭಾಷೆ, ಚಲನಚಿತ್ರ ಮತ್ತು ಕನ್ನಡಿಗರಿಗೆ ಚಿಕ್ಕದೊಂದು ಅಪಾಯ ಸಂಭವಿಸಿದರೂ, ಯಾರು ಬರದಿದ್ದರೂ ಕೊನೆಗೊಬ್ಬ ರಾಜ್‌ಕುಮಾರ್ ಬರುತ್ತಾರೆ ಮತ್ತು ಅವರು ಬಂದರೆ ಎಲ್ಲವೂ ಸರಿಯಾಗುತ್ತದೆ ಎಂಬ ಭಾವನೆ ನಮ್ಮೆಲ್ಲರಲ್ಲಿತ್ತು. ಆ ಭಾವನೆಗೆ ಯಾವತ್ತೂ ಮುಕ್ಕಾಗದಂತೆ ನಡೆದುಕೊಂಡಿದ್ದ ರಾಜ್‌ಕುಮಾರ್, ಅಂತಹ ಕಾರಣಗಳಿಂದಲೇ ನಮ್ಮೆಲ್ಲರ ಪಾಲಿಗೆ ರಾಜನಾದರು, ಅಣ್ಣನಾದರು, ಸರ್ವಸ್ವವೂ ಆದರು.
ಇತ್ತೀಚೆಗೆ ಕನ್ನಡದಲ್ಲಿ ಪರಭಾಷಾ ಚಿತ್ರಗಳ ಹಾವಳಿ ಅತಿಯಾಗಿ ಕನ್ನಡ ಚಿತ್ರಗಳ ಅಳಿವು-ಉಳಿವಿನ ಸಮಸ್ಯೆಯುಂಟಾದಾಗ, ರಾಜ್‌ಕುಮಾರ್ ಬೀದಿಗಿಳಿಯುವ ಸ್ಥಿತಿಯಲ್ಲಿರಲಿಲ್ಲ. ಅವರು ಒಲ್ಲೆ ಎಂದಿದ್ದರೆ, ಅವರನ್ನು ಒತ್ತಾಯಿಸುವುದೂ ಯಾರಿಂದಲೂ ಸಾಧ್ಯವಿರಲಿಲ್ಲ. ಆ ಸಂದರ್ಭದಲ್ಲಿ ಅವರ ಆರೋಗ್ಯವೂ ಹದಗೆಟ್ಟಿತ್ತು. ಆದರೆ ಅದೆಲ್ಲವನ್ನೂ ಬದಿಗಿಟ್ಟ ರಾಜ್‌ಕುಮಾರ್, ಕೇವಲ ಕನ್ನಡ ಚಿತ್ರಗಳನ್ನು ಉಳಿಸಬೇಕೆಂಬ ಒಂದೇ ಕಾರಣಕ್ಕೆ ಬೀದಿಗಿಳಿದರು. ಅವರು ಹೋರಾಟದ ನೇತೃತ್ವ ವಹಿಸುತ್ತಿದ್ದಂತೆ ಜನರು ಸಾಗರವಾದರು. ಧರ್ಮಸಿಂಗ್ ನೇತೃತ್ವದ ಸರ್ಕಾರವೂ ಅದುರಿತು. ಆ ಹೋರಾಟಕ್ಕೊಂದು ಪರಿಹಾರವೂ ಸಿಕ್ಕಿತು. ಹೀಗೆ ಕನ್ನಡದ ಯಾವುದೇ ಚಳುವಳಿಯಾಗಲೀ, ಹೋರಾಟವಾಗಲೀ ಅಲ್ಲಿ ನಮ್ಮ ಅಂತಿಮ ಪರಿಹಾರವಾಗಿ ಕಾಣುತ್ತಿದ್ದವರು ಕನ್ನಡಕ್ಕಾಗಿಯೇ ಬದುಕಿದ್ದ ರಾಜ್‌ಕುಮಾರ್. ಇಂತಹ ರಾಜ್‌ಕುಮಾರ್ ನಮ್ಮನ್ನೆಲ್ಲ ಬಿಟ್ಟು ತಣ್ಣಗೆದ್ದು ನಡೆದುಬಿಟ್ಟಿದ್ದಾರೆಂದರೆ ಆತಂಕವಾಗದೇ ಇದ್ದೀತಾ? ಒಳಗೊಂದು ಭಯ ರೆಕ್ಕೆ ಬಿಚ್ಚದೆ ಸುಮ್ಮನಿದ್ದೀತಾ?
ಬೆಂಗಳೂರಿನಲ್ಲಂತೂ ಕನ್ನಡ ಕಳೆದೇ ಹೋಗಿದೆ. ಇವತ್ತಿನ ಹುಡುಗ-ಹುಡುಗಿಯರು ಕನ್ನಡವನ್ನೇಕೋ ದೂರವೇ ಇಡತೊಡಗಿದ್ದಾರೆ. ಕನ್ನಡ ಭಾಷೆ-ಸಂಸ್ಕೃತಿಯೆಂದರೆ ಅದೇನು ಎಂದು ಕೇಳುವ ಇವರು, ನಮ್ಮದಲ್ಲದ ಸಂಸ್ಕೃತಿಯೊಂದಕ್ಕೆ ಬಿಡುಬೀಸಾಗಿ ಆತುಕೊಳ್ಳುತ್ತಿದ್ದಾರೆ. ಕನ್ನಡದ ಚಲನಚಿತ್ರಗಳಾದರೂ ಕನ್ನಡದ ಸಂಸ್ಕೃತಿಯ ಬೆಳವಣಿಗೆಗೇನಾದರೂ ಮಾಡುತ್ತವಾ ಎಂದರೆ, ಅಲ್ಲಿ ಲಾಂಗು-ಮಚ್ಚುಗಳೇ ಹೋಲ್‌ಸೇಲ್ ದರದಲ್ಲಿ ಮಾರಾಟವಾಗುತ್ತಿವೆ. ಕನ್ನಡ ಕಳೆದ್ಹೋಗ್ತಿದೆ, ಬನ್ರಯ್ಯಾ ಹೋರಾಟ ಮಾಡೋಣ ಎಂದರೆ ನೀನು ಈಗ ಹೋಗಿರು, ನಾನು ಆಮೇಲೆ ಬರ್ತೀನಿ ಎಂಬಂತಹ ಪರಿಸ್ಥಿತಿ ಪರ್ಮನೆಂಟಾಗುತ್ತಿದೆ. ಇಂತಹ ಹೊತ್ತಿನಲ್ಲೇ ರಾಜ್‌ಕುಮಾರ್ ಬೇರೆ ಅವಸರಿಸಿಕೊಂಡು ನಮ್ಮಿಂದ ದೂರ ಹೋಗಿದ್ದಾರೆ. ಇನ್ನು ಮುಂದೆ ಕನ್ನಡಕ್ಕಾಗಿ ಹೋರಾಟ ಮಾಡೋಣ ಎಂದರೆ ಯಾರನ್ನು ನೆಚ್ಚಿಕೊಳ್ಳಬೇಕು? ಯಾರ ಬಳಿ ಹೋಗಿ ನಮ್ಮ ನೋವು-ಆತಂಕವನ್ನೆಲ್ಲ ಹೇಳಿಕೊಳ್ಳಬೇಕು? ಹೀಗೆ ಯೋಚಿಸಿದಾಗಲೇ ಅಣ್ಣಾ ಯಾಕೋ ತುಂಬಾ ತುಂಬಾ ಅವಸರ ಮಾಡಿಬಿಟ್ಟರು ಅನ್ನಿಸುತ್ತದೆ. ನಾವು ಅನಾಥರಾಗಿ ಬಿಟ್ಟೆವು ಎನ್ನುವುದು ಖಾತ್ರಿಯಾಗಿಬಿಡುತ್ತದೆ.
ವೀರಪ್ಪನ್ ಅಪಹರಣ ಪ್ರಕರಣದ ನಂತರ ರಾಜ್‌ಕುಮಾರ್ ಚಿಕ್ಕದೊಂದು ಬೇಸರದಲ್ಲಿದ್ದರು. ತಮ್ಮ ವರದಪ್ಪನವರ ಅಗಲಿಕೆ ಅವರಿಗೊಂದು ದೊಡ್ಡ ಆಘಾತವನ್ನುಂಟು ಮಾಡಿತ್ತು. ಅದನ್ನು ನಾನೂ ಒಪ್ಪಿಕೊಳ್ಳುತ್ತೇನೆ. ಆದರೆ, ರಾಜ್‌ಕುಮಾರ್‌ರವರನ್ನು ಅಣ್ಣಾ ಎಂದುಕೊಂಡ ಆರು ಕೋಟಿ ಕನ್ನಡಿಗರು ಅಣ್ಣನೆಡೆಗೆ ಸ್ವಲ್ಪೇ ಸ್ವಲ್ಪವಾದರೂ ಪ್ರೀತಿಯನ್ನು ಕಡಿಮೆ ಮಾಡಿಕೊಂಡಿದ್ದರಾ? ಅಣ್ಣ ಏನು ಬೇಕೆಂದರೂ ಕೊಡಲು ಯಾರಾದರೊಬ್ಬರು ಹಿಂದೆ ಮುಂದೆ ನೋಡುತ್ತಿದ್ದರಾ? ಅಣ್ಣನ ಹುಟ್ಟುಹಬ್ಬವೆಂದರೆ ನಾಡಿನ ಅದೆಷ್ಟು ಮನೆಗಳಲ್ಲಿ ಪಾಯಸದೂಟವಿರುತ್ತಿತ್ತು? ಹಬ್ಬದ ಸಂಭ್ರಮವಿರುತ್ತಿತ್ತು? ಅಣ್ಣ ಮತ್ತೆ ಬಣ್ಣ ಹಚ್ಚುತ್ತೇನೆ ಎಂದರೆ ಸಾಕು ಆಗಲೇ ಥಿಯೇಟರುಗಳ ಎದುರು ಸ್ಟಾರ್ ಕಟ್ಟುವ ಬಗ್ಗೆ ಅದೆಷ್ಟು ಕೋಟಿ ಜನ ಯೋಚಿಸುತ್ತಿದ್ದರು? ಇರುವ ಬೇಸರವನ್ನೆಲ್ಲಾ ಬದಿಗಿಟ್ಟು, ನಮ್ಮನ್ನೆಲ್ಲ ಒಮ್ಮೆ ಸರಿಯಾಗಿ ನೋಡಿದ್ದರೆ ಅಣ್ಣ ಇಷ್ಟೊಂದು ಅವಸರ ಮಾಡಬೇಕಾಗಿರಲಿಲ್ಲವೇನೋ ಅನ್ನಿಸುತ್ತದೆ.
ಆದರೂ ತೀರಾ ಅವಸರಿಸಿಬಿಟ್ಟರು. ನಮ್ಮನ್ನೆಲ್ಲ ಅನಾಥರನ್ನಾಗಿಸಿಬಿಟ್ಟರು. ಕನ್ನಡಕ್ಕೆ ಇನ್ಯಾರು ದಿಕ್ಕು ಎಂಬ ಆತಂಕವನ್ನು ಹುಟ್ಟು ಹಾಕಿ ಹೋಗಿಬಿಟ್ಟರು. ಅಣ್ಣಾ ನಿಜ ಹೇಳಿ, ನಿಮಗೆ ಅಂತಹ ಅವಸರವೇನಿತ್ತು? ಪ್ಲೀಸ್... ಒಮ್ಮೆ ಉತ್ತರ ಹೇಳಿ. ಇಲ್ಲವಾದರೆ ನಿಮ್ಮ ಮನಸ್ಸಿಗೆ ನೋವಾಗುವಂತೆ ನಾವೇನಾದರೂ ತಪ್ಪಾಗಿ ನಡೆದುಕೊಂಡೆವೇನೋ ಎಂಬ ಕೊರಗು ನಮ್ಮನ್ನು ಕೊನೆಯವರೆಗೂ ಕಾಡುತ್ತಲೇ ಇರುತ್ತದೆ. ನಮ್ಮ ಕಣ್ಣೀರಿಗೆ ಕೊನೆಯೇ ಇಲ್ಲವಾಗುತ್ತದೆ.
(ನನ್ನ ಬರಹದ ಬದುಕಿನ ಮೊದಲ ಪುಸ್ತಕವೇ ನಾನು ಸಂಪಾದಿಸಿದ ’ಅಣ್ಣಾ ಅವಸರವೇನಿತ್ತು?’. ಹದಿಮೂರು ವರ್ಷಗಳ ಹಿಂದೆ ಅವರು ನಮ್ಮನ್ನು ಅಗಲಿ ಹೋದಾಗ ಸಂಪಾದಿಸಿದ ಈ ಪುಸ್ತಕಕ್ಕೆ ಸಂಪಾದಕನಾಗಿ ನನ್ನ ನೆಚ್ಚಿನ ನಟ ರಾಜ್‌ಕುಮಾರ್‌ ಅವರ ಅಗಲಿಕೆ ತಂದುಕೊಟ್ಟ ಅನಾಥಪ್ರಜ್ಞೆಯ ಕುರಿತು ಬರೆದ ಬರಹ ಇದು.)
-ಆರುಡೋ ಗಣೇಶ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆ ಕ್ಷಣದಲ್ಲಿ ಶರತ್‌ ಸಾವಿನೆದುರು ಅದೆಷ್ಟು ಅಸಹಾಯಕ!!

ಅವನು ಅಪ್ಪ ಹೇಳಿದ ಆ ಮಾತನ್ನು ಮರೆಯದೇ ಹೋಗಿದ್ದರೆ...

ಬೆಳಕಾದಳೇ ಅವಳು...?!