ಯಡಿಯೂರಪ್ಪನವರನ್ನು ಕೆಳಗಿಳಿಸಿದರೆ ಕೊರೋನಾ ಕಂಟ್ರೋಲ್ ಆಗುತ್ತದಾ?!

ಯಡಿಯೂರಪ್ಪನವರನ್ನು ಕೆಳಗಿಳಿಸಿ ಹೊಸ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಬಿಜೆಪಿಯ ಹೈಕಮಾಂಡ್‌ ಮತ್ತು ರಾಜ್ಯ ಬಿಜೆಪಿಯ ಕೆಲ ಶಾಸಕರು, ಅಸಮಾಧಾನಗೊಂಡಿರುವ ಸಚಿವರು ಒಟ್ಟಾಗಿ ಪ್ರಯತ್ನಿಸುತ್ತಿದ್ದಾರೆ ಎನ್ನುವ ಸುದ್ದಿಯೊಂದು ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದೆ. ಅನುಭವಿ ರಾಜಕೀಯ ವರದಿಗಾರರ ಕೆಲವು ವರದಿಗಳ ಪ್ರಕಾರವೂ ಇಂತಹದ್ದೊಂದು ಗಂಭೀರ ಪ್ರಯತ್ನ ನಡೆಯುತ್ತಿದೆಯಂತೆ!

ರಾಜ್ಯದಲ್ಲಿ ಕೊರೋನಾದಿಂದಾಗಿ ಸಾವು ಈ ಪರಿ ಅಬ್ಬರಿಸುತ್ತಿರುವಾಗ ಈ ಮುಖ್ಯಮಂತ್ರಿ ಬದಲಾವಣೆ ಎನ್ನುವುದು ಅಷ್ಟೊಂದು ತುರ್ತಾದ ವಿಷಯವಾ?!

ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ರಾಜ್ಯದಲ್ಲಿ ಕೊರೋನಾ ಆಪತ್ತನ್ನು ಎಷ್ಟು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎನ್ನುವ ಪ್ರಶ್ನೆಯನ್ನು ಹಾಕಿಕೊಂಡು ಅದಕ್ಕೆ ಉತ್ತರ ಹುಡುಕಿಕೊಳ್ಳುವ ಮೊದಲು, ಅವರದ್ದೇ ಮಂತ್ರಿ ಮಂಡಲ ಎಷ್ಟರಮಟ್ಟಿಗೆ ಅವರೊಂದಿಗೆ ಈ ಹೋರಾಟಕ್ಕೆ ಕೈ ಜೋಡಿಸಿದೆ? ಕೇಂದ್ರ ಸರ್ಕಾರ ಎಷ್ಟರಮಟ್ಟಿಗೆ ಸಹಕಾರ ನೀಡುತ್ತಿದೆ? ಎನ್ನುವ ಪ್ರಶ್ನೆಗಳಿಗೂ ಉತ್ತರ ಹುಡುಕಿಕೊಳ್ಳುವುದು ಒಳ್ಳೆಯದು.

ಹಾಗೆಂದು, ನಾನು ಯಡಿಯೂರಪ್ಪನವರನ್ನೋ, ಅವರ ಕಾರ್ಯವೈಖರಿಯನ್ನೋ ಖಂಡಿತ ಸಮರ್ಥಿಸುತ್ತಿಲ್ಲ. ಆಯಿತು, ನೀವು ಅವರನ್ನು ಬದಲಾಯಿಸಿ ಬೇರೆ ಯಾರನ್ನೋ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುತ್ತೀರಿ ಎಂದೇ ಇಟ್ಟುಕೊಳ್ಳಿ, ಅವರು ನಿಮ್ಮದೇ ಬಿಜೆಪಿಯವರೇ ಇರುತ್ತಾರಲ್ಲವಾ? ರಾಜ್ಯ ಇಷ್ಟು ಸಂಕಷ್ಟದಲ್ಲಿರುವಾಗಲೂ ಅವರು ಬಿಜೆಪಿಯಲ್ಲೇ ಇದ್ದಾರಲ್ಲವಾ? ಅಂದಹಾಗೇ, ನೀವೇನು ಈಗ ಕೇವಲ ಸಾಮಾನ್ಯ ಶಾಸಕನಾಗಿ ಯಾವುದೋ ತಾಲ್ಲೂಕಿನ ಮೂಲೆಯಲ್ಲಿ ಉಳಿದಿರುವ ಯಾರನ್ನೋ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವುದಿಲ್ಲ. ಬದಲಿಗೆ ಹೈಕಮಾಂಡಿನಲ್ಲಿ ದೊಡ್ಡ ಮಟ್ಟದ ಪ್ರಭಾವ ಹೊಂದಿರುವ, ಆರೆಸ್ಸೆಸ್ಸ್‌ನ ಬೆಂಬಲವನ್ನೂ ಹೊಂದಿರುವ ಹಾಗೂ ಈಗಾಗಲೇ ಉಪಮುಖ್ಯಮಂತ್ರಿ ಅಥವಾ ಪ್ರಭಾವಿ ಸಚಿವರಾಗಿರುವವರನ್ನೇ ಯಡಿಯೂರಪ್ಪನವರ ಬದಲಿಗೆ ಮುಖ್ಯಮಂತ್ರಿಯಾಗಿಸುತ್ತೀರಿ. ಯಡಿಯೂರಪ್ಪನವರಿಗೆ ಇಂತಹ ಸಂದರ್ಭದಲ್ಲಿ ರಾಜ್ಯವನ್ನು ನಿಭಾಯಿಸಲಾಗುತ್ತಿಲ್ಲ ಎಂದು ನೀವು ಹೊಸದಾಗಿ ಆಯ್ಕೆ ಮಾಡುವ ವ್ಯಕ್ತಿ ನಿಮ್ಮ ಪ್ರಕಾರ ರಾಜ್ಯದಲ್ಲಿ ಕೊರೋನಾವನ್ನು ಹತೋಟಿಗೆ ತರುತ್ತಾರೆ! ಅವರು ಅಷ್ಟು ಸಮರ್ಥರೇ ಆಗಿದ್ದರೆ ಮುಖ್ಯಮಂತ್ರಿ ಕುರ್ಚಿಯನ್ನೇರದೇ ಅವರು ಈಗ ಯಡಿಯೂರಪ್ಪನವರಿಗೇ ಬೆಂಬಲವಾಗಿ ನಿಲ್ಲಬಹುದಲ್ಲವಾ? ಯಡಿಯೂರಪ್ಪನವರೊಂದಿಗೆ ಸೇರಿಕೊಂಡು ರಾಜ್ಯದಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಬಹುದಲ್ಲವಾ? ಅವರು ಕೆಲಸ ಮಾಡಬೇಕೆಂದರೆ ಮುಖ್ಯಮಂತ್ರಿಯ ಕುರ್ಚಿಯೇ ಬೇಕಾ? ಹಾಗೆ ಬೇಕೆನ್ನುವುದೇ ಆದರೆ ಅದು ಎಂತಹ ಹೀನ ಮನಸ್ಥಿತಿಯಲ್ಲವಾ? ರಾಜ್ಯದ ಜನರು ಸಾಲು ಸಾಲಾಗಿ ಸತ್ತು ಹೋದರೂ ಪರವಾಗಿಲ್ಲ, ಆದರೆ ನಾನು ಮುಖ್ಯಮಂತ್ರಿಯಾಗದೇ ಈ ಸಾವುಗಳ ಸರಣಿಯನ್ನು ತುಂಡರಿಸಲು ಮುಂದಾಗುವುದಿಲ್ಲ, ಯಡಿಯೂರಪ್ಪನವರೊಂದಿಗೆ ಕೈ ಜೋಡಿಸುವುದಿಲ್ಲ ಎಂದೇ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಶಾಸಕ ಅಥವಾ ಸಚಿವ ನಿರ್ಧರಿಸಿದಂತೆ ಆಯಿತಲ್ಲವಾ?

ಅಂದರೆ, ಯಡಿಯೂರಪ್ಪನವರ ಬದಲಿಗೆ ಯಾರೇ ಮುಖ್ಯಮಂತ್ರಿಯಾದರೂ ಅವರಿಗೆ ತುರ್ತಾಗಿ ಯಡಿಯೂರಪ್ಪ ಕೆಳಗಿಳಿಯಬೇಕಿತ್ತು ಮತ್ತು ತಾನು ಮುಖ್ಯಮಂತ್ರಿ ಕುರ್ಚಿ ಏರಬೇಕಿತ್ತು ಎನ್ನುವುದೊಂದೇ ಮುಖ್ಯ ಉದ್ದೇಶವಾಗಿತ್ತು ಎಂದೇ ಅರ್ಥ. ರಾಜ್ಯವನ್ನು ಇಂತಹ ಸಂಕಷ್ಟದ ಸಂದರ್ಭದಲ್ಲಿ ಕಾಪಾಡಬೇಕು, ಸಾವುಗಳ ಸರಣಿಯನ್ನು ನಿಲ್ಲಿಸಬೇಕು ಎನ್ನುವ ಜನರೆಡೆಗಿನ ಯಾವ ಕಳಕಳಿಯೂ ಇಲ್ಲ ಎಂದೇ ಆಯಿತು.

ಇನ್ನು ಹೊಸದಾಗಿ ಮುಖ್ಯಮಂತ್ರಿಯಾದವರು ರಾಜ್ಯದಲ್ಲಿ ಕೊರೋನಾ ನಿಯಂತ್ರಿಸಲು ಯಡಿಯೂರಪ್ಪನವರಂತೆಯೇ ಆಡಳಿತ ವರ್ಗವನ್ನೇ ನೆಚ್ಚಿಕೊಳ್ಳಬೇಕು. ಯಾಕೆಂದರೆ, ಮುಖ್ಯಮಂತ್ರಿಗಳಾದವರು ನೇರವಾಗಿ ಫೀಲ್ಡಿಗಿಳಿದು ಕೊರೋನಾ ನಿಯಂತ್ರಿಸಲು ಸಾಧ್ಯವಿಲ್ಲ. ಅಂದರೆ ಹೊಸ ಮುಖ್ಯಮಂತ್ರಿ ಕೂಡಾ ಈಗಾಗಲೇ ಸರ್ಕಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳನ್ನೇ ಆಯಕಟ್ಟಿನ ಹುದ್ದೆಗೆ ನೇಮಿಸಿ ಅವರ ಮೂಲಕ ಕೊರೋನಾ ನಿಯಂತ್ರಣದ ಪ್ಲ್ಯಾನ್ ಮಾಡಬೇಕು. ಹೊಸ ಮುಖ್ಯಮಂತ್ರಿಗೆ ಅಂತಹ ಸಮರ್ಥ ಹಾಗೂ ಕೆಲಸ ಮಾಡುವ ಅಧಿಕಾರಿಗಳು ಸಿಕ್ಕುವುದೇ ಆದರೆ, ಅವರು ಈಗಲೂ ಸಿಕ್ಕಬಹುದಲ್ಲವಾ? ಹೊಸದಾಗಿ ಮುಖ್ಯಮಂತ್ರಿಯಾದವನು ಹೊಸ ನೇಮಕಾತಿಯನ್ನಂತೂ ಮಾಡಲು ಸಾಧ್ಯವಿಲ್ಲ. ಈಗ ಇರುವ ಅಧಿಕಾರಿಗಳಲ್ಲೇ ಅವರು ತಮ್ಮ ಅನುಭವ, ಅಂದಾಜಿನ ಮೇಲೆ ಸಮರ್ಥ ಅಧಿಕಾರಿಗಳನ್ನು ಕೊರೋನಾ ನಿಯಂತ್ರಿಸಲು ನೇಮಿಸುವುದೇ ಆದರೆ ಮುಖ್ಯಮಂತ್ರಿ ಹುದ್ದೆಗೆ ಆಕಾಂಕ್ಷಿಗಳಾದವರು, ಹೈಕಮಾಂಡಿನ ಪ್ರಕಾರ ಯಡಿಯೂರಪ್ಪನವರಿಗಿಂತ ಸಮರ್ಥರು ಆಗಿರುವ ಅವರು ಈಗಲೂ ಆ ಅಧಿಕಾರಿಗಳ ಬಗ್ಗೆ ಯಡಿಯೂರಪ್ಪನವರಿಗೆ ತಿಳಿಸಬಹುದಲ್ಲವಾ? ಒಂದೊಮ್ಮೆ ಯಡಿಯೂರಪ್ಪ ಇವರು ಹೇಳಿದ್ದನ್ನು ಕೇಳುವುದೇ ಇಲ್ಲವಾದರೆ, ಅಂತಹ ಅಧಿಕಾರಿಗಳ ಬಗ್ಗೆ ಹೈಕಮಾಂಡ್ ಗಮನಕ್ಕೆ ತಂದು ಅವರ ಮೂಲಕ ಯಡಿಯೂರಪ್ಪನವರಿಗೆ ಹೇಳಿಸಿ ಆ ಅಧಿಕಾರಿಗಳಿಗೆ ಪರಿಸ್ಥಿತಿ ನಿಯಂತ್ರಿಸಲು ಬೇಕಾದ ಅಧಿಕಾರವನ್ನು ನೀಡಬಹುದಲ್ಲವಾ?

ಒಂದೋ ಯಡಿಯೂರಪ್ಪ ಹೈಕಮಾಂಡ್ ಸೇರಿದಂತೆ ಉಪಮುಖ್ಯಮಂತ್ರಿ, ಸಚಿವರು, ಶಾಸಕರು, ಸಂಸದರು ಸೇರಿದಂತೆ ಯಾರ ಮಾತನ್ನೂ ಕೇಳುತ್ತಿಲ್ಲ. ಅಥವಾ ಹೇಗಾದರೂ ಮಾಡಿ ಕೊರೋನಾ ನಿಯಂತ್ರಣ ವೈಫಲ್ಯವನ್ನೇ ಮುಂದಿಟ್ಟುಕೊಂಡು ಯಡಿಯೂರಪ್ಪನನ್ನು ಕೆಳಗಿಳಿಸಿ ತಾನು ಮುಖ್ಯಮಂತ್ರಿಯಾಗಬೇಕು ಎಂದು ಹೊಂಚು ಹಾಕುತ್ತಿರುವವರು ಅಂತಹ ಸಮರ್ಥ ಅಧಿಕಾರಿಗಳ ಬಗ್ಗೆ ಯಡಿಯೂರಪ್ಪ ಸೇರಿದಂತೆ ಯಾರಿಗೂ ತಿಳಿಸುತ್ತಿಲ್ಲ. ಉರಿವ ಮನೆಯಲ್ಲಿ ಗಳ ಹಿರಿಯುವುದು ಎನ್ನುತ್ತಾರಲ್ಲ ಅಂತಹದ್ದೇ ಮನಸ್ಥಿತಿಯಲ್ಲಿ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಗಳು ಕುಳಿತು ಆಟ ನೋಡುತ್ತಿದ್ದಾರೆ.

ರಾಜ್ಯದಲ್ಲಿ ಜನರ ಸಾವಿನ ಸಂಖ್ಯೆ ಎಷ್ಟು ಏರುತ್ತದೋ ಅಷ್ಟು ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಗಳಿಗೆ ಒಳ್ಳೆಯದು. ಅಷ್ಟರಮಟ್ಟಿಗೆ ತಮಗೆ ಸಿಗಬೇಕಾದ ಅಧಿಕಾರಕ್ಕಾಗಿ ಬಾಯಿಗೆ ಬೀಗ ಹಾಕಿಕೊಂಡು ದೆಹಲಿಗೆ ಓಡಾಡುತ್ತಿರುವ ಇವರು, ಅದೇ ಸಮಯವನ್ನು ಜನರ ಕೆಲಸಗಳಿಗಾಗಿ ಮೀಸಲಿಟ್ಟು ಬಿಟ್ಟಿದ್ದರೆ ಬಹುಶಃ ನಮ್ಮ ರಾಜ್ಯದಲ್ಲಿ ಕೊರೋನಾದಿಂದ ಇಷ್ಟೊಂದು ಸಾವು ಸಂಭವಿಸುತ್ತಿರಲಿಲ್ಲ.

ಸಧ್ಯ ರಾಜ್ಯದ - ದೇಶದ ಜನರು ಏನನ್ನೂ ಸಂಭ್ರಮಿಸುವ ಸ್ಥಿತಿಯಲ್ಲಿಲ್ಲ. ಹೀಗಿರುವಾಗ, ರಾಜ್ಯಕ್ಕೆ ಹೊಸ ಮುಖ್ಯಮಂತ್ರಿಯನ್ನು ನೇಮಿಸುವ ಅವಶ್ಯಕತೆ ಇದೆಯಾ? ಸಧ್ಯಕ್ಕಂತೂ ಖಂಡಿತ ಇಲ್ಲ. ಯಾಕೆಂದರೆ, ಹೊಸ ಮುಖ್ಯಮಂತ್ರಿ ಎಂದರೆ ಮತ್ತೆ ಸರ್ಕಾರದ ಮಟ್ಟದಲ್ಲಿ ಒಂದಿಷ್ಟು ಧಾಂಧೂಂ, ಪ್ರಮಾಣವಚನ, ಹೂಗುಚ್ಛ, ಹೊಸ ಪೇಂಟು, ನೇಮ್‌ ಬೋರ್ಡ್ ಎಂದೆಲ್ಲ ಮಿನಿಮಮ್ ಖರ್ಚಂತೂ ಆಗಿಯೇ ಆಗುತ್ತದೆ. ಏನೇ ನಿಯಂತ್ರಣ ಎಂದರೂ ಅದಕ್ಕೊಂದು ಸಣ್ಣ ಸಂಭ್ರಮ, ಪತ್ರಿಕೆಗಳಲ್ಲಿ ಶುಭಾಶಯ ಕೋರುವ ಸಣ್ಣದಾದರೂ ಜಾಹೀರಾತುಗಳೆಲ್ಲ ಕಾಣಿಸಿಕೊಂಡೇ ಕಾಣಿಸಿಕೊಳ್ಳುತ್ತದೆ. ಈಗ ಇರುವ ಒಂದೊಂದು ಪೈಸೆಯನ್ನೂ ನಾವು ಕೊರೋನಾ ನಿಯಂತ್ರಿಸಲು ಬಳಸಬೇಕಿದೆ. ಜನರ ಕಷ್ಟಗಳನ್ನು ದೂರ ಮಾಡಲು ಬಳಸಬೇಕಿದೆ. ಜೊತೆಗೆ ಜನರನ್ನು ಕೊರೋನಾದಿಂದ ಬಚಾ‌ವ್‌ ಮಾಡಲು ಇರುವ ಸಮಯವನ್ನೆಲ್ಲ ಮೀಸಲಿಡಬೇಕಿದೆ. ಹೀಗಿರುವಾಗ ಹೊಸ ಮುಖ್ಯಮಂತ್ರಿಯ ನೇಮಕ ಎಂದು ಹಣ ಮತ್ತು ಸಮಯವನ್ನೆಲ್ಲ ವ್ಯರ್ಥ ಮಾಡಬೇಕಾದ ಜರೂರು ಇದೆಯಾ?

ನೀವು ರಾಜಕಾರಣಿಗಳೇ ಇರಬಹುದು. ಅಧಿಕಾರಕ್ಕಾಗಿ ಏನು ಮಾಡಲಿಕ್ಕೂ ನೀವು ತಯಾರಾಗಬಹುದು. ಆದರೆ ಕರುಳೇ ಕಿತ್ತು ಬರುತ್ತಿರುವಂತಹ ಈ ಸಂಕಟದ ಕಾಲದಲ್ಲಾದರೂ ಒಂದಿಷ್ಟು ಮನುಷ್ಯರಾಗಿ ಯೋಚಿಸಿ. ನಮ್ಮ ಶಾಸಕರು, ಸಚಿವರು ಇಡೀ ರಾಜ್ಯಕ್ಕಾಗಿ ಹಗಲು ರಾತ್ರಿ ದುಡಿಯಬೇಕಿಲ್ಲ. ತಮ್ಮ ವಿಧಾನಸಭಾ ಕ್ಷೇತ್ರ, ಜಿಲ್ಲೆಗಳಲ್ಲೇ ಎಷ್ಟಾಗುತ್ತದೋ ಅಷ್ಟು ಕೆಲಸ ಮಾಡಲು ಪ್ರಯತ್ನಿಸಿ. ಬೇಕಿದ್ದರೆ ಘಂಟಾಘೋಷವಾಗಿ ಈ ಕೆಲಸವನ್ನು ನಾನೇ ವೈಯಕ್ತಿಕ ಆಸಕ್ತಿಯಿಂದ ಮಾಡಿದ್ದೇನೇ ಹೊರತು, ಇದರಲ್ಲಿ ಯಡಿಯೂರಪ್ಪನವರ ಪಾಲು ಏನೂ ಇಲ್ಲ ಎಂದು ಕ್ರೆಡಿಟ್ ಬೇಕಾದರೂ ತೆಗೆದುಕೊಳ್ಳಿ. ನೀವು ಮಾಡಿದ ಕೆಲಸವನ್ನು ನಿಮ್ಮ ಕ್ಷೇತ್ರದ ಜನರು ಖಂಡಿತ ಗಮನಿಸುತ್ತಾರೆ, ಇಂತಹ ಸಂದರ್ಭದಲ್ಲಿ ನೀವು ಮಾಡಿದ ಸಹಾಯವನ್ನು ಅವರು ಖಂಡಿತ ನೆನಪಿಟ್ಟುಕೊಳ್ಳುತ್ತಾರೆ. ಹೀಗೆ ಮಾಡುವ ಮೂಲಕ ನೀವು ರಾಜಕೀಯ ಕ್ಷೇತ್ರದಲ್ಲಿ ಇನ್ನಷ್ಟು ಎತ್ತರಕ್ಕೇರಿ, ಮುಖ್ಯಮಂತ್ರಿ ಕುರ್ಚಿಗೆ ಹತ್ತಿರವಾಗಿ. ಅದು ಬಿಟ್ಟು, ಜನ ಸಾಯುವುದನ್ನು ನೋಡುತ್ತಾ, ಹೈಕಮಾಂಡಿಗೆ ಚಾಮರ ಬೀಸುತ್ತಾ ಜನರ ಸಮಾಧಿಯ ಮೇಲೆ ಮುಖ್ಯಮಂತ್ರಿ ಕುರ್ಚಿ ಏರಲು ಪ್ರಯತ್ನಿಸಬೇಡಿ.

ಇಡೀ ರಾಜ್ಯ ಕೊರೋನಾ ಕೈಯಲ್ಲಿ ಸಿಕ್ಕಿ ಹಾಕಿಕೊಂಡಿದೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಯೊಬ್ಬನೇ ಎಲ್ಲವನ್ನೂ ನಿಭಾಯಿಸುವುದಾದರೆ ಮಂತ್ರಿಮಂಡಲ ಎನ್ನುವುದು ಯಾಕಿರಬೇಕಿತ್ತು? ಇವತ್ತು ರಾಜ್ಯದ ಜನರು ಅನುಭವಿಸುತ್ತಿರುವ ಸಂಕಟಕ್ಕೆ ಮುಖ್ಯಮಂತ್ರಿ ಎಷ್ಟು ಕಾರಣವೋ ಅವರ ಸಂಪುಟದಲ್ಲಿರುವ ಎಲ್ಲಾ ಖಾತೆಗಳ ಸಚಿವರು ಕೂಡಾ ಅಷ್ಟೇ ಕಾರಣ. ಈಗ ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ, ಸಾರಿಗೆ ಇಲಾಖೆ ಸೇರಿದಂತೆ ಬಹುತೇಕ ಇಲಾಖೆಗಳಲ್ಲಿ ಇತರೆ ಸಮಯದಲ್ಲಿ ಇದ್ದಷ್ಟು ಕೆಲಸವಂತೂ ಇರುವುದಿಲ್ಲ. ಯಾಕೆಂದರೆ ಜನರೇ ಮನೆಯಿಂದ ಹೊರಗೆ ಬರುತ್ತಿಲ್ಲ ಎಂದಮೇಲೆ ಇಂತಹ ಹಲವು ಇಲಾಖೆಗಳಲ್ಲಿ ಕೆಲಸದೊತ್ತಡ ಕಡಿಮೆ ಇದ್ದೇ ಇರುತ್ತದೆ ಹಾಗೂ ಈ ಖಾತೆಯ ಸಚಿವರೂ ಒಂದಿಷ್ಟು ಫ್ರೀ ಇರುತ್ತಾರೆ. ಹೀಗಿರುವಾಗ ’ಆರೋಗ್ಯ ಇಲಾಖೆ’ಯನ್ನು ಸುಧಾಕರ್‌ ಒಬ್ಬರೇ ನಿಭಾಯಿಸಬೇಕು, ಅವರೇ ಎಲ್ಲದನ್ನೂ ಮಾಡಬೇಕು ಎಂದು ಯಾಕೆ ಯೋಚಿಸುತ್ತೀರಿ? ನಿಮ್ಮ ಮಂತ್ರಿಮಂಡಲದಲ್ಲಿ ’ಸಮನ್ವಯ’ ಹಾಗೂ ’ಜನಪ್ರೀತಿ’ ಇದ್ದಿದ್ದೇ ನಿಜವಾದರೆ ಇತರೆ ಇಲಾಖೆಗಳ ಸಚಿವರೂ ಸುಧಾಕರ್‌ ಜೊತೆಗೆ ಸೇರಿಕೊಳ್ಳಿ. ನಾವೊಂದೈದು ಸಚಿವರು ಈಗ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳನ್ನೂ ನಿಭಾಯಿಸುತ್ತೇವೆ ಎಂದು ಮುಖ್ಯಮಂತ್ರಿಯ ಗಮನಕ್ಕೆ ತಂದು ಒಟ್ಟಿಗೇ ಸೇರಿ ಕೆಲಸ ಮಾಡಿ. ಜೊತೆಗೆ, ಮುಖ್ಯಮಂತ್ರಿಗಳಿಗೂ ನಿಮ್ಮೊಂದಿಗೆ ನಾವಿದ್ದೇವೆ, ನೀವು ಯಾವುದೇ ಹೊಣೆ ವಹಿಸಿದರೂ ನಾವು ನಿಭಾಯಿಸುತ್ತೇವೆ. ನಾವೆಲ್ಲರೂ ಒಟ್ಟಾಗಿ ರಾಜ್ಯವನ್ನು, ರಾಜ್ಯದ ಜನರನ್ನು ಈ ಸಂಕಷ್ಟದಿಂದ ಕಾಪಾಡೋಣ ಎಂದು ನಿರ್ಧರಿಸಿ. ಆಗ ಮತ ಹಾಕಿ ಗೆಲ್ಲಿಸಿದ ಮತದಾರರು ನಿಮ್ಮನ್ನು ’ಮನುಷ್ಯರು’ ಎಂದುಕೊಳ್ಳುತ್ತಾರೆ. ಇಲ್ಲದೇ ಹೋದರೆ ಮುಂದಿನ ಚುನಾವಣೆಯಲ್ಲಿ ಅವರ ಕಣ್ಣಿಗೆ ನೀವೇನಾಗಿ ಕಾಣಬಹುದು ಎನ್ನುವುದನ್ನು ನೀವೇ ನಿರ್ಧರಿಸಿ.

ದುರಂತ ಹೇಗಿದೆ ನೋಡಿ. ಅದ್ಯಾರೋ ಒಬ್ಬ ಸಚಿವ ಇಂತಹ ಸಂದರ್ಭದಲ್ಲಿ ತನ್ನ ಕ್ಷೇತ್ರದ ಜನರನ್ನು ಕಾಪಾಡಿಕೊಳ್ಳುವುದು ಬಿಟ್ಟು, ನನಗೆ ಕೊಟ್ಟಿರುವ ಖಾತೆಗೆ ಪವರ‍್ರೇ ಇಲ್ಲ, ನನಗೆ ’ಪವರ್‌’ ಖಾತೆ ಕೊಡಿಸಿ ಎಂದು ದೆಹಲಿಗೆ ಹೋಗಿದ್ದಾನಂತೆ! ಥೂ ನಿನ್ನ ಜನ್ಮಕ್ಕೆ... ಇಂತಹವರನ್ನು ದೆಹಲಿಗೆ ಬಂದರೂ ಮೋದಿ, ಶಾ ಸೇರಿದಂತೆ ಅದ್ಯಾರಾದರೂ ಅದು ಹೇಗೆ ಹತ್ತಿರ ಬಿಟ್ಟುಕೊಂಡು ಇವನ ಅಹವಾಲನ್ನು ಕೇಳುತ್ತಾರೋ!? ಉಗಿದು ಉಪ್ಪಿನಕಾಯಿ ಹಾಕಿ ಕಳಿಸುವುದು ಬಿಟ್ಟು, ನನಗೆ ಪವರ್‌ ಖಾತೆ ಕೊಡದೇ ಇದ್ದರೆ ನನ್ನ ಬಳಿ ಇರುವ ದಾಖಲೆ ಬಿಡುಗಡೆ ಮಾಡುತ್ತೇನೆ ಎಂಬ ಅವನ ಬೆದರಿಕೆಯನ್ನು ಕೇಳಿಸಿಕೊಳ್ಳುತ್ತಾ ಕೂತಿದ್ದಾರಂತೆ...!!

ಯಡಿಯೂರಪ್ಪ ಸಮರ್ಥರಲ್ಲ, ಅವರು ಈ ಸಂದರ್ಭದಲ್ಲಿ ಒಬ್ಬ ಮುಖ್ಯಮಂತ್ರಿಯಾಗಿ ಮಾಡಬೇಕಾದ ಕೆಲಸವನ್ನು ಮಾಡಲಿಲ್ಲ, ಅವರಿಗೆ ವಯಸ್ಸಾಗಿರುವುದರಿಂದ ಕಷ್ಟವಾಗುತ್ತಿದೆ... ಹೀಗೆ ಏನೇ ದೂರುಗಳಿರಲಿ, ಅದನ್ನು ಈ ಸಂದರ್ಭದಲ್ಲಿ ಮುಂದಿಟ್ಟುಕೊಂಡು ಹೈಕಮಾಂಡ್ ಆಗಲಿ, ಅತೃಪ್ತ ಸಚಿವರು -ಶಾಸಕರಾಗಲಿ ಆಟವಾಡಿದರೆ ಅದು ಮನುಷ್ಯನ ತಲೆಯನ್ನೇ ಚೆಂಡುಗಳನ್ನಾಗಿ ಮಾಡಿಕೊಂಡು ಆಟವಾಡಿದಂತೆಯೇ ಹೊರತು, ಜನರ ಕಣ್ಣಿಗೆ ಅದು ಬೇರೇನೂ ಆಗಿ ಕಾಣುವುದಿಲ್ಲ. ಅವರನ್ನು ಬದಲಾಯಿಸಬೇಕೆನ್ನಿಸಿದರೆ ಬದಲಾಯಿಸಿ, ಆದರೆ ಜನರು ಸಾವಿನ ಮನೆಯ ಬಾಗಿಲಲ್ಲಿ ಬೆದರಿ ಎದೆಯೊಡೆದುಕೊಂಡು ಅಳುತ್ತಿರುವಾಗ ಹೊಸ ಮುಖ್ಯಮಂತ್ರಿಯ ಪಟ್ಟಾಭಿಷೇಕಕ್ಕೆ ನೀವು ತಯಾರಾಗುತ್ತೀರಿ ಅಥವಾ ಅಂತಹ ಸಂಚೊಂದನ್ನು ರೂಪಿಸುತ್ತೀರಿ ಎಂದರೆ ಜನರು ನಿಮ್ಮನ್ನು ಯಾವತ್ತಾದರೂ ಕ್ಷಮಿಸಲು ಸಾಧ್ಯವಾ?

ಯಡಿಯೂರಪ್ಪನವರೂ ಈ ಸಂದರ್ಭದಲ್ಲಿ ತಮ್ಮ ಶತ್ರುಗಳನ್ನಾದರೂ ಸರಿ, ವಿಶ್ವಾಸಕ್ಕೆ ತೆಗೆದುಕೊಂಡು ಹೇಗಾದರೂ ಮಾಡಿ ರಾಜ್ಯದ ಜನರನ್ನು ಕಾಪಾಡುವ ಕೆಲಸ ಮಾಡಬೇಕಿದೆ. ಅದನ್ನು ಅವರೇ ಮಾಡಬೇಕೆಂದೇನೂ ಇಲ್ಲ. ಯಡಿಯೂರಪ್ಪನವರ ಹಿತವನ್ನು ಬಯಸುವ ಅವರ ’ಆಪ್ತರೇ’ ಮಾಡಬಹುದು. ಅದು ಸ್ವಲ್ಪ ತುರ್ತಾಗಿ ಆದರೆ ರಾಜ್ಯದ ಪರಿಸ್ಥಿತಿ ಒಂದಿಷ್ಟು ನಿಯಂತ್ರಣಕ್ಕೆ ಬರಬಹುದು. ಜೊತೆಗೆ ಯಡಿಯೂರಪ್ಪನವರು ವಿರೋಧ ಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನೂ ಮಾಡುತ್ತಿರುವಂತಿಲ್ಲ. ತಮ್ಮ ಪಕ್ಷ ಹಾಗೂ ಮಂತ್ರಿಮಂಡಲ ತಮ್ಮೊಂದಿಗೆ ಇಲ್ಲವೆಂದಾಗ ಕೊನೇಪಕ್ಷ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ, ಈ ಮೂಲಕ ರಾಜ್ಯದ ಪರಿಸ್ಥಿತಿಯನ್ನು ಒಂದಿಷ್ಟು ಸುಧಾರಿಸುವ ಕೆಲಸವನ್ನು ಮಾಡಬೇಕಾದ ತುರ್ತಿದೆ. ಈ ಬಗ್ಗೆಯೂ ಯಡಿಯೂರಪ್ಪನವರು ಹಾಗೂ ಅವರ ಆಪ್ತ ವಲಯದವರು ಯೋಚಿಸಬೇಕಾಗಿದೆ.

ಇದೆಲ್ಲವೂ ಸರಿ, ರಾಜ್ಯದಲ್ಲಿ ಮೂರ‍್ಮೂರು ಉಪಮುಖ್ಯಮಂತ್ರಿಗಳಿದ್ದಾರಲ್ಲ, ನಿಜವಾಗಿಯೂ ಅವರ ಅಧಿಕಾರ ಏನು? ಆಲ್ಮೋಸ್ಟ್‌ ಮುಖ್ಯಮಂತ್ರಿಗೆ ಹತ್ತತ್ತಿರದ ಅಧಿಕಾರವೇ ಇರುತ್ತದೆ ಹಾಗೂ ಸಚಿವರಿಗಿಂತ ಅವರು ಒಂದು ಕೈಮೇಲೆ ಎಂದು ಭಾವಿಸುತ್ತೇನೆ. ಆ ಅಧಿಕಾರವನ್ನು ಬಳಸಿಕೊಂಡು ಕೆಲವು ಜಿಲ್ಲೆಗಳ ಹೊಣೆಯನ್ನು ಅವರೇ ಹೊತ್ತುಕೊಂಡು ಯಡಿಯೂರಪ್ಪನವರ ಹೆಗಲಿನ ಭಾರವನ್ನು ಒಂದಿಷ್ಟು ಕಡಿಮೆ ಮಾಡಲು ಪ್ರಯತ್ನಿಸಬಹುದಲ್ಲವಾ? ಇವೆಲ್ಲದರ ನಡುವೆ ಕೊರೋನಾ ಲಾಕ್‌ಡೌನ್ ಆಗುವುದಕ್ಕಿಂತ ಮೊದಲು ಬಿಜೆಪಿ ಪರವಾಗಿ ಸಕ್ರಿಯವಾಗಿದ್ದ ಯಡಿಯೂರಪ್ಪನವರ ಮಗ ವಿಜಯೇಂದ್ರ ಅವರ‍್ಯಾಕೆ ಇಂತಹ ಸಂಕಟದ ಸಂದರ್ಭದಲ್ಲಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ? ತಂದೆ ಹೊರಬೇಕಿದ್ದ ಜವಾಬ್ದಾರಿಗಳನ್ನು ತಾವೊಂದಿಷ್ಟು ಹೊರುವ ಉತ್ಸಾಹವನ್ನೇಕೆ ತೋರುತ್ತಿಲ್ಲ?!

ಒಂದಂತೂ ಸತ್ಯ. ಈಗ ಕೇಂದ್ರ ಬಿಜೆಪಿಯೇನಾದರೂ ಅತೃಪ್ತರ ಅಹವಾಲು ಕೇಳಲು ದಿಲ್ಲಿ ದರ್ಬಾರನ್ನು ಮೀಸಲಿಟ್ಟು, ರಾಜ್ಯದ ಜನರ ಸಂಕಷ್ಟಕ್ಕೆ ಮಿಡಿಯುವ ಬದಲು ಯಡಿಯೂರಪ್ಪನವರನ್ನು ಕೆಳಗಿಳಿಸುವ ತಂತ್ರಗಾರಿಕೆಗೆ ಗಾಳಿ ಹಾಕುತ್ತಿದ್ದರೆ, ಇದಕ್ಕಾಗಿ ರಾಜ್ಯ ಬಿಜೆಪಿಯ ಯಾವುದೇ ಶಾಸಕರು, ಸಚಿವರು ಹಗಲು ರಾತ್ರಿ ಬೆಂಗಳೂರಿನಿಂದ ದೆಹಲಿಗೆ ಓಡಾಡುತ್ತಿದ್ದರೆ ರಾಜ್ಯದ ಜನರು ’ಕೊರೋನಾ’ ಎನ್ನುವುದೇ ಇಲ್ಲ ಎನ್ನುವ ನಿರ್ಧಾರಕ್ಕಂತೂ ಬಂದೇ ಬರುತ್ತಾರೆ. ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಜನರ ಜೀವ ತೆಗೆದು ತಮ್ಮ ಬೇಳೆ ಬೇಯಿಸಿಕೊಳ್ಳಲಿಕ್ಕೇ ಕೊರೋನಾ ಭೂತವನ್ನು ಸೃಷ್ಟಿಸಿದೆ ಎಂದೂ ಭಾವಿಸುತ್ತಾರೆ. ಯಾಕೆಂದರೆ, ರಾಜ್ಯ ಇಂತಹ ತುರ್ತು ಸ್ಥಿತಿಯಲ್ಲಿರುವಾಗ ಇವರು ಕೇವಲ ಅಧಿಕಾರಕ್ಕಾಗಿಯೇ ತಮ್ಮೆಲ್ಲ ಸಮಯ-ಹಣವನ್ನು ವ್ಯಯಿಸುತ್ತಿದ್ದಾರೆ ಎಂದರೆ ಇವರಿಗೆ ಕೊರೋನಾ ಹಾಗೂ ಅದು ತರುವ ಸಾವಿನ ಭಯ ಇಲ್ಲ ಎಂದೇ ಅರ್ಥ ಅಲ್ಲವಾ? ಅಧಿಕಾರದಲ್ಲಿರುವ ರಾಜಕಾರಣಿಗಳಿಗೇ ಇಲ್ಲದ ಭಯ ಜನರನ್ನು ಹೇಗೆ ಕೊಲ್ಲುತ್ತಿದೆ ಎನ್ನುವ ಅನುಮಾನ ರಾಜ್ಯದ ಜನರದ್ದಾಗುವುದರಲ್ಲಿಯೂ ಯಾವುದೇ ಸಂಶಯವಿಲ್ಲ.

                                                                                                                             -ಆರುಡೋ ಗಣೇಶ ಕೋಡೂರು


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆ ಕ್ಷಣದಲ್ಲಿ ಶರತ್‌ ಸಾವಿನೆದುರು ಅದೆಷ್ಟು ಅಸಹಾಯಕ!!

ಒಂಟಿತನ ಎಂದರೆ ಜವಾಬ್ದಾರಿಯಿಂದ ಜಾರಿಕೊಳ್ಳುವುದಾ?!

ಈಕೆ ಎಲ್ಲರಂತೆ ’ಟೈಮ್‌ಪಾಸ್‌ ತಂಗಿ’ ಅಲ್ಲ!!