ತಂದೆಯೊಂದಿಗೆ ಸಮಯ ಕಳೆಯಬೇಕೆಂದೇ ಆ ನಟ ಸಿನಿಮಾಗಳಿಂದ ನಾಲ್ಕು ವರ್ಷ ದೂರವಾದರು!


ಸುನೀಲ್ ಶೆಟ್ಟಿ ನಟನಾಗಿ ಇಷ್ಟವಾಗದೇ ಹೋದರೂ, ಮನುಷ್ಯನಾಗಿ ಇವತ್ತು ತುಂಬಾ ಇಷ್ಟವಾದರು.
ಹೌದು, ಇತ್ತೀಚೆಗೆ ಸುನೀಲ್ ಶೆಟ್ಟಿ ಯಾವ ಸಿನಿಮಾಗಳಲ್ಲೂ ಕಾಣಿಸಿಕೊಂಡಿರಲಿಲ್ಲ. ಬಹುಶಃ ಬಾಲಿವುಡ್ಡಿನಿಂದ ನಿವೃತ್ತಿ ತೆಗೆದುಕೊಂಡರೇನೋ ಎಂದುಕೊಳ್ಳುವಾಗಲೇ ’ಸೂಪರ್‌ ಡ್ಯಾನ್ಸರ್‌ ಸೀಸನ್ 3’ ರಿಯಾಲಿಟಿ ಶೋ ಎಪಿಸೋಡಿಗೆ ಮೊನ್ನೆ ಅತಿಥಿಯಾಗಿ ಬಂದಿದ್ದ ಸುನೀಲ್ ಶೆಟ್ಟಿ, ತಾನೇಕೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಹೇಳಿದ ಕಾರಣ ಕೇಳಿ ಅವರು ಬಾಲಿವುಡ್ಡಿನ ಹೀರೋ ಎನ್ನುವುದಕ್ಕಿಂತ ಹೆಚ್ಚಾಗಿ ವೈಯಕ್ತಿಕ ಬದುಕಿನ ನಿಜವಾದ ಹೀರೋ ಅನ್ನಿಸಿಬಿಟ್ಟರು.
ಅವರ ತಂದೆ ವೀರಪ್ಪಶೆಟ್ಟಿ ಎರಡು ವರ್ಷಗಳ ಹಿಂದೆ ತೀರಿಕೊಂಡರಂತೆ. ಅದಕ್ಕೂ ಮೊದಲು ಅವರು ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದರೆ, ಸಿನಿಮಾ ಶೂಟಿಂಗಿನಲ್ಲಿ ಬ್ಯುಸಿಯಾಗಿದ್ದ ಸುನೀಲ್ ಶೆಟ್ಟಿಗೆ, ತಂದೆ ಈ ಸ್ಥಿತಿಯಲ್ಲಿರುವಾಗ ತಾನು ಯಾಕೆ ಕೆಲಸ ಮಾಡುತ್ತಿದ್ದೇನೆ, ಏನು ಮಾಡುತ್ತಿದ್ದೇನೆ ಅನ್ನಿಸಿದ್ದೇ ಇರುವ ಕೆಲಸವನ್ನೆಲ್ಲ ಮುಗಿಸಿ ಚಿತ್ರರಂಗದಿಂದ ಸಂಪೂರ್ಣವಾಗಿ ಬ್ರೇಕ್ ತೆಗೆದುಕೊಂಡವರು ತಂದೆಯೊಂದಿಗೇ ಪೂರ್ತಿ ಸಮಯ ಇರಲಾರಂಭಿಸಿದರಂತೆ! ’ನನ್ನ ಬದುಕಿನಲ್ಲಿ ನಾನು ತಂದೆಯೊಂದಿಗೆ ಕಳೆದ ಇದೊಂದು ನಾಲ್ಕು ವರ್ಷ ತುಂಬಾ ಅಮೂಲ್ಯವಾದದ್ದು’ ಎಂದು ಅವರು ಭಾವುಕರಾಗಿ ಹೇಳಿದ ರೀತಿ ಈ ಸಮಾಜದ ಪಾಲಿಗೆ ಅತಿದೊಡ್ಡ ಸಂದೇಶದಂತೆ ಕಾಣುತ್ತಿದೆ.
ಇವನು ನನ್ನ ನೆಚ್ಚಿನ ಹೀರೋ ಎಂದು ಕಟೌಟ್, ಫ್ಲೆಕ್ಸ್, ಹಾರ, ಮೆರವಣಿಗೆ, ಹಾಲಿನ ಅಭಿಷೇಕವನ್ನೆಲ್ಲ ಮಾಡುವ ಚಿತ್ರನಟರ ಅಭಿಮಾನಿಗಳಿಗೆ ಅವನು ತೆರೆಯ ಮೇಲಷ್ಟೇ ಹೀರೋ ಆಗಿ ಕಾಣಿಸಿರುತ್ತಾನೆ. ದುರಂತವೆಂದರೆ ಎಲ್ಲೋ ಕೆಲವರನ್ನು ಹೊರತು ಪಡಿಸಿ ಹೆಚ್ಚಿನ ಹೀರೋಗಳು ತೆರೆಯ ಮೇಲಷ್ಟೇ ಹೀರೋ ಆಗಿ ಉಳಿದು ಬಿಡುತ್ತಾರೆಯೇ ಹೊರತು, ವೈಯಕ್ತಿಕ ಬದುಕಿನಲ್ಲಿ ಹೀರೋಗಳಾಗಿರುವುದಿಲ್ಲ. ಅಲ್ಲಿ ಹೀರೋಗಳಾಗುವುದೂ ಬೇಕಿರುವುದಿಲ್ಲ; ಮನುಷ್ಯರಾದರೆ ಸಾಕು. ಮನುಷ್ಯ ಸಂಬಂಧಗಳ ಮೌಲ್ಯವನ್ನರಿತುಕೊಂಡರೆ ಸಾಕು. ಉಹ್ಞೂಂ, ಅವರಿಗೆ ಅದು ಬೇಕಿರುವುದಿಲ್ಲ. ಆದ್ದರಿಂದಲೇ ಹೀರೋ-ಹೀರೋಯಿನ್ನುಗಳ ಮನೆಯ ರಂಪಾಟಗಳು ಬೀದಿಗೆ ಬಂದು ಆಗಬಾರದ್ದೆಲ್ಲ ಆಗುತ್ತಿರುತ್ತದೆ. ಇದರ ನಡುವೆ ಸುನೀಲ್ ಶೆಟ್ಟಿ ತಮ್ಮ ತಂದೆಗಾಗಿ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡು ಅವರೊಂದಿಗೆ ವರ್ಷಗಟ್ಟಲೆ ಇದ್ದು, ಕೊನೇಕ್ಷಣದಲ್ಲಿ ತಂದೆಗೆ ’ಮಕ್ಕಳಿದ್ದರೆ ಇಂತಹ ಮಕ್ಕಳಿರಬೇಕು, ಎಲ್ಲಾ ತಂದೆ ತಾಯಿಗೂ ಇಂತಹ ಮಕ್ಕಳೇ ಸಿಕ್ಕಲಿ’ ಎನ್ನುವ ಅದೊಂದು ಬಗೆಯ ಖುಷಿ ಹಾಗೂ ಸಾರ್ಥಕ ಭಾವವನ್ನು ಮೂಡಿಸಿ ಕಳಿಸಿಕೊಟ್ಟಿದ್ದಿದೆಯಲ್ಲ, ಅದು ಸುನೀಲ್ ಶೆಟ್ಟಿ ಅಭಿಮಾನಿಗಳಿಗೆ ಮಾತ್ರವಲ್ಲ ನಮಗೆಲ್ಲರಿಗೂ ಆದರ್ಶವಾಗಬೇಕು.
ಕೈಯಲ್ಲಿ ದುಡ್ಡಿದೆ, ತನ್ನ ಬದುಕನ್ನೇ ನೋಡಿಕೊಳ್ಳಲಾಗದಷ್ಟು ದುಡಿಮೆಯಿದೆ, ಯಾವುದಕ್ಕೂ ಸಮಯವಿಲ್ಲ ಎನ್ನುವ ತಾನೇ ಸೃಷ್ಟಿಸಿಕೊಂಡ ಕೊರಗಿದೆ... ಹೀಗಿರುವಾಗ ಸಣ್ಣದಕ್ಕೂ ಪಿರಿಪಿರಿ ಮಾಡುವ ಮುದಿ ವಯಸ್ಸಿನ ಅಪ್ಪ ಅಮ್ಮನನ್ನು ನೋಡಿಕೊಳ್ಳುವ ತಾಳ್ಮೆಯಾದರೂ ನಮಗೆಲ್ಲಿ ಇದ್ದೀತು? ಅದಕ್ಕೇ ವೃದ್ಧಾಶ್ರಮಗಳು ಹುಟ್ಟಿಕೊಳ್ಳುತ್ತಲೇ ಇವೆ. ಸುನೀಲ್ ಶೆಟ್ಟಿಗೂ ಕೂಡಾ ಇಂತಹ ಅನೇಕ ವೃದ್ಧಾಶ್ರಮಗಳು ಗೊತ್ತಿದ್ದಿರಬಹುದು. ತನ್ನ ತಂದೆಗಿಂತ ತನಗೆ ಸಿಕ್ಕಿರುವ ಮತ್ತು ಸಿಗುತ್ತಿರುವ ಹೆಸರು, ಪ್ರಸಿದ್ಧಿ ಇತ್ಯಾದಿಗಳೇ ದೊಡ್ಡದಾಗಿಯೂ ಕಾಣಿಸಿ, ಇಂತಹ ವೃದ್ಧಾಶ್ರಮಕ್ಕೆ ತನ್ನ ತಂದೆಯನ್ನೂ ಸೇರಿಸಬಹುದಿತ್ತು. ಆದರೆ ಆಕ್ಷನ್ ಹೀರೋ ಆಗಿಯೇ ಗುರುತಿಸಿಕೊಂಡ ಇವರ ಮನಸ್ಸು ಹಾಗಿರಲಿಲ್ಲ. ಹಾಗೆಂದು ಸುನೀಲ್ ಶೆಟ್ಟಿ ಖುದ್ದು ತಾವೇ ಮುಂದೆ ನಿಂತು ತಂದೆಯ ಎಲ್ಲಾ ಸೇವೆಗಳನ್ನು ಮಾಡಿದ್ದಾರೆ ಎಂದೂ ನಾನು ಹೇಳುತ್ತಿಲ್ಲ. ಅದಕ್ಕೆಂದು ನರ್ಸುಗಳೋ, ಕೆಲಸದವರೋ ಇದ್ದಿರಬಹುದಾದರೂ, ಇದರಾಚೆಗೆ ತನ್ನ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದ ಸಿನಿಮಾ ಕೆಲಸಗಳಿಗೆ ಬ್ರೇಕ್ ನೀಡಿ ತಂದೆಯೊಂದಿಗೆ ಅವರು ಕಳೆದಿದ್ದೆಯಲ್ಲ... ಅದು ಒಬ್ಬ ಸೆಲೆಬ್ರೆಟಿಯಿಂದ ಇವತ್ತಿನ ದಿನಗಳಲ್ಲಿ ಅಷ್ಟು ಸುಲಭಕ್ಕೆ ಸಾಧ್ಯವಾಗದ ಕೆಲಸ.
ಸೆಲೆಬ್ರೆಟಿಗಳ ಮಾತು ಬಿಡಿ, ನಮ್ಮ ನಿಮ್ಮಿಂದಲೇ ಇದು ಆಗುವುದಿಲ್ಲವೇನೋ!? ನಮಗೇನು ಕಡಿಮೆ ಕಮಿಟ್‌ಮೆಂಟುಗಳಿರುತ್ತವಾ? ದಿನದ ಇಪ್ಪತ್ತ್ನಾಲ್ಕು ಗಂಟೆಯೂ ನಮಗೆ ಸಾಲುವುದಿಲ್ಲ ಅನ್ನಿಸುತ್ತಿರುತ್ತದೆ. ಹೀಗಿರುವಾಗ ನಾವು ನಮ್ಮ ವಯಸ್ಸಾದ ತಂದೆ ತಾಯಿಗೆ ಹುಷಾರಿಲ್ಲವೆಂದರೆ ಇರುವ ಕೆಲಸವನ್ನೆಲ್ಲ ಬಿಟ್ಟು ಅವರನ್ನು ಆಸ್ಪತ್ರೆಗೆ ಕರೆದೊ‌ಯ್ಯುತ್ತೇವಾ? ಅವರು ಏನಾದರೂ ಮಾತನಾಡಲು ಕುಳಿತರೆ ನಾವು ಅವರಿಗಿಷ್ಟವಾಗುವಷ್ಟು ಹೊತ್ತು ಸುಮ್ಮನೆ ಕೇಳಿಸಿಕೊಳ್ಳುತ್ತೇವಾ? ನೆವರ್‌, ಅದು ನಮ್ಮಿಂದ ಸಾಧ್ಯವಿರುವುದಿಲ್ಲ. ಮುಖ್ಯವಾಗಿ ನಮಗೆ ತಾಳ್ಮೆ ಇರುವುದಿಲ್ಲ, ಅದರೊಂದಿಗೆ ಸಮಯವೂ ಕೂಡಾ ಇಲ್ಲ ಎನ್ನುವ ನಾವೇ ಸೃಷ್ಟಿಸಿಕೊಂಡ ಭ್ರಮೆಯಲ್ಲೇ ಓಲಾಡುತ್ತಿರುತ್ತೇವೆ. ಅದರಲ್ಲೂ ನಮ್ಮ ಕೈಯಲ್ಲಿ ಎರ‍್ರಾಬಿರ‍್ರಿ ದುಡ್ಡಿದ್ದರಂತೂ ಕೇಳುವುದೇ ಬೇಡ. ವಯಸ್ಸಾದ ತಂದೆ ತಾಯಿಯನ್ನು ಅದರ ಮೂಲಕವೇ ಹ್ಯಾಂಡಲ್ ಮಾಡಲು ಏನೆಲ್ಲ ಸೌಲಭ್ಯಗಳಿವೆ ಎಂದು ಗೂಗಲ್ ಸೇರಿದಂತೆ ಎಲ್ಲೆಂದರಲ್ಲಿ ಹುಡುಕಾಡುತ್ತೇವೆ. ಕೊನೆಯ ಆಯ್ಕೆಯಂತೆ ವೃದ್ಧಾಶ್ರಮಗಳಿದ್ದರೆ ಅಲ್ಲಿ ನಮ್ಮ ಮಾತು ಆರಂಭವಾಗುವುದೇ, ’ನೀವು ಎಷ್ಟು ಬೇಕಾದ್ರೂ ಚಾರ್ಜ್ ಮಾಡಿ, ನಾನು ಕೊಡೋದಕ್ಕೆ ತಯಾರಿದ್ದೇನೆ. ಆದರೆ ನಮಗೆ ಏನೂ ತೊಂದರೆಯಾಗದಿದ್ದರೆ ಸಾಕು...’ ಎನ್ನುವಲ್ಲಿಂದ.

ನಾವೇ ಹೀಗೆ ಎಂದರೆ ಸುನೀಲ್ ಶೆಟ್ಟಿಯಂತಹ ಸೆಲೆಬ್ರೆಟಿಯ ಬದುಕಿನ ಬ್ಯುಸಿ ಶೆಡ್ಯೂಲ್ಲಿನಲ್ಲಿ ಅನಾರೋಗ್ಯದಿಂದಾಗಿ ಹಾಸಿಗೆ ಹಿಡಿದಿರುವ ತನ್ನ ತಂದೆಗೆ ಕೊಡಲಿಕ್ಕೆ ಸಮಯವಾದರೂ ಎಲ್ಲಿದ್ದೀತು? ಅದರಲ್ಲೂ ಅವರಿಗೆ ಇರುವ ಕಮಿಟ್‌ಮೆಂಟ್, ಎಷ್ಟು ದುಡ್ಡಿದ್ದರೂ ತಮ್ಮ ಹೈಫೈ ಲೈಫ್‌ಸ್ಟೈಲಿಗೆ ಸಾಕಾಗುವುದಿಲ್ಲ, ಇನ್ನಷ್ಟು ಮತ್ತಷ್ಟು ಬೇಕು ಎಂದು ಲೆಕ್ಕ ಮಾಡುವ ಇಡೀ ಕುಟುಂಬ... ಯೋಚಿಸಿದರೆ ಸ್ವಲ್ಪ ಕಷ್ಟವೇ ಅನ್ನಿಸುತ್ತದೆ. ಆದರೂ ಅದನ್ನೆಲ್ಲ ದಾಟಿಕೊಂಡು ಸುನೀಲ್ ಶೆಟ್ಟಿ ತಮಗಾಗಿ ಬದುಕಿನಲ್ಲಿ ಎಷ್ಟೆಲ್ಲ ಕಷ್ಟಗಳನ್ನನುಭವಿಸಿದ ತಂದೆಯ ಕೊನೆಯ ದಿನಗಳಲ್ಲಿ ಅವರೊಂದಿಗೇ ಕಳೆದಿದ್ದು, ಅವರ ಮಾತುಗಳಿಗೆ ಕಿವಿಯಾಗಿದ್ದು ತೆರೆಯ ಮೇಲಷ್ಟೇ ಅಲ್ಲ, ನಿಜ ಬದುಕಿನಲ್ಲೂ ಅವರನ್ನು ಹೀರೋಗಿಂತ ಎತ್ತರಕ್ಕೇರಿಸಿದೆ.
ಅವತ್ತು, ಇವತ್ತೂ ಸಿನಿಮಾ ಹೀರೋಗಳನ್ನು ಫಾಲೋ ಮಾಡುವವರ ಸಂಖ್ಯೆ ತುಂಬಾ ದೊಡ್ಡದೇ ಇದೆ. ಆದ್ದರಿಂದಲೇ ಸಿನಿಮಾ ಹೀರೋಗಳು ಸಿನಿಮಾಗಳಲ್ಲಿ ನಿರ್ವಹಿಸುವ ಪಾತ್ರ ಸಮಾಜದ ಮೇಲೆ ಭಯಂಕರ ಪರಿಣಾಮ ಬೀರುತ್ತದೆ. ಎಷ್ಟೇ ಅದು ಸಿನಿಮಾ, ಶೂಟಿಂಗ್ ಟೆಕ್ನಿಕ್, ಅವರ ದುಡಿಮೆ ಎಂದೆಲ್ಲ ಅಂದುಕೊಂಡರೂ ’ನಮ್ಮ ಹೀರೋ’ ಎಂದು ಅವರು ಮಾಡಿದ್ದನ್ನೇ ಇಲ್ಲಿ ತಮ್ಮ ನಿಜ ಬದುಕಿನಲ್ಲಿ ಮಾಡುವ ಅಭಿಮಾನಿಗಳ ಸಂಖ್ಯೆಯೇನು ಕಡಿಮೆ ಇದೆಯಾ? ಹೀಗಿರುವಾಗ ಸುನೀಲ್ ಶೆಟ್ಟಿಯಂತೆಯೇ ಉಳಿದೆಲ್ಲ ಹೀರೋಗಳು ತಮ್ಮ ವೈಯಕ್ತಿಕ ಬದುಕಿನಲ್ಲಿ ನಡೆದುಕೊಂಡು, ತಮ್ಮ ಅಭಿಮಾನಿಗಳಲ್ಲೂ ’ಬದುಕಿಗೆ ಕೊನೆಗೆ ಬೇಕಾಗುವುದು ಮನುಷ್ಯ ಸಂಬಂಧ ಮತ್ತು ಪ್ರೀತಿಯಷ್ಟೇ ಹೊರತು, ದುಡ್ಡು, ಪ್ರಸಿದ್ಧಿಗಳಲ್ಲ’ ಎನ್ನುವುದನ್ನು ಅರ್ಥ ಮಾಡಿಸಿಬಿಟ್ಟರೆ ಈ ಸಮಾಜದಲ್ಲಿ ಪ್ರೀತಿಯ ಬಂಧ ಇನ್ನಷ್ಟು ಗಟ್ಟಿಯಾದೀತು.
-ಆರುಡೋ ಗಣೇಶ 

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆ ಕ್ಷಣದಲ್ಲಿ ಶರತ್‌ ಸಾವಿನೆದುರು ಅದೆಷ್ಟು ಅಸಹಾಯಕ!!

ಈಗ ಆರು ಪಾಸಾಗಿ ಏಳು...

ಒಂಟಿತನ ಎಂದರೆ ಜವಾಬ್ದಾರಿಯಿಂದ ಜಾರಿಕೊಳ್ಳುವುದಾ?!