ಇಲ್ಲಿ ಕುಳಿತು ಯುದ್ಧದ ಮಾತನಾಡುವ ಬದಲು,ನಾವೇ ಯುದ್ಧಭೂಮಿಗೆ ಹೋಗೋಣ...

ಹೀಗೆ ಮಾಡಬಹುದಾ? ಒಮ್ಮೆ ಗಂಭೀರವಾಗಿ ಯೋಚಿಸೋಣ.
ಉಗ್ರರ ದಾಳಿಯಿಂದ ನಮ್ಮ ನಲ್ವತ್ತಕ್ಕೂ ಹೆಚ್ಚು ಯೋಧರನ್ನು ಕಳೆದುಕೊಂಡಿದ್ದೇವೆ.
ಈ ಹೊತ್ತಿನಲ್ಲಿ ನಮ್ಮೆಲ್ಲರ ಎದೆಯೊಳಗೆ ಪ್ರತೀಕಾರದ ಕಿಡಿಯೊಂದು ಹೊತ್ತಿ ಉರಿಯುತ್ತಿದೆ. ನೆರೆಯ ಶತ್ರು ದೇಶಕ್ಕೆ ತಕ್ಕ ಪಾಠ ಕಲಿಸಲೇಬೇಕೆಂದು ನಾವೆಲ್ಲರೂ ಒತ್ತಾಯಿಸುತ್ತಿದ್ದೇವೆ. ಮುಂದಿನ ನಡೆ ಬಗ್ಗೆ ಸೇನೆಗೆ ಸಂಪೂರ್ಣ ಸ್ವಾತಂತ್ರ‍್ಯ ಕೊಟ್ಟಿದ್ದೇವೆ ಎಂದು ಕೇಂದ್ರ ಸರ್ಕಾರವೂ ಹೇಳಿದೆ. ಯುದ್ಧವಾಗಬೇಕು ಮತ್ತು ಒಮ್ಮೆ ನೆರೆಯ ಶತ್ರು ದೇಶ ಮತ್ತು ಆ ದೇಶ ಸಾಕುತ್ತಿರುವ ಉಗ್ರಗಾಮಿಗಳಿಗೆ ಮುಟ್ಟಿ ನೋಡಿಕೊಳ್ಳುವಂತೆ ಕೊಟ್ಟು ’ನಾವೇನೆಂದು ತೋರಿಸಬೇಕು’ ಎನ್ನುವ ಹುಮ್ಮಸ್ಸೂ ನಮ್ಮೆಲ್ಲರಲ್ಲೂ ಪುಟಿಯುತ್ತಿದೆ.
ಈ ಪ್ರತೀಕಾರಕ್ಕೆ ನಮ್ಮ ಸೈನಿಕರು ಮಾತ್ರವೇ ಯಾಕೆ ಮುನ್ನುಗ್ಗಿ ಹೋಗಬೇಕು.
ನಾವೂ ಹೋಗೋಣವಾ?
ಇದಕ್ಕೆ ನಮ್ಮ ದೇಶ ಮತ್ತು ಸರ್ಕಾರ ಅನುಮತಿ ಕೊಡುತ್ತದೆಯೋ ಇಲ್ಲವೋ ಬೇರೆ ಮಾತು.
ಆದರೂ ನಮ್ಮ ಸೈನಿಕರು ಮಾಡುವ ಕೆಲಸವನ್ನು ಇಲ್ಲಿ ಬೆಚ್ಚಗೆ ಕುಳಿತುಕೊಂಡ ನಾವೂ ಮಾಡೋಣ ಅಥವಾ ಅವರ ಜೊತೆಗೆ ಯುದ್ಧ ಭೂಮಿಯಲ್ಲಿ ನಿಲ್ಲೋಣ.
ಅದಕ್ಕಾಗಿ ಈಗ ಯುದ್ಧ ಮಾಡಲೇಬೇಕೆಂದು ಒತ್ತಾಯಿಸುತ್ತಿರುವ ಈ ದೇಶದ ಪ್ರಜೆಗಳಾದ ನಾವೆಲ್ಲರೂ ಪ್ರಧಾನಿ ಮೋದಿಯವರಿಗೆ, ರಕ್ಷಣಾ ಸಚಿವಾಲಯಕ್ಕೆ ’ಇನ್ನು ನಾವು ಸುಮ್ಮನಿರುವುದು ಬೇಡ, ನಮ್ಮ ಸಹೋದರ ಸೈನಿಕರನ್ನು ಬಲಿ ಪಡೆದುಕೊಂಡ ಉಗ್ರಗಾಮಿಗಳಿಗೆ ಬುದ್ಧಿ ಕಲಿಸಿಯೇ ಬಿಡೋಣ. ಇದಕ್ಕಾಗಿ ಈ ದೇಶದ ಪ್ರಜೆಯಾದ ನಾನು ಕೂಡಾ ನಮ್ಮ ಸೇನೆಯ ಜೊತೆಯಾಗಲು ನಿರ್ಧರಿಸಿದ್ದೇನೆ. ಮತ್ತು ಗಡಿಯಲ್ಲಿ ನಿಂತು ಹೋರಾಡಲು ಬೇಕಾದ ತುರ್ತು ತರಬೇತಿಯನ್ನು ನನಗೂ ನೀಡಿದರೆ ನಾನೂ ಬಂದೂಕು ಹಿಡಿದು ಉಗ್ರಗಾಮಿಗಳನ್ನು ಸದೆ ಬಡಿಯುತ್ತೇನೆ, ಇಲ್ಲದೇ ಹೋದರೆ ಸೈನಿಕರಿಗೆ ಪೂರಕವಾಗಿ ಮಾಡಬೇಕಾದ ಕೆಲಸವನ್ನು ಯುದ್ಧ ಭೂಮಿಯಲ್ಲಿ ನಿಂತು ಮಾಡಲು ನಾನು ಯಾವುದೇ ಸಂಬಳ, ಸವಲತ್ತು ನಿರೀಕ್ಷಿಸದೇ ತಯಾರಾಗಿದ್ದೇನೆ. ದಯವಿಟ್ಟು ಇದಕ್ಕೆ ನನಗೆ ಅನುಮತಿ ನೀಡಿ ಮತ್ತು ಈ ಮೂಲಕ ಈ ದೇಶದ ಪ್ರಜೆಯಾದ ನನಗೆ ಈ ದೇಶದ ಸೇವೆ ಮಾಡಲು, ನನ್ನ ಸಹೋದರರ ಬಲಿದಾನಕ್ಕೆ ಪ್ರತೀಕಾರ ತೆಗೆದುಕೊಳ್ಳಲು ಅನುವು ಮಾಡಿಕೊಡಿ. ಇದು ನಾನು ಸ್ವ ಇಚ್ಛೆಯಿಂದ ತೆಗೆದುಕೊಂಡ ನಿರ್ಧಾರವಾಗಿದ್ದು ಇದರಲ್ಲಿ ಯಾರ ಒತ್ತಾಯವೂ ಇರುವುದಿಲ್ಲ’ ಎನ್ನುವ ಅರ್ಥ ಬರುವ ಪತ್ರವನ್ನು ಬರೆದು ನೋಂದಾಯಿತ ಅಂಚೆಯಲ್ಲಿ ಈ ಕೂಡಲೇ ಕಳಿಸೋಣ. ಮತ್ತು ಹೀಗೆ ನೋಂದಾಯಿತ ಅಂಚೆಯಲ್ಲಿ ಪತ್ರ ಕಳಿಸಿದ್ದರ ಬಗ್ಗೆ ಮತ್ತು ನೋಂದಾಯಿತ ಅಂಚೆ ಕಳಿಸಿರುವ ರಸೀದಿಯನ್ನು ಫೇಸ್ ಬುಕ್ ಸೇರಿದಂತೆ ನಾವು ಕ್ರಿಯಾಶೀಲವಾಗಿರುವ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳೋಣ.
ಇಲ್ಲಿ ಸುಮ್ಮನೆ ಕುಳಿತು ಸೇನೆ, ಸೈನಿಕ, ಯುದ್ಧ, ಪ್ರತೀಕಾರ... ಎಂದೆಲ್ಲ ಮಾತನಾಡುವುದಕ್ಕಿಂತ ನಾವೇ ಯುದ್ಧಭೂಮಿಗೆ ತೆರಳಿ ನಮ್ಮ ಸೇನೆಯ ಜೊತೆಯಾಗೋಣ. ಪ್ರತೀಕಾರ ತೆಗೆದುಕೊಳ್ಳಲೇಬೇಕು ಎಂದು ಕುದಿಯುತ್ತಿರುವ ನಾವೆಲ್ಲರೂ ಅದರ ಬಿಸಿಯನ್ನು ಉಗ್ರಗಾಮಿಗಳಿಗೆ ನೇರವಾಗಿಯೇ ತಲುಪಿಸಿ, ’ನಾವೇನು, ನಮ್ಮ ತಾಕತ್ತೇನು’ ಎನ್ನುವುದನ್ನು ತೋರಿಸಿಯೇ ಬಿಡೋಣ, ಇನ್ನೇಕೆ ತಡ...?!
-ಆರುಡೋ ಗಣೇಶ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅವರು ಹೆಸರಿಗೆ ತಕ್ಕ ಹಾಗೆ ’ಸುವರ್ಣ’ ಮೇಡಂ

ಈಗ ಆರು ಪಾಸಾಗಿ ಏಳು...

ಈಕೆ ಎಲ್ಲರಂತೆ ’ಟೈಮ್‌ಪಾಸ್‌ ತಂಗಿ’ ಅಲ್ಲ!!