ಹಳ್ಳಿ ಹಳ್ಳಿಗಳಿಗೂ ಹಂಚಬೇಡಿ ಕೊರೋನಾ!



‘ಕೊರೋನಾದ ಭಯ ಇರುವುದು ಪಟ್ಟಣಗಳಿಗೇ ಹೊರತು, ಗ್ರಾಮಗಳಿಗಲ್ಲ. ಗ್ರಾಮಗಳ ಜನರು ಸುರಕ್ಷಿತವಾಗಿದ್ದಾರೆ. ಗ್ರಾಮಗಳಲ್ಲಿ ಕೊರೋನಾ ಅಷ್ಟು ಸುಲಭಕ್ಕೆ ಹರಡುವುದಿಲ್ಲ’ ಎಂದು ಕೊರೋನಾ ಕಾಲಿಟ್ಟಾಗಿನಿಂದಲೂ ಹೇಳಲಾಗುತ್ತಿತ್ತು. ಇದು ನಿಜವೂ ಕೂಡಾ. ಆದ್ದರಿಂದಲೇ ಪಟ್ಟಣ ಸೇರಿದ್ದ ಹಳ್ಳಿಯ ಜನರೆಲ್ಲರೂ ಕೊರೋನಾದ ಹೆದರಿಕೆಯಿಂದಾಗಿಯೇ ಮತ್ತೆ ಹಳ್ಳಿ ಸೇರಿಕೊಂಡರು. ನಮ್ಮ ರಾಜ್ಯದ ಇಲ್ಲಿಯವರೆಗಿನ ಕೊರೋನಾ ಪ್ರಕರಣಗಳನ್ನು ಗಮನಿಸಿದರೆ, ಹೆಚ್ಚಿನ ಪ್ರಕರಣಗಳು ಹಳ್ಳಿಗಳಿಂದ ವರದಿಯಾಗಿಲ್ಲ. ಅಷ್ಟರಮಟ್ಟಿಗೆ ನಮ್ಮೆಲ್ಲ ಹಳ್ಳಿಗಳೂ ಸುರಕ್ಷಿತವಾಗಿವೆ. 
ಇದನ್ನು ಸಮರ್ಥಿಸುವಂತೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಕೂಡಾ, ‘ಹಳ್ಳಿಗಳಿಗೆ ಕೊರೋನಾ ಹರಡದಂತೆ ನೋಡಿಕೊಳ್ಳಿ, ಸಾಧ್ಯವಾದಷ್ಟು ಹಳ್ಳಿಗಳು ಕೊರೋನಾಮುಕ್ತವಾಗಿರುವಂತೆ ನಾವೆಲ್ಲರೂ ಎಚ್ಚರ ವಹಿಸಬೇಕಾಗಿದೆ’ ಎಂದು ಕೂಡಾ ಹೇಳಿದ್ದರು. ಆದರೆ ಈಗ ನೋಡಿದರೆ, ಅತಿ ಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗಿರುವಂತಹ ಹೊರರಾಜ್ಯದ ಪ್ರಮುಖ ಪಟ್ಟಣಗಳಿಂದ ಬಂದವರನ್ನು ಕೂಡಾ ಗಡಿಯಲ್ಲಿ ಜಿಲ್ಲಾಡಳಿತ ಪರೀಕ್ಷಿಸಿ ಹಳ್ಳಿಗಳಿಗೆ ಕಳಿಸಿ, ಅವರನ್ನು ಹಳ್ಳಿಗಳಲ್ಲಿ ಕ್ವಾರಂಟೈನ್ ಮಾಡುತ್ತಿದೆ. ಇದಕ್ಕೆ ಈಗಾಗಲೇ ರಾಜ್ಯದ ಹೆಚ್ಚಿನ ಹಳ್ಳಿಗಳಲ್ಲಿ ವಿರೋಧ ವ್ಯಕ್ತವಾಗುತ್ತಿರುವುದು ನಿಜವಾದರೂ, ಇದನ್ನು ಕಾನೂನಿನ ಬಲ ಪ್ರಯೋಗಿಸಿ, ಹೆದರಿಸಿ ಹತ್ತಿಕ್ಕುವ ಪ್ರಯತ್ನವನ್ನೂ ನಡೆಸಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳೇ ಖುದ್ದಾಗಿ ಕ್ವಾರಂಟೈನಿಗೆ ಅಡ್ಡಿ ಪಡಿಸುವವರ ವಿರುದ್ಧ ಎಫ್ಐಆರ್ ದಾಖಲಿಸಿ ಎಂದು ಆದೇಶ ನೀಡುವ ಮೂಲಕ ಈಗ ನಮ್ಮ ರಾಜ್ಯದ ಹಳ್ಳಿ ಹಳ್ಳಿಗಳಿಗೂ ಕೊರೋನಾವನ್ನು ಹಬ್ಬಿಸಲು ಸರ್ಕಾರವೇ ಮುಂದಾಗಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.
ಇಷ್ಟಕ್ಕೂ ಹಳ್ಳಿಗರು ಕೊರೋನಾ ಅತಿ ಹೆಚ್ಚಿನ ಪ್ರಮಾಣದಲ್ಲಿ ಇರುವ ಹೊರರಾಜ್ಯಗಳಿಂದ ಬಂದವರನ್ನು ತಮ್ಮ ಹಳ್ಳಿಗಳಲ್ಲಿ ಕ್ವಾರಂಟೈನ್ ಮಾಡಬೇಡಿ ಎಂದು ಅಡ್ಡಿ ಪಡಿಸುತ್ತಿರುವುದರಲ್ಲಿ ತಪ್ಪೇನಿದೆ? ಹಳ್ಳಿಗರು ಎಂದರೆ ಮುಗ್ಧರು, ಅತಿಥಿ ಸತ್ಕಾರಕ್ಕೆ ಹೆಸರಾದವರು ಎನ್ನುವುದನ್ನು ನಾವು ಮೊದಲಿನಿಂದಲೂ ಓದಿಕೊಂಡು ಬಂದಿದ್ದೇವೆ ಮತ್ತು ಖುದ್ದು ಇದನ್ನು ಅನುಭವಿಸಿದ್ದೇವೆ ಕೂಡಾ. ಪಟ್ಟಣ ಪ್ರದೇಶಗಳಲ್ಲಿ ಕುಡಿಯಲಿಕ್ಕೆ ಒಂದು ಲೋಟ ನೀರು ಕೇಳಿದರೂ ಸಿಕ್ಕದ ಸ್ಥಿತಿಯಿದ್ದರೆ, ಹಳ್ಳಿಗಳಲ್ಲಿ ಬಾಯಾರಿಕೆಯಾಗಿ ಕುಡಿಯಲು ನೀರು ಕೇಳಿದರೆ ಪಾನಕವನ್ನೇ ಕೊಡುವಂತಹ ವಿಶಾಲ ಹೃದಯಗಳಿದ್ದಾವೆ ಎನ್ನುವುದನ್ನು ನಾವು ಕಂಡಿದ್ದೇವೆ, ಕೇಳಿದ್ದೇವೆ. ಕಾಲ ಎಷ್ಟೇ ಆಧುನಿಕವಾದರೂ, ವ್ಯವಸ್ಥೆಯಲ್ಲಿ ಅದೆಂತಹ ಬದಲಾವಣೆಗಳಾದರೂ ನಮ್ಮ ಬಹುತೇಕ ಹಳ್ಳಿಗಳಲ್ಲಿ ಈಗಲೂ ಇಂತಹ ಒಂದಷ್ಟು ನಿಜಮನಸ್ಸಿನ ಜನರೇ ಇದ್ದಾರೆ. ಆದ್ದರಿಂದಲೇ ಅವರು ಯಾರ ಮೇಲೂ ದೂರು ಹೇಳದೆ ತಮ್ಮ ತಮ್ಮ ಹಳ್ಳಿಗಳಲ್ಲೇ ನೆಮ್ಮದಿಯ ಬದುಕನ್ನು ಬದುಕುತ್ತಿದ್ದಾರೆ. ಇಂತಹ ಹಳ್ಳಿಗರೇ ಈಗ ಕ್ವಾರಂಟೈನ್ ಮಾಡುತ್ತಿರುವುದರ ವಿರುದ್ಧ ಸಿಡಿದೆದ್ದಿದ್ದಾರೆ! ಕೊರೋನಾ ನಂತರ ಇಡೀ ದೇಶದಲ್ಲಿ ಆದ ಬದಲಾವಣೆಗಳನ್ನು ಗಮನಿಸುತ್ತಾ ಹೋದರೆ ನಿಮಗೆ ಹಳ್ಳಿಗರ ಈ ಸಿಟ್ಟಿನ ಮೂಲವೂ ತಿಳಿಯುತ್ತದೆ.
ಕೊರೋನಾ ಕಾಲಿಟ್ಟಿದೆ ಎಂದು ತಿಳಿದ ತಕ್ಷಣ ಪಟ್ಟಣಗಳಲ್ಲೇ ನಮ್ಮ ಬದುಕು ಎಂದುಕೊಂಡಿದ್ದ ಹೆಚ್ಚಿನವರು ಹೋಗಿ ಸೇರಿಕೊಂಡಿದ್ದೇ ತಮ್ಮ ಹಳ್ಳಿಗಳಿಗೆ. ಯುಗಾದಿ ಹಬ್ಬದಿಂದ ಎರಡನೇ ಬಾರಿ ಲಾಕ್ಡೌನ್ ವಿಸ್ತರಣೆಯಾಗುವವರೆಗೂ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿದ್ದವರು ತಮ್ಮ ತಮ್ಮ ಹಳ್ಳಿಗಳತ್ತ ಮುಖ ಮಾಡಿದರು. ದುಡಿಮೆಯ ಕಾರಣಕ್ಕೆ, ಬದುಕಿನ ಅನಿವಾರ್ಯತೆಯಿಂದಾಗಿ ಪಟ್ಟಣ ಸೇರಿದ್ದ ತಮ್ಮ ಹಳ್ಳಿಗಳ ಜನರು ಈ ಕಷ್ಟಕಾಲದಲ್ಲಿ ಊರಿಗೆ ಮರಳಿದಾಗ ಯಾವ ಹಳ್ಳಿಗಳಲ್ಲೂ ವಿರೋಧ ವ್ಯಕ್ತವಾಗಲಿಲ್ಲ. ಬದಲಿಗೆ ಹೊರ ಊರುಗಳಿಂದ ಮನೆಗಳಿಗೆ ಬಂದವರ ಬಗ್ಗೆ ಖುದ್ದು ಮನೆಯವರೇ ಸ್ಥಳೀಯ ಗ್ರಾಮ ಪಂಚಾಯ್ತಿಗಳಿಗೆ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ನೀಡಿದರು. ಹೋಂ ಕ್ವಾರಂಟೈನ್ ಆಗಲು ಒಪ್ಪಿದ್ದರು. ಆದರೆ ಪರಿಸ್ಥಿತಿ ಸ್ವಲ್ಪ ವಿಕೋಪಕ್ಕೆ ಹೋಗುತ್ತಿದ್ದಂತೆ ಹಳ್ಳಿಯ ಜನರು ಎಚ್ಚೆತ್ತರು. ಬೇಕಾಬಿಟ್ಟಿ ಓಡಾಡುವವರು, ತಮ್ಮ ಊರಿನವರಲ್ಲದೇ ಇರುವವರು ಯಾವ್ಯಾವುದೋ ಜಿಲ್ಲೆಗಳಿಂದ ತಮ್ಮೂರಿನತ್ತ ಬರುತ್ತಿದ್ದಾರೆ ಎನ್ನುವುದು ತಿಳಿದಾಗಲೇ ಹಳ್ಳಿಗರು ರಸ್ತೆಗೆ ಮಣ್ಣು ಸುರಿದು, ಮರ ಕಡಿದುರುಳಿಸಿ ಹೊರಗಿನವರು ಹಳ್ಳಿಯನ್ನು ಪ್ರವೇಶಿಸುವುದನ್ನೇ ತಡೆದರು. ಇದರ ಮುಂದುವರಿದ ಭಾಗವಾಗಿ ಈಗ ಹೊರ ರಾಜ್ಯಗಳಿಂದ, ಅದರಲ್ಲೂ ಕೊರೋನಾ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿರುವ, ಹರಡುತ್ತಿರುವ ರಾಜ್ಯಗಳಿಂದ ಬಂದವರನ್ನು ತಮ್ಮ ಹಳ್ಳಿಗಳಲ್ಲಿ ಕ್ವಾರಂಟೈನ್ ಮಾಡುತ್ತಿರುವುದನ್ನು ವಿರೋಧಿಸುತ್ತಿದ್ದಾರೆ.
ಈ ವಿರೋಧ ಎಲ್ಲಾ ರೀತಿಯಿಂದಲೂ ಸರಿಯಾದದ್ದೇ. ಯಾಕೆಂದರೆ, ಕೊರೋನಾ ಎಲ್ಲರ ಬದುಕನ್ನು ಇಷ್ಟೆಲ್ಲ ಕಂಗೆಡಿಸುತ್ತಿರುವಾಗಲೂ ಹಳ್ಳಿಗರು ತಮ್ಮ ನಡುವೆ ಕೊರೋನಾ ನುಸುಳದಂತೆ ನೋಡಿಕೊಂಡಿದ್ದರು. ಸಹಜವಾಗಿ ಸಂಚಾರಕ್ಕೆ ಯಾವುದೇ ಸೌಲಭ್ಯ ಇಲ್ಲದೇ ಇದ್ದಿದ್ದರಿಂದ ತಮ್ಮೂರಿನ ತಾಲ್ಲೂಕು ಕೇಂದ್ರಗಳಿಗೂ ಹೋಗದೆ ಹಳ್ಳಿಗಳಲ್ಲೇ ಉಳಿದುಕೊಂಡಿದ್ದರು. ದಿನಸಿ ಸೇರಿದಂತೆ ದಿನನಿತ್ಯದ ಅಗತ್ಯಗಳನ್ನು ಕೂಡಾ ಹೊರಗಿನವರಿಂದ ನೆಚ್ಚಿಕೊಳ್ಳದೇ ಹಳ್ಳಿಗಳಲ್ಲಿ ಇರುವುದರಲ್ಲೇ ದಿನ ತಳ್ಳುತ್ತಿದ್ದರು. ಈ ಕಾರಣದಿಂದಾಗಿಯೇ ಹೊರ ಊರುಗಳಿಂದ ಯಾವ ವಾಹನಗಳೂ ಹಳ್ಳಿಗಳಿಗೆ ಬಂದಿರಲಿಲ್ಲ. ತಪಾಸಣೆ, ಮೇಲ್ವಿಚಾರಣೆ ಎಂದು ಕೂಡಾ ಯಾವ ಸರ್ಕಾರಿ ವಾಹನಗಳೂ ಹೊರಗಿನಿಂದ ಹಳ್ಳಿಗಳನ್ನು ಪ್ರವೇಶಿಸಿರಲಿಲ್ಲ. ಆದರೆ ಈಗೇನಾಗುತ್ತಿದೆ? ಹೊರರಾಜ್ಯಗಳಿಂದ ಬಂದವರನ್ನು ಜಿಲ್ಲಾ ಕೇಂದ್ರಗಳಲ್ಲಿ ತಪಾಸಣೆ ಮಾಡಲಾಗುತ್ತಿದೆ ಹಾಗೂ ಅವರನ್ನು ಜಿಲ್ಲಾ ಕೇಂದ್ರದಲ್ಲಿದ್ದ ವಾಹನಗಳಲ್ಲೇ ಹಳ್ಳಿಗಳಿಗೆ ತಲುಪಿಸಲಾಗುತ್ತಿದೆ. ಹೀಗೆ ಹೊರರಾಜ್ಯದಿಂದ ಬಂದಿರುವ ಕೆಲವರು ತಾವಿದ್ದ ಊರುಗಳಿಂದಲೇ ತಮ್ಮ ಸ್ವಂತ ವಾಹನಗಳಲ್ಲಿ ಬರುತ್ತಿದ್ದಾರೆ. ಅಂದರೆ ಕೊರೋನಾ ಇದ್ದ ಪರವೂರುಗಳಲ್ಲಿ ಓಡಾಡಿಕೊಂಡಿದ್ದ ವಾಹನಗಳನ್ನೇ ಅವರು ಕ್ವಾರಂಟೈನ್ ಆಗಲಿಕ್ಕೆ ಹಳ್ಳಿಗಳಿಗೆ ತರುತ್ತಿದ್ದಾರೆ! ವೈರಸ್ ಈ ಮೂಲಕ ಸುಲಭವಾಗಿ ಹಳ್ಳಿಗಳನ್ನು ಪ್ರವೇಶಿಸಬಹುದಲ್ಲವಾ? ಹೀಗೆ ತಂದ ವಾಹನಗಳನ್ನು ಸೂಕ್ತ ಕ್ರಮದಲ್ಲಿ ಶುಚಿಗೊಳಿಸದೇ ಹಾಗೇ ಹಳ್ಳಿಯಲ್ಲಿ ನಿಲ್ಲಿಸಿದರೆ ಅದರ ಮೂಲಕ ಬಂದಿರಬಹುದಾದ ವೈರಸ್ ಹಳ್ಳಿಗರ ಸಂಪರ್ಕಕ್ಕೆ ಬರಬಹುದಲ್ಲವಾ?
ಇನ್ನು ಪರರಾಜ್ಯಗಳಿಂದ ಹಳ್ಳಿಗಳಿಗೆ ಕ್ವಾರಂಟೈನ್ ಆಗಲು ಬರುವವರನ್ನು ಬೇರೆ ವ್ಯವಸ್ಥೆ ಇಲ್ಲದೇ ಇರುವುದರಿಂದ ಸರ್ಕಾರಿ ಹಾಸ್ಟೆಲ್ಲು ಮತ್ತು ಶಾಲೆಗಳಲ್ಲಿ ಇರಿಸಲಾಗುತ್ತಿದೆ. ಹಾಗಿದ್ದರೆ ಇವರ ಊಟ-ತಿಂಡಿಯ ವ್ಯವಸ್ಥೆಯೇನು? ಇದರ ಜವಾಬ್ದಾರಿಯನ್ನೂ ಆಯಾಯ ಜಿಲ್ಲಾಡಳಿತಗಳು ಗ್ರಾಮಸ್ಥರಿಗೇ ಬಿಟ್ಟಿವೆ. ಅಂದರೆ ಹಳ್ಳಿಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್ ಆದವರ ಊಟ ತಿಂಡಿಯನ್ನು ಹಳ್ಳಿಯವರೇ ಕೊಡಬೇಕಿದೆ. ಒಂದೊಮ್ಮೆ ಸಾರ್ವಜನಿಕರು ಕೊಡಲು ಒಪ್ಪದೇ ಇದ್ದರೆ ಕ್ವಾರಂಟೈನ್ನಲ್ಲಿ ಇರುವವರ ಮನೆಯವರು ಈ ವ್ಯವಸ್ಥೆ ಮಾಡಬೇಕಿದೆ. ಸರ್ಕಾರಕ್ಕೆ ಯಾವುದೇ ರೀತಿಯಲ್ಲಿಯೂ ಆರ್ಥಿಕವಾಗಿ ಹೊರೆಯಾಗದ ಈ ರೀತಿಯ ಕ್ವಾರಂಟೈನ್ ಸರ್ಕಾರಕ್ಕೆ ನೆಮ್ಮದಿ ನೀಡಬಹುದಾದರೂ, ಹಳ್ಳಿಗಳಲ್ಲಿ ಇರುವ ಕ್ವಾರಂಟೈನ್ ಆದ ಮನೆಯವರು ಇವರಿಗೆ ತಂದು ಕೊಡಬಹುದಾದ ಊಟದ ಬಾಕ್ಸ್ ಇತ್ಯಾದಿಗಳ ಮೂಲಕ ಕೊರೋನಾ ವೈರಸ್ ಸುಲಭವಾಗಿ ಹಳ್ಳಿಗಳಿಗೆ ಹರಡಬಹುದಲ್ಲವಾ? ಕ್ವಾರಂಟೈನ್ನಲ್ಲಿರುವವರು ಎಷ್ಟೇ ಇದನ್ನೆಲ್ಲ ಸ್ವಚ್ಛಗೊಳಿಸಿ ತಮ್ಮ ಮನೆಯವರಿಗೆ ನೀಡುತ್ತಾರೆಂದರೂ, ಈ ಮೂಲಕ ಹಳ್ಳಿಗಳಿಗೆ ವೈರಸ್ ಸುಲಭವಾಗಿ ಹರಡುವುದು ನಿಶ್ಚಿತ. ಇನ್ನು ಮನೆಯವರೇ ಊಟ ತಂದು ಕೊಡುವಾಗ ಅವರೊಂದಿಗೆ ಇವರು ಒಂದಿಷ್ಟು ಸಮಯವಾದರೂ ಮಾತಿಗೆ ನಿಲ್ಲದೇ ಇರುತ್ತಾರಾ?
ಸಾಮಾನ್ಯವಾಗಿ ಹಳ್ಳಿಗಳಲ್ಲಿ ಶಾಲೆ ಮತ್ತು ಹಾಸ್ಟೆಲ್ಲುಗಳು ಜನವಸತಿ ಪ್ರದೇಶದಲ್ಲಿಯೇ ಇರುತ್ತವೆ. ಮನೆಗಳಿಗೆ ಅಂಟಿಕೊಂಡಂತೆಯೇ ಇರುವ ಇಂತಹ ಕಟ್ಟಡಗಳಲ್ಲಿ ಕ್ವಾರಂಟೈನ್ ಮಾಡುವುದರಿಂದ ಸುಲಭವಾಗಿ ಅಕ್ಕಪಕ್ಕದ ಮನೆಗಳೂ ಅಪಾಯಕ್ಕೆ ಸಿಲುಕಲಿವೆ. ಇವೆಲ್ಲದರ ನಡುವೆ, ಹೀಗೆ ಹಳ್ಳಿಗಳಲ್ಲಿ ಕ್ವಾರಂಟೈನ್ ಆದವರು ಅವಧಿ ಮುಗಿಯುವವರೆಗೂ ಹೊರಗೆಲ್ಲೂ ಓಡಾಡದೇ ಆ ಕಟ್ಟಡದೊಳಗೆ ಇರುವುದನ್ನು ಗಮನಿಸುವವರು ಯಾರು? ಈ ಬೇಸಿಗೆಯಲ್ಲಿ ಫ್ಯಾನ್ ಇದ್ದರೂ ಹೆಂಚಿನ ಮಾಡುಗಳಿರುವ ಕಟ್ಟಡದೊಳಗೇ ದಿನಪೂರ್ತಿ ಇರುವುದು ಕಷ್ಟವೇ. ಹೀಗಾದಾಗ ಇವರು ಸಹಜವಾಗಿಯೇ ಆ ಕಟ್ಟಡವಿರುವ ಆವರಣದೊಳಗೇ ಓಡಾಡಿದರೂ ಇದನ್ನು ನಿರ್ಬಂಧಿಸುವವರು ಯಾರು? ಸಂಜೆಯ ನಂತರ ಅವರು ಕಟ್ಟಡಗಳಿಂದ ಹೊರಬಂದು ಓಡಾಡಿದರೂ ಅದನ್ನು ನಿರ್ಬಂಧಿಸುವವರು ಯಾರು? ಈಗ ಕೆಲವು ಗ್ರಾಮಗಳಲ್ಲಿ ಸಿಸಿಟಿವಿ ಮುಖಾಂತರ ಇವರ ಮೇಲೆ ನಿಗಾ ಇಡಲಾಗುತ್ತದೆ, ಆದ್ದರಿಂದ ಗ್ರಾಮಸ್ಥರು ಹೆದರಬೇಕಾಗಿಲ್ಲ ಎಂದು ಹೇಳಲಾಗುತ್ತಿದೆಯಾದರೂ ಹಳ್ಳಿಗಳಲ್ಲಿರುವ ಸರ್ಕಾರದ ಎಷ್ಟು ಶಾಲೆ ಮತ್ತು ಹಾಸ್ಟೆಲ್ಲುಗಳಲ್ಲಿ ಸಿಸಿಟಿವಿ ವ್ಯವಸ್ಥೆ ಇದೆ? ಒಂದೊಮ್ಮೆ ಕ್ವಾರಂಟೈನ್ ಆಗುವವರನ್ನು ಗಮನಿಸುವುದಕ್ಕಾಗಿಯೇ ಈ ಕಟ್ಟಡಗಳಿಗೆ ಹೊಸದಾಗಿ ಸಿಸಿಟಿವಿ ಅಳವಡಿಸುವುದಾದರೆ ಆ ವೆಚ್ಚದಲ್ಲೇ ಹೊರ ರಾಜ್ಯದಿಂದ ಬಂದವರನ್ನು ಜಿಲ್ಲೆ ಅಥವಾ ಕನಿಷ್ಠ ಪಕ್ಷ ತಾಲ್ಲೂಕು ಕೇಂದ್ರಗಳಲ್ಲಾದರೂ ಕ್ವಾರಂಟೈನ್ ಮಾಡಬಹುದಲ್ಲವಾ?
ಜಿಲ್ಲಾಡಳಿತದ ಆದೇಶದಂತೆ ಈಗ ಹೊರರಾಜ್ಯದಿಂದ ಬರುವವರನ್ನು ಗ್ರಾಮಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತಿರುವುದೇನೋ ಸರಿ. ಆದರೆ ಹೀಗೆ ಕ್ವಾರಂಟೈನ್ ಆದವರಿಗೆ ಕ್ವಾರಂಟೈನ್ ಅವಧಿ ಮುಗಿಯುವುದರೊಳಗಾಗಿ ಕೊರೋನಾ ಪಾಸಿಟಿವ್ ಎಂದು ತಿಳಿದರೆ ಅವರಿಗೆ ಗ್ರಾಮಗಳಲ್ಲಿ ಇರಬಹುದಾದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲು ಸಾಧ್ಯವಿದೆಯಾ? ಇವರನ್ನು ಮತ್ತೆ ಜಿಲ್ಲಾ ಕೇಂದ್ರಗಳಲ್ಲಿರುವ ಕೊರೋನಾ ಚಿಕಿತ್ಸೆಗೆಂದೇ ಇರುವ ಆಸ್ಪತ್ರೆಗಳಿಗೇ ಕರೆದೊಯ್ಯಬೇಕು. ಹೀಗೆ ಅವರನ್ನು ಮತ್ತೆ ಕರೆದೊಯ್ಯಲು ಅಂಬುಲೆನ್ಸ್ ಇತ್ಯಾದಿ ಎಂದು ಇಂತಹ ಸಂದರ್ಭಗಳಲ್ಲಿ ಪಟ್ಟಣಗಳಿಂದ ಹಳ್ಳಿಗಳಿಗೆ ವಾಹನ ಓಡಿಸುವುದು ವಿನಾಕಾರಣ ನಾವಾಗಿಯೇ ತೊಂದರೆಯನ್ನು ಮೈಮೇಲೆಳೆದುಕೊಂಡಂತಲ್ಲವಾ? ಇಂತಹ ಸಂದರ್ಭದಲ್ಲಿ ಪಟ್ಟಣಗಳಿಂದ ಗ್ರಾಮಗಳೆಡೆಗೆ ಅನಗತ್ಯ ವಾಹನ, ಯಾವುದೇ ವ್ಯಕ್ತಿ ಹೋಗಿ ಬರುವುದು ಅಷ್ಟರಮಟ್ಟಿಗೆ ಹಳ್ಳಿಗಳಲ್ಲೂ ಕೊರೋನಾ ಹರಡಲು ಕಾರಣವಾಗುತ್ತದೆ ಎನ್ನುವ ಸೂಕ್ಷ್ಮ ಸರ್ಕಾರಕ್ಕೆ ತಿಳಿಯದ್ದೇನೂ ಅಲ್ಲ.
ಜಿಲ್ಲಾಡಳಿತವು ಜಿಲ್ಲಾ ಕೇಂದ್ರದಲ್ಲಿರುವ ಸರ್ಕಾರಿ ಹಾಸ್ಟೆಲ್, ವಸತಿ ಶಾಲೆ, ಶಾಲೆ ಹಾಗೂ ಖಾಸಗಿ ವಸತಿ ಗೃಹಗಳು ಈಗಾಗಲೇ ಕ್ವಾರಂಟೈನ್ ಆದವರಿಂದ ತುಂಬಿ ಹೋಗಿರುವುದರಿಂದ ಹಳ್ಳಿಗಳಿಗೇ ಹೊರರಾಜ್ಯದಿಂದ ಬಂದವರನ್ನು ಕಳಿಸಲಾಗುತ್ತಿದೆ ಎಂದು ಹೇಳುತ್ತಿರುವುದು ಸರಿಯಾದರೂ, ತೀರಾ ಕೊರೋನಾ ಸೋಂಕು ಅತಿ ಹೆಚ್ಚಿನ ಪ್ರಮಾಣದಲ್ಲಿ ಹರಡಿರುವ ಮತ್ತು ಸಧ್ಯ ನಿಯಂತ್ರಣಕ್ಕೂ ಬಾರದೇ ಇರುವ ಹೊರರಾಜ್ಯಗಳಿಂದ ಬಂದವರನ್ನು ಹಳ್ಳಿಗಳಿಗೆ ಕಳಿಸುತ್ತಿರುವುದು ಪರೋಕ್ಷವಾಗಿ ಸರ್ಕಾರವೇ ಕೊರೋನಾ ವೈರಸ್ಸನ್ನು ಹಳ್ಳಿಗಳಿಗೆ ರವಾನಿಸುತ್ತಿರುವಂತೆಯೇ ಕಾಣುತ್ತಿದೆ. ಈಗಾಗಲೇ ಗುಜರಾತ್ನಿಂದ ಬಂದಿದ್ದ ಶಿಕಾರಿಪುರದ ನಿವಾಸಿಗಳನ್ನು ಶಿವಮೊಗ್ಗ ಜಿಲ್ಲಾಡಳಿತ ನೇರವಾಗಿ ಶಿಕಾರಿಪುರಕ್ಕೆ ಕಳಿಸಲಿಲ್ಲ. ಹೀಗೆ ಹೊರರಾಜ್ಯದಿಂದ ಬಂದ ಎಂಟು ಜನರಲ್ಲೇ ಕೊರೋನಾ ಪಾಸಿಟಿವ್ ಕಾಣಿಸಿಕೊಂಡು, ಹಸಿರು ವಲಯದಲ್ಲಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲ ಕೊರೋನಾ ಪ್ರಕರಣ ದಾಖಲಾದಂತಾಯಿತು. ಅಂದರೆ ಕೊರೋನಾ ಪೀಡಿತ ಹೊರರಾಜ್ಯಗಳ ಯಾವುದೇ ಸ್ಥಳಗಳಿಂದ ಬಂದವರ ಮೇಲೆ ಹೆಚ್ಚಿನ ನಿಗಾ ಇರಬೇಕಾದದ್ದು ಕಡ್ಡಾಯ. ಒಂದೊಮ್ಮೆ ಇವರನ್ನು ಶಿಕಾರಿಪುರ - ತೀರ್ಥಹಳ್ಳಿ ಅಥವಾ ಅಲ್ಲಿನ ಅವರು ವಾಸವಿದ್ದ ಹಳ್ಳಿಗಳಿಗೇ ನೇರವಾಗಿ ಕ್ವಾರಂಟೈನ್ ಮಾಡಲು ಕಳಿಸಿ ರಿಸಲ್ಟ್ ಪಾಸಿಟಿವ್ ಬಂದಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು? ಯಾರೇ ಕ್ವಾರಂಟೈನ್ ಆಗಿದ್ದ ಅವಧಿಯಲ್ಲಿ ಪಾಸಿಟಿವ್ ಫಲಿತಾಂಶವೇ ಬಂದಿತೆಂದರೆ ಅವರಿಗೆ ತಕ್ಷಣವೇ ಚಿಕಿತ್ಸೆ ಕೊಡಬೇಕಾದ ಅಗತ್ಯವೂ ಇದೆ. ಹೀಗಿರುವಾಗ ಇಂತಹವರನ್ನು ಹಳ್ಳಿಗಳಿಗೆ ರವಾನಿಸಿದರೆ ಅದು ಸಧ್ಯ ಇರುವುದರಲ್ಲೇ ನೆಮ್ಮದಿ ಕಾಣುತ್ತಿರುವ ಹಳ್ಳಿಗರ ಬದುಕನ್ನೇ ಕಂಗಾಲಾಗಿಸಿದಂತಲ್ಲವಾ? 
ಆದ್ದರಿಂದ ಕೊರೋನಾ ಹೆಚ್ಚಿನ ಪ್ರಮಾಣದಲ್ಲಿ ಹರಡಿರುವ ಹೊರರಾಜ್ಯಗಳಿಂದ ಬಂದವರನ್ನು ಜಿಲ್ಲಾ ಕೇಂದ್ರದಲ್ಲಿ ತಪಾಸಣೆಗೊಳಪಡಿಸಿ ನೇರವಾಗಿ ಹಳ್ಳಿಗಳಿಗೆ ಕ್ವಾರಂಟೈನ್ ಮಾಡಲು ಕಳಿಸುವ ಬದಲು, ಜಿಲ್ಲಾ ಕೇಂದ್ರದಲ್ಲಿಯೇ ಇರುವ ವ್ಯವಸ್ಥೆಯಲ್ಲೇ ಅವರನ್ನು ಕ್ವಾರಂಟೈನ್ಗೊಳಪಡಿಸಿ. ಸಾಧ್ಯವಾಗಿಲ್ಲವೆಂದರೆ ತಾಲ್ಲೂಕು ಕೇಂದ್ರಗಳಲ್ಲಿ ಅವರನ್ನಿರಿಸಿ ಸೂಕ್ತ ನಿಗಾ ವಹಿಸಿ. ಇದೇ ಕ್ರಮವನ್ನು ಕೊರೋನಾ ಸೋಂಕಿನಿಂದ ಕೆಂಪು ವಲಯದಲ್ಲಿ ಗುರುತಿಸಿಕೊಂಡಿರುವ ಜಿಲ್ಲಾ ಪ್ರದೇಶಗಳಿಂದ ಬರುವವರ ವಿಷಯದಲ್ಲೂ ಅನುಸರಿಸಬೇಕಿದೆ. ಇದನ್ನು ಹೊರತು ಪಡಿಸಿದ ಪ್ರದೇಶಗಳಿಂದ ಬರುವವರನ್ನೂ ಹಳ್ಳಿಗಳಿಗೆ ಕಳಿಸುವ ಮೊದಲು ಸ್ಥಳೀಯ ಆಡಳಿತ ಹಾಗೂ ಜನರ ಅನುಮತಿ ಪಡೆಯುವುದು ಈ ಕಡುಕಷ್ಟದ ಕಾಲದಲ್ಲಿ ಒಂದಿಷ್ಟು ಎಚ್ಚರಿಕೆಯ ನಡೆಯೇ ಆಗಿದೆ.
ನಾವು ಇರುವ ಭೂಮಿ ಪೂರ್ತಿ ಬೆಂಕಿಯಿಂದ ಹೊತ್ತಿ ಉರಿಯಲಾರಂಭಿಸಿದರೆ ಬದುಕಲಿಕ್ಕೆ ಒಂದಿಷ್ಟು ನೀರಿನ ಸೆಲೆ ಇರುವ ಜಾಗ ಬೇಕೇ ಬೇಕಾಗುತ್ತದೆ. ಸಧ್ಯ ಕೊರೋನಾದ ಭಯವಿಲ್ಲದೆ ಇರುವ ಹಳ್ಳಿಗಳನ್ನು ನಾವು ಈಗಿರುವ ಆರೋಗ್ಯಕಾರಿ ಸ್ಥಿತಿಯಲ್ಲೇ ಕಾಪಾಡಿಕೊಳ್ಳದೇ ಹೋದರೆ, ನೀರಿನ ಸೆಲೆಯನ್ನೂ ನಾವೇ ಬತ್ತಿಸಿ ಬೆಂಕಿ ಬಿದ್ದಾಗ ಬದುಕಲಿಕ್ಕಾಗಿ ನೀರಿರುವ ಜಾಗವನ್ನು ಹುಡುಕಿ ಅಲೆದಂತಾದೀತು.
 -ಆರುಡೋ ಗಣೇಶ, ಕೋಡೂರು


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆ ಕ್ಷಣದಲ್ಲಿ ಶರತ್‌ ಸಾವಿನೆದುರು ಅದೆಷ್ಟು ಅಸಹಾಯಕ!!

ಒಂಟಿತನ ಎಂದರೆ ಜವಾಬ್ದಾರಿಯಿಂದ ಜಾರಿಕೊಳ್ಳುವುದಾ?!

ಈಗ ಆರು ಪಾಸಾಗಿ ಏಳು...