ಸಾಯುವ ಮನಸ್ಸಿಲ್ಲದ ಸಂಜೆಯೊಂದರ...
ಅವತ್ತು ಸಂಜೆಗೇಕೋ ರಾತ್ರಿಯಾಗುವ ಮನಸ್ಸಿರಲಿಲ್ಲ. ಇನ್ನಷ್ಟು ಹೊತ್ತು ನಾನು ಹೀಗೇ ಇರಬೇಕು, ಪ್ರತೀದಿನ ದಕ್ಕದ ಏನನ್ನೋ ಇವತ್ತಾದರೂ ಮೊಗೆದು ಬುತ್ತಿಗೆ ತುಂಬಿಕೊಳ್ಳಬೇಕು, ಯಾವತ್ತು ನನಗೆ ಕಾಣ ಸಿಕ್ಕದ ಅವರನ್ನು ಇವತ್ತು ನೋಡಿ ಕಣ್ತುಂಬಿಕೊಳ್ಳಬೇಕು, ರಾತ್ರಿಯಾಗದೆ ಇನ್ನೊಂದಿಷ್ಟು ಸಮಯವಿದ್ದು ಯಾರ್ಯಾರು ಏನು ಹೇಳುತ್ತಾರೆ ಎನ್ನುವುದನ್ನು ಕದ್ದು ಕೇಳಿಸಿಕೊಂಡು, ಆಮೇಲೆ ಆ ಮಾತುಗಳ ನೆನಪಿನಲ್ಲಿ ಯಾವತ್ತೂ ನಗದಂತೆ ನಗಬೇಕು... ಹೀಗೆ ಮನಸ್ಸಿನಲ್ಲಿ ಹೊಯ್ದಾಡುತ್ತಿದ್ದ ಏನೇನೋ ಕಾರಣಗಳಿಂದ ಸಂಜೆ ಇನ್ನೊಂದು ಸ್ವಲ್ಪ ಹೊತ್ತು ಹೀಗೆ... ಹೀಗೇ ಸಂಜೆಯಾಗಿಯೇ ಉಳಿದು ಬಿಡಬೇಕು ಎಂದುಕೊಳ್ಳುತ್ತಾ ಅಲ್ಲೇ ಇರುವಲ್ಲೇ ನಿಂತುಕೊಂಡಿತು. ಗಡಿಯಾರಕ್ಕೆ ಇದು ಗೊತ್ತಾಗಲಿಲ್ಲ. ಅದಕ್ಕೆ ಗೊತ್ತಾಗುವುದೂ ಇಲ್ಲ. ಯಾರ ಮನಸ್ಸನ್ನೂ ಅರಿಯದ ಈ ಜಗತ್ತಿನ ಏಕೈಕ ವಸ್ತು... ಉಹ್ಞೂಂ, ವ್ಯಕ್ತಿಯೆಂದರೆ ಅದು ಈ ಗಡಿಯಾರವೇ! ಯಾರು ಸಾಯಲಿ, ಯಾರು ಹುಟ್ಟಲಿ, ಹುಟ್ಟದಿರಲಿ, ನಗು, ಅಳು, ಏನೂ ಇಲ್ಲದ ನಿರ್ವಾತ... ಅದ್ಯಾವುದನ್ನೂ ನೋಡದ, ಲೆಕ್ಕಕ್ಕೇ ತೆಗೆದುಕೊಳ್ಳದ ಗಡಿಯಾರ ಮುಳ್ಳುಗಳ ಮನಸ್ಸೊಂದನ್ನು ಮಾತ್ರವೇ ಅರ್ಥ ಮಾಡಿಕೊಂಡಂತೆ... ಉಹ್ಞೂಂ ನೀ ನನ್ನೊಂದಿಗೆ ಬರಬೇಕೆಂದರೆ ಬರಬೇಕಷ್ಟೇ ಎನ್ನುವಂತೆ ಎಳೆದುಕೊಂಡು ಹೋಗುತ್ತಲೇ ಇರುತ್ತದೆ. ಯಾರೇನಾದರೂ ಆಗಲಿ ನನ್ನ ಕೆಲಸ ಆಗಬೇಕಷ್ಟೇ ಎನ್ನುವುದೊಂದು ಬಿಟ್ಟರೆ ಅದಕ್ಕೆ ಬೇರೆಯವರ ಮನಸ್ಸು ಕಟ್ಟಿಕೊಂಡು ಏನಾಗಬೇಕಿದೆ. ಆದ್ದರ