ಶೀರ್ಷಿಕೆಯನ್ನಿಡುವ ಸುಖವೇ ಹೊಟ್ಟೆಗೆ ಹಿಟ್ಟು, ಜುಟ್ಟಿಗೆ ಮಲ್ಲಿಗೆ ಕೊಡುವುದಿಲ್ಲ!

’ಶೀರ್ಷಿಕೆ’ಯನ್ನೇನೋ ಸುಲಭವಾಗಿ ಹುಡುಕಬಹುದು. ಹುಡುಕಿ ಹೀಗೆ ಕೈಗೆ ಸಿಕ್ಕ ಶೀರ್ಷಿಕೆಗೆ ತಕ್ಕಂತಹ ಒಂದು ಕಥೆಯನ್ನೋ, ಲೇಖನವನ್ನೋ ಬರೆದು ಅದಕ್ಕೊಂದು ಕೊನೆ ಕಾಣಿಸುವುದಿದೆಯಲ್ಲ ಅದು ಅಷ್ಟು ಸುಲಭದ ಕೆಲಸವಲ್ಲ.
ಯಾಕೆಂದರೆ ಶೀರ್ಷಿಕೆ ಎನ್ನುವುದು ಕೇವಲ ಒಂದು ಸಾಲಿನೊಳಗೆ ಮುಗಿದು ಹೋಗುವಂತಹದ್ದು. ಆ ಕ್ಷಣಕ್ಕೆ ಯೋಚಿಸಿ, ಹೊಳೆದು ಒಂದೆಡೆ ಬರೆದಿಡುವಂತಹದ್ದು. ಅದೇ ಈ ಶೀರ್ಷಿಕೆಗೆ ತಕ್ಕನಾದ, ಇಡೀ ಬರಹದ ಒಳಗುಟ್ಟನ್ನು ತನ್ನೊಳಗೆ ಅಡಗಿಸಿಟ್ಟುಕೊಳ್ಳಬಹುದಾದ ಒಂದು ಬರಹವನ್ನು ಬರೆದು ಮುಗಿಸುವುದು, ಆ ಬರಹವನ್ನು ಓದಿ ಮೆಚ್ಚುವ ಓದುಗರನ್ನು ತೃಪ್ತಿ ಪಡಿಸುವುದು ಅಷ್ಟು ಸುಲಭದ ಸಂಗತಿಯೇನೂ ಅಲ್ಲ. ಯಾಕೆಂದರೆ ಶೀರ್ಷಿಕೆ ಸಿಕ್ಕಷ್ಟು ಸುಲಭದಲ್ಲಿ ಅದು ಒಳಗೊಳ್ಳಬಹುದಾದ ನೂರಾರು, ಸಾವಿರಾರು ಸಾಲುಗಳು ನಮಗೆ ಸಿಕ್ಕುವುದಿಲ್ಲ. ಸಿಕ್ಕರೂ ಮುಂದುವರಿಯುವುದಿಲ್ಲ, ಮುಂದುವರಿದರೂ ಅದು ಅಂತ್ಯವೆನ್ನುವುದನ್ನು ಕಾಣುವುದಿಲ್ಲ.
ಈ ಕಾರಣದಿಂದಲೇ ನಾವು ಬರೆಯಬೇಕೆಂದುಕೊಂಡ ಅದೆಷ್ಟೋ ಕಥೆ, ಲೇಖನ, ಪ್ರಬಂಧ ಇತ್ಯಾದಿಗಳು ಕೇವಲ ಶೀರ್ಷಿಕೆಗಳಾಗಿಯೇ ನಾವು ಮಾಡಿಕೊಳ್ಳುವ ನೋಟ್‌ಗಳ ಪುಸ್ತಕದಲ್ಲೋ, ಮೊಬೈಲಿನ ಮೆಮೋರಿಯಲ್ಲೋ ಉಳಿದು ಬಿಡುತ್ತವೆ!
ನಮ್ಮಲ್ಲಿ ತುಂಬಾ ಜನರಿರುತ್ತಾರೆ. ಅವರಿಗೊಂದು ಬ್ಯುಸಿನೆಸ್‌ ಸೇರಿದಂತೆ ಬದುಕನ್ನು ಸೆಟಲ್ ಮಾಡಿಕೊಳ್ಳುವ ಹೊಸ ಕೆಲಸವೊಂದನ್ನು ಮಾಡುವ ಕನಸಿರುತ್ತದೆ. ನಿಜಕ್ಕೂ ಅದು ಒಳ್ಳೆಯ ಕನಸ್ಸೇ. ಆ ಕನಸಿಗೊಂದು ಹೆಸರು ಇಡಬೇಕಲ್ಲ, ಎಲ್ಲದಕ್ಕಿಂತ ಮೊದಲು ಆ ಕೆಲಸವನ್ನು ಮಾಡುತ್ತಾರೆ. ಚೆಂದದ, ಅಪರೂಪದಲ್ಲಿ ಅಪರೂಪದ ಹೆಸರು ಹುಡುಕಿ ಒಂದೆಡೆ ಬರೆದಿಟ್ಟೋ, ಆ ಹೆಸರನ್ನು ತಮ್ಮ ಹತ್ತಿರದ ನಾಲ್ಕೈದು ಜನರಿಗೆ ತಿಳಿಸಿಯೋ ಅವರಿಂದ ಮೆಚ್ಚುಗೆಯನ್ನೂ ಪಡೆಯುತ್ತಾರೆ. ಹೀಗೆ ತಮ್ಮ ಕನಸಿಗೆ ಒಂದು ಹೆಸರನ್ನಿಟ್ಟ ತಕ್ಷಣ ಅವರ ಕನಸು ನನಸಾಗಿ ಬದುಕು ಜಿಂಗಾಲಾಲಾ ಆಗಿಬಿಡುತ್ತದಾ? ಖಂಡಿತ ಆಗುವುದಿಲ್ಲ. ಯಾಕೆಂದರೆ, ಅವರ ಕನಸನ್ನು ನನಸು ಮಾಡಿಕೊಳ್ಳಲು ಅವರು ಸಾಕಷ್ಟು ದೂರ ಕ್ರಮಿಸಬೇಕಿರುತ್ತದೆ. ಬೆವರು ಸುರಿಸಿ, ಮೈಕೈಯನ್ನೆಲ್ಲ ನೋಯಿಸಿಕೊಂಡು, ಕೈ ಕೆಸರು ಮಾಡಿಕೊಂಡು... ಏನೇ ಅಂದರೂ ಅದು ಸಾಕಷ್ಟು ಸಮಯ ಹಾಗೂ ಶ್ರಮವನ್ನು ಬೇಡುವ ಒಂದು ದೀರ್ಘವಾದ ಪಯಣ. ಉಹ್ಞೂಂ, ಅವರಿಗೆ ಅಷ್ಟು ದೂರ ಪ್ರಯಾಣಿಸುವ ಮನಸ್ಸಿರುವುದಿಲ್ಲ. ಆದ್ದರಿಂದ ತಮ್ಮ ಕನಸಿನ ಅತಿ ಸುಲಭದ ಕೆಲಸವಾದ ಅದಕ್ಕೊಂದು ಶೀರ್ಷಿಕೆ ಕೊಡುವ ಕೆಲಸವನ್ನು ಅವರು ಮೊದಲು ಮಾಡಿ ಮುಗಿಸಿ ಚಕ್ಕಳಮಕ್ಕಳ ಹಾಕಿ ಕುಳಿತುಬಿಡುತ್ತಾರೆ. ಹೀಗೆ ಕುಳಿತಲ್ಲಿಯೇ ಕನಸು ನನಸಾಗಲಿಕ್ಕೆ ಅದೇನು ಕಾವಿಗೆ ಮರಿಯಾಗುವ ಮೊಟ್ಟೆಯೇ?!
ದುರಂತವೇನು ಗೊತ್ತಾ, ಇವತ್ತು ನಮ್ಮಲ್ಲಿ ಇಂತಹ ಚೆಂದದ, ಅಪರೂಪದ, ತಕ್ಷಣಕ್ಕೆ ’ಕ್ಯಾಚಿ’ ಅನ್ನಿಸಬಹುದಾದ ಶೀರ್ಷಿಕೆಗೆ ಮರುಳಾಗುವವರೇ ಹೆಚ್ಚು. ನಮ್ಮ ರಾಜಕಾರಣಿಗಳು, ಕೆಲವು ಅಧಿಕಾರಿಗಳು, ಹೊಸ ಹೊಸ ಬ್ಯುಸಿನೆಸ್ ಮಾಡುವ ಹುಕಿ ಇರುವವರು, ಬರಹಗಾರರು ಸೇರಿದಂತೆ ಕ್ರಿಯಾಶೀಲರನ್ನೆಸಿಕೊಂಡವರು... ಇವರೆಲ್ಲ ಈಗ ಬೇರೆಲ್ಲವನ್ನೂ ಬಿಟ್ಟು ತಮ್ಮ ಪ್ರಾಜೆಕ್ಟುಗಳಿಗೆ ಚೆಂದದ ಹೆಸರಿಡುವುದನ್ನೇ ಮೊದಲ ಕೆಲಸ ಮಾಡಿಕೊಂಡಿದ್ದಾರೆ. ಇವರಿಗೆ ತಮ್ಮ ಸುತ್ತಮುತ್ತ ಇರುವ ಜನರಿಗೆ ನಾವು ಕೆಲಸ ಮಾಡದೇ ಇದ್ದರೂ ಪರವಾಗಿಲ್ಲ, ಒಂದು ಡಿಫರೆಂಟ್ ಹೆಸರಿಟ್ಟರೆ ಸಾಕು ಜನ ತಮ್ಮೆಡೆಗೆ ಆಕರ್ಷಿತರಾಗುತ್ತಾರೆ ಎನ್ನುವುದು ತಿಳಿದುಬಿಟ್ಟಿದೆ. ಕೆಲವು ಅಂಗಡಿ, ಹೋಟೆಲ್ಲುಗಳೂ ಹೀಗೇ. ಈ ಹಿಂದೆಲ್ಲೂ ಕೇಳಿರದಂತಹ ಹೆಸರಿನೊಂದಿಗೆ ಆರಂಭವಾಗುತ್ತವೆ, ಆ ಹೆಸರಿನಿಂದಲೇ ಆಕರ್ಷಿತರಾಗಿ ಅಲ್ಲಿಗೆ ಹೋದರೆ ನಮಗೆ ನಿರಾಶೆ ಗ್ಯಾರಂಟಿ. ಹೌದು, ಹೊರಗಿನಿಂದ ನಮ್ಮನ್ನು ಸೆಳೆದ ಆ ಹೆಸರೊಂದನ್ನು ಬಿಟ್ಟು ಅಲ್ಲಿ ಇನ್ನ್ಯಾವುದೂ ರುಚಿಕರವಾಗಿರುವುದಿಲ್ಲ, ನಮಗೆ ಇಷ್ಟವಾಗುವುದಿಲ್ಲ! ನೀವೊಮ್ಮೆ ಸೂಕ್ಷ್ಮವಾಗಿ ಗಮನಿಸಿ ನೋಡಿ, ನಿಮ್ಮ ಬದುಕಿನಲ್ಲಿ ನೀವು ಅನೇಕ ಬಾರಿ ಇಂತಹ ಹೆಸರಿಗೆ ಮರುಳಾಗಿಯೇ ನಿಮ್ಮ ಜೇಬು ಖಾಲಿ ಮಾಡಿಕೊಂಡಿರುತ್ತೀರಿ, ಕೆಲವೊಮ್ಮೆ ದೊಡ್ಡ ಮೊತ್ತಕ್ಕೆ ಮೋಸ ಕೂಡಾ ಹೋಗಿರುತ್ತೀರಿ.
ಇಂತಹವರಿಗೆ ’ಹೆಸರಿಡುವುದು’ ದೊಡ್ಡ ಕೆಲಸವೇ ಅಲ್ಲ ಮತ್ತು ಹೆಸರಿಟ್ಟರೆ ಸಾಕು ಕೆಲಸ ಮಾಡಬೇಕಿಲ್ಲ ಎನ್ನುವ ’ಗುಟ್ಟು’ ಪೂರ್ಣವಾಗಿ ತಿಳಿದಿರುತ್ತದೆ. ಆದ್ದರಿಂದಲೇ ಇವರು ತಮ್ಮ ಅದೆಂತಹ ಪ್ರಾಜೆಕ್ಟೇ ಇರಲಿ, ಮೊದಲು ಅದಕ್ಕೆ ಜನರು ಮರುಳಾಗುವಂತಹ ಹೆಸರಿಟ್ಟು ಬಿಡುತ್ತಾರೆ. ಒಂದೊಮ್ಮೆ ನೀವು ಇದಕ್ಕೆಲ್ಲ ಮರುಳಾಗದೇ, ನಿನ್ನ ಈ ಹೊಸ ಪ್ರಾಜೆಕ್ಟ್‌ ಹೇಗೆ ಲಾಭದಾಯಕವಾಗಿ ನಡೆಯುತ್ತದೆ? ಇದಕ್ಕೆ ಬಂಡವಾಳ ಎಲ್ಲಿಂದ ತರುತ್ತೀಯಾ? ಹೇಗೆ ನಿನ್ನ ಉತ್ಪನ್ನಗಳನ್ನು ವಿತರಿಸುತ್ತೀಯಾ? ಒಂದೊಮ್ಮೆ ಅದು ನಿನ್ನ ಗ್ರಾಹಕರಿಗೋ, ನಿನ್ನನ್ನು ಓಟು ಹಾಕಿ ಗೆಲ್ಲಿಸಿದ ಜನರಿಗೋ ಇಷ್ಟವಾಗದೇ ಹೋದರೆ ಏನು ಮಾಡುತ್ತೀಯಾ? ಆಗಬಹುದಾದ ನಷ್ಟವನ್ನು ಹೇಗೆ ತುಂಬುತ್ತೀಯಾ? ಎಂದೆಲ್ಲ ಪ್ರಶ್ನಿಸಿ ನೋಡಿ, ಅಪ್ಪಿತಪ್ಪಿಯೂ ಇವರಿಗೆ ಉತ್ತರ ಗೊತ್ತಿರುವುದಿಲ್ಲ. ಯಾಕೆಂದರೆ, ಇವರು ತಮ್ಮ ಹೊಸ ಕನಸನ್ನು ನನಸು ಮಾಡಿಕೊಳ್ಳಲು ಕೈ ಕೆಸರು ಮಾಡಿಕೊಳ್ಳಲು ತಯಾರಿರುವುದಿಲ್ಲ. ಅಸಲಿಗೆ ಇವರು ಕೆಸರು ಮಾಡಿಕೊಳ್ಳಬಹುದಾದ ಜಾಗವನ್ನೂ ನೋಡಿರುವುದಿಲ್ಲ!
ನಮ್ಮೆದುರು ಹರಡಿಕೊಂಡ ಕನಸಿಗೆ ಹೆಸರಿಡುವುದು ದೊಡ್ಡದಲ್ಲ. ಹಾಗೆಂದು ಮೊದಲಿಗೇ ಹೆಸರಿಡಬಾರದು ಎಂದೂ ಅಲ್ಲ. ಡಿಫರೆಂಟಾದ ಹೆಸರೂ ನಿಮ್ಮ ಕನಸು ನನಸಾಗಲು ಒಂದಿಷ್ಟು ಕಾರಣವಾಗುತ್ತದೆ ಎನ್ನುವುದೂ ನಿಜವೇ. ಆದರೂ, ಕೇವಲ ಹೆಸರಿಡುವುದನ್ನೇ ನನ್ನ ಕನಸು ನನಸಾಗಲು ಇರುವ ಬಹುದೊಡ್ಡ ಹೆಜ್ಜೆ ಎಂದುಕೊಳ್ಳುವುದು ಮಾತ್ರ ತಪ್ಪು. ಮತ್ತು ಅಪರೂಪದ ಹೆಸರಿನಿಂದಲೇ ಎಲ್ಲರನ್ನೂ ಸದಾಕಾಲವೂ ಮಂತ್ರಮುಗ್ಧರನ್ನಾಗಿಸುತ್ತೇನೆ ಎನ್ನುವ ಭ್ರಮೆಯಲ್ಲಿರುವುದು ಕೂಡಾ ಒಳ್ಳೆಯದಲ್ಲ.
ಅಷ್ಟಲ್ಲದೇ ನಮ್ಮ ಹಿರಿಯರು ’ಹೆಸರಿನಲ್ಲೇನಿದೆ?’ ಎಂದು ಕೇಳಿದ್ದಾರಾ?
-ಆರುಡೋ ಗಣೇಶ

ಕಾಮೆಂಟ್‌ಗಳು

  1. ನಿಮ್ಮ ಪ್ರತಿಯೊಂದು ಸಾಲಿಗು ಎದುರು ನುಡಿಯುವ ಉತ್ತರವಿಲ್ಲ anna

    ಪ್ರತ್ಯುತ್ತರಅಳಿಸಿ

  2. ಎಷ್ಟೋ ಶೀರ್ಷಿಕೆಗಳು ಟೊಳ್ಳು ಎನ್ನಿಸುವ ಹೊತ್ತಿಗೆ ಮೋಸ ಹೋಗಿ ಮನಸ್ಸಿಗೆ ಜೇಬಿಗೆ ಪೆಟ್ಟಾದ ಕ್ಷಣಗಳನ್ನು ನೆನಪಿಸಿತು ನಿಮ್ಮ ಈ ಲೇಖನ.ತುಂಬಾ ಸರಳವಾಗಿ ಸೂಕ್ಷ್ಮ ತಂತುಗಳನ್ನು ಎಳೆ ಎಳೆಯಾಗಿ ಅರ್ಥ ಮಾಡಿಸಿದಕ್ಕೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆ ಕ್ಷಣದಲ್ಲಿ ಶರತ್‌ ಸಾವಿನೆದುರು ಅದೆಷ್ಟು ಅಸಹಾಯಕ!!

ಈಗ ಆರು ಪಾಸಾಗಿ ಏಳು...

ಒಂಟಿತನ ಎಂದರೆ ಜವಾಬ್ದಾರಿಯಿಂದ ಜಾರಿಕೊಳ್ಳುವುದಾ?!