ಇವರು ಕಾರಣವೇ ಇಲ್ಲದೆ ಕಣ್ಮರೆಯಾಗುವವರು...

ಈ ಸಂಬಂಧಗಳು ಸಾಯುತ್ತವೆ!!

ಮೊದ ಮೊದಲಿಗೆ ಅದೆಂತಹ ಉತ್ಸಾಹ, ಅದೆಷ್ಟು ಕಾಳಜಿ- ಅಟ್ಯಾಚ್‌ಮೆಂಟು!?
ಪ್ರತೀ ಕ್ಷಣವೂ ಅವರದ್ದೇ ನೆನಪು. ದಿನಾ ಬೆಳಿಗ್ಗೆ-ರಾತ್ರಿ ತಪ್ಪದ ಫೋನು, ಐದು ನಿಮಿಷಕ್ಕೆ ಇಪ್ಪತ್ತು ಮೆಸೇಜು, ಮಾತಾದಾಗಲೆಲ್ಲ ಈ ನಮ್ಮ ಸ್ನೇಹ-ಪ್ರೀತಿ- ಸಹೋದರತ್ವದ ಸಂಬಂಧ ಕೊನೇ ಉಸಿರಿರುವ ತನಕ ಎಂಬಂತಹ ಪ್ರಾಮಿಸ್ಸುಗಳು, ಕ್ಯಾಲೆಂಡರ‍್ರಿನಲ್ಲೂ ಕಾಣಿಸದ ಚಿಕ್ಕಪುಟ್ಟ ಹಬ್ಬಗಳಿಗೂ ಬಂದು ಕೈ ಸೇರುವ ಗ್ರೀಟಿಂಗ್ಸು-ಗಿಫ್ಟು, ವಾರವಾರವೂ ತಪ್ಪದ ಒಂದೆರಡು ಪತ್ರ, ಬರ್ತ್‌ಡೇಯ ರಾತ್ರಿ ಹನ್ನೆರಡು ಗಂಟೆ ಒಂದು ನಿಮಿಷಕ್ಕೆ ಸರಿಯಾಗಿ ಫೋನಿನಲ್ಲಿ ಕೇಳಿಸುವ ಮೊದಲ ವಿಶ್, ಕ್ಷಣಕ್ಷಣಕ್ಕೂ ನೋಯಬೇಡ-ಅಳಬೇಡ ಎನ್ನುವ ಭಯಂಕರ ಕಾಳಜಿ, ಏನೇ ಆದರೂ ಜೊತೆಗೆ ನಾನಿದ್ದೇ ಇದ್ದೇನೆ ಎಂಬ ತುಂಬು ಭರವಸೆ...
ಬದುಕು ಫುಲ್ ಖುಷ್ ಅಲ್ಲವಾ? ಖಂಡಿತಾ. ಇಂತಹದ್ದೊಂದು ಜೀವ ಬದುಕಿಗೆ ಹೀಗೆ ಜೊತೆಯಾಗಿದ್ದಕ್ಕೇ ಬದುಕು ಸಾರ್ಥಕ ಅನ್ನಿಸಿ ಬಿಡುತ್ತದೆ. ಮಾತಿಗೆ ನಿಲುಕದ ಖುಷಿ, ತೃಪ್ತಿ, ಕನಸುಗಳಲ್ಲಿ ಮನಸ್ಸು ಹಗುರಗುರಾಗಿ ಆಕಾಶದ ನೀಲಿಯಲ್ಲಿ ಗರಿಬಿಚ್ಚಿ ಪಟಪಟಿಸುತ್ತಿರುತ್ತದೆ.
ಅದ್ಯಾರು, ಯಾವಾಗ ಈ ಬಲೂನಿಗೆ ಸೂಜಿ ಚುಚ್ಚಿದರೋ!?
ಚಿಕ್ಕದೊಂದು ಸದ್ದೂ ಇಲ್ಲದೇ, ಪ್ರೀತಿಯ ಸಂಬಂಧದ ಬಲೂನೊಂದು ಒಡೆದು ಹೋಗುತ್ತದೆ. ಏನೆಂದರೆ ಏನೂ ಇರಲೇ ಇಲ್ಲವೆಂಬಂತೆ ಸಂಬಂಧವೊಂದು ಸತ್ತು ಸಮಾಧಿ ಸೇರಿ ಬಿಡುತ್ತದೆ. ಖುಷಿಯಲ್ಲಿ ತೇಲುತ್ತಿದ್ದ ಮನಸ್ಸು ಆದದ್ದು ಏನೆಂದು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ರಪ್ಪೆಂದು ನೆಲಕ್ಕೆ ರಾಚಿ ವಿಲವಿಲ...
ಉಹ್ಞೂಂ, ಎಷ್ಟು ಹುಡುಕಾಡಿದರೂ, ತಡಕಾಡಿದರೂ ಏನು, ಯಾಕೆ ಎನ್ನುವ ಕಾರಣಗಳು ಕಾಣಿಸುವುದಿಲ್ಲ. ಅದೆಷ್ಟು ಜೋರಾಗಿ ಕೂಗಿ ಕೊಂಡರೂ, ಕರೆದರೂ ಅವರಿಗೆ ಕೇಳಿಸುವುದಿಲ್ಲ. ಒಬ್ಬರೇ ಕುಳಿತು ತಪ್ಪು ಆಗಿದ್ದಾದರೂ ಎಲ್ಲಿ ಎಂದು ದಿನಗಟ್ಟಲೆ ಯೋಚಿಸುತ್ತೀರಿ. ತಪ್ಪು  ಸಿಗುವುದಿಲ್ಲ. ಬೇರೊಬ್ಬರ ಬಳಿ ಹೇಳಿಕೊಂಡು ಬೇಸರಿಸಿ–ಕೊಳ್ಳುತ್ತೀರಿ. ಅವರು ಹೇಳಿದ್ದೇನೂ ಸಮಾಧಾನ–ವೆನ್ನಿಸುವುದಿಲ್ಲ. ಉಸಿರೇ ಆಗಿ ಹೋಗಿದ್ದ ಸಂಬಂಧವೊಂದು ಯಾಕೆ ಹೀಗೆ ಸದ್ದಿಲ್ಲದೆ ದೂರಾಯಿತು ಎನ್ನುವ ಕೊರಗು ನಿರಂತರವಾಗಿ ಬದುಕಿಗಂಟಿಕೊಂಡು ಬಿಡುತ್ತದೆ. ಅವರ ನೆನಪಿಗೆ ಸಾಕ್ಷಿಯಾಗಿ ಉಳಿದ ಗ್ರೀಟಿಂಗ್ಸು, ಪತ್ರ, ಮೆಸೇಜು, ಗಿಫ್ಟುಗಳನ್ನೆಲ್ಲ ಎದುರಿಗೆ ಹರಡಿಕೊಂಡು ಕಣ್ಣೀರನ್ನು ಕೆನ್ನೆ ತಾಕಿಸುತ್ತೀರಿ. ಮನಸ್ಸಿಗಾದ ಗಾಯಕ್ಕೆ ಇಲಾಜಿಲ್ಲ; ಗಾಯದ ನೋವಿಗಿಳಿದ ಕಣ್ಣೀರೂ ಅಷ್ಟು ಸುಲಭಕ್ಕೆ ಆರುವುದಿಲ್ಲ.
ಬದುಕಿಗೆ ಉತ್ಸಾಹ ತುಂಬಿದ, ನೋವು ಮರೆಸಿ ನಗು ಚೆಲ್ಲಿದ, ಹತ್ತಾರು ಕನಸು ಕಟ್ಟಿದ, ಮುಗಿದೇ ಹೋಯಿತು ಎಂದುಕೊಂಡ ಬದುಕನ್ನು ಮತ್ತೆ ಆರಂಭಿಸಿದ, ಬದುಕಿಗೆ ಅರ್ಥ ತುಂಬಿದ, ಕನಸುಗಳನ್ನು ನನಸಾಗಿಸಿ ಗುರಿ ತಲುಪಿಸಿದ ಅಗ್ದೀ ಪ್ರೀತಿಯ ಸಂಬಂಧವೊಂದು ಚಿಕ್ಕದಾಗಿಯೂ ಒಂದು ಕಾರಣವನ್ನೂ ಉಸುರದೆ ಹೀಗೆ ಸತ್ತು ಹೋಗುತ್ತದೆ!
ನಾವು ತೀರಾ ನಿರೀಕ್ಷಿಸಿರುವುದಿಲ್ಲ. ಆಕಸ್ಮಿಕ ಎನ್ನುತ್ತಾರಲ್ಲ ಹಾಗೆ ಆ ಸಂಬಂಧ ನಮ್ಮ ಬದುಕಿನೊಳಕ್ಕೆ ಬಲಗಾಲಿಟ್ಟು ಬಂದು ಬಿಡುತ್ತದೆ. ಪತ್ರಿಕೆಗಳಲ್ಲಿ  ಬರುವ ಫ್ರೆಂಡ್‌ಶಿಪ್ ಕಾಲಮ್ಮುಗಳಿಂದ ‘ಪೆನ್‌ಫ್ರೆಂಡ್’ ಮಾಡಿಕೊಂಡಿದ್ದರೆ, ಹತ್ತಿರದವರೊ–ಬ್ಬರ ಮದುವೆಯಲ್ಲಿ ಪರಿಚಯದವರ‍್ಯಾರೋ ಇನ್ನೊಬ್ಬರನ್ನು ಕರೆದುಕೊಂಡು ಬಂದು ಇವರು ಹೀಗೆ ಎಂದು ಕೈ ಕುಲುಕಿಸಿದ್ದರೆ, ಸ್ನೇಹಿತನ ಸ್ನೇಹಿತರು ಎಂದು ಪರಿಚಯಿಸಿಕೊಂಡಿದ್ದರೆ, ಬಸ್ಸು-ರೈಲುಗಳಲ್ಲಿ ಹೋಗುವಾಗ ಪಕ್ಕದಲ್ಲಿ ಕುಳಿತವರೊಂದಿಗೆ ಆತ್ಮೀಯತೆ ಬೆಳೆದು ಅಡ್ರೆಸ್ಸು ಕೊಟ್ಟುಕೊಂಡಿದ್ದರೆ, ರಾಂಗ್ ನಂಬರ‍್ರಿಗೆ ಕಾಲ್ ಅಥವಾ ಮೆಸೇಜು ಮಾಡಿ ಹಾಗೇ ಒಂದು ಆತ್ಮೀಯತೆ ಚಿಗಿತುಕೊಂಡಿದ್ದರೆ ಖಂಡಿತಾ ನಿಮಗೆ ಇಂತಹದ್ದೊಂದು ಅನುಭವವಾಗಿ–ರುತ್ತದೆ. ಬದುಕಿನುದ್ದಕ್ಕೂ ಎರಡು ದೇಹ ಒಂದೇ ಜೀವ ಎಂಬಂತೆ ಇರೋಣ ಎಂದ ಇಂತಹವರು ಅದೊಂದು ದಿನ ಇದ್ದಕ್ಕಿದ್ದಂತೆ ನಿಮ್ಮೊಂದಿಗಿನ ಸಂಬಂಧವನ್ನು ಒದರಿಕೊಂಡು ಹೋಗಿ ಬಿಡುತ್ತಾರೆ.
ಇಲ್ಲಿ ಹೆಚ್ಚಾಗಿ ಸ್ನೇಹ ಇರುತ್ತದೆ. ಇನ್ನು ಕೆಲವೊಮ್ಮೆ ಸ್ನೇಹ ಎಂದು ಆರಂಭವಾಗಿದ್ದು ಪ್ರೀತಿಗೆ ತಿರುವಿಕೊಳ್ಳುತ್ತದೆ. ಕೆಲವರ ನಡುವೆ ಅಣ್ಣ-ತಂಗಿ, ಅಕ್ಕ-ತಮ್ಮ ಎಂಬಂತಹ ಸಹೋದರತ್ವ ಮಾತ್ರ ಬೆಳೆಯುತ್ತದೆ. ಒಟ್ಟಿನಲ್ಲಿ ಅದೊಂದು ಅವರವರ ಭಾವನೆಗೆ ತಕ್ಕಂತಹ ಸಂಬಂಧ. ನನಗೆ ನೀನಾಗ–ಬೇಕು, ನಿನಗೆ ನಾನಾಗುತ್ತೇನೆ ಎಂದುಕೊಂಡೇ ಇಬ್ಬರೂ ಒಂದು ಸಂಬಂಧಕ್ಕೆ ಕೈ ಚಾಚಿರುತ್ತಾರೆ. ತೀರಾ ಇಷ್ಟಪಟ್ಟುಕೊಂಡೇ ಅದನ್ನು ಪ್ರೀತಿಯಿಂದ, ಆತ್ಮೀಯತೆಯಿಂದ ಬೆಳೆಸಿರುತ್ತಾರೆ. ಹಾಗೆಂದು ಇಬ್ಬರಲ್ಲೂ ಒಂದೇ ತೆರನಾದ ಭಾವನೆಯಿರುತ್ತದಾ? ಉಹ್ಞೂಂ, ಅದಕ್ಕೆ ಗ್ಯಾರಂಟಿಯಿರುವುದಿಲ್ಲ. ಆದ್ದರಿಂದಲೇ ಇಬ್ಬರಲ್ಲಿ ಒಬ್ಬರು ಮಾತ್ರ ಇದು ಅಷ್ಟು ಸುಲಭಕ್ಕೆ ಮುಗಿದು ಹೋಗುವ ಸಂಬಂಧವಲ್ಲ ಎಂದುಕೊಂಡಿರುತ್ತಾರೆ. ಬದುಕಿನೆಲ್ಲ ತ್ಯಾಗಕ್ಕೂ ತಯಾರಾಗಿರುತ್ತಾರೆ. ಇನ್ನೊಬ್ಬರು ಒಳಗಿಂದೊಳಗೇ ಇದಕ್ಕೆ ತಿರುಗಿ ನಿಂತು ಬಿಡುತ್ತಾರೆ. ಬದುಕೇ ಎಂದುಕೊಂಡ ಸಂಬಂಧಗಳ ಹಾದಿಯಲ್ಲಿ ಕವಲೊ–ಡೆದು ಕೊಳ್ಳುತ್ತದೆ. ನೋಡು ನೋಡುತ್ತಲೇ ಈಗಿದ್ದರು, ಈಗಿಲ್ಲವೆಂಬಂತೆ ಕಣ್ಮರೆಯಾಗಿ ಬಿಡುತ್ತಾರೆ.
ಇಂತಹ ಸಂಬಂಧಗಳು ಯಾಕೆ ಹೀಗೆ ಸದ್ದಿಲ್ಲದೆ ಮುಗಿದು ಹೋಗುತ್ತವೆ? ಇದಕ್ಕೆ ಒಬ್ಬೊಬ್ಬರ ಅನುಭವವೂ ಒಂದೊಂದು ರೀತಿಯ ಉತ್ತರವನ್ನು ಕೊಡುತ್ತದೆ. ಈ ಬಗೆಯ ರಿಲೇಶನ್‌ಶಿಪ್‌ನ್ನು ಹತ್ತಿರಕ್ಕೆಳೆದುಕೊಂಡ ಎಷ್ಟು  ಮನಸ್ಸುಗಳಿವೆಯೋ, ಅಷ್ಟು ಕಾರಣಗಳು ಗುಡ್ಡೆಗುಡ್ಡೆಯಾಗಿ ನಿಲ್ಲುತ್ತವೆ. ಅದನ್ನೆಲ್ಲ ಕೆದಕುತ್ತಾ ಹೋದರೆ ಸಿಕ್ಕುವುದು ಮಾತ್ರ ಸ್ವಾರ್ಥ, ವಂಚನೆ, ಅತಿಯಾದ ನಿರೀಕ್ಷೆ ಹಾಗೂ ದುರಾಸೆಗಳು!
ಅವಳಿಗೋ, ಅವನಿಗೋ ಮದುವೆಯಾಗುತ್ತದೆ. ಆಗ ಹೆಚ್ಚಿನವರು ತಮ್ಮ ಈ ಮೊದಲಿನ ಗೆಳೆತನವನ್ನು, ಸಹೋದರ ಸಂಬಂಧಗಳನ್ನು, ಹತ್ತಿರದ ಬಂಧುಗಳನ್ನೂ ಒಂದಿಷ್ಟು ದಿನ ಮರೆಯುತ್ತಾರೆ. ಅಥವಾ ಬೇಡವೆಂದು ದೂರವಿಟ್ಟಿರುತ್ತಾರೆ. ಮದುವೆಯ ಮಧುರತೆ ಕರಗುತ್ತಾ ಬಂದಂತೆ ಮತ್ತೆ ಈ ಸಂಬಂಧಗಳನ್ನು ನೆನಪಿಸಿಕೊಳ್ಳಬಹುದು, ನೆನಪಿಸಿಕೊಳ್ಳದೆಯೂ ಇರಬಹುದು. ಪೆನ್‌ಫ್ರೆಂಡ್ ಅಥವಾ ಆಕಸ್ಮಿಕವಾಗಿ ಚಿಗಿತುಕೊಂಡ ಸ್ನೇಹದಲ್ಲಿಯೂ ಕೆಲವೊಮ್ಮೆ ಹೀಗೇ ಆಗುತ್ತದೆ. ಮದುವೆ–ಯಾಗಿದ್ದಕ್ಕೇ, ಪತ್ರ ಅಥವಾ ಫೋನಿನಲ್ಲಿದ್ದ ಗೆಳೆತನವನ್ನೋ, ಸಹೋದರ ಸಂಬಂಧವನ್ನೋ ಮರೆತು ಬಿಡಬಹುದು; ದೂರ ಮಾಡಿಯೂ ಬಿಡಬಹುದು. ಇದು ಅತಿ ಸಹಜವಾದ ಮನಸ್ಥಿತಿ. ಆದರೆ ಇದನ್ನು ಮೀರಿದ ಹತ್ತಾರು ಕಾರಣಗಳು, ಈ ಸಂಬಂಧಗಳು ಸಾಯಲು ಕಾರಣವಾಗಿ ಬಿಡುತ್ತದೆ. ದುರಂತವೆಂದರೆ, ಯಾರು ಇದನ್ನು ಕಳೆದುಕೊಳ್ಳುತ್ತಾರೋ ಅವರಿಗೆ ಹೆಚ್ಚಿನ ಬಾರಿ ಈ ಕಾರಣಗಳೇ ಗೊತ್ತಾಗಿರುವುದಿಲ್ಲ.

ಅತಿಯಾದ ನಿರೀಕ್ಷೆ

ಒಂದು ಸಂಬಂಧ ಬದುಕಾಗ–ಬೇಕೆಂದರೆ ಅಲ್ಲಿ ನಿರೀಕ್ಷೆಗಳಿರಬಾರದು. ಈ ನಿರೀಕ್ಷೆಗಳಿದ್ದಲ್ಲೇ ಜಗಳ, ಅತೃಪ್ತಿ, ಅಸಹನೆ, ಬೆನ್ನಹಿಂದೆ ನೂರಾರು ಮಾತುಗಳು ಆರಂಭವಾ–ಗುತ್ತವೆ. ಯಾವಾಗ ನಿರೀಕ್ಷೆಗಳು ಈಡೇರುವುದಿ–ಲ್ಲವೋ, ಆಗ ಈ ಸಂಬಂಧ ‘ಉಪಯೋಗವಿಲ್ಲದ್ದು’ ಅನ್ನಿಸಿಬಿಡುತ್ತದೆ. ಪೆನ್‌ಫ್ರೆಂಡು ಸೇರಿದಂತೆ ಇಂತಹ ತಕ್ಷಣದ ಸ್ನೇಹ-ಪ್ರೀತಿ-ಸಹೋದರತ್ವ ಎನ್ನುವ ಸಂಬಂಧಗಳು ಇದ್ದಕ್ಕಿದ್ದಂತೆ ಮರೆಗೆ ಹೋಗಲು ಹೆಚ್ಚಿನ ಬಾರಿ ಕಾರಣವಾಗುವುದೇ ಈ ನಿರೀಕ್ಷೆಗಳು. ನಾವೇನು ಬೇಕು ಅಂದು–ಕೊಂಡಿದ್ದೆವೋ ಅದು ಸಿಗಲಿಲ್ಲ ಎಂದ ಮೇಲೆ ಯಾಕಿರಬೇಕು ಇವರೊಂದಿಗೆ ಎಂದು ದೂರಾಗುತ್ತಾರೆ.

ಬೇರೇನೋ ಉದ್ದೇಶ

ಒಂದು ಮೊಗ್ಗು ತನಗೆ ತಾನೇ ಹೂವಾಗಿ ಅರಳಿ ಹೇಗೆ ಘಮಘಮಿಸುತ್ತದೋ, ಹಾಗೇ ಒಂದು ಸಂಬಂಧ ಎರಡು ಜೀವಗಳನ್ನು ಬೆಸೆಯಬೇಕು. ಹೀಗೆ ಬೆಸೆದ ಜೀವಗಳು ಅದೇನಾದರೂ ಬೇರಾಗುವುದಿಲ್ಲ. ಆದರೆ ಇಲ್ಲಿ ಹೆಚ್ಚಿನವರದ್ದು ಹಾಗಿರುವುದಿಲ್ಲ. ಸಹಾಯ ಸಿಗುತ್ತದೆಂದು ಸ್ನೇಹಿತ ಎಂದರೆ, ದೇಹ ಸಿಗುತ್ತದೆಂದು ಪ್ರೀತಿ ಎಂದರೆ, ಆಸರೆ ಕೊಟ್ಟೇ ಕೊಡುತ್ತಾಳೆಂದು ಅಕ್ಕ ಎಂದರೆ, ಹಣ ಕೊಡುತ್ತಾನೆಂದು ಅಪ್ಪ ಎಂದರೆ ಯಾವ ಸಂಬಂಧ ಎಷ್ಟು ದಿನ ಬಾಳಲು ಸಾಧ್ಯ? ಆದ್ದರಿಂದಲೇ ಅದು ಬಾಳುವುದಿಲ್ಲ. ಮನಸ್ಸಿನಲ್ಲಿ ಏನೋ ಇಟ್ಟುಕೊಂಡು, ಅದನ್ನು ಹೇಳದೆ ಹತ್ತಿರವಾಗಿ, ಅದು ಸಿಗುತ್ತಿಲ್ಲವೆಂದು ಖಾತ್ರಿಯಾದ ತಕ್ಷಣ ದೂರವಾಗುವವರು ಯಾವ ಬಾಯಿಯಿಂದ ಕಾರಣ ಹೇಳಿಯಾರು?

ಅಂತಸ್ತು-ಅಧಿಕಾರ

ಪತ್ರಿಕೆಗಳಲ್ಲಿ ಬರುವ ಸ್ನೇಹದ ಕಾಲಮ್ಮನ್ನು ತಪ್ಪದೇ ನೋಡುತ್ತಾರೆ. ಎಲ್ಲರ ಅಡ್ರೆಸ್ಸು-ವಿವರ–ಗಳನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಾರೆ. ಇವರು ‘ಭಾರೀ ಕುಳ’ ಅನ್ನಿಸಿತಾ, ಒಂದು ಮಿಸ್ಡ್‌ಕಾಲ್ ಕೊಡುತ್ತಾರೆ! ಅಂದರೆ ಯಾರೋ ದುಡ್ಡಿರುವವರು, ಒಳ್ಳೆಯ ಅಧಿಕಾರದಲ್ಲಿರುವವರು, ಭಯಂಕರ ಇನ್‌ಫ್ಲುಯೆನ್ಸ್ ಇರುವವರು, ಸ್ನೇಹಿತರು ಎಂದವರಿಗೆಲ್ಲ ದುಡ್ಡಿನ ಮಳೆ ಸುರಿಸುವವರು ಯಾರಿರುತ್ತಾರೆ ಅನ್ನಿಸುತ್ತದೋ, ಅಂತಹವರೊಂದಿಗೆ ನಾನು ಸ್ನೇಹಿತ, ನೀವು ನನ್ನ ಅಣ್ಣನಂತೆ, ಅಕ್ಕನಂತೆ ಎಂದೆಲ್ಲ ಹತ್ತಿರವಾಗುವವರು ಮನಸ್ಸಿಗೆ ಬೆಲೆ ಕೊಡಲು ಎಲ್ಲಿ ಸಾಧ್ಯ? ಹೀಗಿದ್ದಾಗ ಇರುವುದನ್ನೆಲ್ಲ ಬಾಚಿಕೊಂಡಾ–ಯಿತು ಎಂದ ಮೇಲೆ ನಾವಿಲ್ಲಿ ಇರಲೇ ಇಲ್ಲ ಎಂಬಂತೆ ಮಾಯವಾಗಿ ಬಿಡುತ್ತಾರೆ.

ಕಾಸಿನ ಕನಸು

ಮೊದ ಮೊದಲಿಗೆ ನಿಜವಾದ ಸ್ನೇಹಿತರಂತೆಯೇ ನಟಿಸುತ್ತಾರೆ. ಅಕ್ಕ ನೀನು ಆರಾಮಾಗಿರಬೇಕು ಎಂದು ವಿಪರೀತ ಕಾಳಜಿ ತೋರಿಸುತ್ತಾರೆ. ಎಂತಹ ನಿಷ್ಕಲ್ಮಶ, ನಿಸ್ವಾರ್ಥ ಮನಸ್ಸು ಎಂದು ನೀವು ಖುಷಿಯಾಗುತ್ತಿರುವಾಗಲೇ, ‘ನಿಮ್ಮಿಂದ ಒಂದು ಹೆಲ್ಪ್ ಆಗಬೇಕಿತ್ತು’ ಎಂದು ಬಿಡುತ್ತಾರೆ. ನಿಮ್ಮ ಹತ್ತಿರ ಕೇಳಬಾರದೆಂದುಕೊಂಡೆ, ಆದರೆ ಅನಿವಾರ್ಯ ಎಂದೆಲ್ಲ ಬೋಗಿ ಜೋಡಿಸುತ್ತಾರೆ. ನೋಡೌಟ್, ಹೆಲ್ಪ್ ಎಂದರೆ ಅದು ಹಣ! ಅಷ್ಟೆಲ್ಲ ನಂಬಿ, ಎಷ್ಟೆಲ್ಲ  ಮಾತಾಗಿ, ತೀರಾ ಮನಸ್ಸಿಗೆ ಹತ್ತಿರವೆನ್ನಿಸಿದ ಈ ಸ್ನೇಹಿತನೋ, ಸ್ನೇಹಿತೆಯೋ ಹಣದ ಸಹಾಯ ಕೇಳಿದರೆ ಹೇಗೆ ಇಲ್ಲವೆನ್ನುತ್ತೀರಿ? ಇಲ್ಲವೆನ್ನಲಾಗದೆ ಕೊಟ್ಟರೆ ಅಲ್ಲಿಗೆ ನಿಮ್ಮ ನಡುವಿನ ಸಂಬಂಧ ಕೊನೆಯಾಗುತ್ತದೆ. ಕೊಡದೇ ಹೋದರೂ ಕೊನೆಯಾಗುತ್ತದೆ. ಇಷ್ಟರ ಮೇಲೂ ಇವರು ನಿಮಗೆ ಕಾರಣ ಕೊಡಬೇಕಾ?

ಸ್ನೇಹ ಎಂದು ಹತ್ತಿರಾಗಿ...

ನಾವು ಜೀವನದುದ್ದಕ್ಕೂ ಫ್ರೆಂಡ್ಸ್ ಆಗಿಯೇ ಇರೋಣ ಎಂದೇ ಪತ್ರ, ಫೋನುಗಳೆಲ್ಲ ಆರಂಭವಾಗುತ್ತದೆ. ಆದರೆ ಹತ್ತಿರತ್ತಿರವಾಗುತ್ತಾ ಮಾತನಾಡುವ ಫೋನು, ಪತ್ರ ಬರೆಯುವ ದಾಟಿಗಳೆಲ್ಲ ಬದಲಾಗುತ್ತದೆ. ಅಲ್ಲೊಂದು ಬೆಚ್ಚನೆಯ ಭಾವನೆ ಮೆಲ್ಲಗಿಣುಕುತ್ತದೆ. ಸ್ನೇಹ, ಕೆಲವೊಮ್ಮೆ ಸಹೋದರತ್ವದ ಮಾತುಗಳು ಕೂಡಾ ಪ್ರೀತಿಯಾಗಿ ಬಣ್ಣ ಬದಲಿಸುತ್ತವೆ. ಇಬ್ಬರ ಮನಸ್ಸಿನಲ್ಲೂ ಅದೇ ಇದ್ದು, ಸಮ್ಮತವಾದರೆ ಆಗ ಅದು ಮುಂದುವರಿಯುತ್ತದೆ. ಇಲ್ಲದೇ ಹೋದರೆ ಹೇಗೆ ಸಾಧ್ಯ? ನಾನಂದು ಕೊಂಡಿದ್ದು ಸಿಗಲಿಲ್ಲ ಎಂದು ಇವರು ಮುನಿಸಿಕೊಂಡು ದೂರಾಗುತ್ತಾರೆ. ಇನ್ನೊಬ್ಬರು ಇಂತಹ ಸಂಬಂಧಗಳ ಬಗ್ಗೆಯೇ ಮುಗಿದು ಹೋಗದ ಹೇಸಿಗೆಯನ್ನು ಬೆಳೆಸಿಕೊಂಡು ಬಿಡುತ್ತಾರೆ.

ಆರಂಭದ ಆಕರ್ಷಣೆ

ಬದುಕಿನ ಎಲ್ಲಾ ಸಂಬಂಧಗಳೂ ಮೊದಲಿಗೆ ಭಯಂಕರ ಖುಷಿ ಕೊಡುತ್ತವೆ. ಮಗು ಮೊದಲ ಬಾರಿಗೆ ಮೈ ಮೇಲೆ ಸುಸ್ಸೂ ಮಾಡಿದರೆ ಅಪ್ಪ-ಅಮ್ಮ ಇಬ್ಬರೂ ನಕ್ಕಿರುತ್ತಾರೆ. ಅದೇ ನಂತರದ ದಿನಗಳಲ್ಲಿ ಸುಸ್ಸೂ ಮಾಡಿದರೆ ನೀನು ಒರೆಸು ಎಂದು ಇಬ್ಬರೂ ಕಿತ್ತಾಟಕ್ಕಿಳಿಯುತ್ತಾರೆ. ಸಂಬಂಧಗಳ ವಿಷಯದಲ್ಲೂ ಹೀಗೇ ಆಗುತ್ತದೆ. ಅವಳನ್ನು ಅಕ್ಕ ಎಂದು ಕರೆಯಲು ಇವನಿಗೆ ಖುಷಿ, ಅವಳ ಅಳು ಕೇಳಿ ಸಮಾಧಾನ ಮಾಡಿದರೆ ಏನೋ ನೆಮ್ಮದಿ, ಅವಳಿಗೆ ಪತ್ರ ಬರೆಯು–ವುದೆಂದರೆ ಅದೊಂದು ಮರೆಯಲಾಗದ ಸಮಯ.... ಇದೆಲ್ಲ ಎಲ್ಲಿಯವರೆಗೆ? ಕೆಲವರಲ್ಲಿ ಈ ಖುಷಿ ಮೆತ್ತಗೆ ಕುಸಿಯುತ್ತಾ ಬರುತ್ತದೆ. ದಿನಕ್ಕೆ ಮುನ್ನೂರಾಗುತ್ತಿದ್ದ ಮೆಸೇಜು, ಕೊನೆಗೆ ಮೂರಾಗುತ್ತದೆ; ಮಾಯವೂ ಆಗುತ್ತದೆ. ಇಂತಹ ಭಾವನೆಗಳೂ ಸಂಬಂಧದ ಉಸಿರು ನಿಲ್ಲಲು ಕಾರಣವಾಗುತ್ತದೆ.

ಅದೊಂದು ಹೆಚ್ಚುಗಾರಿಕೆ

ನನಗೆ ಇಡೀ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ, ತಾಲ್ಲೂಕಿನಲ್ಲಿ ಫ್ರೆಂಡ್ಸುಗಳಿದ್ದಾರೆ, ನನಗೆ ದಿನಕ್ಕೆ ಐವತ್ತು ಕಾಲ್ ಬರುತ್ತೆ, ಐನೂರು ಮೆಸೇಜು ಬರುತ್ತೆ... ಹೀಗೆ ಹೇಳಿಕೊಳ್ಳುವುದರಲ್ಲೇ ಕೆಲವರಿಗೆ ಅದೇನೋ ಖುಷಿ. ಇಂತಹದ್ದೊಂದು ಭ್ರಮೆಯಲ್ಲಿ ಬದುಕುತ್ತಿ–ರುವವರು ಸಂಬಂಧದ ಒಳಗಿನ ಮನಸ್ಸನ್ನು ಅರ್ಥ ಮಾಡಿಕೊಂಡಿರುವುದಿಲ್ಲ. ಕೇವಲ ಹೆಚ್ಚುಗಾರಿಕೆಗಾಗಿ ಸ್ನೇಹವನ್ನೋ, ಸಹೋದರತ್ವವನ್ನೋ ಆರಂಭಿಸು–ವವರು, ಈ ಭ್ರಮೆಯಿಂದ ಹೊರ ಬಂದ ಮೇಲೆ ಹೇಗೆ ಮತ್ತೆ ಮಾತಾಗುತ್ತಾರೆ? ಇಂತಹ ರಿಲೇಶನ್‌ಶಿಪ್ಪುಗಳಿಂದ ಸಮಯ, ಹಣ ವೇಸ್ಟು ಎಂದು ಇವರಿಗೊಂದು ದಿನ ಅನ್ನಿಸುತ್ತದೆ. ಅವತ್ತು ಅಡ್ರೆಸ್ಸು ಬದಲಿಸುತ್ತಾರೆ; ಹೊಸ ಸಿಮ್ ತೆಗೆದುಕೊಳ್ಳುತ್ತಾರೆ.
ಅತಿಯಾದ ಸ್ವಾರ್ಥ, ಯಾರದ್ದೋ ಮಾತು ಕೇಳಿ ತಪ್ಪು ತಿಳಿದುಕೊಳ್ಳುವುದು, ಚಿಕ್ಕದೊಂದು ಕಾರಣಕ್ಕೆ ಮಿಸ್ ಅಂಡರ್‌ಸ್ಟ್ಯಾಂಡಿಂಗ್ ಬೆಳೆಯುವುದು, ನನ್ನೊಂದಿಗೆ ಮಾತ್ರ ಗೆಳೆತನ, ಆತ್ಮೀಯತೆಯನ್ನು ಇರಿಸಿಕೊಳ್ಳಬೇಕೆಂದುಕೊಳ್ಳುವುದು, ಬೆಳೆಯುತ್ತ ಹೋದ ಸ್ನೇಹಿತರನ್ನು ಮೇಂಟೇನ್ ಮಾಡಲಾಗದಿ–ರುವುದು, ಸಮಯ ಸಾಲದೇ ಇರುವುದು, ಇದ್ದಕ್ಕಿದ್ದಂತೆ ಇಂತಹ ಸಂಬಂಧಗಳೆಲ್ಲ ಅರ್ಥ ಹೀನ ಅನ್ನಿಸುವುದು, ಮನಸ್ಸು ಹಾದಿ ತಪ್ಪುವುದು, ತಮ್ಮ ವ್ಯವಹಾರಕ್ಕೆ ಉಪಯೋಗವಾಗಬಹುದು ಎಂದು ಕೊಳ್ಳುವುದು... ಹೀಗೆ ಹೇಳಿಕೊಳ್ಳಲಾಗದ ನೂರಾರು ಕಾರಣಗಳು ಸೇರಿಕೊಂಡು, ಈ ಬಗೆಯ ಸಂಬಂಧಗಳ ಕತ್ತು ಹಿಸುಕುತ್ತದೆ.
ವಿಚಿತ್ರವೆಂದರೆ ಇವ್ಯಾವುದೂ ಹೇಳಿಕೊಳ್ಳುವಂತಹ ಕಾರಣಗಳಲ್ಲ. ಅದಕ್ಕೇ ಅವರು ನಾನು ನಾಳೆಯಿಂದ ಫೋನ್ ಮಾಡುವುದಿಲ್ಲ ಎಂದು ಹೇಳಿ ಕೂಡಾ ಹೇಳದೇ ಕಣ್ಮರೆಯಾಗುತ್ತಾರೆ. ಬದುಕಿನುದ್ದಕ್ಕೂ ಇವರ ಜೊತೆ ಇರುತ್ತದೆಂದು ನಂಬಿಕೊಂಡ ಇವರಿಲ್ಲಿ ಕಣ್ಣೀರಿನಿಂದ ಕುಸಿಯುತ್ತಿರುತ್ತಾರೆ. ಅದಕ್ಕಿಂತ ಹೆಚ್ಚಾಗಿ ಸಂಬಂಧಗಳ ಬಗ್ಗೆಯೇ ನಂಬಿಕೆ ಕಳೆದುಕೊಂಡು ಬಿಡುತ್ತಾರೆ. ನಂತರ ಯಾರೇ ಹತ್ತಿರವಾಗಲು ಬಂದರೂ, ಇವರು ದೂರವಾಗಲಿಕ್ಕೇ ಬಂದಿದ್ದಾರೇನೋ ಎಂಬ ಭಯ ಬೆಳೆಸಿಕೊಳ್ಳುತ್ತಾರೆ.

ನಿಜವಾದ ಮನಸ್ಸಿದ್ದರೆ...

ಕೆಲವರನ್ನು ಗಮನಿಸಿ ನೋಡಿ. ಮನೆಯಲ್ಲಿ ವಯಸ್ಸಾದ ತಂದೆ-ತಾಯಿ ಇರುತ್ತಾರೆ. ಅವರಿಗೆ ಅವರ ಕೆಲಸ ಮಾಡಿಕೊಳ್ಳಲಿಕ್ಕೇ ಕಷ್ಟ. ಅಂತಹವರನ್ನು ಆರಾಮಾಗಿ ನೋಡಿಕೊಳ್ಳುವುದನ್ನು ಬಿಟ್ಟು, ಮಗನೆನ್ನಿಸಿಕೊಂಡ ಇವನು ಅವರಿಂದ ಸೇವೆ ಮಾಡಿಸಿಕೊಳ್ಳುತ್ತಿರುತ್ತಾನೆ; ಕಷ್ಟ ಕೊಡುತ್ತಿರುತ್ತಾನೆ. ಅದೇ ಪಕ್ಕದ ಬೀದಿಯಲ್ಲಿರುವ ಸ್ನೇಹಿತನ ಅಪ್ಪ-ಅಮ್ಮ ಎಂದರೆ ಸಾಕು ಹೃದಯದಾಳದ ಪ್ರೀತಿಯನ್ನೆಲ್ಲ ಬಸಿದು ಮಾತನಾಡುತ್ತಿರುತ್ತಾನೆ. ಅವರ ಕಷ್ಟಗಳಿಗೆ ಆಗುತ್ತಾನೆ. ಇದನ್ನು ನೀವು ಏನೆಂದು ನಿರ್ಧರಿಸುತ್ತೀರಿ?
ತನ್ನ ತಂದೆ-ತಾಯಿಯನ್ನೇ ಪ್ರೀತಿಸಿಕೊಳ್ಳದ ಇವನು, ಸ್ನೇಹಿತನ ತಂದೆ-ತಾಯಿಯನ್ನು ನಿಜವಾಗಿ ಪ್ರೀತಿಸಲು ಹೇಗೆ ಸಾಧ್ಯ? ಹೌದು, ತಮ್ಮ ಹತ್ತಿರದಲ್ಲಿರುವವರನ್ನೇ ಪ್ರೀತಿಸಲಿಕ್ಕೆ ತಿಳಿಯದ ಇವರು, ದೂರದಲ್ಲಿರುವವರನ್ನೂ ಪ್ರೀತಿಸಲು ಸಾಧ್ಯವಿಲ್ಲ. ಒಂದೊಮ್ಮೆ ಹಾಗೆ ಪ್ರೀತಿಸುತ್ತಿದ್ದಾ–ರೆಂದರೆ, ಅದು ನಿಷ್ಕಲ್ಮಶ ಮನಸ್ಸಿನ ಪ್ರೀತಿಯಾಗಿ–ರುವುದಿಲ್ಲ. ಅಲ್ಲೇನೋ ಸ್ವಾರ್ಥವಿರುತ್ತದೆ; ದುರಾಲೋಚನೆಯಿರುತ್ತದೆ.
ನನಗೆ ಫ್ರೆಂಡ್ ಬೇಕು, ಅಣ್ಣ ಬೇಕು, ತಂಗಿ ಬೇಕು ಎಂದು ಒಮ್ಮೆ ಕೂಡಾ ಮುಖ ನೋಡದ ಯಾರನ್ನೋ ನಾವು ಪ್ರೀತಿಸಿಕೊಳ್ಳುವುದಕ್ಕಿಂತ, ಹತ್ತಿರವಾಗು–ವುದಕ್ಕಿಂತ, ಅಂತಹವರು ನಮ್ಮ ಹತ್ತಿರದಲ್ಲೇ ಇದ್ದಾರಾ ಎಂದು ಒಮ್ಮೆ ನೋಡಬಹುದಲ್ಲವಾ? ಸ್ವಲ್ಪ ತಾಳ್ಮೆಯಿಂದ ಮಾತಾಗಬಹುದಲ್ಲವಾ? ಮನಸ್ಸಿಗೆ ಹಚ್ಚಿಕೊಳ್ಳಬಹುದಲ್ಲವಾ? ನಮ್ಮ ಹತ್ತಿರದಲ್ಲೇ ಇರುವವರೊಳಗಿನ ಸ್ನೇಹಿತನನ್ನು ಗುರುತಿಸಲಾಗದ ಅಥವಾ ಪ್ರೀತಿಸಿಕೊಳ್ಳಲಾಗದ ನಾವು ಪತ್ರದಲ್ಲಿ ಅಕ್ಷರವಾಗುವ, ಮೆಸೇಜಿನಲ್ಲಿ ಪದವಾಗುವ, ಫೋನಿನಲ್ಲಿ ಮಾತಾಗುವವರನ್ನು ನಿಜ ಮನಸ್ಸಿನಿಂದ ಹತ್ತಿರಕ್ಕೆಳೆದುಕೊಳ್ಳಲು ಹೇಗೆ ಸಾಧ್ಯ?
ಇದರೊಂದಿಗೆ ನಮಗೆ ಸಮಯವೂ ಇರುವುದಿಲ್ಲ. ಇರುವ ಸಮಯದಲ್ಲಿ ನಾವು ನಮ್ಮೊಂದಿಗೆ ಓದಿದ ಸ್ನೇಹಿತರೊಂದಿಗೇ ಸ್ನೇಹವಿಟ್ಟುಕೊಳ್ಳಲಾಗದೆ ಒದ್ದಾಡುತ್ತಿರುತ್ತೇವೆ. ಟೈಮ್ ಆಗಲಿಲ್ಲ, ಭೇಟಿಯಾಗಲಿಲ್ಲ ಎಂದೆಲ್ಲ ಗೊಣಗುತ್ತಿರುತ್ತೇವೆ. ಅಂತಹದ್ದರಲ್ಲಿ ಹೀಗೆ ಆಕಸ್ಮಿಕವಾಗಿ ಎದುರಾಗುವ ಈ ಸ್ನೇಹವನ್ನೋ, ಪ್ರೀತಿಯನ್ನೋ, ಸಹೋದರತ್ವವನ್ನೋ ಮೇಂಟೇನ್ ಮಾಡಲು ನಮಗೆ ಸಮಯವಿರುತ್ತದಾ? ತಣ್ಣಗಿನ ಮನಸ್ಸಿನಿಂದ ಸ್ವಲ್ಪ ಯೋಚಿಸಿ ನೋಡಿ.

ಎಲ್ಲರಲ್ಲೂ ಹೀಗಲ್ಲ

ಅಂದ ಮಾತ್ರಕ್ಕೆ ಈ ಬಗೆಯ ಎಲ್ಲಾ ಸಂಬಂಧಗಳೂ ಪಿಸಕ್ಕನೆ ಮುರಿದು ಹೋಗುತ್ತವಾ? ಖಂಡಿತಾ ಇಲ್ಲ. ಕೆಲವರು ಸ್ನೇಹಿತರ ಅಂಕಣದಲ್ಲಿ ಸಿಕ್ಕ–ವರನ್ನೇ ಪ್ರೀತಿಸಿ ಮದುವೆಯಾಗಿ ನೆಮ್ಮದಿಯಾಗಿದ್ದಾರೆ. ಫೋನಿನಲ್ಲಿ ಪರಿಚಯವಾದ ಅಕ್ಕನಿಗೆ ಮದುವೆ ಮಾಡಿಸಿ, ನಿಜವಾದ ಅಣ್ಣನೋ- ತಮ್ಮನೋ ಆಗಿ ಆಕೆಗೆ ತವರು ಮನೆಯ ನೆಮ್ಮದಿ ಕೊಟ್ಟಿದ್ದಾರೆ. ಸ್ನೇಹಿತರಾಗಿ ಜೀವನದುದ್ದಕ್ಕೂ ನಡೆದಿದ್ದಾರೆ. ಸುಖಕ್ಕಿಂತ ಹೆಚ್ಚಾಗಿ ಕಷ್ಟಗಳಿಗೆ ಕೈ ಜೋಡಿಸಿದ್ದಾರೆ. ಹೌದು, ಖಂಡಿತಾ ಇಂತಹ ಸಂಬಂಧಗಳೂ ನಮ್ಮ ನಡುವೆ ಇವೆ. ಇವರು ಯಾವತ್ತೂ ಕಣ್ಮರೆಯಾಗುವುದಿಲ್ಲ. ಅಂದ ಮೇಲೆ ಕಾರಣಗಳನ್ನೂ ಹೇಳುವುದಿಲ್ಲ. ಈ ಸಂಬಂಧವೆನ್ನುವ ಸಂಬಂಧ ಬದುಕಿನ ಕೊನೇವರೆಗೂ ಆಸರೆಯಾಗುತ್ತದೆ; ಸಮಾಧಾನವಾಗುತ್ತದೆ; ತೃಪ್ತಿ-ನೆಮ್ಮದಿ-ಸಂತಸವನ್ನೆಲ್ಲ ಮೊಗೆಮೊಗೆದು ಕೊಡುತ್ತಿರುತ್ತದೆ.
ಯಾಕೆಂದರೆ ಇಲ್ಲಿ ನಿರೀಕ್ಷೆಗಳಿರುವುದಿಲ್ಲ. ಸ್ವಾರ್ಥವಿರುವುದಿಲ್ಲ. ಜೊತೆಗೆ ಇವನು ನನ್ನ ಫ್ರೆಂಡ್ ಆಗಲೇಬೇಕು, ಲವ್ವರ‍್ರಾಗಲೇಬೇಕು ಎಂಬ ಅವಸರವಿರುವುದಿಲ್ಲ. ಮೊದಲು ಮನುಷ್ಯರಾಗಿ ಮಾತನಾಡಿಕೊಳ್ಳುತ್ತಾರೆ. ಮನಸ್ಸುಗಳನ್ನು ಪರಿಚಯಿಸಿಕೊಳ್ಳುತ್ತಾರೆ. ನಂತರ ತಮ್ಮ  ನಡುವಿನ ಸಂಬಂಧಕ್ಕೊಂದು ಹೆಸರು ಕೊಟ್ಟುಕೊಳ್ಳುತ್ತಾರೆ. ಅದನ್ನೇ ಬದುಕಾಗಿಸಿಕೊಳ್ಳುತ್ತಾರೆ. ಸಾವೊಂದು ಮಾತ್ರ ಇವರ ಸಂಬಂಧವನ್ನು ಮುರಿಯಲು ಸಾಧ್ಯವೇ ಹೊರತು, ಬೇರೆ ಯಾವುದೂ ಇವರ ಸಂಬಂಧಕ್ಕೆ ಸಾವಾಗುವುದಿಲ್ಲ. ಅಸಲಿಗೆ ಮನಸ್ಸು ಮನಸ್ಸುಗಳ ಸಂಬಂಧಕ್ಕೆ ಸಾವೂ ಇಲ್ಲ. ಇಲ್ಲಿಯವರೆಗೆ ಯಾರಿಂದಲೂ ಅದಕ್ಕೊಂದು ಸಮಾಧಿ ಕಟ್ಟಲಿಕ್ಕೆ ಸಾಧ್ಯವಾಗಿಲ್ಲ!!
-ಆರುಡೋ ಗಣೇಶ

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆ ಕ್ಷಣದಲ್ಲಿ ಶರತ್‌ ಸಾವಿನೆದುರು ಅದೆಷ್ಟು ಅಸಹಾಯಕ!!

ಒಂಟಿತನ ಎಂದರೆ ಜವಾಬ್ದಾರಿಯಿಂದ ಜಾರಿಕೊಳ್ಳುವುದಾ?!

ಈಗ ಆರು ಪಾಸಾಗಿ ಏಳು...