ಒಂಟಿತನ ಎಂದರೆ ಜವಾಬ್ದಾರಿಯಿಂದ ಜಾರಿಕೊಳ್ಳುವುದಾ?!

ಕೆಲವರನ್ನು ಗಮನಿಸಿ ನೋಡಿ. ಅವರ ಒಂಟಿತನ ಎನ್ನುವುದು ಜವಾಬ್ದಾರಿಗಳಿಂದ ದೂರ ಉಳಿಯಲಿಕ್ಕೆಂದು ಅವರೇ ಸೃಷ್ಟಿಸಿಕೊಂಡ ಒಂದು ಗುರಾಣಿಯಂತೆ ಕಾಣಿಸುತ್ತಿರುತ್ತದೆ! ಅವರ ಬದುಕು ಅವರ ಇಷ್ಟ ಎನ್ನುವುದೇನೋ ಸರಿ. ಹಾಗೆಂದು ನೀನು ನಿಭಾಯಿಸಲೇಬೇಕಾದ ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳುವಾಗ ಮಾತ್ರ ನಿನ್ನಲ್ಲಿ ’ಒಂಟಿತನ’ದ ಬದುಕು ಎಚ್ಚರಗೊಳ್ಳುವುದೇಕೆ? ನನಗೆ ಯಾರೂ ಬೇಡ, ನಾನು ನನ್ನಷ್ಟಕ್ಕೆ ಬದುಕುತ್ತಿದ್ದೇನೆ ಎನ್ನುವಂತಹ ಮಾತುಗಳು ಯಾರೋ ನಿನ್ನ ಬಳಿ ಕಷ್ಟ ಹೇಳಿಕೊಂಡು ಬಂದಾಗ ಮಾತ್ರ ನೆನಪಾಗುವುದೇಕೆ?! ಅಂದರೆ ಸುಖ ಇದೆ, ನೆಮ್ಮದಿ ಇದೆ ಎನ್ನುವಾಗ ಎಲ್ಲರೊಂದಿಗೂ ಇರುವ ಇಂತಹವರು, ಯಾರೋ ಕಷ್ಟ ಎಂದು ಬಂದಾಗ ಮಾತ್ರ ಒಂಟಿತನದೆಡೆಗೆ ಜಾರಿಕೊಳ್ಳುವ, ಈ ಮೂಲಕ ತಾನು ಒಂಟಿ ಬಾಳು ಬಾಳುತ್ತಿದ್ದೇನೆ, ನನಗೆ ಏಕಾಂಗಿಯಾಗಿರುವುದೇ ಇಷ್ಟ ಎಂದು ತೋರಿಸಿಕೊಳ್ಳಲು ಆರಂಭಿಸುತ್ತಾರೆ.


ಒಬ್ಬನೇ. ಜೊತೆಗೆ ಯಾರೂ ಇಲ್ಲ. ಯಾರ ಹಂಗೂ ಇಲ್ಲದೆ ನನಗೆ ಹೇಗನ್ನಿಸುತ್ತದೆಯೋ ಹಾಗಿದ್ದು ಬಿಡಬಹುದು. ಇದನ್ನೇ ’ಏಕಾಂಗಿ ಬದುಕು’ ಎನ್ನುವುದಾ? ಇದರ ಇನ್ನೊಂದು ಹೆಸರೇ ಒಂಟಿತನವಾ? ಹೌದು, ಒಂದು ರೀತಿಯಲ್ಲಿ ಇದು ಅದೇ. ಇಡೀ ಲೋಕವೇ ಒಂದೆಡೆಯಾದರೆ, ಅದರಾಚೆಗೆ ಬಂದು ನಾನೊಬ್ಬನೇ ನನಗನ್ನಿಸಿದಂತೆ ನನ್ನದೇ ಲೋಕದಲ್ಲಿ ಬದುಕುವುದು ಒಂಟಿತನ; ಏಕಾಂಗಿ ಬದುಕು. ಈ ಬದುಕಿನಲ್ಲಿ ಎಂತಹದ್ದೇ ಸಂದರ್ಭ ಬಂದರೂ ನನಗೆ ಯಾರೆಂದರೆ ಯಾರೂ ಬೇಡ ಎನ್ನುವಂತಹ ನಿರ್ಧಾರದೊಂದಿಗೇ ಒಂಟಿತನದ ಬದುಕು ಹೆಜ್ಜೆ ಇಡಲಾರಂಭಿಸುತ್ತದೆ. ಇಡೀ ಜಗತ್ತಿಗೆ ಹಂಚುವಂತಹ ಸುಖವೇ ಇರಲಿ, ಕನಲಿಸಿ ಕಿರುಚಾಡುವ ಕಷ್ಟವೇ ಬರಲಿ... ಯಾವುದೇ ಆದರೂ ಅದು ’ನನ್ನೊಬ್ಬನದ್ದೇ’ ಎನ್ನುವಂತಹ ಮನಸ್ಥಿತಿ ಯಾರಲ್ಲಿರುತ್ತದೆಯೋ ಅವರು ನಿಜಕ್ಕೂ ಒಂಟಿಯಾಗಿರುತ್ತಾರೆ; ಒಂಟಿತನದ ಚೌಕಟ್ಟಿನೊಳಗೆ ಅವರು ಅಂದುಕೊಂಡಂತೆಯೇ ಬದುಕುತ್ತಿರುತ್ತಾರೆ.

ಹಾಗೆಂದು ಅವರು ಯಾವುದೇ ಜವಾಬ್ದಾರಿಗಳಿಂದ ಜಾರಿಕೊಳ್ಳುತ್ತಿರುತ್ತಾರಾ? ಖಂಡಿತ ಹಾಗಿರುವುದಿಲ್ಲ. ಒಂಟಿತನದ ಬದುಕು ಎನ್ನುವುದೂ ಒಂದು ಬದುಕೇ ಆಗಿರುವುದರಿಂದ ಅದಕ್ಕೆ ಅದರದ್ದೇ ಆದ ಒಂದಿಷ್ಟು ಜವಾಬ್ದಾರಿಗಳಿರುತ್ತವೆ. ಒಂಟಿತನ, ಏಕಾಂಗಿ ಬದುಕು ಎಂದುಕೊಂಡು ಅವರೇನು ನಾಗರೀಕ ಬದುಕನ್ನೇ ತೊರೆದು, ಕಾಡಿನಲ್ಲಿ ಬದುಕುತ್ತಿರುತ್ತಾರಾ? ಅಥವಾ ಹಿಮಾಲಯದಲ್ಲೇನಾದರೂ ಇದ್ದಾರಾ? ಹಾಗಿರುವುದಿಲ್ಲ. ಅಂದಮೇಲೆ ಅವರು ಈ ಸಮಾಜದ ಒಂದು ಭಾಗವೇ ಆಗಿರುತ್ತಾರೆ. ಮತ್ತು ಬದುಕು ನಡೆಯಬೇಕೆಂದ ಮೇಲೆ ಅದಕ್ಕೆ ಸರಿಯಾಗಿ ಅವರೊಂದಿಷ್ಟು ಜವಾಬ್ದಾರಿಗಳನ್ನು ನಿಭಾಯಿಸಲೇ ಬೇಕಾಗಿರುವುದರಿಂದ, ಆ ಹೊತ್ತಿಗೆ ಮಾತ್ರವೇ ಅವರದಲ್ಲದ ಬದುಕನ್ನು ಬದುಕಿ ಮರುಕ್ಷಣವೇ ತಮ್ಮ ಒಂಟಿತನದ ಗೂಡಿಗೆ ಹಿಂದಿರುಗಿಬಿಡುತ್ತಾರೆ. ಹೀಗಿದ್ದಾಗ ಅವರು ನಿಭಾಯಿಸಬಹುದಾದ ಜವಾಬ್ದಾರಿಗಳೇನಿರುತ್ತವೆ ಅದಕ್ಕೆ ಅವರು ಸಂಪೂರ್ಣವಾಗಿಯೇ ಹೆಗಲು ಕೊಡುತ್ತಿರುತ್ತಾರೆ. ಅದರಲ್ಲಿ ಒಂದಷ್ಟೂ ಹಿಂದೆ ಸರಿಯುವುದಿಲ್ಲ. ತಪ್ಪಿಸಿಕೊಳ್ಳಲಿಕ್ಕೂ ಪ್ರಯತ್ನಿಸುವುದಿಲ್ಲ. ತನ್ನ ಜವಾಬ್ದಾರಿಗಳೇನಿದೆ ಅದು ಮುಗಿಯಿತಾ, ಮರುಕ್ಷಣವೇ ಅವರು ಮತ್ತೆ ಒಂಟೊಂಟಿ... ಅಲ್ಲಿ ಅವರನ್ನು ಹೊರತುಪಡಿಸಿದ ಯಾರೇ ಬಂದರೂ, ಇದ್ದರೂ ಅವರಿಗೆ ’ನೋ ಎಂಟ್ರಿ’!

ಜೀವನ ನಡೆಯಬೇಕೆಂದರೆ ಏನಾದರೂ ದುಡಿಮೆ ಇರಲೇಬೇಕು. ಇದು ಡಿಜಿಟಲ್ ಯುಗ. ಕೆಲಸಕ್ಕಾಗಿ ನೇರವಾಗಿ ಯಾರೆದುರೂ ಹೋಗಿ ನಿಲ್ಲಬೇಕಿಲ್ಲವಾದರೂ, ಕೆಲಸ ಪಡೆದುಕೊಳ್ಳುವಾಗ, ಕೆಲಸದ ನಡುವೆ ಏನೋ ಡೌಟುಗಳಿದ್ದಾಗ, ಸುಧಾರಣೆ ಮಾಡಬೇಕಾದಾಗ... ಗಂಟೆಗಟ್ಟಲೆ ಇನ್ನೊಬ್ಬರೊಂದಿಗೆ ಮಾತನಾಡುವುದು ಇದ್ದೇ ಇರುತ್ತದೆ. ಹೀಗೆ ಮಾತನಾಡುತ್ತಿರುವಷ್ಟು ಹೊತ್ತು ಒಂಟಿಯಾಗಿ ಬದುಕುತ್ತೇನೆ ಎಂದುಕೊಂಡವನು ಒಂಟಿಯಾಗಿರಲು ಸಾಧ್ಯವಾಗುವುದಿಲ್ಲ. ಆದರೆ ಹೀಗೆ ಯಾರೊಂದಿಗೋ ಮಾತುಕತೆಯಾಡಿ ಕೆಲಸ ಮಾಡಬೇಕಾದ ಸಮಯ ಎಷ್ಟಿರುತ್ತದೆಯೋ ಆ ಹೊತ್ತಿನಲ್ಲಿ ಮಾತ್ರವೇ ಅವರು ಮಾತನಾಡುತ್ತಾರೆ, ನಗಬೇಕಾದಲ್ಲಿ ನಗುತ್ತಾರೆ. ಆ ಜವಾಬ್ದಾರಿ ಮುಗಿಯುತ್ತಿದ್ದಂತೆ, ಅವರು ಮತ್ತೆ ಅದೇ ತಾವೇ ಕಟ್ಟಿಕೊಂಡ ಚಿಪ್ಪಿನೊಳಗೆ ಸೇರಿಕೊಂಡು ಬಿಡುತ್ತಾರೆ. ನೀವು ನಿಮ್ಮ ಆಫೀಸಿನಲ್ಲಿ ಇಂತಹ ಕೆಲವರನ್ನು ನೋಡಿರಬಹುದು. ಅವರ ಮಾತುಕತೆ, ಬಾಂಧವ್ಯಗಳೇನಿದ್ದರೂ ಕೆಲಸದ ವಿಷಯಕ್ಕೆ ಮಾತ್ರವೇ ಸೀಮಿತವಾಗಿರುತ್ತವೆ. ಅದರಾಚೆಗೆ ಅವರು ಯಾರೊಂದಿಗೂ ಹೆಚ್ಚು ಬೆರೆಯುವುದಿಲ್ಲ, ಸೆಲಬ್ರೇಶನ್ನುಗಳಲ್ಲಿಯೂ ಇದ್ದೂ ಇಲ್ಲದಂತೆ ಇರುತ್ತಾರೆ, ಸಂಜೆ ಕೆಲಸ ಮುಗಿಯಿತಾ ಆಫೀಸಿನಲ್ಲಿ ಒಂದು ಕ್ಷಣ ಕೂಡಾ ಇರುವುದಿಲ್ಲ. ಕೊಲೀಗುಗಳ ಯಾರ ಮನೆಗೂ ಅವರು ಹೋಗುವುದಿಲ್ಲ, ಅವರ ಮನೆಗೆ ಯಾರನ್ನೂ ಕರೆಯುವುದೂ ಇಲ್ಲ. ಹೀಗೆ ಬದುಕು ನಡೆಸಲು ಬೇಕಾದ ಕೆಲಸಕ್ಕೆ ಎಷ್ಟು ಸಮಯ ಕೊಡಬೇಕಿದೆಯೋ ಅಷ್ಟು ಸಮಯವನ್ನು ಕೊಡುವ ಇವರು, ಅದರನಂತರ ಮತ್ತೆ ಈ ಕಡೆ ತಲೆ ಹಾಕಿ ಮಲಗುವುದಿಲ್ಲ ಎನ್ನುತ್ತಾರಲ್ಲ ಥೇಟು ಹಾಗೇ ಇದ್ದುಬಿಡುತ್ತಾರೆ. ಒಂಟಿ ಬದುಕು ಸರಿ, ಆದರೆ ಅದನ್ನು ನಡೆಸಲು ಬೇಕಾದ ತನ್ನ ಜವಾಬ್ದಾರಿಗಳೇನಿವೆಯೋ ಅದನ್ನು ಸಮರ್ಥವಾಗಿ, ಸ್ವಲ್ಪವೂ ಕುಂದಿಲ್ಲದಂತೆ ಇವರು ನಿರ್ವಹಿಸುತ್ತಿರುತ್ತಾರೆ.

ಹಾಗಿದ್ದರೆ ಒಂಟಿತನ ಎನ್ನುವುದು ಇವರ ಪಾಲಿಗೆ ಬದುಕಿನ ಕೆಲವು ಜವಾಬ್ದಾರಿಗಳಿಂದ ಜಾರಿಕೊಳ್ಳುವ ಜಾರುಬಂಡಿಯಲ್ಲವಾ? ಖಂಡಿತ ಅಲ್ಲ. ಆದ್ದರಿಂದಲೇ ಇವರು ತನ್ನ ಬದುಕಿನ ಮಿತಿಯಲ್ಲಿ ಏನೆಲ್ಲ ಜವಾಬ್ದಾರಿಗಳಿವೆಯೋ ಅವುಗಳನ್ನು ಚಾಚೂತಪ್ಪದೇ ನಿಭಾಯಿಸುತ್ತಿರುತ್ತಾರೆ. ಆದ್ದರಿಂದಲೇ ಇವರ ಒಂಟಿತನ ಕಪಟವಾಗಿ ಕಾಣುವುದಿಲ್ಲ. ಇದರಿಂದ ಯಾರಿಗೂ ತೊಂದರೆಯಾಗದೇ ಇರುವುದರಿಂದ ಇವರ ಒಂಟಿತನದಿಂದ ಯಾರೂ ಹರ್ಟ್‌ ಕೂಡಾ ಆಗುವುದಿಲ್ಲ.

ಆದರೆ ಕೆಲವರನ್ನು ಗಮನಿಸಿ ನೋಡಿ. ಅವರ ಒಂಟಿತನ ಎನ್ನುವುದು ಜವಾಬ್ದಾರಿಗಳಿಂದ ದೂರ ಉಳಿಯಲಿಕ್ಕೆಂದು ಅವರೇ ಸೃಷ್ಟಿಸಿಕೊಂಡ ಒಂದು ಗುರಾಣಿಯಂತೆ ಕಾಣಿಸುತ್ತಿರುತ್ತದೆ! ಅವರ ಬದುಕು ಅವರ ಇಷ್ಟ ಎನ್ನುವುದೇನೋ ಸರಿ. ಹಾಗೆಂದು ನೀನು ನಿಭಾಯಿಸಲೇಬೇಕಾದ ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳುವಾಗ ಮಾತ್ರ ನಿನ್ನಲ್ಲಿ ’ಒಂಟಿತನ’ದ ಬದುಕು ಎಚ್ಚರಗೊಳ್ಳುವುದೇಕೆ? ನನಗೆ ಯಾರೂ ಬೇಡ, ನಾನು ನನ್ನಷ್ಟಕ್ಕೆ ಬದುಕುತ್ತಿದ್ದೇನೆ ಎನ್ನುವಂತಹ ಮಾತುಗಳು ಯಾರೋ ನಿನ್ನ ಬಳಿ ಕಷ್ಟ ಹೇಳಿಕೊಂಡು ಬಂದಾಗ ಮಾತ್ರ ನೆನಪಾಗುವುದೇಕೆ?! ಅಂದರೆ ಸುಖ ಇದೆ, ನೆಮ್ಮದಿ ಇದೆ ಎನ್ನುವಾಗ ಎಲ್ಲರೊಂದಿಗೂ ಇರುವ ಇಂತಹವರು, ಯಾರೋ ಕಷ್ಟ ಎಂದು ಬಂದಾಗ ಮಾತ್ರ ಒಂಟಿತನದೆಡೆಗೆ ಜಾರಿಕೊಳ್ಳುವ, ಈ ಮೂಲಕ ತಾನು ಒಂಟಿ ಬಾಳು ಬಾಳುತ್ತಿದ್ದೇನೆ, ನನಗೆ ಏಕಾಂಗಿಯಾಗಿರುವುದೇ ಇಷ್ಟ ಎಂದು ತೋರಿಸಿಕೊಳ್ಳಲು ಆರಂಭಿಸುತ್ತಾರೆ.

ಬದುಕೆಂದ ಮೇಲೆ ಜವಾಬ್ದಾರಿಗಳು ಇದ್ದೇ ಇರುತ್ತವೆ. ಅದು ಒಂಟಿ ಬದುಕಾದರೂ ಆಗಿರಲಿ, ಜೋಡಿ ಬದುಕಾದರೂ ಆಗಿರಲಿ ಅದಕ್ಕೆ ಅದರದ್ದೇ ಆದ ಒಂದಿಷ್ಟು ಜವಾಬ್ದಾರಿಗಳಿರುತ್ತವೆ. ಮತ್ತು ಬದುಕು ಸರಾಗವಾಗಿ ಸಾಗಬೇಕೆಂದರೆ ಅವುಗಳನ್ನು ನಾವು ನಿಭಾಯಿಸಲೇಬೇಕು. ಆಗಲೇ ಬದುಕು ತನ್ನದೇ ಚೌಕಟ್ಟಿನೊಳಗೆ ನೀಟಾಗಿಯೂ ಇರುತ್ತದೆ. ಜೊತೆಗೆ ಬೇರೆಯವರು ನಮ್ಮ ಬದುಕಿನ ಬಗ್ಗೆ ಆಡಿಕೊಳ್ಳದ ಹಾಗೂ ಇರುತ್ತದೆ. ವಿಚಿತ್ರವೆಂದರೆ, ಕೆಲವರು ’ಯಾರ ಮೇಲೂ ಡಿಪೆಂಡ್‌ ಆಗದೇ ನನ್ನಷ್ಟಕ್ಕೆ ನಾನು ಬದುಕುತ್ತಿದ್ದೇನೆ’ ಅಥವಾ ’ನಾನು ನನ್ನ ಪಾಡಿಗೆ ಒಂಟಿಯಾಗಿ ಬದುಕುತ್ತಿದ್ದೇನೆ’ ಎನ್ನುವ ಡೈಲಾಗು ಹೊಡೆಯುವುದು ಅವರು ಸುಖದಲ್ಲಿದ್ದಾಗ ಮಾತ್ರ. ಆ ಸಂದರ್ಭದಲ್ಲಿ ಯಾವುದೋ ಜವಾಬ್ದಾರಿಯನ್ನು ಅವರು ಹೊರಬೇಕೆಂದಾಗ ಅವರಿಗೆ ನಾನು ಯಾರ ಜೊತೆಗೂ ಅಟ್ಯಾಚ್‌ಮೆಂಟ್ ಹೊಂದಿಲ್ಲ, ನನಗೆ ಯಾವ ಸಂಬಂಧಗಳೂ ಬೇಕಾಗಿಲ್ಲ, ನಾನು ನನ್ನಷ್ಟಕ್ಕೆ ಬದುಕುವವನು ಎನ್ನುವುದು ನೆನಪಾಗಿಬಿಡುತ್ತದೆ. ಅದೇ ಕಷ್ಟಗಳು ಬಂದಾಗ? ಆಗ ಅವರಿಗೆ ಇದೆಲ್ಲವೂ ಪೂರ್ತಿಗೆ ಪೂರ್ತಿ ಮರೆತು ಹೋಗಿರುತ್ತದೆ. ತಾನು ಹಿಂದೊಮ್ಮೆ ಇಂತಹ ಮಾತುಗಳನ್ನಾಡಿದ್ದೇ ಎನ್ನುವುದೂ ನೆನಪಿರುವುದಿಲ್ಲ ಅಥವಾ ನೆನಪಿಲ್ಲದಂತೆ ನಟಿಸುತ್ತಿರುತ್ತಾರೆ!

ಒಂಟಿತನ ಅಥವಾ ಯಾರೊಂದಿಗೂ ಸಂಬಂಧವೇ ಇಲ್ಲದೇ ನನ್ನಷ್ಟಕ್ಕೆ ನಾನು ಬದುಕುತ್ತಿದ್ದೇನೆ ಎನ್ನುವವನು ಯಾವಾಗಲೂ ಹಾಗೇ ಬದುಕಬೇಕು. ಕೊನೆಗೆ, ಕೈ ಆಗುವುದಿಲ್ಲ ಎಂದಾಗ ಒಂದು ಕೊಡಪಾನ ನೀರು ತರಲಿಕ್ಕೂ ಅವನು ಬೇರೆಯವರ ಸಹಾಯ ಕೇಳದಂತೆ ಇರಬೇಕು. ಆಗ ’ಒಂಟಿತನ’ ಅಥವಾ ’ನನ್ನಷ್ಟಕ್ಕೆ ನಾನು ಬದುಕುತ್ತಿದ್ದೇನೆ’ ಎನ್ನುವುದಕ್ಕೆ ಅರ್ಥವಿರುತ್ತದೆ. ಆದರೆ ಇಂತಹ ವ್ಯಕ್ತಿತ್ವಗಳು ಹೀಗಿರುವುದಿಲ್ಲ. ತಮಗೆ ಒಂದೆರಡು ಸಾರಿ ಬೇಧಿಯಾಗಿ ಒಂದೆರಡು ಹೆಜ್ಜೆ ಇಡಲಿಕ್ಕಾಗುವುದಿಲ್ಲ ಎಂದತಕ್ಷಣ, ತಮ್ಮ ಕಾಂಟ್ಯಾಕ್ಟ್‌ ಲಿಸ್ಟಿನಲ್ಲಿ ಯಾರೆಲ್ಲ ಇರುತ್ತಾರೋ ಅವರೆಲ್ಲರಿಗೂ ಕಾಲ್‌ ಮೇಲೆ ಕಾಲ್‌ ಮಾಡಿ, ಏನು ಮಾಡಬಹುದು? ಕ್ಲಿನಿಕ್ಕಿಗೆ ಹೋಗುತ್ತಿದ್ದೇನೆ, ಜೊತೆಗೆ ಬರುತ್ತೀರಾ? ಯಾವ ಡಾಕ್ಟರ‍್ರನ್ನು ಕನ್ಸಲ್ಟ್‌ ಮಾಡಬೇಕು? ಎಂದೆಲ್ಲ ಕೇಳಲಾರಂಭಿಸುತ್ತಾರೆ! ಅಂದಮೇಲೆ ಇದು ಒಂಟಿತನ ಹೇಗಾಗುತ್ತದೆ? ಯಾರ ಮೇಲೂ ನಾನು ಡಿಪೆಂಡ್‌ ಆಗಿಲ್ಲ ಎಂದು ಹೇಳುವುದರ ಅರ್ಥವೇನು? ಅದೇ ಇವರ ಪರಿಚಿತರೇ ಯಾರೋ ಒಬ್ಬರು, ಇಂತಹದ್ದೇ ಸಂದರ್ಭದಲ್ಲಿ ಇವರಿಗೆ ಕಾಲ್ ಮಾಡಿದಾಗ ಮಾತ್ರ, ಇವರಿಗೆ ಅವರೊಂದಿಗೆ ಕ್ಲಿನಿಕ್ಕಿಗೆ ಹೋಗಲು ಇಷ್ಟವಾಗುವುದಿಲ್ಲ. ಆಗ ನಾನು ಯಾರ ಮೇಲೂ ಡಿಪೆಂಡ್ ಆಗುವುದಿಲ್ಲ, ನಾನು ನನ್ನಷ್ಟಕ್ಕೆ ಬದುಕುವವನು ಎಂದೆಲ್ಲ ಉದ್ದುದ್ದದ ಡೈಲಾಗು ಹೊಡೆಯಲಾರಂಭಿಸುತ್ತಾರೆ. ಅಂದರೆ ಅವರಿಗೆ ಹುಷಾರಿಲ್ಲದ ತಮ್ಮವರೇ ಯಾರೋ ಒಬ್ಬರ ಜವಾಬ್ದಾರಿಯನ್ನು ತೆಗೆದುಕೊಂಡು ಅವರೊಂದಿಗೆ ಕ್ಲಿನಿಕ್ಕಿಗೆ ಹೋಗುವ, ಡಾಕ್ಟರ್‌‌ ಭೇಟಿಯ ನಂತರ ಅವರನ್ನು ಮನೆಗೆ ತಲುಪಿಸುವ, ಮೆಡಿಕಲ್ಲಿಗೆ ಹೋಗಿ ಔಷಧಿ ತಂದುಕೊಡುವ, ಆನಂತರವೂ ಮತ್ತೆ ಅವರ ಆರೋಗ್ಯ ವಿಚಾರಿಸುವ ಮನಸ್ಸಿರುವುದಿಲ್ಲ. ಒಟ್ಟಿನಲ್ಲಿ ಅವರಿಗೆ ಏನೂ ಕಷ್ಟವಿಲ್ಲದೇ, ಸುಖದಿಂದ ಇದ್ದಾಗ ತಮ್ಮ ಹತ್ತಿರದವರದ್ದೇ ಆಗಿರಲಿ ಅಥವಾ ಬೇರೆ ಯಾರದ್ದೇ ಆಗಿರಲಿ ಜವಾಬ್ದಾರಿ ತೆಗೆದುಕೊಳ್ಳಲು ಇಷ್ಟವಿರುವುದಿಲ್ಲ. ಆಗ ತಕ್ಷಣವೇ ನಾನು ಒಂಟಿ, ನಾನು ಡಿಪೆಂಡೆಂಟ್‌ ಅಲ್ಲ ಎಂದೆಲ್ಲ ಒಂಟಿತನದ ಗುರಾಣಿ ಎದುರಿಡುವುದು ಇವರಿಗೆ ಅಭ್ಯಾಸವಾಗಿರುತ್ತದೆ. 

ಅನುಮಾನವೇ ಬೇಡ, ತನಗೆ ಅಗತ್ಯವಿದ್ದಾಗ, ಅಂದರೆ ತನ್ನ ಕಷ್ಟಗಳನ್ನು ಪರಿಹರಿಸಲು ಜನರು ಬೇಕೆಂದಾಗ ಇವರು ಒಂಟಿಯಲ್ಲ. ಅದೇ ಯಾವುದೇ ಸಂದರ್ಭದಲ್ಲಿ, ಯಾರಿಗೇ ಸಂಬಂಧಿಸಿದಂತಹ ಒಂದು ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದಾಗ ಮಾತ್ರ ಇವರು ಒಂಟಿಗಳು, ಯಾರ ಮೇಲೂ ಡಿಪೆಂಡ್‌ ಆಗದವರು! ಇದೊಂದು ರೀತಿಯಲ್ಲಿ ಅವಕಾಶ ಮತ್ತು ಅಗತ್ಯಕ್ಕೆ ತಕ್ಕಂತೆ ರೂಪುಗೊಳ್ಳುವ ಒಂಟಿತನದ ಸುಳ್ಳು ವ್ಯಕ್ತಿತ್ವ. ಈ ಬದುಕಿನಲ್ಲಿ ನೀವೊಬ್ಬರೇ ಇರಿ ಅಥವಾ ಯಾರೊಂದಿಗೇ ಸಹಜೀವನ ನಡೆಸಿ, ಬದುಕಿನ ಒಂದು ಹೆಜ್ಜೆ ಮುಂದಿಡಬೇಕೆಂದರೆ ಆ ಹೊತ್ತಿಗೆ ಎಷ್ಟು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕೋ ಅಷ್ಟು ಜವಾಬ್ದಾರಿಯನ್ನು ತೆಗೆದುಕೊಳ್ಳಲೇಬೇಕು. ಹೀಗೆ ಸಿಕ್ಕ ಜವಾಬ್ದಾರಿಯನ್ನು ನಿಮ್ಮ ಮಿತಿಗೆ ತಕ್ಕಂತೆ ನಿಭಾಯಿಸಿದಾಗಲೇ ನಿಮಗೆ ಮುಂದಿನ ಹೆಜ್ಜೆ ಸುಲಭವೆನ್ನಿಸುತ್ತದೆ. ಬದುಕಿನ ಅನುಭವದ ಗಂಟೂ ಇನ್ನಷ್ಟು ಗಟ್ಟಿಗೊಳ್ಳುತ್ತಾ ಹೋಗುತ್ತದೆ. ಅದನ್ನು ಬಿಟ್ಟು, ಒಂಟಿತನದ ನೆಪ ಹೇಳಿ ಜವಾಬ್ದಾರಿಯಿಂದ ಜಾರಿಕೊಳ್ಳುವುದು ಆ ಕ್ಷಣಕ್ಕೆ ನಿಮಗೆ ನಾನು ತಪ್ಪಿಸಿಕೊಂಡೆ, ಸೇಫ್‌ ಆದೆ ಎನ್ನುವ ಸಮಾಧಾನವನ್ನು ನೀಡಬಹುದಾದರೂ, ಮುಂದೊಂದು ದಿನ ನಿಮ್ಮ ಏಕಾಂಗಿತನ, ಒಂಟಿತನವೆನ್ನುವುದೆಲ್ಲವೂ ನಾಟಕ ಎನ್ನುವುದು ನಿಮ್ಮ ಸುತ್ತಮುತ್ತಲಿರುವವರಿಗೆ ಅರ್ಥವಾಗುತ್ತದಲ್ಲ, ಆಗ ನೀವು ಅಷ್ಟು ಸುಲಭಕ್ಕೆ ಬಿಡಿಸಿಕೊಳ್ಳಲಾಗದ ನಿಜವಾದ ಒಂಟಿತನದ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡಿರುತ್ತೀರಿ. ಮತ್ತು ಅದರಿಂದ ತಪ್ಪಿಸಿಕೊಳ್ಳಲು ನಿಮಗೆ ನೆರವಾಗುವ ಒಬ್ಬರೇ ಒಬ್ಬರು ಕೂಡಾ ನಿಮ್ಮ ಸುತ್ತಮುತ್ತ ಎಲ್ಲಿಯೂ ಕಾಣಿಸುವುದಿಲ್ಲ...

                                                                                          -ಆರುಡೋ ಗಣೇಶ ಕೋಡೂರು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆ ಕ್ಷಣದಲ್ಲಿ ಶರತ್‌ ಸಾವಿನೆದುರು ಅದೆಷ್ಟು ಅಸಹಾಯಕ!!

ಅವನು ಅಪ್ಪ ಹೇಳಿದ ಆ ಮಾತನ್ನು ಮರೆಯದೇ ಹೋಗಿದ್ದರೆ...

ಬೆಳಕಾದಳೇ ಅವಳು...?!