ಈಕೆ ಎಲ್ಲರಂತೆ ’ಟೈಮ್‌ಪಾಸ್‌ ತಂಗಿ’ ಅಲ್ಲ!!

ಈ ಬದುಕಿಗೆ ಜೊತೆಯಾಗುವ ಕೆಲವು ಬಂಧಗಳೇ ಹಾಗೇ, ಅವು ಯಾವತ್ತೂ ಬದಲಾಗುವುದಿಲ್ಲ. ದೂರಾಗುವುದಿಲ್ಲ. ಮುಖ್ಯವಾಗಿ ನಾವೇನು, ನಮ್ಮಲ್ಲಿ ಏನಿದೆ, ಏನಿಲ್ಲ ಎನ್ನುವುದನ್ನೆಲ್ಲ ಲೆಕ್ಕಕ್ಕೇ ಇಟ್ಟುಕೊಳ್ಳುವುದಿಲ್ಲ.

ಮಮತಾ ನಾಯ್ಕ ಎನ್ನುವ ಕುಮಟಾ ಕೋಡ್ಕಣಿಯ ಈ ತಂಗಿ ಕೂಡಾ ಹಾಗೇ. ಈ ತಂಗಿ ನನಗೆ ಸಿಕ್ಕಿದ್ದು ನಾನೊಂದು ಪತ್ರಿಕೆಯ ಸಂಪಾದಕನಾಗಿ ಪ್ರೀತಿ ಮತ್ತು ಆತ್ಮೀಯತೆಯಿಂದ ಏನೋ ಒಂದಿಷ್ಟು ಬರೆಯುತ್ತಿದ್ದೆ ಎನ್ನುವ ಕಾರಣಕ್ಕೆ. ಗಣೇಶಣ್ಣ ಅಂತಲೇ ಮೊದಲ ಪತ್ರವನ್ನು ಬರೆದಿದ್ದ ಈ ತಂಗಿ ನನಗೆ ಸಿಕ್ಕಿ ಹತ್ತು ವರ್ಷಕ್ಕಿಂತ ಹೆಚ್ಚಾಗಿದೆ. ಈಕೆ ನನಗೆ ತಂಗಿಯಾಗಿ ಪರಿಚಯವಾದ ಇಷ್ಟು ವರ್ಷಗಳಲ್ಲಿ ಕಾಲದ ನದಿಯಲ್ಲಿ ಅದೆಷ್ಟು ನೀರು ಹರಿದು ಹೋಗಿದೆಯೋ!? ಅಂಚೆಯಲ್ಲಿ ಬರುತ್ತಿದ್ದ ಪತ್ರಗಳಿಂದ ಎಸ್‌ಎಂಎಸ್ಸಿಗೆ, ಎಸ್‌ಎಂಎಸ್ಸಿನಿಂದ ವಾಟ್ಸಪ್ಪಿಗೆ... ಇದೇ ರೀತಿ ನಮ್ಮಿಬ್ಬರ ಬದುಕಿನಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ಆದರೆ ಈ ತಂಗಿ ಮಾತ್ರ ನನ್ನ ವಿಷಯದಲ್ಲಿ ಬದಲಾಗಿಲ್ಲ. ಆಕೆ ನಾನೊಂದು ಪತ್ರಿಕೆಯ ಸಂಪಾದಕನಾಗಿದ್ದಾಗ ಹೇಗೆ ಪ್ರೀತಿಯಿಂದ ಇದ್ದಳೋ, ಬದುಕಿನೆಲ್ಲವನ್ನೂ ಹಂಚಿಕೊಳ್ಳುತ್ತಿದ್ದಳೋ, ಆ ಪತ್ರಿಕೆಯಿಂದ ಹೊರಬಂದು ನಾನು ಕೇವಲ ’ಗಣೇಶ’ನಾಗಿ ಬದುಕಲಾರಂಭಿಸಿದಾಗಲೂ ಅದೇ ಪ್ರೀತಿಯಲ್ಲಿ ನನ್ನನ್ನು ಮೂಕನನ್ನಾಗಿಸುತ್ತಿದ್ದಾಳೆ. ಈ ತಂಗಿಯ ಬಗ್ಗೆ ಈಗ ಹೇಳಲಿಕ್ಕೂ ಕಾರಣವಿದೆ.



ಮೊದಲೇ ಹೇಳಿದಂತೆ ಕಾಲ ಸಾಕಷ್ಟು ಬದಲಾಗಿದೆ. ಆ ಕಾಲಕ್ಕೆ ತಕ್ಕಂತೆ ಆಕೆಯೂ ಅಪ್‌ಡೇಟ್ ಆಗಿದ್ದಾಳೆ. ಆಕೆ ಪರಿಚಯವಾದ ಆ ಕಾಲದಲ್ಲಿ ರಾಖಿ ಹಬ್ಬ ಬಂದ ತಕ್ಷಣ ’ಅಣ್ಣ-ತಮ್ಮ’ ಅಂತಿರುವವರಿಗೆಲ್ಲ ಅಕ್ಕ ತಂಗಿಯರು ರಾಖಿ ಕಳಿಸುವುದು ದೊಡ್ಡ ಸಂಭ್ರಮವಾಗಿತ್ತು. ರಾಖಿ ಖರೀದಿಸುವುದು, ಹತ್ತಿರದಲ್ಲೇ ಇದ್ದರೆ ಅಣ್ಣ ತಮ್ಮಂದಿರಿಗೆ ರಾಖಿ ಕಟ್ಟುವುದು, ದೂರದಲ್ಲಿದ್ದರೆ ರಾಖಿ ಹಬ್ಬದ ದಿನವೇ ಸರಿಯಾಗಿ ರಾಖಿ ಸಿಕ್ಕುವಂತೆ ಪೋಸ್ಟ್ ಮಾಡುವುದು... ಇಂತಹ ಸಂಭ್ರಮದ ಆ ದಿನಗಳಲ್ಲಿ ತಂಗಿ ಮಮತಾ ನನಗೆ ರಾಖಿ ಕಳಿಸಲಾರಂಭಿಸಿದಳು. ಈಕೆಯಂತೆಯೇ ಮಾನಸ ಪತ್ರಿಕೆಯಿಂದ ನನಗೆ ಸಿಕ್ಕ ಕೆಲವು ತಂಗಿಯರೂ ರಾಖಿ ಕಳಿಸುತ್ತಿದ್ದರು. ಕಾಲ ಬದಲಾಯಿತು. ಮೊದಲೇ ಹೇಳಿದಂತೆ ಬದುಕಿನ ಬಹುತೇಕ ಮಾತುಕತೆ, ಸಂತಸ, ಸಂಭ್ರಮ, ದುಃಖ, ಸಂಕಟಗಳೆಲ್ಲವೂ ವಾಟ್ಸಪ್ಪಿನ ಇಮೋಜಿಯಾಗಿ ಬದಲಾಯಿತು. ಆದ್ದರಿಂದಲೇ ನನಗೂ ಪೋಸ್ಟ್‌ ಅಥವಾ ಕೊರಿಯರ‍್ರಿನಲ್ಲಿ ರಾಖಿಗಳು ಬರುವ ಸಂಖ್ಯೆ ಕಡಿಮೆಯಾಯಿತು. ಕೊನೆಗೆ ಪತ್ರಿಕೆಯ ಸಂಪಾದಕನಲ್ಲ ಎಂದು ಗೊತ್ತಾದ ನಂತರ ಪೋಸ್ಟಿನಲ್ಲಿ ಬರುವುದು ಬದಿಗಿರಲಿ, ವಾಟ್ಸಪ್ಪಿನ ಮೆಸೇಜಿನಲ್ಲೂ ರಾಖಿಯೂ, ರಾಖಿ ಶುಭಾಶಯಗಳೂ ಬರುವುದೂ ನಿಂತು ಹೋಯಿತು.

ಆದರೆ ಈ ತಂಗಿ ಮಮತಾ ಮಾತ್ರ ಆಕೆ ಪರಿಚಯವಾದ ಇಷ್ಟು ವರ್ಷಗಳಲ್ಲಿ ಪ್ರತೀ ವರ್ಷವೂ ನನಗೆ ಪೋಸ್ಟ್‌ ಅಥವಾ ಕೊರಿಯರ‍್ರಿನಲ್ಲಿ ನೈಜವಾದ ರಾಖಿಯನ್ನೇ ಕಳಿಸುತ್ತಾಳೆ. ಈ ಸಾರಿ ನಾನು ಪತ್ರಿಕೆಯ ಕೆಲಸದಲ್ಲಿರಲಿಲ್ಲ. ಆಕೆಗೆ ನನ್ನ ಯಾವ ವಿಳಾಸಕ್ಕೆ ರಾಖಿ ಕಳಿಸಬೇಕು ಎನ್ನುವ ಗೊಂದಲ ಕೊನೇಕ್ಷಣದಲ್ಲಿ ಕಾಡಿ, ನನ್ನ ಬಳಿ ವಿಳಾಸ ತೆಗೆದುಕೊಂಡು ಮರೆಯದೇ ರಾಖಿ ಕಳಿಸಿದ್ದಾಳೆ... ಕಳೆದ ವರ್ಷವೂ ಈ ತಂಗಿಯ ರಾಖಿ ಬಂದಿತ್ತು ಮತ್ತು ಎಂದಿನಂತೆ ಅವಳ ಬೇಡಿಕೆಯಂತೆ ಅವಳು ಕಳಿಸಿದ ರಾಖಿ ಕಟ್ಟಿಕೊಂಡು ನಾನೊಂದು ಫೋಟೋ ಕಳಿಸಬೇಕು; ಅದೂ ಮುಖ ಕಾಣುವಂತೆ. ಕಳೆದ ವರ್ಷ ನೀ ಫೋಟೋ ಕೇಳಿದ್ದೀಯಾ, ಈ ವರ್ಷ ನಾನು ವಿಡಿಯೋವನ್ನೇ ಕಳಿಸುತ್ತೇನೆ ಎಂದು ಆಕೆ ಕಳಿಸಿದ ರಾಖಿ ಕಟ್ಟಿಕೊಂಡು ಒಂದು ಪುಟ್ಟ ವಿಡಿಯೋ ಮಾಡಿ ಆಕೆಯೊಂದಿಗೆ ನನ್ನದೊಂದೆರಡು ಮಾತುಗಳನ್ನು ಹಂಚಿಕೊಂಡಿದ್ದೆ.

ಬದುಕಿನಲ್ಲಿ ಹೀಗೆ ಸಿಕ್ಕುವ ಅಕ್ಕ- ತಂಗಿಯರಲ್ಲಿ ಇನ್ನೊಂದು ವರಾತ ಇರುತ್ತದೆ. ಅವರಿಗೆ ಮದುವೆ-ಮಕ್ಕಳೆಲ್ಲ ಆಗುವ ತನಕ ಮಾತ್ರ ನಮ್ಮಂತಹ ಅಣ್ಣ ಅಥವಾ ತಮ್ಮಂದಿರ ಅವಶ್ಯಕತೆ ಇರುತ್ತದೆ. ಅದೇ ಮದುವೆಯಾಗಿ ಒಂದೆರಡು ತಿಂಗಳಿಗೆ, ಇಷ್ಟು ವರ್ಷ ಅಣ್ಣಾ... ತಮ್ಮಾ ಅಂತೆಲ್ಲ ಇಷ್ಟುದ್ದ ರಾಗ ಮಾಡಿಕೊಂಡು ಕರೆದು ಪ್ರೀತಿ ಹರಿಸುತ್ತಿದ್ದದ್ದು ಇವರೇನಾ ಎನ್ನುವ ಅನುಮಾನ ಹುಟ್ಟುವ ರೀತಿ ಪೂರ್ತಿಗೆ ಪೂರ್ತಿ ಡಿಸ್ಕನೆಕ್ಟ್‌ ಆಗಿಬಿಡುತ್ತಾರೆ. ಡಿಸ್ಕನೆಕ್ಟ್ ಆಗುವುದಕ್ಕಿಂತ ಮುಂಚೆ ನಾವು ಕೇಳುವ ಮೊದಲೇ, ’ಗಂಡ-ಮನೆ-ಮಕ್ಕಳನ್ನು ಸಂಭಾಳಿಸುವಷ್ಟರಲ್ಲಿ ದಿನ ಕಳೆದಿದ್ದೇ ಗೊತ್ತಾಗೋದಿಲ್ಲ, ಯಾವುದಕ್ಕೂ ಟೈಮೇ ಸಿಕ್ಕೋದಿಲ್ಲ...’ ಎನ್ನುವ ಅವೇ ಸಾಲುಗಳು ಮೆಸೇಜುಗಳಾಗಿ ನಮ್ಮನ್ನು ತಲುಪುತ್ತವೆ ಮತ್ತು ಅದೇ ಕೊನೆಯ ಮೆಸೇಜೂ ಆಗಿರುತ್ತದೆ. ನಿಜ ಹೇಳಬೇಕೆಂದರೆ, ನಾನು ಈ ತಂಗಿ ಮಮತಾಳ ವಿಷಯದಲ್ಲಿಯೂ ಇದನ್ನೇ ನಿರೀಕ್ಷಿಸಿದ್ದೆ. ಆದರೆ ಆಕೆ ತಾನು ಅಂತಹ ’ಟೈಮ್‌ಪಾಸ್‌ ತಂಗಿ’ಯಲ್ಲ ಎನ್ನುವುದನ್ನೂ ಇಷ್ಟು ವರ್ಷದ ಬಂಧದಲ್ಲಿ ಸಾಬೀತು ಮಾಡಿದ್ದಾಳೆ. ನಾನು ಅಣ್ಣನಾಗಿ ಸಿಕ್ಕ ಈ ವರ್ಷಗಳಲ್ಲಿಯೇ ಆಕೆಗೆ ಮದುವೆಯಾಗಿದೆ, ಮುದ್ದುಕಂದನಿಗೆ ತಾಯಿಯಾಗಿದ್ದಾಳೆ, ಎಲ್ಲರ ಮನೆಯಲ್ಲಿರುವಂತೆ ಆಕೆಯ ಮನೆಯಲ್ಲೂ ಸಂತಸ-ಸಂಭ್ರಮಗಳಿವೆ, ಕಷ್ಟಗಳೂ ಇವೆ. ಆದರೂ ಆಕೆ ಈ ಅಣ್ಣನನ್ನು ಇಲ್ಲೀತನಕ ದೂರ ಇಟ್ಟಿಲ್ಲ. ಬಹುಶಃ ಬೇರೆಲ್ಲ ತಂಗಿಯರಂತೆಯೇ ಆಕೆಗೂ ನನ್ನನ್ನು ದೂರ ಇಡುವುದಕ್ಕೆ ನಾನು ಪತ್ರಿಕೆಯ ಸಂಪಾದಕನೆನ್ನುವ ಕುರ್ಚಿಯಿಂದ ಇಳಿದು ಬಂದಿದ್ದು ಕಾರಣವಾಗಬೇಕಿತ್ತು. ಇಳಿದೇ, ಆಕೆಗೆ ತಿಳಿಸಿದೆ, ನನ್ನಿಷ್ಟದಂತೆ ನಾನು ಬದುಕುತ್ತಿದ್ದೇನೆ ಎಂದೂ ಹೇಳಿದೆ... ಆದರೂ ಆಕೆ ಬದಲಾಗಿಲ್ಲ. ಅದಕ್ಕೆ ಸಾಕ್ಷಿ ಆಕೆ ಬದಲಾದ ವಿಳಾಸ ಕೇಳಿ ಕಳಿಸಿದ ಈ ರಾಖಿ ಮತ್ತು ಅರ್ಧ ಪುಟಗಳಲ್ಲಿ ಆಕೆ ಬರೆದ ಅಗ್ದೀ ಪ್ರೀತಿ ತುಂಬಿದ ಈ ಸಾಲುಗಳು...

ಏನೂ ಅಲ್ಲದೇ ಇರುವ ಮನುಷ್ಯರನ್ನು ’ಕೇವಲ ಮನುಷ್ಯರಾಗಿ’ ಇಷ್ಟು ಪ್ರಾಮಾಣಿಕವಾಗಿ ಪ್ರೀತಿಸಿಕೊಳ್ಳಬೇಕೆಂದರೆ, ಹಾಗೆ ಪ್ರೀತಿಸಿಕೊಳ್ಳುವ ಜೀವವೂ ಈ ಬದುಕಿನಲ್ಲಿ ದಕ್ಕಿ ಯಾವತ್ತೋ ಒಂದು ದಿನ ಕಳಚಿ ಹೋಗುವ ಹಣ, ಅಧಿಕಾರ, ಅಂತಸ್ತನ್ನೆಲ್ಲ ಲೆಕ್ಕಕ್ಕೆ ತೆಗೆದುಕೊಳ್ಳದಿರುವುದೇ ಆಗಿರಬೇಕು. ನನ್ನ ಪಾಲಿಗೆ ಈ ಪ್ರೀತಿಯ ತಂಗಿ ಮಮತಾ ಕೂಡಾ ಈ ಬದುಕಿಗೆ ಸಿಕ್ಕ ಅಂತಹ ಕೆಲವೇ ಕೆಲವು ಬಂಧಗಳಲ್ಲಿ ಒಬ್ಬಳು... ಏನಾದರೂ ಆಗಲಿ ತಂಗಿ, ನಿನ್ನನ್ನು ಈ ಅಣ್ಣ ಬದುಕಿರುವವರೆಗೂ ಹೀಗೇ ಪ್ರೀತಿಸುತ್ತಾ ಇರುತ್ತಾನೆ.

                                                                                                            -ಆರುಡೋ ಗಣೇಶ, ಕೋಡೂರು

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅವನು ಅಪ್ಪ ಹೇಳಿದ ಆ ಮಾತನ್ನು ಮರೆಯದೇ ಹೋಗಿದ್ದರೆ...

ಬೆಳಕಾದಳೇ ಅವಳು...?!

ಸಾಯುವ ಮನಸ್ಸಿಲ್ಲದ ಸಂಜೆಯೊಂದರ...