ಈಗ ಆರು ಪಾಸಾಗಿ ಏಳು...

ಪರೀಕ್ಷೆಗಳೆಲ್ಲ ಮುಗಿದಿರುತ್ತವೆ. ರಿಸಲ್ಟು ಕೊಡುವ ಏಪ್ರಿಲ್ ಹತ್ತನೇ ತಾರೀಖಿಗೆ ಇನ್ನೂ ಹತ್ತು ಹದಿನೈದು ದಿನವಿರುತ್ತದೆ. ಈ ಗ್ಯಾಪಿನಲ್ಲಿ ಟೀಚರ‍್ರುಗಳಿಗೆ ಶಾಲೆಯಲ್ಲಿ ಉತ್ತರ ಪತ್ರಿಕೆ ನೋಡುವ ಕೆಲಸವಿರುತ್ತದೆ, ಆದ್ದರಿಂದ ಅಧಿಕೃತವಾಗಿ ರಜೆ ಘೋಷಣೆ ಆಗದೇ ಇದ್ದರೂ ಶಾಲೆಗಳಿಗೆ ರಜೆ... ಈ ಸಮಯದಲ್ಲಿ ಯಾರಾದರೂ ಮಾತಿಗೆ ಸಿಕ್ಕು, ‘ನೀನು ಎಷ್ಟನೇ ಕ್ಲಾಸು?’ ಎಂದು ಕೇಳಿದರೆ, ರಿಸಲ್ಟ್ ಬಾರದೇ ಇದ್ದರೂ ಐದನೇ ಕ್ಲಾಸು ಪಾಸೇ ಆಗಿಬಿಟ್ಟಿದ್ದೇವೆ ಎನ್ನುವ ಭರ್ತಿ ಆತ್ಮವಿಶ್ವಾಸದಿಂದ ‘ಆರನೇ ಕ್ಲಾಸು’ ಎಂದು ಬಿಡುತ್ತೇವೆ. ಕೇಳಿದವರಿಗೆ ಏಪ್ರಿಲ್ ಹತ್ತಕ್ಕೆ ರಿಸಲ್ಟ್ ಎನ್ನುವುದು ಗೊತ್ತಿಲ್ಲದಿದ್ದರೂ, ಗೊತ್ತಿದ್ದೂ ನೆನಪಿಲ್ಲದೇ ಹೋದರೂ ಅದು ಸಹಜವಾಗಿಯೇ ಆ ಸಮಯದಲ್ಲಿ ಇಂತಹ ಪ್ರಶ್ನೆ ಕೇಳುವ ಎಲ್ಲರಲ್ಲೂ ಹುಟ್ಟುವ ಅನುಮಾನವೇನೋ ಎನ್ನುವಂತೆ, ‘ಐದನೇ ಕ್ಲಾಸು ಪಾಸಾಗಿ ಆರಾ? ಅಥವಾ ಆರು ಪಾಸಾಗಿ ಏಳಾ?’ ಎಂದು ಅವರು ಕೇಳುವುದು, ನಾವು ಮತ್ತೆ ಸಮಜಾಯಿಷಿ ಕೊಡುವುದು... ಜೂನ್ ತಿಂಗಳಲ್ಲಿ ಶಾಲೆಗಳು ಆರಂಭವಾಗಿ ಹತ್ತು ಹದಿನೈದು ದಿನ ಕಳೆಯುವವರೆಗೂ ಇದು ನಮ್ಮೆಲ್ಲರ ಬದುಕಿನ ಪುಟಗಳಲ್ಲಿ ಅಲ್ಲಲ್ಲಿ ಕಾಣಸಿಗುವ ಪ್ರತೀ ವರ್ಷದ ಮಾರ್ಚ್-ಏಪ್ರಿಲ್ ತಿಂಗಳ ನೆನಪುಗಳು.

ಇದೊಂದು ರೀತಿಯ ಗೊಂದಲದ ಪಿರಿಯಡ್ಡು. ಪರೀಕ್ಷೆ ಬರೆದ ನಮಗೂ ಗೊಂದಲವೇ. ಎಷ್ಟನೇ ಕ್ಲಾಸು ಎಂದು ಪ್ರಶ್ನಿಸುವವರಿಗೂ ಗೊಂದಲ ಮತ್ತು ಅನುಮಾನ. ಆಗ ಈಗಿನ ರೀತಿ ಸಣ್ಣ ಕ್ಲಾಸಿನ ಮಕ್ಕಳೆಲ್ಲರನ್ನೂ ಕಡ್ಡಾಯವಾಗಿ ಪಾಸು ಮಾಡಬೇಕು ಎಂದು ಸರ್ಕಾರ ಹೇಳಿರಲಿಲ್ಲ. ಆದ್ದರಿಂದ ಆಗ ಎಸ್‌ಎಸ್‌ಎಲ್‌ಸಿ ತಲುಪುವಷ್ಟರಲ್ಲಿ ಪ್ರತೀ ಕ್ಲಾಸಿನಲ್ಲೂ ನಾಲ್ಕೈದು ಜನರಾದರೂ ಏಪ್ರಿಲ್ ಹತ್ತರ ಪಾಸು ಫೇಲಿನಲ್ಲಿ ‘ಪೇಲ್’ ಆಗಿರುತ್ತಿದ್ದರು. ಈ ಕಾರಣದಿಂದಲೇ ಆಗ ಒಂದನೇ ಕ್ಲಾಸಿನಿಂದಲೇ ಏಪ್ರಿಲ್ ಹತ್ತನೇ ತಾರೀಖಿನ ಪಾಸು - ಫೇಲು ಎನ್ನುವುದು ಆತಂಕದ ವಿಷಯವಾಗಿರುತ್ತಿತ್ತು. ಅದೂ ಪರೀಕ್ಷೆ ಮುಗಿದ ನಂತರ ಶಾಲೆಗಳಿಗೆ ಅನಧಿಕೃತವಾಗಿ ರಜೆ ಘೋಷಣೆಯಾಗಿ, ಏಪ್ರಿಲ್ ಹತ್ತು ಸಮೀಪಿಸಲು ಕನಿಷ್ಠ ಇಪ್ಪತ್ತು ದಿನಗಳಾದರೂ ಇದ್ದು, ಏಪ್ರಿಲ್ ಹತ್ತರ ಪಾಸು ಫೇಲು ತಿಳಿದುಕೊಳ್ಳಲಿಕ್ಕೆಂದೇ ಶಾಲೆಗೆ ಹೋಗಿ, ಕೊನೆಯ ಬಾರಿಗೆನ್ನುವಂತೆ ಪರೀಕ್ಷೆ ಬರೆದ ತರಗತಿಯಲ್ಲಿ ಕುಳಿತು, ಟೀಚರ‍್ರುಗಳು ಹೇಳುವ ಪಾಸು ಫೇಲಿಗೆ ಮಣೆ ಮೇಲೆ ಕುಳಿತು ಕುತ್ತಿಗೆ ಉದ್ದ ಮಾಡಿಕೊಂಡು ಕಾದು ಕಾದು... ಹಾಜರಿ ಪುಸ್ತಕದಲ್ಲಿರುವ ಸರದಿಯಂತೆಯೇ ಟೀಚರ‍್ರು ಒಬ್ಬೊಬ್ಬರ ಹೆಸರು ಕರೆದು ಪಾಸು, ಫೇಲು ಎಂದು ಹೇಳುತ್ತಾ ಹೋಗಿ ‘ನಾನು ಪಾಸು’ ಎಂದು ಖಚಿತವಾಗಿ, ಇನ್ನು ಮುಂದಾದರೂ ನಾನು ಮುಂದಿನ ಕ್ಲಾಸಿನ ಸ್ಟೂಡೆಂಟು ಎಂದು ಹೇಳಿಕೊಳ್ಳಬೇಕೆನ್ನುವ ಆಸೆಗೆ ತಣ್ಣೀರೆರಚುವುದು ‘ನೀನು ಆರು ಪಾಸಾಗಿ ಏಳಾ?’ ಎನ್ನುವ ಅಗ್ದೀ ಅನುಮಾನದ ಪ್ರಶ್ನೆ!

ಯಾಕೆ ಇಂತಹದ್ದೊಂದು ಗೊಂದಲ, ಅನುಮಾನ ಈ ದಿನಗಳಲ್ಲಿ ನಮ್ಮನ್ನು ಪ್ರಶ್ನಿಸುವವರಲ್ಲಿ ಹುಟ್ಟಬೇಕು? ಈ ಪ್ರಶ್ನೆಗೆ ಹೀಗೇ ಅಂತ ಖಚಿತವಾದ ಉತ್ತರ ಕೊಡುವುದು ಸಾಧ್ಯವಿಲ್ಲವಾದರೂ, ಕೇಳಿದವರ ಮನಸ್ಸಿನಲ್ಲಿ ನಾನಾ ಕಾರಣಕ್ಕೆ ಡೌಟು ಹುಟ್ಟಿಕೊಳ್ಳುತ್ತದೆ. ಮೊದಲನೇಯದು, ನೀವು ಐದನೇ ತರಗತಿ ಪರೀಕ್ಷೆಗಳನ್ನು ಬರೆದು ಮುಗಿಸಿದ ಮೇಲೆ ಆರನೇ ಕ್ಲಾಸ್ ಎನ್ನುವುದು ಗ್ಯಾರಂಟಿಯೇ. ಹೀಗಿದ್ದೂ ರಿಸಲ್ಟ್ ಬರುವವರೆಗೂ ಕಾಯಬೇಕು, ಶಾಲೆಯಲ್ಲಿ ಪಾಸೋ ಫೇಲೋ ಎಂದು ಹೇಳಿದ ನಂತರವೇ ನಾನು ಆರನೇ ಕ್ಲಾಸು ಎನ್ನುವ ಮನೋಭಾವ ನಮ್ಮದಾಗಿರುತ್ತದೆ. ಆದ್ದರಿಂದ ಏಪ್ರಿಲ್ ಹತ್ತರ ಮೊದಲು ಯಾರಾದರೂ ಎಷ್ಟನೇ ಕ್ಲಾಸು ಎಂದು ಪ್ರಶ್ನಿಸಿದರೆ ನಿಮಗಿನ್ನೂ ಪಾಸೆನ್ನುವುದು ಖಚಿತವಾಗಿರುವುದಿಲ್ಲವಾದ್ದರಿಂದ, ಅನಧಿಕೃತವಾಗಿ ನೀವು ಆರನೇ ಕ್ಲಾಸಿನ ಸ್ಟೂಡೆಂಟೇ ಆದರೂ ನಾನು ಐದನೇ ಕ್ಲಾಸು ಎನ್ನುತ್ತೀರಿ. ಆದರೆ ಪ್ರಶ್ನಿಸುವವರಿಗೆ ಐದನೇ ತರಗತಿಯ ನಿಮ್ಮ ಪರೀಕ್ಷೆಗಳು ಮುಗಿದಿವೆ ಎನ್ನುವುದು ಗೊತ್ತಿರುತ್ತದೆ. ಪರೀಕ್ಷೆ ಬರೆದ ಮೇಲೆ ಪಾಸಾದಂತೆಯೇ ಅಲ್ಲವಾ, ಅಂದಮೇಲೆ ಇವನ್ಯಾಕೆ ಇನ್ನೂ ಐದನೇ ಕ್ಲಾಸು ಎನ್ನುತ್ತಿದ್ದಾನೆ ಎನ್ನುವ ಅನುಮಾನ ಹುಟ್ಟಿ, ಹೆಚ್ಚಿನವರು ನಿಮ್ಮನ್ನು ಐದೋ, ಆರೋ ಎಂದು ಪ್ರಶ್ನಿಸುತ್ತಾರೆ. ಆಗ ನೀವು ಮತ್ತೆ ಐದು ಪಾಸಾದ್ರೆ ಆರು ಎಂದು ವಿವರಣೆ ಕೊಡಬೇಕಾಗುತ್ತದೆ.

ಇನ್ನು ಕೆಲವೊಮ್ಮೆ ಹೀಗಾಗುತ್ತದೆ. ರಿಸಲ್ಟ್ ಬಂದು, ನೀವು ಮುಂದಿನ ಕ್ಲಾಸಿಗೆ ಹೋಗಿರುತ್ತೀರಿ. ಅಂದರೆ ನೀವೀಗ ಆರನೇ ಕ್ಲಾಸಿನ ವಿದ್ಯಾರ್ಥಿ ಎನ್ನುವುದು ನೂರಕ್ಕೆ ನೂರು ಗ್ಯಾರಂಟಿ. ಆದ್ದರಿಂದ ಯಾರಾದರೂ ಕ್ಲಾಸಿನ ಬಗ್ಗೆ ಪ್ರಶ್ನಿಸಿದ ಕೂಡಲೇ, ‘ನಾನು ಆರನೇ ಕ್ಲಾಸು’ ಎಂದು ಖಚಿತವಾದ ದನಿಯಲ್ಲೇ ಉತ್ತರಿಸಿರುತ್ತೀರಿ. ಆದರೆ ಪ್ರಶ್ನಿಸಿದವರಿಗೆ ಸಣ್ಣದೊಂದು ಡೌಟು. ಇವ ಈಗ ಐದು ಪಾಸಾಗಿ ಆರಾ? ಅಥವಾ ಆರಾಗಿ ಏಳಾ? ಎನ್ನುವ ಅಗತ್ಯವೇ ಇಲ್ಲದ ಡೌಟೊಂದು ಹುಟ್ಟಿ, ಅವರೇ ಈ ಬಾರಿ ‘ಐದು ಪಾಸಾಗಿ ಆರಾ? ಅಥವಾ ಆರು ಪಾಸಾಗಿ ಏಳನೇ ಕ್ಲಾಸಾ?’ ಎಂದು ಪ್ರಶ್ನಿಸುತ್ತಾರೆ. ಈಗ ಮತ್ತೆ ವಿವರಿಸಬೇಕಾದದ್ದು ನಿಮ್ಮದೇ ಜವಾಬ್ದಾರಿ. ಹೀಗೆ ಪ್ರಶ್ನಿಸುವವರು ವಯಸ್ಸಿನಲ್ಲಿ ನಿಮಗಿಂತ ದೊಡ್ಡವರಾದರೆ, ಅವರಿಗೆ ಸಣ್ಣವರಾದ ನೀವು ಯಾವ ಕ್ಲಾಸು ಎಂದು ಹೇಳಬೇಕೆಂದು ತಿಳಿಯದೇ ಹೇಳುತ್ತಿದ್ದೀರಿ ಎನ್ನುವ ಫೀಲೊಂದು ಅದೆಷ್ಟು ಗಟ್ಟಿಯಾಗಿ ಇರುತ್ತದೆಯೆಂದರೆ, ನೀವು ರಿಸಲ್ಟ್ ಬಾರದೆಯೂ ಪರೀಕ್ಷೆ ಬರೆದ ರೀತಿಯಲ್ಲೇ ನಿಮಗೆ ರಿಸಲ್ಟ್ ಏನೆಂದು ತಿಳಿದಿರುವುದರಿಂದ ಪಕ್ಕಾ ಆತ್ಮವಿಶ್ವಾಸದಿಂದ ಮುಂದಿನ ಕ್ಲಾಸಿಗೆ ಹೋಗಿಯಾಗಿದೆ ಎನ್ನುವ ಭಾವದಲ್ಲೇ ನಾನು ಇಂತಹ ಕ್ಲಾಸು ಎಂದರೂ, ಅವರಿಗೆ ಅದೇನೋ ರಕ್ತಗತವಾಗಿ ಬಂದ ಈ ಸಮಯದಲ್ಲಿ ಕೇಳಲೇಬೇಕಾದ ಪ್ರಶ್ನೆಯೇನೋ ಎನ್ನುವಂತೆ ಕೇಳಿಬಿಡುತ್ತಾರೆ! ನಾನು ದೊಡ್ಡವನು, ನಾನು ನನಗೆ ಸಿಕ್ಕ ಮಕ್ಕಳನ್ನು ಈ ವಿಷಯವಾಗಿ ಹೀಗೇ ಪ್ರಶ್ನಿಸಬೇಕು ಎನ್ನುವ ಅದೊಂದು ಬಗೆಯ ಮನಸ್ಥಿತಿ ಈ ಕೆಲಸ ಮಾಡಿಸುತ್ತದೆಯೋ ಏನು ಕಥೆಯೋ...

ಹಾಗೆಂದು ಇದು ಅವಮಾನದ ಕಥೆಯೇನೂ ಅಲ್ಲ. ಮಾರ್ಚ್ ತಿಂಗಳಿನಿಂದ ಜೂನ್ ಕೊನೆಯ ತನಕ ನಮಗೆ ಸಿಕ್ಕುವ ನೆಂಟರು, ಆತ್ಮೀಯರು, ಹೊಸದಾಗಿ ಎದುರಾದವರು... ಹೀಗೆ ಯಾರೆಲ್ಲ ಈಗ ಎಷ್ಟನೇ ಕ್ಲಾಸು ಎಂದು ಕೇಳುವುದು, ನಾವು ಅವರ ಮನಸ್ಥಿತಿ ಅರ್ಥ ಮಾಡಿಕೊಂಡವರಂತೆ ಆರು ಪಾಸಾಗಿ ಏಳೋ, ಎಂಟು ಪಾಸಾಗಿ ಒಂಭತ್ತೋ ಎಂದು ಹೇಳುವುದು... ಇದೊಂದು ಬಗೆಯಲ್ಲಿ ಮತ್ತೆ ಮತ್ತೆ ನಮ್ಮ ಗೆಲುವನ್ನು ನಾವೇ ಸಂಭ್ರಮಿಸಿಕೊಳ್ಳುವ ಸಿಹಿ ನೆಪದಂತೆಯೂ ನಮ್ಮ ಬದುಕಿನ ಪುಟಗಳಲ್ಲಿ ಉಳಿದುಬಿಡುತ್ತದೆ. ಇಲ್ಲಿ ‘ಪಾಸಾಗಿ’ ಎಂದು ಹೇಳಿಕೊಳ್ಳುವುದಿದೆಯಲ್ಲ, ಅದು ನಮ್ಮ ಗೆಲುವನ್ನು ನಮಗೆ ಮತ್ತೆ ಮತ್ತೆ ನೆನಪಿಸುವ ರೀತಿಯಲ್ಲೇ ನಾವೊಂದು ಬಗೆಯ ಎಂಜಾಯ್‌ಮೆಂಟಿಗೆ ಸಿಕ್ಕಿಕೊಳ್ಳುತ್ತಿರುತ್ತೇವೆ. ಇದನ್ನು ಇಂಗ್ಲೀಷಿನಲ್ಲಿ ಅದೇನೋ ಹ್ಯೂಮನ್ ಟೆಂಡೆನ್ಸಿ ಅಂತೇನೋ ಹೇಳುತ್ತಾರೆ. ನಮಗೆ ನಾವು ಗೆದ್ದ ಗೆಲುವು ಸಣ್ಣ ಗೆಲುವೇ ಆದರೂ ಅದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವುದರಲ್ಲಿ ಅದೇನೋ ಒಂದು ಬಗೆಯ ಖುಷಿ ಸಿಕ್ಕುತ್ತಿರುತ್ತದೆ. ಈ ಖುಷಿಯೇ ನಮ್ಮನ್ನು ಇನ್ನೊಂದು ಗೆಲುವಿಗೆ ತವಕಿಸುವಂತೆಯೂ ಮಾಡುತ್ತಿರುತ್ತದೆ. ಹೀಗಿದ್ದಾಗ ನಮ್ಮಾಚೆಗಿನ ಯಾರೋ ಎದುರು ಸಿಕ್ಕಿ, ಎಷ್ಟನೇ ಕ್ಲಾಸು ಎನ್ನುವುದಕ್ಕೂ ಅಥವಾ ರಿಸಲ್ಟ್ ಏನಾಯ್ತು ಎಂದು ಕೇಳಿದಾಗ ನಾವು ಅದನ್ನು ಹೆಮ್ಮೆಯಿಂದ ಹೇಳಿಕೊಳ್ಳುವ, ಈ ಮೂಲಕ ‘ನಾನು ಗೆದ್ದವನು’ ಎಂದು ಸಂಭ್ರಮಿಸುವ ಅವಕಾಶವನ್ನು ಕಳೆದುಕೊಳ್ಳಲು ಸಾಧ್ಯವಾ?

ಸಾಮಾನ್ಯವಾಗಿ ನಾವು ಇಂತಹ ಅವಕಾಶವನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳುವುದಿಲ್ಲ. ಆದ್ದರಿಂದಲೇ ಮತ್ತೆ ಮತ್ತೆ ಪಾಸ್ ಆಗಿ ನಾನು ಮುಂದಿನ ಕ್ಲಾಸಿಗೆ ಹೋದೆ ಎಂದು ಹೇಳಿಕೊಳ್ಳುವ ಸಿಹಿ ನೆನಪೊಂದು ಪ್ರತೀ ವರ್ಷ ಇದೇ ಸಮಯದಲ್ಲಿ ನಮ್ಮ ಬದುಕಿಗೆ ಎದುರಾಗುವುದು ಯಾವುದೇ ಕಾರಣಕ್ಕೂ ಕಿರಿಕಿರಿ ಅನ್ನಿಸುವುದಿಲ್ಲ. ಇವರ‍್ಯಾಕೆ ಹೀಗೆ ಕೇಳುತ್ತಿದ್ದಾರೆ? ನಾನು ಈಗ ಆರನೇ ಕ್ಲಾಸೆಂದರೆ ಆರನೇ ಕ್ಲಾಸೇ ಎಂದು ಇವರಿಗೇಕೆ ಅರ್ಥವಾಗುವುದಿಲ್ಲ? ಅದನ್ನು ಬಿಡಿಸಿ ಹೇಳಲಿಕ್ಕೆ ಏನಿದೆ? ಎಂದೆಲ್ಲ ನಮಗೆ ಅನ್ನಿಸುವುದೇ ಇಲ್ಲ. ನಾವು ಐದು ಪಾಸಾಗಿ, ಆರನೇ ಕ್ಲಾಸೆನ್ನುವುದು ರಿಸಲ್ಟಿನ ನಂತರ ನಿಕ್ಕಿಯಾಗಿದ್ದಾಗಲೂ ನಮ್ಮನ್ನ್ಯಾರೋ ಐದೋ, ಆರೋ ಎಂದಾಗಲೂ ನಾವು ಕಿರಿಕಿರಿ ಮಾಡಿಕೊಳ್ಳದೇ ಖುಷಿಯಿಂದಲೇ ಐದು ಪಾಸಾಗಿ ಈಗ ಆರನೇ ಕ್ಲಾಸು ಎನ್ನುತ್ತೇವೆ. ಹೀಗೆ ಹೇಳುವುದರಲ್ಲಿ ನಮಗೇ ಗೊತ್ತಿಲ್ಲದೆ ನಾವು ಬೆಳೆಯುತ್ತಿರುವ ಸಂಭ್ರಮವೊಂದನ್ನು ಒಳಗೊಳಗೇ ಫೀಲ್ ಮಾಡುತ್ತಿರುತ್ತೇವೆ.

ಕೇಳುವವರು ಸಹಜವಾದ ಮಾತಿನ ಮಧ್ಯದಲ್ಲೊಂದು ಪ್ರಶ್ನೆ ಎನ್ನುವಂತೆ ಕೇಳಿರುತ್ತಾರೋ ಅಥವಾ ಅವರಿಗೆ ನೀವು ಎಷ್ಟನೇ ಕ್ಲಾಸಿನ ಸ್ಟೂಡೆಂಟು ಎಂದು ತಿಳಿದು ನಿಮಗೆ ಬೇರೇನೋ ಹೇಳುವ, ಕೇಳುವ ಉದ್ದೇಶವಿರುತ್ತದೆಯೋ ಒಟ್ಟಿನಲ್ಲಿ ಅವರು ಈ ಸಮಯದಲ್ಲಿ ನಿಮ್ಮೆದುರು ಎಷ್ಟನೇ ಕ್ಲಾಸೋ ತಮ್ಮಾ ಎಂದು ಕೇಳುತ್ತಾರೆ. ಅವರು ಕೇಳಿದ ಪ್ರಶ್ನೆ ನನಗೆ ಪ್ರತೀ ವರ್ಷ ಈ ಹೊತ್ತಿನಲ್ಲಿ ಹೀಗೇ ಎದುರಾಗುತ್ತದೆ ಮತ್ತು ಅದರ ಹಿಂದಿನ ಉದ್ದೇಶವೂ ಇಷ್ಟೇ ಎಂದು ಅರ್ಥ ಮಾಡಿಕೊಂಡಂತೆ, ಆರು ಪಾಸಾಗಿ ಈಗ ಏಳು ಎಂದುಬಿಟ್ಟರೆ ಕೇಳಿದವರಿಗೂ ಸಮಾಧಾನ. ನಿಮಗೂ ಮುಂದಿನ ವಿವರಣೆಗೆ ಜಾರಬೇಕಾದ ಸಂದರ್ಭವೂ ಬರುವುದಿಲ್ಲ.

ಏನಾದರೂ ಇರಲಿ, ಮಾರ್ಚ್ ತಿಂಗಳ ಕೊನೆ ಕೊನೆಯಿಂದ ಆರಂಭವಾಗಿ ಜೂನ್ ಅಂತ್ಯದವರೆಗೂ ನಮ್ಮೆಲ್ಲರ ಶಾಲೆ ಕಾಲೇಜಿನ ಬದುಕಿನಲ್ಲಿ ಪ್ರತೀ ವರ್ಷ, ಯಾರೋ ಒಬ್ಬರಾದರೂ ನಮ್ಮನ್ನು ಹೀಗೊಂದು ಪ್ರಶ್ನೆ ಕೇಳುತ್ತಾರೆ ಮತ್ತು ನಾವು ಎಷ್ಟೇ ನೇರ ಉತ್ತರ ಕೊಟ್ಟರೂ ಆರು ಪಾಸಾಗಿ ಏಳಾ ಅಥವಾ... ನೀನು ವಿವರಣೆ ಕೊಟ್ಟೇ ಸೈ ಎನ್ನುವಂತೆ ಇನ್ನೊಂದು ಪ್ರಶ್ನೆಯನ್ನೆಸೆದುಬಿಡುತ್ತಾರೆ. ನಿಮಗಿದು ಈ ಸೀಸನ್ನಿನ ಸಾಮಾನ್ಯದಲ್ಲಿ ಸಾಮಾನ್ಯವಾದ ಪ್ರಶ್ನೆ ಎಂದು ತಿಳಿದಿದ್ದರೆ, ಅವರು ಪ್ರಶ್ನಿಸುವ ಮೊದಲೇ ಅವರಿಗೆ ಸ್ಪಷ್ಟತೆ ತಂದುಕೊಡುವ ಉತ್ತರ ಕೊಟ್ಟುಬಿಟ್ಟರೆ ಅಲ್ಲಿಗೆ ಅದು ಮುಗಿದು ಹೋಗುತ್ತದೆ. ಮತ್ತು ಮುಂದಿನ ವರ್ಷ ಇದೇ ಹೊತ್ತಿಗೆ ಅದೇ ಪ್ರಶ್ನೆ ಸಣ್ಣ ರೂಪಾಂತರದೊಂದಿಗೆ ನಿಮ್ಮನ್ನು ಎದುರುಗೊಳ್ಳಲು ಖುಷಿಯಿಂದ ಕಾಯುತ್ತಿರುತ್ತದೆ...

                                                                                                                     -ಆರುಡೋ ಗಣೇಶ ಕೋಡೂರು


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆ ಕ್ಷಣದಲ್ಲಿ ಶರತ್‌ ಸಾವಿನೆದುರು ಅದೆಷ್ಟು ಅಸಹಾಯಕ!!

ಒಂಟಿತನ ಎಂದರೆ ಜವಾಬ್ದಾರಿಯಿಂದ ಜಾರಿಕೊಳ್ಳುವುದಾ?!